ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!

Date:

Advertisements

ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟದ 11 ಮಂದಿ ಸಂಸದರು ಮಂಗಳವಾರ ಸಭಾತ್ಯಾಗ ಮಾಡಿದ ನಂತರ ಕೋರಂ ಇಲ್ಲವೆಂದು ಸಭೆಯನ್ನು ರದ್ದು ಮಾಡಲಾಗಿದೆ. ಆಳುವ ಒಕ್ಕೂಟಕ್ಕೆ ಸೇರಿದ ಈ ಸಂಸದರ ಸಭಾತ್ಯಾಗ ನಡೆದದ್ದು ಪೂರ್ವಗ್ರಹ ಮತ್ತು ದ್ವೇಷದ ಕಾರಣಗಳಿಗಾಗಿ.

ನವದೆಹಲಿಯಲ್ಲಿ ಮಂಗಳವಾರ ಭೂಸ್ವಾಧೀನ ಕಾಯ್ದೆ ಜಾರಿ ಕುರಿತು ವಿಮರ್ಶೆ ನಡೆಸಬೇಕಿದ್ದ ಸಂಸದೀಯ ಸಮಿತಿಯ ಸಭೆಯೊಂದು ಆರಂಭದಲ್ಲೇ ಅಂತ್ಯಗೊಂಡಿದೆ. ಈ ಕಾಯ್ದೆಯನ್ನು 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೂಪಿಸಿ ಸಂಸತ್ತಿನ ಅಂಗೀಕಾರ ಪಡೆದು ಜಾರಿ ಮಾಡಿತ್ತು.

ದೇಶದ ರೈತರನ್ನು ಬೇಟೆಯಾಡುತ್ತಿರುವ ಭಾರೀ ದೊಡ್ಡ ಸಮಸ್ಯೆ ಭೂಸ್ವಾಧೀನ. ಬೆಂಗಳೂರಿನ ಸನಿಹದ ದೇವನಹಳ್ಳಿಯ ಸುತ್ತಮುತ್ತಲ 1777 ಎಕರೆಗಳಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರಿ ಅಧಿಸೂಚನೆಯನ್ನು ವಿರೋಧಿಸಿ ರೈತರು ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕೆ ಚಲನಚಿತ್ರನಟ ಪ್ರಕಾಶ್ ರಾಜ್ ಬೆಂಬಲ ಸೂಚಿಸಿದ್ದಾರೆ.

Advertisements

ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟದ 11 ಮಂದಿ ಸಂಸದರು ಮಂಗಳವಾರ ಸಭಾತ್ಯಾಗ ಮಾಡಿದ ನಂತರ ಕೋರಂ ಇಲ್ಲವೆಂದು ಸಭೆಯನ್ನು ರದ್ದು ಮಾಡಲಾಗಿದೆ. ಆಳುವ ಒಕ್ಕೂಟಕ್ಕೆ ಸೇರಿದ ಈ ಸಂಸದರ ಸಭಾತ್ಯಾಗ ನಡೆದದ್ದು ಪೂರ್ವಗ್ರಹ ಮತ್ತು ದ್ವೇಷದ ಕಾರಣಗಳಿಗಾಗಿ.

ಹಾಲಿ ಕಾಯ್ದೆಯನ್ನು ರಾಹುಲ್ ಗಾಂಧೀ ಅವರು ತಮ್ಮ ಪಕ್ಷದ ಮತ್ತು ಯುಪಿಎ ಸರ್ಕಾರದ ಮೇಲೆ ಭಾರೀ ಒತ್ತಡ ಹೇರಿ 2013ರಲ್ಲಿ ಜಾರಿ ಮಾಡಿಸಿದ್ದರು. ಹೆಚ್ಚು ಮಾನವೀಯ ಮತ್ತು ಪಾರದರ್ಶಕವಾಗಿದ್ದ ಕಾಯ್ದೆಯಿದು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಈ ಕಾಯ್ದೆಯ ಆಶಯವನ್ನು ಭಂಗಗೊಳಿಸಿ ರೈತವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ಬಹುದೊಡ್ಡ ವಿಡಂಬನೆ.

ಮಾಜಿ ಪ್ರಧಾನಿ ದೇವೇಗೌಡರು ಲೋಕಸಭೆಯಲ್ಲೇ ಒಪ್ಪಿಕೊಂಡಿದ್ದ ಪ್ರಕಾರ ಈ ಕಾಯ್ದೆಯ ರೈತರ ಪರವಾಗಿತ್ತು. ಈ ಕಾಯ್ದೆಗೆ ಮೋದಿ ಸರ್ಕಾರ 2015ರಲ್ಲಿ ತಂದಿದ್ದ ತಿದ್ದುಪಡಿಗಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಭೂಸ್ವಾಧೀನ ಮಾಡಿಕೊಳ್ಳಲು ರೈತರ ಸಮ್ಮತಿ ಪಡೆಯುವ ಮತ್ತು ಸಾಮಾಜಿಕ ಸಾಧಕಬಾಧಕಗಳ ಅಧ್ಯಯನ ಮಾಡುವ ಅಗತ್ಯವಿಲ್ಲ ಎಂಬ ರೈತವಿರೋಧಿ ಅಂಶಗಳು ಈ ತಿದ್ದುಪಡಿಗಳಲ್ಲಿ ಸೇರಿದ್ದವು. ವ್ಯಾಪಕ ವಿರೋಧದ ನಂತರ ಮೋದಿ ಸರ್ಕಾರ ಈ ತಿದ್ದುಪಡಿಗಳನ್ನು ಕೈ ಬಿಟ್ಟಿತ್ತು.

ಆದರೆ ಮಂಗಳವಾರ ಸಂಸತ್ ಭವನದ ಆವರಣದಲ್ಲಿ ನಡೆದಿರುವ ಪ್ರಹಸನದ ಭೂಸ್ವಾಧೀನ ಕಾಯ್ದೆಯನ್ನು ಮೋದಿ ಸರ್ಕಾರ ದುರ್ಬಲಗೊಳಿಸುವ ಹೊಸ ಪ್ರಯತ್ನಕ್ಕೆ ಕೈ ಹಾಕಿದೆಯೇ ಎಂಬ ಅನುಮಾನವನ್ನು ಹುಟ್ಟಿ ಹಾಕಿದೆ.  

ಸಂಸದರು ಪ್ರತಿಭಟಿಸಿದ್ದು ಹಿರಿಯ ಜನಪರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮತ್ತು ಚಲನಚಿತ್ರ ನಟ-ಹೋರಾಟಗಾರ ಪ್ರಕಾಶ್ ರಾಜ್ ಅವರು ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಲು ಎಂಬುದು ತೀವ್ರ ಕಳವಳಕಾರಿ ಮತ್ತು ಖಂಡನೀಯ. ಪಾಟ್ಕರ್ ರಾಷ್ಟ್ರವಿರೋಧಿ- ಅಭಿವೃದ್ಧಿ ವಿರೋಧಿ ಎಂದೂ, ಪಾಕಿಸ್ತಾನದ ಪ್ರಧಾನಿಯನ್ನು ಈ ಸಭೆಗೆ ಯಾಕೆ ಆಹ್ವಾನಿಸಲಿಲ್ಲ ಎಂಬ ವ್ಯಂಗ್ಯದ ಮಾತನ್ನೂ ಬಿಜೆಪಿ ಸದಸ್ಯರು ಆಡಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರ ಹಾಗೂ ಎನ್.ಡಿ.ಎ. ಮಿತ್ರಪಕ್ಷಗಳ ಹೊರತು ಬಿಜೆಪಿಯನ್ನು- ಮೋದಿ ಸರ್ಕಾರದ ನೀತಿಗಳನ್ನು ವಿರೋಧಿಸುವ ಉಳಿದೆಲ್ಲರೂ ರಾಷ್ಟ್ರವಿರೋಧಿಗಳು, ದೇಶದ್ರೋಹಿಗಳು ಎಂಬುದು ಕಳೆದ ಹನ್ನೊಂದು ವರ್ಷಗಳಲ್ಲಿ ಕಟ್ಟಿಕೊಂಡು ಬರಲಾಗಿರುವ ದುಷ್ಟ ಕಥಾನಕ.

ಕಾಂಗ್ರೆಸ್ ಸಂಸದ ಸಪ್ತಗಿರಿ ಸಂಕರ್ ಉಲಕ ಈ ಸಂಸದೀಯ ಸಮಿತಿಯ ಮುಖ್ಯಸ್ಥರು. ಸಿವಿಲ್ ಸೊಸೈಟಿ ಸದಸ್ಯರು ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಹೋರಾಟ ಮಾಡಿದವರನ್ನು ಸಮಿತಿಯ ಸಭೆಗೆ ಕರೆದು ಅವರೊಂದಿಗೆ ಸಮಾಲೋಚಿಸುವುದು ಹಳೆಯ ವಾಡಿಕೆ. ಪಾಟ್ಕರ್ ಮತ್ತು ಪ್ರಕಾಶ್ ರಾಜ್ ಸೇರಿದಂತೆ 11 ಮಂದಿ ಹೋರಾಟಗಾರರನ್ನು ಸಭೆಗೆ ಕರೆಯಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿ ಅನುಮತಿ ನೀಡಿತ್ತು ಎಂದು ಉಲಕ ಹೇಳಿದ್ದಾರೆ.

ಇಂತಹ ಆಹ್ವಾನಿತರು ಸಂಸತ್ತಿನ ಆವರಣವನ್ನು ಪ್ರವೇಶಿಸಲು ಸೂಕ್ತ ಏರ್ಪಾಡು ಮಾಡಬೇಕು ಮತ್ತು ಇವರಿಗೆ ಪ್ರಯಾಣ ಭತ್ಯೆ-ದಿನಭತ್ಯೆಗಳನ್ನು ನೀಡಬೇಕು. ಈ ಕಾರಣಗಳಿಗಾಗಿ ಮುಂದಾಗಿಯೇ ಇವರ ಹೆಸರುಗಳನ್ನು ಸ್ಪೀಕರ್ ಕಚೇರಿಗೆ ಕಳಿಸಿ ಅನುಮತಿ ಪಡೆಯಲಾಗುತ್ತದೆ. ಪಾಟ್ಕರ್ ಅವರನ್ನು ಸಂಸದೀಯ ಸಮಿತಿಗಳ ಸಭೆಗಳಿಗೆ ಈ ಹಿಂದೆ ಹಲವಾರು ಬಾರಿ ಆಹ್ವಾನಿಸಲಾಗಿದೆ.

2013ರ ನ್ಯಾಯಯುತ ಪರಿಹಾರ ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನರ್ ನಿವಾಸ ಹಕ್ಕಿನ ಕಾಯ್ದೆಯ ಜಾರಿಯ ಬಗ್ಗೆ ಸಂಸದೀಯ ಸಭೆ ಚರ್ಚೆ ನಡೆಸಬೇಕಿತ್ತು. ಸಭೆಯಲ್ಲಿ ಪಾಟ್ಕರ್ ಮತ್ತು ರಾಜ್ ಅವರು ಪಾಲ್ಗೊಳ್ಳುವ ಕುರಿತು ಮುಂದಾಗಿಯೇ ತಮಗೆ ಸೂಚನೆ ನೀಡಲಾಗಿಲ್ಲವೆಂದು ಎನ್.ಡಿ.ಎ. ಸಂಸದರು ತಕರಾರು ತೆಗೆದರು. 27 ಮಂದಿ ಸದಸ್ಯರ ಈ ಸಮಿತಿಯ ಸಭೆಗೆ ಹಾಜರಾದವರು 17 ಮಂದಿ. ಈ ಪೈಕಿ ಬಿಜೆಪಿಯವರು 11 ಮಂದಿ. ಬಿಜೆಪಿ ಸದಸ್ಯರು ಹೊರನಡೆದ ನಂತರ ಉಳಿದವರು ಆರೇ ಮಂದಿ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಪಿಐ(ಎಂ)ನ ಕೆ. ರಾಧಾಕೃಷ್ಣನ್ ಸಭೆಗೆ ಬಂದಿರಲಿಲ್ಲ.

ಭೂ ಸಂಪನ್ಮೂಲ ಇಲಾಖೆ, ಅರಣ್ಯ ಮತ್ತು ಪರಿಸರ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯ, ಬುಡಕಟ್ಟುಗಳ ಜನರ ಕಲ್ಯಾಣ ಮಂತ್ರಾಲಯದ ಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಘ ಸಂಸ್ಥೆಗಳ ತಜ್ಞರು ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಬಾಧಿತರ ಪ್ರತಿನಿಧಿಗಳು ಈ ಸಭೆಗೆ ಬಂದಿದ್ದರು.

ನರ್ಮದಾ ಬಚಾವ್ ಆಂದೋಲನದ ನೇತೃತ್ವ ವಹಿಸಿ ಸರ್ದಾರ್ ಸರೋವರದ ನಿರ್ಮಾಣ ಮತ್ತು ಆದರ ಎತ್ತರ ಹೆಚ್ಚಳದಿಂದಾಗಿ ಮುಳುಗಡೆಯಾದ ಸೀಮೆಗಳ ನಿರಾಶ್ರಿತರಿಗಾಗಿ ದಶಕಗಟ್ಟಲೆ ಹೋರಾಡಿದವರು ಮೇಧಾ ಪಾಟ್ಕರ್. ಆದಿವಾಸಿಗಳ ಬದುಕನ್ನು ಹಸನು ಮಾಡಲು ಬದುಕನ್ನು ತೇಯ್ದವರು. ಸಭೆಯಲ್ಲಿ ಅವರನ್ನು ‘ರಾಷ್ಟ್ರವಿರೋಧಿ’ ಎಂದು ಕರೆದಿದ್ದಾರೆ, ಬಿಜೆಪಿಯ ಪುರುಷೋತ್ತಮ ರೂಪಾಲ.

ಗುಜರಾತಿನಲ್ಲಿ ನಿರ್ಮಿಸಲಾದ ಸರ್ದಾರ್ ಸರೋವರ ಜಲಾಶಯದ ಕಾರಣ ಮಧ್ಯಪ್ರದೇಶದ ನರ್ಮದಾ ಕಣಿವೆಯ ಆದಿವಾಸಿ ಸೀಮೆಗಳೂ ಸೇರಿದಂತೆ ಅಲಿರಾಜಪುರ, ಕುಕ್ಷಿ, ಬಡವಾನಿ, ಮಾನಾವರ್, ಧರಮ್ ಪುರಿ, ಕಸ್ರಾವಾಡ, ತಿಕ್ಡಿ, ಮಾಹೇಶ್ವರ ಜಿಲ್ಲೆಗಳ ಲಕ್ಷಾಂತರ ಜನಗಳ ಬದುಕು ಬುಡಮೇಲಾಗಿದೆ. ನೂರಾರು ವರ್ಷಗಳಿಂದ ಕಟ್ಟಿಕೊಂಡ ತಮ್ಮ ಊರುಕೇರಿಗಳು, ಭೂಮಿ-ಬದುಕುಗಳು ಜಲಸಮಾಧಿಯಾಗಿವೆ. ಮುಳುಗಡೆ ಸಂತ್ರಸ್ತರಿಗೆ ಅಸಮರ್ಪಕ ಮರುವಸತಿ ವ್ಯವಸ್ಥೆ ಮತ್ತು ಪರಿಸರದ ಮೇಲೆ ಉಂಟಾಗುವ ಸಾಧಕ ಬಾಧಕಗಳ ಅಂಶಗಳನ್ನು ಮೇಧಾ ಅವರ ಹೋರಾಟ ಮುನ್ನೆಲೆಗೆ ತಂದಿತು ನಿಮಾಡ್ ಸಂಸ್ಕೃತಿ ಸೀಮೆಯ 192 ಗ್ರಾಮಗಳ ಜಲಸಮಾಧಿಯ ಘೋರ ದುರಂತವಿದು.

ನ್ಯಾಯಯುತ ಮರುವಸತಿಯ ಹಕ್ಕಿಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿದ ಮೇಧಾ ಅವರಿಗೆ ‘ರಾಷ್ಟ್ರವಿರೋಧಿ’ ಹಣೆಪಟ್ಟಿಯನ್ನು ಹಚ್ಚಿದೆ ಬಿಜೆಪಿ.

ರೈತರ ಪರವಾಗಿ, ಯುಎಪಿಎ ಕರಾಳ ಕಾಯಿದೆಯಡಿ ಜೈಲಿಗೆ ತಳ್ಳಲಾಗಿರುವ ಮುಸ್ಲಿಮ್ ಯುವಜನರ ಪರವಾಗಿ ದನಿ ಎತ್ತಿರುವ ಕಾರಣಕ್ಕಾಗಿ ಪ್ರಕಾಶ್ ರಾಜ್ ಅವರ ಹೆಸರಿಗೆ ಮಸಿ ಬಳಿಯಲಾಗಿದೆ.

ಕೆಂಪೇಗೌಡ ವಿಮಾನನಿಲ್ದಾಣ ಸೀಮೆಯ ಸುತ್ತಮುತ್ತಲ ರೈತರ ಕೊರಳ ಬಿಗಿದಿರುವುದು ಭೂಮಾಫಿಯಾ ಕುಣಿಕೆಯೇ. ಕಾಂಗ್ರೆಸ್ ಸರ್ಕಾರ ಈ ಕುಣಿಕೆಯನ್ನು ಕಳಚಲಿ ಕಾಂಗ್ರೆಸ್ ಸರ್ಕಾರ ಕೃಷಿವಲಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಬೆಳೆ ವಿಮೆ, ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ, ಮಾರುಕಟ್ಟೆ, ಸಾಲ, ದಾಸ್ತಾನು ವ್ಯವಸ್ಥೆಗಳು ಅವಗಣನೆಗೆ ಗುರಿಯಾಗಿ ನರಳಿವೆ. ಮಳೆಯನ್ನೇ ಅತಿಯಾಗಿ ಆಶ್ರಯಿಸಿರುವ ಒಕ್ಕಲುತನ, ಧಾರಣೆಗಳ ಕುಸಿತ, ಒಂದೆಕರೆ ಗಾತ್ರಕ್ಕೆ ಕುಗ್ಗುತ್ತ ನಡೆದಿರುವ ಭೂ ಹಿಡುವಳಿಗಳು, ಹದ್ದುಮೀರಿದ ಮನುಷ್ಯ ಲಾಲಸೆಯನ್ನು ಪ್ರತಿಭಟಿಸಿ ಎರ್ರಾಬಿರ್ರಿಯಾಗಿರುವ ಹವಾಮಾನ, ಜಾಳಾಗುತ್ತಿರುವ ನೆಲ, ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿಯ ಪರಿವರ್ತನೆ ಈ ವಲಯವನ್ನು ಹಿಂಡಿ ಹಿಪ್ಪೆ ಮಾಡಿವೆ.

ಬೆಂಗಳೂರು ನಗರ ಜಾಗತಿಕ ಭೂಪಟದಲ್ಲಿ ಪ್ರಧಾನ ಸ್ಥಾನ ಗಳಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಿಲ್ದಾಣದ ಸನಿಹದಲ್ಲಿ ರೈತರು ಸುಮಾರು ನಾಲ್ಕು ವರ್ಷಗಳಿಂದ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿಮಾನನಿಲ್ದಾಣದ ಬಳಿ ಕೈಗಾರಿಕೆ ಮತ್ತು ಬಂಡವಾಳ ಪಾರ್ಕ್‌ನ ಎರಡನೆಯ ಹಂತವನ್ನು ಅಭಿವೃದ್ಧಿಪಡಿಸುವ ಯೋಜನೆ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಒಂದನೆಯ ಹಂತದಲ್ಲಿ ಇದೇ ಉದ್ದೇಶಕ್ಕೆಂದು ರೈತರಿಂದ ಸಾವಿರ ಎಕರೆಗಳಿಗೂ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸ್ಥಳೀಯ ಕೃಷಿ ಅರ್ಥವ್ಯವಸ್ಥೆ ಛಿದ್ರಗೊಂಡಿತ್ತು. ಪರಿಸರ ಸಮಸ್ಯೆಗಳು ಸರಮಾಲೆಯೇ ತಲೆದೋರಿತ್ತು. ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ ಈ ಜಮೀನನ್ನು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಬಿಡಿಗಾಸಿಗೆ ನೀಡಲಾಗಿದೆ. ಎರಡೇ ಕಾರ್ಖಾನೆಗಳು ತಲೆಯೆತ್ತತೊಡಗಿವೆ. ನೆಲ ಕಳೆದುಕೊಂಡ ರೈತರಿಗೆ ಈ ‘ಅಭಿವೃದ್ಧಿ’ ಯಲ್ಲಿ ಪಾಲು ಸಿಕ್ಕಿಲ್ಲ. ಉದ್ಯೋಗಾವಕಾಶದ ಸುಳಿವೇ ಇಲ್ಲ. ಅವರ ಹಿತಾಸಕ್ತಿಯನ್ನು ಲೆಕ್ಕಿಸುವವರೇ ದಿಕ್ಕಿಲ್ಲ. ಅವರ ಪ್ರತಿಭಟನೆ ಅರಣ್ಯರೋದನ.

ಈ ಭೂಸ್ವಾಧೀನವನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ್ದ ವಚನವನ್ನು ಮರೆತೇ ಹೋಗಿದೆ. ಎಷ್ಟೇ ಪರಿಹಾರ ನೀಡಿದರೂ ತಮ್ಮ ಹೊಲನೆಲಗಳನ್ನು ಬಿಟ್ಟುಕೊಡೆವು, ರೈತರಾಗಿಯೇ ಉಳಿಯುವೆವು ಎಂಬುದು ಇಲ್ಲಿನ ರೈತರ ದೃಢ ಸಂಕಲ್ಪ. ರಾಗಿ, ನೀಲಿ ದ್ರಾಕ್ಷಿ, ತರಾವರಿ ತರಕಾರಿಗಳು, ಹಣ್ಣುಗಳು, ಹೂವುಗಳು ಸೊಂಪಾಗಿ ಬೆಳೆಯುವ ಫಲವತ್ತು ನೆಲದ ಸೀಮೆಯಿದು. ಸರ್ಕಾರ ಜಮೀನು ಸ್ವಾಧೀನಪಡಿಸಿಕೊಂಡರೆ ಲಕ್ಷ ಲಕ್ಷ ಜೀವನೋಪಾಯಗಳು ನೆಲಕಚ್ಚುತ್ತವೆ. ನೆಲವನ್ನೇ ನಂಬಿ ಬದುಕುವ ಮಕ್ಕಳ ಬೇರುಗಳು ಬುಡಮೇಲಾಗಿ ವಲಸೆಯ ಸಂಕಟದ ವಿಷವೃತ್ತಕ್ಕೆ ಬೀಳುತ್ತವೆ. ಈ ದುರಂತ ಹೊಸ ವಿದ್ಯಮಾನವೇನೂ ಅಲ್ಲ. ದಶಕ ದಶಕಗಳಿಂದ ನಡೆದುಕೊಂಡು ಬಂದಿರುವಂತಹುದೇ. ಆದರೆ ಯಾವುದು ವಿಕಾಸ, ಯಾವುದು ವಿನಾಶ ಎಂಬ ನಿಚ್ಚಳ ನೋಟ ಕಾಣದಾಗಿದೆ. ಬಿಜೆಪಿ ಸರ್ಕಾರ ಜಾರಿ ಮಾಡಿರುವ 2019ರ ಭೂಸ್ವಾಧೀನ ಕಾಯಿದೆ ಮತ್ತು 2020ರ ಭೂಸುಧಾರಣಾ ಕಾಯಿದೆಗಳು ರೈತನ ಪಾಲಿನ ಮರಣಶಾಸನಗಳಾಗಿ ಪರಿಣಮಿಸಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಯಿದೆಗಳನ್ನು ಮರುವಿಮರ್ಶೆಗೆ ಒಳಪಡಿಸಿಯೇ ಇಲ್ಲ.

ಇದನ್ನೂ ಓದಿ ‘ಮೊಹರಂ’ ಹಿಂದುತ್ವ, ಇಸ್ಲಾಮತ್ವಗಳಿಗೆ ಟಕ್ಕರ್‌ ಕೊಡಬಲ್ಲ ಬಹುತ್ವದ ಹಬ್ಬ

ರೈತನನ್ನು ಹೆಬ್ಬಾವಿನಂತೆ ಸುತ್ತಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಮತ್ತು ಕಾರ್ಪೊರೇಟ್ ಮಾಫಿಯಾವನ್ನು ನಿಗ್ರಹಿಸಬೇಕು. ಘನತೆಯಿಂದ ಬದುಕುವ ಹಕ್ಕನ್ನು ರೈತರಿಗೆ ಮರಳಿಸಬೇಕು.

ಎಷ್ಟೇ ರೈತಪರ ಕಾಯ್ದೆಗಳು ಜಾರಿಯಾದರೂ ಅತ್ತ ಮೋದಿ ಸರ್ಕಾರ ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಅವುಗಳ ಆಶಯಗಳ ಕತ್ತು ಹಿಸುಕುತ್ತಿರುವುದೇ ಅಸಲು ರಾಷ್ಟ್ರವಿರೋಧ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X