ಈ ದಿನ ಸಂಪಾದಕೀಯ | ಎಂ.ಬಿ.ಪಾಟೀಲರ ಹೇಳಿಕೆ ಉದ್ಧಟತನದ ಪರಮಾವಧಿ

Date:

Advertisements
ಸಿದ್ದರಾಮಯ್ಯನವರನ್ನು ಈ ಹಿಂದೆ ಬೆಂಬಲಿಸುತ್ತಿದ್ದ ಜನರೇ, ಅವರ ಎದುರು ನಿಂತು ಪ್ರಶ್ನಿಸುತ್ತಿರುವಾಗ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಆಯ್ಕೆ- 'ಆದೇಶ ರದ್ದು'. ಇದರ ನಡುವೆ ಉದ್ಧಟತನ ತೋರುತ್ತಿರುವ ಪಾಟೀಲರು ಇನ್ನಾದರೂ ಸಂಯಮದಿಂದ ವರ್ತಿಸಲಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ. 1,777 ಎಕರೆ ಜಮೀನನ್ನು ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ'(ಕೆಐಎಡಿಬಿ)ಗೆ ವರ್ಗಾಯಿಸಲು ಹಿಂದಿನ ಬಿಜೆಪಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದರೆ, ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂತಿಮ ಆದೇಶ ಹೊರಡಿಸಿತು. ಅಂದು ಕೈಗಾರಿಕಾ ಸಚಿವರಾಗಿದ್ದವರು ಮುರುಗೇಶ್ ನಿರಾಣಿ. ಇಂದು ಆ ಖಾತೆಯನ್ನು ನಿರ್ವಹಿಸುತ್ತಿರುವವರು ಎಂ.ಬಿ.ಪಾಟೀಲ್. ಇಬ್ಬರು ಕೂಡ ರೈತರ ಕೂಗನ್ನು ಕೇಳಿಸಿಕೊಳ್ಳುತ್ತಿರುವಂತೆ ಕಾಣುತ್ತಿಲ್ಲ. “ಪ್ರಾಣ ಕೊಟ್ಟೇವು, ಭೂಮಿ ಬಿಡುವುದಿಲ್ಲ” ಎಂದಿರುವ 13 ಗ್ರಾಮಗಳ ರೈತರಿಗೆ ಜನಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿಂದೆ ಸಿದ್ದರಾಮಯ್ಯನವರು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕೆಂಬ ಒತ್ತಾಯ ಬಿರುಸು ಪಡೆದಿದೆ. ಜುಲೈ 4ರಂದು ಸಭೆ ಕರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಈಗಾಗಲೇ ಅಂತಿಮ ಆದೇಶ ಹೊರಡಿಸಿರುವುದರಿಂದ ಡಿನೋಟಿಫೈ ಮಾಡಲು ಇರುವ ಕಾನೂನು ಸಾಧ್ಯತೆಗಳ ಕುರಿತು ಚರ್ಚಿಸಲು 10 ದಿನ ಅವಕಾಶ ಬೇಕಾಗುತ್ತದೆ” ಎಂದು ಕೋರಿದರು. ಹೋರಾಟಗಾರರು ಸರ್ಕಾರದ ಮನವಿಯನ್ನು ಒಪ್ಪಿದರು. ಅಂತೂ ಜುಲೈ 15ಕ್ಕೆ ಆದೇಶ ಹಿಂಪಡೆಯುವ ಒತ್ತಡವಂತೂ ಸೃಷ್ಟಿಯಾಗಿದೆ.

ಜಾತಿ, ಮತ, ಪಕ್ಷಗಳ ಹಂಗಿಲ್ಲದೆ 1,190ಕ್ಕೂ ಹೆಚ್ಚು ದಿನ ನಡೆದಿರುವ ಹೋರಾಟಕ್ಕೆ ಜನಪರ ಸಂಘಟನೆಗಳು ಕೈಜೋಡಿಸಿವೆ. ರಾಷ್ಟ್ರಮಟ್ಟದ ರೈತ ನಾಯಕರು ಬೆಂಬಲ ಘೋಷಿಸಿದ್ದಾರೆ. ಅಂತೆಯೇ ನಟ ಪ್ರಕಾಶ್ ರಾಜ್ ಅವರು ಮೊದಲಿನಿಂದಲೂ ಚನ್ನರಾಯಪಟ್ಟಣ ಜನರ ಜೊತೆ ನಿಂತಿದ್ದಾರೆ. “ನನ್ನನ್ನು ಬಂಧಿಸಿ, ಜಾಮೀನು ಕೂಡ ಪಡೆಯುವುದಿಲ್ಲ” ಎಂದು ದೇವನಹಳ್ಳಿ ಚಲೋ ಸಂದರ್ಭದಲ್ಲಿ ಪ್ರಕಾಶ್ ರಾಜ್ ಗುಡುಗಿದ್ದರು. ಬಹುಭಾಷಾ ನಟರಾದ ಕಾರಣ ಪ್ರಕಾಶ್ ಅವರಿಗೆ ತಾರಾ ವರ್ಚಸ್ಸು ಇರುವುದರಿಂದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಪ್ರಕಾಶ್ ಅವರ ಪ್ರಶ್ನೆಗಳಿಗೆ ಸರ್ಕಾರದ ಪ್ರತಿನಿಧಿಯಾದ ಎಂ.ಬಿ.ಪಾಟೀಲರು ಸಂಯಮದಿಂದ ಪ್ರತಿಕ್ರಿಯಿಸಬೇಕಾಗಿತ್ತು. ಆದರೆ ಅವರ ಹೇಳಿಕೆಯು ಹತಾಶೆ ಮತ್ತು ಉದ್ಧಟತನದ ಪರಮಾವಧಿಯಂತೆ ಕಾಣುತ್ತದೆ.

“ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ರಾಜ್ ಹೋರಾಟ ಯಾಕೆ? ಅವರು ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ ಮಾತ್ರವಲ್ಲ, ಯುಪಿ, ಅಸ್ಸಾಂನಲ್ಲೂ ಹೋರಾಟ ಮಾಡಲಿ, ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ” ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ ಪಾಟೀಲ್.

Advertisements

ಪ್ರಕಾಶ್ ರಾಜ್ ಅವರು ಮೊದಲಿನಿಂದಲೂ ಪಕ್ಷಾತೀತವಾಗಿ ಪ್ರಶ್ನೆಗಳನ್ನು ಮಾಡುತ್ತಾ ಬಂದಿರುವ ನಟ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರಷ್ಟು ಕಟು ಟೀಕೆ ಮಾಡಿದ ಕಲಾವಿದ ಮತ್ತೊಬ್ಬರಿಲ್ಲ. ಅಷ್ಟೇ ಅಲ್ಲ ಕೋಮುವಾದ, ಜಾತಿವಾದದ ವಿರುದ್ಧ ದನಿ ಎತ್ತುತ್ತಾ ಬಂದಿರುವ ಇವರು, ನಮ್ಮ ಸಂವಿಧಾನದ ಸೆಕ್ಯುಲರ್ ಆಶಯಗಳ ಪರ ನಿಂತಿದ್ದಾರೆ. ಜನ ವಿರೋಧಿಯಾಗಿ ಸರ್ಕಾರಗಳು ನಡೆದುಕೊಂಡಾಗ ಪ್ರಶ್ನಿಸುತ್ತಾ ಬಂದಿದ್ದಾರೆ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ವಿನಾಶಕಾರಿ ಗುಜರಾತ್ ಮಾದರಿಯನ್ನು ಅನುಸರಿಸಿ ಅನ್ನದಾತರನ್ನು ಒಕ್ಕಲೆಬ್ಬಿಸಲು ಸರ್ಕಾರ ಹೊರಟರೆ, ಎಂ.ಬಿ.ಪಾಟೀಲರು ಮೋದಿಯವರಿಗಿಂತ ಭಿನ್ನವಾಗಿ ಕಾಣುವುದಿಲ್ಲ. ಕರ್ನಾಟಕವು ಗುಜರಾತ್‌ಗಿಂತ ವಿಶಿಷ್ಟವಾಗಿ ನಿಲ್ಲುವುದಿಲ್ಲ ಎಂಬುದನ್ನು ಮರೆಯಬಾರದು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಭಾರತ ಮಾತೆಯನ್ನು ಪೂಜಿಸುವ ಬಿಜೆಪಿಯವರು ʼಮಾತೆʼಯರನ್ನು ಗೌರವಿಸುವುದು ಯಾವಾಗ?

ಮುಖ್ಯವಾಗಿ ದೇವನಹಳ್ಳಿಯ ಸುತ್ತಮುತ್ತಲಿನ ಬೆಲೆ ಬಾಳುವ ಕೃಷಿ ಭೂಮಿಯ ಮೇಲೆ ಯಾಕಿಷ್ಟು ಕಣ್ಣು? ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡಿರುವ ಇಲ್ಲಿನ ಜನ, ಪಾಠ ಕಲಿತಿದ್ದಾರೆ. ಭೂಮಿ ಕಳೆದುಕೊಂಡರೆ ಮತ್ತೆ ಬದುಕಿಲ್ಲ ಎಂಬುದು ರೈತರಿಗೆ ಅರ್ಥವಾಗಿದೆ. ಆದರೂ ಅಲ್ಲಿನ ಭೂಮಿಯನ್ನು ಪಡೆದೇ ತೀರುವ ಹಠಮಾರಿತನ ಸಚಿವರಲ್ಲಿ ಇರುವುದು ಸ್ಪಷ್ಟವಾಗುತ್ತಿದೆ. ಜುಲೈ 4ರಂದು ನಡೆದ ಸಭೆಯಲ್ಲಿ ಭಾಗವಹಿಸದಿರುವ ಎಂ.ಬಿ.ಪಾಟೀಲರು, ಹೊರಗೆ ಮಾಧ್ಯಮಗಳಿಗೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ದೇವನಹಳ್ಳಿ ಸುತ್ತಮುತ್ತ ಪ್ರಭಾವಿ ರಾಜಕಾರಣಿಗಳು ಪಕ್ಷಭೇದವಿಲ್ಲದೆ ನೂರಾರು ಎಕರೆ ಜಮೀನುಗಳನ್ನು ಮಾಡಿಕೊಂಡಿದ್ದಾರೆಂಬ ಆರೋಪಗಳಿವೆ. ಪಾಟೀಲರು ಇಂಥವರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರಾ? ಎಂಬ ಗುಮಾನಿ ಹುಟ್ಟಿದರೆ ಆಶ್ಚರ್ಯಪಡಬೇಕಿಲ್ಲ.

ಶೇ.80ಕ್ಕಿಂತ ಹೆಚ್ಚು ರೈತರು ಒಪ್ಪದಿದ್ದರೆ ಭೂಸ್ವಾಧೀನ ಮಾಡಿಕೊಳ್ಳುವಂತಿಲ್ಲ ಎಂದು ಕಾಯ್ದೆಯನ್ನು ತಂದದ್ದು ಇದೇ ಕಾಂಗ್ರೆಸ್ ಸರ್ಕಾರ. ಕೆಐಎಡಿಬಿ ಕಾನೂನಿನ ಅನ್ವಯ ಡಿನೋಟಿಫಿಕೇಷನ್ ಮಾಡಲು ಸರ್ಕಾರಕ್ಕೆ ಪರಮಾಧಿಕಾರವಿದೆ ಎಂಬುದೂ ಚರ್ಚೆಯ ಮುನ್ನೆಲೆಗೆ ಬಂದಿದೆ. ಹೋರಾಟಗಾರರು ಕಾನೂನಿನ ಅವಕಾಶಗಳನ್ನು ಸರ್ಕಾರದ ಮುಂದೆ ಇಡಲಾರಂಭಿಸಿದ್ದಾರೆ. “ಕೆಐಎಡಿಬಿ ಕಾಯ್ದೆಯ ಸೆಕ್ಷನ್ 4ರ ಪ್ರಕಾರ, ರಾಜ್ಯ ಸರ್ಕಾರವೂ ಯಾವುದೇ ಸಮಯದಲ್ಲಿ ಒಂದು ಅಧಿಸೂಚನೆಯನ್ನು ಹೊರಡಿಸಿ ಯಾವುದೇ ಪ್ರದೇಶವನ್ನು ಕೈಗಾರಿಕಾ ಪ್ರದೇಶದಿಂದ ಹೊರಗಿಡಬಹುದು. ಸೆಕ್ಷನ್ 32 (3)ರ ಪ್ರಕಾರ, ಕೆಐಎಡಿಬಿಗೆ ವರ್ಗಾಯಿಸಿದ ಯಾವುದೇ ಭೂಮಿಯನ್ನು ರಾಜ್ಯ ಸರ್ಕಾರ ತನಗೆ ಅಗತ್ಯವಿದ್ದಾಗ ಸೂಕ್ತ ಒಡಂಬಡಿಕೆಯ ಮೇರೆಗೆ ವಾಪಸ್ ಪಡೆಯಬಹುದು. ಸೆಕ್ಷನ್ 37ರ ಪ್ರಕಾರ, ವಶಕ್ಕೆ ಪಡೆದಿರುವ ಭೂಮಿಯು ಕೆಐಎಡಿಬಿ ಅಡಿಯಲ್ಲಿರುವುದು ಅನಗತ್ಯ ಎಂದು ತೋರಿದಲ್ಲಿ ಆ ಪ್ರದೇಶವನ್ನು ಕೆಐಎಡಿಬಿ ವ್ಯಾಪ್ತಿಯಿಂದ ಹೊರತೆಗೆಯಬಹುದು.” ರೈತರು ಇನ್ನೂ ಭೂಮಿಯನ್ನು ಸರ್ಕಾರದ ಕೈಗೆ ಕೊಟ್ಟೇ ಇಲ್ಲ. ಹೀಗಾಗಿ ಕಾಯ್ದೆಯ ಅನ್ವಯ ಡಿನೋಟಿಫೈ ಮಾಡಲೇಬೇಕಾಗುತ್ತದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ

ಇದೇ ಕೆಐಎಡಿಬಿ ನೋಟಿಫೈ ಮಾಡಿ ಮತ್ತೆ ಡಿನೋಟಿಫೈ ಮಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಬಳ್ಳಾರಿಯ ಪೋಸ್ಕೋ, ಬೆಂಗಳೂರು ಸಮೀಪದ ನಂದಗುಡಿ ಬಳಿಯ ಜಮೀನುಗಳು, ಮಂಗಳೂರಿನಲ್ಲಿ ಎಸ್‌ಇಝೆಡ್‌ಗಾಗಿ ವಶಪಡಿಸಿಕೊಂಡ ಜಮೀನುಗಳನ್ನು ಸರ್ಕಾರ ವಾಪಸ್ ಕೊಟ್ಟಿತ್ತು. ಹೋರಾಟ ತೀವ್ರವಾದಷ್ಟು ಸರ್ಕಾರ ಹಿಂದೆ ಸರಿಯಲೇಬೇಕಾಗುತ್ತದೆ. ಎಂ.ಬಿ.ಪಾಟೀಲ್ ಅಂಥವರು ಎಷ್ಟೇ ತಿಪ್ಪರಲಾಗ ಹಾಕಿದರೂ ಹೋರಾಟದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರನ್ನು ಈ ಹಿಂದೆ ಬೆಂಬಲಿಸುತ್ತಿದ್ದ ಜನರೇ, ಅವರ ಎದುರು ನಿಂತು ಪ್ರಶ್ನಿಸುತ್ತಿರುವಾಗ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಆಯ್ಕೆ- ‘ಆದೇಶ ರದ್ದು’. ಇದರ ನಡುವೆ ಉದ್ಧಟತನ ತೋರುತ್ತಿರುವ ಪಾಟೀಲರು ಇನ್ನಾದರೂ ಸಂಯಮದಿಂದ ವರ್ತಿಸಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?

ಪ್ರಧಾನಿ ಮೋದಿಯವರು, ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ...

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

Download Eedina App Android / iOS

X