ಹಿಂದೂ ಹೆಣ್ಣುಮಕ್ಕಳನ್ನು ಮರುಳು ಮಾಡಿ ಮುಸ್ಲಿಂ ಯುವಕರು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ, ಮೋಸಕ್ಕೊಳಗಾದ ಕೇರಳದ ಹಿಂದೂ ಯುವತಿಯರ ಬಗ್ಗೆ ಕಾಳಜಿ ತೋರುವ ಸಚಿವೆ ಶೋಭಾ ಕರಂದ್ಲಾಜೆ, ತನ್ನದೇ ಊರಿನಲ್ಲಿ ಕೊಲೆಯಾದ ಹಿಂದೂ ಯುವತಿ ಸೌಜನ್ಯಳ ಕುಟುಂಬದ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ
ದಕ್ಷಿಣಕನ್ನಡ ಜಿಲ್ಲೆಯ ಪವಿತ್ರ ತೀರ್ಥಕ್ಷೇತ್ರ ಧರ್ಮಸ್ಥಳ. ಮಂಜುನಾಥನ ಹೆಸರಿನಲ್ಲಿ ಆಣೆ ಪ್ರಮಾಣ ಮಾಡುವುದು ಈಗಲೂ ಚಾಲ್ತಿಯಲ್ಲಿದೆ. ಅದೇ ಮಂಜುನಾಥನ ಕಾಲಬುಡದಲ್ಲಿ ಹನ್ನೊಂದು ವರ್ಷಗಳ ಹಿಂದೆ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಎಂಬ ಬಡ ಹೆಣ್ಣುಮಗಳು ಅತ್ಯಾಚಾರವಾಗಿ, ಕೊಲೆಯಾಗಿ ಹೋದಳು. ಸತತ ಹನ್ನೊಂದು ವರ್ಷಗಳ ಕಾನೂನು ಹೋರಾಟದ ನಂತರವೂ, ಸಿಬಿಐ ತನಿಖೆ ನಡೆದರೂ ಪಾತಕಿಗಳು ಯಾರೆಂಬುದು ಪತ್ತೆಯಾಗಿಲ್ಲ. ಸತ್ಯದ ಪರ ನಿಲ್ಲುವವ ಎಂದು ಕೋಟ್ಯಂತರ ಜನ ನಂಬುವ ಮಂಜುನಾಥನಾಗಲಿ, ಅಣ್ಣಪ್ಪನಾಗಲಿ ತಮ್ಮ ಮೆಟ್ಟಿಲಿನ ಮೇಲೆ ನ್ಯಾಯ ಪ್ರಕಟಿಸಲಿಲ್ಲ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಕೂಡಾ ಅಪರಾಧಿಗಳನ್ನು ಪತ್ತೆ ಮಾಡಲಿಲ್ಲ.
ಉಜಿರೆಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸೌಜನ್ಯ 2012 ಅಕ್ಟೋಬರ್ 9ರ ಸಂಜೆ ಕಾಲೇಜಿನಿಂದ ಬಸ್ಸಿನಲ್ಲಿ ಬಂದಿಳಿದಿದ್ದಾಳೆ. ಸೌಜನ್ಯ ತನ್ನ ಮನೆ ಕಡೆ ಹೆಜ್ಜೆ ಹಾಕುತ್ತಿದ್ದಾಗ ಆ ಸಂಜೆಯ ಜಿಟಿ ಜಿಟಿ ಮಳೆಯ ನಡುವೆಯೇ ಕಿರಾತಕರು ಆಕೆಯನ್ನು ಅಪಹರಿಸಿದ್ದರು. ರಾತ್ರಿಯಾದರೂ ಮನೆ ಸೇರದಿರುವ ಮಗಳ ಬಗ್ಗೆ ಆತಂಕಗೊಂಡ ಮನೆಯವರು, ಊರವರು ಸೇರಿ ಆಕೆ ಸಾಗಿದ ಹಾದಿಯಲ್ಲಿ ಪೊದೆಯನ್ನೂ ಬಿಡದೇ ಜಾಲಾಡಿದ್ದಾರೆ. ಇಡೀ ರಾತ್ರಿಯ ಹುಡುಕಾಟದಲ್ಲಿ ಯಾವ ಸುಳಿವೂ ಸಿಕ್ಕಿರಲಿಲ್ಲ. ಆದರೆ ಜನರು ಹುಡುಕಾಟ ನಡೆಸಿದ ಅದೇ ಜಾಗದಲ್ಲಿ ಮರುದಿನ(ಅ.10) 12 ಗಂಟೆಯ ಸುಮಾರಿಗೆ ಪೊಲೀಸರ ಪತ್ತೆಕಾರ್ಯದ ವೇಳೆ ಪೊದೆಯ ಮಧ್ಯೆ ಸೌಜನ್ಯಳ ಸುಕೋಮಲ ದೇಹ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಬಿದ್ದಿತ್ತು. ಮರುದಿನವೇ ಅ.11ರಂದು ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥನನ್ನು ಸಾರ್ವಜನಿಕರು ಅನುಮಾನದಿಂದ ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ್ ರೈ ಮತ್ತು ಪಿಎಸ್ಐ ಯೋಗೀಶ್ ಕುಮಾರ್ ತಂಡದಿಂದ ತನಿಖೆ ನಡೆದು, ನಂತರ ಸಿಐಡಿಗೆ ವಹಿಸಲಾಗಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ 2013ರಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಸುಮಾರು 11 ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ ಕೋರ್ಟ್ ಇದೇ 16ರಂದು ಸಂತೋಷ್ ರಾವ್ ನಿರ್ದೋಷಿ ಎಂಬ ತೀರ್ಪು ನೀಡಿದೆ. ಹಾಗಿದ್ದರೆ ನಿಜ ಅಪರಾಧಿಗಳು ಯಾರು? ಅವರನ್ನು ಪತ್ತೆ ಹಚ್ಚುವವರು ಯಾರು?
ಇಡೀ ರಾತ್ರಿ ಬಿಡದೇ ಮಳೆ ಸುರಿದಿದ್ದರೂ ಮೃತದೇಹದ ಬಳಿ ಸಿಕ್ಕಿದ್ದ ಆಕೆಯ ಬ್ಯಾಗ್, ಅದರಲ್ಲಿದ್ದ ಪುಸ್ತಕಗಳು ಒದ್ದೆಯಾಗಿರಲಿಲ್ಲ. ಸೌಜನ್ಯಳ ದೇಹ ಸಿಕ್ಕ ಜಾಗದಲ್ಲಿ ಕೊಲೆ ನಡೆದಿಲ್ಲ, ಬೇರೆಲ್ಲೋ ಕೊಲೆ ಮಾಡಿ ಆ ಜಾಗದಲ್ಲಿ ಎಸೆಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆಕೆಯ ಕುಟುಂಬ ಮತ್ತು ಊರವರ ಪ್ರಕಾರ ಪೊಲೀಸರು ಸ್ಥಳ ಮಹಜರು ಸಾಂದರ್ಭಿಕ ಸಾಕ್ಷ್ಯ ಸಂಗ್ರಹ, ಪೋಸ್ಟ್‌ಮಾರ್ಟಂ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಆಕೆಯ ದೇಹದಲ್ಲಿ ಒಳ ಉಡುಪು ಇರಲಿಲ್ಲ. ಪೊಲೀಸರು ಆಕೆಯ ಮನೆಯಿಂದ ಒಳ ಉಡುಪು ತೆಗೆದುಕೊಂಡು ಹೋಗಿದ್ದರು. ಪ್ರಭಾವಿಗಳ ಮಕ್ಕಳ ರಕ್ಷಣೆಗಾಗಿ ಯಾರದ್ದೋ ಒತ್ತಡಕ್ಕೆ ಬಿದ್ದು ಪೊಲೀಸರು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಹೇಳುತ್ತಲೇ ಬಂದಿದ್ದರು. ಕೊಲೆಯ ಪ್ರಮುಖ ಸಾಕ್ಷಿಗಳಲ್ಲಿ ಮೂವರು ಅಪಘಾತ ಸೇರಿದಂತೆ ಅನುಮಾನಾಸ್ಪದವಾಗಿ ಸತ್ತಿದ್ದಾರೆ. ಹೀಗೆ ಹತ್ತು ವರ್ಷಗಳಲ್ಲಿ ಸೌಜನ್ಯಳ ಕೊಲೆ ಪಾತಕಿಗಳು ಯಾರು ಎಂಬುದನ್ನು ಪತ್ತೆ ಹಚ್ಚಿ ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬುದು ಅಲ್ಲಿನ ಜನಪ್ರತಿನಿಧಿಗಳಿಗೂ ಇಲ್ಲ.
ಇದನ್ನು ಓದಿ ಶಕ್ತಿ ಯೋಜನೆ | ಹೆಣ್ಣುಮಕ್ಕಳ ಪರ್ಸಿನಲ್ಲಿ ಚಿಕ್ಕಾಸು ಉಳಿದಿದೆ; ಬಿಟ್ಟಿ ಸಲಹೆಗಳು ಹೊಟ್ಟೆ ಕಿಚ್ಚಿನ ಹಳಹಳಿಕೆಗಳಷ್ಟೇ…
ಈ ಘಟನೆ ನಡೆದಾಗ ರಾಜ್ಯದಲ್ಲಿ ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದರು. ಸೌಜನ್ಯಳ ಊರಿನವರೇ ಆದ ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದರು. ಹಿಂದೂ ಹೆಣ್ಣುಮಕ್ಕಳನ್ನು ಮರುಳು ಮಾಡಿ ಮುಸ್ಲಿಂ ಯುವಕರು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ, ಮೋಸಕ್ಕೊಳಗಾದ ಕೇರಳದ ಹಿಂದೂ ಯುವತಿಯ ಬಗ್ಗೆ ಕಾಳಜಿ ತೋರಿಸಿದ್ದ ಶೋಭಾ ಕರಂದ್ಲಾಜೆ, ಧರ್ಮಸ್ಥಳದಲ್ಲಿ ತನ್ನದೇ ಸಮುದಾಯದ, ಹಿಂದೂ ಯುವತಿ ಸೌಜನ್ಯಳ ಕುಟುಂಬದ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಈ ಪ್ರಕರಣದಲ್ಲಿ ದೊಡ್ಡವರ ಮಕ್ಕಳ ಹೆಸರು ಕೇಳಿ ಬಂದಿರುವ ಕಾರಣ ಎಲ್ಲ ಜನ ಪ್ರತಿನಿಧಿಗಳೂ ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಕುಟುಂಬದವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಬ್ಯಾನರ್ ಹಿಡಿದು ಎಬಿವಿಪಿ ಸಂಘಟನೆ ಮೆರವಣಿಗೆ ನಡೆಸಿತ್ತು.
ಸೌಜನ್ಯ ಕೊಲೆ ಪ್ರಕರಣ ಒಂದೇ ಅಲ್ಲ, ಅಲ್ಲೇ ಪಕ್ಕದಲ್ಲೇ ಇರುವ ಮೂಡುಬಿದರೆಯ ಡಾ ಮೋಹನ ಆಳ್ವರ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಬಡ ಕುಟುಂಬದ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಯಾವ ಸಾವುಗಳ ಬಗ್ಗೆಯೂ ಪಾರದರ್ಶಕ ತನಿಖೆ ನಡೆದಿಲ್ಲ. ಒಟ್ಟಿನಲ್ಲಿ ಬಡವರ ಸಾವುಗಳಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ. ಮತ್ತೆ ಸೌಜನ್ಯ ಪ್ರಕರಣ ಮರು ತನಿಖೆ ನಡೆದು, ಅಪರಾಧಿಗಳು ಅದೆಷ್ಟೇ ದೊಡ್ಡವರ ಮಕ್ಕಳಾದರೂ ಶಿಕ್ಷೆ ಅನುಭವಿಸುವಂತಾಗಬೇಕು.
