ನಕಲಿ ಸುದ್ದಿ ಯಾವುದೆಂದು ಗುರುತಿಸಿ ನಿರ್ಧರಿಸುವ ಅಧಿಕಾರವನ್ನು ಕೇವಲ ಸರ್ಕಾರಿ ಇಲಾಖೆಯೊಂದರ ಕೈಗೇ ಕೊಡುವುದು ಸೂಕ್ತವಲ್ಲ. ಅರ್ಥಪೂರ್ಣ ಸಮಾಲೋಚನೆ ನಡೆಸದೆ ರೂಪಿಸಿರುವ ಈ ನಿಯಮಗಳನ್ನು ವಾಪಸು ಪಡೆಯಬೇಕು ಎಂದು ಭಾರತೀಯ ಸಂಪಾದಕರ ಒಕ್ಕೂಟ ಆಗ್ರಹಪಡಿಸಿದೆ.
1984’ ಎಂಬುದು ಜಾರ್ಜ್ ಆರ್ವೆಲ್ 1949ರಲ್ಲಿ ಬರೆದ ಪ್ರಸಿದ್ಧ ಕಾದಂಬರಿಯ ಹೆಸರು. ಸರ್ವಾಧಿಕಾರ, ಸಾಮೂಹಿಕ ಕಣ್ಗಾವಲು ಹಾಗೂ ದಮನಕಾರಿ ಆಡಳಿತದ ಸಾಧಕ ಬಾಧಕಗಳನ್ನು ಸ್ಟ್ಯಾಲಿನ್ ನ ರಷ್ಯಾ ಮತ್ತು ಹಿಟ್ಲರನ ಜರ್ಮನಿಯನ್ನು ಕಣ್ಣ ಮುಂದಿರಿಸಿಕೊಂಡು ಬರೆದ ಕಾದಂಬರಿ. ಓಶಿಯಾನಿಯಾ ಎಂಬುದೊಂದು ಸೂಪರ್ ಸ್ಟೇಟ್. ಅಲ್ಲೊಬ್ಬ ಸರ್ವಾಧಿಕಾರಿ ನಾಯಕ ಬಿಗ್ ಬ್ರದರ್. ಜನರು ಆರಾಧಿಸುವ ವ್ಯಕ್ತಿತ್ವವನ್ನಾಗಿ ಬಿಗ್ ಬ್ರದರ್ ನನ್ನು ಕಟೆದು ನಿಲ್ಲಿಸುತ್ತದೆ ಪಕ್ಷದ ಆಲೋಚನಾ ನಿಯಂತ್ರಣ ಕೊತ್ವಾಲರೆಂದು ಕರೆಯಬಹುದಾದ ಥಾಟ್ ಪೊಲೀಸ್. ಸರ್ಕಾರದಲ್ಲಿ ಆಹಾರ, ಕಂದಾಯ, ಲೋಕೋಪಯೋಗಿ, ಶಿಕ್ಷಣ ಸಚಿವಾಲಯಗಳಿರುವಂತೆ ಸತ್ಯಕ್ಕೂ ಒಂದು ಮಂತ್ರಾಲಯ (Ministry of Truth) ರಚಿಸಲಾಗಿರುತ್ತದೆ. ಈ ಸಚಿವಾಲಯದ ಮೂರು ಪ್ರಧಾನ ಘೋಷಣೆಗಳು ಸಮರವೇ ಶಾಂತಿ (War is Peace), ಸ್ವಾತಂತ್ರ್ಯವೇ ಗುಲಾಮಗಿರಿ (Freedom is Slavery), ಅಜ್ಞಾನವೇ ಬಲ (Ignorance is Strength).
ಸತ್ಯವನ್ನು ಎತ್ತಿ ಹಿಡಿಯುವ ಸೋಗಿನ ಮರೆಯಲ್ಲಿ ಗತ ಇತಿಹಾಸವನ್ನು ಮತ್ತು ವರ್ತಮಾನದ ಸತ್ಯವನ್ನು ಅಳಿಸಿ ಹಾಕಿ ಪಕ್ಷದ ನಂಬಿಕೆಗಳು- ಉದ್ದೇಶಗಳನ್ನು ಸತ್ಯವೆಂದು ಸಾರಿ ಅವುಗಳನ್ನು ನಿಜ ಸತ್ಯದ ಜಾಗದಲ್ಲಿ ನೆಲೆಗೊಳಿಸುವುದೇ ‘1984’ನ ಸತ್ಯ ಸಚಿವಾಲಯದ ನಿಜ ಉದ್ದೇಶ. ಸತ್ಯ ಎಂಬುದು ಯಾವುದು ಮತ್ತು ಏನು ಎಂಬುದನ್ನು ಸತ್ಯ ಸಚಿವಾಲಯದ ಮಂತ್ರಿ ತೀರ್ಮಾನ ಮಾಡುತ್ತಾನೆ.
ಪಕ್ಷದ ಭಾಷೆ ಏನಿರಬೇಕು ಎಂಬುದನ್ನು ಸತ್ಯ ಸಚಿವಾಲಯವೇ ನಿರ್ಧರಿಸುತ್ತದೆ. ಭಾಷೆ ಅತ್ಯಂತ ಕನಿಷ್ಠವಾಗಬೇಕು, ಎಷ್ಟು ಕನಿಷ್ಠವಾಗಬೇಕೆಂದರೆ ಪಕ್ಷ ಅವರಿಂದ ಏನನ್ನು ಹೇಳಿಸಲು ಬಯಸುತ್ತದೆಯೋ, ಅಷ್ಟನ್ನು ಬಿಟ್ಟು ಅವರು ಯೋಚಿಸಲೂ ಸಾಧ್ಯವಿರಬಾರದು. ಪಕ್ಷಕ್ಕೆ ದ್ರೋಹ ಬಗೆಯುವುದಾಗಲಿ, ಸ್ವತಂತ್ರವಾಗಿ ಆಲೋಚಿಸುವುದಾಗಲಿ ಅಸಾಧ್ಯವೆಂಬ ಪರಿಸ್ಥಿತಿಯನ್ನು ತೀವ್ರತರ ಪ್ರಚಾರಸಮರದ (ಪ್ರಾಪಗ್ಯಾಂಡ) ಮೂಲಕ ನಿರ್ಮಿಸುವುದು ಸತ್ಯ ಸಚಿವಾಲಯದ ಕೆಲಸ.
ಸುದ್ದಿ, ಶಿಕ್ಷಣ, ಮನರಂಜನೆ ಹಾಗೂ ಲಲಿತಕಲೆಗಳನ್ನು ನಿಯಂತ್ರಿಸುವ ಜವಾಬ್ದಾರಿ ಸತ್ಯ ಸಚಿವಾಲಯದ್ದಾಗಿರುತ್ತದೆ. ವೃತ್ತಪತ್ರಿಕೆಗಳಲ್ಲಿ ಅಚ್ಚಾಗಿರುವ ಲೇಖನಗಳನ್ನು ‘ಸರಿಯಾದ’ ಮಾಹಿತಿ ಸೇರಿಸಿ ತಿದ್ದುವುದು ಮತ್ತು ಹಳೆಯ ಲೇಖನಗಳನ್ನು ತೆಗೆದು ಅವುಗಳ ಜಾಗದಲ್ಲಿ ಹೊಸ ಲೇಖನಗಳನ್ನು ಈ ಸಚಿವಾಲಯ ಇರಿಸುವ ಕೆಲಸ ಮಾಡುತ್ತಿರುತ್ತದೆ. ಸರ್ವಾಧಿಕಾರಿ ನಾಯಕ ಮತ್ತು ಪಕ್ಷ ನಿತ್ಯ ಹೊಸದಾಗಿ ಏನೇನು ಹೇಳುತ್ತಾರೋ, ಅದೆಲ್ಲಕ್ಕೆ ಅನುಗುಣವಾಗಿ ಐತಿಹಾಸಿಕ ದಾಖಲೆಗಳನ್ನು ತಿದ್ದಿ ಸತ್ಯವೆಂದು ತೋರುವಂತೆ ‘ಸರಿಪಡಿಸುವುದು’ ಸತ್ಯ ಸಚಿವಾಲಯದ ಪರಮ ಕರ್ತವ್ಯ,
‘1984’ರ ಅತ್ಯಂತ ಗಮನಾರ್ಹ ವಸ್ತುವಿಷಯ ಸೆನ್ಸರ್ ಶಿಪ್. ಪಕ್ಷವು ಇತಿಹಾಸದಿಂದ ಅಳಿಸಿ ಹಾಕಿದ ವ್ಯಕ್ತಿಗಳ ಫೋಟೋಗಳು ಮತ್ತಿತರೆ ವಿವರಗಳನ್ನು ಸುಳಿವಿಲ್ಲದಂತೆ ಅಳಿಸಿಹಾಕುವುದು ಸತ್ಯ ಸಚಿವಾಲಯದ ಕೆಲಸ. ಓಶಿಯಾನಾದ ಆರ್ಥಿಕ ಸ್ಥಿತಿ ನಿತ್ಯ ವಿಕಾಸದ ಹಾದಿಯಲ್ಲಿದೆ, ಕೈಗಾರಿಕೆ ಉತ್ಪಾದನೆ ಏರು ಹಾದಿಯಲ್ಲಿದೆ ಎಂಬುದಾಗಿ ಅತಿರಂಜಿತ ಅಂಕಿ ಅಂಶಗಳನ್ನು ಸೃಷ್ಟಿ ಮಾಡುವುದು ಈ ಸಚಿವಾಲಯದ ಕೆಲಸ. ಓಶಿಯಾನಿಯಾದ ಮಧ್ಯಮವರ್ಗಗಳು ಮತ್ತು ಮೇಲ್ಮಧ್ಯಮ ವರ್ಗಗಳ ಮನೆಗಳಲ್ಲಿ ಟೆಲಿ ಪರದೆಗಳನ್ನು ಅಳವಡಿಸಲಾಗಿರುತ್ತದೆ. ಅವುಗಳಲ್ಲಿ ಧ್ವನಿವರ್ಧಕಗಳನ್ನು ಅಡಗಿಸಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕ ಸ್ಥಳಗಳೂ ಮತ್ತು ಉದ್ಯೋಗಗಳ ಜಾಗೆಗಳಲ್ಲಿಯೂ ಇಡಲಾಗಿರುತ್ತದೆ. ಇವುಗಳು ಏಕಕಾಲಕ್ಕೆ ಸರ್ವಾಧಿಕಾರಿ ಸರ್ಕಾರದ ಪರವಾಗಿ ಪ್ರಾಪಗ್ಯಾಂಡ ನಡೆಸುವ ಮತ್ತು ಪ್ರಜೆಗಳ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿರುತ್ತವೆ. ಕಾಗದಪತ್ರಗಳನ್ನು ತೆರೆದು ಓದಿದ ನಂತರವೇ ಬಟವಾಡೆ ಮಾಡಲಾಗುತ್ತದೆ. ಬುಡಮೇಲು ಮನಸ್ಥಿತಿ ಹೊಂದಿರುವ ವ್ಯಕ್ತಿಗಳ ಮೇಲೆ ಕಣ್ಣಿಟ್ಟು ಸರ್ಕಾರಕ್ಕೆ ವರದಿ ಮಾಡಲು ಛದ್ಮವೇಷದ ಥಾಟ್ ಪೊಲೀಸರು ಇರುತ್ತಾರೆ.
ಬಂಡಾಯದ ಸಣ್ಣಪುಟ್ಟ ಸೂಚನೆ ಕೂಡ, ಅನುಮಾನ ವ್ಯಕ್ತಪಡಿಸುವ ಮುಖಚಹರೆ ಹೊಂದಿದ್ದರೆ ಅದನ್ನೇ ಬಂಡಾಯವೆಂದು ಪರಿಗಣಿಸಿ ತಕ್ಷಣ ಬಂಧಿಸಿ ಜೈಲಿಗೆ ಹಾಕಲಾಗುತ್ತಿರುತ್ತದೆ. ಹೀಗಾಗಿ ಪ್ರಜೆಗಳು ಸದಾ ವಿಧೇಯರಾಗಿರಬೇಕಾಗಿರುತ್ತದೆ.
ನಾನು ಬಣ್ಣಿಸಿರುವ ಸಮಾಜ ವಾಸ್ತವವಾಗಿ ಮೈ ತಳೆದೇ ತೀರುತ್ತದೆ ಎಂಬುದು ನನ್ನ ನಿಲುವಲ್ಲ. ಆದರೆ ಇಂತಹುದನ್ನು ಹೋಲುವುದು ಬರಬಹುದು ಎನ್ನುತ್ತಾನೆ ಆರ್ವೆಲ್.
ಮೊನ್ನೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯಿದೆಗೆ ತಿದ್ದುಪಡಿಗಳನ್ನು ತಂದಿತು. ಈ ತಿದ್ದುಪಡಿಗಳು ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರದ ಕುರಿತು ಪ್ರಕಟವಾಗುವ ಫೇಕ್ ನ್ಯೂಸ್ ಅಥವಾ ನಕಲಿ ಸುದ್ದಿಗಳನ್ನು ಗುರುತಿಸಿ ಪರೀಕ್ಷಿಸಿ ಸತ್ಯಾಂಶಗಳ ಜೊತೆಗಿಟ್ಟು ತಾಳೆ ನೋಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿವೆ. ಜಾಲತಾಣಗಳಲ್ಲಿ ವ್ಯಕ್ತಿಗಳು ಬರೆಯುವ ಪ್ರತಿಕ್ರಿಯೆಯ ಟೀಕೆ ಟಿಪ್ಪಣಿಗಳು, ಸುದ್ದಿ ವರದಿಗಳು, ಸರ್ಕಾರದ ಕುರಿತು ಬರೆಯುವ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರದ ಇಲಾಖೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಪರೀಕ್ಷೆಗೆ ಒಳಪಡಿಸುತ್ತದೆ ಮತ್ತು ಅಗತ್ಯ ಬಿದ್ದರೆ ಈ ಎಲ್ಲ ಸುದ್ದಿಗಳು, ಪ್ರತಿಕ್ರಿಯೆಗಳು ಅಭಿಪ್ರಾಯಗಳನ್ನು ಸೆನ್ಸಾರ್ ಗೆ ಗುರಿಪಡಿಸಿ ತೆಗೆದು ಹಾಕುತ್ತದೆ. ತಿದ್ದುಪಡಿಯ ಪ್ರಕಾರ ರೂಪಿಸಿರುವ ಈ ನಿಯಮಗಳನ್ನು 2023ರ ಐಟಿ ನಿಯಮಗಳು ಎಂದು ಕರೆಯಲಾಗಿದೆ. ಸಂವಿಧಾನಬಾಹಿರ ಸೆನ್ಸಾರ್ ಶಿಪ್ ಅಧಿಕಾರವನ್ನು ಈ ನಿಯಮಗಳು ಸರ್ಕಾರಕ್ಕೆ ನೀಡಿವೆ.
ನಕಲಿ ಅಥವಾ ಫೇಕ್ ಅಥವಾ ತಪ್ಪುದಾರಿಗೆಳೆಯುವ ಸುದ್ದಿ- ಮಾಹಿತಿ ಯಾವುದು ಎಂದು ಈ ನಿಯಮಗಳು ನಿರ್ದಿಷ್ಟವಾಗಿ ವ್ಯಾಖ್ಯಾನ ಮಾಡಿಲ್ಲ. ಅದೇ ರೀತಿ ಇಂತಹ ಸುದ್ದಿ ಮಾಹಿತಿಗಳನ್ನು ಪರೀಕ್ಷಿಸಿ ಸೆನ್ಸಾರ್ ಮಾಡುವ ಸರ್ಕಾರಿ ಪ್ರಾಧಿಕಾರದ ಅರ್ಹತೆಗಳು ಅಥವಾ ವಿಚಾರಣೆ ಪ್ರಕ್ರಿಯೆಗಳನ್ನೂ ಈ ನಿಯಮಗಳು ನಿರ್ದಿಷ್ಟವಾಗಿ ಸೂಚಿಸಿಲ್ಲ.
ನಕಲಿ ಸುದ್ದಿ ಯಾವುದೆಂದು ಗುರುತಿಸಿ ನಿರ್ಧರಿಸುವ ಅಧಿಕಾರವನ್ನು ಕೇವಲ ಸರ್ಕಾರಿ ಇಲಾಖೆಯೊಂದರ ಕೈಗೇ ಕೊಡುವುದು ಸೂಕ್ತವಲ್ಲ. ಅರ್ಥಪೂರ್ಣ ಸಮಾಲೋಚನೆ ನಡೆಸದೆ ರೂಪಿಸಿರುವ ಈ ನಿಯಮಗಳನ್ನು ವಾಪಸು ಪಡೆಯಬೇಕು ಎಂದು ಭಾರತೀಯ ಸಂಪಾದಕರ ಒಕ್ಕೂಟ ಆಗ್ರಹಪಡಿಸಿದೆ. ತನ್ನ ವಿರುದ್ಧದ ಟೀಕೆಗಳನ್ನು ಸೆನ್ಸಾರ್ ಮಾಡಲೆಂದೇ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ ಟೀಕಿಸಿದೆ.
ಸಂವಿಧಾನವು ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಮಾಡುವುದೇ ಅಲ್ಲದೆ, ತಾನು ಪ್ರತಿಪಾದಿಸುವ ಸತ್ಯವೇ ಸಾರ್ವತ್ರಿಕ ಸತ್ಯ ಎಂದು ಬಿಂಬಿಸುವ ಹುನ್ನಾರ ಈ ನಿಯಮಗಳ ಹಿಂದೆ ಅಡಗಿರುವುದು ನಿಚ್ಚಳ. ಫೇಕ್ ನ್ಯೂಸ್ ಅಥವಾ ನಕಲಿ ಸುದ್ದಿಯ ಪಿಡುಗು ಜನತಂತ್ರದ ಗಂಡಾಂತರ ಮತ್ತು ಅಸಲಿ ಸುದ್ದಿಯ ಆವರಣವನ್ನು ನಾಶ ಮಾಡಿ, ಜನರ ಆಲೋಚನಾ ಶಕ್ತಿ ಮತ್ತು ಪ್ರಶ್ನಿಸುವ ಮನಸ್ಥಿತಿಗೆ ಗ್ರಹಣ ಹಿಡಿಸುತ್ತದೆ ಎಂಬುದು ಸತ್ಯ. ಆದರೆ ಫೇಕ್ ನ್ಯೂಸ್ ಯಾವುದು ಎಂಬುದನ್ನು ವ್ಯಾಖ್ಯಾನ ಮಾಡದೆ ಅದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಸಾಚಾ ಟೀಕೆ ಟಿಪ್ಪಣಿಗಳನ್ನು ಸೆನ್ಸಾರ್ ಮಾಡುವುದು ಸಲ್ಲದು.
ಮಾಧ್ಯಮಗಳನ್ನು ಪ್ರತಿನಿಧಿಸುವ ಸಂಘ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರವೇ ಈ ನಿಯಮಗಳನ್ನು ರೂಪಿಸತಕ್ಕದ್ದು. ಅಲ್ಲಿಯತನಕ 2023ರ ಐಟಿ ನಿಯಮಗಳನ್ನು ಅಮಾನತಿನಲ್ಲಿ ಇರಿಸಬೇಕು.
