ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

Date:

Advertisements
ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ ವಿದ್ಯಮಾನಗಳ ವಿಚಾರವಾಗಿ ತಮ್ಮದೇ ನೆಲೆಯಲ್ಲಿ ದನಿ ಎತ್ತಿವೆ. ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಜನರು ಒಂದು ಸಂಗತಿಯ ಪರ ಮಾತನಾಡುತ್ತಿರುವುದು ಮಹತ್ವದ ವಿದ್ಯಮಾನ. 

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕನೊಬ್ಬ ನೀಡಿದ ದೂರಿನ ಮೇರೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಗಿ ಕಾರ್ಯಾಚರಣೆ ಚುರುಕಾಗಿದೆ. ಇದೇ ಹೊತ್ತಿನಲ್ಲಿ ಹಲವು ಊಹಾಪೋಹಗಳನ್ನು ಹರಿಬಿಡುವ ಪ್ರಯತ್ನಗಳಾಗುತ್ತಿವೆ. “ಧರ್ಮಸ್ಥಳ ದೇವಸ್ಥಾನದ ವಿರುದ್ಧ ಕಮ್ಯುನಿಸ್ಟರು ಮತ್ತು ಮುಸ್ಲಿಮರು ಸಂಚು ರೂಪಿಸಿದ್ದಾರೆ” ಎಂಬ ನರೇಟಿವ್ ಕಟ್ಟುವ ದುಷ್ಟತನಗಳು ಮುನ್ನೆಲೆಗೆ ಬಂದಿರುವುದು ಖಂಡನೀಯ.

ಪತ್ರಕರ್ತ ಎಂದು ಕರೆಸಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳುತ್ತಾ, ಗೂಗಲ್‌ ಮ್ಯಾಪ್‌ ಚಿತ್ರವನ್ನು ಅದಕ್ಕೆ ಅಂಟಿಸಿ, “ನೀಲಿ ಗುರುತಿನಲ್ಲಿ ಕಾಣಿಸುವುದು ಧರ್ಮಸ್ಥಳ. ಕೆಂಪು ಗುರುತಿನಲ್ಲಿ ಕಾಣಿಸುತ್ತಿರುವುದು ಮಸೀದಿ. ಧರ್ಮಕ್ಷೇತ್ರವನ್ನು ಮತಾಂಧರು ಸುತ್ತುವರೆಯುತ್ತಿರುವ ಪರಿಯನ್ನು ನೀವು ಸೂಕ್ಷ್ಮವಾಗಿ ಗಮನಿಸಿ, ಆ ನಂತರ ಆಲೋಚಿಸಿ. ಎಸ್‌ಡಿಪಿಐ ಹೋರಾಟಕ್ಕೆ ಧುಮುಕಿದ್ದು ಏಕೆ ಅಂತ ಅರ್ಥಮಾಡಿಕೊಳ್ಳಬೇಕು” ಎಂದು ಬರೆದಿದ್ದಾರೆ. ಧರ್ಮಸ್ಥಳದ ಸುತ್ತ ಮಸೀದಿಗಳು ಪಿತೂರಿ ಮಾಡುತ್ತಿವೆ ಎಂದು ಹಬ್ಬಿಸುತ್ತಿರುವ ಈ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಗೂಗಲ್ ಮ್ಯಾಪ್‌ನಲ್ಲಿ ‘ಧರ್ಮಸ್ಥಳ ಸಮೀಪದ ಮಸೀದಿಗಳು’ ಎಂದು ಸರ್ಚ್ ಮಾಡಿದರೆ, ಅದನ್ನು ಹೆಕ್ಕಿ ತೋರಿಸುತ್ತದೆ. ಹಾಗೆಯೇ ‘ಧರ್ಮಸ್ಥಳ ಸಮೀಪದ ದೇವಾಲಯಗಳು’ ಎಂದು ಸರ್ಚ್ ಮಾಡಿದರೆ, ದೇವಾಲಯಗಳನ್ನಷ್ಟೇ ಆಯ್ದು ತೋರಿಸುತ್ತದೆ. ಇದು ಸಾಮಾನ್ಯ ತಿಳಿವಳಿಕೆ. ಇಂತಹ ಪೋಸ್ಟ್ ಹಂಚಿಕೊಂಡಿರುವ ಪತ್ರಕರ್ತನಿಗೆ ಇಷ್ಟು ತಿಳಿಯದೆ ಇರುವುದಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಜನರನ್ನು ಪ್ರಚೋದಿಸುವ ಉದ್ದೇಶ ಇಂಥವರಿಗೆ ಇರುತ್ತದೆ.

ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ. ಹಲ್ಲೆಗೆ ಒಳಗಾದ ಯೂಟ್ಯೂಬರ್‌ಗಳನ್ನು ಭೇಟಿ ಮಾಡಿ ಎಸ್‌ಡಿಪಿಐ ನಿಯೋಗ ಮಾತನಾಡಿದ್ದು ಪಕ್ಷದ ಕರ್ತವ್ಯ. ಸತ್ಯ ಹೊರಬರಲಿ ಎಂದು ಹೋರಾಟ ಮಾಡುವುದೂ ಅನ್ನ ತಿನ್ನುವ ಎಲ್ಲ ಜನರ ಆಗ್ರಹ. ಎಸ್‌ಡಿಪಿಐ ರೀತಿಯಲ್ಲಿಯೇ ಕಾಂಗ್ರೆಸ್, ಬಿಜೆಪಿ ಮುಖಂಡರೇಕೆ ದನಿ ಎತ್ತುತ್ತಿಲ್ಲ ಎಂಬುದು ಮುಖ್ಯವಾಗಬೇಕೇ ಹೊರತು, ಮುಸ್ಲಿಂ ಮುಖಂಡರು ಹೆಚ್ಚಿರುವ ಎಸ್‌ಡಿಪಿಐ ಮೇಲೆ ಆರೋಪ ಹೊರಿಸುವುದು ಅವಿವೇಕತನವಾಗುತ್ತದೆ.

Advertisements

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪಾಠ ಕಲಿಯದ ಪ್ರಜ್ವಲ್‌, ಕಲಿಸಿದ್ದು ಯಾರಿಗೆ?

ಸೌಜನ್ಯ ಪ್ರಕರಣದ ತೀರ್ಪು ಹೊರಬಿದ್ದು, ಸಂತೋಷ್ ರಾವ್ ನಿರಪರಾಧಿ ಎಂದು ಗೊತ್ತಾದ ಬಳಿಕ ನಿಜವಾದ ತಪ್ಪಿತಸ್ಥರನ್ನು ಹುಡುಕುವಂತೆ ಆಕ್ರೋಶ ಭುಗಿಲೆದ್ದಿತು. ತೀವ್ರವಾಗಿದ್ದ ‘ಜಸ್ಟಿಸ್ ಫಾರ್ ಸೌಜನ್ಯ’ ಚಳವಳಿ ಒಮ್ಮೆ ಬಿರುಗಾಳಿಯಂತೆ ಎದ್ದು ತಣ್ಣಗಾಗಿತ್ತು. ಇಂತಹ ಸಂದರ್ಭದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ಅವರು ‘ಸೌಜನ್ಯ ಕೇಸ್’ ಕುರಿತು ಮಾಡಿದ ವಿಡಿಯೊ ರಾಜ್ಯದ ಮನೆಮಾತಾಯಿತು. ಸಮೀರ್ ಒಬ್ಬ ಮುಸ್ಲಿಂ ಆದಕಾರಣ, ಇದೊಂದು ಜಿಹಾದಿಗಳ ಸಂಚು ಎಂದು ಬಿಂಬಿಸಲು ಯತ್ನಿಸಲಾಯಿತು. ಆದರೆ ಸೌಜನ್ಯ ಪರ ಹೋರಾಟಗಾರರು ಸಮೀರ್ ಪರ ನಿಂತಿದ್ದು ನ್ಯಾಯೋಚಿತವಾಗಿತ್ತು. ಒಬ್ಬ ಮುಸ್ಲಿಂ ಹುಡುಗ ಹೋರಾಟದ ಭಾಗವಾದನು.

ಸಮೀರ್ ಪ್ರಶ್ನಿಸಲಿ, ಮತ್ಯಾರೇ ಪ್ರಶ್ನಿಸಲಿ, ಅಲ್ಲೊಂದು ಹುಳುಕು ಹುಡುಕುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ತಿಮರೋಡಿಯವರ ಚಾರಿತ್ರ್ಯಹರಣ ಮಾಡುವ ಯತ್ನಗಳು ಈ ಹಿಂದೆ ಆಗಿದ್ದವು. ಈಗ ಧರ್ಮವನ್ನು ಹಿಡಿದುಕೊಂಡು ಹೊರಟಿದ್ದಾರೆ. ಆದರೆ ಅಷ್ಟು ಸುಲಭವಾಗಿ ಈ ಪ್ರಕರಣವನ್ನು ಹಿಂದೂ-ಮುಸ್ಲಿಂ ಕಲಹವೆಂದು ಬಿಂಬಿಸಲು ಸಾಧ್ಯವಿಲ್ಲ. ಯಾಕೆಂದರೆ ಧರ್ಮಸ್ಥಳದ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಸಶಕ್ತವಾಗಿ ತನಿಖೆಯಾಗಲಿ ಎಂದು ನಿಂತಿರುವುದು ಹಿಂದುತ್ವದ ಮತ್ತೊಂದು ಗುಂಪು ಎಂಬುದನ್ನು ಗಮನಿಸಬೇಕು.‌ ಮಹೇಶ್ ಶೆಟ್ಟಿ ತಿಮರೋಡಿಯವರು ಹಿಂದೂ ಜಾಗರಣಾ ವೇದಿಕೆಯಲ್ಲಿ ಗುರುತಿಸಿಕೊಂಡವರು. “ಇದನ್ನು ಹಿಂದೂ-ಮುಸ್ಲಿಂ ನಡುವಿನ ಕಲಹವಾಗಿ ಬಿಂಬಿಸುವ ಕೃತ್ಯದ ಹಿಂದೆ ಎಸ್.ಐ.ಟಿ ತನಿಖೆಯನ್ನು ನಿಲ್ಲಿಸುವ ಹುನ್ನಾರವಿದೆ, ಕೋಮುಗಲಭೆ ಸೃಷ್ಟಿಸುವ ಸಂಚಿದೆ” ಎನ್ನುತ್ತಾರೆ ತಿಮರೋಡಿ.

ಯಾವ ಮುಸ್ಲಿಂ ಧಾರ್ಮಿಕ ಗುರುಗಳು ಈ ಪ್ರಕರಣಗಳ ಸಂಬಂಧ ಮಾತನಾಡಿಲ್ಲ. ಆದರೂ ಮುಸ್ಲಿಮರನ್ನು ತೋರಿಸುತ್ತಿರುವುದು ಏತಕ್ಕೆ? ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಉದ್ದೇಶವಿದೆಯೇ? ಇಂತಹ ಕಲ್ಪಿತ ಸಿದ್ಧಾಂತಗಳ ಹಿಂದೆ ಯಾರಿದ್ದಾರೆ? ಎಂದು ಪ್ರತಿಯೊಬ್ಬ ನಾಗರಿಕನೂ ಕೇಳಬೇಕಾಗುತ್ತದೆ.

ಧರ್ಮಸ್ಥಳ ವಿಚಾರವಾಗಿ ದಕ್ಷಿಣ ಕನ್ನಡದ ಹಿಂದುತ್ವದೊಳಗೆ ಎರಡು ಗುಂಪುಗಳು ಕಂಡು ಬರುತ್ತವೆ. ಸತ್ಯವೇನೆಂದು ತಿಳಿಯಬೇಕೆಂದು ಬಯಸುವ ದೊಡ್ಡ ಮಟ್ಟದ ಸಾಮಾನ್ಯ ಜನರಿರುವ ಹಿಂದುತ್ವ ಗುಂಪು ಮಹೇಶ್ ಶೆಟ್ಟಿ ತಿಮರೋಡಿಯವರ ಹೋರಾಟಕ್ಕೆ ಬೆಂಬಲಿಸುತ್ತಿದ್ದರೆ, ದೆಹಲಿಯವರೆಗೆ ಪ್ರಭಾವವನ್ನು ಹೊಂದಿರುವ ಹಾಗೂ ಹಣವಂತರನ್ನು ಬೆಂಬಲಿಸುವ, ರಾಜಕಾರಣಿಗಳಿರುವ ಹಿಂದುತ್ವ ಗುಂಪು ಮತ್ತೊಂದೆಡೆ ನಿಂತಿದೆ. ಜನರ ದಿಕ್ಕು ತಪ್ಪಿಸಲೆಂದೇ ಪ್ರಭಾವಿಗಳು ಹಿಂದುತ್ವವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆಂದು ಇಲ್ಲಿನ ಸಾಮಾನ್ಯ ಜನರಿಗೆ ಅನಿಸತೊಡಗಿದೆ. ಆದರೆ ಒಮ್ಮೆಲೇ ಬಿಜೆಪಿ ರಾಜಕಾರಣಿಗಳು, ಮುಖಂಡರು ಹಾಗೂ ಕೆಲವು ಮುಖ್ಯವಾಹಿನಿ ಮಾಧ್ಯಮಗಳು, “ಧರ್ಮಸ್ಥಳದ ಮೇಲೆ ಜಿಹಾದಿ ಸಂಚು ನಡೆಯುತ್ತಿದೆ, ಕಮ್ಯುನಿಸ್ಟರು ಇದರ ಹಿಂದೆ ಇದ್ದಾರೆ” ಎಂದು ಅಬ್ಬರಿಸಿ, ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಂತೆ ಕಾಣುತ್ತಿದೆ. ಇದನ್ನು ದಕ್ಷಿಣ ಕನ್ನಡದ ಜನರು ಪ್ರಹಸನವೆಂಬಂತೆ ನೋಡುತ್ತಿದ್ದಾರೆ. ಆದರೆ ಇಡೀ ರಾಜ್ಯದ ಜನರನ್ನು ನಂಬಿಸುವ ಕಸರತ್ತು ಇಲ್ಲಿರುವುದು ಕಣ್ಣಿಗೆ ರಾಚುತ್ತದೆ.

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ ವಿದ್ಯಮಾನಗಳ ವಿಚಾರವಾಗಿ ತಮ್ಮದೇ ನೆಲೆಯಲ್ಲಿ ದನಿ ಎತ್ತಿವೆ. ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಜನರು ಒಂದು ಸಂಗತಿಯ ಪರ ಮಾತನಾಡುತ್ತಿರುವುದು ಮಹತ್ವದ ವಿದ್ಯಮಾನ. ಕೋಮು ಸಾಮರಸ್ಯ ಹೆದಗೆಟ್ಟು, ತನ್ನ ಮೂಲ ಸೌಹಾರ್ದತೆಯ ಗುಣವನ್ನು ಕಳೆದುಕೊಳ್ಳುತ್ತಿದ್ದ ಕರಾವಳಿ ಜನರನ್ನು ಮತ್ತೆ ಒಂದುಗೂಡಿಸಲು ‘ಸೌಜನ್ಯ ಎಂಬ ಮಹಾಶಕ್ತಿ’ ಬರಬೇಕಾಯಿತು ಎನ್ನುವ ಭಾವನೆ ಅನೇಕರಲ್ಲಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಗಾಜಾದ ಮಾನವೀಯ ದುರಂತಕ್ಕೆ ಜಗತ್ತಿನ ನಿರ್ಲಜ್ಜ ಕುರುಡು-ಮೌನ

”ಸೌಜನ್ಯ, ವೇದವಲ್ಲಿ, ಪದ್ಮಲತಾ, ಆನೆಮಾವುತ ನಾರಾಯಣ ಮತ್ತು ಯುಮುನಾ ಇವರೆಲ್ಲ ಹಿಂದೂಗಳಲ್ಲವಾ? ಈ ಪಾಪದ ಜೀವಗಳು ಹೇಗೆ ಸತ್ತವು? ಈ ಸಂಬಂಧ ದನಿ ಎತ್ತಿದರೆ ಮುಸ್ಲಿಂ ಪಿತೂರಿ ಹೇಗಾಗುತ್ತದೆ?” ಎಂದು ಮಹೇಶ್ ಶೆಟ್ಟಿ ತಿಮರೋಡಿಯವರೂ ಕೇಳುತ್ತಾರೆ, ಮತ್ತೊಂದೆಡೆ ಎಡಪಂಥೀಯರೂ ಕೇಳುತ್ತಾರೆ. ಅಷ್ಟೇ ಅಲ್ಲ ಧರ್ಮಸ್ಥಳದ ದೇವಾಲಯ ಸಂಬಂಧ ಈ ಹೋರಾಟಗಾರರು ಯಾರೂ ಅಪಪ್ರಚಾರ ಮಾಡಿದ್ದಿಲ್ಲ. ಭಕ್ತರು ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಬರುವುದನ್ನು ನಿಲ್ಲಿಸಬೇಡಿ ಎಂದೇ ಹೇಳುತ್ತಾರೆ. ಹೀಗಿರುವಾಗ ಒಂದು ಗುಂಪು ಅಪಪ್ರಚಾರ ಮಾಡಿ, ಎಸ್‌ಐಟಿ ತನಿಖೆಯನ್ನು ಹಳ್ಳಹಿಡಿಸಲು ಯತ್ನಿಸುತ್ತಿದೆ ಎಂದು ಅನುಮಾನಿಸುವುದು ಸಹಜ. ಸತ್ಯ, ನ್ಯಾಯದ ಪರ ಇರುವ ಯಾರೇ ಆದರೂ ತನಿಖೆ ಪೂರ್ಣಗೊಂಡು, ನಿಜಸಂಗತಿ ಹೊರಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಬಯಸುತ್ತಾರೆ ಹೊರತು, ಇಲ್ಲಸಲ್ಲದ ನಕಲಿ ನರೇಟಿವ್‌ಗಳನ್ನು ಕಟ್ಟಲು ಹೋಗುವುದಿಲ್ಲ. ಅಂತಹ ಕೆಟ್ಟ ಸಾಹಸಗಳನ್ನು ಮಾಡಿದರೆ, ಇಂಥವರ ಮೇಲೆಯೇ ಗುಮಾನಿಗಳು ಹೆಚ್ಚಾಗುತ್ತವೆ. ಇದಕ್ಕೆ ಆಸ್ಪದ ಕೊಡುವುದು ಸರಿಯಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ

ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಯಾಕೆಂದರೆ ಅಲ್ಲಿ...

Download Eedina App Android / iOS

X