ಚುನಾವಣೆ ವೇಳೆ ಮಾತು ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಹಣಕಾಸು ಹೊಂದಿಸಿಕೊಳ್ಳುವತ್ತ ಗಂಭೀರ ಲೆಕ್ಕಾಚಾರಗಳನ್ನು ನಡೆಸಬೇಕಿರುವ ರಾಜ್ಯ ಸರ್ಕಾರ, ಏರ್‌ಲೈನ್ಸ್ ಸ್ಥಾಪನೆಯ ದುಬಾರಿ ಕನಸು ಕಾಣುತ್ತಿರುವುದು ವಿಪರ್ಯಾಸ
ರಾಜ್ಯದ ನಾನಾ ನಗರಗಳ ನಡುವೆ ವಿಮಾನಯಾನ ಸೇವೆಗೆಂದು ಸ್ವಂತ ಏರ್‌ಲೈನ್ಸ್ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈ ವಿಷಯವನ್ನು ಖುದ್ದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಖಚಿತಪಡಿಸಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಎರಡು ವಿಮಾನ ಸಂಚರಿಸಿದ ಕೂಡಲೇ ರಾಜ್ಯ ಸರ್ಕಾರಕ್ಕೆ ಇಂಥದ್ದೊಂದು ದುಬಾರಿ ಕನಸು ಶುರುವಾಗಿರುವುದು ಸೋಜಿಗ.
ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಪೈಕಿ, ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿ ಇರುವುದು ಶಿವಮೊಗ್ಗ ನಿಲ್ದಾಣ ಮಾತ್ರ. ಇದರೊಟ್ಟಿಗೆ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳ (ವಿಜಯಪುರ, ಬಳ್ಳಾರಿ, ಕಾರವಾರ, ಹಾಸನ) ನಿರ್ವಹಣೆ ವಹಿಸಿಕೊಳ್ಳುವುದು, ಅದಕ್ಕಾಗಿ ರಾಜ್ಯ ಮಟ್ಟದ ವಿಮಾನ ನಿಲ್ದಾಣ ಪ್ರಾಧಿಕಾರ ರಚಿಸುವುದು, ಮುಂದುವರಿದ ಭಾಗವಾಗಿ ವಿಮಾನಯಾನ ಸಂಸ್ಥೆ ಸ್ಥಾಪನೆ ಮಾಡುವುದು ಸದ್ಯಕ್ಕೆ ಸರ್ಕಾರದ ಎದುರಿರುವ ಪ್ರಸ್ತಾಪ.
ಹೊಸ ಯೋಜನೆಯ ಸಂಬಂಧ, ತಮಗೆ ಆಪ್ತರೂ ಆದ ಸ್ಟಾರ್ ಏರ್‌ಲೈನ್ಸ್ ಮಾಲೀಕರ ಜೊತೆ ಚರ್ಚೆ ನಡೆಸಿರುವುದಾಗಿ ಸಚಿವ ಎಂ ಬಿ ಪಾಟೀಲ್ ಹೇಳಿಕೊಂಡಿದ್ದಾರೆ. ಆದರೆ, ಸಚಿವರ ಆಪ್ತರ ಈ ವಿಮಾನಯಾನ ಸಂಸ್ಥೆಯ ಸೇವೆ ಶುರುವಾಗಿದ್ದೇ ನಾಲ್ಕು ವರ್ಷಗಳ ಹಿಂದೆ. ಅದಕ್ಕಿಂತ ಮುಖ್ಯವಾಗಿ, ಸ್ಟಾರ್ ಏರ್‌ಲೈನ್ಸ್‌ನ ಸೇವಾ ಗುಣಮಟ್ಟಕ್ಕೆ ಪ್ರಯಾಣಿಕರು ಇದುವರೆಗೂ ಕೊಟ್ಟಿರುವ ಅಂಕ ಹತ್ತಕ್ಕೆ ಆರು ಮಾತ್ರ. ಇನ್ನು, ಏರ್ ಇಂಡಿಯಾ ಸಂಸ್ಥೆಯ ಮಾಜಿ ಅಧಿಕಾರಿಗಳೊಂದಿಗೂ ಸಚಿವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸ್ವತಃ ಏರ್ ಇಂಡಿಯಾ ಸಂಸ್ಥೆ ಈಗಾಗಲೇ ಟಾಟಾ ಸಂಸ್ಥೆಯ ಪಾಲಾಗಿದೆ. ಹಾಗಾಗಿ, ಈ ಚರ್ಚೆಗಳಿಂದ ಸಚಿವರಿಗೆ ನಿಜಕ್ಕೂ ವಾಸ್ತವ ಚಿತ್ರಣ ಸಿಕ್ಕಿರಬಹುದೇ ಎಂಬ ಪ್ರಶ್ನೆ ಇದೆ.
ಶಿವಮೊಗ್ಗದಲ್ಲಿ ತರಾತುರಿಯಲ್ಲಿ ಉದ್ಘಾಟನೆಯಾದ ವಿಮಾನ ನಿಲ್ದಾಣದಲ್ಲಿ ನಾಲ್ಕು ತಿಂಗಳಾದರೂ ವಿಮಾನ ಕಾಣಿಸಿಕೊಂಡಿರಲಿಲ್ಲ. ಇದೀಗ ಇಂಡಿಗೋ ವಿಮಾನ ಹಾರಾಟ ಸೇವೆ ಶುರುವಾಗಿದ್ದು, ಸದ್ಯಕ್ಕೆ ಎಲ್ಲ ಟಿಕೆಟ್‌ಗಳೂ ಬಿಕರಿಯಾಗಿವೆ ಎಂದು ಹೇಳಲಾಗಿದೆ. ಆದರೆ, ಪರಿಸ್ಥಿತಿ ಮುಂದೆಯೂ ಹೀಗೆಯೇ ಇರಲಿದೆ ಎಂಬ ಸಾಧ್ಯತೆ ಖಂಡಿತ ಇಲ್ಲ. ಏಕೆಂದರೆ, ಆರಂಭದಲ್ಲಿ ಇಂಥದ್ದೇ ಉಮೇದಿನಲ್ಲಿ ಮೈಸೂರು-ಬೆಂಗಳೂರು ನಡುವೆ ಸೇವೆ ಆರಂಭಿಸಿದ್ದ ಅಲಯನ್ಸ್ ಏರ್ ಸಂಸ್ಥೆ, ನಂತರದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಇದಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಕೊರತೆ. ಮೈಸೂರು-ಬೆಳಗಾವಿ ನಡುವಿನ ವಿಮಾನಯಾನ ಸೇವೆ ಕೂಡ ಇದೇ ಕಾರಣಕ್ಕೆ ರದ್ದಾಯಿತು. ಇದೆಲ್ಲವನ್ನೂ ರಾಜ್ಯ ಸರ್ಕಾರ, ಸಚಿವ ಎಂ ಬಿ ಪಾಟೀಲ್ ಇಷ್ಟು ಬೇಗ ಮರೆತಿದ್ದಾರೆಯೇ? ಅಥವಾ ಇದೆಲ್ಲ ತಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ ಎಂಬ ಉಡಾಫೆಯೇ?
ಈ ಆಡಿಯೊ ಕೇಳಿದ್ದೀರಾ?: ನಮ್ ಜನ | ಕೋಲೆ ಬಸವನೊಂದಿಗೆ ಬೀದಿಯಲ್ಲಿ ಬದುಕುವ ನೆಲೆ ಇಲ್ಲದ ಅಲೆಮಾರಿಗಳು
ದೇಶದಲ್ಲಿ ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಏಕೈಕ ಏರ್‌ಲೈನ್ಸ್ ಸಂಸ್ಥೆಯಾಗಿ ಉಳಿದುಕೊಂಡಿರುವುದು ಕೇರಳದ ‘ಏರ್ ಕೇರಳ.’ ಈಗಿನ ಕರ್ನಾಟಕ ಸರ್ಕಾರದಂತೆಯೇ 2006ರಲ್ಲಿ ಕೇರಳ ಸರ್ಕಾರ ಬಹಳ ಉತ್ಸಾಹದಲ್ಲಿ ಈ ಸಂಸ್ಥೆ ಸ್ಥಾಪಿಸಿತಾದರೂ, ಇದುವರೆಗೆ ಒಂದೂ ವಿಮಾನ ಸೇವೆ ಒದಗಿಸಲಾಗಿಲ್ಲ. ಕೇರಳಕ್ಕಾದರೂ, ಅಲ್ಲಿನ ಜನರ ಕೊಲ್ಲಿ ದೇಶಗಳೊಂದಿಗಿನ ಔದ್ಯಮಿಕ ನಂಟು ನೆರವಿಗೆ ಬಂದೀತು. ಅಲ್ಲದೆ, ಕತಾರ್ ಏರ್‌ವೇಯ್ಸ್, ಇತಿಹಾದ್ ಏರ್‌ಲೈನ್ಸ್‌ನ ಅತ್ಯಂತ ದುಬಾರಿ ಪ್ರಯಾಣ ದರಗಳಿಂದ ಬಚಾವಾಗಲು ಪ್ರಯಾಣಿಕರು ‘ಏರ್ ಕೇರಳ’ದ ಕೈ ಹಿಡಿಯುವ ಸಾಧ್ಯತೆ ಇದೆ. ಆದರೆ, ಕರ್ನಾಟಕದಲ್ಲಿ ಅಂತಹ ಯಾವುದೇ ಪ್ರಯಾಣಿಕರ ಜಾಲ ಇಲ್ಲ. ಹಾಗಾಗಿ, ಒಂದು ವೇಳೆ ಸರ್ಕಾರ ವಿಮಾನಯಾನ ಸಂಸ್ಥೆ ಆರಂಭಿಸಿದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಲಾಭದಾಯಕ ಸಮತೋಲನ ಕಂಡುಕೊಳ್ಳುವುದಂತೂ ಅಸಾಧ್ಯ.
ಚುನಾವಣೆಯಲ್ಲಿ ಮಾತು ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಹಣಕಾಸು ಹೊಂದಿಸಿಕೊಳ್ಳುವತ್ತ ಗಂಭೀರ ಲೆಕ್ಕಾಚಾರಗಳನ್ನು ನಡೆಸಬೇಕಿರುವ ರಾಜ್ಯ ಸರ್ಕಾರ, ಏರ್‌ಲೈನ್ಸ್ ಸ್ಥಾಪನೆಯ ಹಗಲುಗನಸು ಕಾಣುತ್ತಿರುವುದು ವಿಪರ್ಯಾಸ. ಈಗಾಗಲೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಿಂದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳುವ ನಿರ್ಧಾರ ಮಾಡಿ ಮುಖಭಂಗಕ್ಕೆ ಈಡಾಗಿದ್ದು ಸರ್ಕಾರಕ್ಕೆ ಸಾಲದಾಯಿತೇ? ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಕೈಗೊಳ್ಳಬಹುದಾದ ನೂರಾರು ಕೆಲಸಗಳು ಬಾಕಿ ಇವೆ. ಅದನ್ನೆಲ್ಲ ಬಿಟ್ಟು, ದೊಡ್ಡ-ದೊಡ್ಡ ಸರ್ಕಾರಗಳೇ ಏರ್‌ಲೈನ್ಸ್ ಒಡೆತನದಿಂದ ಪೆಟ್ಟು ತಿಂದು ಖಾಸಗಿಯವರಿಗೆ ವಹಿಸುತ್ತಿರುವಾಗ ರಾಜ್ಯ ಸರ್ಕಾರ ಇಂತಹ ಹೆಜ್ಜೆ ಇಟ್ಟಿರುವುದು ಮೂರ್ಖತನ. ಹೀಗಾಗಿ, ಏರ್‌ಲೈನ್ಸ್ ಸ್ಥಾಪನೆಯ ಹಗಲುಗನಸಿನಿಂದ ಹಿಂದೆ ಸರಿಯುವುದು ಎಲ್ಲ ಕೋನದಿಂದಲೂ ಒಳಿತು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ