ಈ ದಿನ ಸಂಪಾದಕೀಯ | ಜನತಂತ್ರವೆಂಬುದು ಭಾರತದ ವಂಶವಾಹಿಯಲ್ಲಿದೆಯೇ ಮೋದಿಯವರೇ, ಹೌದೇ?

Date:

Advertisements
ಮಾನವ ಹಕ್ಕುಗಳು ಯಾವುದೇ ನೈಜ ಜನತಂತ್ರದ ಜೀವ ಜೀವಾಳ. ಸರ್ವಾಧಿಕಾರಿ ಆಡಳಿತದಲ್ಲಿ ಮಾನವ ಹಕ್ಕುಗಳನ್ನು ಹೊಸಕಿ ಹಾಕಿರಲಾಗುತ್ತದೆ. ಇತಿಹಾಸ ಮತ್ತು ವರ್ತಮಾನದಲ್ಲಿ ಈ ಮಾತಿಗೆ ಹಲವು ಜ್ವಲಂತ ಉದಾಹರಣೆಗಳು ಇವೆ

ಜನತಂತ್ರ ಎಂಬುದು ಭಾರತದ ಡಿ.ಎನ್.ಎ.ನಲ್ಲಿದೆ, ಭಾರತದ ಚೈತನ್ಯದಲ್ಲೇ ಆಡಗಿದೆ, ರಕ್ತಗತವಾಗಿ ಹೋಗಿದೆ ಎಂಬ ಮಾತುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ಅಮೆರಿಕಾ ಪ್ರವಾಸದಲ್ಲಿ ಎದೆಯುಬ್ಬಿಸಿ ಆಡಿದರು.

ಆದರೆ ಆಳುವವರು ಮತ್ತು ಆಳಿಸಿಕೊಳ್ಳುವವರು ಇಬ್ಬರ ದೃಷ್ಟಿಯಿಂದಲೂ ಈ ಮಾತು ಸತ್ಯದೂರ. ಸರ್ವಾಧಿಕಾರವನ್ನು ಆಗಾಗ ಸೋಲಿಸಿರುವ ಮತದಾರರು, ಬಹುತೇಕ ಅದನ್ನು ನಿರ್ಲಕ್ಷಿಸುತ್ತಲೋ ಅಥವಾ ಆಗಾಗ ಅದರ ಬೆನ್ನು ತಟ್ಟುತ್ತಲೋ ಬಂದಿದ್ದಾರೆ. ಇಂದಿರಾಗಾಂಧಿಯವರು ಮತ್ತು ಖುದ್ದು ನರೇಂದ್ರ ಮೋದಿಯವರೇ ಈ ಮಾತಿಗೆ ತಾಜಾ ನಿದರ್ಶನ. ಪಶ್ಚಿಮ ಬಂಗಾಳದಲ್ಲಿ ಭಿನ್ನಮತವನ್ನು ಹತ್ತಿಕ್ಕುವ ಪರಂಪರೆಯೇ ಬೇರೂರಿದೆ.

ಹಾಲಿ ಭಾರತದಲ್ಲಿ ಜಾರಿಯಲ್ಲಿರುವುದು ಬಹುಸಂಖ್ಯಾತರ ಉದಾರವಾದಿ ಅಲ್ಲದ ಜನತಂತ್ರ. ಪ್ರತಿಪಕ್ಷಗಳ ಸರ್ಕಾರಗಳನ್ನು ಬೇಟೆಯಾಡಿ ಕೆಡವಲಾಗುತ್ತಿದೆ. ಕೋಮು ಧೃವೀಕರಣದ ರಾಜಕಾರಣ ಜನತಂತ್ರಕ್ಕೆ ಗ್ರಹಣ ಹಿಡಿಸಿದೆ.

Advertisements

ಮಾನವ ಹಕ್ಕುಗಳು ಯಾವುದೇ ನೈಜ ಜನತಂತ್ರದ ಜೀವ ಜೀವಾಳ. ಸರ್ವಾಧಿಕಾರಿ ಆಡಳಿತದಲ್ಲಿ ಮಾನವ ಹಕ್ಕುಗಳನ್ನು ಹೊಸಕಿ ಹಾಕಿರಲಾಗುತ್ತದೆ. ಇತಿಹಾಸ ಮತ್ತು ವರ್ತಮಾನದಲ್ಲಿ ಈ ಮಾತಿಗೆ ಹಲವು ಜ್ವಲಂತ ಉದಾಹರಣೆಗಳು ಉಂಟು.

ಕಳೆದ ಒಂಬತ್ತು ವರ್ಷಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಮುಸಲ್ಮಾನರನ್ನು ಮೋದಿಭಕ್ತ ಗುಂಪುಗಳು ಬಹಿರಂಗವಾಗಿ ಜಜ್ಜಿ ಕೊಂದಿವೆ. ಹಿಂಸಾಚಾರ ಮತ್ತು ಕೋಮು ಗಲಭೆಗಳಾದಾಗ ಬುಲ್ಡೋಜರ್ ಗಳು ಮುಸಲ್ಮಾನರ ಮನೆಗಳನ್ನು ಮಾತ್ರವೇ ನೆಲಸಮ ಮಾಡುತ್ತವೆ. ಒಂದು ಕೋಮಿನ ಅತ್ಯಾಚಾರಿಗಳ ಮನೆಗಳನ್ನು ಮಾತ್ರವೇ ನೆಲಸಮ ಮಾಡಿ, ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುತ್ತಿದೆ. ಇಂತಹ ಬುಲ್ಡೋಜರ್ ಜನತಂತ್ರವನ್ನು ಪ್ರಜಾಪ್ರಭುತ್ವ ಎಂದು ಯಾವ ಬಾಯಿಯಲ್ಲಿ ಕರೆಯಲಾದೀತು?

ನಮ್ಮ ವಂಶವಾಹಿಗಳಲ್ಲಿರುವ (ಡಿಎನ್ ಎ) ಜನತಂತ್ರ ಸರ್ವಜನರಿಗೆ ಸಲ್ಲುವುದಿಲ್ಲವೇ ಮೋದಿಯವರೇ? ಅಲ್ಪಸಂಖ್ಯಾತರು ಮತ್ತು ಬಿಜೆಪಿಯ ರಾಜಕೀಯ ವಿರೋಧಿಗಳಿಗೆ ಜನತಂತ್ರ ಅನ್ವಯಿಸುವುದಿಲ್ಲವೇ? ಬಹುಸಂಖ್ಯಾತರಿಗೆ ಮಾತ್ರ ಸೀಮಿತವೇ? ಹೌದಾಗಿದ್ದರೆ ಹಾಗೆಂದು ಅಧಿಕೃತವಾಗಿ ಘೋಷಿಸಬಹುದಲ್ಲ?

ವಾಕ್ ಸ್ವಾತಂತ್ರ್ಯವನ್ನು ಲಾಗಾಯಿತಿನಿಂದಲೂ ಈ ದೇಶದಲ್ಲಿ ನಿರ್ಬಂಧಿಸುತ್ತ ಬರಲಾಗಿದೆ. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಈ ಸ್ವಾತಂತ್ರ್ಯದ ಕತ್ತನ್ನೇ ಅದುಮಲಾಗಿದೆ. ರಾಜಕೀಯ ವಿರೋಧಿಗಳು, ಸರ್ಕಾರದ ನೀತಿ ನಿರ್ಧಾರಗಳನ್ನು ಒಪ್ಪದವರು, ವಿದ್ಯಾರ್ಥಿ ನಾಯಕರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರನ್ನು ಭಯೋತ್ಪಾದಕರಂತೆ ನಡೆಸಿಕೊಂಡು ಜೈಲಿಗೆ ತಳ್ಳಲಾಗಿದೆ. ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಕೊಳೆಸಲಾಗುತ್ತಿದೆ.

ಭಿನ್ನಮತ ಮತ್ತು ವಾಕ್ ಸ್ವಾತಂತ್ರ್ಯ ಅಪರಾಧಗಳಾಗಿ ಹೋಗಿವೆ. 2014ರಿಂದ ದಾಖಲೆ ಸಂಖ್ಯೆಯ (399) ರಾಜದ್ರೋಹದ ಕೇಸುಗಳನ್ನು ಹಾಕಲಾಗಿದೆ. ಜನತಾಂತ್ರಿಕ ಮೌಲ್ಯಗಳು, ರೂಢಿ ರಿವಾಜುಗಳು, ಸಂಪ್ರದಾಯಗಳು, ನಡಾವಳಿಗಳು, ಪರಂಪರೆಗಳು ಹಾಗೂ ಅಮೂಲ್ಯ ಪೂರ್ವನಿದರ್ಶನಗಳ ಸಂಗಮ.

ಸಂಸದೀಯ ಚರ್ಚೆ ಎಂಬುದು ಅಪ್ರಸ್ತುತವಾಗಿ ಹೋಗಿದೆ. ಸಂಸತ್ತಿನ ಪಾವಿತ್ರ್ಯವನ್ನು ವಿಧವಿಧವಾಗಿ ಅಪಮೌಲ್ಯಗೊಳಿಸಲಾಗುತ್ತಿದೆ. ರೈತರ ತೀವ್ರ ಹೋರಾಟದ ನಂತರ ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ವಾಪಸು ಪಡೆದರು ಮೋದಿ. ಸಂಬಂಧಪಟ್ಟ ವಿಧೇಯಕವನ್ನು ಮತಕ್ಕೇ ಹಾಕಲಿಲ್ಲ. ಸಂವಿಧಾನದ 370ನೆಯ ಪರಿಚ್ಛೇದದ ವಾಪಸಾತಿಗೂ ಇದೇ ಗತಿ ಒದಗಿತು.

ಸಂಸತ್ತಿನ ಅಧಿವೇಶನದ ಅವಧಿ ಮೋದಿ ಆಡಳಿತದಲ್ಲಿ ವರ್ಷದಿಂದ ವರ್ಷಕ್ಕೆ ತೆಳುವಾಗುತ್ತಲೇ ನಡೆದಿದೆ. 1952ರಿಂದ ಈವರೆಗಿನ 71 ವರ್ಷಗಳ ಸಂಸತ್ತಿನ ಇತಿಹಾಸದಲ್ಲಿ ಅತ್ಯಂತ ಕಡಿಮೆ ದಿನಗಳಂದು ಅಧಿವೇಶನ ನಡೆಸಿದ ಪೂರ್ಣಾವಧಿ ಲೋಕಸಭೆಯಿದು. ಎಷ್ಟು ಕಡಿಮೆ ಅವಧಿಯೋ ಅಷ್ಟು ಕೆಳ ಸರಿದ ಉತ್ತರದಾಯಿತ್ವ.

ಪ್ರತಿಪಕ್ಷಗಳ ಪ್ರತಿಭಟನೆಯ ಕಾರಣ ಸದನದ ಕಾರ್ಯಕಲಾಪಗಳು ಸ್ಥಗಿತವಾಗುವುದು ಮಾಮೂಲು ಸಂಗತಿ. ಆದರೆ ಇತ್ತೀಚಿನ ಅಧಿವೇಶನದಲ್ಲಿ ಅಡಾನಿ ಕಂಪನಿಯ ವಿವಾದವನ್ನು ಎತ್ತದಂತೆ ರಾಹುಲ್ ಗಾಂಧೀ ಅವರನ್ನು ತಡೆಯುವ ಪ್ರಯತ್ನವಾಗಿ ಆಳುವ ಪಕ್ಷವೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿ ಉಂಟು ಮಾಡಿತು. ಇದೇ ನೆವದಲ್ಲಿ ಭಾರೀ ಗಾತ್ರದ ಆಯವ್ಯಯ ಮುಂಗಡಪತ್ರವನ್ನು ಯಾವುದೇ ಚರ್ಚೆಯಿಲ್ಲದೆ ಕೇವಲ 12 ನಿಮಿಷಗಳಲ್ಲಿ ಪಾಸು ಮಾಡಲಾಯಿತು.

ಲೋಕಸಭೆಯು ಒಬ್ಬ ಸಭಾಧ್ಯಕ್ಷ ಮತ್ತು ಒಬ್ಬ ಉಪಸಭಾಧ್ಯಕ್ಷನನ್ನು ಆರಿಸಿಕೊಳ್ಳಬೇಕೆಂದು ಸಂವಿಧಾನವೇ ವಿಧಿಸಿದೆ. ಆದರೆ ಮೋದಿ ಸರ್ಕಾರ ಎರಡನೆಯ ಸಲ ಆರಿಸಿ ಬಂದ ನಂತರ ಉಪಸಭಾಧ್ಯಕ್ಷ ಸ್ಥಾನವನ್ನು ತುಂಬಿಯೇ ಇಲ್ಲ. ಇಂತಹ ಅಪಚಾರ ಹಿಂದೆಂದೂ ಆಗಿಲ್ಲ. ಹಣಕಾಸು ಮತ್ತು ತೆರಿಗೆಗೆ ಸಂಬಂಧಪಡದೆ ಇರುವ ಸಂಗತಿಗಳಿಗೆ ವಿತ್ತೀಯ ವಿಧೇಯಕಗಳ (ಮನಿ ಬಿಲ್) ಹೊದಿಕೆ ಹೊದಿಸುವ ಕುತಂತ್ರದ ಕೀರ್ತಿಯೂ ಇವರದೇ. ‘ಮನಿ ಬಿಲ್’ಗಳಿಗೆ ಲೋಕಸಭೆಯ ಅನುಮೋದನೆ ದೊರೆತರೆ ಸಾಕು, ರಾಜ್ಯಸಭೆಯ ಅನುಮೋದನೆಗೆ ಕಳಿಸಬೇಕಿಲ್ಲ. ಜೊತೆಗೆ ‘ಮನಿ ಬಿಲ್’ಗಳನ್ನು ಇತರೆ ಯಾವುದೇ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕಿಲ್ಲ. ಸಂವಿಧಾನದ 110ನೆಯ ಪರಿಚ್ಛೇದವೇ ಈ ರಿಯಾಯಿತಿಯನ್ನು ನೀಡಿದೆ. ಈ ಸಂಸದೀಯ ಅವಕಾಶವನ್ನು ದುರುಪಯೋಗ ಮಾಡಿಕೊಂಡಿರುವ ಮೊದಲ ಸರ್ಕಾರ ಮೋದಿ ಸರ್ಕಾರ.  

ರಾಜ್ಯಸಭೆಯಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಹೀಗಾಗಿ ರಾಜ್ಯಸಭೆಯ ಅನುಮೋದನೆ ಪ್ರಕ್ರಿಯೆಯನ್ನೇ ತಡೆದು ತಪ್ಪಿಸಿಕೊಳ್ಳುವ ಅಕ್ರಮ ದಾರಿಯನ್ನು ಹುಡುಕಲಾಯಿತು. ಹೊಸ ಹುನ್ನಾರವನ್ನು ಹೊಸೆಯಲಾಯಿತು. ತೆರಿಗೆ ಅಥವಾ ಹಣಕಾಸಿಗೆ ಸಂಬಂಧವೇ ಇಲ್ಲದ ಆಧಾರ್ ಮತ್ತು ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ವಿತ್ತೀಯ ವಿಧೇಯಕಗಳೆಂದು ವರ್ಗೀಕರಿಸಿ ತನಗೆ ಬಹುಮತವಿರುವ ಲೋಕಸಭೆಯ ಒಪ್ಪಿಗೆ ಪಡೆಯಿತು.

ಸಂವಿಧಾನವೂ ಸೇರಿದಂತೆ ಜನತಂತ್ರದ ಸ್ತಂಭಗಳನ್ನು, ಜನತಾಂತ್ರಿಕ ಸಂಸ್ಥೆಗಳಿಗೆ ಒಳಗೊಳಗಿನಿಂದಲೇ ಗೆದ್ದಲು ಹಿಡಿಸಿ ದುರ್ಬಲಗೊಳಿಸಲಾಗುತ್ತಿದೆ. ಈ ವಿದ್ಯಮಾನಗಳ ವಿರುದ್ಧ ಜನಾಂದೋಲನಗಳು ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ  ಈ ಏಕವ್ಯಕ್ತಿ ಸಾರ್ವಭೌಮ ವ್ಯವಸ್ಥೆಯು ಯಾವ ಕೋನದಿಂದ ಜೀವಂತ ಜನತಂತ್ರವೆಂದು ಕಾಣುತ್ತಿದೆ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X