ಬಾಲ್ಯದಲ್ಲಿಯೇ ಮಕ್ಕಳ ಬದುಕನ್ನು ಕಮರುವಂತೆ ಮಾಡುವ ದುಷ್ಟ ಸಮಾಜವಿದು. ಹೀಗಿರುವಾಗ ಪೋಕ್ಸೊ ಪ್ರಕರಣಗಳಿಂದ ಪಾರಾಗಲು ಮದುವೆ ಎಂಬುದು ದಾಳವಾಗಬಾರದು. ಸಂತ್ರಸ್ತೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸರ್ಕಾರಗಳು ವಹಿಸಬೇಕಿದೆ. ಬಡ ಪೋಷಕರ ನಿರ್ಲಕ್ಷ್ಯದ ಕಾರಣದಿಂದ ಬೇರೆ ದಿಕ್ಕಿಲ್ಲದೇ ತನ್ನ ಮೇಲೆ ಪೈಶಾಚಿಕ ಕೃತ್ಯ ಎಸಗಿದವನ ಜೊತೆಗೆ ಬಾಳುವೆ ನಡೆಸುವಂತಹ ಪರಿಸ್ಥಿತಿಗೆ ಅಮಾಯಕ ಹೆಣ್ಣುಮಕ್ಕಳನ್ನು ತಳ್ಳಬಾರದು.
ದೇಶದಲ್ಲಿ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ, ಶಿಕ್ಷೆಯ ಪ್ರಮಾಣ ತೀರಾ ಇಳಿಮುಖವಾಗುತ್ತಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿಅಂಶದ ಪ್ರಕಾರ ದೇಶದಲ್ಲಿ 754 ತ್ವರಿತ ನ್ಯಾಯಾಲಯಗಳಿವೆ. ಇದರಲ್ಲಿ 33 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 404 ಪೋಕ್ಸೋ ಕೋರ್ಟುಗಳು ಸೇರಿವೆ. 2025 ಜನವರಿ ಅಂತ್ಯದೊಳಗೆ 3.6ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಷನ್ ಪ್ರಕಾರ ಶಿಕ್ಷೆಯ ಪ್ರಮಾಣ ಕೇವಲ 34%. ಅರ್ಥಾತ್ ಮೂರನೇ ಒಂದರಷ್ಟು! ಈ ಮಧ್ಯೆ ಒಂದಿಷ್ಟು ಹಣ ಪಡೆದು ರಾಜಿಯಾಗುವ ಮೂಲಕ ಮತ್ತು ಸಂತ್ರಸ್ತೆಯನ್ನು ಆರೋಪಿ ಮದುವೆಯಾಗುವ ಮೂಲಕ ಪ್ರಕರಣಗಳು ಅಂತ್ಯಗೊಳ್ಳುತ್ತಿವೆ. ಇಂತಹದೊಂದು ಪ್ರಕರಣ ʼಮಾನವೀಯ ನ್ಯಾಯʼದ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಕೂಡಾ ಮಾನ್ಯ ಮಾಡಿದೆ.
ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಪೋಕ್ಸೊ ಅಪರಾಧಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ದೋಷಮುಕ್ತಗೊಳಿಸಿದೆ. ಈ ನ್ಯಾಯದಾನವನ್ನು ಪೀಠವು ʼಮಾನವೀಯ ನ್ಯಾಯʼಎಂದು ಸಮರ್ಥಿಸಿಕೊಂಡಿದೆ. ಸಂತ್ರಸ್ತೆ ಆರೋಪಿಯನ್ನು ಮದುವೆಯಾಗಿದ್ದಾಳೆ. ಆಕೆಗೆ ಒಂದು ಮಗುವಿದೆ. ಹೆತ್ತವರು ಆಕೆಯನ್ನು ದೂರ ಮಾಡಿದ್ದಾರೆ. ಆರೋಪಿಗೆ ಶಿಕ್ಷೆ ವಿಧಿಸಿದರೆ ಈಗಾಗಲೆ ಅನ್ಯಾಯಕ್ಕೆ ತುತ್ತಾಗಿರುವ ಸಂತ್ರಸ್ತೆಗೆ ಇನ್ನಷ್ಟು ಶಿಕ್ಷೆ ಕೊಟ್ಟಂತಾಗುತ್ತದೆ. ಆರ್ಟಿಕಲ್ 142ರ ಅಡಿಯಲ್ಲಿ ತನ್ನ ಅಸಾಧಾರಣ ನ್ಯಾಯ ವ್ಯಾಪ್ತಿಯನ್ನು ಬಳಸಿಕೊಂಡು, ಆರೋಪಿಯನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
2018ರಲ್ಲಿ ದಾಖಲಾದ ಈ ಪ್ರಕರಣವಿದು. 2023ರಲ್ಲಿ ಕೋಲ್ಕತ್ತಾ ಹೈಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆದರೆ ಆಗ ಹೈಕೋರ್ಟ್ ಪೀಠ ಪೋಕ್ಸೊ ಸಂತ್ರಸ್ತರ ಮನೋಬಲ ಕುಗ್ಗುವಂತಹ ಹೇಳಿಕೆ ನೀಡಿತ್ತು. ಅದಕ್ಕೆ ಭಾರೀ ಟೀಕೆ ವ್ಯಕ್ತವಾದ ನಂತರ ಆ ಆದೇಶವನ್ನು ಸುಪ್ರೀಕೋರ್ಟ್ ರದ್ದುಪಡಿಸಿ ಆತನನ್ನು ದೋಷಿ ಎಂದು ಹೇಳಿತ್ತು. ಆದರೆ ಶಿಕ್ಷೆ ಘೋಷಿಸಿರಲಿಲ್ಲ. ಸಂತ್ರಸ್ತೆಯ ಮಾನಸಿಕ ಪರಿಸ್ಥಿತಿ ಅಧ್ಯಯನಕ್ಕೆ ಮಾನಸಿಕ ತಜ್ಞರ ಸಮಿತಿ ರಚಿಸಿ ಆದೇಶಿಸಿತ್ತು. ತಾನು ವಿವಾಹವಾಗಿರುವ ಆರೋಪಿಗೆ ಶಿಕ್ಷೆ ನೀಡಬಾರದೆಂಬುದು ಆಕೆಯ ಮನವಿಯಾಗಿತ್ತು. ಈಗಾಗಲೇ ಅವರು ಕುಟುಂಬವಾಗಿ ಬದುಕುತ್ತಿದ್ದಾರೆ. ಮಗಳನ್ನು ಶಾಲೆಗೆ ಸೇರಿಸಿದ್ದಾರೆ. ಆತನಿಗೆ ಶಿಕ್ಷೆ ನೀಡಿದರೆ ಸಂತ್ರಸ್ತೆಯ ಬದುಕು ಬೀದಿ ಪಾಲಾಗುತ್ತದೆ ಎಂದು ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ. ಇದು ಕಾನೂನು ಮೀರಿದ ಮಾನವೀಯ ನ್ಯಾಯದಾನ. ವಿರಳ ಪ್ರಕರಣವೆಂದು ಬಗೆಯಬೇಕೇ ವಿನಾ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ತಂತ್ರ ಆಗಬಾರದು.
ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳ ಶಿಕ್ಷೆಯಿಂದ ಪಾರಾಗಲು ಮದುವೆ ಎಂಬುದು ದುರ್ಬಳಕೆಯ ದಾಳವಾಗಬಾರದು. ಈಗಾಗಲೇ ಹಲವು ಪೋಕ್ಸೊ ಪ್ರಕರಣಗಳು ಮಾತ್ರವಲ್ಲ ವಯಸ್ಕರ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರೇ ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸಿ ಸಂತ್ರಸ್ತರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ಪೋಕ್ಸೊ ಪ್ರಕರಣಗಳಾದರೆ ಸಂತ್ರಸ್ತೆಯನ್ನು ವಯಸ್ಕಳಾದ ನಂತರ ಮದುವೆಯಾಗುವ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಬಡ ಕೂಲಿಕಾರ ಕುಟುಂಬಗಳು ಪೊಲೀಸ್ ಠಾಣೆ, ಕೋರ್ಟ್ ಅಲೆಯುವ ಸಂಕಷ್ಟದಿಂದ ಪಾರಾಗಲು ರಾಜಿಗೆ ಒಪ್ಪುತ್ತವೆ ಎಂಬುದು ಕಠೋರ ವಾಸ್ತವ.
ನಮ್ಮ ಪೊಲೀಸರು ಮತ್ತು ಕೋರ್ಟುಗಳು ಗಣನೀಯ ಸಂಖ್ಯೆಯ ಪೋಕ್ಸೊ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವಿದೆ. ಇದು ಸತ್ಯಕ್ಕೆ ದೂರವಾದ ಮಾತೇನಲ್ಲ. ಪ್ರಭಾವಿಗಳ ಮೇಲೆ ಪೋಕ್ಸೊ ಪ್ರಕರಣ ದಾಖಲಾದಾಗ ಕೋರ್ಟ್ ಅಂತಹ ಆರೋಪಿಗಳಿಗೆ ಬಂಧನದಿಂದ ವಿನಾಯ್ತಿ ಕೊಡುತ್ತದೆ. ಹಣ, ಅಧಿಕಾರ ಬಲವಿಲ್ಲದ ಆರೋಪಿಗಳನ್ನು ಮಾತ್ರ ಬಂಧಿಸಲಾಗುತ್ತದೆ ಎಂಬುದಕ್ಕೆ ಹತ್ತಾರು ಪುರಾವೆಗಳು ಸಿಗುತ್ತವೆ.
ಎರಡು ವರ್ಷಗಳ ಹಿಂದೆ ಉತ್ತರಪ್ರದೇಶದ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್‌ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅದರಲ್ಲಿ ಅಪ್ರಾಪ್ತೆಯೊಬ್ಬರು ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣದಲ್ಲಿ ಒಂದು ದಿನಕ್ಕೂ ಆತನ ಬಂಧನವಾಗಲಿಲ್ಲ. ಸಂತ್ರಸ್ತೆಯ ತಂದೆ ದೂರನ್ನು ವಾಪಸು ತೆಗೆದುಕೊಂಡ ಪರಿಣಾಮವಾಗಿ ಇತ್ತೀಚೆಗೆ ಆತನನ್ನು ಕೋರ್ಟ್ ಖುಲಾಸೆಗೊಳಿಸಿತು. ಪ್ರಭಾವಿ ಕುಳ ಬ್ರಿಜಭೂಷಣ್ ಸಂತ್ರಸ್ತೆಯ ಕುಟುಂಬವನ್ನು ಬೆದರಿಸಿದ್ದನೆಂಬ ಮಾತುಗಳಿವೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 2024 ಮಾರ್ಚ್‌ಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ 2024 ಜೂನ್ 12ರಂದು ಕೆಳ ಹಂತದ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಆದರೆ ಯಡಿಯೂರಪ್ಪನವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಆರೋಪಿಯ ಬಂಧನ ನಡೆಸದೇ ವಿಚಾರಣೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ವಿಚಾರಣೆ ಕುಂಟುತ್ತ ಸಾಗಿದೆ.
ಮಹಾರಾಷ್ಟ್ರದ ನ್ಯಾಯಾಂಗ ಅಧಿಕಾರಿಯೊಬ್ಬನು 2014-2018 ರವರೆಗೆ ನಾಲ್ಕು ವರ್ಷಗಳ ಕಾಲ ತನ್ನ ಹನ್ನೆರಡು ವರ್ಷದ ಮಗಳನ್ನು ಲೈಂಗಿಕ ಕಿರುಕುಳಕ್ಕೆ ಗುರಿ ಮಾಡಿರುವ ಪ್ರಕರಣದ ಆರೋಪಿ. ಪ್ರಕರಣ ಕುರಿತ ಎಫ್.ಐ.ಆರ್. ರದ್ದು ಕೋರಿ ಸುಪ್ರೀನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿದೆ, ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಸೆಕ್ಷನ್ 164ರ ಅಡಿ ಹೇಳಿಕೆ ಕೊಟ್ಟಿದ್ದಾಳೆ. ಇದು ರದ್ದುಪಡಿಸುವಂತಹ ಪ್ರಕರಣ ಅಲ್ಲ ಎಂದು ಪೀಠ ಹೇಳಿದೆ. ಪೋಕ್ಸೊ ಪ್ರಕರಣಕ್ಕೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ನೀಡುವ ಹೇಳಿಕೆಯೇ ಅಂತಿಮ. ಆದರೂ ಯಾಕೆ ಶಿಕ್ಷೆಯಾಗುತ್ತಿಲ್ಲ ಎಂಬುದನ್ನು ಕಾನೂನು ಪಾಲಕರು, ನ್ಯಾಯದಾನಿಗಳು ಆಲೋಚಿಸಬೇಕಿದೆ.
ಬೆಂಗಳೂರಿನ ಯಶವಂತಪುರದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಒಂದು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಗೆಲಸ ಮಾಡಿ ಸಂಸಾರ ನಿಭಾಯಿಸುವ ತಾಯಿ. ಬಾಲಕಿಗೆ ತಂದೆ ಇಲ್ಲ, ಬಾಲಕಿಯನ್ನು ಪರಿಚಿತ ಯುವಕನೇ ಲೈಂಗಿಕವಾಗಿ ಬಳಸಿಕೊಂಡಿದ್ಧಾನೆ. ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ಕರೆದೊಯ್ದಾಗ ವಿಚಾರ ಗೊತ್ತಾಗಿದೆ. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಘಾತಕಾರಿ ವಿಷಯ ಇತ್ತೀಚೆಗೆ ವರದಿಯಾಗಿತ್ತು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಹೆಣ್ಣುಮಕ್ಕಳ ಬದುಕನ್ನು ಬಾಲ್ಯದಲ್ಲಿಯೇ ಕಮರುವಂತೆ ಮಾಡುವ ಗಂಡಾಳಿಕೆಯ ದುಷ್ಟ ಸಮಾಜವಿದು. ಇಂತಹ ಸನ್ನಿವೇಶದಲ್ಲಿ ಪೋಕ್ಸೊ ಪ್ರಕರಣಗಳಿಂದ ಪಾರಾಗಲು ಮದುವೆ ಎಂಬುದು ಅಸ್ತ್ರವಾಗಬಾರದು. ಸರ್ಕಾರಗಳು ಸಂತ್ರಸ್ತೆಯ ನೆರವಿಗೆ ಧಾವಿಸಬೇಕಿದೆ. ಬೇರೆ ದಾರಿಯೇ ಇಲ್ಲದೆ ತನ್ನ ಮೇಲೆ ಪೈಶಾಚಿಕ ಕೃತ್ಯ ಎಸಗಿದವನ ಜೊತೆಗೆ ಬಾಳುವೆ ನಡೆಸುವಂತಹ ನರಕಕ್ಕೆ ಬಡ ಅಸಹಾಯಕ ಅಮಾಯಕ ಹೆಣ್ಣುಮಕ್ಕಳನ್ನು ತಳ್ಳಬಾರದು. ಇದು ಸ್ವಸ್ಥ ಸಮಾಜದ ಲಕ್ಷಣವಲ್ಲ.
