ಈ ರಾಜ್ಯ ಉತ್ತರಪ್ರದೇಶದ ರೀತಿ ಆಗಬಾರದು. ಬೆಂಗಳೂರು ಮಹಾನಗರಕ್ಕೆ ಬರುವ ಹೊರ ರಾಜ್ಯದ ವಲಸೆ ಕಾರ್ಮಿಕರು, ಶಿಕ್ಷಣ-ಉದ್ಯೋಗ ಎಂದು ನೆಲೆಸಿರುವ ವಿದೇಶಿ ಪ್ರಜೆಗಳು ಕಾನೂನುಬಾಹಿರ ಚಟುವಟಿಕೆ, ಮಾದಕ ವಸ್ತು ಮಾರಾಟದಲ್ಲಿ ಸಿಕ್ಕಿಹಾಕಿಕೊಂಡ ಹಲವು ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಮಹಿಳೆಯರ ಸುರಕ್ಷತೆ, ಸಾರ್ವಜನಿಕ ಸ್ಥಳ, ನಿರ್ಜನ ಪ್ರದೇಶ, ಬಸ್‌ಗಳಲ್ಲಿ ದೌರ್ಜನ್ಯ ನಡೆಯದಂತೆ ತಡೆಯುವುದು ಗೃಹ ಇಲಾಖೆಯ ಆದ್ಯ ಕರ್ತವ್ಯವಾಗಬೇಕು.
ಬೆಂಗಳೂರಿನ ರಸ್ತೆಯೊಂದರಲ್ಲಿ ನಡೆದು ಹೋಗುತ್ತಿದ್ದ ಯುವತಿಯೊಬ್ಬರ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಕುರಿತಂತೆ ಗೃಹಸಚಿವ ಡಾ ಜಿ ಪರಮೇಶ್ವರ್ “ದೊಡ್ಡ ನಗರದಲ್ಲಿ ಇಂಥವೆಲ್ಲ ಸಾಮಾನ್ಯ” ಎಂದು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ ಟೀಕೆಗೆ ಗ್ರಾಸವಾಗಿದೆ. ಗೃಹಸಚಿವರಾಗಿ, ರಾಜ್ಯದ ಪ್ರತಿಯೊಬ್ಬ ನಾಗರಿಕರ ಮಾನ ಪ್ರಾಣಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಡಾ ಪರಮೇಶ್ವರ್ ಹೇಳಿಕೆ ಬೇಜವಾಬ್ದಾರಿ ಹೇಳಿಕೆಯೇ ಹೌದು. ಆದರೆ ಅದನ್ನು ಟೀಕಿಸುವ, ಖಂಡಿಸುವ ನಾವು ದಿನದಿನವೂ ಎಲ್ಲೆಂದರಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಮರ್ಯಾದೆಗೇಡು ಹತ್ಯೆಗಳ ಬಗ್ಗೆ ಎಷ್ಟು ಚಿಂತಾಕ್ರಾಂತರಾಗಿದ್ದೇವೆ ಎಂದು ಯೋಚಿಸಬೇಕಿದೆ.
ಕೇವಲ ಮುಸ್ಲಿಮರ ದ್ವೇಷ, ಅವರ ಮನೆ ಕೆಡವುವುದು, ಮುಸ್ಲಿಂ ಹೆಸರಿರುವ ಊರುಗಳ ಹೆಸರು ಬದಲಿಸೋದು, ಹಿಂದೂ ಹಬ್ಬಗಳ ವೈಭವೀಕರಣ, ಈ ಹಬ್ಬಗಳ ಆಚರಣೆಯನ್ನು ಮುಸ್ಲಿಮ್ ದ್ವೇಷಿ ಆಗಿಸುವುದು, ಶಿಕ್ಷಣ- ಮಹಿಳಾ ಸುರಕ್ಷತೆಗೆ ಒತ್ತು ನೀಡದಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿ ಬಡವರ ಮೇಲಿನ ಅನ್ಯಾಯಕ್ಕೆ ಕಿವಿಗೊಡುವ ಪ್ರಭುತ್ವ ಇಲ್ಲ. ಪೊಲೀಸ್ ವ್ಯವಸ್ಥೆ ಅಮಾನುಷಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ 19 ವರ್ಷದ ಯುವತಿಯ ಮೇಲೆ 23 ಮಂದಿ ಕಾಮುಕರು ಒಂದು ವಾರ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಆದರೆ, ಕರ್ನಾಟಕ ಹಾಗಲ್ಲ. ತೆರಿಗೆ ಸಂಗ್ರಹ, ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯ ಕ್ಷೇತ್ರ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ದುದರಲ್ಲೇ ಪರವಾಗಿಲ್ಲ. ಐ ಟಿ ಹಬ್, ಇಡೀ ದೇಶದ ಜನರನ್ನು ಬೆಂಗಳೂರಿಗೆ ತಂದುಬಿಟ್ಟಿದೆ. ಎಲ್ಲರಿಗೂ ಬೆಂಗಳೂರು ಹವೆ ಇಷ್ಟ. ಇಲ್ಲಿ ಕೆಲಸಕ್ಕೆ ಬಂದವರು ಮನೆ ಕೊಂಡು ಇಲ್ಲೇ ಬೀಡು ಬಿಟ್ಟಿದ್ದಾರೆ. ಇಂತಹ ಸುವ್ಯವಸ್ಥಿತ ನಗರದಲ್ಲಿ ಅತ್ಯಾಚಾರ, ಕೊಲೆಗಳು ಸಾಮಾನ್ಯ ಆಗಬಾರದು. ಇದು ಸರ್ಕಾರಕ್ಕೆ ಕಳಂಕ, ಅವಮಾನಕರ ಎನಿಸಬೇಕು. ಈ ದೃಷ್ಟಿಯಲ್ಲಿ ನೋಡಿದರೆ ಗೃಹಸಚಿವರ ಮಾತು ಅಕ್ಷಮ್ಯ. ಈ ರಾಜ್ಯ ಉತ್ತರಪ್ರದೇಶದ ರೀತಿಯಲ್ಲಿ ಆಗಬಾರದು. ಬೆಂಗಳೂರು ಮಹಾನಗರಕ್ಕೆ ಬರುವ ಹೊರ ರಾಜ್ಯದ ವಲಸೆ ಕಾರ್ಮಿಕರು, ಶಿಕ್ಷಣ-ಉದ್ಯೋಗ ಎಂದು ನೆಲೆಸಿರುವ ವಿದೇಶಿ ಪ್ರಜೆಗಳು ಕಾನೂನು ಬಾಹಿರ ಚಟುವಟಿಕೆ, ಮಾದಕ ವಸ್ತು ಮಾರಾಟದಲ್ಲಿ ಸಿಕ್ಕಿಹಾಕಿಕೊಂಡ ಹಲವು ಪ್ರಕರಣಗಳು ವರದಿಯಾಗಿವೆ. ಇವೆಲ್ಲ ಸರ್ಕಾರದ ಗಮನಕ್ಕೆ ಬಾರದ ವಿಚಾರವಲ್ಲ. ನಗರದಲ್ಲಿ ಮಹಿಳೆಯರ ಸುರಕ್ಷತೆ, ಸಾರ್ವಜನಿಕ ಸ್ಥಳ, ನಿರ್ಜನ ಪ್ರದೇಶ, ಬಸ್‌ಗಳಲ್ಲಿ ದೌರ್ಜನ್ಯ ನಡೆಯದಂತೆ ತಡೆಯುವುದು ಗೃಹ ಇಲಾಖೆಯ ಆದ್ಯ ಕರ್ತವ್ಯವಾಗಬೇಕು.
ವಾಸ್ತವದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ನಗರ, ಪಟ್ಟಣ, ಗ್ರಾಮ ಎಂಬ ಯಾವ ಸೀಮೆಗಳೂ ಇಲ್ಲ. ಉತ್ತರ ಪ್ರದೇಶದಲ್ಲಿ ಮನುಷ್ಯರಾದವರು ಮಾಡಲಾರರು ಎಂಬಷ್ಟು ಕ್ರೂರ ರೀತಿಯಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆಗಳಾಗುತ್ತಿವೆ. ದೊಡ್ಡ ನಗರದಲ್ಲಿ ಜಾಸ್ತಿ, ಸಣ್ಣ ಊರಲ್ಲಿ ಕಡಿಮೆ ಎಂಬುದಾಗಲಿ, ಆ ಪಕ್ಷ ಅಧಿಕಾರದಲ್ಲಿ ಇದ್ದಾಗ ಜಾಸ್ತಿ ಈ ಪಕ್ಷ ಇದ್ದಾಗ ಕಡಿಮೆ ಎಂಬುದು ಪ್ರಶ್ನೆಯೇ ಅಲ್ಲ. ವರ್ಷ ತುಂಬದ ಹಸುಗೂಸಿನಿಂದ ಹಿಡಿದು ಎಂಭತ್ತರ ವೃದ್ಧೆಯರವರೆಗೂ ಒಂಟಿಯಾಗಿ ಸಿಕ್ಕ ಹೆಣ್ಣಾದರೆ ಸಾಕು ಕಾಮತೃಷೆ ತೀರಿಸಿಕೊಳ್ಳುವ ಕ್ರೂರ ಮೃಗಗಳಿರುವ ಸಮಾಜವಿದು. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನೆಲೆಸಿದ್ದ ಕಾರ್ಮಿಕ ಕುಟುಂಬದ ಆರು ವರ್ಷದ ಬಾಲಕಿಯನ್ನು ಅದೇ ಕಟ್ಟಡದ ಕಾರ್ಮಿಕನಾಗಿದ್ದ ಬಿಹಾರದ ಯುವಕ ಅತ್ಯಾಚಾರ ಮಾಡಿ ಕೊಂದು ಎಸೆದಿದ್ದ.
ದಶಕದ ಹಿಂದೆ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಮಂದಿ ರಾಕ್ಷಸರು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯನ ಮುಂದೆಯೇ ಭೀಕರವಾಗಿ ಅತ್ಯಾಚಾರ ಎಸಗಿ ರಸ್ತೆಗೆ ಎಸೆದಿದ್ದರು. ಆ ದುರುಳರಿಗೆ ಒಂದೇ ವರ್ಷದಲ್ಲಿ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಆರು ವರ್ಷ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಾ ಕೊನೆಗೆ ಉರುಳಿಗೆ ಕೊರಳು ಕೊಟ್ಟಿದ್ದರು. ಈ ಪ್ರಕರಣದಲ್ಲಿ ದೇಶಾದ್ಯಂತ ಎದ್ದ ಆಕ್ರೋಶ ನೋಡಿದರೆ ಇನ್ನು ಮುಂದೆ ಇಂತಹ ಕೃತ್ಯ ನಡೆಯಬಾರದಿತ್ತು. ಆದರೆ ಆನಂತರವೂ ಇಂತಹದ್ದೇ ಹಲವು ಪ್ರಕರಣಗಳು ನಡೆದಿವೆ. ಹೈದರಾಬಾದ್‌ನ ಹೆದ್ದಾರಿಯ ಬಳಿ ಯುವತಿಯೊಬ್ಬಳನ್ನು ಎಳೆದೊಯ್ದ ಲಾರಿ ಚಾಲಕರ ತಂಡ ಅತ್ಯಾಚಾರಗೈದು ಕೊಂದು ಹಾಕಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಎರಡೇ ದಿನದಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡು ಶೂಟೌಟ್ ಮಾಡಿ ಬಿಸಾಕಿದ್ದರು ಹೈದರಾಬಾದ್ ಪೊಲೀಸರ ಕೃತ್ಯ ತೀವ್ರ ವಿವಾದಕ್ಕೆ ಎಡೆಯಾಗಿತ್ತು. ಜನಪ್ರಿಯತೆ ಗಳಿಸಿ ಕಳವಳ ಮೂಡಿಸಿತ್ತು. ನಮ್ಮ ನ್ಯಾಯ ವ್ಯವಸ್ಥೆಯ ಅತಿ ವಿಳಂಬ ನಡೆಯ ಅಪಾಯವನ್ನು ಎತ್ತಿ ತೋರಿತ್ತು. ಕಳೆದ ವರ್ಷ ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯನ್ನು ಆಸ್ಪತ್ರೆಯ ಹಾಲ್‌ನಲ್ಲಿಯೇ ಕಿರಾತಕನೊಬ್ಬ ಭೀಕರವಾಗಿ ಅತ್ಯಾಚಾರ ಮಾಡಿ ಸಾಯಿಸಿದ್ದ. ಆತನಿಗೆ ವರ್ಷದೊಳಗೆ ಜೀವಾವಧಿ ಶಿಕ್ಷೆ ತೀರ್ಪು ಬಂದಿದೆ. ಆದರೆ, ಈ ಯಾವ ತೀರ್ಪುಗಳೂ ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸುತ್ತಿಲ್ಲ, ತಡೆಯುತ್ತಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ. ದಾವಣಗೆರೆಯಲ್ಲಿ ಖಾಸಗಿ ಬಸ್‌ನಲ್ಲಿ ಇಬ್ಬರು ಮಕ್ಕಳ ಜೊತೆಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಬಸ್ ಚಾಲಕ, ಕಂಡಕ್ಟರ್, ಬಸ್ ಏಜೆಂಟ್ ಅತ್ಯಾಚಾರ ನಡೆಸಿದ ಪ್ರಕರಣ ನಡೆದಿದೆ. ಮಕ್ಕಳ ಬಾಯಿಗೆ ಬಟ್ಟೆ ತುರುಕಿ ದುರುಳರು ಈ ಕೃತ್ಯ ಮಾಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿದ ರಸ್ತೆಯಲ್ಲಿ ಹೋಗುತ್ತಿದ್ದ ಸವಾರರು ತಡೆದು ನಿಲ್ಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳ ಬಂಧನವಾಗಿದೆ. ನಿರ್ಭಯ ಪ್ರಕರಣದ ತೀರ್ಪು ಇವರಿಗೆ ಭಯ ಹುಟ್ಟಿಸಿಲ್ಲ.
ಅತ್ಯಾಚಾರಿಗಳಿಗೆ ಯಾವ ಕಾನೂನಿನ ಭಯವೂ ಇಲ್ಲ, ಆ ಕ್ಷಣಕ್ಕೆ ಅವರ ಲೈಂಗಿಕ ಲಾಲಸೆ ತೀರಿಸಿಕೊಳ್ಳುವ ಧಾವಂತ. ಅದರಾಚೆಗಿನ ಪರಿಣಾಮಗಳ ಬಗ್ಗೆ ಯಾವುದೇ ಅರಿವಿಲ್ಲ. ಕಠಿಣ ಕಾನೂನುಗಳು ಪುಸ್ತಕದಲ್ಲೇ ಉಳಿದು ಹೋಗಿವೆ. ಕೋರ್ಟ್‌ನ ಕಟಕಟೆಯಲ್ಲಿ ಇಂತಹ ಸಾವಿರಾರು ಪ್ರಕರಣಗಳು ದಶಕಗಳ ಕಾಲ ಕೊಳೆಯುತ್ತ ಬಿದ್ದಿರುತ್ತವೆ. ಎಂದೋ ಬೆರಳೆಣಿಕೆಯ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ. ಕೆಲ ಕಾಲ ಜೈಲುಗಳಲ್ಲಿ ಕಳೆದು ಮತ್ತೆ ಹೊರಬರುತ್ತಾರೆ. ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿದ್ದೂ ಸತ್ತಂತೆ. ಕ್ಷಣ ಕ್ಷಣವೂ ಸಾಯುತ್ತ ದಿನ ದೂಡುವ ಭೀಕರ ಪರಿಸ್ಥಿತಿಯಿದೆ. ಹುಟ್ಟಿಸಿದ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿದ ಸುದ್ದಿ ಬಂದಿದೆ. ಇದೇನೂ ಮೊದಲ ಪ್ರಕರಣವಲ್ಲ. ಹಾಗಾಗಿ ಕೊನೆಯದೂ ಅಲ್ಲ. ಕೊನೆ ಮಾಡುವ ಇಚ್ಛಾ ಶಕ್ತಿ ಸರ್ಕಾರಗಳಿಗೂ ಇಲ್ಲ, ನ್ಯಾಯಪೀಠಗಳಿಗೂ ಇಲ್ಲ. ಸಮಾಜ ರೋಗಗ್ರಸ್ತವಾಗಿದೆ. ದೇಶದ ಕೆಲವು ಹೈಕೋರ್ಟ್ ನ್ಯಾಯಪೀಠಗಳು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಅತ್ಯಾಚಾರದಷ್ಟೇ ಭೀಕರವಾಗಿವೆ.
ಕರ್ನಾಟಕದಲ್ಲಿ ವರ್ಷದ ಆರಂಭದ 2 ತಿಂಗಳಲ್ಲೇ 799 ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ ಎಂದು ಗೃಹ ಇಲಾಖೆ ನೀಡುವ ಅಂಕಿ- ಅಂಶಗಳೇ ಹೇಳುತ್ತವೆ. ಕೇವಲ 87 ಆರೋಪಿಗಳ ಬಂಧನವಾಗಿದೆ. ಇದು 2023ರಲ್ಲಿ 6492 ಪ್ರಕರಣ 2024ರಲ್ಲಿ 6326 ಪ್ರಕರಣಗಳು ವರದಿಯಾಗಿವೆ. ಆ ಪ್ರಕರಣಗಳ ವಿಚಾರಣೆ ಎಲ್ಲಿಗೆ ಬಂತು? ಅವುಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸಿ ಶಿಕ್ಷೆ ಕೊಡಿಸಬೇಕಿದೆ.
ದೇಶದಲ್ಲಿನ ಬಹುಪಾಲು ಅತ್ಯಾಚಾರಗಳ ಪ್ರಕರಣಗಳು ಶಿಕ್ಷೆಯಲ್ಲಿ ಅಂತ್ಯವಾಗುತ್ತಿಲ್ಲ. ಕೃತ್ಯ ಎಸಗಿ ಪಾರಾಗಬಲ್ಲೆವು ಎಂಬ ವಿಶ್ವಾಸ ಪಾತಕಿಗಳಲ್ಲಿ ಮೂಡುವಂತಾಗಿದೆ. 2018-2022ರ ನಡುವಣ ಅವಧಿಯಲ್ಲಿನ ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ಶೇ. 27-28 ಮಾತ್ರ. ಬ್ರಿಟನ್ ನಲ್ಲಿ ಈ ಪ್ರಮಾಣ ಶೇ.60 ರಿಂದ ಶೇ.65. ಭಾರತದ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಿದು.
ಲೈಂಗಿಕ ಅತ್ಯಾಚಾರಗಳ ಶೀಘ್ರ ವಿಚಾರಣೆಗಾಗಿ ವಿಶೇಷ ಕ್ಷಿಪ್ರ ನ್ಯಾಯಾಲಯಗಳನ್ನು ತೆರೆಯಲು ಕೇಂದ್ರ ಸರ್ಕಾರ ಸಾವಿರ ಕೋಟಿ ರುಪಾಯಿಗೂ ಹೆಚ್ಚು ನೆರವನ್ನು ಎಲ್ಲ ರಾಜ್ಯ ಸರ್ಕಾರಗಳಿಗೆ ಹಂಚಿದೆ ಎಂದು ತಿಳಿಸಿತ್ತು. ಈ ಕ್ಷಿಪ್ರ ನ್ಯಾಯಾಲಯಗಳ ಆಶಯ ಕ್ಷೇತ್ರಮಟ್ಟದಲ್ಲಿ ಕಾಣುತ್ತಿಲ್ಲವೇಕೆ? ಕಾಗದದ ಮೇಲೆಯೇ ಉಳಿದು ಹೋಗಿದೆಯೇ? ಭಾರತದಂತಹ ದೊಡ್ಡ ದೇಶದಲ್ಲಿ ಈ ಕ್ಷಿಪ್ರ ನ್ಯಾಯಾಲಯಗಳು ಮತ್ತು ಪೋಕ್ಸೊ ನ್ಯಾಯಾಲಯಗಳ ಸ್ಥಾಪನೆಗೆ ಸಾವಿರ ಕೋಟಿ ರುಪಾಯಿಗಳು ಜುಜುಬಿ ಮೊತ್ತವಲ್ಲವೇ? ಈ ನ್ಯಾಯಾಲಯಗಳ ಪ್ರಗತಿಯ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರವೊಂದನ್ನು ಹೊರಡಿಸಬೇಕಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದ ನೆರವಿಗಾಗಿ ಕಾಯದೆ ತಾನೇ ಮುಂದಾಗಿ ಈ ಅತ್ಯಾಚಾರದ ವಿಕೃತ ವ್ಯಾಧಿಗೆ ಗಂಭೀರ ಮದ್ದು ನೀಡಬೇಕಿದೆ. ಸ್ತ್ರೀ ಪೀಡಕರು ಮತ್ತು ಅತ್ಯಾಚಾರಿಗಳಿಗೆ ವರ್ಷದೊಪ್ಪತ್ತಿನಲ್ಲೇ ಶಿಕ್ಷೆ ನೀಡಿಸಬೇಕಿದೆ. ಇಲ್ಲವಾದರೆ ಗೃಹಸಚಿವರ ಹೊಣೆಗೇಡಿಯೂ ಆದ ದೇಶಾವರಿ ಹೇಳಿಕೆ ನಿಜವಾಗುತ್ತಲೇ ನಡೆದೀತು.
