ಈ ದಿನ ಸಂಪಾದಕೀಯ | ಮಾಲ್ದೀವ್ಸ್  ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ

Date:

Advertisements
ಮಾಲ್ದೀವ್ಸ್ ನಮ್ಮ ನೆರೆಹೊರೆಯ ಗುಬ್ಬಿ. ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಅನಗತ್ಯ. ಸಂಯಮ ಅತ್ಯಗತ್ಯ. ನಮ್ಮ ನಡವಳಿಕೆ ಭಾರತವಿರೋಧಿ ಭಾವನೆ ಇನ್ನಷ್ಟು ಬಲಿತು ಬೇರೂರಿಸುವಂತೆ ಇರಬಾರದು

 

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ದೀವ್ಸ್ ನ ಮೂವರು ಮಂತ್ರಿಗಳು ಅಕಾರಣವಾಗಿ ಬಿರುನುಡಿಗಳನ್ನು ಆಡಿದ್ದರು. ಭಾರತದ ತೀವ್ರ ಪ್ರತಿಭಟನೆಯ ನಂತರ ಈ ಮಂತ್ರಿಗಳನ್ನು ಅಮಾನತುಗೊಳಿಸಲಾಗಿದೆ. ಮಾಲ್ದೀವ್ಸ್ ಪ್ರವಾಸವನ್ನು ಬಹಿಷ್ಕರಿಸುವಂತೆ ಭಾರತೀಯರನ್ನು ರೊಚ್ಚಿಗೆಬ್ಬಿಸುವ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ರಭಸದಿಂದ ಜರುಗಿವೆ. ಎರಡೂ ದೇಶಗಳ ಹಿತದೃಷ್ಟಿಯಿಂದ ಅನಪೇಕ್ಷಿತ ಬೆಳವಣಿಗೆಯಿದು. ಪರಸ್ಪರ ಹಾನಿ ಉಂಟು ಮಾಡುವ ಸಾಮರ್ಥ್ಯ ಎರಡೂ ದೇಶಗಳಿಗಿದೆ. ಪ್ರಮಾಣ ದೊಡ್ಡದು ಸಣ್ಣದಿರಬಹುದು ಅಷ್ಟೇ.

ಧವಳಶ್ವೇತ ಹುಡಿಮರಳಿನ ಕಡಲ ಕಿನಾರೆಗಳು. ವರ್ಷದ ಹನ್ನೆರಡೂ ತಿಂಗಳು ಬೆಚ್ಚನೆ ಹವೆ. ಭೂಮಧ್ಯ ರೇಖೆಯ ಮೇಲೆ ಹಿಂದೂ ಮಹಾಸಾಗರದ ನಡುವಣ 1,200 ಹವಳ ದ್ವೀಪಗಳ ಮೋಹಕ ಗುಚ್ಛವೇ ಮಾಲ್ದೀವ್ಸ್. ರಾಜಕೀಯ ತಳಮಳ ಮತ್ತು ಹವಾಮಾನ ಬದಲಾವಣೆಯ ಸಂಕಟಕ್ಕೆ ಸಿಲುಕಿರುವ ನಾಡು.

ಜನಸಂಖ್ಯೆ 4 ಲಕ್ಷ. ತುಸು ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಮಾಲ್ದೀವ್ಸ್ ಸೇರಿಸಿದರೆ ಒಂದು ಬೆಂಗಳೂರು ಆದೀತು. ಈ ಪುಟಾಣಿ ದೇಶದ ಕರೆನ್ಸಿ ರುಫಿಯಾ‘, ಭಾರತದ ರುಪಾಯಿಗಿಂತ ತುಟ್ಟಿ ಮತ್ತು ಗಟ್ಟಿ. ನಮ್ಮ ನಾಲ್ಕೂ ಮುಕ್ಕೂಲು ರುಪಾಯಿಗಳು ಒಂದು ರುಫಿಯಾಗೆ ಸಮ. ನೂರಕ್ಕೆ ನೂರು ಮುಸಲ್ಮಾನ ದೇಶ. ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗಿಲ್ಲ. ದುಬಾರಿ ಪ್ರವಾಸೋದ್ಯಮವೇ ಶೇ.70ರಷ್ಟು ಆದಾಯ ಮೂಲ.

Advertisements

ಭಾರತದ ನೆರೆಹೊರೆಯ ಪುಟ್ಟ ದೇಶ ಮಾಲ್ದೀವ್ಸ್. ಹಿಂದೂ ಮಹಾಸಾಗರದ ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಪವಡಿಸಿದೆ. ಈ ಸಾಗರದೊಳಕ್ಕೆ ಸರಕು ಸಾಗಣೆ ನೌಕೆಗಳ ಚಲನವನಲದ ಮೇಲೆ ಬೇಹುಗಾರಿಕೆಯ ಕಣ್ಣಿಡುವುದು ಸುಲಭ. ಈ ಚಲನವಲನವನ್ನು ತಕ್ಕಮಟ್ಟಿಗೆ ನಿಯಂತ್ರಿಸುವುದೂ ಸಾಧ್ಯ. ಈ ಆಯಕಟ್ಟಿನ ಮಹತ್ವ ಅರಿತ ಚೀನಾ ಕಳೆದ ಹತ್ತು ವರ್ಷಗಳಿಂದ ಇಲ್ಲಿ ತನ್ನ ನೆಲೆ ನಿರ್ಮಿಸುವ ಭಾರೀ ಪ್ರಯತ್ನ ನಡೆಸಿದೆ. ಬಂಡವಾಳ ಹೂಡಿಕೆಯ ಹೊಳೆ ಹರಿಸಿದೆ. ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆಯಿದು. ಹೀಗಾಗಿಯೇ ಮಾಲ್ದೀವ್ಸ್ ನ ಆಗುಹೋಗುಗಳು, ಕದಲಿಕೆ ಕನಲಿಕೆಗಳು ಭಾರತದ ಪಾಲಿಗೆ ಬಹುಮುಖ್ಯ. ಇನ್ನು ಎದ್ದರೆ ಬಿದ್ದರೆ ತಕ್ಷಣವೇ ತನ್ನ ಅನುವು ಆಪತ್ತಿಗೆ ಒದಗಿರುವ ಭಾರತ ಮತ್ತು ಅದರಿಂದ ಬರುವ ಗಣನೀಯ ಪ್ರವಾಸೀ ಆದಾಯ ಮಾಲ್ದೀವ್ಸ್ ಗೆ ಬೇಕೇ ಬೇಕು.

ಮಾಲ್ದೀವ್ಸ್ ನಲ್ಲಿ ಇತ್ತೀಚೆಗೆ ಬಡಿದೆಬ್ಬಿಸಲಾಗಿರುವ ಭಾರತವಿರೋಧಿ ಭಾವನೆಯು ಮೋದಿಯವರ ಮೇಲಿನ ದಾಳಿಯಾಗಿ ತಿರುಗಿತು. ಈ ಭಾವನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎನ್ನಲಾಗಿದೆ.

ಮಾಲ್ದೀವ್ಸ್ ಪ್ರವಾಸಿಗರ ಪೈಕಿ ಭಾರತೀಯರ ಪ್ರಮಾಣ ಇಲ್ಲಿಯವರೆಗೂ ಗಣನೀಯ. ಲಕ್ಷದ್ವೀಪವನ್ನು ಮಾಲ್ದೀವ್ಸ್ ಗೆ ಪರ್ಯಾಯವಾಗಿ ಬಿಂಬಿಸಲಾಗುತ್ತಿದೆ ಎಂಬ ಪಿತೂರಿಯ ತಿರುವು ನೀಡಲಾಯಿತು. ಲಕ್ಷದ್ವೀಪ ಭಾರತದ್ದೇ ಭೂಭಾಗ. ಅದನ್ನು ಜನಪ್ರಿಯ ಪ್ರವಾಸೀ ತಾಣವನ್ನಾಗಿ ದೇಶವಿದೇಶಗಳಲ್ಲಿ ಬಿಂಬಿಸುವ ಎಲ್ಲ ಹಕ್ಕೂ ಭಾರತಕ್ಕಿದೆ. ಭಾರತವಿರೋಧಿ ಭಾವನೆಯನ್ನೇ ಬಂಡವಾಳ ಮಾಡಿಕೊಂಡು ಹೊಸ ಸರ್ಕಾರವೊಂದು ಮಾಲ್ದೀವ್ಸ್ ನಲ್ಲಿ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಚೀನಾ ಮತ್ತು ಪಾಕ್ ನತ್ತ ವಾಲಿದೆ. ಇಲ್ಲಿನ ಹೊಸ ಸರ್ಕಾರಗಳ ಮುಖ್ಯಸ್ಥರು ಅಧಿಕಾರ ವಹಿಸಿಕೊಂಡ ತಕ್ಷಣ ಮೊದಲ ಭೇಟಿ ನೀಡುತ್ತಿದ್ದುದು ಭಾರತಕ್ಕೆ. ಈ ರೂಢಿಯನ್ನು ಮೊದಲ ಬಾರಿ ಮುರಿಯಲಾಗಿದೆ. ಸರ್ಕಾರದ ಹೊಸ ಅಧ್ಯಕ್ಷ ಮಹಮ್ಮದ್ ಮುಯಿಝು ಐದು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಅತ್ಯಾಪ್ತ ಮಿತ್ರದೇಶಗಳಲ್ಲೊಂದು ಎಂದು ಮುಯಿಝು ಚೀನಾವನ್ನು ಬಣ್ಣಿಸಿದ್ದಾರೆ. ಭಾರತೀಯ ಪ್ರವಾಸಿಗರ ಹರಿವು ತಗ್ಗಿದರೆ, ಹೆಚ್ಚು ಪ್ರವಾಸಿಗರನ್ನು ಮಾಲ್ದೀವ್ಸ್ ಗೆ ಕಳಿಸುವಂತೆ ಚೀನಾವನ್ನು ಕೋರಿದ್ದಾರೆ.

ನಿದ್ರೆಯನ್ನೇ ಮಾಡದೆ, ಒಂದೇ ಒಂದು ದಿನ ರಜೆಯನ್ನೂ ತೆಗೆದುಕೊಳ್ಳದೆ ಹಗಲಿರುಳು ದೇಶಸೇವೆ ಮಾಡುವರೆಂದು ಮೋದಿಯವರ ‘ಅತಿಮಾನುಷ ಶಕ್ತಿ ಸಾಮರ್ಥ್ಯ’ದ ದಂತಕತೆಗಳಿವೆ. ವ್ಯವಸ್ಥಿತ ಪ್ರಚಾರಸಮರದ ಭಾಗವಾಗಿ ಈ ಕತೆಗಳನ್ನು ಹುಟ್ಟಿಸಿ ಹಬ್ಬಿಸಲಾಗಿದೆ. ಮೋದಿಯವರು ನಿದ್ರೆಯನ್ನೇ ಮಾಡುವುದಿಲ್ಲವಂತೆ, ರಜೆಯನ್ನೇ ತೆಗೆದುಕೊಳ್ಳದೆ ದೇಶಸೇವೆ ಮಾಡುತ್ತಾರಂತೆ ಅಮಾಯಕ ಜನಸಮೂಹಗಳು ನಂಬಿವೆ ಕೂಡ. ಅತಿಮಾನುಷ ಶಕ್ತಿಯ ಕತೆಗಳು ವಾಸ್ತವ ಅಲ್ಲ. ನಿದ್ರೆ ನೀರಡಿಕೆ ಹಸಿವುಗಳು ಅವರಿಗೂ ಉಂಟು. ಕೋಪತಾಪ ಖುಶಿ ಕಣ್ಣೀರು ಅವರನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಅವರು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಕರ್ತವ್ಯನಿಮಿತ್ತ ಭೇಟಿ ನೀಡಿದ್ದರು. ಅಲ್ಲಿನ ಸುಂದರ ತಾಣಗಳಲ್ಲಿ ಬಿಡುವಾಗಿ ವಿಹರಿಸಿದರು.

2011ರ ಜನಗಣತಿಯ ಪ್ರಕಾರ ಲಕ್ಷದ್ವೀಪಗಳಲ್ಲಿನ ಒಟ್ಟು ಜನಸಂಖ್ಯೆ ಮುಕ್ಕಾಲು ಲಕ್ಷವನ್ನೂ ಮೀರಿಲ್ಲ. 64.47 ಸಾವಿರ ಅಷ್ಟೇ. ಈ ಪೈಕಿ ಮುಸ್ಲಿಮರ ಪ್ರಮಾಣ ಶೇ.96.58. ಹಿಂದೂಗಳ ಪ್ರಮಾಣ ಶೇ.2.77.

ಸ್ಥಳೀಯ ಜನರ ಕುರಿತು ಮನದುಂಬಿ ಮಾತಾಡಿದರು. ದ್ವೀಪಸಮೂಹದ ಗಾತ್ರ ಪುಟ್ಟದಾದರೂ ಇಲ್ಲಿ ಜನತೆಯ ಹೃದಯ ದೊಡ್ಡದು, ಸಾಗರದಷ್ಟೇ ಆಳದ್ದು ಎಂದು ಮೆಚ್ಚಿದರು.

ಈ ದ್ವೀಪಗಳ ದಂಗುಬಡಿಸುವ ಸೊಬಗಿಗೆ ಮತ್ತು ಇಲ್ಲಿನ ಜನತೆಯ ಬೆಚ್ಚನೆಯ ಸ್ನೇಹವಿಶ್ವಾಸಕ್ಕೆ ಬೆರಗಾಗಿದ್ದೇನೆ. ಅವರಲ್ಲಿ ಮನೆ ಮಾಡಿರುವ ಸಾಹಸೀ ಮನೋವೃತ್ತಿಯನ್ನು ಆಲಿಂಗಿಸಿಕೊಳ್ಳಲು ಬಯಸುವವರು ಲಕ್ಷದ್ವೀಪವನ್ನು ನಿಮ್ಮ ಪ್ರವಾಸೀ ತಾಣಗಳ ಪಟ್ಟಿಗೆ ಸೇರಿಸಿಕೊಳ್ಳಿ….” ಎಂಬ ಮೋದಿಯವರ ಟ್ವೀಟ್ ನಲ್ಲಿ ಮಾಲ್ದೀವ್ಸ್ ನ ಪ್ರಸ್ತಾಪ ಇರಲಿಲ್ಲ.

ಲಕ್ಷದ್ವೀಪದ ನೆಲಜಲ ಜನರನ್ನು ಕುರಿತ ತಮ್ಮ ಮನದಾಳದ ಮೆಚ್ಚುಗೆಯ ಒಂದು ಅಂಶವನ್ನಾದರೂ, ಅಲ್ಲಿನ ಉಪರಾಜ್ಯಪಾಲರಿಗೆ ವರ್ಗಾಯಿಸಬೇಕಿದೆ. ಪ್ರಫುಲ್ ಪಟೇಲ್ ಬಿಜೆಪಿಆರೆಸ್ಸೆಸ್ ಕಟ್ಟಾಳು. ಗುಜರಾತಿನ ಗೃಹಮಂತ್ರಿಯಾಗಿದ್ದವರು. ಮೋದಿ ಸರ್ಕಾರದಿಂದಲೇ ಉಪರಾಜ್ಯಪಾಲರಾಗಿ ನೇಮಕಗೊಂಡವರು. ಕಳೆದ ಮೂರು ವರ್ಷಗಳಿಂದ ಲಕ್ಷದ್ವೀಪದ ಮುಸ್ಲಿಮ್ ಬಹುಸಂಖ್ಯಾತರ ಜೀವನೋಪಾಯ, ಆಹಾರಪದ್ಧತಿ, ಶಿಕ್ಷಣವ್ಯವಸ್ಥೆ, ಧಾರ್ಮಿಕ ನಡಾವಳಿಗಳು ಹಾಗೂ ಜೀವನವಿಧಾನದ ಮೇಲೆ ದಾಳಿ ನಡೆಸಿದ್ದಾರೆ.

ಗೋವಾ ಮತ್ತು ಬಿಜೆಪಿ ಆಡಳಿತದ ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆಗೆ ವಿನಾಯ್ತಿ ನೀಡಲಾಗಿದೆ. ಆದರೆ ಲಕ್ಷದ್ವೀಪದಲ್ಲಿ ಗೋಹತ್ಯೆ ನಿಷೇಧ, ಮಧ್ಯಾಹ್ನದ ಬಿಸಿಯೂಟದಲ್ಲಿ ದನದ ಮಾಂಸ ಖಾದ್ಯ ನಿಷೇಧ, ಭಿನ್ನಮತ ಪ್ರಕಟಿಸಿದವರ ನಿಗ್ರಹಕ್ಕಾಗಿ ಗೂಂಡಾ ನಿಷೇಧ ಕಾಯಿದೆ, ಮದ್ಯಪಾನ ನಿಷೇಧ ರದ್ದು, ಸ್ಥಳೀಯ ಡೇರಿಗಳನ್ನು ಬಲಿಗೊಟ್ಟಾದರೂ ಗುಜರಾತಿನ ಅಮೂಲ್ ಉತ್ಪನ್ನಗಳಿಗೆ ಉತ್ತೇಜನ, ಶಾಲಾಶಿಕ್ಷಣದಲ್ಲಿ ಮಲೆಯಾಳಂ ಮಾಧ್ಯಮಕ್ಕೆ ಅರ್ಧಚಂದ್ರ ಪ್ರಯೋಗದಂತಹ ಜನವಿರೋಧಿ ನೀತಿಗಳಿಗೆ ರಭಸ ನೀಡಿದ್ದಾರೆ ಉಪ ರಾಜ್ಯಪಾಲರು. ಕೇರಳದೊಂದಿಗೆ ಲಕ್ಷದ್ವೀಪ ಹೊಂದಿರುವ ಕರುಳಬಳ್ಳಿಯನ್ನು ಕಡಿಯಲು ಹೂಡಿರುವ ಹುನ್ನಾರವಿದು.

ಲಕ್ಷದ್ವೀಪದ ಜನತೆಯ ಬೆಚ್ಚಗಿನ ಸ್ನೇಹವಿಶ್ವಾಸಕ್ಕೆ ಮೋದಿಯವರೇ ಬೆರಗಾಗಿದ್ದರೆ, ಪ್ರಫುಲ್ ಪಟೇಲ್ ಗೇಕೆ ಇಷ್ಟು ಹಗೆತನ? ಇಷ್ಟು ಸಿಟ್ಟನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಲಕ್ಷದ್ವೀಪವನ್ನು ಮಾಲ್ದೀವ್ಸ್ ಮಾಡಲು ಸಾಧ್ಯವೇ?

ಮಾಲ್ದೀವ್ಸ್ ನಮ್ಮ ನೆರೆಹೊರೆಯ ಗುಬ್ಬಿ. ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಅನಗತ್ಯ. ಸಂಯಮ ಅತ್ಯಗತ್ಯ. ನಮ್ಮ ನಡವಳಿಕೆ ಭಾರತವಿರೋಧಿ ಭಾವನೆ ಇನ್ನಷ್ಟು ಬಲಿತು ಬೇರೂರಿಸುವಂತೆ ಇರಬಾರದು. ಬದಲಾವಣೆ ರಾಜಕೀಯ ಋತುಮಾನದ ಚಹರೆ. ಈಗಿನ ಭಾರತವಿರೋಧಿ ಸರ್ಕಾರ ಚಿರಾಯುವೇನೂ ಅಲ್ಲ. ಗಾಲಿ ನಿಶ್ಚಲವಲ್ಲ. ಉರುಳುವುದು ಅದರ ಧರ್ಮ. ಕಾಲವೂ ಅಷ್ಟೇ, ಗಾಲಿಯಂತೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X