ಈ ದಿನ ಸಂಪಾದಕೀಯ | ರಾಜಕೀಯ ರಾಡಿಯಲ್ಲಿ ಕಳೆದು ಹೋದದ್ದು ಹೆಣ್ಣಿನ ಘನತೆ ಅಷ್ಟೇ ಅಲ್ಲ, ʼಸಾಮಾಜಿಕ ಶೀಲʼ ಬೀದಿಗೆ ಬಿದ್ದಿದೆ

Date:

Advertisements
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರ ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಒಂದು ಅಣುವಿನಷ್ಟು ಸಹಕರಿಸಿದರೂ ಅದು ಇಡೀ ಹೆಣ್ಣುಕುಲಕ್ಕೆ ಎಸಗುವ ಘೋರ ಅನ್ಯಾಯವಾಗಲಿದೆ. ಶಕ್ತಿ, ನಾರೀಶಕ್ತಿ, ಗೃಹಲಕ್ಷ್ಮಿ, ಮಹಾಲಕ್ಷ್ಮಿ ಯೋಜನೆಗಳೆಲ್ಲ ಐತಿಹಾಸಿಕ ಅಣಕವಾಗಲಿವೆ.

 

ವಿಕೃತ ಕಾಮಿ ಸಂಸದ ಪ್ರಜ್ವಲ್‌ ರೇವಣ್ಣನ ಕಾಮಕಾಂಡ ಬಯಲಾದ ನಂತರ ವಾರದಿಂದ ನಡೆಯುತ್ತಿರುವ ರಾಜಕೀಯ ಕೆಸರೆರಚಾಟ ಗಮನಿಸಿದರೆ ಈ ಹೀನ ಕೃತ್ಯದಿಂದ ರಾಜಕೀಯ ನಾಯಕರಾರೂ ದಿಗ್ಬ್ರಾಂತಿಗೆ ಒಳಗಾಗಿಲ್ಲ. ರಾಜ್ಯದ ಮಾನ, ಹೆಣ್ಣುಮಕ್ಕಳ ಮಾನಪ್ರಾಣದ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.

ರಾಷ್ಟ್ರೀಯ ಮಟ್ಟದ ನಾಯಕರಿಂದ ಹಿಡಿದು, ತಳಮಟ್ಟದ ನಾಯಕರವರೆಗೂ ಈ ಪ್ರಕರಣವನ್ನು ವ್ಯಕ್ತಿಯೊಬ್ಬನ ಹೀನ ಕೃತ್ಯವಾಗಿ, ಸಮಾಜವೇ ತಲೆತಗ್ಗಿಸುವ ಘಟನೆಯಾಗಿ ನೋಡದೇ, “ಯಾರದ್ದೋ ಷಡ್ಯಂತ್ರ“, ಎನ್ನುತ್ತಿರುವುದು ನಾಚಿಕೆಗೇಡು. ನಾಗರಿಕ ಸಮಾಜ ತಲೆ ತಗ್ಗಿಸಲು ಇದಕ್ಕಿಂತ ಇನ್ನೂ ಹೆಚ್ಚಿದೇನು ನಡೆಯಬೇಕಿದೆ!

ಪ್ರಕರಣ ಬೆಳಕಿಗೆ ಬಂದು ಹತ್ತು ದಿನಗಳಾದವು. ಮತದಾನ ಮುಗಿಯುತ್ತಿದ್ದಂತೆ ಪ್ರಜ್ವಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಿಶೇಷ ತನಿಖಾ ದಳಕ್ಕೆ ಸರ್ಕಾರ ಪ್ರಕರಣದ ತನಿಖೆಯನ್ನು ಒಪ್ಪಿಸಿದೆ. ಆದರೆ ಆರೋಪಿ ದೇಶದಿಂದ ಪರಾರಿಯಾಗಬಹುದು ಎಂಬುದನ್ನು ಸರ್ಕಾರ ಅಥವಾ ಗುಪ್ತಚರ ಇಲಾಖೆ ಗಮನಿಸಿಲ್ಲ ಎಂಬುದು ಈ ಪ್ರಕರಣವನ್ನು ಸರ್ಕಾರಗಳು ಅದೆಷ್ಟು ಗಂಭೀರವಾಗಿ ಪರಿಗಣಿಸಿವೆ ಎಂಬುದಕ್ಕೆ ಸಾಕ್ಷಿ.

Advertisements

ಈ ಅಪ್ಪ ಮಗನ ಜೋಡಿ ಎಳೆ ವಯಸ್ಸಿನ ಹೆಣ್ಣುಮಕ್ಕಳಿಂದ ಹಿಡಿದು ಮುದುಕಿಯರವರೆಗೆ ಯಾರೊಬ್ಬರಲ್ಲೂ ಸಹೋದರಿಯರನ್ನು, ತಾಯಂದಿರನ್ನು ಕಂಡಿಲ್ಲ. ಅವರೆಲ್ಲರನ್ನೂ ಭೋಗದ ವಸ್ತುವಾಗಿ ಮಾತ್ರ ಕಂಡಿದ್ದಾರೆ ಎಂಬುದು ಅವರ ಮನೋವಿಕಾರವನ್ನು ತೋರಿಸುತ್ತದೆ.

ಎರಡು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಪ್ರಜ್ವಲ್‌ ಲೈಂಗಿಕ ವಿಕಾರ ಮೆರೆದಿದ್ದಲ್ಲದೇ ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿಟ್ಟುಕೊಂಡು ಇಂದು ಅವು ಸಾರ್ವಜನಿಕಗೊಂಡು ಆ ಹೆಣ್ಣುಮಕ್ಕಳು ಸಮಾಜದಲ್ಲಿ ಘನತೆ, ಗೌರವದಿಂದ ಬದುಕುವ ಹಕ್ಕನ್ನು ಕಿತ್ತುಕೊಂಡ ವ್ಯವಸ್ಥೆ, ದುರಾಡಳಿತದ ಬಗ್ಗೆ ಜನ ಮಾತನಾಡಬೇಕಿದೆ. ಮತದಾನಕ್ಕೆ ನಾಲ್ಕು ದಿನಗಳಿರುವಾಗ ಈ ಅಶ್ಲೀಲ ವಿಡಿಯೊಗಳು ಬಹಿರಂಗಗೊಂಡಿವೆ. ಅದರ ನಂತರವೂ ಹೆಣ್ಣುಮಕ್ಕಳು, ಗೌರವಸ್ಥ ಮತದಾರರು ಆತನಿಗೆ ಮತ ಹಾಕಿರುವ ಮನೋವೃತ್ತಿ ಬೆಚ್ಚಿ ಬೀಳಿಸುವಷ್ಟು ಭಯಾನಕ. ಇದು ಸಾಮಾಜಿಕ ಶೀಲದ ಪ್ರಶ್ನೆಯೂ ಆಗಿದೆ. ಯಾಕೆಂದರೆ ಆಯಾ ಪಕ್ಷದ ಕಾರ್ಯಕರ್ತರು ಸ್ಪರ್ಧೆಗೆ ಬಿದ್ದವರಂತೆ ಬೇರೆ ಪಕ್ಷದ ನಾಯಕರ ಅಶ್ಲೀಲ ವಿಡಿಯೋ, ತಿರುಚಿದ ಹಳೆಯ ಚಿತ್ರಗಳನ್ನು ಮುಲಾಜಿಲ್ಲದೇ, ಕಾನೂನಿನ ಭಯವಿಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲು ಶುರು ಮಾಡಿದ್ದಾರೆ. ಅವರಿಗೆ ಹೆಣ್ಣಿನ ಘನತೆ, ಸಾಮಾಜಿಕ ಶೀಲ ಯಾವುದೂ ಮುಖ್ಯ ಅಲ್ಲ.

“ಅನೇಕ ಮಹಿಳೆಯರು ಸ್ವಂತ ಅಥವಾ ಕುಟುಂಬದ ಲಾಭಕ್ಕಾಗಿ ಆತನ ಬಳಿ ಹೋಗಿದ್ದಾರೆ. ಆತನ ಲಾಲಸೆ ಈಡೇರಿಸಿದ್ದಾರೆ. ಅಧಿಕಾರಿಗಳು, ಬೇರೆ ಬೇರೆ ಕ್ಷೇತ್ರದ ಮಹಿಳೆಯರು, ಸರ್ಕಾರಿ ಉದ್ಯೋಗಿಗಳು ಆತನ ಕಾಮವಾಂಛೆಗೆ ಬಲಿಯಾಗಿದ್ದಾರೆ” ಎಂಬ ಮಾತುಗಳು ಕೇಳಿಬಂದಿವೆ. ಸಂಸದನಾಗಿ ಆತನಿಗೆ ಇರುವ ಅಧಿಕಾರ, ಪ್ರಭಾವಳಿ ಬಳಸಿಕೊಂಡು ವರ್ಗಾವಣೆ, ಗುತ್ತಿಗೆ, ನೇಮಕಾತಿ, ವೃತ್ತಿಪರ ಕಾಲೇಜುಗಳಲ್ಲಿ ಸೀಟುಗಳು ಮುಂತಾದ ಸಹಾಯ ಕೇಳಿಕೊಂಡು ಬಂದವರನ್ನು ಬಳಸಿಕೊಂಡಿದ್ದಾನೆ ಎಂದೇ ಅರ್ಥ. ಆತನಿಗೆ ಅಂತಹ ಚಟ ಇಲ್ಲದಿದ್ದರೆ ಇಷ್ಟೊಂದು ಹೆಣ್ಣುಮಕ್ಕಳು ಇವತ್ತು ಅಪಮಾನದಿಂದ ನರಳುವ ಸ್ಥಿತಿ ಬರುತ್ತಿರಲಿಲ್ಲ. ಆ ಮಹಿಳೆಯರನ್ನು ಇಂತಹ ಸ್ಥಿತಿಗೆ ತಳ್ಳಿದ ವ್ಯವಸ್ಥೆ ಎಂತದ್ದು ಎಂದು ಚಿಂತಿಸಬೇಕಾಗಿದೆ.

ಮನೆಗೆಲಸದ ಮಹಿಳೆಯರು ನಿತ್ಯವೂ ಕಿರುಕುಳ ಅನುಭವಿಸಿದ್ದಾರೆ. ಸಂತ್ರಸ್ತೆ ದೂರು ನೀಡಿದ ನಂತರ ಆಕೆಯ ರಕ್ಷಣೆ ಸರ್ಕಾರದ ಹೊಣೆ ಅಲ್ಲವೇ? ಹೊಳೆನರಸೀಪುರದ ದೂರುದಾರೆ ವೃದ್ಧೆಯ ದೂರನ್ನು ದಾಖಲಿಸಿಕೊಂಡ ಪೊಲೀಸರು ರೇವಣ್ಣ ಅವರನ್ನು ಎ1 ಮತ್ತು ಪ್ರಜ್ವಲ್‌ ನನ್ನು ಎ2 ಆರೋಪಿ ಎಂದು ಹೆಸರಿಸಿದ್ದಾರೆ. ಇದುವರೆಗೂ ರೇವಣ್ಣ ಎಸ್‌ ಐಟಿ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಮೇ 2 ರಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಹಾಕಿರುವ ಸೆಕ್ಷನ್‌ ಗಳಡಿ ಬಂಧನಕ್ಕೆ ಅವಕಾಶವೇ ಇಲ್ಲ. ಹೀಗಾಗಿ ಜಾಮೀನು ಕೋರಿ ಆರ್ಜಿ ಸಲ್ಲಿಸುವ ಅಗತ್ಯವೇ ಇಲ್ಲವೆಂದೂ ಅರ್ಜಿಯನ್ನು ವಾಪಸು ಪಡೆಯಬೇಕೆಂದೂ ನ್ಯಾಯಾಲಯ ರೇವಣ್ಣಗೆ ಹೇಳಿದೆ!.

ಅತ್ತ ದೂರುದಾರೆ ನಾಪತ್ತೆಯಾಗಿದ್ದಾರೆ ಎಂದು ಮೈಸೂರಿನಲ್ಲಿ ಸಂತ್ರಸ್ತೆಯ ಮಗ ದೂರು ನೀಡಿದ್ದಾರೆ. ಒಂದು ಘನಘೋರ ತಪ್ಪನ್ನು ಒಪ್ಪಿಕೊಂಡು ಕಾನೂನಿಗೆ ತಲೆಬಾಗುವ ಬದಲು ಮತ್ತೆ ಇನ್ನಷ್ಟು ಪಾಪ ಕೃತ್ಯಗಳನ್ನು ಎಸಗಲು ಹೇಸದ ಮನಸ್ಥಿತಿಗೆ ಹಣ, ಅಧಿಕಾರ ಮದ. ಕಾನೂನಿನ ಭಯ ಇಲ್ಲದಿರುವುದೇ ಕಾರಣ.

ಇಡೀ ದೇಶವೇ ಬೆಚ್ಚಿ ಬಿದ್ದಿರುವ ʼಮಾಸ್‌ ರೇಪಿಸ್ಟ್‌ ಪ್ರಜ್ವಲ್‌ʼ ಪ್ರಕರಣವನ್ನೂ ನಮ್ಮ ಪೊಲೀಸರು ಸಹಜ ಪ್ರಕರಣ ಎಂಬಂತೆ ಪರಿಗಣಿಸುತ್ತಿರುವುದು ವ್ಯವಸ್ಥೆಯ ಅಣಕ. ಇಂಟರ್‌ ಪೋಲ್‌ ಮೂಲಕ ಪ್ರಜ್ವಲ್‌ ನನ್ನು ತಕ್ಷಣ ಕರೆ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕು. ಕರ್ನಾಟಕಕ್ಕೆ ಬಹುದೊಡ್ಡ ಕಳಂಕ ತಂದ ಅಪ್ಪ –ಮಗನ ಮೇಲೆ ಮುಲಾಜಿಲ್ಲದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒತ್ತಡವೋ, ಆಮಿಷವೋ ಇಲ್ಲವೇ ಭಯದ ಕಾರಣಗಳಿಗಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ಧೈರ್ಯದಿಂದ ಎಸ್‌ಐಟಿ ಮುಂದೆ ಬಂದು ದೂರು ಕೊಡುವಂತಹ ಭದ್ರತೆಯ ವಾತಾವರಣ ತುರ್ತಾಗಿ ನಿರ್ಮಿಸಬೇಕಿದೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರ ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಅಣುವಿನಷ್ಟು ಸಹಕರಿಸಿದರೂ ಅದು ಇಡೀ ಹೆಣ್ಣುಕುಲಕ್ಕೆ ಎಸಗುವ ಘೋರ ಅನ್ಯಾಯವಾಗಲಿದೆ. ಶಕ್ತಿ, ನಾರೀಶಕ್ತಿ, ಗೃಹಲಕ್ಷ್ಮಿ, ಮಹಾಲಕ್ಷ್ಮಿ ಯೋಜನೆಗಳೆಲ್ಲ ಐತಿಹಾಸಿಕ ಅಣಕವಾಗಲಿವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X