‘ಈ ದಿನ’ ಸಂಪಾದಕೀಯ | ಮುಂಗಾರು; ಕರ್ನಾಟಕದ ರೈತರಿಗೆ ‘ಹಿವ್ರೇ ಬಜಾರ್’ ಮಾದರಿಯಾಗಲಿ

Date:

Advertisements
ರೈತರ ಕುದಿ ಪ್ರಶ್ನೆಗಳಿಗೆ ಶಾಶ್ವತ ಸಮಾಧಾನ ಹೇಳಲು ಯಾವ ಘನ ಸರ್ಕಾರಗಳಿಗೂ ಇದುವರೆಗೆ ಸಾಧ್ಯವಾಗಿಲ್ಲ. ಹಾಗಾಗಿ, ಸ್ವಾವಲಂಬಿ ಮತ್ತು ಸುಸ್ಥಿರ ಕೃಷಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ 'ಹಿವ್ರೇ ಬಜಾರ್' ಮಾದರಿ ಕರ್ನಾಟಕದಲ್ಲೂ ಚಾಲ್ತಿಗೆ ಬರಲು ರಾಜ್ಯ ಸರ್ಕಾರ ಒತ್ತಾಸೆಯಾಗಿ ನಿಲ್ಲಬೇಕಿದೆ

ಈ ವರ್ಷದ ಮುಂಗಾರು ಅಧಿಕೃತವಾಗಿ ಆರಂಭವಾಗಿದೆ. ಸಹಜವಾಗಿ ರೈತರಿಂದ ರಾಜಕಾರಣಿಗಳವರೆಗೆ ಇದು ನೆಮ್ಮದಿಯ ಸಂಗತಿ. ಆದರೆ, ಮುಂಗಾರು ಎಂಬುದು ರೈತರಿಗೆ ಖುಷಿಯ ಜೊತೆಜೊತೆಗೇ ತಲೆನೋವನ್ನು ದಯಪಾಲಿಸುವ ಬಾಬತ್ತು. ಏಕೆಂದರೆ, ಭೂಮಿ ಹಸನು ಮಾಡುವುದರಿಂದ ಹಿಡಿದು, ಕಡೆಗೆ ತಾನು ಬೆಳೆದ ಕೃಷಿ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಮಾರುವವರೆಗೂ ಒಮ್ಮೆಲೇ ಯೋಚಿಸಬೇಕಾದ ಅನಿವಾರ್ಯತೆ. ಆಗಾಗ ಸಮಯಕ್ಕೆ ಸರಿಯಾಗಿ ಮಳೆ ಬಾರದಿದ್ದರೆ, ಮಳೆ ಹೆಚ್ಚು ಸುರಿದರೆ, ಬೆಳೆ ಕೈ ಕೊಟ್ಟರೆ, ಇಳುವರಿ ಕಡಿಮೆಯಾದರೆ ಏನು ಮಾಡುವುದು ಎಂಬ ರೈತರ ಕುದಿ ಪ್ರಶ್ನೆಗಳಿಗೆ ಶಾಶ್ವತ ಸಮಾಧಾನ ಹೇಳಲು ಯಾವ ಘನ ಸರ್ಕಾರಗಳಿಗೂ ಇದುವರೆಗೆ ಸಾಧ್ಯವಾಗಿಲ್ಲ. ಹಾಗಾಗಿ, ಕೃಷಿ ವಿಷಯದಲ್ಲಿ ಸರ್ಕಾರಗಳನ್ನು ನೆಚ್ಚಿ ಕೂರುವ ಧೈರ್ಯ ಯಾವ ರೈತರಿಗೂ ಇಲ್ಲ.

ಕೃಷಿ ಕಾಯ್ದೆಗಳನ್ನು ಏಕಮುಖಿಯಾಗಿ ಜಾರಿಗೆ ತಂದು, ರೈತರು ರಾಷ್ಟ್ರ ರಾಜಧಾನಿಗೆ ಕಾಲಿಡದಂತೆ ರಸ್ತೆಗಳಲ್ಲಿ ಮೊಳೆ ನೆಟ್ಟು, ಬಂಧೂಕುಧಾರಿ ಸಿಪಾಯಿಗಳನ್ನು ಕಾವಲಿಗೆ ನಿಲ್ಲಿಸಿದಂತಹ ಸರ್ಕಾರಗಳಿಂದ ರೈತರು ತಾನೇ ಏನನ್ನು ನಿರೀಕ್ಷಿಸಲು ಸಾಧ್ಯ? ಬೆಳೆ ನಾಶವಾದಲ್ಲಿ ರೈತರಿಗೆ ಆಸರೆಯಾಗಲೆಂದು ಸ್ಥಾಪಿಸಲಾದ ‘ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ’ಯಡಿ ತಾಂತ್ರಿಕ ದೋಷಗಳನ್ನು ಮುಂದು ಮಾಡಿ ಕೋಟಿಗಟ್ಟಲೆ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಯೋಜನೆಯಡಿ 2021ರ ನವೆಂಬರ್‌ ವೇಳೆಗೆ, ರೈತರು ಬೇಡಿಕೊಂಡಿದ್ದ 3,300 ಕೋಟಿ ರುಪಾಯಿ ಬಾಕಿ ಇತ್ತು. ಇದೀಗ ಈ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಇನ್ನು, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದ ಭರವಸೆ ಹಾಸ್ಯ ಚಟಾಕಿಯಾಗಿ ಚಾಲ್ತಿಯಲ್ಲಿದೆಯೇ ವಿನಾ, ದೇಶದ ಯಾವ ಭಾಗದ ರೈತರ ಆದಾಯವೂ ದ್ವಿಗುಣವಾಗಿಲ್ಲ. ಪ್ರಧಾನಿಯವರ ಈ ಮಾತನ್ನೇ ನಂಬಿ, ಕರ್ನಾಟಕ ಸರ್ಕಾರ ಕೂಡ 2022ನ್ನು ಗುರಿಯಾಗಿಟ್ಟುಕೊಂಡು, ರಾಜ್ಯಾದ್ಯಂತ ಸುಸ್ಥಿರ ಕೃಷಿ ಸಾಧ್ಯವಾಗಿಸುವ ಯೋಜನೆ ರೂಪಿಸಿತ್ತು. ಆದರೆ, ಅದರಲ್ಲಿ ಸಫಲವಾಗಿದ್ದೆಷ್ಟು ಎಂಬ ಪ್ರಶ್ನೆಗೆ ಕೃಷಿ ಇಲಾಖೆಯ ಬಳಿ ಸ್ಪಷ್ಟ ಉತ್ತರವಿಲ್ಲ.

ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

Advertisements

ಹೀಗೆ ಸರ್ಕಾರಗಳಿಗೆ, ತಮ್ಮ ಅನುಕೂಲ ಮತ್ತು ಲಾಭದಾಯಕ ಸನ್ನಿವೇಶಗಳಲ್ಲಿ ಮಾತ್ರ ರೈತರು ನೆನಪಾಗುತ್ತಾರೆಯೇ ವಿನಾ ಕೃಷಿ ಕ್ಷೇತ್ರದ ಅಭಿವೃದ್ಧಿ ಅವುಗಳ ಕಾರ್ಯಸೂಚಿಯಲ್ಲಿ ಇಲ್ಲ. ಹಾಗಾಗಿ, ರೈತರು ತಾವು ಏನನ್ನು ಬೆಳೆಯಲಿದ್ದೇವೆ ಎಂಬುದನ್ನು ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ತೀರ್ಮಾನ ಮಾಡಬೇಕಿದೆ. ಇದಕ್ಕಾಗಿ ‘ಹಿವ್ರೇ ಬಜಾರ್’ ಹಳ್ಳಿಯ ಮಾದರಿ ಸುಲಭವಾಗಿ ಅನುಸರಿಸಬಹುದಾದ ದಾರಿ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಈ ಹಳ್ಳಿಗೆ, ದೇಶದಲ್ಲಿಯೇ ಅತ್ಯಂತ ಹೆಚ್ಚು ಶ್ರೀಮಂತ ರೈತರಿರುವ ಹಳ್ಳಿ ಎಂಬ ಖ್ಯಾತಿ ಇದೆ. ಇದನ್ನವರು ಸಾಧಿಸಿದ್ದು ಒಂದೊಮ್ಮೆ ಬರಗಾಲಕ್ಕೆ ಸಿಲುಕಿ ಹೈರಾಣಾಗಿದ್ದ ಭೂಮಿಯಲ್ಲಿಯೇ ಎಂಬುದನ್ನು ಗಮನಿಸಬೇಕು.

‘ಹಿವ್ರೇ ಬಜಾರ್’ ಮಾದರಿಯಲ್ಲಿ ಮೂರು ಮುಖ್ಯ ಸಂಗತಿಗಳಿವೆ. ಒಂದು, ಮಳೆನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ಮುನ್ನೆಚ್ಚರಿಕೆ ವಹಿಸುವುದು. ಇದಕ್ಕಾಗಿ, ಮಳೆ ಬರುವ ಮೊದಲೇ ಊರಿನ ಸುತ್ತಮುತ್ತಲ ಎಲ್ಲ ಕೆರೆ, ಕಾಲುವೆ ಮತ್ತಿತರ ನೀರಿನ ಆಕರಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತದೆ. ಮುಖ್ಯವಾಗಿ, ಎಲ್ಲರ ಹೊಲಗಳ ಬದುಗಳಲ್ಲಿಯೂ ಎರಡು ಅಡಿ ಆಳ ಮತ್ತು ಎರಡು ಅಡಿ ಅಗಲದ ಬಸಿಗಾಲುವೆಗಳನ್ನು (ಟ್ರಂಚ್) ರೂಪಿಸಲಾಗುತ್ತದೆ. ಎರಡನೆಯದು, ಆಯಾ ವರ್ಷದ ಮಳೆಯ ಪ್ರಮಾಣ ಮತ್ತು ಹವಾಮಾನ ಆಧರಿಸಿ ಬೆಳೆಗಳ ಆಯ್ಕೆ. ಮೂರನೆಯ ಮುಖ್ಯ ಸಂಗತಿ, ಸ್ಥಳೀಯ ಮಾರುಕಟ್ಟೆಗಳ ಅಭಿವೃದ್ಧಿ. ಈ ಮೂರು ಕೃಷಿಮಂತ್ರಗಳು ಹಿವ್ರೇ ಬಜಾರ್ ಎಂಬ ಹಳ್ಳಿಯನ್ನು ಸಮೃದ್ಧಗೊಳಿಸಿವೆ. ಜೊತೆಗೆ, ಬರಡಾಗಿದ್ದ ಗುಡ್ಡಗಳಲ್ಲಿ ಕಾಡು ಕೂಡ ಅರಳಿದೆ.

ಸ್ವಾವಲಂಬಿ ಮತ್ತು ಸುಸ್ಥಿರ ಕೃಷಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಈ ಮಾದರಿ ಕರ್ನಾಟಕದಲ್ಲೂ ಜಾರಿಯಾಗಲು ರಾಜ್ಯ ಸರ್ಕಾರ ಒತ್ತಾಸೆಯಾಗಿ ನಿಲ್ಲಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ರೈತರು ಒಗ್ಗಟ್ಟು ಪ್ರದರ್ಶಿಸಿ ತಮ್ಮ ಉಳಿವಿಗಾಗಿ ಈ ದಾರಿಗೆ ಹೊರಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X