ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ ಉಪ್ಪು ಸವರಿದರು.
ಕಳೆದ ಹತ್ತು ವರ್ಷಗಳಲ್ಲಿ ಸಂಸದೀಯ ವೇದಿಕೆಯಲ್ಲಿ ಕಣ್ಮರೆಯಾಗಿದ್ದ ಜನತಾಂತ್ರಿಕ ಚರ್ಯೆಗಳು ಮತ್ತೆ ಕಾಣತೊಡಗಿವೆ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ಸಂಖ್ಯಾಬಲದಲ್ಲಿದ್ದ ದೊಡ್ಡ ವ್ಯತ್ಯಾಸ ಈ ಸಲ ಕರಗಿ ಹೋಗಿದೆ. ಅಂತರದ ಗೆರೆ ತೆಳುವಾಗಿದೆ. ಸೋತು ಸೊರಗಿ ಹಾಸಿಗೆ ಹಿಡಿದಿದ್ದ ಸಂಸದೀಯ ಜನತಂತ್ರ ಜಾಗೃತಗೊಂಡಿದೆ. ಪ್ರತಿಪಕ್ಷಗಳು ಜನಸಾಮಾನ್ಯರ ಗಟ್ಟಿ ದನಿಯಾಗಿ ಮರಳಿ ಮಾತಾಡತೊಡಗಿವೆ. ದಶಕದ ನಂತರ ಅಧಿಕೃತ ಪ್ರತಿಪಕ್ಷವೊಂದು ಮೋದಿಯವರಿಗೆ ಎದುರಾಗಿದೆ. ಅದರ ನಾಯಕನಾಗಿ ರಾಹುಲ್ ಗಾಂಧಿ ಮೊದಲ ದಿನದಿಂದಲೇ ಮೋದಿ ಸರ್ಕಾರದ ಮರ್ಮ ಸ್ಥಾನಕ್ಕೆ ತಿವಿಯತೊಡಗಿದ್ದಾರೆ. ಹಿಂಸೆ, ದ್ವೇಷ ಅಸತ್ಯವನ್ನೇ ನಿರಂತರ ಆಚರಿಸುತ್ತ ಬಂದಿರುವ ಬಿಜೆಪಿ ಮೋದಿ ಆರೆಸ್ಸೆಸ್ ಅಸಲಿ ಹಿಂದೂ ಧರ್ಮಿಗಳೇ ಅಲ್ಲ, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಆರೆಸ್ಸೆಸ್ ಹಿಂದೂಗಳ ಗುತ್ತಿಗೆ ತೆಗೆದುಕೊಂಡಿಲ್ಲವೆಂದು ಮೊನ್ನೆ ತೀಕ್ಷ್ಣ ದಾಳಿ ನಡೆಸಿದ್ದರು. ರಾಹುಲ್ ಗಾಂಧಿ ತಳೆದಿರುವ ಹೊಸ ಆತ್ಮವಿಶ್ವಾಸದ ಆಕ್ರಮಣಕಾರಿ ರೂಪವಿದು. ರಾಹುಲ್ ವಾಗ್ಬಾಣಗಳು ಮೋದಿಯವರು ಮತ್ತು ಅವರ ಸಂಗಾತಿಗಳನ್ನು ಬಹುವಾಗಿ ಘಾಸಿಗೊಳಿಸಿ ಕೆರಳಿಸಿದೆ.
ತಾವು ದೈವಾಂಶ ಸಂಭೂತರಾಗಿದ್ದು, ದೇವರೇ ಕಳಿಸಿದ ದೂತನೆಂದೂ, ಸಾಮಾನ್ಯ ಮಾನವರಂತೆ ತಾಯಿಯ ಗರ್ಭದಿಂದ ಜನಿಸಿದವರಲ್ಲವೆಂದೂ ಮೋದಿಯವರು ಚುನಾವಣೆಯ ಸಂದರ್ಭದಲ್ಲಿ ಆಡಿದ್ದ ಮಾತುಗಳಂತೂ ಅವರನ್ನು ಸಂಸತ್ತಿನಲ್ಲಿ ಪ್ರತಿಪಕ್ಷಗಳ ವ್ಯಂಗ್ಯಬಾಣಗಳಾಗಿ ಸುತ್ತುವರೆದು ಇರಿದಿವೆ. ಅವರನ್ನು ತಮಾಷೆಯ ಸರಕಾಗಿಸಿವೆ. ದೇವರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಪ್ರಧಾನಿ, ನೋಟು ರದ್ದು ಅನಾಹುತ, ಕಾರ್ಪೊರೇಟ್ ಮಿತ್ರರಿಗೆ ದೇಶದ ಸಾರ್ವಜನಿಕ ಉದ್ದಿಮೆಗಳ ಹಸ್ತಾಂತರ ಮುಂತಾದವುಗಳೆಲ್ಲ ದೇವರ ಆದೇಶದ ಮೇರೆಗೆ ಮಾಡಿದ್ದರು ಮೋದಿ ಎಂದು ಹಂಗಿಸಲಾಗುತ್ತಿದೆ. ‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂದು ಮೆರೆದವರು ಸರಳ ಬಹುಮತವೂ ಸಿಗದೆ 240ಕ್ಕೆ ಕುಸಿದದ್ದನ್ನು ಎತ್ತಿ ಆಡಲಾಗುತ್ತಿದೆ.
ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ ಉಪ್ಪು ಸವರಿದರು. ತಮ್ಮ ಸದಸ್ಯತ್ವವನ್ನು ಕಸಿದುಕೊಂಡು ಮನೆಗೆ ಕಳಿಸಿದ್ದ ಅಪಮಾನದ ಬೆಂಕಿಯಲ್ಲಿ ಬೆಂದು ಅರಳಿ ಕೃಷ್ಣಾನಗರ ಕ್ಷೇತ್ರದಿಂದ ಪುನಃ ಆಯ್ಕೆಯಾಗಿ ಬಂದಿರುವ ಮೊಹುವಾ ಕೆಂಡ ಕಾರಿದರು. ರಾಹುಲ್ ಗಾಂಧಿ ಭಾಷಣವನ್ನು ಆಲಿಸಿ ಸದನದಿಂದ ಹೊರ ನಡೆಯುತ್ತಿದ್ದ ಪ್ರಧಾನಿಯವರನ್ನು ನೇರವಾಗಿ ಕೆಣಕಿದರು. ‘ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಎರಡೂವರೆ ತಾಸು ಸದನದಲ್ಲಿದ್ದಿರಿ, ನನ್ನ ಎರಡೇ ಎರಡು ಮಾತುಗಳನ್ನು ಕೇಳಿಸಿಕೊಂಡು ಹೋಗಿ ಸರ್, ಹಾಗೆಯೇ ಹೋಗಬೇಡಿ ಸರ್ ದಯವಿಟ್ಟು ಇರಿ ಸರ್, ನನ್ನನ್ನು ಸೋಲಿಸಲೆಂದು ಎರಡು ಸಲ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಭಾಷಣ ಮಾಡಿ ಕೃಪೆ ತೋರಿದ್ದಿರಿ ತಾವು, ದಯವಿಟ್ಟು ಕುಳಿತುಕೊಳ್ಳಿ ಸರ್, ಹೋಗಬೇಡಿ’ ಎಂದು ಚುಚ್ಚಿದರು.
‘ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಮಾತ್ರಕ್ಕೆ ಸದನದ ಸದಸ್ಯತ್ವ, ಮನೆ, ಮನಶ್ಯಾಂತಿ, ಗರ್ಭಾಶಯವನ್ನು ಕಳೆದುಕೊಂಡೆ. ಏಳು ತಿಂಗಳ ಹಿಂದೆ ಕುರುಡ ಧೃತರಾಷ್ಟ್ರ ಅಧ್ಯಕ್ಷತೆ ವಹಿಸಿದ್ದ ಈ ಸದನದ ದುಶ್ಯಾಸನ ದರ್ಬಾರಿಗಳು ದ್ರೌಪದಿಯ ವಸ್ತ್ರಹರಣ ಪ್ರಯತ್ನ ಮಾಡಿದರು. ಕೃಷ್ಣಾನಗರ ಕ್ಷೇತ್ರದ ಮತದಾರರು ಶ್ರೀಕೃಷ್ಣನೋಪಾದಿಯಲ್ಲಿ ನನ್ನನ್ನು ಕೈ ಹಿಡಿದು ಕಾಪಾಡಿದ್ದಾರೆ. ಕಳೆದುಕೊಂಡರೂ ನಾನು ಗಳಿಸಿಕೊಂಡಿರುವ ಇನ್ನೊಂದು ವಸ್ತುವಿದೆ. ಅದೇನು ಗೊತ್ತೇ? ಅಳುಕು ಅಂಜಿಕೆ ಭಯದಿಂದ ಬಿಡುಗಡೆ ಪಡೆದಿದ್ದೇನೆ. ಇನ್ನು ನಿಮಗೆ ಹೆದರುವವಳಲ್ಲ ನಾನು. ನಿಮ್ಮ ಅಂತ್ಯವನ್ನು ಕಂಡೇ ಕಾಣುತ್ತೇನೆ. ನಿಮ್ಮ ಸಿಬಿಐ, ನಿಮ್ಮ ಇ.ಡಿ, ನಿಮ್ಮ ಆದಾಯ ತೆರಿಗೆ ಇಲಾಖೆ, ನಿಮ್ಮ ಗೋದಿ ಮೀಡಿಯಾ, ನಿಮ್ಮ ಟ್ರೋಲುಗಳು, ನೀವು ಖರೀದಿಸಿರುವ ಜಡ್ಜುಗಳು ಯಾರೂ ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ’ ಎಂದು ಕಿಡಿಕಾರಿ ಗುಡುಗಿದರು.
ತಂದೆ ಪೆರಿಯಾರ್, ಅಣ್ಣಾದುರೈ, ಕರುಣಾನಿಧಿ ಅವರಿಂದ ರೂಪು ತಳೆದಿರುವ ಸಾಮಾಜಿಕ ನ್ಯಾಯ ಪಕ್ಷಪಾತಿ ದ್ರಾವಿಡ ಸಿದ್ಧಾಂತದ ಕಾರಣವಾಗಿಯೇ ನನ್ನಂತಹ ಸಾಮಾನ್ಯ ದಲಿತ ಈ ಸದನಕ್ಕೆ ಮತ್ತೆ ಮತ್ತೆ ಆರಿಸಿ ಬಂದು ನಿಲ್ಲುವಂತಾಗಿದೆ, ಹೊಟ್ಟೆ ಹೊರೆಯಲು ಕೂಲಿಯಾಗಿ ಶ್ರೀಲಂಕಾಗೆ ಹೋಗಿದ್ದ ನನ್ನ ತಾತ. ಆತನ ಮೊಮ್ಮಗಳಾಗಿರುವ ನನ್ನ ಮಗಳು ಪ್ರಖ್ಯಾತ ವಿದೇಶಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ದ್ರಾವಿಡ ಸಿದ್ಧಾಂತದ ತಂಟೆಗೆ ಬರಬೇಡಿ, ಮತ್ತೆ ಮತ್ತೆ ಸೋಲು ನಿಶ್ಚಿತ ಎಂದು ಘರ್ಜಿಸಿದ ಎ.ರಾಜಾ ಅವರ ಮಾತುಗಳಿಗೆ ಸದನ ಕಣ್ಣು ಕಿವಿಗಳನ್ನು ತೆರೆದಿತ್ತು.
ವೋಟಿಗಾಗಿ ಮುಸಲ್ಮಾನರ ಮುಂದೆ ‘ಮುಜ್ರಾ’ ಮಾಡತೊಡಗಿವೆ ಪ್ರತಿಪಕ್ಷಗಳು ಎಂಬ ಮೋದಿಯವರ ಚುನಾವಣಾ ಭಾಷಣದ ಅವಹೇಳನದ ಮಾತುಗಳು ಮೊನ್ನೆ ರಾಜ್ಯಸಭೆಯಲ್ಲಿ ವಿಚಿತ್ರ ವಿಡಂಬನೆಯ ತಿರುವು ಪಡೆದವು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿಯವರ ಈ ಮಾತುಗಳನ್ನು ಟೀಕಿಸಿ ಪ್ರಸ್ತಾಪಿಸಿದರು. ಒಡನೆಯೇ ಕೆರಳಿದ ಸಭಾಪತಿ ಜಗದೀಪ್ ಧನಕರ್, ಮಾನಹಾನಿಯ ಮತ್ತು ಕೀಳು ಅಭಿರುಚಿಯ ಮಾತುಗಳಿವು, ಸದನದ ಅಧಿಕೃತ ಕಡತಕ್ಕೆ ಹೋಗುವುದಿಲ್ಲ ಎಂದು ಬಿಟ್ಟರು. ಮುಜ್ರಾ ಪದ ಬಳಸಿದ್ದು ಮೋದಿಯವರು ಎಂಬ ವಾಸ್ತವ ಸಂಗತಿ ಅವರಿಗೆ ತಕ್ಷಣವೇ ಅರ್ಥವಾಗಿತ್ತೋ ಇಲ್ಲವೋ. ಆದರೆ ಸಂಸತ್ತಿನ ವೇದಿಕೆ ಮುಜ್ರಾ ಎಂಬ ಮಾತು ಕೀಳೆಂದು ಪರಿಗಣಿಸುವುದೇ ಆದಲ್ಲಿ ಪ್ರಧಾನಮಂತ್ರಿಯ ಸ್ಥಾನವನ್ನು ಅಲಂಕರಿಸಿದವರು ಆ ಮಾತನ್ನು ಆಡಬಹುದೇ?
ಅಯೋಧ್ಯೆಯ (ಫೈಜಾಬಾದ್ ಲೋಕಸಭಾ ಕ್ಷೇತ್ರ) ಸೋಲು ಮೋದಿಯವರ ಬಿಜೆಪಿಗೆ ಉಂಟಾಗಿರುವ ಭಾರೀ ಮುಖಭಂಗ. ಈ ಜನರಲ್ ಕ್ಷೇತ್ರದಿಂದ ಗೆದ್ದಿರುವವರು ಸಮಾಜವಾದಿ ಪಾರ್ಟಿಯ ಹಿರಿಯ ದಲಿತ ನಾಯಕ ಅವಧೇಶ್ ಪ್ರಸಾದ್ ಪಾಸಿ. ಅವಧೇಶ್ ಅವರನ್ನು ಸದನದ ಒಳ ಹೊರಗೆ ಪಾರಿತೋಷಕದಂತೆ ಪ್ರದರ್ಶಿಸಿದೆ ಇಂಡಿಯಾ ಒಕ್ಕೂಟ. ಈ ಹಿರಿಯರನ್ನು ಪ್ರತಿಪಕ್ಷಗಳ ಆಸನಗಳ ಮೊದಲ ಸಾಲಿನಲ್ಲಿ ಆಡಳಿತ ಪಕ್ಷದ ಆಸನಗಳಿಗೆ ನೇರ ಮುಖಾಮುಖಿಯಾಗಿ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾರೆ ರಾಹುಲ್ ಗಾಂಧಿ. ಕಳೆದ ಹತ್ತು ವರ್ಷಗಳ ಕಾಲ ತಾವು ನುಂಗಿಕೊಂಡಿದ್ದ ನಿಸ್ಸೀಮ ನಿರ್ಲಕ್ಷ್ಯ, ಸಾರಾಸಗಟು ಉಚ್ಚಾಟನೆ, ಬೆದರಿಕೆ, ಸರ್ಕಾರಿ ಏಜೆನ್ಸಿಗಳ ದಾಳಿಗಳು, ಅಸಹನೆ, ಅಪಮಾನಗಳ ಸಂಕೋಲೆಗಳನ್ನು ಒಮ್ಮೆಗೇ ಕಿತ್ತೊಗೆದ ಸ್ವಾತಂತ್ರ್ಯದಲ್ಲಿ ಉಸಿರಾಡಿವೆ ಪ್ರತಿಪಕ್ಷಗಳು.
ತೃಣಮೂಲ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ಸಮಾಜವಾದಿ ಪಾರ್ಟಿ ಮತ್ತಿತರೆ ಇಂಡಿಯಾ ಬಣದ ಪಕ್ಷಗಳು ಈ ದಾಳಿಯ ಹತಾರನ್ನು ನಿರಂತರ ಮಸೆಗಲ್ಲಿಗೆ ಒಡ್ಡಿ ಮೊನಚನ್ನು ಕಾದುಕೊಂಡಿವೆ. ಈ ಅನಿರೀಕ್ಷಿತ ಬೆಳವಣಿಗೆ ಆಡಳಿತ ಪಕ್ಷವನ್ನು ಕಕ್ಕಾಬಿಕ್ಕಿ ಆಗಿಸಿದೆ. ಕಳೆದ ಹತ್ತು ವರ್ಷಗಳ ಆಡಳಿತ ಪಕ್ಷದ ಆರ್ಭಟ ಅಟ್ಟಹಾಸ ಸದ್ಯಕ್ಕಂತೂ ಅಡಗಿದಂತೆ ತೋರುತ್ತಿದೆ.
ಪ್ರತಿಪಕ್ಷಗಳ ಹುಟ್ಟನ್ನೇ ಅಡಗಿಸಿ ಆಳಿದ್ದವರು ಮೋದಿ. ಗುಜರಾತಿನ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಕಳೆದ 23 ವರ್ಷಗಳ ಕಾಲ ನಿರಂತರ ಅಕ್ಷರಶಃ ನಿರಂಕುಶ ಅಧಿಕಾರ ಅನುಭವಿಸುತ್ತ ಬಂದಿರುವವರು. ಎದುರಾಳಿಗಳ ಸೊಲ್ಲಡಗಿಸುತ್ತ ಬಂದವರು. ಎದುರು ಜವಾಬನ್ನು ಎಂದೂ ಸಹಿಸಿದವರಲ್ಲ. 2024ರ ಜನಾದೇಶದ ಹಠಾತ್ ಸಂದೇಶ ಅವರನ್ನು ದಂಗು ಬಡಿಸಿದೆ. ಹೊಸ ಚೈತನ್ಯ ಪಡೆದಿರುವ ಪ್ರತಿಪಕ್ಷಗಳ ಗೇಲಿ, ವ್ಯಂಗ್ಯ, ಮೂದಲಿಕೆ ಚುಚ್ಚುಮಾತುಗಳ ಅವಮಾನ ಅವರಿಗೆ ಹೊಚ್ಚ ಹೊಸತು. ಸಂಸದೀಯ ವೇದಿಕೆಯಲ್ಲಿ ನರೇಂದ್ರ ಮೋದಿಯವರು ಇಷ್ಟೊಂದು ಅಪ್ರತಿಭರಾಗಿದ್ದು, ಚಡಪಡಿಸಿದ್ದು, ನರಳಿದ್ದು ಕಳೆದ ಹತ್ತು ವರ್ಷಗಳಲ್ಲಿ ಕಂಡು ಬಂದಿರುವುದು ಇದೇ ಮೊದಲ ಬಾರಿ.
ಬಿಜೆಪಿಗೆ ಸರಳ ಬಹುಮತವೂ ಸಿಗದಿರುವ ಈ ಸನ್ನಿವೇಶದಲ್ಲಿ ಸರ್ಕಾರ ರಚಿಸಿ ದುರ್ಬಲ ಪ್ರಧಾನಿ ಆಗಲು ಪ್ರಾಯಶಃ ಒಪ್ಪಲಾರರು ಎಂಬ ಅನುಮಾನಗಳನ್ನೂ ಸುಳ್ಳು ಮಾಡಿದವರು ಮೋದಿ. ಸರ್ಕಾರ ರಚಿಸಿದ್ದೇ ಅಲ್ಲದೆ, ತಮ್ಮ ಆಳ್ವಿಕೆಯ ವೈಖರಿಯಲ್ಲಿ ಯಾವ ಬದಲಾವಣೆಯೂ ಇಲ್ಲವೆಂಬ ಸಂದೇಶವನ್ನು ಮಂತ್ರಿಮಂಡಲ ರಚನೆಯಲ್ಲಿ, ಖಾತೆಗಳ ಹಂಚಿಕೆಯಲ್ಲಿ, ಆಯಕಟ್ಟಿನ ಹುದ್ದೆಗಳಿಗೆ ನೇಮಕದಲ್ಲಿ ಸಾರಿದ್ದಾರೆ. ಊರುಗೋಲುಗಳ ಸರ್ಕಾರ ತಮ್ಮದೆಂದು ತೋರಿಸಿಕೊಳ್ಳಲು ಸಿದ್ಧರಿಲ್ಲ. ಆಕ್ರಮಣಕಾರಿ ಹಿಂದುತ್ವ ಯಾವ ಕಾರಣದಿಂದಲೂ ತೆಳುಗೊಳ್ಳುವುದಿಲ್ಲ ಎಂಬ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಹಲವು ಅಪಾಯಕಾರಿ ಅಂಶಗಳನ್ನು ಹೊಂದಿರುವ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಲವಲೇಶದಷ್ಟೂ ಅಳುಕಿಲ್ಲದೆ ಜಾರಿಗೊಳಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳ ಇತರೆ ನಾಯಕರು ಮೊನ್ನೆ ಲೋಕಸಭೆಯಲ್ಲಿ ತಮ್ಮ ವಿರುದ್ಧ ನಡೆಸಿದ ತೀಕ್ಷ್ಣ ನುಡಿ ದಾಳಿಗೆ ಪ್ರಧಾನಿ ಮೋದಿ ನೆನ್ನೆ ಎರಡೂಕಾಲು ತಾಸುಗಳ ಪ್ರತಿದಾಳಿ ನಡೆಸಿದರು. ಈ ಪ್ರತಿದಾಳಿಯಲ್ಲೂ ತಾವು ಪ್ರಚಂಡ ಮತ್ತು ಅಜೇಯ ನಾಯಕನೆಂದೇ ಹೇಳಲು ಹೆಣಗಿದರು. ರಾಜಕೀಯ ವೈರಿಗಳನ್ನು ನಿರ್ದಯವಾಗಿ ಮಟ್ಟ ಹಾಕುವ ನೇರ ಬೆದರಿಕೆಯನ್ನೂ ಹಾಕಿದರು.
ಆದರೆ ಅವರ ಭಾಷಣದಲ್ಲಿ ಪ್ರತೀಕಾರದ ಬೆಂಕಿಯಿತ್ತೇ ವಿನಾ ದೇಶದ ಚುಕ್ಕಾಣಿ ಹಿಡಿದ ಮುತ್ಸದ್ದಿಯ ಬೆಳಕು ಇರಲಿಲ್ಲ. ಜನತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿದು, ಪ್ರತಿಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವ ಮತ್ತು ದೇಶದ ವಿಕಾಸದಲ್ಲಿ ಅವುಗಳ ಸಹಕಾರವನ್ನು ಕೋರುವ ದನಿ ಇರಲೇ ಇಲ್ಲ. ಮೋದಿ ಮೋದಿ ಮೋದಿ ಮೋದಿ… ಜೈ ಶ್ರೀರಾಮ್ ಎಂದು ಉನ್ಮಾದ, ಉತ್ಸಾಹ ಉಮೇದುಗಳಿಂದ ಮೇಜು ಗುದ್ದಿ ಘೋಷಣೆ ಹಾಕಿ ಜಯಕಾರ ಹಾಕುತ್ತಿದ್ದ ಅವರ ಸಂಸದೀಯ ಸಂಗಾತಿಗಳು ಈ ಸಲ ಬಹುತೇಕ ಅಂತಹ ಉನ್ಮಾದ ತೋರದೆ ಇದ್ದದ್ದು ಅನಿರೀಕ್ಷಿತ. ಅದಕ್ಕೆ ಬದಲಾಗಿ ಮೋದಿ ಉತ್ತರದ ಉದ್ದಕ್ಕೂ ಪ್ರತಿಪಕ್ಷಗಳು ಎಡೆಬಿಡದೆ ಸರ್ಕಾರದ ವೈಫಲ್ಯದ ಘೋಷಣೆಗಳನ್ನು ಕೂಗಿದ್ದು ಹೊಸ ಬೆಳವಣಿಗೆ.
ಪ್ರಧಾನಿಯವರು ಸದನದ ನಾಯಕರು. ಪ್ರತಿಪಕ್ಷಗಳು ಅವರ ಮಾತುಗಳಿಗೆ ಅಡ್ಡಿಪಡಿಸದೆ ಆಲಿಸಿ ಆದರ ತೋರಬೇಕು ನಿಜ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಇಂತಹುದೇ ಘನತೆ ಆದರದಿಂದ ಪ್ರತಿಪಕ್ಷಗಳನ್ನು ಹೀಗೆ ನಡೆಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಆಳುವವರೇ ಉತ್ತರ ನೀಡಬೇಕು. ಇನ್ನಾದರೂ ಹೊಸ ಮೇಲ್ಪಂಕ್ತಿಯನ್ನು ಹಾಕಬೇಕು. ಆದರೆ ಅಂತಹ ಯಾವುದೇ ದೂರದ ಇಂಗಿತವನ್ನೂ ನೀಡಲು ತಯಾರಿಲ್ಲ ಮೋದಿ.
ಭಾಷಣದ ಆರಂಭದಲ್ಲಿಯೇ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡಿರುವುದಾಗಿ ಬೆನ್ನು ಚಪ್ಪರಿಸಿಕೊಂಡರು. ಭ್ರಷ್ಟಾಚಾರವನ್ನು ತಮ್ಮ ಸರ್ಕಾರ ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಮೋದಿಯವರು ಹೇಳಿದ್ದು ಬಹುದೊಡ್ಡ ಅಣಕವಾಗಿ ಧ್ವನಿಸಿತು. ಭ್ರಷ್ಟಾಚಾರ ಕುರಿತು ತಮ್ಮ ಸರ್ಕಾರದ್ದು ಶೂನ್ಯ ಸಹನೆ. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಪುನಃ ತಮ್ಮನ್ನು ಆರಿಸಿದ್ದಾರೆ ಮತದಾರರು ಎಂದರು. ಬ್ರಹ್ಮಾಂಡ ಭ್ರಷ್ಟಾಚಾರ ಎನಿಸಿದ ಸಾವಿರಾರು ಕೋಟಿ ರುಪಾಯಿಗಳ ಚುನಾವಣಾ ಬಾಂಡ್ ಹಗರಣ, ಅಯೋಧ್ಯೆಯಿಂದ ಹಿಡಿದು ಅಸ್ಸಾಂ, ಲಖ್ನೋ, ಅಹಮದಾಬಾದ್, ಬಿಹಾರ ಮುಂತಾದ ನಾನಾ ಭಾಗಗಳಲ್ಲಿ ಕುಸಿಯತೊಡಗಿರುವ ಕಳಪೆ ಕಾಮಗಾರಿಗಳು, ಮಹಾ ಭ್ರಷ್ಟಾಚಾರಿಗಳಿಗೆ ನಡೆಮುಡಿ ಹಾಸಿ ಪಕ್ಷಕ್ಕೆ ಸೇರಿಸಿಕೊಂಡದ್ದು, ಮಿತ್ರಪಕ್ಷಗಳನ್ನಾಗಿ ಕೈ ಜೋಡಿಸಿದ್ದು, ಕೋಟಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಭಾದಿಸಿರುವ ಪ್ರಶ್ನೆಪತ್ರಿಕೆ ಸೋರಿಕೆ, ನೀಟ್ ಎಂಬ ದುಃಸ್ವಪ್ನಕ್ಕೆ ಪರಿಹಾರ, ಮುತ್ತಿ ಕಾಡುತ್ತಿರುವ ನಿರುದ್ಯೋಗ, ಬದುಕುಗಳನ್ನು ದುರ್ಭರ ಆಗಿಸಿರುವ ಬೆಲೆ ಏರಿಕೆ, ವರ್ಷಗಟ್ಟಲೆ ಆರದೆ ಉರಿಯುತ್ತಿರುವ ಮಣಿಪುರದ ಬೆಂಕಿಯ ಕುರಿತು ಪ್ರಧಾನಿಯವರು ತುಟಿ ಬಿಚ್ಚಲಿಲ್ಲ. ಆದರೆ ಇದು ಅನಿರೀಕ್ಷಿತವೇನೂ ಅಲ್ಲ.
ಕಾಂಗ್ರೆಸ್, ನೆಹರೂ, ಇಂದಿರಾಗಾಂಧಿ, ರಾಜೀವಗಾಂಧಿ, ರಾಹುಲ್ ಗಾಂಧಿಯವರನ್ನು ಜಾಲಾಡಿದರು. ಪ್ರತಿಪಕ್ಷಗಳನ್ನು ಬೆಂಬಲಿಸಿರುವ ದಲಿತರಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದರು. ಡಾ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ನಿಮ್ಮ ಮಿತ್ರನಲ್ಲ ಎಂದು ದಲಿತರನ್ನು ಎಚ್ಚರಿಸಿದರು. ಕಾಂಗ್ರೆಸ್ ಸಹವಾಸದಿಂದ ನಿಮಗೆ ಯಾವುದೇ ಉಪಯೋಗ ಇಲ್ಲವೆಂದು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಗೆ ತಿಳಿ ಹೇಳಿದರು.
ಮೂರು ಸಲ ಸೋತರೂ ನಿಮಗೆ ಬುದ್ಧಿ ಯಾಕೆ ಬಂದಿಲ್ಲವೆಂದು ಪ್ರತಿಪಕ್ಷಗಳನ್ನು ಮೂದಲಿಸಿದ್ದಾರೆ. ಆದರೆ ಖುದ್ದು ಮೋದಿಯವರು ಗೆದ್ದು ಸೋತಿದ್ದಾರೆ. ಪ್ರತಿಪಕ್ಷಗಳು ಈ ಸಲ ಸೋತು ಗೆದ್ದಿವೆ ಎಂಬ ಜನಾದೇಶದ ಸೂಕ್ಷ್ಮವನ್ನು ಅವರು ಅರಿಯಬೇಕಿತ್ತು. ಪ್ರತಿಪಕ್ಷಗಳು ಕೆಟ್ಟದಾಗಿ ಸೋತಿದ್ದರೆ ಮೋದಿಯವರು ಖುಷಿಯಾಗಿರಬೇಕಿತ್ತು. ಆ ಖುಷಿ ಅವರ ಮುಖದಲ್ಲಿ ಇಲ್ಲಿಯ ತನಕ ಮೂಡಿಲ್ಲ ಯಾಕೆ? ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂಬ ಉಪದೇಶ ನೀಡಿದರು. ಸುಳ್ಳು ಎಂಬ ರಕ್ತದ ರುಚಿಯನ್ನು ಕಂಡಿರುವ ಕಾಂಗ್ರೆಸ್ ಮೃಗ ಮತ್ತೆ ಮತ್ತೆ ಸುಳ್ಳನ್ನೇ ಆಡುತ್ತಿದೆ ಎಂದ ಪ್ರಧಾನಿಯವರು ತಮ್ಮನ್ನು ಮತ್ತು ತಮ್ಮ ಪಕ್ಷದತ್ತ ಕನ್ನಡಿ ತಿರುಗಿಸಿ ನೋಡಿಕೊಳ್ಳಬೇಕಿದೆ.
ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬೆಪ್ಪುತಕ್ಕಡಿಯಂತೆ ತೋರಿಸುವ ಪ್ರಯತ್ನ ಹತ್ತು ವರ್ಷಗಳಿಂದ ನಡೆದಿತ್ತು. ಕಾರ್ಪೊರೇಟ್ ಮತ್ತು ಬಿಜೆಪಿಯ ಈ ಸಂಚಿನ ಪರದೆಯನ್ನು ಹರಿದು ಹೊರಬಂದಿದ್ದಾರೆ ರಾಹುಲ್. ಈಗಲೂ ಅವರನ್ನು ಹಾಗೆಯೇ ತೋರಿಸುವ ಪ್ರಯತ್ನವನ್ನು ಮೋದಿಯವರು ತಮ್ಮ ಭಾಷಣದಲ್ಲಿ ಮುಂದುವರೆಸಿದರು. ರಾಹುಲ್ ಅವರದ್ದು ಬಾಲಕ ಬುದ್ಧಿಯೆಂದೂ, ಮೂರ್ಖ ಬಾಲಕನೆಂದೂ ಹತ್ತಾರು ಬಾರಿ ಮೂದಲಿಸಿ ಮೊನ್ನೆಯ ಸೇಡು ತೀರಿಸಿಕೊಂಡರು. ಬಾಲಕ ಬುದ್ಧಿಯೆಂದು ಬಗೆದು ಇನ್ನು ನಿರ್ಲಕ್ಷಿಸುವುದು ಖಂಡಿತವಾಗಿಯೂ ಸಲ್ಲದು. ಬಾಲಕ ಬುದ್ಧಿಯ ಹಿಂದಿರುವ ಇರಾದೆ ಅಪಾಯಕಾರಿ ಎಂದು ಸ್ಪೀಕರ್ ಮತ್ತು ದೇಶದ ಮತದಾರರನ್ನು ಎಚ್ಚರಿಸಿದರು.
ಭಾರತೀಯ ಸೇನೆಯನ್ನು ಸೇರದಂತೆ ಕಾಂಗ್ರೆಸ್ ಸಂಚು ಹೂಡುತ್ತಿದೆ ಎಂದು ನಿರಾಧಾರ ಆರೋಪ ಮಾಡಿದರು. ಅಗ್ನಿವೀರ ಯೋಜನೆಯ ಕುರಿತ ಟೀಕೆಯನ್ನು ಎದುರಿಸಲು ಅವರು ಬಳಸಿದ ಹುಸಿ ಆಪಾದನೆಯಿದು. ಹಿಂದುವೆಂದರೆ ಮೋದಿ, ದೇಶವೆಂದರೆ ಮೋದಿ ಎಂಬ ಭ್ರಮೆಯಿಂದ ಅವರು ಬಿಡುಗಡೆ ಪಡೆದಿಲ್ಲ. ತಮ್ಮ ಮತ್ತು ತಮ್ಮ ಪಕ್ಷದ ಟೀಕೆಯನ್ನು ಹಿಂದು ನಿಂದನೆಯೆಂದೇ ತಿರುಚಿದರು.
‘ಕಾಂಗ್ರೆಸ್ ಎಂಬ ವ್ಯವಸ್ಥೆಯು ದೇಶದ ವಿಕಾಸಯಾತ್ರೆಗೆ ಅಡ್ಡಿ ಒಡ್ಡುತ್ತಿದ್ದು, ಈ ಹರಕತ್ತಿನ ಜವಾಬನ್ನು ಕಾಂಗ್ರೆಸ್ ಭಾಷೆಯಲ್ಲಿಯೇ ನೀಡಲಾಗುವುದು’ ಎಂಬ ಮೋದಿಯವರ ಎಚ್ಚರಿಕೆ ಮುಂಬರುವ ದುರಿತ ಕಾಲ ಕುರಿತ ಕರಾಳ ಭವಿಷ್ಯದಂತಿದೆ. ಇನ್ನಷ್ಟು ದಮನಗಳು, ದಾಳಿಗಳು, ದಸ್ತಗಿರಿಗಳ ಕೈಮರದಂತೆ ಧ್ವನಿಸಿದೆ.
