ದಲಿತ ಕ್ರಿಶ್ಚಿಯನ್ನರ ಸ್ಥಿತಿಗಳು ಸಂಕೀರ್ಣವಾಗಿವೆ. ಪ್ರವರ್ಗ ಒಂದರಲ್ಲಿ ಗುರುತಿಸಲ್ಪಡುತ್ತಿರುವ ಈ ದಲಿತರು ಅಸ್ಪೃಶ್ಯತೆಯಿಂದ ಮುಕ್ತರಾಗಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಕ್ರಿಶ್ಚಿಯನ್ನರೆಂದು ನಮೂದಾಗದ ದಲಿತರಾದರೂ ತಾವು ಪರಿಶಿಷ್ಟರೆಂದು ಗುರುತಿಸಿಕೊಳ್ಳುವುದನ್ನು ತಾಯಿ ಹೃದಯದಿಂದ ನೋಡಬೇಕಾಗುತ್ತದೆ.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಮನೆಮನೆಯ ಸಮೀಕ್ಷೆ ಹೊತ್ತಿನಲ್ಲಿ, ‘ದಲಿತ ಕ್ರಿಶ್ಚಿಯನ್’ ಪ್ರಶ್ನೆ ಧುತ್ತೆಂದು ಎದ್ದು ನಿಂತಿದೆ. ‘ಮತಾಂತರವಾದ ಕಾರಣ ನೀವು ಕ್ರಿಶ್ಚಿಯನ್ನರೇ ಹೊರತು, ಜಾತಿಯ ಹೆಸರನ್ನು ಬರೆಸಬಾರದು’ ಎಂಬ ವಾದವನ್ನು ಹೂಡಲಾಗುತ್ತಿದೆ. ಆದರೆ ದಲಿತ ಕ್ರಿಶ್ಚಿಯನ್ ಪ್ರಶ್ನೆಯು ಬಹಳ ಸಂಕೀರ್ಣವಾದದ್ದು ಮತ್ತು ಅಂತಃಕರಣ ಹಾಗೂ ತಾಯ್ಗಣ್ಣಿನಿಂದ ನೋಡಬೇಕಾದದ್ದೂ ಆಗಿದೆ.
ಒಳಮೀಸಲಾತಿ ಜಾರಿಗಾಗಿ ರೂಪಿಸಲಾಗಿರುವ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಏಕಸದಸ್ಯ ಆಯೋಗವು ಧರ್ಮಾಂತರದ ಪ್ರಶ್ನೆಗೆ ಸೂಕ್ತ ಪರಿಹಾರವನ್ನು ಸೂಚಿಸಿದೆ. ಸಮೀಕ್ಷೆಗೂ ಮುನ್ನ ‘ಈದಿನ ಡಾಟ್ ಕಾಮ್’ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಜಸ್ಟಿಸ್ ದಾಸ್ ಅವರು, ”ಆಚರಣೆಯಲ್ಲಿ ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರೂ ಜಾತಿ ಪ್ರಮಾಣಪತ್ರದಲ್ಲಿ ಪರಿಶಿಷ್ಟ ಜಾತಿಯೆಂದೇ ಇದ್ದರೆ, ನಿಮ್ಮ ಮೂಲ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬಹುದು. ಆದರೆ ನೀವು ಕ್ರಿಶ್ಚಿಯನ್ನರೆಂದು ಸರ್ಕಾರಿ ದೃಢೀಕರಣ ಪತ್ರ ಪಡೆದಿದ್ದರೆ ಪರಿಶಿಷ್ಟರ ವ್ಯಾಪ್ತಿಗೆ ಬರುವುದಿಲ್ಲ” ಎಂದಿದ್ದರು. ಇದು ನ್ಯಾಯಪ್ರಜ್ಞೆಯ ಕಣ್ಣಿನಿಂದ ಮೂಡಿದ ಸೂಚನೆಯಾಗಿತ್ತು. ಆದರೆ ಜಸ್ಟಿಸ್ ದಾಸ್ ಅವರ ಈ ನಿಲುವನ್ನು ವಿರೋಧಿಸಿರುವ ಬೆಳವಣಿಗೆಗಳು ಆಘಾತಕಾರಿ.
ದಲಿತ ಕ್ರಿಶ್ಚಿಯನ್ ಪ್ರಶ್ನೆಯನ್ನು ಎರಡು ನೆಲೆಯಲ್ಲಿ ನೋಡಬೇಕಾಗುತ್ತದೆ. ಶತಮಾನದ ಹಿಂದೆಯೇ ಕ್ರಿಶ್ಚಿಯನ್ನರಾಗಿ ಧರ್ಮಾಂತರ ಆದವರು ಮತ್ತು ಇತ್ತೀಚಿನ ಕೆಲ ವರ್ಷಗಳಲ್ಲಿ ಧರ್ಮವನ್ನು ಬದಲಿಸಿದವರು ಎಂದು ವಿಂಗಡಿಸಿ ನೋಡುವುದು ಉಚಿತವೆನಿಸುತ್ತದೆ.
ಶತಮಾನಗಳ ಹಿಂದೆಯೇ ದಲಿತ ಕ್ರಿಶ್ಚಿಯನ್ನರಾದವರ ಬಗ್ಗೆ ಒಂದಿಷ್ಟು ವಿಸ್ತೃತವಾಗಿ ಚರ್ಚಿಸುವ ಅಗತ್ಯವಿದೆ. ಮಿಲಿಟರಿ ಬಲಪಡಿಸುವ ನಿಟ್ಟಿನಲ್ಲಿ ಬ್ರಿಟಿಷರು ಕಂಟೋನ್ಮೆಂಟ್‌ಗಳನ್ನು ಸ್ಥಾಪಿಸಿದಾಗ, ಬ್ರಿಟಿಷರೊಂದಿಗೆ ವಲಸೆ ಹೋದ ಬಹುದೊಡ್ಡ ಅಸ್ಪೃಶ್ಯ ಸಮುದಾಯವು ದಲಿತ ಕ್ರಿಶ್ಚಿಯನ್ನರಾಗಿ ಬದಲಾಗುತ್ತದೆ. ”ದೇಶದ ಯಾವುದೇ ಕಂಟೋನ್ಮೆಂಟ್‌ಗಳಿಗೆ ಹೋದರೂ ಅಲ್ಲಿ ದಲಿತ ಕ್ರಿಶ್ಚಿಯನ್ನರು ಸಿಗುವುದು ನಿಶ್ಚಿತ” ಎನ್ನುತ್ತಾರೆ ಕರ್ನಾಟಕ ದಲಿತ್ ಕ್ರಿಶ್ಚಿಯನ್ ಫೆಡರೇಷನ್‌ನ ಸಂಚಾಲಕರಾದ ಅಲ್ಫೋನ್ಸ್ ಜಿ. ಕೆನಡಿ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೂಡದು ಅಂದ್ರೆ ಕೂಡದು ಅಷ್ಟೇ; ಮುಂಬೈ ಹೈಕೋರ್ಟ್ ತೀರ್ಪು ಸ್ವಾಗತಾರ್ಹ
ದಲಿತ ಕ್ರಿಶ್ಚಿಯನ್ನರು ಸಾಮಾನ್ಯವಾಗಿ ಸಂಕರ ಸಂಸ್ಕೃತಿಗೆ ಒಳಗಾದವರು. ಮುಸ್ಲಿಮರಲ್ಲಿ ಪಿಂಜಾರರು ಇರುವಂತೆ ಕ್ರಿಶ್ಚಿಯನ್ನರಲ್ಲಿ ದಲಿತ ಕ್ರಿಶ್ಚಿಯನ್ನರು. ಅಂದರೆ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಆಚರಣೆಗಳನ್ನು ಅನುಸರಿಸಿ ಪಿಂಜಾರರು ವೈವಿಧ್ಯತೆಯನ್ನು ಮೆರೆಯುತ್ತಾರೆ. ಹಾಗೆಯೇ ಶತಮಾನಗಳ ಹಿಂದೆಯೇ ಮತಾಂತರವಾದ ದಲಿತ ಕ್ರಿಶ್ಚಿಯನ್ನರಲ್ಲೂ ಇಂತಹದ್ದೇ ಬಹುತ್ವ ಮಾದರಿ ಕಾಣುತ್ತದೆ.
”ಮದುವೆ ಸಂಬಂಧಗಳನ್ನು ಬೆಳೆಸುವಾಗ ಧರ್ಮವನ್ನು ನೋಡುವುದೇ ಇಲ್ಲ. ಅನೇಕರು ಚರ್ಚ್ ಅಥವಾ ದೇವಾಲಯಕ್ಕೂ ಹೋಗದೆ ಮನೆಯಲ್ಲೇ ಮದುವೆಯಾಗಿಬಿಡುತ್ತಾರೆ. ಇದನ್ನು ನಡುವುಟ್ಟು ಕಲ್ಯಾಣ ಎಂದು ಕರೆಯುತ್ತಾರೆ. ಪುಟ್ಟಮನೆಯಲ್ಲಿನ ಪುಟ್ಟ ದೇವರ ಕೋಣೆಯಲ್ಲಿ ಹಿಂದೂ, ಕ್ರಿಶ್ಚಿಯನ್ ದೇವರ ಫೋಟೋಗಳನ್ನು ಇರಿಸಿರುತ್ತಾರೆ. ಕ್ರಿಸ್ಮಸ್ ಆಚರಿಸುತ್ತಾರೆ, ಗಣೇಶ ಹಬ್ಬವನ್ನೂ ಮಾಡುತ್ತಾರೆ. ಇಲ್ಲಿನ ದಲಿತ ಕ್ರಿಸ್ತರಿಗೆ ಧರ್ಮ ಎಂಬುದು ಸಂತೋಷ ಹಾಗೂ ಸೆಲೆಬ್ರೇಟ್ ಸಂಗತಿಯೇ ಹೊರತು ಬೇರೇನೂ ಅಲ್ಲ” ಎಂಬುದು ಕೆನಡಿ ಅವರ ಅಭಿಪ್ರಾಯ.
ಕೆನಡಿಯವರ ಪ್ರಕಾರ ಬೆಂಗಳೂರಿನ ಕಂಟೋನ್ಮೆಂಟ್ ವಲಯದ ದಲಿತ ಕ್ರಿಶ್ಚಿಯನ್ನರ ಕುರಿತು ವಿಶೇಷವಾದ ಹಿನ್ನೆಲೆಯೂ ಇದೆ. ”ಬ್ರಿಟಿಷರು ಬೆಂಗಳೂರಿನಲ್ಲಿ ಕಂಟೋನ್ಮೆಂಟ್ ಸ್ಥಾಪಿಸುವಾಗ ಮದ್ರಾಸ್‌ನಿಂದ ಆಗಮಿಸಬೇಕಾಯಿತು. ತಾವು ಬರುವ ಮಾರ್ಗದಲ್ಲಿ ಬರಪೀಡಿತ ಪ್ರದೇಶದಲ್ಲಿನ ದಲಿತರನ್ನು ನೋಡಿದರು. ದಲಿತರು ಮಡಕೆಯಲ್ಲಿ ಮಾಡುತ್ತಿದ್ದ ದನ ಹಾಗೂ ಹಂದಿ ಮಾಂಸದ ಅಡುಗೆಗೆ ಬ್ರಿಟಿಷರು ಮಾರುಹೋದರು. ತಮ್ಮೊಂದಿಗೆ ಈ ದಲಿತರನ್ನೂ ಕರೆದುಕೊಂಡು ಬಂದರು. ಬ್ರಿಟಿಷರು ಹಾಗೂ ದಲಿತರ ಆಹಾರ ಪದ್ಧತಿ ಒಂದೇ ಆಗಿದ್ದು ಆತ್ಮೀಯತೆ ಬೆಳೆಯಲು ಕಾರಣವಾಯಿತು. ಈವರೆಗೆ ಊರ ಹೊರಗೆ ಇರುತ್ತಿದ್ದವರನ್ನು ಬ್ರಿಟಿಷರು ಮನೆಯ ಒಳಗೆ ಕರೆದುಕೊಂಡ ವಿದ್ಯಮಾನವು ಭಾರೀ ಪರಿವರ್ತನೆಗಳಿಗೆ ಕಾರಣವಾದವು” ಎನ್ನುತ್ತಾರೆ ಕೆನಡಿ.
ಎರಡನೇ ಮಾದರಿಯ ದಲಿತ ಕ್ರಿಶ್ಚಿಯನ್ನರೆಂದರೆ ಇತ್ತೀಚಿನ ವರ್ಷಗಳಲ್ಲಿ ಧರ್ಮಾಂತರ ಮಾಡಿದವರು ಎಂದು ಅರ್ಥೈಸಿಕೊಳ್ಳಬಹುದು. ಜಾತಿ ಅಸ್ಪೃಶ್ಯತೆಯ ನೋವು ಕಾಡಿ, ಸಾಮಾಜಿಕ ಬಹಿಷ್ಕಾರಗಳಿಂದ ನೊಂದು, ಈ ಹಿಂದೂ ಧರ್ಮವೇ ಬೇಡವೆಂದು ಧರ್ಮವನ್ನು ಬದಲಿಸಿದ ದಲಿತ ಕ್ರಿಶ್ಚಿಯನ್ನರು ಇಲ್ಲಿದ್ದಾರೆ. ಜಾತಿ ನೋವಿನಿಂದ ಧರ್ಮಾಂತರವಾಗುವ ಸಂಖ್ಯೆಯು ನಿತ್ಯವೂ ಬದಲಾಗುವಂತಹದ್ದು. ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವ ಮಟ್ಟಿಗೆ ಅವರ ಧರ್ಮಾಂತರವಿದ್ದರೂ, ದಾಖಲೆಗಳಲ್ಲಿ ಮೂಲ ಜಾತಿಯಾಗಿಯೇ ಉಳಿದಿರುವ ಸಾಧ್ಯತೆಯೇ ಹೆಚ್ಚು. ಧರ್ಮಾಚರಣೆಯು ವೈಯಕ್ತಿಕ ಆಯ್ಕೆಯಾಗಿರುವಾಗ, ಸಾಮಾಜಿಕ ಶೋಷಣೆ ನಿಂತುಬಿಡುವುದಿಲ್ಲ. ಶತಮಾನಗಳ ಹಿಂದೆಯೇ ಕ್ರಿಶ್ಚಿಯನ್ನರಾದವರು ದಾಖಲೆಗಳಲ್ಲೂ ಜಾತಿಯನ್ನು ಬಿಟ್ಟಿರುವ ಸಾಧ್ಯತೆ ಇರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ರಿಶ್ಚಿಯಾನಿಟಿಯನ್ನು ಅನುಸರಿಸುತ್ತಿರುವವರು ದಾಖಲಾತಿಯನ್ನು ಹೊಂದಿರದೆ ಇರುವ ಸಾಧ್ಯತೆಯೇ ಹೆಚ್ಚು.
ಶತಮಾನಗಳ ಹಿಂದೆ ಕನ್ವರ್ಟ್ ಆಗಿರುವ ದಲಿತರಿರಲಿ, ಇತ್ತೀಚಿನ ವರ್ಷಗಳಲ್ಲಿ ಧರ್ಮಾಂತರವಾದ ದಲಿತರಿರಲಿ- ಇಬ್ಬರಿಗೂ ಇರುವ ಒಂದು ಸಾಮಾನ್ಯ ಎಳೆ ಅಂದರೆ ಅಸ್ಪೃಶ್ಯತೆಯ ನೋವು. ಧರ್ಮವನ್ನು ಬದಲಿಸಿದ ಮಾತ್ರಕ್ಕೆ ಸಾಮಾಜಿಕ ಅವಮಾನಗಳು, ನಿಂದನೆಗಳು ನಿಂತು ಹೋಗುವುದಿಲ್ಲ. ಇದಕ್ಕೆ ಬಹುದೊಡ್ಡ ಉದಾಹರಣೆ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮ. ಈ ಊರಿಗೂ ಕ್ರಿಶ್ಚಿಯಾನಿಟಿಗೂ ಸುಮಾರು 200 ವರ್ಷಗಳ ಇತಿಹಾಸವಿದೆ. ಇಲ್ಲಿ ಒಕ್ಕಲಿಗ ಕ್ರಿಶ್ಚಿಯನ್ನರಿದ್ದಾರೆ, ಗೊಲ್ಲ ಕ್ರಿಶ್ಚಿಯನ್ನರಿದ್ದಾರೆ, ಮಡಿವಾಳ ಕ್ರಿಶ್ಚಿಯನ್ನರಿದ್ದಾರೆ, ಹೊಲೆಯ- ಮಾದಿಗ ಕ್ರಿಶ್ಚಿಯನ್ನರಿದ್ದಾರೆ. ಕ್ರಿಶ್ಚಿಯಾನಿಟಿಯನ್ನು ಅನುಸರಿಸುತ್ತಿದ್ದರೂ ಅವರು ಜಾತಿಗಳ ಮೂಲಕವೇ ಗುರುತಿಸಲ್ಪಡುತ್ತಾರೆ. ಸವರ್ಣೀಯ ಹಿನ್ನೆಲೆಯ ಕ್ರಿಶ್ಚಿಯನ್ನರ ಕಣ್ಣಿಗೆ ಅಸ್ಪೃಶ್ಯ ಹಿನ್ನೆಲೆಯವ ಕಾಣುವುದು- ಹೊಲೇರ ಆಂಟೋನಿ, ಮಾದಿಗರ ಮಾರ್ಟಿನ್ ಎಂಬುದಾಗಿಯೇ ಹೊರತು ನಾವೆಲ್ಲ ಕ್ರಿಶ್ಚಿಯನ್ನರು ಎಂಬ ಪ್ರಜ್ಞೆ ಇರುವುದಿಲ್ಲ ಎನ್ನುತ್ತಾರೆ ಈ ಊರಿನ ದಲಿತರು. ಹಾರೋಬೆಲೆಯಲ್ಲಿ ದಲಿತ ಕ್ರಿಶ್ಚಿಯನ್ನರ ಮೇಲೆ ಸವರ್ಣೀಯ ಕ್ರಿಶ್ಚಿಯನ್ನರು ಹಲ್ಲೆ ನಡೆಸಿರುವ ಪ್ರಕರಣಗಳು ನಡೆದಿದ್ದವು. ಆದರೆ ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯು ಅನ್ವಯವಾಗದೆ ಇರುವುದರಿಂದ ಅಟ್ರಾಸಿಟಿ ಕೇಸ್ ದಾಖಲಾಗುವುದಿಲ್ಲ. ಆದರೆ ಈ ದಾಳಿಗಳ ಹಿಂದೆ ಜಾತಿ, ಅಸ್ಪೃಶ್ಯತೆಯ ಆಯಾಮ ಇದ್ದದ್ದನ್ನು ಮರೆಯಲಾಗದು. ಈ ನೆಲದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯಾನಿಟಿಗೆ ಧರ್ಮಾಂತರ ಆಗುವುದೆಂದರೆ ವಾಸ್ತವದಲ್ಲಿ ಜಾತಿಯನ್ನೂ ಆ ಧರ್ಮದೊಳಗೆ ತೆಗೆದುಕೊಂಡು ಹೋಗುವುದು ಎಂದರ್ಥ. ಹೀಗಾಗಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ ಕ್ರಿಶ್ಚಿಯಾನಿಟಿಯು ಭಾರತಕ್ಕೆ ಬಂದ ಮೇಲೆ ಜಾತಿಯನ್ನೂ ಒಳಗೊಳ್ಳುತ್ತಾ ಹೋಗಿದೆ. ಕ್ರಿಶ್ಚಿಯಾನಿಟಿಗೆ ಒಬ್ಬ ದಲಿತ, ಮತ್ತೊಬ್ಬ ಬ್ರಾಹ್ಮಣ ಏಕಕಾಲದಲ್ಲಿ ಧರ್ಮಾಂತರವಾದರೂ ಬ್ರಾಹ್ಮಣನಿಗೆ ಹೆಚ್ಚಿನ ಅವಕಾಶಗಳು ಧರ್ಮದೊಳಗೆ ಸಿಗುತ್ತಾ ಹೋಗುತ್ತವೆ. ಇದು ಈ ನೆಲದಲ್ಲಿನ ಅಸಮಾನತೆಯ ಸ್ವರೂಪ.
ಜಾತಿಯ ನೋವನ್ನು ಪರಿಗಣಿಸಿ, ದಲಿತ ಕ್ರಿಶ್ಚಿಯನ್ನರನ್ನೂ ಎಸ್‌ಸಿ ಪಟ್ಟಿಗೆ ಸೇರಿಸಬೇಕೆಂಬ ಹೋರಾಟ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನಲ್ಲೂ ಪ್ರಕರಣವಿದೆ. ಇನ್ನೊಂದು ಸಂಗತಿ ಅಂದರೆ- ಅಕ್ಟೋಬರ್ 2004ರಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಆಗಿನ ಯುಪಿಎ ಸರ್ಕಾರವು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಸ್ಥಿತಿಯ ಉನ್ನತಿಗೆ ಕ್ರಮ ವಹಿಸಲು ಮುಂದಾಗಿತ್ತು. ಸೂಕ್ತ ಶಿಫಾರಸು ನೀಡುವಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರ ನೇತೃತ್ವದಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ರಚಿಸಿತ್ತು. ಸದರಿ ಆಯೋಗವು ಎಸ್‌ಟಿ ಸ್ಥಾನಮಾನದಂತೆಯೇ ಎಸ್‌ಸಿ ಮೀಸಲಾತಿಯ ಸಮಯದಲ್ಲಿಯೂ ಧರ್ಮ ತಟಸ್ಥವಾಗಿರಬೇಕು ಎಂದು ಶಿಫಾರಸ್ಸು ಮಾಡಿತು. ಶಿಫಾರಸುಗಳು ಕ್ಷೇತ್ರ ಅಧ್ಯಯನದಿಂದ ರುಜುವಾತಾಗಿಲ್ಲ ಎಂಬ ಕಾರಣಕ್ಕೆ ಅಂದಿನ ಯುಪಿಎ ಸರಕಾರ ಅಂಗೀಕರಿಸಿರಲಿಲ್ಲ. ಈಗಿನ ಸರ್ಕಾರವೂ ಇದೇ ವಾದವನ್ನು ಮಂಡಿಸುತ್ತಿದೆ. ಜೊತೆಗೆ ಮತ್ತೊಂದು ಆಯೋಗವನ್ನು ಬಿಜೆಪಿ ಸರ್ಕಾರ ರೂಪಿಸಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಅದರ ನೇತೃತ್ವ ವಹಿಸಿದ್ದಾರೆ. ಮತ್ತೊಂದೆಡೆ ಇದೇ ಬಿಜೆಪಿ ಸರ್ಕಾರ, ”ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ (ಎಸ್‌ಸಿ) ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇರುವ ಕಾರಣ ದಲಿತರಿಗೆ ಮೀಸಲಾತಿ ನೀಡಲಾಗಿದೆ. ಕ್ರಿಶ್ಚಿಯನ್ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆ ಇಲ್ಲ. ಹೀಗಾಗಿ ಎಸ್‌ಸಿ ಸ್ಥಾನಮಾನ ನೀಡಲಾಗದು” ಎನ್ನುತ್ತಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
“1950ರ ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶದ ಪ್ರಕಾರ ಪರಿಶಿಷ್ಟ ಜಾತಿಯ ಜನರು ಹಿಂದೂ, ಸಿಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ ಮಾತ್ರ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು. ವಿದೇಶಿ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರವಾದ ದಲಿತರಿಗೆ ಈ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸುತ್ತಿದೆ.
ಈ ಎಲ್ಲ ಸಂಗತಿಗಳನ್ನು ನೋಡಿದರೆ ದಲಿತ ಕ್ರಿಶ್ಚಿಯನ್ನರ ಸ್ಥಿತಿಗಳು ಸಂಕೀರ್ಣವಾಗಿವೆ. ಪ್ರವರ್ಗ ಒಂದರಲ್ಲಿ ಗುರುತಿಸಲ್ಪಡುತ್ತಿರುವ ಈ ದಲಿತರು ಅಸ್ಪೃಶ್ಯತೆಯಿಂದ ಮುಕ್ತರಾಗಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಕ್ರಿಶ್ಚಿಯನ್ನರೆಂದು ನಮೂದಾಗದ ದಲಿತರಾದರೂ ಪರಿಶಿಷ್ಟರೆಂದು ಗುರುತಿಸಿಕೊಳ್ಳುವುದನ್ನು ತಾಯಿ ಹೃದಯದಿಂದ ನೋಡಬೇಕಾಗುತ್ತದೆ. ಯಾವುದೇ ಧರ್ಮವನ್ನು ಅನುಸರಿಸಿದರೂ ಅಸ್ಪೃಶ್ಯತೆಯ ಆಧಾರದಲ್ಲಿ ಪರಿಶಿಷ್ಟರೆಂದೇ ಪರಿಗಣಿಸುವ ಕಾನೂನಾತ್ಮಕ ಬದಲಾವಣೆಗೂ ನಾವು ಒತ್ತಾಯಿಸಬೇಕಾಗಿದೆ.

ಸಂವಿಧಾನದಲ್ಲಿ ಅವಕಾಶ ಇಲ್ಲ. ನೀವು ಸಂವಿಧಾನ ತಿದ್ದುಪಡಿ ಮಾಡಿ ಮೀಸಲು ನೀಡಿ