‘ಸುಳ್ಳು ಸುದ್ದಿಗಳನ್ನು ತಯಾರಿಸಿ ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸುದ್ದಿಗಳ ಬೇರನ್ನು ಪತ್ತೆ ಹಚ್ಚಿ ಕಿತ್ತೊಗೆಯಬೇಕು. ಸೈಬರ್ ಪೊಲೀಸರು ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಸರ್ವ ಸನ್ನದ್ಧವಾಗಿ ಕೆಲಸ ಮಾಡಬೇಕು. ಪ್ರತಿ ತಿಂಗಳೂ ವರದಿ ನೀಡಬೇಕು’ ಎಂಬ ಮುಖ್ಯಮಂತ್ರಿಯವರ ಮಾತುಗಳು ಒಣ ಮಾತುಗಳಾಗಿಯೇ ಉಳಿಯಕೂಡದು, ನಿಜ ನಿಗ್ರಹಶಕ್ತಿಯೊಂದಿಗೆ ಜಾರಿಗೆ ಬರಬೇಕು
ಸುಳ್ಳು ಸುದ್ದಿಗೆ (ಫೇಕ್ ನ್ಯೂಸ್) ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ.
ಫೇಕ್ ನ್ಯೂಸ್ ಅಥವಾ ನಕಲಿ ಸುದ್ದಿಯ ಪಿಡುಗು ಜನತಂತ್ರದ ಪಾಲಿನ ಬಹುದೊಡ್ಡ ಗಂಡಾಂತರ. ಅಸಲಿ ಸುದ್ದಿಯ ಆವರಣವನ್ನು ನಾಶ ಮಾಡುವ ನಂಜು. ಜನತೆಯ ಆಲೋಚನಾ ಶಕ್ತಿ ಮತ್ತು ಪ್ರಶ್ನಿಸುವ ಮನಸ್ಥಿತಿಗಳಿಗೆ ಗ್ರಹಣ ಕವಿಸುವ ವಿಷಯುಕ್ತ ಅಮಲು.
ಸಿದ್ದರಾಮಯ್ಯ ಅವರು ಸರಿಯಾಗಿಯೇ ಗುರುತಿಸಿದ್ದಾರೆ. ‘ಸುಳ್ಳು ಸುದ್ದಿಗಳನ್ನು ತಯಾರಿಸಿ ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸುದ್ದಿಗಳ ಬೇರನ್ನು ಪತ್ತೆ ಹಚ್ಚಿ ಕಿತ್ತೊಗೆಯಬೇಕು. ಸೈಬರ್ ಪೊಲೀಸರು ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಸರ್ವ ಸನ್ನದ್ಧವಾಗಿ ಕೆಲಸ ಮಾಡಬೇಕು. ಪ್ರತಿ ತಿಂಗಳೂ ವರದಿ ನೀಡಬೇಕು’ ಎಂಬ ಮುಖ್ಯಮಂತ್ರಿಯವರ ಮಾತುಗಳು ಒಣ ಮಾತುಗಳಾಗಿಯೇ ಉಳಿಯಕೂಡದು, ನಿಜ ನಿಗ್ರಹಶಕ್ತಿಯೊಂದಿಗೆ ಜಾರಿಗೆ ಬರಬೇಕು.
ಬಲಪಂಥೀಯ ಕೋಮುವಾದಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸುಳ್ಳು ಸುದ್ದಿಯ ವಿಷದ ಮಡುವುಗಳು. ಆಳುವ ಪಕ್ಷ ಹಳ್ಳಿ ಹಳ್ಳಿಗಳಿಗೆ ಹಬ್ಬಿಸಿ ಪೋಷಿಸುತ್ತಿರುವ ಕೋಟ್ಯಂತರ ವಾಟ್ಸ್ಯಾಪ್ ಗುಂಪುಗಳಿವೆ. ಇಲ್ಲಿ ತಯಾರಾಗುವ ಹಾಲಾಹಲವನ್ನು ಹಂಚುವ ಬೃಹತ್ ಮಾಧ್ಯಮ ಜಾಲವಿದೆ. ಲಾಭ ಗಳಿಕೆಗೆ ಮತ್ತು ಆಳುವವರನ್ನು ಓಲೈಸಲಿಕ್ಕಾಗಿ ನೈತಿಕ ಪತನದ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮ ಸಂಸ್ಥೆಗಳಿವು.
ಸುಳ್ಳು ಸುದ್ದಿ ಅಥವಾ ಫೇಕ್ ನ್ಯೂಸನ್ನು ಆಳುವ ಪಕ್ಷದ ಭಜನೆಯಲ್ಲಿ ತೊಡಗಿರುವ ಬಹುತೇಕ ಸಮೂಹ ಮಾಧ್ಯಮಗಳು ಕಣ್ಣು ಮುಚ್ಚಿ ಪ್ರಕಟಿಸುತ್ತಿವೆ. ಆಳುವವರನ್ನು ಮೆಚ್ಚಿಸಿ ತಮ್ಮ ಲಾಭಗಳಿಕೆ ಹೆಚ್ಚಿಸಿಕೊಳ್ಳಲು ‘ಮಡಿಲ ಮಾಧ್ಯಮಗಳು’ ಕಣ್ಣು ಮುಚ್ಚಿ ನಡೆಸುತ್ತಿರುವ ಸಮಾಜದ್ರೋಹದ ಕೃತ್ಯವಿದು. ತಾನು ಕುಳಿತ ಮರಕ್ಕೇ ಕೊಡಲಿ ಇಡುವ ಆತ್ಮಘಾತಕ ಧೋರಣೆ.
ರಾಜಕೀಯ ಪಕ್ಷಗಳ ಸಿದ್ಧಾಂತಗಳಿಗೆ ಬದ್ಧವಾಗಿರುವ ಟ್ರೋಲ್ ತಂಡಗಳೂ ಈ ದಿಸೆಯಲ್ಲಿ ನಿರಂತರ ತೊಡಗಿಕೊಂಡಿವೆ. ಈ ತಂಡಗಳನ್ನು ಸಾಕಿಕೊಂಡಿರುವ ರಾಜಕೀಯ ಪಕ್ಷಗಳು ಒಂದು ಟ್ವೀಟ್ ಗೆ ಅಥವಾ ಪೋಸ್ಟ್ ಗೆ ಇಷ್ಟೆಂದು ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡುತ್ತಿರುವುದು ಜನಜನಿತ ಕಟು ಸತ್ಯ. ಆಳುವ ಪಕ್ಷ ಐ.ಟಿ. ಸೆಲ್ ಮೂಲಕ ತನ್ನ ವಿರೋಧಿಗಳನ್ನು ಹಣಿಯಲು ಸುಳ್ಳು ಸುದ್ದಿಗಳ ಪ್ರಸರಣ ಮತ್ತು ಟೀಕಿಸುವವರ ಚಾರಿತ್ರ್ಯ ಹನನದಲ್ಲಿ ತೊಡಗಿದೆ. ಆಳುವ ಪಕ್ಷವೇ ಈ ಕೀಳು ಚಾಳಿಯ ಆದ್ಯ ಪ್ರವರ್ತಕ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ.
ರೊಚ್ಚಿಗೆಬ್ಬಿಸುವ, ತೊಂದರೆಗೆ ಸಿಕ್ಕಿ ಹಾಕಿಸುವ, ಅಪಾಯಕ್ಕೆ ಈಡು ಮಾಡುವ, ಅಡೆತಡೆ ಹಾಕುವ, ಅಪಮಾನಕ್ಕೆ ಗುರಿ ಮಾಡುವ, ದ್ವೇಷ ಸಾಧಿಸುವ, ಹಗೆತನದ ಹಾಗೂ ಕ್ರಿಮಿನಲ್ ಉದ್ದೇಶದ ಫೇಕ್ ಸುದ್ದಿಗಳು ಸುಳ್ಳೆಂದು ತಿಳಿದಿದ್ದರೂ ಅವುಗಳನ್ನು ಪ್ರಸಾರ ಮಾಡುವ ಕೇಡಿಗರ ವಿರುದ್ಧ ಕಾನೂನು ಕ್ರಮ ಜರುಗಬೇಕು. ಆದರೆ ಅದೇ ಸಮಯದಲ್ಲಿ ಇಂತಹ ಕಾನೂನನ್ನು ಆಳುವ ಪಕ್ಷಗಳು ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳ ಮೇಲೆ ಪ್ರಯೋಗಿಸಿ ದುರುಪಯೋಗ ಮಾಡಿಕೊಳ್ಳುವ ಅಪಾಯವನ್ನು ದೂರ ಇಡಬೇಕು. ಈ ಮಾತು ಎಲ್ಲ ಪಕ್ಷಗಳಿಗೂ ಅನ್ವಯ ಆಗುತ್ತದೆ.
ಪ್ರಸಾರಕ್ಕೆ ಬಂದ ನಂತರ ಸುಳ್ಳು ಸುದ್ದಿಯ ವಿಷದ ದಂತವನ್ನು ಕಿತ್ತು ಹಾಕುವ ಅತ್ಯಂತ ಪರಿಣಾಮಕಾರಿ ಕ್ರಿಯೆಯೊಂದಿದೆ. ಅದು ಸತ್ಯಶೋಧನೆ (ಫ್ಯಾಕ್ಟ್ ಚೆಕ್). ಈ ಪ್ರತ್ಯಸ್ತ್ರವನ್ನು ಪರಿಣಾಮಕಾರಿಯಾಗಿ ಹೂಡಬೇಕಿದೆ. ಸುಳ್ಳು ಸುದ್ದಿಯ ನಿಯಂತ್ರಣಕ್ಕೆ ಐರೋಪ್ಯ ಒಕ್ಕೂಟವು ಈ ಹಿಂದೆಯೇ ರೂಪಿಸಿರುವ ಸೂತ್ರವೊಂದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬಹುದು. ‘ಸುಳ್ಳು ಸುದ್ದಿ ಹಾಗೂ ಆನ್ಲೈನ್ ತಪ್ಪು ಮಾಹಿತಿ’ ಪ್ರಸರಣದ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ಒಕ್ಕೂಟ ನೇಮಕ ಮಾಡಿತ್ತು. ಈ ಸಮಿತಿಯು 2018ರಲ್ಲಿ ಕೆಲ ಶಿಫಾರಸುಗಳನ್ನು ಸಲ್ಲಿಸಿತ್ತು. ಆನ್ಲೈನ್ನಲ್ಲಿ ಸುದ್ದಿಗಳು-ಮಾಹಿತಿಗಳ ಪಾರದರ್ಶಕತೆಯನ್ನು ಹೆಚ್ಚಿಸುವುದು, ಫೇಕ್ ನ್ಯೂಸ್ ಅಥವಾ. ತಪ್ಪು ಮಾಹಿತಿ ಪ್ರಸಾರವನ್ನು ನಿಯಂತ್ರಿಸಲು ಮಾಧ್ಯಮ ಮತ್ತು ಮಾಹಿತಿ ಸಾಕ್ಷರತೆಯನ್ನು ಪ್ರೋತ್ಸಾಹಿಸುವುದು, ಫೇಕ್ ನ್ಯೂಸ್ ನ್ನು ಒಡನೆಯೇ ಗುರುತಿಸಬಲ್ಲ ತಂತ್ರಜ್ಞಾನ ಸಲಕರಣೆಗಳು ಸೂತ್ರಗಳನ್ನು ಆನ್ಲೈನ್ ಮಾಧ್ಯಮದ ಬಳಕೆದಾರರು ಮತ್ತು ಪತ್ರಕರ್ತರಿಗೆ ನೀಡುವುದು, ಐರೋಪ್ಯ ಸುದ್ದಿ ಮಾಧ್ಯಮದ ವೈವಿಧ್ಯ ಮತ್ತು ವಿಶಿಷ್ಟ ಸೊಗಡನ್ನು ಕಾಪಾಡಿಕೊಳ್ಳುವುದು ಹಾಗೂ ಫೇಕ್ ನ್ಯೂಸ್ ನ ದುಷ್ಪರಿಣಾಮಗಳ ಕುರಿತು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದು ಈ ಶಿಫಾರಸುಗಳ ತಿರುಳು.
ತನಗೆ ಅನುಕೂಲವಾಗುವ ಫೇಕ್ ನ್ಯೂಸಿಗೆ ನೀರು ಗೊಬ್ಬರ ಎರೆದು, ಪ್ರತಿಕೂಲವಾಗುವ ಫ್ಯಾಕ್ಟ್ ಚೆಕ್ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಳವಳಕಾರಿ ಪ್ರಯತ್ನಗಳು ಕೇಂದ್ರ ಸರ್ಕಾರದಿಂದ ಕಾಲಕಾಲಕ್ಕೆ ನಡೆಯುತ್ತಲೇ ಬಂದಿವೆ. ಈ ಪೈಕಿ ಸದ್ಯದಲ್ಲೇ ಹೊರಬೀಳಲಿರುವ ‘ಡಿಜಿಟಲ್ ಇಂಡಿಯಾ ಬಿಲ್’ ಪ್ರಮುಖವಾದದ್ದು. ಫ್ಯಾಕ್ಟ್ ಚೆಕ್ ವ್ಯಕ್ತಿಗಳು- ಸಂಸ್ಥೆಗಳು ಸರ್ಕಾರದೊಂದಿಗೆ ನೋಂದಣಿ ಮಾಡಿಕೊಳ್ಳುವುದನ್ನು ಈ ವಿಧೇಯಕ ಕಡ್ಡಾಯಗೊಳಿಸಿದೆ.
ಫ್ಯಾಕ್ಟ್ ಚೆಕ್ ಮಾಡುವ ಮೂಲಕ ಫೇಕ್ ನ್ಯೂಸ್ ನ ಕುತ್ತಿಗೆ ಪಟ್ಟಿ ಹಿಡಿದು ಬಯಲು ಮಾಡುತ್ತಿರುವ ಆಲ್ಟ್ ನ್ಯೂಸ್ ನಂತಹ ಪ್ರಾಮಾಣಿಕ ಪ್ರಯತ್ನಗಳ ಉಸಿರುಗಟ್ಟಿಸುವ ಕೃತ್ಯವಾಗದಿರಲಿ ಇದು. ಈ ಕುರಿತ ಜನಜಾಗೃತಿ ಅತ್ಯಗತ್ಯ.
