ಈ ದಿನ ಸಂಪಾದಕೀಯ | ಇನ್ನಷ್ಟು ಮದ್ಯದಂಗಡಿಗಳ ಸಿದ್ದು ಕ್ರಮ ಸಮಾಜಘಾತಕ- ಕೈಬಿಡುತ್ತೇವೆಂದು ಆರನೆಯ ‘ಗ್ಯಾರಂಟಿ’ ನೀಡಲಿ

Date:

Advertisements
ಜನಸಂಖ್ಯೆ ಸರಿಯಾಗಿ ಮದ್ಯದಂಗಡಿಗಳಿಲ್ಲ ಎಂದು ಅಬಕಾರಿ ಸಚಿವ ಆರ್‌ ವಿ ತಿಮ್ಮಾಪುರ ಹೇಳಿಕೆ ನೀಡಿರುವುದು ಅತ್ಯಂತ ಖೇದಕರ. ಈ ದೇಶದಲ್ಲಿ ಜನಸಂಖ್ಯೆಗೆ ಬೇಕಾದಷ್ಟು ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ಬಸ್ಸುಗಳಿಲ್ಲ, ರೈಲುಗಳಿಲ್ಲ, ಕೋರ್ಟುಗಳಿಲ್ಲ. ಅಷ್ಟೇ ಏಕೆ ಸ್ಮಶಾನಗಳೂ ಇಲ್ಲ. ಇವೆಲ್ಲಕ್ಕಿಂತ ಮುಖ್ಯವೇ ಮದ್ಯದಂಗಡಿ!

ರಾಜ್ಯದಲ್ಲಿ ಮದ್ಯಪಾನ ವಿರೋಧಿ ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. ಈ ನೆಲದ ಬಡ ಹೆಣ್ಣುಮಕ್ಕಳು ಕುಡಿತವೆಂಬ ಸಾಮಾಜಿಕ ಪಿಡುಗಿನ ಸಂತ್ರಸ್ತರು. ಹಾಗಾಗಿಯೇ ಹಳ್ಳಿಗಾಡಿನ ಬಹುತೇಕ ಹೆಣ್ಣುಮಕ್ಕಳು ಮದ್ಯಪಾನ ನಿಷೇಧ ಆಗಲೇಬೇಕು; ಆ ದಿನ ಯಾವಾಗ ಬರುತ್ತದೋ, ಸುಳಿಗೆ ಸಿಕ್ಕ ತೆಪ್ಪಗಳಂತಾಗಿರುವ ತಮ್ಮ ಬದುಕುಗಳು ಎಂದು ದಡ ಸೇರುತ್ತವೆಯೇ ಎಂದು ಅಸಹಾಯಕರಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಸಣ್ಣಪುಟ್ಟ ಊರುಗಳಿಗೆ ಮದ್ಯದಂಗಡಿ ಬರುವುದನ್ನು ತಡೆಯಲು ಬಡ ಹೆಣ್ಣುಮಕ್ಕಳು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಅಬಕಾರಿ ಗುತ್ತಿಗೆದಾರರು ಈ ಹೋರಾಟಗಳನ್ನು ಉಕ್ಕಿನ ಹಸ್ತಗಳಿಂದ ಹತ್ತಿಕ್ಕುತ್ತಲೇ ಬಂದಿದ್ದಾರೆ. ಈ ದುರುಳ ಕೃತ್ಯಕ್ಕೆ ಪ್ರಭುತ್ವದ ಪರೋಕ್ಷ ಕುಮ್ಮಕ್ಕು ಇದ್ದೇ ಇದೆ. ಅದು ಕಾಂಗ್ರೆಸ್ ಸರ್ಕಾರವೇ ಇರಬಹುದು ಅಥವಾ ಬಿಜೆಪಿ ಸರ್ಕಾರವೇ ಆಗಿರಬಹುದು. ಆಳುವವರು ಅಬಕಾರಿಯನ್ನು ಕೇವಲ ಆದಾಯದ ಬಹುದೊಡ್ಡ ಮೂಲವಾಗಿ ನೋಡುತ್ತಿದ್ದಾರೆ. ಹೀಗಾಗಿ ನಿಷೇಧದ ಮಾತಿಗೆ ಕವಡೆ ಕಿಮ್ಮತ್ತಿಲ್ಲ. ಬಡಪಾಯಿ ಮಹಿಳೆಯರದು ಅರಣ್ಯ ರೋದನ.

ಐದು ವರ್ಷಗಳ ಹಿಂದೆ ಇದೇ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ 2019 ಜ. 19ರಂದು ಉತ್ತರ ಕರ್ನಾಟಕದ ಮಹಿಳೆಯರು ರಾಜ್ಯದಲ್ಲಿ ಮದ್ಯ ನಿಷೇಧ ಜಾರಿಯಾಗಲೇಬೇಕು ಎಂಬ ಬೇಡಿಕೆಯೊಂದಿಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು. ಕುಡಿತದಿಂದಾಗಿ ಗಂಡ- ಮಕ್ಕಳನ್ನು ಕಳೆದುಕೊಂಡವರು ತಮ್ಮ ಕುಟುಂಬವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಪಾದಯಾತ್ರೆ ಹೊರಟಿದ್ದರು. ಸತತ 12 ದಿನಗಳ ಕಾಲ ಬರಿಗಾಲಿನಲ್ಲಿ ನಡೆದು ಜ. 27 ರಂದು ಬೆಂಗಳೂರಿಗೆ ತಲುಪಿದ 4000 ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಕರ್ನಾಟಕದ ಹಲವು ಸಂಘಟನೆಗಳು ಒಗ್ಗಟ್ಟಾಗಿ ಕಟ್ಟಿಕೊಂಡ ʼಕರ್ನಾಟಕ ಮದ್ಯಪಾನ ನಿಷೇಧ ಆಂದೋಲನʼ ಮತ್ತು ʼಗ್ರಾಮೀಣ ಕೂಲಿ ಕಾರ್ಮಿಕರ ಸಂಘʼ ಜೊತೆಯಾಗಿ ನಡೆಸಿದ್ದ ಐತಿಹಾಸಿಕ ಪಾದಯಾತ್ರೆಯಿದು.

ದುರಂತವೆಂದರೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕು ಎಂಬ ಬೇಡಿಕೆ ಇಟ್ಟಿದ್ದ ಮಹಿಳೆಯರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಆಘಾತ ನೀಡಿದೆ. ಹೆಚ್ಚುವರಿಯಾಗಿ ಒಂದು ಸಾವಿರ ಮದ್ಯದಂಗಡಿ ತೆರೆಯುವ ಸಿದ್ಧತೆ ನಡೆಸಿದೆ. ಸೂಪರ್‌ ಮಾರ್ಕೆಟ್‌, ಮಾಲ್‌ಗಳಲ್ಲೂ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಿದೆ.

Advertisements

ಚುನಾವಣಾ ಪೂರ್ವ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದೇ ಪರಮ ಉದ್ದೇಶ ಎಂದುಕೊಂಡಿರುವ ಸರ್ಕಾರ ಅದಕ್ಕಾಗಿ ಹಣಕಾಸಿನ ಕ್ರೋಡೀಕರಣಕ್ಕೆ ಮುಂದಾಗಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಬಹುದೊಡ್ಡ ವಿಡಂಬನೆ. ’ಗೃಹಲಕ್ಷ್ಮಿ’ ಯೋಜನೆಯ ಅತಿ ಕ್ರೂರ ಅಣಕ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ, ಬಡವರ ಪರ ಎಂಬುದು ಅವರು ಜಾರಿ ಮಾಡಿದ ಯೋಜನೆಗಳು ಸಾರಿ ಹೇಳುತ್ತಿವೆ. ಸ್ವತಃ ಬಾಲ್ಯದಲ್ಲಿ ಬಡತನ ಕಂಡುಂಡ ಅವರು ಯಾರೊಬ್ಬರೂ ಹಸಿದು ಮಲಗಬಾರದು ಎಂದು ಕಾಳಜಿಯಿಂದ ʼಅನ್ನಭಾಗ್ಯʼ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೆ ತಂದವರು. ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಹೈಸ್ಕೂಲ್‌ ಮಕ್ಕಳಿಗೂ ವಾರಕ್ಕೆರಡು ಮೊಟ್ಟೆ ಕೊಡುವ ಯೋಜನೆ ಜಾರಿಗೊಳಿಸಿದ್ದಾರೆ. ಮಹಿಳೆಯರ ಕೈಗೆ ದುಡ್ಡು ಸಿಗಬೇಕು ಎಂಬ ಉದ್ದೇಶದಿಂದ ʼಗೃಹಲಕ್ಷ್ಮಿʼ ಉಚಿತ ಪ್ರಯಾಣದ ʼಶಕ್ತಿʼ ಯೋಜನೆ ಜಾರಿಗೆ ತಂದಿದ್ದಾರೆ. ಈ ಎರಡೂ ಕ್ರಮಗಳು ಗಂಡಾಳಿಕೆಯ ಗರಿ ಮುರಿಯುವ ರಚನಾತ್ಮಕ ಯೋಜನೆಗಳು. ಆದರೀಗ ಸಾವಿರ ಸಂಖ್ಯೆಯಲ್ಲಿ ಹೊಸ ಮದ್ಯದಂಗಡಿ ತೆರೆದು ಅದೇ ಹೆಣ್ಣುಮಕ್ಕಳ ಪಾಲಿಗೆ ‘ಖಳನಾಯಕ’ ಆಗಲು ಹೊರಟಿದ್ದಾರೆ. ಈ ಮಹಿಳಾಘಾತಕವೂ ಮತ್ತು ಸಮಾಜಘಾತಕವೂ ಆದ ನಡೆಯನ್ನು ಕೈ ಬಿಡದಿದ್ದರೆ ‘ಗ್ಯಾರಂಟಿ ಯೋಜನೆ’ಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಒಂದು ಕೈಯಿಂದ ನೀಡಿ ಅದನ್ನು ಮತ್ತೊಂದು ಕೈಯಿಂದ ಮೀಟರ್ ಬಡ್ಡಿ ಸಹಿತ ಕಿತ್ತುಕೊಳ್ಳುವ ದುರುಳತನವೆಂಬ ಆಪಾದನೆ ಹೊರಬೇಕಾದೀತು. ಸಿದ್ದರಾಮಯ್ಯನವರನ್ನು ಗೆಲ್ಲಿಸಿದ ಆದೇ ಮಹಿಳೆಯರು ಸೋಲಿನ ರುಚಿ ಉಣಿಸಲೂಬಹುದು. ಎರಡು ಸಾವಿರ ನೀಡಿ ಅವರ ಬೆಂಬಲವನ್ನು ಖರೀದಿಸಿಬಿಟ್ಟೆವೆಂಬ ಅಹಂಕಾರ ಅತಿವಿಶ್ವಾಸ ಸರಿಯಲ್ಲ.

ಜನಸಂಖ್ಯೆಗೆ ಅನುಗುಣವಾಗಿ ಸರಿಯಾಗಿ ಮದ್ಯದಂಗಡಿಗಳಿಲ್ಲ ಎಂದು ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪುರ ಹೇಳಿಕೆ ನೀಡಿರುವುದು ಅತ್ಯಂತ ಖೇದಕರ. ಈ ದೇಶದಲ್ಲಿ ಜನಸಂಖ್ಯೆಗೆ ಬೇಕಾದಷ್ಟು ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ವೈದ್ಯರಿಲ್ಲ, ಬಸ್ಸುಗಳಿಲ್ಲ, ರೈಲುಗಳಿಲ್ಲ, ಕೋರ್ಟುಗಳಿಲ್ಲ. ಅಷ್ಟೇ ಏಕೆ ಸ್ಮಶಾನಗಳು ಕೂಡ ಇಲ್ಲ. ಇವೆಲ್ಲವುಗಳೆಡೆಗೆ ಕಿವುಡಾಗಿ ಕುರುಡಾಗಿರುವ ‘ಸಮಾಜವಾದಿ ಸಿದ್ದು’ ಸರ್ಕಾರ ಹೆಚ್ಚುವರಿ ಆದಾಯ ಗಳಿಕೆಗಾಗಿ ಮದ್ಯದಂಗಡಿಗಳ ಮೊರೆ ಹೋಗಿರುವುದು ನಿಧಾನವಿಷ ಉಣಿಸುವ ಕರಾಳ ಕೃತ್ಯ.

ದೇಶದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಕಾರಣ ಬಡ ಕುಟುಂಬಗಳು ಇನ್ನಿಲ್ಲದಂತೆ ನಲುಗಿವೆ. ಬಡವರು ಬಡವರಾಗಿಯೇ ಉಳಿಯಲು ಕುಟುಂಬದ ಯಜಮಾನ ಕುಡಿತದ ದಾಸನಾಗಿ, ಆರೋಗ್ಯ ಹದಗೆಟ್ಟು ಆಸ್ಪತ್ರೆ ಚಿಕಿತ್ಸೆ ಎಂದು ದುಡಿಮೆಯ ಹಣ ಕುಡಿತಕ್ಕೆ ವ್ಯಯವಾಗುತ್ತಿದೆ. ಮಕ್ಕಳು ಉತ್ತಮ ಶಿಕ್ಷಣ, ಸವಲತ್ತುಗಳಿಂದ ವಂಚಿತವಾಗುತ್ತಿವೆ. ಅಪರಾಧ ಹಾದಿ ಹಿಡಿಯುತ್ತಿರುವ ಬಹುತೇಕ ಯುವಕರು ಕುಡಿತದ ಚಟಕ್ಕೆ ಬಿದ್ದವರು. ಸಂಪನ್ಮೂಲದ ಅಪವ್ಯಯದ ಜೊತೆಗೆ ಮಾನವ ಸಂಪನ್ಮೂಲದ ನಷ್ಟ. ಇದು ನಿಜಕ್ಕೂ ದೇಶದ ಆರ್ಥಿಕ ಹಿನ್ನಡೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅಡ್ಡಿ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರ್ ಗಳಿಗೆ ಪರವಾನಗಿ ಕೊಡಬಾರದೆಂಬ ನಿಯಮವನ್ನು ಸರ್ಕಾರವೇ ಗಾಳಿಗೆ ತೂರಿದೆ. ಹೆದ್ದಾರಿಗಳಲ್ಲಿ ಭೀಕರ ಅಪಘಾತಗಳು ಸಂಭವಿಸಲು ಮದ್ಯ ಸೇವಿಸಿ ವಾಹನ ನಡೆಸುವುದು ಮುಖ್ಯ ಕಾರಣಗಳಲ್ಲೊಂದು. ಯುವ ಸಮುದಾಯ ಮತ್ತು ಕೂಲಿ ಕಾರ್ಮಿಕ ಕುಟುಂಬಗಳನ್ನು ಕುಡಿತದ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರಬೇಕು. ಜನರ ಆರೋಗ್ಯ ಕಾಪಾಡುವುದು ಆರ್ಥಿಕತೆಯ ಬೆಳವಣಿಗೆಗೆ ಪೂರಕ ಎಂಬುದನ್ನು ಸರ್ಕಾರಗಳು ಮನಗಾಣಬೇಕು.

ಆರೋಗ್ಯ ಮತ್ತು ನೆಮ್ಮದಿಯೇ ನಿಜವಾದ ಭಾಗ್ಯ. ಆದರೆ ಇವರೆಡನ್ನೂ ಬಲಿ ಕೊಟ್ಟು ಆದಾಯ ಗಳಿಸುವುದು ಸರ್ಕಾರದ ಬೊಕ್ಕಸ ತುಂಬಿಸುವುದು ಅಧಃಪತನಕ್ಕೆ ನೀಡಿದ ಘನ ಆಹ್ವಾನವೇ ಸರಿ. ಸಂಪೂರ್ಣ ಪಾನ ನಿಷೇಧ ದೂರದ ಮಾತು, ಆದರೆ ಇನ್ನಷ್ಟು ಅಂಗಡಿ ತೆರೆಯಲು ಪರವಾನಗಿ ನೀಡುವುದು ಅಮಾನುಷ. ಈ ನೆಲದ ಹೆಣ್ಣುಮಕ್ಕಳ ದನಿಯನ್ನು ಸಿದ್ದರಾಮಯ್ಯ ಸರ್ಕಾರ ಆಲಿಸಬೇಕು. ಮದ್ಯದಂಗಡಿ ತೆರೆಯುವ ನಿರ್ಧಾರದಿಂದ ಹಿಂದೆ ಸರಿಯುವ ಆರನೆಯ ಗ್ಯಾರಂಟಿಯನ್ನು ನೀಡಲೇಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X