ನಮ್ಮ ಮನೆಗಳಲ್ಲಿ ಗಂಡನಿಂದ ಹೆಂಡತಿಯ ಮೇಲೆ, ಅಪ್ಪನಿಂದ ಮಕ್ಕಳ ಮೇಲೆ, ಗೆಳೆಯನಿಂದ ಗೆಳತಿ ಮೇಲೆ, ಬಾಸ್‌ನಿಂದ ಸಿಬ್ಬಂದಿ ಮೇಲೆ ಹೀಗೆ ಎಲ್ಲೆಡೆಯೂ ಕ್ರೌರ್ಯ ನಡೆಯುತ್ತಿವೆ. ಮಾಧ್ಯಮಗಳಲ್ಲಿ, ಸಿನಿಮಾಗಳಲ್ಲಿ ಇವೆಲ್ಲವನ್ನು ನಿತ್ಯ ನೋಡುವ ಮಕ್ಕಳ ಸ್ವಭಾವ ಅದೇ ರೀತಿ ರೂಪುಗೊಳ್ಳುತ್ತದೆ. ಅಭಿವೃದ್ಧಿ, ತಂತ್ರಜ್ಞಾನ, ಐಷಾರಾಮಿ ಬದುಕಿನ ನಾಗಾಲೋಟದಲ್ಲಿ ಜಗತ್ತು ಓಡುತ್ತಿದೆ. ಈ ಓಟದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ಬದುಕು ಛಿದ್ರವಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಇಬ್ಬರು ಬಾಲಕರ ಆಟದ ನಡುವಿನ ಜಗಳ ಹದಿನಾಲ್ಕು ವರ್ಷದ ಕಿಶೋರನ ಕೊಲೆಯಲ್ಲಿಯೂ, ಕೇವಲ ಹನ್ನೆರಡು ವರ್ಷದ ಬಾಲಕ ಹಂತಕನಾಗುವಲ್ಲಿಯೂ ಅಂತ್ಯವಾಗಿದೆ. ಮನೆ ಮುಂದೆ ಆಡುತ್ತಾ ಕಿತ್ತಾಡಿಕೊಳ್ಳುವಾಗ ಮನೆಯೊಳಗೆ ಹೋಗಿ ಚಾಕು ತಂದು ಇರಿಯಬೇಕು ಎಂದು ಹನ್ನೆರಡರ ವಯಸ್ಸಿನ ಬಾಲಕನಿಗೆ ಅನ್ನಿಸಲು ಕಾರಣ ಏನಿದ್ದೀತು? ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಬಸವಣ್ಣನ ವಚನವೊಂದನ್ನು ಉಲ್ಲೇಖಿಸಿದ್ದಾರೆ. ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ? ಅವರ ಮಾತಿನ ಅರ್ಥವನ್ನು ಇಂದಿನ ಸಂದರ್ಭದಲ್ಲಿಟ್ಟು ನೋಡುವುದಾದರೆ, ನಮ್ಮ ಸುತ್ತಮುತ್ತ ನಿತ್ಯವೂ ಕ್ರೌರ್ಯವೇ ಮೆರೆದಾಡುತ್ತಿದೆ. ಮನೆಗಳಲ್ಲಿ ಗಂಡನಿಂದ ಹೆಂಡತಿಯ ಮೇಲೆ, ಅಪ್ಪನಿಂದ ಮಕ್ಕಳ ಮೇಲೆ, ಗೆಳೆಯನಿಂದ ಗೆಳತಿ ಮೇಲೆ, ಬಾಸ್‌ನಿಂದ ಸಿಬ್ಬಂದಿ ಮೇಲೆ, ಭೂಮಾಲೀಕನಿಂದ ಭೂಹೀನರ ಮೇಲೆ, ಮಾಲೀಕನಿಂದ ಕಾರ್ಮಿಕರ ಮೇಲೆ ಹೀಗೆ ಎಲ್ಲೆಡೆಯೂ ಕ್ರೌರ್ಯ ಹಲ್ಲೆ ಕೊಲೆಯಂತಹ ಕೃತ್ಯಗಳೇ ನಡೆಯುತ್ತಿವೆ. ಹಗಲು ರಾತ್ರಿ ನಮ್ಮನ್ನು ಸುತ್ತುವರೆದು ಆವರಿಸಿರುವ ಸಮೂಹ ಮಾಧ್ಯಮಗಳಲ್ಲಿ, ಸಿನಿಮಾಗಳಲ್ಲಿ ಇವೆಲ್ಲವನ್ನು ನಿತ್ಯ ನೋಡುವ ಮಕ್ಕಳ ಸ್ವಭಾವ ಅದೇ ರೀತಿ ರೂಪುಗೊಳ್ಳುತ್ತದೆ. ಪರಿಸರದ ಪ್ರಭಾವ ಮಕ್ಕಳ ಮನಸ್ಸಿನಲ್ಲೂ ಕ್ರೌರ್ಯವನ್ನು ತುಂಬುತ್ತಿದೆ.
ಈ ತರಹದ ಕೃತ್ಯಗಳು ಹಿಂದೆಯೂ ನಡೆಯುತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಇರಲಿಲ್ಲ. ಅಷ್ಟೇ ಅಲ್ಲ ಇದು ಮಾಹಿತಿ ತಂತ್ರಜ್ಞಾನ ಯುಗ. ಅಂಗೈಯಲ್ಲೇ ಮಾಹಿತಿ ಸಿಗುತ್ತಿದೆ. ಟಿ ವಿ ಚಾನೆಲ್‌ಗಳ ಭರಾಟೆಯಂತು ಭಯಾನಕವಾಗಿದೆ. ಒಂದು ಕೊಲೆ, ಆತ್ಮಹತ್ಯೆ, ಅತ್ಯಾಚಾರ ಸುದ್ದಿಗಳು ಮೂರ್ನಾಲ್ಕು ದಶಕಗಳ ಹಿಂದಿನವರೆಗೂ ನಾಗರಿಕರ ಕರುಳು ಹಿಂಡುತ್ತಿತ್ತು. ತಮ್ಮದೇ ಕುಟುಂಬದ ನೋವಿನಂತೆ ಮರುಗುತ್ತಿದ್ದರು. ಹೀಗಾಗಬಾರದು, ಇದು ನಮ್ಮ ಸಮಾಜಕ್ಕೆ ಕಳಂಕ ಎಂಬ ಭಾವನೆ ಎಲ್ಲರಲ್ಲೂ ಇರುತ್ತಿತ್ತು. ಈಗ ಇಂತಹ ಸುದ್ದಿಗಳೆಲ್ಲ ಸಾಮಾನ್ಯವಾಗಿ ಹೋಗಿವೆ. ಸಂವೇದನೆಗಳು ದಡ್ಡು ಬಿದ್ದಿವೆ. ಸಿನಿಮಾ, ಧಾರಾವಾಹಿ, ಕಾರ್ಟೂನ್, ಅಷ್ಟೇ ಏಕೆ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರ ಭಾಷಣಗಳಲ್ಲಿ ಕಡಿ, ಕೊಲ್ಲು, ಕೊಚ್ಚು, ಗಲ್ಲಿಗೇರಿಸು… ಇಂತಹ ಹೇಳಿಕೆಗಳೇ ಬರುತ್ತಿವೆ. ಇವೆಲ್ಲದರ ಪರಿಣಾಮ ಏನೂ ಅರಿಯದ ಮಕ್ಕಳ ಮೇಲೆ, ಅವರ ಚಟುವಟಿಕೆ, ಸ್ವಭಾವಗಳನ್ನು ಗಮನಿಸಬೇಕು ಎಂಬ ಅರಿವು ಇಲ್ಲದ, ದಿನದ ದುಡಿಮೆಗೆ ಬಡಿದಾಡುವಂತಹ ಬಡ ಕುಟುಂಬಗಳ ಮಕ್ಕಳ ಮನಸ್ಥಿತಿಯನ್ನು ಗಾಢವಾಗಿ ಪ್ರಭಾವಿಸಿ ಮನೆಮಾಡುತ್ತದೆ. ಅವರಿಗೆ ಕುಟುಂಬ ನಿರ್ವಹಣೆಯ ಚಿಂತೆಯೇ ಸರ್ವಸ್ವ. ಅದರಲ್ಲೂ ಗಂಡು ಮಕ್ಕಳಾದರೆ ಬೇಕಾಬಿಟ್ಟಿ ಬದುಕು. ʼಹೆಂಗೋ ಬದುಕೊತಾವೆʼ ಎಂಬ ಉದಾಸೀನತೆ. ಇದು ಅವರ ತಪ್ಪಲ್ಲ; ಬಡತನ, ಅಸಮಾನತೆಯ ಈ ಜಗತ್ತಿನಲ್ಲಿ ಅವರದ್ದು ಮುಗಿಯದ ಹೋರಾಟ.
ಈ ಕಾಲದ ಸಿನಿಮಾ ಪೋಸ್ಟರ್ ಗಳಲ್ಲಿ ರಾರಾಜಿಸುವ ಕಟೌಟ್‌ಗಳಲ್ಲಿ ಕ್ರೌರ್ಯ ತುಂಬಿದ ಹೀರೋನ ನೋಡಿ, ಇನ್ನೇನು ಎದುರಿಗೆ ಸಿಕ್ಕವರನ್ನು ಸಿಗಿದೇಬಿಡವಂತಿರುವ ಮುಖಭಾವ, ಕೈಯಲ್ಲಿ ಲಾಂಗು, ಮಚ್ಚು, ಪಿಸ್ತೂಲ್; ರಕ್ತಸಿಕ್ತ ಬಟ್ಟೆ. ಇವೆಲ್ಲ ಸಿನಿಮಾದ ನಾಯಕನ ಅಥವಾ ಹೀರೋನ ಗುಣಲಕ್ಷಣ. ಇವರನ್ನೇ ಯುವಜನರು ಆರಾಧಿಸುತ್ತಾರೆ. ಕನ್ನಡದ ಮಾಸ್ ಹೀರೋ ಒಬ್ಬ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದರೆ ಪೊಲೀಸ್ ಠಾಣೆ ಮುಂದೆ ಅಭಿಮಾನಿಗಳು ಜೈಕಾರ ಹಾಕ್ತಾರೆ. ಆತ ತಿಂಗಳ ಕಾಲ ಜೈಲಿನಲ್ಲಿದ್ದರೆ ಪ್ರತಿ ದಿನವೂ ಜೈಲಿನ ಹೊರಗೆ ಅಭಿಮಾನಿಗಳು ನೆರೆಯುತ್ತಾರೆ. ತಾವು ಆರಾಧಿಸುತ್ತಿರುವ ವ್ಯಕ್ತಿ ಸಿನಿಮಾದಲ್ಲಿ ನಟನೆ ಮಾಡಿ ನೂರಾರು ಕೋಟಿ ಹಣ ಗಳಿಸಿ ಐಷಾರಾಮಿ ಜೀವನ ನಡೆಸುತ್ತ ಸಮಾಜಘಾತಕ ಕೆಲಸ ಮಾಡಿದ್ಧಾಗಲೂ ಅಭಿಮಾನಿಗಳು ಆತನನ್ನು ಆದರ್ಶ ವ್ಯಕ್ತಿಯಾಗಿಯೇ ಪರಿಗಣಿಸುತ್ತಾರೆ. ಸಮಕಾಲೀನ ಸಂಸ್ಕೃತಿಯೇ ವಿಕಾರಗೊಂಡಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಹೈಸ್ಕೂಲು ಓದುತ್ತಿದ್ದ ಬಾಲಕ ನೆರೆಮನೆಯ ಕಾಲೇಜು ವಿದ್ಯಾರ್ಥಿನಿ ಪ್ರಬುದ್ಧಳ ಕತ್ತು, ಕೈಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಮೃತದೇಹವನ್ನು ಎಳೆದೊಯ್ದು ಬಾತ್‌ರೂಮಿನಲ್ಲಿ ಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿ ಪರಾರಿಯಾಗಿದ್ದ. ಅಪ್ರಾಪ್ತ ಎಂಬ ಕಾರಣಕ್ಕೆ ಆತನನ್ನು ಬಂಧಿಸಿರಲಿಲ್ಲ. ಬಾಲನ್ಯಾಯ ಮಂಡಳಿ ಆತ ಕೃತ್ಯ ಎಸಗಿದ್ದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಖುಲಾಸೆಗೊಳಿಸಿದೆ. ಕೃತ್ಯ ಎಸಗಿದ್ದು ಸಾಬೀತಾದರೂ ಅಪ್ರಾಪ್ತರಿಗೆ ಶಿಕ್ಷೆ ಇಲ್ಲ. ಇದು ಈ ನೆಲದ ಕಾನೂನು. ಆದರೆ, ಅಪ್ರಾಪ್ತರು, ಹದಿಹರೆಯದವರು ಕೊಲೆ ಮತ್ತು ಅತ್ಯಾಚಾರದಂತಹ ಕ್ರೂರ ಕೃತ್ಯಗಳಲ್ಲಿ ಯಾವುದೇ ಭಯ ಇಲ್ಲದೇ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮನಶ್ಯಾಸ್ತ್ರಜ್ಞರು, ಕಾನೂನು ನಿರೂಪಕರು, ಸಮಾಜ, ಕುಟುಂಬಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಚಿಂತಿಸಬೇಕಿದೆ.
ಬೆಳಗಾವಿಯಲ್ಲಿ ಮೂವರು ಅಪ್ರಾಪ್ತ ಬಾಲಕರು ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಸುದ್ದಿ ಈಗಷ್ಟೇ ಬಂದಿದೆ. ಅಭಿವೃದ್ಧಿ, ತಂತ್ರಜ್ಞಾನ, ಐಷಾರಾಮಿ ಬದುಕಿನ ನಾಗಾಲೋಟದಲ್ಲಿ ಜಗತ್ತು ಓಡುತ್ತಿದೆ. ಈ ಓಟದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ಬದುಕು ಛಿದ್ರವಾಗುತ್ತಿದೆ. ಮಕ್ಕಳಿಗೆ ವಯೋಸಹಜ ಆಟ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಹಾಡು ಕುಣಿತ ಮುಂತಾದ ಬುದ್ಧಿ ಭಾವ ಪ್ರಚೋದಕ ಚಟುವಟಿಕೆಗಳು ಕಡಿಮೆಯಾಗಿವೆ. ಮಕ್ಕಳಿಗೆ ಗೊತ್ತೇ ಇಲ್ಲದ ಕಾಮ- ಕ್ರೌರ್ಯ ಎರಡೂ ಈಗ ಅವರ ಮುಂದೆಯೇ ಬಂದು ನಿಂತಿದೆ. ಬಾಲ್ಯದ ಅಮಾಯಕತೆ ಬಹುಬೇಗ ಅಳಿದು ಅಕಾಲ ಪ್ರೌಢರಾಗುತ್ತಿದ್ದಾರೆ. ಸುತ್ತಮುತ್ತ ಕಿವಿಮೇಲೆ ಬೀಳುವ ಮಾತುಗಳು, ಯಾವುದೇ ತಡೆ ಇಲ್ಲದೇ ಸಿನಿಮಾ, ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಹಸಿಬಿಸಿ ದೃಶ್ಯ, ಸುದ್ದಿ ವಾಹಿನಿಗಳು 24/7 ಬಿತ್ತರಿಸುವ ಖಾಸಗಿ ವ್ಯಕ್ತಿಗಳ ಕಾಮಕಾಂಡದ ದೃಶ್ಯಗಳು, ಕೊಲೆ-ರಕ್ತಪಾತಕದ ವರ್ಣರಂಜಿತ ವರದಿಗಳು ಇವೆಲ್ಲವೂ ಮಕ್ಕಳ ಮನೋಭೂಮಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಿಗೆ ಕಾರಣವಾಗಿದೆ.
ಮಕ್ಕಳು ಆಡುವ ಮೊಬೈಲ್ ಗೇಮ್‌ಗಳ ಪಾತ್ರಗಳು ಗನ್ ಬಾಂಬ್‌ಗಳ ಹೊಡೆದಾಟಗಳನ್ನು ಮಾತ್ರ ಮಾಡುತ್ತವೆ. ಅಲ್ಲಿ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ಯಾವುದೇ ಜೀವನ ಪಾಠಗಳಿರುವುದಿಲ್ಲ. ಇನ್ನು ರಾಜಕೀಯ ಧಾರ್ಮಿಕ ನಾಯಕರ ಭಾಷೆಯೂ ಹೊಡಿ ಬಡಿ ಓಡಿಸು, ಸಾರ್ವಜನಿಕವಾಗಿ ಗುಂಡುಹಾಕಿ, ಗಲ್ಲಿಗೇರಿಸಿ ಎನ್ನುವಂತೆಯೂ ಇರುತ್ತದೆ. ಧರ್ಮರಕ್ಷಣೆಗೆ ತ್ರಿಶೂಲ, ಚಾಕು, ಗನ್ನುಗಳು ನೀಡಿ ತರಬೇತಿ ನೀಡಬೇಕು ಎನ್ನುವವರಿದ್ದಾರೆ. ಭಿನ್ನಾಭಿಪ್ರಾಯಗಳಿಗೆ ಇವರೂ ಕೂಡ ಸೂಚಿಸುವ ಪರಿಹಾರ ಹಿಂಸಾತ್ಮಕವಾಗಿರುವುದೇ ಆಗಿದೆ. ಕೇಡಿನ ನಾಶಕ್ಕೆ ಹಿಂಸೆಯನ್ನು ಬಳಸಬೇಕಾಗುತ್ತದೆ ಎನ್ನುವ ಉದ್ದೇಶ ಇರಬಹುದು.ಆದರೆ ಹಿಂಸೆ-ಪ್ರತಿಹಿಂಸೆಗಳದು ಎಂದಿಗೂ ಮುಗಿಯದ ವಿಷವರ್ತುಲ. ಯಾವ ಸಮಸ್ಯೆಗೂ ಹಿಂಸೆ ಪರಿಹಾರ ಅಲ್ಲ. ಆದರೆ ಹದಿವಯಸ್ಸಿನ ಮಕ್ಕಳಲ್ಲಿ ವಿವೇಚನೆಯ ಸ್ಥಾನವಾದ ಮುಂಮೆದುಳು (prefrontal cortex)ಇನ್ನೂ ಬೆಳವಣಿಗೆ ಆಗಿರುವುದಿಲ್ಲ. ಅವರು ಬಹಳ ಹಠಾತ್ ಭಾವದಿಂದ ಪ್ರತಿಕ್ರಿಯಿಸುವುದು ಸ್ವಾಭಾವಿಕ. ಹಾಗಾಗಿ ತಮಗೆ ತೊಂದರೆ ಅವಮಾನ ಆದಾಗಲೆಲ್ಲಾ ಭಿನ್ನಾಭಿಪ್ರಾಯಗಳು ಬಂದಾಗಲೆಲ್ಲಾ ಹಿಂಸೆಯನ್ನು ಬಳಸಬಹುದು ಎನ್ನುವುದು ಅವರು ಗ್ರಹಿಸುವ ಸೂಚನೆಯಾಗಿರುತ್ತದೆ. ಹಿಂದೆ ಮುಂದೆ ಆಲೋಚಿಸದೆ ಹಠಾತ್ತನೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಕಲಿಸಬೇಕಾದ ವಯಸ್ಕರ ಪ್ರಪಂಚದಲ್ಲಿಯ ನಡೆನುಡಿಗಳಲ್ಲಿ ಈ ಮಟ್ಟದ ಹಿಂಸೆ ತಾಂಡವವಾಡುತ್ತಿರುವಾಗ ಮಕ್ಕಳಿಂದ ಏನನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕ ವಸಂತ ನಡಹಳ್ಳಿ ಅವರು. ಇದಲ್ಲವೇ ಕಟು ವಾಸ್ತವ? ಬೇವಿನ ಮರ ನೆಟ್ಟು ಸಿಹಿ ಫಲದ ನಿರೀಕ್ಷೆ ಮಾಡುವುದಾದರೂ ಹೇಗೆ?
ಮಕ್ಕಳು ತಮ್ಮ ಬಾಲ್ಯದಲ್ಲಿ ಹೆಚ್ಚು ಹೊತ್ತು ಕಳೆಯುವ ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಪಠ್ಯಕ್ಕಿಂತ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಸಾಮಾಜಿಕ ತಾಣಗಳಿಂದ ಮಕ್ಕಳನ್ನು ಹೊರ ತರುವ ಕೆಲಸ ತುರ್ತಾಗಿ ಆಗಬೇಕಿದೆ. ಮನೆಗಳಲ್ಲಿ ಇಡೀ ಕುಟುಂಬ ನೋಡುವ ದೃಶ್ಯ ಮಾಧ್ಯಮಗಳಲ್ಲಿ ಕ್ರೌರ್ಯದ ವೈಭವೀಕರಣ, ದ್ವೇಷ ಭಾಷಣಗಳ ಪ್ರಸಾರ, ರೋಚಕ ಕ್ರೈಮ್ ವರದಿಗಳ ಪ್ರಸಾರಕ್ಕೆ ಕಡಿವಾಣ ಬೀಳಲೇಬೇಕು. ಮಕ್ಕಳಿಗೆ ಆ ವಯಸ್ಸಿಗೆ ಯಾವ ಮಾಹಿತಿ, ಜ್ಞಾನ, ಮನರಂಜನೆ ಸಿಗಬೇಕು, ಯಾವುದು ಸಿಗಬಾರದು ಎಂಬ ಸ್ಪಷ್ಟ ಗೆರೆ ಹಾಕಿಕೊಳ್ಳುವ ಅಗತ್ಯವಿದೆ. ಇದರಲ್ಲಿ ಮಾಧ್ಯಮ, ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಪೋಷಕರು ಹೀಗೆ ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ.
