ಬಿಜೆಪಿಯೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್ಸಿಗರನ್ನು ರಾಹುಲ್ ಗುರುತಿಸಿದ್ದಾರಂತೆ. ಹರಿಯಾಣದ ಕಾಂಗ್ರೆಸ್ಸಿಗರಲ್ಲೂ ಆರೆಸ್ಸೆಸ್ ಜನ ಇದ್ದಾರೆಂದು ಗುರುತಿಸಿದ್ದೇನೆ. ವೇಷ ಮರೆಸಿ ಆರೆಸ್ಸೆಸ್ ನವರು ಕಾಂಗ್ರೆಸ್ಸಿನೊಳಕ್ಕೆ ನುಸುಳಿದ್ದಾರೆ. ಮೋದಿ ಶಾ ಭಯದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದವರೂ ಇದ್ದಾರೆ ಎಂಬ ಮಾತನ್ನು ರಾಹುಲ್ ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲೇ ಹೇಳಿದ್ದುಂಟು.
ಕಾಂಗ್ರೆಸ್ಸನ್ನು ಕಾಂಗ್ರೆಸ್ಸೇ ಸೋಲಿಸುತ್ತದೆ ಎಂಬ ಮಾತಿದೆ. ಈ ಮಾತನ್ನು ಖುದ್ದು ಕಾಂಗ್ರೆಸ್ಸಿಗರೇ ಹಲವು ಬಾರಿ ಹೇಳಿದ್ದಿದೆ. ಇತಿಹಾಸವೂ ಈ ಮಾತಿಗೆ ಹತ್ತು ಹಲವು ಸಲ ಸಾಕ್ಷಿಯಾಗಿದೆ.
‘ಕಾಂಗ್ರೆಸ್ ಪಕ್ಷ ಗುಜರಾತಿನಲ್ಲಿ ಸರ್ಕಾರ ಕಳೆದುಕೊಂಡು 30 ವರ್ಷಗಳೇ ಆಗಿವೆ. ಗುಜರಾತಿನ ಜನರ ಮನಸ್ಸನ್ನು ನಾವು ಗೆದ್ದಿಲ್ಲ. ಹೀಗಾಗಿ ಸರ್ಕಾರ ರಚನೆಯ ಅವಕಾಶ ಕೊಡಿ ಎಂದು ಕೇಳುವ ಅಧಿಕಾರವೂ ನಮಗಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧೀ ಇತ್ತೀಚೆಗೆ ಹೇಳಿದ್ದಾರೆ.
ಅಹ್ಮದಾಬಾದಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅದೊಂದು ಬಗೆಯ ಬಹಿರಂಗ ಆತ್ಮಚಿಂತನೆ. ಅವರ ಹೇಳಿಕೆಲ್ಲಿ ವಾಸ್ತವತೆ ಇದೆ. ಪ್ರಾಮಾಣಿಕತೆ ಇದೆ
‘ನಮ್ಮ ಜವಾಬ್ದಾರಿಯನ್ನು ನಾವು ಪೂರ್ಣಗೊಳಿಸದೆ ಗುಜರಾತಿನ ಜನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುವುದಿಲ್ಲ. ನಿಜಕ್ಕೂ ಗುಜರಾತಿನ ಜನತೆಯಿಂದ ಅಧಿಕಾರವನ್ನು ಕೇಳುವ ಅರ್ಹತೆಯೂ ನಮಗಿಲ್ಲ. ನಮ್ಮ ಹೊಣೆಗಾರಿಕೆ ಪೂರೈಸಿದ ದಿನ ಗುಜರಾತಿನ ಜನಾದೇಶ ದೊರೆಯುವುದು ನಿಶ್ಚಿತ. ಎಂದಿದ್ದಾರೆ.
‘ಸ್ವಾತಂತ್ರ್ಯ ಹೋರಾಟದಲ್ಲಿ ಆಲೋಚಿಸಬೇಕಾದ ಮತ್ತು ಹೋರಾಡುವ ರೀತಿನೀತಿಯನ್ನು ಕಾಂಗ್ರೆಸ್ಸಿಗೆ ಹೇಳಿಕೊಟ್ಟಿರುವ ನಾಡು ಗುಜರಾತ್. ಗುಜರಾತ್ ಇಲ್ಲವಾಗಿದ್ದರೆ ಗಾಂಧೀಜಿ ಇರುತ್ತಿರಲಿಲ್ಲ. ಗಾಂಧೀಜಿಯ ಬೆನ್ನಿಗೇ ಸರದಾರ್ ಪಟೇಲ್ ಅವರಂತಹ ಧೀಮಂತ ನಾಯಕರನ್ನು ಗುಜರಾತು ನೀಡಿದೆ. ಹೀಗೆ ಗುಜರಾತಿಗೆ ಕಾಂಗ್ರೆಸ್ಸಿಗೆ ದಾರಿ ತೋರಿರುವ ರಾಜ್ಯ ಗುಜರಾತ್’ ಎಂದು ರಾಹುಲ್ ಗತವೈಭವವನ್ನು ನೆನೆದಿದ್ದಾರೆ.
ಕಾಂಗ್ರೆಸ್ಸನ್ನು ಒಳಗಿನಿಂದ ಬದಲಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. ಗುಜರಾತಿನ ಜನರನ್ನು ಗೌರವಿಸುವುದೇ ಆದರೆ ಸರ್ಕಾರ ಕೊಡಿ ಅಂತ ಕೇಳಬಾರದು. ಗುಜರಾತಿನ ಜನರ ನಿರೀಕ್ಷೆಯನ್ನು ನಾವು ಹುಸಿ ಮಾಡಿದ್ದೇವೆ. ಈ ಮಾತನ್ನು ಹೇಳದೆ ಹೋದರೆ ಗುಜರಾತಿನೊಂದಿಗೆ ಸಂಬಂಧ ಬೆಳೆಸುವುದೇ ಸಾಧ್ಯವಿಲ್ಲ.
‘ಕಳೆದ 20-30 ವರ್ಷಗಳಲ್ಲಿ ನಮ್ಮಿಂದ ನನ್ನಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಂದ, ಉಸ್ತುವಾರಿ ಹೊತ್ತವರಿಂದ ಗುಜರಾತಿನ ಜನರ ನಿರೀಕ್ಷೆಯ ಮಟ್ಟವನ್ನು ಮುಟ್ಟುವುದಾಗಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ.
ಅರ್ಥಾತ್ ಗುಜರಾತಿನ ಕಾಂಗ್ರೆಸ್ಸನ್ನೂ ಬಿಜೆಪಿಯೇ ನಡೆಸುತ್ತಿದೆ ಎಂಬ ನಿಷ್ಠುರ ಸತ್ಯವನ್ನು ಪರೋಕ್ಷವಾಗಿ ಅಂಗೀಕರಿಸಿದ್ದಾರೆ. ಗುಜರಾತಿನಲ್ಲಿ ಸಾಮಾನ್ಯ ಕಾಂಗ್ರೆಸ್ಸಿಗರಿರಲಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದವರೇ ಬಿಜೆಪಿ ಸೇರುತ್ತಾರೆ. ಅರ್ಜುನ್ ಮೋಡ್ವಾಡಿಯಾ ಮತ್ತು ಹಾರ್ದಿಕ್ ಪಟೇಲ್ ಈ ಮಾತಿಗೆ ಉದಾಹರಣೆ. ಪಾಟೀದಾರ್ ಚಳವಳಿಯ ಜನಪ್ರಿಯ ನೇತಾರನಾಗಿದ್ದ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರಿ ಪ್ರದೇಶ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷ ಆಗುತ್ತಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ತಮ್ಮ ಮೇಲೆ ಹೂಡಲಾಗಿದ್ದ ಎಲ್ಲ ಪೊಲೀಸ್ ಕೇಸುಗಳಿಂದ ಮುಕ್ತಿ ಪಡೆಯುತ್ತಾರೆ.
ಗುಜರಾತ್ ಕಾಂಗ್ರೆಸ್ ನಾಯಕತ್ವ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಎರಡು ಬಗೆಯ ಜನರಿದ್ದಾರೆ. ಇಲ್ಲಿ ಕುಳಿತವರಲ್ಲೇ ಎರಡು ವಿಧಗಳಿವೆ. ಜನತೆಯೊಂದಿಗೆ ನಿಂತು, ಹೋರಾಡಿ, ಮನಸಿನಲ್ಲಿ ಕಾಂಗ್ರೆಸ್ ವಿಚಾರಧಾರೆ ಹೊಂದಿರುವವರು ಒಂದು ಬಗೆಯಾದರೆ, ಜನತೆಯಿಂದ ದೂರವಿದ್ದು, ಜನತೆಯನ್ನು ಆದರಿಸದೆ ಇರುವವರು ಮತ್ತೊಂದು ಬಗೆ. ಇವರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಹೇಳಿದಾಗ ಸಭೆಯಲ್ಲಿ ಚಪ್ಪಾಳೆ ಉದ್ಗಾರಗಳು ಕೇಳಿ ಬರುತ್ತವೆ.
ಇವೆರಡು ಬಣಗಳನ್ನು ನಿಚ್ಚಳವಾಗಿ ಗೆರೆ ಕೊರೆದಂತೆ ಬೇರೆ ಮಾಡದೆ ಹೋದರೆ ಗುಜರಾತಿನ ಮತದಾರರು ನಮ್ಮನ್ನು ನಂಬುವುದಿಲ್ಲ. ಗುಜರಾತಿನ ಜನ ಬಿಜೆಪಿಗೆ ಪರ್ಯಾಯ ಬಯಸುತ್ತಾರೆಯೇ ವಿನಾ ಬಿಜೆಪಿಯ ಬಿ ಟೀಮ್ ಅವರಿಗೆ ಬೇಕಿಲ್ಲ ಎಂದಿದ್ದಾರೆ.
ಎರಡು ಬಗೆಯ ಕುದುರೆಗಳಿರುತ್ತವೆ. ಒಂದು ರೇಸ್ ಗಳಲ್ಲಿ ಓಡುವ ಕುದುರೆ, ಮತ್ತೊಂದು ಮದುವೆ ದಿಬ್ಬಣದ ಕುದುರೆ. ಕಾಂಗ್ರೆಸ್ ಪಕ್ಷವು ರೇಸಿನ ಕುದುರೆಯನ್ನು ಮದುವೆ ದಿಬ್ಬಣದಲ್ಲೂ, ಮದುವೆ ದಿಬ್ಬಣದ ಕುದುರೆಯನ್ನು ರೇಸಿನಲ್ಲೂ ಹೂಡುತ್ತಿದೆ ಎಂದು ಮಧ್ಯಪ್ರದೇಶದ ಕಾರ್ಯಕರ್ತರ ನಿಯೋಗ ನೀಡಿದ್ದ ದೂರನ್ನು ಅವರು ಸಭೆಯಲ್ಲಿ ಸ್ಮರಿಸಿದ್ದಾರೆ.
ಗುಜರಾತಿನ ಜನ ಕಾಂಗ್ರೆಸ್ ಪಕ್ಷವನ್ನೂ ಗಮನಿಸಿ ನೋಡುತ್ತಿದ್ದಾರೆ. ರೇಸಿನಲ್ಲಿ ದಿಬ್ಬಣದ ಕುದುರೆಯನ್ನು ಹೂಡಿತು ಕಾಂಗ್ರೆಸ್ ಎಂದು ದೂರುತ್ತಿದ್ದಾರೆ. ಗುಜರಾತಿನ ಜನಮನಗಳಲ್ಲಿ ಜಾಗ ಪಡೆಯಬೇಕಿದ್ದರೆ ಕಾಂಗ್ರೆಸ್ ಪಕ್ಷ ಈ ಎರಡು ಗುಂಪುಗಳನ್ನು ಬೇರೆ ಬೇರೆ ಮಾಡಬೇಕಾಗುತ್ತದೆ. ಬಿಗಿಯಾದ ಶಿಸ್ತು ಕ್ರಮ ಜರುಗಿಸಿ 10,20,30,40 ಮಂದಿಯನ್ನು ಪಕ್ಷದಿಂದ ಹೊರಹಾಕಬೇಕಾಗಿ ಬಂದರೆ ಹೊರಹಾಕಬೇಕಿದೆ ಎಂದು ರಾಹುಲ್ ಹೇಳಿದಾಗ ಕರತಾಡನ ಮತ್ತು ಉದ್ಗಾರಗಳು ದೀರ್ಘವಾಗುವುದು ವಾಸ್ತವಾಂಶದ ದ್ಯೋತಕ.
ಬಿಜೆಪಿಗೆ ಒಳಗೊಳಗಿಂದ ಕೆಲಸ ಮಾಡುತ್ತಿರುವವರನ್ನು ಹೊರ ಹಾಕಿ ಬಹಿರಂಗವಾಗಿಯೇ ಕೆಲಸ ಮಾಡಿ ಹೋಗಿ ಎಂದು ಕಳಿಸಿಕೊಡಬೇಕಿದೆ. ಇಂತಹವರನ್ನು ಬಿಜೆಪಿಯೂ ಮಣೆ ಹಾಕಿ ಬಹುಕಾಲ ಇಟ್ಟುಕೊಳ್ಳುವುದಿಲ್ಲ. ಬ್ಲಾಕ್ ಅಧ್ಯಕ್ಷ, ತಾಲ್ಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ಹಿರಿಯ ನಾಯಕ ಯಾರೇ ಇರಲಿ, ಸೋಲಲಿ ಅಥವಾ ಗೆಲ್ಲಲಿ, ಹೃದಯಪೂರ್ವಕವಾಗಿ ಕಾಂಗ್ರೆಸ್ ನಿಷ್ಠರಾಗಿರಬೇಕು ಎಂದಿದ್ದಾರೆ ರಾಹುಲ್.
ಬಿಜೆಪಿಯೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್ಸಿಗರನ್ನು ರಾಹುಲ್ ಗುರುತಿಸಿದ್ದಾರಂತೆ. ಹರಿಯಾಣದ ಕಾಂಗ್ರೆಸ್ಸಿಗರಲ್ಲೂ ಆರೆಸ್ಸೆಸ್ ಜನ ಇದ್ದಾರೆಂದು ಗುರುತಿಸಿದ್ದೇನೆ. ವೇಷ ಮರೆಸಿ ಆರೆಸ್ಸೆಸ್ ನವರು ಕಾಂಗ್ರೆಸ್ಸಿನೊಳಕ್ಕೆ ನುಸುಳಿದ್ದಾರೆ. (ಮೋದಿ ಶಾ) ಭಯದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದವರೂ ಇದ್ದಾರೆ ಎಂಬ ಮಾತನ್ನು ರಾಹುಲ್ ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲೇ ಹೇಳಿದ್ದುಂಟು. ಮಧ್ಯಪ್ರದೇಶ ಚುನಾವಣೆಯ ಹೊಸ್ತಿಲಲ್ಲಿ ಬಹಳ ದೊಡ್ಡ ಸಂಖ್ಯೆಯ ಕಾಂಗ್ರೆಸ್ಸಿಗರು ಪಕ್ಷ ತೊರೆದು ಬಿಜೆಪಿ ಸೇರಿದರು. ಅಷ್ಟೇ ದೊಡ್ಡ ಸಂಖ್ಯೆಯ ಕಾಂಗ್ರೆಸ್ಸಿಗರು ಪಕ್ಷದಲ್ಲಿದ್ದುಕೊಂಡೇ ಬಿಜೆಪಿಯನ್ನು ಬಲಪಡಿಸಿದ್ದಾರೆ. 16,111 ಮಂದಿ ಕಾಂಗ್ರೆಸ್ಸಿಗರು ಮಧ್ಯಪ್ರದೇಶದಲ್ಲಿ ಬಿಜೆಪಿ ಸೇರಿದ್ದಾರೆಂದು ಅಲ್ಲಿನ ಬಿಜೆಪಿ ನಾಯಕ ನರೋತ್ತಮ ಮಿಶ್ರ ತಮ್ಮ ವರಿಷ್ಠ ಮಂಡಳಿಗೆ ವರದಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಪಡೆದು ಪ್ರಚಾರ ಮಾಡದೆ ಕೈಕಟ್ಟಿ ಕುಳಿತುಕೊಳ್ಳುವವರಿದ್ದಾರೆ. ಬಿಜೆಪಿ ಪರವಾಗಿ ಉಮೇದುವಾರಿಕೆಯನ್ನು ವಾಪಸು ಪಡೆದ ಕಾಂಗ್ರೆಸ್ಸಿಗರೂ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೂರತ್‌ನಂತೆ ಮಧ್ಯಪ್ರದೇಶದ ಇಂದೋರಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ವಾಪಸು ತೆಗೆದುಕೊಂಡಿದ್ದಾರೆ.
ಹಿಂದೀ ಪ್ರದೇಶದ ಹಲವಾರು ರಾಜ್ಯಗಳು ಕಾಂಗ್ರೆಸ್ಸಿನ ಕೈ ಬಿಟ್ಟು ಬಹಳ ಕಾಲವಾಗಿದೆ. ಕೆಲವೆಡೆ ಗೆಲ್ಲುವ ಬಾಜಿಗಳನ್ನು ಸೋತಿದೆ. ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದೆ. ಇಂತಹ ಬಹುತೇಕ ರಾಜ್ಯಗಳಲ್ಲಿ ಅದು ದಿಬ್ಬಣದ ಕುದುರೆಗಳನ್ನು ರೇಸಿಗೆ ಇಳಿಸಿ, ರೇಸಿನ ಕುದುರೆಗಳನ್ನು ದಿಬ್ಬಣಕ್ಕೆ ಹೂಡಿರುವುದೇ ಮುಖ್ಯ ಕಾರಣವಲ್ಲವೇ
ಇಷ್ಟೆಲ್ಲ ಮಾತಾಡಿರುವ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ವರಿಷ್ಠ ಮಂಡಳಿ ದಿಬ್ಬಣದ ಕುದುರೆಗಳಿಗೆ ತಕ್ಕ ಜಾಗ ತೋರಿಸುವ ಕೆಲಸವನ್ನು ಯಾಕೆ ಮಾಡುತ್ತಿಲ್ಲ? ಮಧ್ಯಪ್ರದೇಶದಲ್ಲಿ ತನ್ನವರಿಂದಲೇ ಮೋಸ ಹೋಗಿ, ರಾಜಸ್ತಾನದಲ್ಲಿ ಗೆಲುವಿನ ಬಾಜಿಯನ್ನು ಸೋತು, ಹರಿಯಾಣದಲ್ಲಿ ಆಡಳಿತವಿರೋಧಿ ಅಲೆ ಎದುರಿಸಿದ್ದ ಬಿಜೆಪಿ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದೆ. ಮಧ್ಯಪ್ರದೇಶ ಮತ್ತು ಹರಿಯಾಣ ಚುನಾವಣೆಗಳ ಫಲಿತಾಂಶಗಳು ಬಂದು ಅದೆಷ್ಟು ಕಾಲವಾಗಿದೆ? ಇನ್ನೆಷ್ಟು ಕಾಲ ಬೇಕಿದೆ?
ಹರಿಯಾಣ ಮಧ್ಯಪ್ರದೇಶ ಚುನಾವಣೆಗಳ ನಂತರವಾದರೂ ಬಿಜೆಪಿಯೊಂದಿಗೆ ಶಾಮೀಲಾಗಿರುವ ಎಷ್ಟು ಮಂದಿ ಕಾಂಗ್ರೆಸ್ಸಿಗರನ್ನು ಗುರುತಿಸಿ ಪಕ್ಷದಿಂದ ಹೊರಹಾಕಲಾಗಿದೆ? ಇಂತಹ ಸ್ಪಷ್ಟೀಕರಣವನ್ನು ಜನತೆಯ ಮುಂದೆ ಇಡಬೇಕಿರುವುದು ರಾಹುಲ್ ಗಾಂಧೀ ಮತ್ತು ಕಾಂಗ್ರೆಸ್ ವರಿಷ್ಠ ಮಂಡಳಿಯ ಆದ್ಯ ಕರ್ತವ್ಯ.
ಅಷ್ಟೇ ಯಾಕೆ, ರಾಹುಲ್ ಸುತ್ತಮುತ್ತ ದಿಬ್ಬಣದ ಕುದುರೆಗಳೇ ಕಾಣುತ್ತವೆ ಎಂಬ ದೂರು ಇದೆ. ಈ ದೀಪದ ಕೆಳಗಿನ ಕತ್ತಲನ್ನೂ ಗಮನಿಸಬೇಕಿದೆ. ಆಡಿರುವ ಮಾತನ್ನು ನಡೆಸಿಕೊಡಬೇಕು ರಾಹುಲ್ ಗಾಂಧಿ. ಇಲ್ಲವಾದರೆ ಅವರು ಆಡುವ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಆಗ ಜನ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ.
