ಈ ದಿನ ಸಂಪಾದಕೀಯ | ಹೆಣ್ಣಿನ ಮೇಲೆ ಅಮಾನುಷ ಲೈಂಗಿಕ ಕ್ರೌರ್ಯಕ್ಕೆ ವಿವಾಹವು ಪರವಾನಗಿಯೇ?

Date:

Advertisements

ನ್ಯಾಯಮೂರ್ತಿಗಳ ತೀರ್ಪು ಕುಟುಂಬ ವ್ಯವಸ್ಥೆಯಲ್ಲಿ ಪರಂಪರಾಗತವಾಗಿ ಬಂದಿರುವ ಪುರುಷಹಂಕಾರ ಮತ್ತು ಗಂಡಿನ ದಬ್ಬಾಳಿಕೆ, ಹೆಣ್ಣನ್ನು ಭೋಗದ ವಸ್ತುವಾಗಿ, ಅಡಿಯಾಳಾಗಿ, ತನ್ನ ಆಕಾಂಕ್ಷೆಗಳನ್ನು ಈಡೇರಿಸಬೇಕಾದ ದಾಸಿಯಾಗಿ ಕಾಣುವ ಮನೋವಿಕಾರಕ್ಕೆ ಅಧಿಕೃತ ಮುದ್ರೆ ಒತ್ತಿ ಹೇಳಿದಂತಿದೆ. ಮುಂದೆಯೂ ಹೀಗೆ ನಡೆದುಕೊಂಡು ಹೋಗಲು ಅನುವು ಮಾಡಿ ಕೊಟ್ಟ ತೀರ್ಪು ಎಂದು ಹೇಳಲೇಬೇಕಿದೆ.

ಪತ್ನಿಯ ಒಪ್ಪಿಗೆಯಿಲ್ಲದೆ ಗಂಡ ನಡೆಸುವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ನಂತರ ಪತ್ನಿ ಸಾವನ್ನಪ್ಪಿದ ಆರೋಪದ ಮೇಲೆ, ಪತಿಯನ್ನು ಜಗದಲ್ಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಫೆಬ್ರವರಿ 11, 2019 ರಂದು ದೋಷಿ ಎಂದು ತೀರ್ಪು ನೀಡಿದ್ದರು. ಆದರೆ, ಅದೇ ಅಪರಾಧಿಯನ್ನು ಛತ್ತೀಸ್‌ಗಢ ಹೈಕೋರ್ಟ್ ಖುಲಾಸೆಗೊಳಿಸಿದೆ. ಒಬ್ಬ ನ್ಯಾಯಾಧೀಶರಿಗೆ ಅಪರಾಧ ಎಂದು ಅನ್ನಿಸಿದ್ದು ಮತ್ತೊಬ್ಬರಿಗೆ ಅಪರಾಧವೇ ಅಲ್ಲ ಎನಿಸಿದೆ.

ಈ ಕುರಿತು ಕಾಯಿದೆ ಕಾನೂನುಗಳಿಗೆ ತಿದ್ದುಪಡಿಯ ಅಗತ್ಯವಿದೆಯಾದರೆ, ಅಂತಹ ತಿದ್ದುಪಡಿಗಳನ್ನು ಕೂಡಲೇ ತರಬೇಕು. ಕೋಮುವಾದವನ್ನು ತುತ್ತತುದಿಗೆ ಕೊಂಡೊಯ್ದು, ದ್ವೇಷದ ಬೆಳೆ ಬಿತ್ತಿ ಚುನಾವಣೆಗಳಲ್ಲಿ ವೋಟುಗಳ ಫಸಲನ್ನು ಕಟಾವು ಮಾಡುತ್ತಿದೆ ಬಿಜೆಪಿ. ಆದರೆ ವೈವಾಹಿಕ ಚೌಕಟ್ಟಿನಲ್ಲೇ ಮುಚ್ಚಿದ ಕದಗಳ ಹಿಂದೆ ಮಹಿಳೆಯ ಮೇಲೆ ನಡೆಯುವ ದೈಹಿಕ ಕ್ರೌರ್ಯದ ವಿರುದ್ಧ ಕಾಯಿದೆಗಳಿಗೆ ತಿದ್ದುಪಡಿ ತರಲು ಏನು ಧಾಡಿ?

ಬದಲಾಗಿ ವೈವಾಹಿಕ ಅತ್ಯಾಚಾರ ಶಿಕ್ಷಾರ್ಹ ಅಲ್ಲ ಎಂದು ಮೋದಿ ಸರ್ಕಾರ ಸುಪ್ರೀಮ್ ಕೋರ್ಟಿನ ಮುಂದೆ ತನ್ನ ನಿಲುವನ್ನು ತಿಳಿಸುವ ಪ್ರಮಾಣಪತ್ರ ಸಲ್ಲಿಸಿದೆ. ಎಂತಹ ನಾಚಿಕೆಗೇಡು? ನಾರಿಯರನ್ನು ಎಲ್ಲಿ ಪೂಜಿಸಲಾಗುತ್ತದೆಯೇ ಅಲ್ಲಿ ದೇವತೆಗಳೂ ಸಂತೃಪ್ತರು ಎಂಬುದು ಸಂಘ ಪರಿವಾರದ ತುಟಿಯಂಚಿನ ಮಾತು ಅಷ್ಟೇ ಎಂಬ ಡಂಭಾಚಾರ ಬಟ್ಟ ಬಯಲಾಗಿದೆ.

Advertisements

ಡಿಸೆಂಬರ್ 11, 2017 ರಂದು, ಮಹಿಳೆ ನೋವಿನಿಂದ ಬಳಲುತ್ತಿದ್ದಳು ಮತ್ತು ತನ್ನ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ತನ್ನ ಕುಟುಂಬದವರಿಗೆ ತಿಳಿಸಿದ್ದಳು. ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ ತನ್ನ ಮರಣಪೂರ್ವ ಹೇಳಿಕೆಯಲ್ಲಿ, ತನ್ನ ಪತಿಯ ಬಲವಂತದ ಲೈಂಗಿಕ ಹಲ್ಲೆಯಿಂದ ತಾನು ಅಸ್ವಸ್ಥಳಾಗಿರುವುದಾಗಿ ಹೇಳಿದ್ದಳು.

“ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆಯಿಲ್ಲದಿದ್ದರೆ, ಪತಿ ತನ್ನ ಹೆಂಡತಿಯೊಂದಿಗೆ ನಡೆಸುವ ಯಾವುದೇ ರೀತಿಯ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ..” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಹೇಳಿದ್ದಾರೆ.

ಮಹಿಳೆ ತನ್ನ ಮೊದಲ ಹೆರಿಗೆಯ ನಂತರ ಮೂಲವ್ಯಾಧಿಯಿಂದ ಬಳಲುತ್ತಿದ್ದರು, ಇದರಿಂದಾಗಿ ಆಕೆಗೆ ಹೊಟ್ಟೆ ನೋವು ಮತ್ತು ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿದ ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ಪರಿಗಣಿಸಿಲ್ಲ.

ಇದೇ ಛತ್ತೀಸ್‌ಗಡ ಹೈಕೋರ್ಟ್‌ 2021ರಲ್ಲಿ ಇಂತಹದ್ದೇ ಒಂದು ಪ್ರಕರಣದ ತೀರ್ಪು ನೀಡುವಾಗ “ವಿವಾಹದ ನಂತರದ ಸಮ್ಮತಿರಹಿತ ಲೈಂಗಿಕ ಕ್ರಿಯೆ ಅಪರಾಧವಲ್ಲ” ಎಂದು ಹೇಳಿತ್ತು. ಪತಿ ತನ್ನ ಗುಪ್ತಾಂಗಕ್ಕೆ ಕೈಬೆರಳು ಮತ್ತು ಮೂಲಂಗಿಯಂತಹ ವಸ್ತುಗಳನ್ನು ತೂರಿಸಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದರು. ಪತ್ನಿಯೂ 18ವರ್ಷ ಮೇಲಿನವರಾಗಿದ್ದರೆ, ಕಾನೂನಾತ್ಮಕವಾಗಿ ಮದುವೆಯಾಗಿದ್ದರೆ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ ಎಂದು ನ್ಯಾ. ಎನ್‌ ಕೆ ಚಂದ್ರವಂಶಿ ತೀರ್ಪಿನಲ್ಲಿ ಉಲ್ಲೇಖಿಸಿದ್ದರು. ಈ ಎರಡೂ ಪ್ರಕರಣಗಳ ಗಂಭೀರತೆ ಮತ್ತು ತೀರ್ಪು ಗಮನಿಸಿದರೆ ಇಬ್ಬರು ಪುರುಷ ನ್ಯಾಯಾಧೀಶರ ಮುಂದೆ ಕಳೆದು ಹೋದದ್ದು ಸಮಸ್ತ ಹೆಣ್ಣು ಕುಲದ ಘನತೆ ಎಂದು ವಿಷಾದದಿಂದ ಹೇಳಬೇಕಿದೆ.

ಈ ಇಬ್ಬರು ನ್ಯಾಯಮೂರ್ತಿಗಳ ತೀರ್ಪು ಕುಟುಂಬ ವ್ಯವಸ್ಥೆಯಲ್ಲಿ ಪರಂಪರಾಗತವಾಗಿ ಬಂದಿರುವ ಪುರುಷಹಂಕಾರ ಮತ್ತು ಗಂಡಿನ ದಬ್ಬಾಳಿಕೆ, ಹೆಣ್ಣನ್ನು ಭೋಗದ ವಸ್ತುವಾಗಿ, ಅಡಿಯಾಳಾಗಿ, ತನ್ನ ಆಕಾಂಕ್ಷೆಗಳನ್ನು ಈಡೇರಿಸಬೇಕಾದ ದಾಸಿಯಾಗಿ ಕಾಣುವ ಮನೋವಿಕಾರಕ್ಕೆ ಅಧಿಕೃತ ಮುದ್ರೆ ಒತ್ತಿ ಹೇಳಿದಂತಿದೆ. ಮುಂದೆಯೂ ಹೀಗೆ ನಡೆದುಕೊಂಡು ಹೋಗಲು ಅನುವು ಮಾಡಿ ಕೊಟ್ಟ ತೀರ್ಪು ಎಂದು ಹೇಳಲೇಬೇಕಿದೆ. ಇಲ್ಲೊಬ್ಬ ಮಹಿಳೆ ನ್ಯಾಯಾಧೀಶೆಯಾಗಿ ತೀರ್ಪು ನೀಡುವ ಸಂದರ್ಭ ಬಂದಿದ್ದರೆ ಇಷ್ಟು ಸಂವೇದನಾಹೀನ ತೀರ್ಪುಗಳು ಬರುತ್ತಿರಲಿಲ್ಲ. ಹೆಣ್ಣನ್ನು ಒಂದು ರಕ್ತ ಮಾಂಸದ ದೇಹ ಮಾತ್ರವಲ್ಲ ಹೃದಯ, ಮನಸ್ಸು ಇರುವ ಜೀವ ಎಂದು ಪರಿಗಣಿಸುವಲ್ಲಿ ನಮ್ಮ ನ್ಯಾಯ ವ್ಯವಸ್ಥೆಯೇ ಸೋಲುತ್ತಿದೆ.

ಹದಿನೆಂಟು ವರ್ಷ ವಯಸ್ಸು ತುಂಬಿದ್ದರೆ ಮತ್ತು ಕಾನೂನು ಪ್ರಕಾರ ವಿವಾಹವಾಗಿದ್ದರೆ ವಿಕೃತ ಲೈಂಗಿಕ ಕ್ರಿಯೆಯ ಹಿಂಸೆಯನ್ನು ಆಕೆ ಅನುಭವಿಸಲು ಅರ್ಹಳು, ಸಹಿಸಿಕೊಳ್ಳಬೇಕು ಎಂಬುದು ನ್ಯಾಯಪೀಠದ ಗ್ರಹಿಕೆಯೇ? ಮೂಲವ್ಯಾಧಿಯಂತಹ ಯಾತನಾಮಯ ಕಾಯಿಲೆ ಇದ್ದರೂ, ತನ್ನ ಜೊತೆಗೆ ವರ್ಷಾನುಗಟ್ಟಲೆ ಬದುಕಬೇಕಿರುವ, ಕುಟುಂಬದ ಜವಾಬ್ದಾರಿ ಹೊತ್ತ ಪತ್ನಿಗೆ ನೋವು ಕೊಟ್ಟಾದರೂ ತನ್ನ ಲೈಂಗಿಕ ವಿಕಾರ ತಣಿಯಬೇಕು ಎಂದು ಬಯಸುವವನು ಮನುಷ್ಯ ಎನಿಸಿಕೊಳ್ಳಲು ಯೋಗ್ಯನೇ? ಇಬ್ಬರೂ ಸುಖದುಃಖವನ್ನು ಹಂಚಿಕೊಂಡು, ಸಂಸಾರದಲ್ಲಿ ಎದುರಾಗುವ ಕಷ್ಟಕಾರ್ಪಣ್ಯದಲ್ಲಿ ಒಬ್ಬರಿಗೊಬ್ಬರು ಹೆಗಲಾಗಿ ಬದುಕು ಸವೆಸಬೇಕು, ಒಬ್ಬನ್ನೊಬ್ಬರು ಗೌರವಿಸಬೇಕು ಎಂದು ನಮ್ಮ ವಿವಾಹ ಸಂಹಿತೆಗಳು, ಶ್ಲೋಕಗಳು ಹೇಳುತ್ತವೆ ಅಲ್ಲವೇ? ಪತ್ನಿಯ ಗುಪ್ತಾಂಗಕ್ಕೆ ಅಸಹಜವಾಗಿ ವಸ್ತುಗಳನ್ನು ತೂರಿಸಿ ಆಕೆಗೆ ನೋವು ಕೊಟ್ಟು ಆತ ಪಡೆಯುವ ಲೈಂಗಿಕ ಸುಖವಾದರೂ ಎಂಥದ್ಧು? ಇದು ವಿಕೃತ ಮನಸ್ಥಿತಿಯ ಕೃತ್ಯಗಳನ್ನು ಕಾನೂನಿನಡಿ ʼಅತ್ಯಾಚಾರʼ ಎಂದು ಪರಿಗಣಿಸಲು ಆಗದಿದ್ದರೂ ಹಿಂಸೆಗಾಗಿ ಶಿಕ್ಷೆ ನೀಡದಿದ್ದರೆ, ನ್ಯಾಯದೇವತೆಯ ಕಟಕಟೆಯಲ್ಲಿಯೇ ಹೆಣ್ಣಿನ ಘನತೆಯನ್ನು, ಆತ್ಮಗೌರವವನ್ನು ಕಳೆದಂತೆಯೇ ಸರಿ. ಅಷ್ಟೇ ಅಲ್ಲ ಪತ್ನಿಯನ್ನು ತನ್ನ ಅಡಿಯಾಳಾಗಿ ಕಾಣುವ ಹಿಂಸಾ ಪ್ರವೃತ್ತಿಯ ಗಂಡಸರಿಗೆ ಕಾನೂನಿನ ಭಯವೇ ಇಲ್ಲವಾಗಿದೆ.

ತಂತ್ರಜ್ಞಾನವು ರಭಸದಿಂದ ಬದಲಾಗುತ್ತಿರುವ ಯುಗದಲ್ಲಿ ಬದುಕಿದ್ದೇವೆ. ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದೇವೆ. ರಾಷ್ಟ್ರಕಟ್ಟುವ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಿದ್ದೇವೆ. ನಮ್ಮ ಕೌಟುಂಬಿಕ ವ್ಯವಸ್ಥೆಗಳು ಬದಲಾವಣೆ ಕಂಡಿವೆ. ವಿವಾಹದ ಪರಿಕಲ್ಪನೆಗಳು ಮರುರೂಪಿತಗೊಂಡಿವೆ. ಇಂದು ಯುವಸಮೂಹ ವಿವಾಹ ಬಂಧನದಿಂದ ಮುಕ್ತವಾಗಲು ಬಯಸುತ್ತಿದೆ. ನೆಚ್ಚಿನ ಸಂಗಾತಿಯ ಜೊತೆಗೆ ಸಹಜೀವನದ ಮೊರೆ ಹೋಗತೊಡಗಿದೆ. ಲಿವ್‌ಇನ್‌ ರಿಲೇಷನ್‌ಶಿಪ್‌ ಎಂಬುದು ಈಗ ಟ್ರೆಂಡ್‌ ಆಗತೊಡಗಿದೆ. ಆದರೆ, ಮದುವೆ ಬಂಧನ ಬೇಡ ಎಂದು ಸಹಜೀವನದ ಮೊರೆ ಹೋದ ಜೋಡಿಗಳಲ್ಲೂ ಇದೇ ಅಹಮ್ಮಿಕೆಯ ಕೈ ಮೇಲಾಗಿದೆ. ಸಹಜೀವನದ ಸಂಗಾತಿಯನ್ನು ಕೊಲೆ ಮಾಡಿ ಹತ್ತಾರು ತುಂಡಾಗಿ ಕೊಚ್ಚಿ ಎಸೆಯುವ ಅಮಾನುಷ ಪ್ರವೃತ್ತಿ ಹೆಚ್ಚಿದೆ.

ಸಮಾಜ ಮುಂದುವರಿದಂತೆ ಹೆಣ್ಣಿನ ಮೇಲಾಗುವ ಕ್ರೌರ್ಯ, ಲೈಂಗಿಕ ದೌರ್ಜನ್ಯದ ಸ್ವರೂಪವೂ ಬದಲಾಗಿದೆ. ಘನತೆಯ ಬದುಕು ಮಾತ್ರ ಮರೀಚಿಕೆಯೇ ಆಗಿದೆ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ಬದುಕಿನ ಬಹುಬಗೆಯ ಸವಾಲುಗಳಿಗೆ ಹೆಣ್ಣುಮಕ್ಕಳು ಹೊಂದಿಕೊಳ್ಳುವ ತುರ್ತಿನಲ್ಲಿರುವಾಗ ಕುಟುಂಬದೊಳಗಿನ ದೌರ್ಜನ್ಯಗಳು ಮತ್ತೆ ಅವರನ್ನು ಬಂಧನಗಳಲ್ಲಿ ಬಿಗಿಯುತ್ತಿವೆ. ಕೋರ್ಟಿನ ತೀರ್ಪುಗಳು ಅವರನ್ನು ಮತ್ತಷ್ಟು ಅಧೀರರನ್ನಾಗಿ ಮಾಡಬಾರದು. ಸಹಜೀವಿಗಳಿಗೆ ಘನತೆಯ ಬದುಕು ಕೊಟ್ಟು ಪುರುಷ ಸಮಾಜ ಕಳೆದುಕೊಳ್ಳುವುದು ಏನೂ ಇಲ್ಲ. ನ್ಯಾಯಪೀಠಗಳು ಹೆಣ್ಣೋಟವನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳುವ ಅಗತ್ಯವಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X