ಈ ದಿನ ಸಂಪಾದಕೀಯ | ಮೋದಿ ಮಧ್ಯಪ್ರವೇಶಿಸಲಿ- ಕಾವೇರಿ ಬಿಕ್ಕಟ್ಟು ಬಗೆಹರಿಸಲಿ

Date:

Advertisements
ಸದ್ಯಕ್ಕೆ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ನೆಲಮಟ್ಟದ ವಾಸ್ತವಗಳನ್ನು ಅರಿತು ಸುಪ್ರೀಮ್ ಕೋರ್ಟಿಗೆ ಮರುಪರಿಶೀಲನಾ ಮನವಿಯನ್ನು ಸಲ್ಲಿಸುವಂತೆ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕು. ಜೊತೆ ಜೊತೆಗೆ ಐವರು ತಟಸ್ಥ ತಜ್ಞರ ಸಮಿತಿಯನ್ನು ರಚಿಸಬೇಕು

ಮಳೆಗಾಲ ಕೈಕೊಟ್ಟು ಕರ್ನಾಟಕದ ಜಲಾಶಯಗಳ ಸಂಗ್ರಹ ಕುಸಿಯುತ್ತಿದೆ. ತಮಿಳುನಾಡಿನೊಂದಿಗೆ ನೀರು ಹಂಚಿಕೊಳ್ಳಬೇಕಿರುವ ಕಾವೇರೀ ಜಲಾಶಯಗಳೂ ಈ ಮಾತಿಗೆ ಹೊರತಲ್ಲ. ಮುಂಬರುವ ಎರಡು ತಿಂಗಳುಗಳಲ್ಲಿ ಮಳೆಯ ಪರಿಸ್ಥಿತಿ ಸುಧಾರಿಸದೆ ಹೋದರೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಬಿಕ್ಕಟ್ಟು ತಪ್ಪದು. ಬೆಂಗಳೂರಿನ ಅಂತರ್ಜಲ ಮಟ್ಟ ತಳ ಮುಟ್ಟತೊಡಗಿದ್ದು ಕೊಳವೆ ಬಾವಿಗಳು ಖಾಲಿಯಾಗತೊಡಗಿವೆ. ಆನಂತರ ಕಾವೇರೀ ನೀರೇ ಗತಿ. 

ಕಾವೇರೀ ನೀರು ನಿರ್ವಹಣ ಪ್ರಾಧಿಕಾರದ ಆದೇಶದ ಪ್ರಕಾರ ಕರ್ನಾಟಕ ಇದೇ ಸೆಪ್ಟಂಬರ್ 27ರ ತನಕ ತಮಿಳುನಾಡಿಗೆ ನಿತ್ಯ ಸೆಕೆಂಡಿಗೆ ಐದು ಸಾವಿರ ಘನ ಅಡಿಗಳಷ್ಟು ನೀರನ್ನು ಬಿಡುಗಡೆ ಮಾಡುತ್ತಿದೆ. 27ರ ನಂತರ ಬಿಡುಗಡೆಗೆ ತಡೆ ಬಿದ್ದರೆ ರಾಜ್ಯದ ಕಾವೇರಿ ಜಲಾಶಯಗಳಲ್ಲಿ 57 ಸಾವಿರ ದಶಲಕ್ಷ ಘನ ಅಡಿಗಳಷ್ಟು (ಟಿ.ಎಂ.ಸಿ.ಎಫ್ಟಿ) ನೀರು ಉಳಿಯಲಿದೆ. ಬೆಂಗಳೂರೊಂದಕ್ಕೇ ತಿಂಗಳಿಗೆ 1.6 ಟಿ.ಎಂ.ಸಿ.ಅಡಿಗಳಷ್ಟು ನೀರಿನ ಅಗತ್ಯವಿದೆ. ಜೊತೆಗೆ ಬೆಂಗಳೂರಿನ ಸುತ್ತಮುತ್ತಲ 110 ಗ್ರಾಮಗಳಿಗೆ ನೀರು ಪೂರೈಕೆಯಾಗಬೇಕಿದೆ. ಮುಂದಿನ ಏಪ್ರಿಲ್ ತನಕ ಬೆಂಗಳೂರೊಂದರ ಕನಿಷ್ಠ ಅಗತ್ಯವೇ 9.6 ಸಾವಿರ ದಶಲಕ್ಷ ಘನ ಅಡಿಗಳಷ್ಟು. ಕೆ.ಆರ್.ಎಸ್., ಕಬಿನಿ, ಹಾರಂಗಿ, ಹೇಮಾವತೀ ಜಲಾಶಯಗಳು ಅವುಗಳ ಬದಿಯ ಪೇಟೆ ಪಟ್ಟಣ ಗ್ರಾಮಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲೇಬೇಕು. ಹೀಗಾಗಿ ಸಂಗ್ರಹದಲ್ಲಿ ಬೆಂಗಳೂರಿನ ಅಗತ್ಯ ಪೂರೈಕೆ ಅನುಮಾನ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು. ಮುಂದಿನ ಎರಡು ತಿಂಗಳಲ್ಲಿ ಮಳೆ ಬಿದ್ದರೆ ಪರಿಸ್ಥಿತಿ ಸುಧಾರಿಸೀತು, ಇಲ್ಲವಾದರೆ ಹದಗೆಡುವುದು ನಿಶ್ಚಿತ. ಇದೇ ಸೆಪ್ಟಂಬರ್ 27ರ ನಂತರವೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶ ಮುಂದುವರೆದರೆ ಪರಿಸ್ಥಿತಿ ತೀರಾ ಬಿಗಡಾಯಿಸಲಿದೆ.

ಈ ವರ್ಷ ಕಾವೇರೀ ಜಲಾನಯನದಲ್ಲಿ ಮಳೆಯ ಅಭಾವದಿಂದಾಗಿ ಒಳಹರಿವಿನಲ್ಲಿ ಶೇ.53ರಷ್ಟು ಖೋತಾ ಎದುರಿಸುತ್ತಿದೆ ಕರ್ನಾಟಕ. ಹೀಗಾಗಿ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ 15 ದಿನಗಳ ಕಾಲ ಸಾಧ್ಯವಿಲ್ಲ ಎಂಬುದು ಕರ್ನಾಟಕದ ಅಹವಾಲು. ಸುಪ್ರೀಮ್ ಕೋರ್ಟು ಈ ಮನವಿಯನ್ನು ಪುರಸ್ಕರಿಸಲಿಲ್ಲ, ಬದಲಾಗಿ ಕಾವೇರೀ ನಿರ್ವಹಣಾ ಪ್ರಾಧಿಕಾರವೇ ಈ ಬಗೆಗೆ ತಜ್ಞ ಮಾಹಿತಿ ಹೊಂದಿದ್ದು ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸಾರಿತು. ನ್ಯಾಯಾಂಗ ನಿಂದನೆಗೆ ಅಂಜಿದ ಕರ್ನಾಟಕ ನಿತ್ಯ ಐದು ಸಾವಿರ ಕ್ಯೂಸೆಕ್ ಬಿಡುಗಡೆ ಆದೇಶವನ್ನು ಪಾಲಿಸಿದೆ. ಎಲ್ಲ ಪಕ್ಷಗಳೂ ಅಧಿಕಾರದಲ್ಲಿದ್ದಾಗ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ ನೀರನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲ ಪಕ್ಷಗಳೂ ಪ್ರತಿಪಕ್ಷಗಳಾಗಿದ್ದಾಗ ನೀರು ಬಿಡುಗಡೆಯನ್ನು ವಿರೋಧಿಸಿದ್ದಾರೆ ಮತ್ತು ಬಂದ್ ಆಚರಣೆಗೆ ಕೈ ಜೋಡಿಸಿದ್ದಾರೆ. ಅನೂಚಾನವಾಗಿ ನಡೆದುಕೊಂಡು ಬಂದಿರುವ ರಾಜಕಾರಣವಿದು. ಐದು ಸಾವಿರ ಕ್ಯೂಸೆಕ್ ಬಿಡುಗಡೆಯ ಆದೇಶ ನಾಳೆಗೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆಯ ಕುರಿತು ಕಾವೇರೀ ನೀರು ನಿಯಂತ್ರಣ ಸಮಿತಿಯ ಸಭೆ ನೀರು ಬಿಡುಗಡೆಯ ಪ್ರಮಾಣವನ್ನು ನಿತ್ಯ ಐದು ಸಾವಿರದಿಂದ ಮೂರು ಸಾವಿರ ಕ್ಯೂಸೆಕ್ ಗೆ ಇಳಿಸಿದೆ. ಈಗಿನ ಸ್ಥಿತಿಯಲ್ಲಿ ಇದು ದೊಡ್ಡ ರಿಯಾಯಿತಿ ಯೇನೂ ಅಲ್ಲ. ರಾಜ್ಯದ ಕಾವೇರೀ ಕಣಿವೆಯ ರೈತರು ಮತ್ತು ರಾಜ್ಯದ ಕುಡಿಯುವ ನೀರಿನ ಅಗತ್ಯಗಳನ್ನು ನಿಯಂತ್ರಣ ಸಮಿತಿಯು ನಿರ್ಲಕ್ಷಿಸಿದಂತಿದೆ. ಕಣಿವೆಯ ಕೆಳಗಿರುವ ಫಲಾನುಭವಿ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ನೀರುಗಂಟಿಯ ಕೆಲಸವನ್ನಷ್ಟೇ ಕರ್ನಾಟಕಕ್ಕೆ ವಹಿಸಿಕೊಟ್ಟಂತಿದೆ.

Advertisements

ಕಾವೇರೀ ಸಮಸ್ಯೆ ತಲೆದೋರುವುದು ಆಗಾಗ್ಗೆ ಉಂಟಾಗುವ ಮಳೆಯ ಅಭಾವದ ವರ್ಷಗಳಲ್ಲಿ. ಕಾವೇರೀ ಜಲವಿವಾದ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ್ನು ಜಾರಿಗೊಳಿಸುವುದು ಕರ್ನಾಟಕದ ಪಾಲಿಗೆ ದುಸ್ಸಾಧ್ಯವಾಗಿ ಪರಿಣಮಿಸುತ್ತದೆ. ಮಳೆಯ ಅಭಾವದ ವರ್ಷಗಳಲ್ಲಿ ಉಂಟಾಗುವ ಕೊರತೆಯನ್ನು ಸಮನಾಗಿ ಹಂಚಿಕೊಳ್ಳುವ ಸೂತ್ರವನ್ನು ಕಾವೇರೀ ನ್ಯಾಯಾಧಿಕರಣದ ಅಂತಿಮ ಐತೀರ್ಪು ಕೂಡ ರಚಿಸದೆ ಹೋದದ್ದು ಈ ಸಮಸ್ಯೆ ಅದೆಷ್ಟು ಜಟಿಲ ಎಂಬುದನ್ನು ಸೂಚಿಸುತ್ತದೆ. ನಿರ್ದಿಷ್ಟ ಜಲವರ್ಷದಲ್ಲಿ ಉಂಟಾಗುವ ಕೊರತೆಯನ್ನು ಅಂದಾಜು ಮಾಡುವ ಸರ್ವಸಮ್ಮತ ಸೂತ್ರ ಇನ್ನಾದರೂ ರೂಪು ತಳೆಯಬೇಕಿದೆ.

ಸದ್ಯಕ್ಕೆ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ನೆಲಮಟ್ಟದ ವಾಸ್ತವಗಳನ್ನು ಅರಿತು ಸುಪ್ರೀಮ್ ಕೋರ್ಟಿಗೆ ಮರುಪರಿಶೀಲನಾ ಮನವಿಯನ್ನು ಸಲ್ಲಿಸುವಂತೆ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕು. ಜೊತೆ ಜೊತೆಗೆ ಐವರು ತಟಸ್ಥ ತಜ್ಞರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಕಾವೇರೀ ಜಲಾಶಯಗಳ ಸಂಗ್ರಹಣೆಯನ್ನು ಪರಿಶೀಲಿಸಿ ಕರ್ನಾಟಕದಿಂದ ತಮಿಳುನಾಡಿಗೆ ಮತ್ತಷ್ಟು ನೀರು ಬಿಡುಗಡೆ ಮಾಡುವುದು ಸಾಧ್ಯವೇ ಎಂಬ ಸಂಗತಿಯ ಕುರಿತು ವರದಿ ನೀಡಲಿ ಎಂಬುದಾಗಿ ಮಾಜಿ ಪ್ರಧಾನಿ ಮತ್ತು ಖುದ್ದು ಕಾವೇರೀ ಜಲವಿವಾದ ತಜ್ಞರೂ ಆಗಿರುವ ಎಚ್.ಡಿ.ದೇವೇಗೌಡ ಅವರ ಸಲಹೆ ಅತ್ಯಂತ ಸೂಕ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೋದಿಯವರ ಮಧ್ಯಪ್ರವೇಶ ಕೋರಿದ್ದಾರೆ. ಎರಡೂ ರಾಜ್ಯಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಭಾರತವು ರಾಜ್ಯಗಳ ಒಕ್ಕೂಟ ವ್ಯವಸ್ಥೆ. ಪ್ರಧಾನಮಂತ್ರಿಯವರು ಒಕ್ಕೂಟದ ಮುಖ್ಯಸ್ಥರು. ಕೇವಲ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣಗಳನ್ನು ಮಾಡುವುದು, ರೋಡ್ ಶೋಗಳನ್ನು ನಡೆಸುವುದು, ಹಿಂದೂ-ಮುಸ್ಲಿಮ್ ಧೃವೀಕರಣ ಕಾರ್ಯಸೂಚಿಯನ್ನು ಮುಂದೆ ತಂದು ಸಮಾಜವನ್ನು ಒಡೆದು ತಮ್ಮ ಮತಬ್ಯಾಂಕುಗಳನ್ನು ತುಂಬಿಸಿಕೊಳ್ಳುವುದು ಮಾತ್ರವೇ ಪ್ರಧಾನಿಯವರ ಕೆಲಸವಲ್ಲ, ತಮ್ಮ ಹುದ್ದೆಯು ಹೊಂದಿರುವ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಅವರ ಆದ್ಯ ಕರ್ತವ್ಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X