ಮಧ್ಯಪ್ರಾಚ್ಯ ಭಾಗದಲ್ಲಿ ಹಿಡಿತ ಸಾಧಿಸಲು ಅಮೆರಿಕ ಮತ್ತು ಬಲಿಷ್ಠ ಯುರೋಪ್ ರಾಷ್ಟ್ರಗಳು ಸಾಕಿಕೊಂಡಿರುವ ದೇಶವೇ ಇಸ್ರೇಲ್. ಆದರೆ ಅರಬ್ ದೇಶಗಳ ಪೈಕಿ ಇಸ್ರೇಲ್‌ನನ್ನು ಸಮರ್ಥವಾಗಿ ಎದುರು ಹಾಕಿಕೊಂಡಿದ್ದು ಇರಾನ್ ಮಾತ್ರ.
ಯೇಸುವನ್ನು ಕೊಂದ ಅಪವಾದಕ್ಕೆ ಗುರಿಯಾಗಿದ್ದ ಯಹೂದಿಗಳು ಕ್ರಿಶ್ಚಿಯನ್ನರಿಂದ ಚಿತ್ರಹಿಂಸೆ ಅನುಭವಿಸಿದವರು. ಜರ್ಮನಿಯಲ್ಲಿ ಹಿಟ್ಲರ್ ಆಳ್ವಿಕೆಯಲ್ಲಂತೂ ಹೇಳತೀರದ ಸಾವು ನೋವುಗಳು ಸಂಭವಿಸಿದವು. ಲಕ್ಷಾಂತರ ಯಹೂದಿಗಳ ನರಮೇಧ ನಡೆಸಿದ ನಾಝಿ ಹಿಟ್ಲರನ ಕ್ರೌರ್ಯ ಜಗತ್ತನ್ನು ಬೆಚ್ಚಿಬೀಳಿಸಿತ್ತು. ವ್ಯಾಪಾರಿ ಸಮುದಾಯವಾದ ಯಹೂದಿಗಳ ಕುರಿತು ಬೆಳೆದಿದ್ದ ತೀವ್ರ ಅಸೂಯೆಯಿಂದ ಮತ್ತು ಯೇಸುವನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳುವ ಮನಸ್ಥಿತಿಯಿಂದ ಕ್ರಿಶ್ಚಿಯನ್ನರು ನಡೆಸಿದ ಹಿಂಸಾಚಾರಗಳ ಎದುರು ಯಹೂದಿಗಳು ನಲುಗಿ ಹೋದರು. ತಮ್ಮ ವ್ಯಾಪಾರಿ ಮನೋಭಾವಗಳಿಂದಾಗಿ ಬದುಕುಳಿದ ಯಹೂದಿಗಳು ತಮ್ಮದೇ ಆದ ಪ್ರತ್ಯೇಕ ದೇಶದ ಕನಸು ಕಂಡರು. ಆಗ ಹುಟ್ಟಿದ್ದೇ ಝಿಯೋನಿಸಂ ಚಳವಳಿ.
ಯಹೂದಿಗಳ ಮೇಲೆ ನಡೆದ ಕ್ರೌರ್ಯಗಳ ಕಾರಣ ಬ್ರಿಟಿಷರ ಸಹಾನುಭೂತಿ ದೊರಕಿತು. ಅಮೆರಿಕದ ಬೆಂಬಲವೂ ಸಿಕ್ಕಿತು. ಬಲಿಷ್ಠ ರಾಷ್ಟ್ರಗಳ ಸಹಕಾರದಿಂದಾಗಿ ನೆಲೆ ಕಂಡುಕೊಂಡ ಯಹೂದಿಗಳು, ಬಲಿಪಡೆದದ್ದು ಮಾತ್ರ ‘ಪ್ಯಾಲೆಸ್ತೀನ್’ ಜನರನ್ನು.
ನೆಲ ಇಲ್ಲದ ಕಾರಣವೊಡ್ಡಿ ಯಹೂದಿಗಳಿಗಾಗಿ ಅನ್ಯಾಯಯುತವಾಗಿ ಕಟ್ಟಿದ ದೇಶ ಇಸ್ರೇಲ್. ಆದರೆ ಮೂಲನಿವಾಸಿ ಪ್ಯಾಲೆಸ್ತೀನಿಯರನ್ನು ಬಯಲು ಬಂದೀಖಾನೆಗೆ ತಳ್ಳುತ್ತಾ ಹೋದ ಯಹೂದಿಗಳು, ನಿಧಾನಕ್ಕೆ ಇಸ್ರೇಲ್ ಅನ್ನು ವಿಸ್ತರಿಸಿದರು. ಹಿಟ್ಲರನು ಯಹೂದಿಗಳಿಗೆ ಏನು ಮಾಡಿದನೋ ಅದನ್ನೇ ಇಸ್ರೇಲಿಗರು ಪ್ಯಾಲೆಸ್ತೀನಿಯರಿಗೆ ಬಗೆದದ್ದು ಇತಿಹಾಸದ ಅಣಕ.
ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಪ್ರದೇಶವು ಅಟೋಮನ್ ಸಾಮ್ರಾಜ್ಯದ ಹಿಡಿತದಲ್ಲಿತ್ತು. ಬ್ರಿಟಿಷರು ಅಟೋಮನ್ನರನ್ನು ಸೋಲಿಸಿ ಆ ಭಾಗವನ್ನು ವಶಕ್ಕೆ ಪಡೆದರು. “ಮಹಾಯುದ್ಧ ಮುಗಿದ ಮೇಲೆ ನಿಮಗೆ ಸ್ವಾತಂತ್ರ್ಯ ಕೊಡುತ್ತೇವೆ” ಎಂದು ಪ್ಯಾಲೆಸ್ತೀನಿಯರನ್ನು ನಂಬಿಸಿದರೆ, “ನಿಮಗೊಂದು ಹೊಸ ರಾಷ್ಟ್ರ ಮಾಡಿಕೊಳ್ಳಲು ಅವಕಾಶ ನೀಡುತ್ತೇವೆ” ಎಂದು ಯಹೂದಿಗಳಿಗೆ ಭರವಸೆ ನೀಡಿದರು. ಇಬ್ಬರ ನಡುವೆಯೂ ಬ್ರಿಟಿಷರು ಆಟವಾಡಿದರು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ವಿಮಾನಯಾನದ ವಿಶ್ವಾಸ ಕುಂದುತ್ತಿದೆ – ಗಂಭೀರ ಚಿಂತನೆ, ಕ್ರಮಗಳ ಅಗತ್ಯವಿದೆ!
ನಿಧಾನಕ್ಕೆ ಯಹೂದಿಗಳು ಪ್ಯಾಲೆಸ್ತೀನಿಗೆ ಬರಲು ಶುರು ಮಾಡಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೂರರಿಂದ ನಾಲ್ಕು ಲಕ್ಷ ಜನ ಬಂದು ಪ್ಯಾಲೆಸ್ತೀನ್‌ನಲ್ಲಿ ನೆಲೆಸಿದರು. ಎರಡನೇ ಮಹಾಯುದ್ಧದ ವೇಳೆ ಘೋರ ಹಿಂಸಾಚಾರವನ್ನು ಕಂಡ ಯಹೂದಿಗಳ ಬಗ್ಗೆ ಯುರೋಪಿಯನ್ನರಿಗೆ ಪಾಪಪ್ರಜ್ಞೆ ಇತ್ತು. ಹೀಗಾಗಿ ಶೇ. 55ರಷ್ಟು ಭೂಭೂಗವನ್ನು ಪ್ಯಾಲೆಸ್ತೀನಿನಲ್ಲಿ ಯಹೂದಿಗಳಿಗೆ ವಿಶ್ವಸಂಸ್ಥೆ ಕೊಟ್ಟಿತು. 35 ಪರ್ಸೆಂಟ್ ಇದ್ದ ಯಹೂದಿಗಳಿಗೆ 55 % ಭೂಭಾಗ, ಶೇ. 65ರಷ್ಟಿದ್ದ ಪ್ಯಾಲೆಸ್ತೀನಿಯರಿಗೆ ಶೇ. 45 ಭೂಭಾಗವನ್ನು ಹಂಚಿದ್ದೇ ಅನ್ಯಾಯದ ಪರಮಾವಧಿಯಾಗಿತ್ತು. ನಮಗೆ 80% ಭೂಭಾಗ ಕೊಡಬೇಕು, ಅಲ್ಲಿರುವವರು ಕೇವಲ ಯಹೂದಿಗಳೇ ಆಗಿರಬೇಕು ಎಂದು ಇಸ್ರೇಲ್ ವಾದಿಸಲು ಶುರು ಮಾಡಿತು. ನಿಧಾನಕ್ಕೆ ಪ್ಯಾಲೆಸ್ತೀನ್ ಭೂಮಿಯನ್ನು ಕಬ್ಜಾ ಮಾಡುತ್ತಾ, ಮೂಲ ನಿವಾಸಿಗಳನ್ನು ಕೊಲ್ಲುತ್ತಾ ಹೋಯಿತು.
ಅಕ್ಕಪಕ್ಕದ ಜೋರ್ಡಾನ್, ಈಜಿಪ್ಟ್, ಇರಾಕ್ ದೇಶಗಳು ಇಸ್ರೇಲಿನ ಕ್ರೌರ್ಯಕ್ಕೆ ಮೌನ ಸಮ್ಮತಿ ಕೊಡುತ್ತಾ ಹೋದವು. ಪ್ಯಾಲೆಸ್ತೀನಿಯರು ಅನಿವಾರ್ಯವಾಗಿ ವೆಸ್ಟ್ ಬ್ಯಾಂಕ್ ಮತ್ತು ಗಾಝಾಕ್ಕೆ ದೂಡಲ್ಪಟ್ಟರು. ನಿಧಾನಕ್ಕೆ ಪ್ಯಾಲೆಸ್ತೀನ್‌ನ ಅಸ್ತಿತ್ವವೇ ಇಸ್ರೇಲ್‌ಗೆ ಮಾರಕ ಎಂದು ಯಹೂದಿಗಳು ಯೋಚಿಸಿದರು. ಮಧ್ಯಪ್ರಾಚ್ಯ ಭಾಗದಲ್ಲಿ ಹಿಡಿತ ಸಾಧಿಸಲು ಅಮೆರಿಕ ಮತ್ತು ಬಲಿಷ್ಠ ಯುರೋಪ್ ರಾಷ್ಟ್ರಗಳು ಸಾಕಿಕೊಂಡಿರುವ ದೇಶವೇ ಇಸ್ರೇಲ್. ಆದರೆ ಅರಬ್ ದೇಶಗಳ ಪೈಕಿ ಇಸ್ರೇಲನ್ನು ಸಮರ್ಥವಾಗಿ ಎದುರು ಹಾಕಿಕೊಂಡಿದ್ದು ಇರಾನ್ ಮಾತ್ರ.
1979ರವರೆಗೆ ಇರಾನ್‌ನಲ್ಲಿ ಅಮೆರಿಕದ ಮಾತು ಕೇಳುವ ಅಧಿಕಾರಶಾಹಿಗಳಿದ್ದರು. ಆದರೆ 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯಾಯಿತು. ಅಮೆರಿಕ ವಿರೋಧಿ ಕ್ರಾಂತಿಯೂ ಅದಾಗಿತ್ತು. 1979ರ ನಂತರ ಇಸ್ರೇಲ್ ಜೊತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಇರಾನ್ ಕಳೆದುಕೊಂಡಿತು. “ಇಸ್ರೇಲ್ ಸಣ್ಣ ಸೈತಾನ ಮತ್ತು ಅಮೆರಿಕ ದೊಡ್ಡ ಸೈತಾನ” ಎಂದು ಇರಾನ್ ಹೇಳತೊಡಗಿತು. “ಇಸ್ರೇಲ್‌ನ ಅಸ್ತಿತ್ವವೇ ತಪ್ಪು, ಅಲ್ಲಿನ ಪ್ಯಾಲೆಸ್ತೀನಿಯರಿಗೆ ಅನ್ಯಾಯವಾಗಿದೆ” ಎಂದು ಘೋಷಣೆ ಮಾಡಿತು. ಇರಾನ್ ತನ್ನ ಅಸ್ತಿತ್ವಕ್ಕಾಗಿ ನೆರೆಯ ದೇಶಗಳ ಬಂಡುಕೋರರಿಗೆ ಸಹಾಯ ಮಾಡುತ್ತಾ ಹೋಯಿತು. ಹಮಾಸ್, ಹೌತಿ, ಹಿಜ್ಬುಲ್ಲಾ- ಇವರೆಲ್ಲರಿಗೂ ಇರಾನ್‌ನ ಸಹಕಾರ ದೊರಕಿತು.
“ಇಸ್ರೇಲ್ ಉಳಿಯಬೇಕಾದರೆ ಇರಾನ್ ಕಥೆ ಮುಗಿಸಬೇಕು, ಅದೊಂದು ಆಕ್ಟೋಪಸ್ ರೀತಿ. ಅದಕ್ಕೆ ಹಮಾಸ್, ಹೌತಿಯಂತಹ ಎಂಟು-ಒಂಬತ್ತು ಅಂಗಗಳಿವೆ. ಒಂದೊಂದೇ ಭಾಗವನ್ನು ಕಡಿದು ಕೊನೆಗೆ ತಲೆಯಂತಿರುವ ಇರಾನ್ ದೇಶವನ್ನು ಮುಗಿಸಬೇಕು” ಎಂಬುದು ಇಸ್ರೇಲ್ ಥಿಯರಿ. ಜನಾಂಗೀಯ ದ್ವೇಷದ ಮತ್ತು ಪಶ್ಚಿಮ ರಾಷ್ಟ್ರಗಳ ತಾಳಕ್ಕೆ ತಕ್ಕಂತೆ ಕುಣಿಯುವ ಇಸ್ರೇಲ್‌ನ ದಮನಕಾರಿ ನೀತಿಯೂ ಇದಾಗಿದೆ. ಇಸ್ರೇಲ್‌ನ ಅಧಿಕಾರ ಹಿಡಿದಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕಾಲದಲ್ಲಿ ಈ ಕ್ರೌರ್ಯವು ಮನುಷ್ಯತ್ವ ಎಲ್ಲ ಎಲ್ಲೆಗಳನ್ನು ಮೀರಿದೆ. ಅತ್ತ ಪ್ಯಾಲೆಸ್ತೀನಿಯರನ್ನು ಸಂಪೂರ್ಣ ಮುಗಿಸಿ ಹಾಕುತ್ತಾ, ಇತ್ತ ತನ್ನ ಸಾಂಪ್ರದಾಯಿಕ ವಿರೋಧಿ ಇರಾನ್ ಜೊತೆಯೂ ಕಾಲು ಕೆರೆದು ನಿಂತಿದೆ ಇಸ್ರೇಲ್.
ಹೊಸ ಹಿಟ್ಲರ್ ಹುಟ್ಟಿಕೊಂಡಿದ್ದಾನೆ ಎಂಬ ಚರ್ಚೆ ನೇತನ್ಯಾಹು ಸುತ್ತ ಶುರುವಾಗಿದೆ. ಪ್ಯಾಲೆಸ್ತೀನ್ ಸಂತತಿಯೇ ಉಳಿಯಬಾರದೆಂದು ಮಕ್ಕಳು ಮತ್ತು ಮಹಿಳೆಯರ ಮೇಲೆ ಗಂಡು ಹಾರಿಸುವ ವಿಕೃತ ಕೆಲಸಕ್ಕೂ ನೇತನ್ಯಾಹು ಇಳಿದಿದ್ದಾರೆ. ಆಸ್ಪತ್ರೆಗಳ ಮೇಲೆ ಬಾಂಬ್ ಹಾಕಲಾಗಿದೆ. ರೊಟ್ಟಿ ಕೊಡುತ್ತೇವೆಂದು ಕರೆದು, ನತಾದೃಷ್ಟ ಪ್ಯಾಲೆಸ್ತೀನಿಯರನ್ನು ಬಲಿಹಾಕಿದ ಕುರಿತು ವರದಿಗಳಿವೆ. ಹಸಿವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಕ್ರೌರ್ಯಕ್ಕೆ ಇಸ್ರೇಲ್ ಇಳಿದಿದೆ. 11 ಜೂನ್ 2025ರ ಹೊತ್ತಿಗೆ, ಗಾಝಾ- ಇಸ್ರೇಲ್ ಯುದ್ಧದಲ್ಲಿ 55,720 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎನ್ನುತ್ತದೆ ಗಾಝಾ ಆರೋಗ್ಯ ಸಚಿವಾಲಯದ ವರದಿ. ಇದರ ಜೊತೆಗೆ 200ಕ್ಕೂ ಹೆಚ್ಚು ಪತ್ರಕರ್ತರು, 120 ಶಿಕ್ಷಣ ತಜ್ಞರು, 224ಕ್ಕೂ ಹೆಚ್ಚು ಮಾನವ ಹಕ್ಕುಗಳ ಕಾರ್ಯಕರ್ತರನ್ನೂ ನೇತನ್ಯಾಹು ಆಡಳಿತ ಕೊಂದಿದೆ. ಮಕ್ಕಳ ಹಣೆ ಮತ್ತು ಎದೆಗೆ ಗುರಿ ಇಟ್ಟು ಗುಂಡು ಹಾರಿಸಿರುವ ಸಂಬಂಧ ವರದಿಗಳನ್ನು ಓದಿದರೆ ಮನುಷ್ಯರೆಲ್ಲರ ಹೃದಯ ಹೆಪ್ಪುಗಟ್ಟುತ್ತದೆ.
“ಇರಾನ್ ದೇಶವು ನ್ಯೂಕ್ಲಿಯರ್ ಬಾಂಬ್ ಹೊಂದಿದೆ” ಎಂದು ತೊಂಬತ್ತರ ದಶಕದಿಂದಲೂ ಹೇಳುತ್ತಾ ಬಂದಾತ ನೇತನ್ಯಾಹು. ಇದರ ಜೊತೆಗೆ ವ್ಯಾಪಕ ಭ್ರಷ್ಟಾಚಾರದ ಕೊಳೆ, ಹಿಂಸಾಚಾರದ ಕುಖ್ಯಾತಿ ಆತನ ಕೈಗಂಟಿದೆ. ಇಸ್ರೇಲ್ ಸರ್ವೋಚ್ಚ ನ್ಯಾಯಾಲಯವು ತೀರ್ಪು ಕೊಟ್ಟರೆ ನೇತನ್ಯಾಹು ಜೈಲಿಗೆ ಹೋಗುವ ಸಾಧ್ಯತೆಯೂ ಇದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯುದ್ಧ ಮತ್ತು ಭೀತಿ ಸೃಷ್ಟಿಯಲ್ಲಿ ನೇತನ್ಯಾಹು ಸಕ್ರಿಯವಾಗಿರುವ ಆರೋಪಗಳು ಬಂದಿವೆ. ಹೀಗಾಗಿ ಸದಾ ಸಂಘರ್ಷವೇ ನೇತನ್ಯಾಹುವಿಗೆ ಅಪ್ಯಾಯಮಾನವಾಗಿರುವಂತೆ ಕಾಣುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?
ಗ್ಯಾಸ್ ಚೇಂಬರ್‌ಗೆ ಹಾಕಿ ಲಕ್ಷಾಂತರ ಯಹೂದಿಗಳನ್ನು ಕೊಂದ ಹಿಟ್ಲರನ ಕ್ರೌರ್ಯದ ಮಟ್ಟ, ಆತನ ಸಾವಿನ ನಂತರ ಜಗತ್ತಿನೆದುರು ತೆರೆದುಕೊಂಡಿತ್ತು. ಆದರೆ ಇಡೀ ಜಗತ್ತು ನೋಡುತ್ತಿರುವಾಗಲೇ ಜನರನ್ನು ಕೊಲ್ಲುತ್ತಿರುವಾತ ನೇತನ್ಯಾಹು. ಜನಾಂಗೀಯ ಕ್ರೂರತೆಗೆ ಮತ್ತೊಂದು ಹೆಸರೇ ನೇತನ್ಯಾಹು ಎನ್ನದೆ ವಿಧಿ ಇಲ್ಲ. ಈಗ ಇರಾನ್ ಜೊತೆ ಕಾಲುಕೆರೆದುಕೊಂಡು ಹಿಂಸಾಚಾರಕ್ಕೆ ಇಳಿದಿರುವ ನೇತನ್ಯಾಹು ನಡೆಯನ್ನು ಖಂಡಿಸಲೇಬೇಕು. ಇರಾನ್ ಪ್ರತಿದಾಳಿ ನಡೆಸಿ, ಎಚ್ಚರಿಕೆಯನ್ನೂ ಕೊಟ್ಟಿದೆ. ನೇತನ್ಯಾಹು ಇದೇ ಪ್ರವೃತ್ತಿ ಮುಂದುವರಿಸಿದರೆ ಚೀನಾ, ರಷ್ಯಾದಂತಹ ಬಲಿಷ್ಠ ದೇಶಗಳು ತಮ್ಮ ಹಿತಾಸಕ್ತಿಗಾಗಿ ಇರಾನ್‌ನೊಂದಿಗೆ ನಿಲ್ಲುವ ಸಾಧ್ಯತೆಯೇ ಹೆಚ್ಚು. ತನ್ನ ಅಧಿಕಾರದಾಹದಿಂದ ಹಿಟ್ಲರ್ ಮಾಡಿ ಹೋಗಿರುವ ಗಾಯಗಳು ಕಣ್ಣಮುಂದೆ ಇರುವಾಗ, ವಿಶ್ವದ ನಾಗರಿಕ ಸಮಾಜ ಎಚ್ಚೆತ್ತು ನೇತನ್ಯಾಹು ಎಂಬ ಎರಡನೇ ಹಿಟ್ಲರ್ ಉದಯಿಸುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ.

ಯುದ್ಧ ದ ನಂತರ, ಒಟ್ಟೋಮನ್ ಸಾಮ್ರಾಜ್ಯ ದ ಒಂದು ಭಾಗ dalli ಪ್ಯಾಲೆಸ್ಟೈನ್ ಜನ ಇರುವ ಕಡೆ ಅಂದರೆ ಯಹೂದಿ ಗಳ ಮೂಲ ಸ್ಥಳದಲ್ಲಿ, ಇಸ್ರೇಲ್ ಸ್ಥಾಪನೆ ಆಯ್ತು. ಆಗ ಪ್ಯಾಲೆಸ್ಟೈನ್ ಜನರಿಗೂ ಒಂದು ದೇಶ ಕಟ್ಟಿಕೊಳ್ಳಲು ಜಾಗ ನಿಗದಿ ಪಡಿಸಿ ಆ ದೇಶದ ಗಡಿ ರೇಖೆ ನಿಗದಿ ಮಾಡಿ ದ್ದರೆ ಈ ಗೊಂದಲ ಇರುತ್ತಿರಲಿಲ್ಲ.
ಈಗ ಅರಬೀ ಇಸ್ಲಾಮಿ, ಪರ್ಷಿಯನ್ ಶಿಯಾ ಮುಸ್ಲಿಮರು, ಒಂದಾಗಿ ಜೋರ್ಡಾನ್, ಸಿರಿಯಾ, ಗಾಜಾ ಸ್ಟ್ರಿಪ್ ಸೇರಿಸಿ ಪ್ಯಾಲೆಸ್ಟೈನ್ ಜನರಿಗೂ ಒಂದು ದೇಶ ಕಟ್ಟಿಕೊಳ್ಳಲು ಜಾಗ ಬಿಟ್ಟು ಕೊಡಿ.