ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರದ ಈ ಪ್ರಕರಣ ತಮಗೆ ತಿಳಿದದ್ದು ‘ಈಗ ತಾನೇ’ ಎಂಬ ಮುಖ್ಯಮಂತ್ರಿ ಬೀರೇನ್ ಸಿಂಗ್ ಪ್ರತಿಕ್ರಿಯೆಯು ವಿಕಟ ವಿಡಂಬನೆ. ಪ್ರಕರಣದ ಎಫ್.ಐ.ಆರ್. ತಿಂಗಳುಗಳ ಹಿಂದೆಯೇ ದಾಖಲಾಗಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಯ ನಡುವಣ ಸಂಪರ್ಕ ಎರಡೂವರೆ ತಿಂಗಳ ಕಾಲ ಮುರಿದು ಬೀಳುವುದು ಸಾಧ್ಯವೇ? ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ವಿಷಯಗಳನ್ನು ಪೊಲೀಸ್ ಮುಖ್ಯಸ್ಥರು ಮುಖ್ಯಮಂತ್ರಿಯಿಂದ ಮುಚ್ಚಿಟ್ಟರೇ?
ಹಿಂಸೆ ದ್ವೇಷದ ದಳ್ಳುರಿಯಲ್ಲಿ ಬೂದಿಯಾಗುತ್ತಿರುವ ಮಣಿಪುರದಿಂದ ಮತ್ತೊಂದು ಪೈಶಾಚಿಕ ಕೃತ್ಯ ಮೇಲೆ ತೇಲಿದೆ. ಕುಕಿ ಬುಡಕಟ್ಟಿನ ಮೂವರು ಹೆಣ್ಣುಮಕ್ಕಳನ್ನು ಮೇತೀ ಸಮುದಾಯದ ಪುರುಷಪಶುಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿಸಿದೆ. ಆನಂತರ ಈ ಪೈಕಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಎರಡೂವರೆ ತಿಂಗಳ ಹಿಂದೆ ನಡೆದಿರುವ ಈ ನಾಚಿಕೆಗೇಡಿನ ಕೃತ್ಯದ ವಿಡಿಯೋ ಇದೀಗ ಬಹಿರಂಗವಾಗಿದೆ. ಸುಪ್ರೀಮ್ ಕೋರ್ಟು ಈ ಪ್ರಕರಣವನ್ನು ತಾನಾಗಿಯೇ ಗಮನಿಸಿ ವಿಚಾರಣೆಗೆ ಎತ್ತಿಕೊಂಡಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಆದೇಶ ನೀಡಿದೆ. ಹೀಗಾಗಿ ಮಣಿಪುರದ ದಳ್ಳುರಿಯ ಕುರಿತು ತಳೆದಿದ್ದ ಮಹಾಮೌನವನ್ನು ಪ್ರಧಾನಿಯವರು ಇಂದು ಕಡೆಗೂ ಮುರಿಯಲೇಬೇಕಾಯಿತು ಪಾಪ. ಆದರೆ ಹೀಗೆ ಮೌನ ಮುರಿಯಲು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣ ಬಯಲಿಗೆ ಬರಬೇಕಾಯಿತು ಎಂಬುದು ಲಜ್ಜೆಗೇಡಿನ ಸಂಗತಿ.
ಮಣಿಪುರವೆಂಬುದು ಉರಿದ ಮನೆಗಳು, ಮುರಿದು ಮಣ್ಣಿಗೆ ಬಿದ್ದ ಕನಸುಗಳು, ಇನ್ನೆಂದೂ ಜೋಡಿಸಲಾರದಂತೆ ಒಡೆದ ಮನಗಳ ಸೀಮೆ. ಡಬಲ್ ಎಂಜಿನ್ ಸರ್ಕಾರ ಎಂದು ದನಿಯೆತ್ತಿ ಎದೆ ತಟ್ಟಿಕೊಳ್ಳುವವರು ಮಣಿಪುರದಲ್ಲಿ ತಮ್ಮ ಮೂಗಿನ ಕೆಳಗೆ ನಡೆಯುತ್ತಿರುವ ಘನಘೋರ ಕುರಿತು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ.
ಉಕ್ರೇನ್ ಯುದ್ಧವನ್ನು ನಿಲ್ಲಿಸಿ ನೊಬೆಲ್ ಶಾಂತಿ ಪಾರಿತೋಷಕ ಪಡೆಯುತ್ತಾರೆಂದು ಪ್ರಚಾರ ಪಡೆದವರು ತಮ್ಮದೇ ದೇಶದ ಹಿತ್ತಲಿನ ಪುಟ್ಟ ರಾಜ್ಯವೊಂದರ ಗಲಭೆಗಳನ್ನು ತಿಂಗಳುಗಳ ನಂತರವೂ ನಿಲ್ಲಿಸದಿರುವುದು ಸೋಜಿಗವೇ ಸರಿ.
ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರದ ಈ ಪ್ರಕರಣ ತಮಗೆ ತಿಳಿದದ್ದು ‘ಈಗ ತಾನೇ’ ಎಂಬ ಮುಖ್ಯಮಂತ್ರಿ ಬೀರೇನ್ ಸಿಂಗ್ ಪ್ರತಿಕ್ರಿಯೆಯು ವಿಕಟ ವಿಡಂಬನೆ. ಪ್ರಕರಣದ ಎಫ್.ಐ.ಆರ್. ತಿಂಗಳುಗಳ ಹಿಂದೆಯೇ ದಾಖಲಾಗಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಯ ನಡುವಣ ಸಂಪರ್ಕ ಎರಡೂವರೆ ತಿಂಗಳ ಕಾಲ ಮುರಿದು ಬೀಳುವುದು ಸಾಧ್ಯವೇ? ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ವಿಷಯಗಳನ್ನು ಪೊಲೀಸ್ ಮುಖ್ಯಸ್ಥರು ಮುಖ್ಯಮಂತ್ರಿಯಿಂದ ಮುಚ್ಚಿಟ್ಟರೇ? ಇಲ್ಲವೇ ವಿಷಯ ತಿಳಿದಿದ್ದೂ ಮುಚ್ಚಿಟ್ಟು ತಿಪ್ಪೆ ಸಾರಿಸಿದರೇ ಮುಖ್ಯಮಂತ್ರಿ? ತಪ್ಪಿತಸ್ಥರನ್ನು ಈವರೆಗೆ ಯಾಕೆ ಬಂಧಿಸಿಲ್ಲ, ತನಿಖೆಯಲ್ಲಿ ಯಾಕೆ ಯಾವುದೇ ಪ್ರಗತಿಯಾಗಿಲ್ಲ? ಆರೋಪಿಗಳನ್ನು ರಕ್ಷಿಸುತ್ತಿರುವ ಶಕ್ತಿಗಳು ಯಾವುವು? ಹೊಣೆಗಾರಿಕೆ ಅಥವಾ ಉತ್ತರದಾಯಿತ್ವ ಎಂಬುದು ಪ್ರಧಾನಿ ಮೋದಿಯವರ ಮತ್ತು ಭಾರತೀಯ ಜನತಾ ಪಕ್ಷದ ನಿಘಂಟಿನಲ್ಲಿ ಇಲ್ಲವೇ ಇಲ್ಲ ಯಾಕೆ?
ಅಲೀಮುದ್ದೀನ್ ಅನ್ಸಾರಿ ಎಂಬ ದನಗಳ ವ್ಯಾಪಾರಿಯನ್ನು ಐದು ವರ್ಷಗಳ ಹಿಂದೆ ಹಜಾರಿಬಾಗ್ ನಲ್ಲಿ ಜಜ್ಜಿ ಕೊಂದ ಎಂಟು ಮಂದಿ ಪಾತಕಿಗಳ ಕೊರಳಿಗೆ ಹೂಮಾಲೆ ಹಾಕಿ ಸನ್ಮಾನಿಸಿದ್ದರಲ್ಲವೇ ಅಂದಿನ ಕೇಂದ್ರ ಮಂತ್ರಿ ಜಯಂತ್ ಸಿನ್ಹಾ?
ಪ್ರಚಂಡ ಮಾತಿನ ಮಲ್ಲರಾದ ಮೋದಿಯವರು ಹಲವು ವಿಷಯಗಳ ಕುರಿತು ಓತಪ್ರೋತವಾಗಿ ‘ಮನ್ ಕೀ ಬಾತ್’ ಆಡುತ್ತಾರೆ. ಎರಡೂ ಕೈಗಳನ್ನು ಹಲವು ಭಂಗಿಗಳಲ್ಲಿ ಎತ್ತಿ ಇಳಿಸಿ ಭಾಷಣಗಳನ್ನು ಕುಟ್ಟಿ ಕೆಡವುತ್ತಾರೆ. ಆದರೆ ದೇಶವನ್ನು ಸಮಾಜವನ್ನು ಸುಡುವ ಹಲವು ವಿಷಯಗಳ ಕುರಿತು ತಿಂಗಳುಗಟ್ಟಲೆ ಮೌನ ತಳೆಯುತ್ತಾರೆ. ಈ ಮಹಾಮೌನಗಳ ಹಿಂದಿನ ರಹಸ್ಯ ಏನಿರುತ್ತದೆಂದು ಯಾವಾಗಲಾದರೊಮ್ಮೆ ‘ಮನ್ ಕೀ ಬಾತ್’ ನಲ್ಲಿ ದೇಶವಾಸಿಗಳಿಗೆ ಜ್ಞಾನೋದಯ ಮಾಡಿಸುವ ಕೃಪೆ ತೋರಬೇಕು.
ರೋಹಿತ್ ವೇಮುಲನ ಆತ್ಮಹತ್ಯೆಯ ದುರಂತ ದೇಶದ ಆತ್ಮಸಾಕ್ಷಿಯನ್ನು ಕೆಣಕಿತ್ತು. ಆದರೆ ಮೋದಿಯವರು ಬಾಯಿ ಬಿಡಲು ಬಹುಕಾಲ ಬೇಕಾಯಿತು. ಗುಜರಾತಿನ ಊನಾ ಎಂಬಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕರು’ ನಡುರಸ್ತೆಯಲ್ಲಿ ಅಮಾನುಷವಾಗಿ ಥಳಿಸಿದ ಕುರಿತು ಅವರು ತುಟಿ ತೆರೆದದ್ದು ಘಟನೆ ಜರುಗಿದ ಒಂದು ತಿಂಗಳ ನಂತರ. ಚೀನೀಯರು ಭಾರತದ ನೆಲವನ್ನು ಆಕ್ರಮಿಸಿ ತಿಂಗಳುಗಟ್ಟಲೆ ಬೀಡು ಬಿಟ್ಟ ಕುರಿತು ಯಾರೂ ಒಳನುಸುಳಿಲ್ಲ, ಯಾರೂ ಆಕ್ರಮಿಸಿಕೊಂಡಿಲ್ಲ ಎಂದು ಒಮ್ಮೆ ಬಾಯಿಬಿಟ್ಟು ಬಣ್ಣಗೇಡಾದರು. ಆನಂತರ ಗಾಢ ಮೌನಕ್ಕೆ ಶರಣಾದರು.
‘ಕೊಲ್ಲಲು ನಾವು ತಯಾರಿದ್ದೇವೆ, ನೀವೂ ಸಿದ್ಧರಾಗಿ, ಹತಾರುಗಳನ್ನು ಹಿರಿದಿಟ್ಟುಕೊಳ್ಳಿರಿ, ಕೊಲ್ಲದೆ ಬೇರೆ ದಾರಿಯೇ ಇಲ್ಲ’ ಎಂಬ ಹರಿದ್ವಾರದ ಹಿಂದೂ ಸಂತ ಸಮ್ಮೇಳನದ ಪ್ರಚೋದನಕಾರಿ ಭಾಷಣಗಳ ಕುರಿತು ಪ್ರಧಾನಿ ಕಡೆಗೂ ಬಾಯಿ ಬಿಟ್ಟಿಲ್ಲ. ಹಿಂದೂ ರಾಷ್ಟ್ರ ಸ್ಥಾಪಿಸಲು ಸಾಯಲು, ಸಾಯಿಸಲು ತಯಾರು ಎಂಬ ಹಿಂದೂ ಯುವವಾಹಿನಿಯ ದೆಹಲಿ ಪ್ರತಿಜ್ಞೆಯನ್ನು ಖಂಡಿಸಲಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಜಾತ್ಯತೀತತೆ, ಸಹಿಷ್ಣುತೆ, ಧಾರ್ಮಿಕ ಸೌಹಾರ್ದದ ಕುರಿತು ತಾವು ಅಡಿಗಡಿಗೆ ಎದೆ ತಟ್ಟಿಕೊಂಡು ಸಾರುವುದನ್ನು ನಿಲ್ಲಿಸಲೂ ಇಲ್ಲ. ಜಿ-20ಯ ಅಧ್ಯಕ್ಷ ಪಟ್ಟದ ಸರದಿ ಭಾರತಕ್ಕೆ ಸಂದಿದ್ದು, “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ಘೋಷವಾಕ್ಯವನ್ನು ಬರೆದುಕೊಳ್ಳಲಾಗುತ್ತಿರುವುದು ಅಪ್ಪಟ ಆಷಾಢಭೂತಿತನ.
2002ರ ಗುಜರಾತಿನ ಕೋಮು ಗಲಭೆಗಳಲ್ಲಿ, 2013ರ ಪಶ್ಚಿಮ ಉತ್ತರಪ್ರದೇಶದ ಮುಝಾಫರ್ಪುರದ ಕೋಮುಗಲಭೆಗಳಲ್ಲಿ, ಮೊನ್ನೆ ಮೊನ್ನೆ ಉತ್ತರಾಖಂಡದಲ್ಲಿ ಕೈ ಕಾಯಿಸಿಕೊಂಡ ಶಕ್ತಿಗಳು ಯಾವುವೆಂಬುದು ಜನಜನಿತ. ಇದೀಗ ಇವೇ ಶಕ್ತಿಗಳು ಮಣಿಪುರದ ಮೇತೀಗಳೆಂಬ ವೈಷ್ಣವ ಹಿಂದೂಗಳು ಮತ್ತು ಕುಕೀಗಳೆಂಬ ಗುಡ್ಡಗಾಡು ಕ್ರೈಸ್ತ ಬುಡಕಟ್ಟುಗಳ ನಡುವೆ ಬೆಂಕಿ ಹಚ್ಚಿವೆ. ಅಪಾರ ಸಾವು ನೋವು, ಹಿಂಸೆಯ ದಳ್ಳುರಿಯ ನಡುವೆ ದ್ವೇಷದ ಫಸಲಿನ ಕಟಾವಿಗೆ ಕುಡುಗೋಲು ಹಿಡಿದು ಗಹಗಹಿಸಿವೆ.
ಗುಜರಾತ್, ಮುಝಾಫರ್ಪುರ ಕೋಮು ಗಲಭೆಗಳಲ್ಲಿ ಒಂದು ಕೋಮಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ಸೇಡಿನ ಸಾಮೂಹಿಕ ಅತ್ಯಾಚಾರಗಳು ನಡೆದವು. ಹೆಣ್ಣು ದೇಹವೆಂಬುದು ಗಲಭೆಗಳು-ಸಮರಗಳು-ಸೇಡುಗಳನ್ನು ತೀರಿಸುವ ಕದನ ಮೈದಾನ. ಇತಿಹಾಸದ ಕರಾಳ ಅಧ್ಯಾಯಗಳು ಈ ಕಹಿಸತ್ಯವನ್ನು ಚೀರಿ ಹೇಳುತ್ತವೆ.
ಮಣಿಪುರ ವಿನಾಶದ ಈ ಇಡೀ ಪ್ರಕರಣ ಕುರಿತು ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆ ನಡೆಯಬೇಕಿದೆ. ಈ ವಿಚಾರಣೆಯು ಸುಪ್ರೀಮ್ ಕೋರ್ಟಿನ ನೇರ ಉಸ್ತುವಾರಿಯಲ್ಲೇ ನೆರವೇರಬೇಕು.
