ಇದೇ ಜೂನ್ 25ರಂದು ನಡೆಯುತ್ತಿರುವ 'ದೇವನಹಳ್ಳಿ ಚಲೋ' ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ. ಹೋರಾಟವನ್ನು ಹತ್ತಿಕ್ಕುವ ಯಾವುದೇ ದುಷ್ಕೃತ್ಯ ಮಾಡದಿರಲಿ
ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಇಂತಹದೊಂದು ಚಳವಳಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. 1180 ದಿನಗಳು ನಿರಂತರ ಹೋರಾಟವನ್ನು ನಡೆಸಿರುವುದು ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಸುಲಭದ ಸಂಗತಿಯಲ್ಲ. ಭಿನ್ನ ಜಾತಿ, ಪಕ್ಷಗಳ ಹಿನ್ನಲೆಯ 13 ಗ್ರಾಮಗಳ ಜನರು ಒಟ್ಟಾಗಿ ಕೂತು, ಇಷ್ಟು ದಿನ ಹೋರಾಟದ ಕಿಚ್ಚನ್ನು ಕಾಪಿಟ್ಟುಕೊಂಡಿರುವುದು ಇಂದಿನ ದಿನಮಾನಗಳಲ್ಲಿ ಊಹಿಸುವುದೂ ಕಷ್ಟ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಇಂತಹದೊಂದು ಚಳವಳಿಯನ್ನು ನಡೆಸಿ ಎಲ್ಲರೂ ನಿಬ್ಬೆರಗಾಗುವುದಕ್ಕೆ ಕಾರಣವಾಗಿದ್ದಾರೆ. ಇಡೀ ಸರ್ಕಾರದೆದುರು ಸಟೆದು ನಿಂತು, ”ಜೀವ ಕೊಡುತ್ತೇವೆಯೇ ಹೊರತು, ಭೂಮಿ ಬಿಟ್ಟುಕೊಡುವುದಿಲ್ಲ” ಎಂದು ಸವಾಲೆಸೆದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ದೇವನಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಫಲವತ್ತಾದ ಭೂಮಿಯ ಮೇಲೆ ಯಾವುದೇ ಸರ್ಕಾರದ ಕಣ್ಣಿದೆ. ಒಂದಲ್ಲಾ ಒಂದು ಕಾರಣಕ್ಕೆ ಸರ್ಕಾರಗಳು ಇಲ್ಲಿನ ಜಮೀನುಗಳನ್ನು ವಶಕ್ಕೆ ಪಡೆದುಕೊಂಡಿವೆ. ಏರ್‌ಪೋರ್ಟ್, ಏರೋಸ್ಪೇಸ್, ಎಸ್‌ಇಜೆಡ್ ಮುಂತಾದವುಗಳಿಗೆ ಸಾವಿರಾರು ಎಕರೆ ಜಮೀನು ಬಿಟ್ಟುಕೊಟ್ಟ ರೈತರು ಈಗಾಗಲೇ ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ’ (ಕೆಐಎಡಿಬಿ)ಯ ಮೊದಲ ಹಂತದ ಭೂ ಸ್ವಾಧೀನದಲ್ಲಿಯೂ 1282 ಎಕರೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ಆದರೆ ಭೂಮಿ ಕೊಟ್ಟು ನಾವು ಪಡೆದಿದ್ದೇನು ಎಂದು ಅಂತಿಮವಾಗಿ ಎಚ್ಚೆತ್ತುಕೊಂಡರು. 2022ರಲ್ಲಿ ಮತ್ತೆ ಕೆಐಎಡಿಬಿ 1777 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ಬಂದಾಗ, ”ಇಷ್ಟು ದಿನ ತಪ್ಪು ಮಾಡಿದೆವು. ಮತ್ತೆ ಇದೇ ಪ್ರಮಾದ ಎಸಗಿ ನಮ್ಮ ಬಾಯಿಗೆ ಮಣ್ಣು ಹಾಕಿಕೊಳ್ಳುವುದಿಲ್ಲ. ನಮ್ಮ ಭೂಮಿಗೆ ಇನ್ನು ಬೆಲೆ ಕಟ್ಟಬೇಡಿ, ನಮ್ಮನ್ನು ಬದುಕಲು ಬಿಡಿ” ಎಂದು ಹೋರಾಟಕ್ಕೆ ಕೂತರು.
ಇದನ್ನೂ ಓದಿರಿ: Ground Report | ದೆಹಲಿ ರೈತ ಚಳವಳಿ ಮಾದರಿಯಲ್ಲಿ ‘ಚನ್ನರಾಯಪಟ್ಟಣ ಭೂ ಹೋರಾಟ’; ಸರ್ಕಾರಕ್ಕೆ ಜಗ್ಗದ ದಿಟ್ಟ ಜನತೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡನೇ ಹಂತದ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಕಾಂಗ್ರೆಸ್ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ, ರೈತರ ವಿರೋಧವನ್ನೂ ಲೆಕ್ಕಸದೆ ಮುಂದುವರಿದಿದೆ. ”ಕೈಗಾರಿಕೆಗಳು ಬೇಕು ನಿಜ, ಆದರೆ ಅದಕ್ಕಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಾರದು. ಚನ್ನರಾಯಪಟ್ಟಣ ಜನರ ಹೋರಾಟಕ್ಕೆ ನಮ್ಮ ಬೆಂಬಲವಿದೆ” ಎಂದು 2022ರ ಸೆಪ್ಟೆಂಬರ್‌ನಲ್ಲಿ ಫ್ರೀಡಂಪಾರ್ಕ್‌ನಲ್ಲಿ ನಡೆದ ಹೋರಾಟದ ವೇಳೆ ಸಿದ್ದರಾಮಯ್ಯ ನುಡಿದಿದ್ದರು. ಈ ಮಾತು ಆಡಿದಾಗ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ಅದ್ಯಾವ ಕಾಣದ ಕೈಗಳು ಅವರನ್ನು ಈಗ ನಿಯಂತ್ರಿಸುತ್ತಿವೆಯೋ ತಿಳಿಯದಾಗಿದೆ. “ಅನ್ನರಾಮಯ್ಯ, ಸಮಾಜವಾದಿ ಸಿದ್ದರಾಮಯ್ಯ ಎಂಬೆಲ್ಲ ಬಿರುದುಗಳು ಅವರಿಗಿವೆ. ರೈತ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರಿಗೆ ನಮ್ಮ ಒಡಲಾಳದ ಸಂಕಟ ತಿಳಿಯುತ್ತದೆ ಎಂಬ ಭರವಸೆ ಈಗಲೂ ನಮಗಿದೆ” ಎನ್ನುತ್ತಾರೆ ಇಲ್ಲಿನ ರೈತರು.
ವಿವಿಧ ರೀತಿಯ ಹೂ, ಹಣ್ಣು, ತರಕಾರಿ ಬೆಳೆಯುವಲ್ಲಿ, ಹಾಲು ಉತ್ಪಾದನೆಯಲ್ಲಿ ಚನ್ನರಾಯಪಟ್ಟಣ ರೈತರು ಯಶಸ್ಸು ಕಂಡಿದ್ದಾರೆ. ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಬೆಂಗಳೂರು ನಗರಕ್ಕೆ ಸರಬರಾಜು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಈಗಾಗಲೇ ಭೂಮಿ ಕಳೆದುಕೊಂಡವರ ಜೀವನ ಅತಂತ್ರವಾಗಿದ್ದು, ಈ ಎಲ್ಲ ಕಹಿ ಪಾಠಗಳು ಅವರ ಎದುರಿಗಿವೆ. ಸರ್ಕಾರ ಮಾತು ಕೇಳದಿದ್ದಾಗ ಹತಾಶರಾಗಿ ವಿಷಕುಡಿದು ಸಾಯುವಂತಹ ಹೋರಾಟವನ್ನೂ ನಡೆಸಿದ್ದಾರೆ. ಇದನ್ನೆಲ್ಲವನ್ನೂ ಸರ್ಕಾರ ಗಂಭೀರವಾಗಿ ನೋಡಬೇಕಾಗುತ್ತದೆ.
2013ರಲ್ಲಿ ಯುಪಿಎ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ‘ಭೂ ಸ್ವಾಧೀನ, ಪುನರ್ ವಸತಿ, ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ’ಯು ಬಲವಂತದ ಭೂಸ್ವಾಧೀನವನ್ನು ನಿರ್ಬಂಧಿಸುತ್ತದೆ. ”ಶೇ. 80ರಷ್ಟು ರೈತರು ಭೂ ಸ್ವಾಧೀನಕ್ಕೆ ಒಪ್ಪದಿದ್ದರೆ ಸರ್ಕಾರ ಆ ಸಾಹಸಕ್ಕೆ ಕೈಹಾಕುವಂತಿಲ್ಲ” ಎನ್ನುತ್ತದೆ ಕಾನೂನು. ಆದರೆ ತಮ್ಮದೇ ಪಕ್ಷದ ನೇತೃತ್ವದ ಸರ್ಕಾರ ತಂದ ಕಾಯ್ದೆಗೆ ವಿರುದ್ಧವಾಗಿ ಇಂದಿನ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ!
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಅದನ್ನು ವಿರೋಧಿಸಿ ಪಂಜಾಬ್ ಮತ್ತು ಹರ್ಯಾಣ ರೈತರು ಒಂದೂವರೆ ವರ್ಷಗಳ ಕಾಲ ದೆಹಲಿಯಲ್ಲಿ ಬೀಡುಬಿಟ್ಟು ಹೋರಾಟ ನಡೆಸಿದರು. ಅಂತಿಮವಾಗಿ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕಾಯಿತು. ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಹೋರಾಟವು ಇದಕ್ಕಿಂತ ಭಿನ್ನವಾಗಿಲ್ಲ. ಹೋಬಳಿ ಕೇಂದ್ರದಲ್ಲಿ ಹುಟ್ಟಿಕೊಂಡ ಚಳವಳಿಯ ಟೆಂಟ್ ಚಿಕ್ಕದಾಗಿರಬಹುದು, ಆದರೆ ಅದು ಹೊತ್ತಿರುವ ಜವಾಬ್ದಾರಿ ದೊಡ್ಡದು. ಮೂರೂವರೆ ವರ್ಷ ನಿರಂತರ ಚಳವಳಿಯನ್ನು ಕಾಪಿಟ್ಟುಕೊಂಡಿರುವ ಹೋರಾಟಗಾರರ ಮನೋಬಲವನ್ನು ಮತ್ತಷ್ಟು ಪರೀಕ್ಷಿಸಲು ಸರ್ಕಾರ ಹೊರಟಿದೆ. ಅಂತಿಮ ಆದೇಶದ ವಿರುದ್ಧ ಬೃಹತ್ ಹೋರಾಟವನ್ನೂ ರೈತರು ಕೈಗೊಂಡಿದ್ದಾರೆ.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ ಕೂಡ ಈ ಗ್ರಾಮಗಳ ಜನರ ಪರ ನಿಂತಿದೆ. ಛಲಬಿಡದೆ ಹೋರಾಡುತ್ತಿರುವ ರೈತರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಇದೇ ಜೂನ್ 25ರಂದು ನಡೆಯುತ್ತಿರುವ ‘ದೇವನಹಳ್ಳಿ ಚಲೋ’ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ. ಹೋರಾಟವನ್ನು ಹತ್ತಿಕ್ಕುವ ಯಾವುದೇ ದುಷ್ಕೃತ್ಯ ಮಾಡದಿರಲಿ. 13 ಹಳ್ಳಿಗಳ ಜನರು ಒಗ್ಗಟ್ಟಾಗಿ, ತಮ್ಮ ಶತ್ರು ಯಾರೆಂಬುದನ್ನು ಗುರುತಿಸಿಕೊಂಡಿದ್ದಾರೆ. ”ಕಾರ್ಪೋರೇಟ್ ಶಕ್ತಿಗಳು ಮತ್ತು ಅದಕ್ಕೆ ಬೆಂಬಲಿಸುವ ಸರ್ಕಾರಗಳೇ ನಮ್ಮ ನಿಜವಾದ ವೈರಿಗಳು” ಎಂದು ಅರಿತಿದ್ದಾರೆ. ಬೃಹತ್ ಶಕ್ತಿಗಳ ವಿರುದ್ಧ ಸೆಟೆದು ನಿಂತಿರುವ ರೈತರಿಗೆ ಬೆಂಬಲ ನೀಡುವುದು ಅನ್ನ ತಿನ್ನುವ ಎಲ್ಲ ಜನರ ಜವಾಬ್ದಾರಿಯೂ ಆಗಿದೆ.
