ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದೀನ ದುರ್ಬಲರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿಗಳ ಮಕ್ಕಳು ಓದುತ್ತಿರುವ ಶಾಲೆಯನ್ನು ಅಭಿವೃದ್ಧಿಪಡಿಸಿ ಮಕ್ಕಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಿದ್ದಾರೆ. ನಿಮಗೆ ಅಧಿಕಾರವಿದೆ, ನಮ್ಮ ಶಾಲಾ ಮಕ್ಕಳಿಗೆ ನಾಲ್ಕು ಸುಸಜ್ಜಿತ ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡಿ ಎಂದು ಬಿ.ಇ.ಒ. ಅವರನ್ನು ಕೋರಿದ್ದಾರೆ ವೀರಣ್ಣ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೀರಣ್ಣ ಮಡಿವಾಳರ ಅವರಿಗೆ ಅಮಾನತಿನ ಶಿಕ್ಷೆ ನೀಡಲಾಗಿದೆ. ತಮ್ಮ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದೇ ಅವರು ಎಸಗಿದ ‘ಮಹಾಪರಾಧ!’
ಈ ಅನ್ಯಾಯದ ಅಮಾನತನ್ನು ತಕ್ಷಣ ವಾಪಸು ಪಡೆಯಬೇಕು. ಆ ಮೂಲಕ ಶಿಕ್ಷಣ ಇಲಾಖೆ ತಾನು ಕಳೆದುಕೊಂಡಿರುವ ಘನತೆಯ ಗೌರವವನ್ನು ವಾಪಸು ಗಳಿಸಿಕೊಳ್ಳಬೇಕು.
ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ವೀರಣ್ಣ ತಮ್ಮ ಶಾಲೆಯಿಂದ ತಾಲ್ಲೂಕು ಶಿಕ್ಷಣಾಧಿಕಾರಿ (ಬಿ.ಇ.ಒ.) ಕಚೇರಿಯ ತನಕ ಮೌನವಾಗಿ ನಡೆದರು. ಈ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯ ವಿದ್ಯಾರ್ಥಿಗಳಿದ್ದಾರೆ. ಇರುವುದು ಎರಡೇ ಕೋಣೆಗಳು ಮತ್ತು ಒಬ್ಬರೇ ಕಾಯಂ ಶಿಕ್ಷಕರು. ಆ ಕಾಯಂ ಶಿಕ್ಷಕ ಸ್ವತಃ ವೀರಣ್ಣ ಮಡಿವಾಳ ಅವರೇ ಆಗಿದ್ದಾರೆ.
ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ ಮಡಿವಾಳ ಅವರ ವರ್ತನೆ ‘ಅನಾಗರಿಕ’ ಎಂದೂ, ಸರ್ಕಾರಕ್ಕೆ ಮುಜುಗರ ಒಡ್ಡುವಂತಹುದೂ ಆಗಿದೆಯೆಂದು ಬಿ.ಇ.ಒ. ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ದರ್ಪದ ವೈಖರಿ ನಿಜಾರ್ಥದಲ್ಲಿ ಖಂಡನೀಯ. ಆ ಕಾರಣಕ್ಕಾಗಿಯೇ ಅನಾಗರಿಕ. ಉದ್ಧಟತನದ ಪರಮಾವಧಿ.
“ಯಾರೇ ಸರ್ಕಾರಿ ನೌಕರರಿದ್ದರೂ ನಮ್ಮ ಗಮನಕ್ಕೆ ತರಬೇಕಿತ್ತು. ಈ ರೀತಿ ಏಕಾಏಕಿ ಪ್ರತಿಭಟನೆ ಮಾಡುವುದು ಸರಿ ಅಲ್ಲ. ಅವರು ತಮ್ಮ ಹಿರಿಯ ಅಧಿಕಾರಿಗಳ ಬಳಿ ಹೋಗಿ ಕೇಳಬೇಕು. ರಾಜ್ಯ ಸರ್ಕಾರದ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಅದಕ್ಕಾಗಿಯೇ ರೂಲ್ಸ್ ಇದೆ, ಗೊತ್ತಿದ್ದರೂ ಧರಣಿ ಮಾಡಿದ್ದಾರೆ. ಸರ್ಕಾರಿ ನೌಕರರು ಇತಿಮಿತಿಗಳಲ್ಲಿ ಇರಬೇಕು. ವೈಯಕ್ತಿಕವಾಗಿ ತೊಂದರೆ ಆಗಿದ್ದರೇ ಹೋರಾಟ ಮಾಡಬಹುದು. ಇದರಿಂದ ತಪ್ಪು ಸಂದೇಶ ಹೋಗುತ್ತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಮಾನತನ್ನು ಸಮರ್ಥಿಸಿಕೊಂಡಿದ್ದಾರೆ. ನಿಜಕ್ಕೂ ನಾಚಿಕೆಗೇಡಿನ ಸಮರ್ಥನೆಯಿದು.
ಏಳು ತರಗತಿಗಳಿಗೆ ಕಲಿಸಲು ಒಬ್ಬರೇ ಕಾಯಂ ಶಿಕ್ಷಕರು ಮತ್ತು ಎರಡೇ ಕೋಣೆಗಳಿರುವ ದುಸ್ಥಿತಿ ಶಿಕ್ಷಣ ಇಲಾಖೆಗೆ ಮುಜುಗರ ಉಂಟು ಮಾಡುವುದಿಲ್ಲವೇ, ಆತ್ಮಸಾಕ್ಷಿಯನ್ನು ಕಲಕುವುದಿಲ್ಲವೇ ಎಂಬ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರ ನೀಡಬೇಕು.
ವೀರಣ್ಣ ಅವರ ಪ್ರತಿಭಟನೆ ಸಾತ್ವಿಕವಾದದ್ದು ಮತ್ತು ಸ್ವಾರ್ಥರಹಿತವಾದದ್ದು. ಗಾಂಧೀ ಮಾರ್ಗದ ನಿಜ ಸತ್ಯಾಗ್ರಹ. ಗಾಂಧೀ ಟೋಪಿ, ತಿಳಿನೀಲಿ ಉಡುಪು ಧರಿಸಿ ಒಂದು ಕೈಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಚಿತ್ರಪಟವನ್ನೂ ಮತ್ತೊಂದು ಕೈಯಲ್ಲಿ ಗಾಂಧೀ ಊರುಗೋಲನ್ನೂ ಹಿಡಿದು ಹದಿನೈದು ಕಿ.ಮೀ. ದೂರದ ಬಿ.ಇ.ಒ.ಕಚೇರಿಗೆ ನಡೆದಿರುವುದು ಅರ್ಥಪೂರ್ಣ ಕ್ರಿಯೆ. ಆನಂತರ ಕಚೇರಿಯ ಬಾಗಿಲಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ನಾವು ಮಳ್ಯಾಗ, ಬಿಸಿಲಾಗ, ಛಳಿಯಾಗ ಹೊರಗ ಕುಂದರಬೇಕೇನ್ರೀ ಸರ ಎಂಬ ಅಂಬೇಡ್ಕರ್ ನಗರ ಶಾಲಾ ಮಕ್ಕಳ ಪ್ರಶ್ನೆ ತಮ್ಮ ಕರುಳು ಹಿಂಡಿ ಅಸಹಾಯಕನನ್ನಾಗಿಸಿದೆ ಎಂದು ವೀರಣ್ಣ ಸಂಕಟ ತೋಡಿಕೊಂಡಿದ್ದಾರೆ.
ಉಪವಾಸ ಕುಳಿತ ತಮ್ಮನ್ನು ಬಿ.ಇ.ಒ. ಶತ್ರುವಿನಂತೆ ನಡೆಸಿಕೊಂಡಿದ್ದಾಗಿಯೂ, ಏಕವಚನದಲ್ಲಿ ಸಂಬೋಧಿಸಿ, ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾಗಿಯೂ ವೀರಣ್ಣ ಹೇಳಿದ್ದಾರೆ.
ಈ ಪ್ರತಿಭಟನೆಯನ್ನು ಕೂಡ ಅವರು ಏಕಾಏಕಿ ನಡೆಸಿಲ್ಲ. ಈ ಹಿಂದೆ ಮೇಲಧಿಕಾರಿಗಳಿಗೆ ಹಲವು ಸಲ ಅಹವಾಲು ಸಲ್ಲಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಕಳೆದ ಒಂಬತ್ತು ವರ್ಷಗಳಿಂದ ಶ್ರಮಿಸುತ್ತ ಬಂದಿರುವವರು. ಅದಕ್ಕಾಗಿ ಹಲವು ಪ್ರಶಸ್ತಿಗಳು ಅವರ ಉಡಿ ತುಂಬಿವೆ. ಒಂದು ಲಕ್ಷ ರುಪಾಯಿಯ ನಗದು ಪ್ರಶಸ್ತಿಯೂ ಈ ಶಾಲೆಗೆ ಸಂದಿದೆ.
ಕನ್ನಡದ ಬಹುದೊಡ್ಡ ಕವಿ ಮತ್ತು ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಮುಂತಾದ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಕವಿತೆಗಳನ್ನು ವೀರಣ್ಣ ರಚಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ರಾಷ್ಟ್ರಪತಿಯವರಿಂದ ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ವೀರಣ್ಣ ಅವರ ಕವಿತಾ ಸಂಗ್ರಹ ‘ನೆಲದ ಕರುಣೆಯ ದನಿ’ಗೆ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಅಮ್ಮ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಮೊದಲಾದವುಗಳಿಗೆ ಭಾಜನರಾಗಿದ್ದಾರೆ. ಅವರ ಕವಿತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಅನ್ಬುಕುಮಾರ್, ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ವೀರಣ್ಣ ಅವರಿಗೆ ಅಭಿನಂದನಾ ಪತ್ರ ಕಳಿಸಿದ್ದಾರೆ.
ತಮಗೆ ದೊರೆತ ಪ್ರಶಸ್ತಿಗಳ ಹಣದ ಮೊತ್ತಗಳನ್ನು ಶಾಲಾ ಮಕ್ಕಳಿಗಾಗಿಯೇ ವಿನಿಯೋಗಿಸಿದ್ದಾರೆ. ಇವರು ಬರೆದಿರುವ ಕವಿತೆಗಳು ನಾಡಿನ ಹಲವು ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಪಠ್ಯಗಳಾಗಿ ಆಯ್ಕೆಯಾಗಿವೆ. ನೆರೆ ಬಂದ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ರಾಯಬಾಗ ತಾಲ್ಲೂಕಿನ ಸಾವಿರಾರು ಮಕ್ಕಳಿಗೆ ಶೈಕ್ಷಣಿಕ ಕಿಟ್ ಗಳನ್ನು ನೀಡಿದ್ದಾರೆ. ತಮ್ಮ ಗೆಳೆಯರ ದೇಣಿಗೆಯಿಂದ ದಿಗ್ಗೇವಾಡಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಕೊಡಿಸಿದ್ದಾರೆ. ನೆರೆಪೀಡಿತ ಹಳ್ಳಿಗರಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಬಟ್ಟೆ, ಹಾಸಿಗೆ, ಔಷಧಗಳನ್ನು ಹೊಂದಿಸಿದ್ದಾರೆ ಲಕ್ಷಾಂತರ ರುಪಾಯಿಯ ಪಾಠೋಪಕರಣ, ಪೀಠೋಪಕರಣ, ಕಂಪ್ಯೂಟರ್, ಸಿಸಿ ಟೀವಿಯನ್ನು ಶಾಲೆಯಲ್ಲಿ ಅಳವಡಿಸಿದ್ದಾರೆ. ‘ನನ್ನ ಕೆಲಸ ಕಾರ್ಯಗಳನ್ನು ಕಾಳಜಿ-ಕರುಣೆಯ ಕಣ್ಣುಗಳಿಂದ ನೋಡಿದರೆ ಪ್ರಾಯಶಃ ನಾನು ನಿಮಗೆ ಅನಾಗರಿಕ ನಾಗಿ ಕಾಣಿಸಲಾರೆ’ ಎಂದಿದ್ದಾರೆ.
ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದೀನ ದುರ್ಬಲರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿಗಳ ಮಕ್ಕಳು ಓದುತ್ತಿರುವ ಶಾಲೆಯನ್ನು ಅಭಿವೃದ್ಧಿಪಡಿಸಿ ಮಕ್ಕಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಿದ್ದಾರೆ. ನಿಮಗೆ ಅಧಿಕಾರವಿದೆ, ನಮ್ಮ ಶಾಲಾ ಮಕ್ಕಳಿಗೆ ನಾಲ್ಕು ಸುಸಜ್ಜಿತ ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡಿ ಎಂದು ಬಿ.ಇ.ಒ.ಅವರನ್ನು ಕೋರಿದ್ದಾರೆ ವೀರಣ್ಣ.
ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ ನಿಡಗುಂದಿಯ ಈ ಶಾಲೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದೆ. ಇದರಿಂದ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಘನತೆ ಹೆಚ್ಚಿತೋ ಅಥವಾ ಕುಂದಿತೋ ಎಂದು ಕಾಳಜಿ-ಕರುಣೆಯ ಕಣ್ಣಿಂದ ಯೋಚಿಸಿ ಎಂದು ವೀರಣ್ಣ ಮೇಲಧಿಕಾರಿಗೆ ಬರೆದಿರುವ ಪತ್ರ ಅತ್ಯಂತ ಪ್ರಸ್ತುತ.
ಮಡಿವಾಳರ್ ಅವರ ಪ್ರತಿಭಟನೆ ಶಿಕ್ಷಣ ಇಲಾಖೆಗೆ ಎಚ್ಚರಿಕೆಯ ಗಂಟೆ ಆಗಬೇಕಲ್ಲವೇ? ಬದಲಿಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಬಹುದೇ? ನಿದ್ದೆ ನಿರ್ಲಕ್ಷ್ಯಗಳಿಂದ ಎಬ್ಬಿಸುವ ಸಂದೇಶ ವಾಹಕನನ್ನು ಗುಂಡಿಟ್ಟು ಕೊಲ್ಲುವ ಆತ್ಮಘಾತಕ ಧೋರಣೆಯಿದು. ನೌಕರಶಾಹಿ ಎಂಬುದು ವಿಳಂಬಕ್ಕೆ, ಭ್ರಷ್ಟಾಚಾರಕ್ಕೆ ಹೆಸರುವಾಸಿ.
ಮಡಿವಾಳರ ಅವರನ್ನು ಅಮಾನತುಗೊಳಿಸಿದ ದರ್ಪ ದುರಹಂಕಾರದ ಧೋರಣೆ ವಿರುದ್ಧ ಪ್ರತಿಭಟನೆಗಳು ಪ್ರಕಟವಾಗಿರುವುದು ಆರೋಗ್ಯಕರ ಸೂಚನೆ. ವೀರಣ್ಣ ಕಳೆದ 17-18 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
‘ವಿವೇಕ’ ಯೋಜನೆಯಡಿ ರಾಜ್ಯ ಸರ್ಕಾರ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗಿದ್ದರೂ ಶಾಲಾ ಕೊಠಡಿಗಳ ನಿರ್ಮಾಣ ಕೆಲಸ ಮಂದಗತಿ ಹಿಡಿದಿರುವುದು ಯಾಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳನ್ನು ಇತ್ತೀಚೆಗಷ್ಟೇ ತರಾಟೆಗೆ ತೆಗೆದುಕೊಂಡಿದ್ದರು.
ಸರ್ಕಾರಿ ಶಾಲೆಗಳಿಗೆ ಹೋಗುವ ಬಹುತೇಕ ಮಕ್ಕಳು ಬಡವರ ಕುಡಿಗಳು. ಅನುಕೂಲವುಳ್ಳವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವುದು ಅತ್ಯಂತ ವಿರಳ. ದಿನಗೂಲಿ ದಂಪತಿಗಳು ಕೂಡ ಹೇಗೋ ಹೆಣಗಿ, ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ‘ಇಂಗ್ಲಿಷ್ ಹೇಳಿಕೊಡುವ’ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ಉದಾಹರಣೆಗಳು ಹೇರಳವಾಗಿವೆ. ಸರ್ಕಾರಿ ಶಾಲೆಗಳ ಮೂಲಸೌಲಭ್ಯಗಳು ಮಜಬೂತಾಗಿರಬೇಕು ಮತ್ತು ಸಾಕಷ್ಟು ಕಾಯಂ ಶಿಕ್ಷಕರನ್ನು ಹೊಂದಿರಬೇಕು.
ರಾಜ್ಯದಲ್ಲಿ 16 ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದು ಲಕ್ಷ ತರಗತಿ ಕೊಠಡಿಗಳಿವೆ. ಇವೆಲ್ಲವುಗಳ ನಿರ್ವಹಣೆಯನ್ನು ಸರ್ಕಾರವೇ ಹೊರುವುದು ಸಾಧ್ಯವಿಲ್ಲ. ಜನಸಮುದಾಯಗಳೂ ತಮ್ಮ ಪಾಲು ಸಲ್ಲಿಸಬೇಕು. ‘ನಮ್ಮ ಶಾಲೆ- ನಮ್ಮ ಜವಾಬ್ದಾರಿ’ ಆಂದೋಲನದಡಿಯಲ್ಲಿ ಸಾವಿರಾರು ಕೊಠಡಿಗಳ ಜೀರ್ಣೋದ್ಧಾರ ಮಾಡಲಾಗಿದೆ. ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು 1,591 ಕೋಟಿ ರುಪಾಯಿಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ನೀಡಿದೆ. ಏಷಿಯಾ ಅಭಿವೃದ್ಧಿ ಬ್ಯಾಂಕು 2,500 ಕೋಟಿ ರುಪಾಯಿ ನೀಡಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದೇ ಮೇ 22ರಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 49,679 ಸರ್ಕಾರಿ ಶಾಲೆಗಳಿವೆ, ಇವುಗಳಲ್ಲಿ 21,045 ಪ್ರಾಥಮಿಕ ಶಾಲೆಗಳು (1-5 ತರಗತಿಗಳು) ಮತ್ತು 22,086 ಉನ್ನತ ಪ್ರಾಥಮಿಕ ಶಾಲೆಗಳು (1-8 ತರಗತಿಗಳು) ಸೇರಿವೆ. 53.2 ಲಕ್ಷ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.
2,37,040 ಶಿಕ್ಷಕರ ಹುದ್ದೆಗಳ ಪೈಕಿ 53,860 ಹುದ್ದೆಗಳು ಖಾಲಿಯಿವೆ. ಈ ಕೊರತೆಯನ್ನು ಸರಿದೂಗಿಸಲು 35,000 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರ ಕೊರತೆಯು ಗುಣಮಟ್ಟದ ಶಿಕ್ಷಣವನ್ನು ಬಾಧಿಸಿದೆ. ಒಂದೆಡೆ ಲಕ್ಷಾಂತರ ರುಪಾಯಿಯ ಶುಲ್ಕ ತೆತ್ತು ಮಕ್ಕಳನ್ನು ವಿಲಾಸೀ ಶಾಲೆಗಳಲ್ಲಿ ಓದಿಸುವ ಸಿರಿವಂತರು, ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಓದಿಸಲೂ ಶಕ್ತಿಯಿಲ್ಲದ ಬಡವರ ಎರಡು ವಿರುದ್ಧ ಧೃವಗಳ ವೈಪರೀತ್ಯ ನಮ್ಮ ಸಮಾಜದಲ್ಲಿದೆ. ಖಾಸಗಿ ಶಾಲೆಗಳು ಹವಾನಿಯಂತ್ರಿತ ತರಗತಿ ಕೊಠಡಿಗಳನ್ನು ಹೊಂದಿದ್ದರೆ, ದೊಡ್ಡ ಸಂಖ್ಯೆಯ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಕೊಠಡಿಗಳ ತೀವ್ರ ಅಭಾವವಿದೆ.
ನೆಲಮುಗಿಲುಗಳ ಈ ಅಂತರವನ್ನು ತಗ್ಗಿಸಬೇಕಿದೆ. ಗುಣಮಟ್ಟದ ಶಿಕ್ಷಣವು ಮೂಲಭೂತ ಹಕ್ಕುಗಳಲ್ಲೊಂದು. ಈ ಹಕ್ಕನ್ನು ಸರ್ಕಾರವಲ್ಲದೆ ಬೇರೆ ಯಾರು ಎತ್ತಿ ಹಿಡಿಯಬೇಕು?
