ಮಹಿಳೆಯ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆದಾಗ ಅದು ಆಕೆಯ ದೇಹ ಮನಸ್ಸು ಮತ್ತು ಖಾಸಗಿತನದ ಮೇಲಿನ ಹಲ್ಲೆ ಎಂದೇ ಪರಿಗಣಿಸಲಾಗುತ್ತದೆ. ಅತ್ಯಾಚಾರವು ನೈತಿಕ ಮತ್ತು ದೈಹಿಕವಾಗಿ ಘೋರ ಅಪರಾಧ ಎಂದು ಮುಂಬೈ ಹೈಕೋರ್ಟ್ ಪೀಠ ಹೇಳಿದೆ. ಹೆಣ್ಣಿನ ಚಾರಿತ್ರ್ಯ ಸರಿಯಿಲ್ಲ ಹಾಗಾಗಿ ಆಕೆಯ ಮೇಲೆ ನಡೆದಿರುವುದು ಅತ್ಯಾಚಾರ ಅಲ್ಲ ಎಂದು ವಾದಿಸುವವರಿಗೆ ಈ ತೀರ್ಪು ಕಣ್ಣು ತೆರೆಸುವ ಪಾಠ.
ಮೇ 8ರಂದು ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರ ತೀರ್ಪಿನ ಮೇಲ್ಮನವಿ ಅರ್ಜಿ ವಿಲೇವಾರಿ ಮಾಡುವಾಗ ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿಗಳಾದ ನಿತಿನ್ ಸೂರ್ಯವಂಶಿ ಮತ್ತು ಎಂ ಡಬ್ಲ್ಯು ಚಂದ್ವಾನಿ ಪೀಠ ನೀಡಿದ ಹೇಳಿಕೆ ಬಹಳ ಮಹತ್ವದ್ದು. ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಹೇಳಿಕೆ. ದೇಶದ ಹಲವು ನ್ಯಾಯಪೀಠಗಳು ಲಿಂಗಸಂವೇದನಾ ರಹಿತ ಟಿಪ್ಪಣಿಗಳನ್ನು ಪೈಪೋಟಿಗೆ ಬಿದ್ದಂತೆ ನೀಡುತ್ತಿರುವ ಈ ಹೊತ್ತಿನಲ್ಲಿ ಈ ಇಬ್ಬರು ನ್ಯಾಯಮೂರ್ತಿಗಳ ಟಿಪ್ಪಣಿ ಅತ್ಯಂತ ಸೂಕ್ಷ್ಮ ಸಂವೇದಿಯಾದದ್ದು.
ಹೆಣ್ಣಿನ ದೇಹ ಬಿಕರಿಗೆ ಇಟ್ಟ ಸರಕಲ್ಲ. ಭಾವ ಸಂವೇದನೆಗಳು, ಬೇಕು ಬೇಡಗಳನ್ನು ಹೊಂದಿರುವ ಆಕೆಯನ್ನು ಕೇವಲ ಒಡಲು ಎಂದು ಬಗೆದು, ಬಗೆಯುವುದು ಅಮಾನುಷ. ಆಕೆಗೂ ನೋವು ನಲಿವುಗಳಿರುತ್ತವೆ. ಬದುಕಿನ ಬಗ್ಗೆ ಸುಂದರ ಕಲ್ಪನೆಗಳಿರುತ್ತವೆ. ಅವು ಯಾರದ್ದೋ ಕ್ಷಣಿಕ ತೆವಲಿಗೆ ಬಲಿಯಾಗಕೂಡದು. ಆಕೆ ಕೂಡದು ಎಂದರೆ ಕೂಡದು, ಅದನ್ನೂ ಮೀರಿ ಆಕೆಯ ಮನಸ್ಸು, ದೇಹದ, ಘನತೆಯ ಮೇಲೆ ದಾಳಿ ನಡೆಸುವ ಹಕ್ಕು ಯಾರಿಗೂ ಇಲ್ಲ. ನ್ಯಾಯಪೀಠಗಳು ಈ ಮಾತನ್ನು ನಾಗರಿಕ ಸಮಾಜದಲ್ಲಿ ಆಗಾಗ ಹೇಳಬೇಕಿರುವ ಸಂದರ್ಭ ಒದಗಿರುವುದೇ ದೊಡ್ಡ ವಿಡಂಬನೆ. ಮಹಿಳೆಯರ ರಕ್ಷಣೆಗಿರುವ ಕಠಿಣ ಕಾಯ್ದೆ ಕಾನೂನುಗಳು ನಿಷ್ಫಲವಾಗಿವೆ. ಯಾಕೆಂದರೆ ಅವುಗಳನ್ನು ಜಾರಿ ಮಾಡುವ ಎಲ್ಲ ‘ಏಜೆನ್ಸಿ’ಗಳೂ ಪುರುಷಪ್ರಧಾನ. ಈ ಗಂಡಾಳಿಕೆಯ ಆತ್ಮ ಹೆಣ್ಣಿನ ಸಂವೇದನೆಯಿಂದ ಬಹು ದೂರವೇ ಉಳಿದಿದೆ. ಆಕೆ ಬೇಕೆಂದಾಗ ಭೋಗಕ್ಕೆ ಮತ್ತು ಸೇವೆಗೆ ಒದಗಿಬರಬೇಕು, ಅದು ತನ್ನ ಹಕ್ಕು ಎಂದು ಗಂಡಾಳಿಕೆ ನಂಬಿಕೊಂಡು ಬಂದಿದೆ. ಈ ಆಂತರಿಕ ವ್ಯಾಧಿ ಕಾನೂನು ವ್ಯವಸ್ಥೆ- ನ್ಯಾಯವ್ಯವಸ್ಥೆಯ ಆಳಕ್ಕೆ ಇಳಿದಿದೆ. ಪೊಲೀಸ್ ಠಾಣೆಗಳಲ್ಲಿ ಅತ್ಯಾಚಾರಗಳು, ಪೊಲೀಸರೇ ಅತ್ಯಾಚಾರಿಗಳಾಗುವ ಮತ್ತು ನ್ಯಾಯಪೀಠಗಳು ನೀಡುವ ಸ್ತ್ರೀವಿರೋಧಿ ಟೀಕೆ ಟಿಪ್ಪಣಿಗಳು ಈ ವ್ಯಾಧಿಯ ಬಾಹ್ಯ ಲಕ್ಷಣಗಳು ಮಾತ್ರ.
ಮಹಿಳೆಯ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆದಾಗ ಅದು ಆಕೆಯ ದೇಹ ಮನಸ್ಸು ಮತ್ತು ಖಾಸಗಿತನದ ಮೇಲಿನ ಹಲ್ಲೆ ಎಂದೇ ಪರಿಗಣಿಸಲಾಗುತ್ತದೆ. ಅತ್ಯಾಚಾರವು ನೈತಿಕ ಮತ್ತು ದೈಹಿಕವಾಗಿ ಘೋರ ಅಪರಾಧ ಎಂದು ಮುಂಬೈ ಹೈಕೋರ್ಟ್ ಪೀಠ ಹೇಳಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿರುವ ಅಪರಾಧಿಗಳು ಮುಂಬೈ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಪರಾಧಿಗಳಲ್ಲಿ ಒಬ್ಬನೊಂದಿಗೆ ಆಕೆಗೆ ಈ ಹಿಂದೆ ಸಂಬಂಧ ಇತ್ತು, ನಂತರ ಮತ್ತೊಬ್ಬನೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದಳು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ ಹೀಗೆ ಆಕೆಯ ನೈತಿಕತೆಯ ಮೇಲೆ ದಾಳಿ ಮಾಡುವುದನ್ನು ನ್ಯಾಯಪೀಠ ಒಪ್ಪಿಲ್ಲ. ಮತ್ತು ಆಕೆ ಈ ಹಿಂದೆ ಯಾರೊಂದಿಗೆ ಅಥವಾ ಎಷ್ಟು ಮಂದಿಯೊಂದಿಗೆ ಸಂಬಂಧ ಹೊಂದಿದ್ದರೂ ಆಕೆಯ ಒಪ್ಪಿಗೆ ಇಲ್ಲದೆ ಯಾವುದೇ ವ್ಯಕ್ತಿ ಸಂಭೋಗಕ್ಕೆ ಒತ್ತಾಯಿಸುವಂತಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ. ಅಪರಾಧಿಗಳಿಗೆ 20 ವರ್ಷಗಳ ಜೈಲುವಾಸದ ಸಜೆ ನೀಡಿದೆ.
ವ್ಯಕ್ತಿಯೊಬ್ಬನ ಜೊತೆ ಒಮ್ಮೆ ದೇಹಸಂಪರ್ಕ ಮಾಡಿದಳೆಂದಾಕ್ಷಣಕ್ಕೆ ಆ ವ್ಯಕ್ತಿಯ ಜೊತೆ ಎಲ್ಲ ಕಾಲಕ್ಕೂ ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ನೀಡಿದಳೆಂದು ಅರ್ಥವಲ್ಲ. ಆಕೆ ಎಷ್ಟು ಮಂದಿ ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಳು ಎಂಬ ಅಂಶ ಆಕೆಯ ನೈತಿಕತೆಯ ಮಾನದಂಡ ಅಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ನ್ಯಾಯಪೀಠ ಮತ್ತೊಮ್ಮೆ ಸಾರಿ ಹೇಳಿದೆ.
ಅತ್ಯಾಚಾರ, ಹಳಸಿದ ಸಂಬಂಧ ಮುಂತಾದ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವುದೆಂದರೆ ಕ್ಷಣ ಕ್ಷಣವೂ ಅವಮಾನ, ಟೀಕೆಯನ್ನು ಎದುರಿಸಲು ಸಿದ್ಧರಿರಬೇಕು ಎಂದೇ ಅರ್ಥ. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೇ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದಾಗಲೂ ಘನತೆಗೆ ಧಕ್ಕೆ ತರುವ ಹೆಣ್ಣೇ ಅಪರಾಧಿ ಎಂಬಂತೆ ಚಿತ್ರಿಸಲಾಗುತ್ತದೆ. ಕೋರ್ಟ್‌ಗಳಲ್ಲಿ ವಿಚಾರಣೆಯ ವೇಳೆ, ಪತಿಯ ಕಡೆಯ ವಕೀಲರು ಮಾತ್ರವಲ್ಲ, ಪೀಠದಲ್ಲಿ ಕುಳಿತ ಹಲವರು ನೀಡುವ ಹೇಳಿಕೆಗಳು, ನೋಡುವ ನೋಟಗಳು ಆಕೆಯನ್ನು ಇನ್ನಷ್ಟು ಕುಗ್ಗುವಂತೆ ಮಾಡುತ್ತಿರುವುದು ಸತ್ಯ.
ಸಾಮೂಹಿಕ ಅತ್ಯಾಚಾರ ನಡೆದಾಗಲೂ ಆ ಹೊತ್ತಿನಲ್ಲಿ ಆಕೆ ಯಾಕೆ ಹೊರಗೆ ಹೋದಳು, ಗೆಳೆಯನ ಜೊತೆ ಯಾಕೆ ಸುತ್ತಲು ಹೋಗಿದ್ದಾದರೂ ಯಾಕೆ, ಕತ್ತಲಾಗುವ ಮುನ್ನ ಮನೆ ಸೇರಬಾರದಾ, ಅಂತಹ ಉಡುಪು ಧರಿಸಿದ್ರೆ ಯುವಕರು ಉದ್ರೇಕಗೊಳ್ಳಲ್ವಾ ಎಂದು ಸಂತ್ರಸ್ತೆಯನ್ನೇ ತಪ್ಪಿತಸ್ಥಳೆಂದು ದೂರಲಾಗುತ್ತದೆ. ಈ ದೋಷಾರೋಪಣೆಯಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ಕಾಣದು. ಹೆಣ್ಣು ಕೂಡ ಗಂಡಿನ ಮನಸ್ಥಿತಿಯಲ್ಲೇ ಕೈದಿಯಾಗಿ ಶತಮಾನಗಳೇ ಉರುಳಿವೆಯಲ್ಲ?
ಹೆಣ್ಣಿನ ಚಾರಿತ್ರ್ಯ ಸರಿಯಿಲ್ಲ ಹಾಗಾಗಿ ಆಕೆಯ ಮೇಲೆ ನಡೆದಿರುವುದು ಅತ್ಯಾಚಾರ ಅಲ್ಲ ಎಂದು ವಾದಿಸುವವರಿಗೆ ಮುಂಬೈ ಹೈಕೋರ್ಟಿನ ಈ ತೀರ್ಪು ಕಣ್ಣು ತೆರೆಸುವ ಪಾಠ. ಆಕೆ ಎಷ್ಟೇ ಜನರ ಜೊತೆಗೂ ಸಂಬಂಧ ಹೊಂದಿರಲಿ ಅದು ಆಕೆಯ ಆಯ್ಕೆ, ಸ್ವಾತಂತ್ರ್ಯ. ಆದರೆ ಆ ಕಾರಣವನ್ನು ಮುಂದೆ ಮಾಡಿ ಆಕೆಯ ಒಪ್ಪಿಗೆ ಇಲ್ಲದೇ ಮತ್ತೊಬ್ಬ ಸಂಭೋಗ ಬಯಸುವುದು, ಬಲಾತ್ಕಾರ ಮಾಡುವುದನ್ನು ಈ ನೆಲದ ಕಾನೂನು ಮಾನ್ಯ ಮಾಡುವುದಿಲ್ಲ ಎಂಬುದನ್ನು ಪುನರುಚ್ಚರಿಸಲಾಗಿದೆ.
ಇತ್ತೀಚೆಗೆ ಅಪ್ರಾಪ್ತ ಬಾಲಕರು ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಶಾಲಾ ಮಕ್ಕಳು ಅತ್ಯಾಚಾರದಂತಹ ಕೃತ್ಯಗಳಲ್ಲಿ ಭಾಗಿಯಾಗುವುದು ತೀರಾ ಆತಂಕಕಾರಿ ಬೆಳವಣಿಗೆ. ಚಿಂಚೋಳಿಯಲ್ಲಿ ಹದಿನಾರು ವರ್ಷದ ಬಾಲಕಿಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಮರುದಿನವೇ ನೆರೆಮನೆಯ ಇಪ್ಪತ್ತು ವರ್ಷದ ಯುವಕ ಅಪಹರಿಸಿ ಅತ್ಯಾಚಾರ ಎಸಗಿರುವುದು ವರದಿಯಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯಸ್ಸಿನವರೂ ಲೈಂಗಿಕ ದೌರ್ಜನ್ಯಕ್ಕೆ ಈಡಾಗುತ್ತಿದ್ದಾರೆ.
NCPCR ಪ್ರಕಾರ ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ 96% ಹೆಚ್ಚಳವಾಗಿದೆ. ಅಮೆರಿಕ ಮೂಲದ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್ ಜರ್ನಲ್‘ಬಿಡುಗಡೆ ಮಾಡಿರುವ ವರದಿಯಲ್ಲಿ, 2023ರಲ್ಲಿ ದೇಶದ ಹೆಣ್ಣುಮಕ್ಕಳ ಪೈಕಿ 30% ಬಾಲಕಿಯರು 18 ವರ್ಷ ಪೂರೈಸುವುದಕ್ಕೂ ಮೊದಲೇ ಲೈಂಗಿಕ ಕಿರುಕುಳಗಳಿಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ. ಇದು ಒಂದು ನಾಗರಿಕ ಸಮಾಜ ರೋಗಗ್ರಸ್ತವಾಗಿದೆ ಎಂಬುದರ ಸೂಚನೆ. ಈ ಬಗ್ಗೆ ಯಾವುದೇ ಸರ್ಕಾರಗಳಾಗಲಿ, ರಾಜಕೀಯ ಪಕ್ಷಗಳಾಗಲಿ ಗಂಭೀರವಾಗಿ ಚಿಂತಿಸುತ್ತಿಲ್ಲ. ಸಮಾಜ ದಿನದಿಂದ ದಿನಕ್ಕೆ ನೈತಿಕ ಪತನದತ್ತ ಜಾರುತ್ತಿದೆ.
ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಅದರಲ್ಲೂ ಅತ್ಯಾಚಾರ ಪ್ರಕರಣಗಳಲ್ಲಿವಿಳಂಬ ನೀತಿಗೆ ಯಾವುದೇ ಕಾರಣ ಸ್ವೀಕಾರಾರ್ಹವಲ್ಲ. ನ್ಯಾಯಾಲಯಗಳ ಕೊರತೆ, ನ್ಯಾಯಾಧೀಶರ ಕೊರತೆ, ಕಟ್ಟಡಗಳ ಕೊರತೆ ಮುಂತಾದ ಅಂಶಗಳೆಲ್ಲ ಅತ್ಯಾಚಾರ ಪ್ರಕರಣಗಳ ವಿಳಂಬ ವಿಚಾರಣೆ ಇತ್ಯರ್ಥಕ್ಕೆ ಕಾರಣವಾಗಕೂಡದು. ಸಾಕ್ಷ್ಯಗಳ ನಾಶ, ಸಾಕ್ಷಿಗಳ ಖರೀದಿ, ಪ್ರಭಾವ ಬೀರಲು, ಬೆದರಿಸಲು ಅವಕಾಶ ನೀಡಿದಂತಾಗುತ್ತದೆ. ಕೋರ್ಟಿಗೆ ಅಲೆಯುವುದು ಸಂತ್ರಸ್ತರಿಗೆ ಮತ್ತವರ ಕುಟುಂಬಗಳಿಗೆ ಹೇಳಿಕೊಳ್ಳಲಾಗದ ಹಿಂಸೆ. ವರ್ಷಾನುಗಟ್ಟಲೆ ಅಲೆದರೂ ನ್ಯಾಯ ಮರೀಚಿಕೆಯಾಗುವ ಪರಿಸ್ಥಿತಿಯಿದೆ. ನಿಗದಿತ ಅವಧಿಯೊಳಗೆ ಆರೋಪಪಟ್ಟಿ ಸಲ್ಲಿಕೆಯಾಗದೆ ಜಾಮೀನಿನಲ್ಲಿ ಬಿಡುಗಡೆಯಾಗುವ ಆರೋಪಿಗಳು ರಾಜಾರೋಷವಾಗಿ ತಿರುಗುವುದನ್ನು ಕಾಣುತ್ತಿದ್ದೇವೆ.. ಆದರೆ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣುಮಕ್ಕಳ ಪಾಲಿಗೆ ಬದುಕು ಕೂಡ ಸಾವಾಗಿ ಕಾಡುತ್ತಿರುತ್ತದೆ. ಜಾಮೀನು, ಪೆರೋಲ್ ಮೇಲೆ ಹೊರಗೆ ಬಂದಿರುವ ಆರೋಪಿಗಳು- ಅಪರಾಧಿಗಳು ಪುನಃ ಅತ್ಯಾಚಾರ ಎಸಗಿರುವ ಪ್ರಕರಣಗಳು ಸರ್ವೇಸಾಮಾನ್ಯ ಎನಿಸುತ್ತಿರುವುದು ವ್ಯವಸ್ಥೆಯ ಪತನದ ದಿಕ್ಸೂಚಿ.
ಇತ್ತೀಚೆಗೆ ಕೆಲವು ನ್ಯಾಯ ಪೀಠಗಳು ಪತ್ನಿಯ ಜೊತೆ ಬಲತ್ಕಾರದ ಸೆಕ್ಸ್ ಅಪರಾಧವಲ್ಲ, ಮೊಲೆ ಹಿಡಿದರೆ ಅತ್ಯಾಚಾರ ಪ್ರಯತ್ನ ಅಲ್ಲ, ಪಕ್ಕದಲ್ಲಿ ಮಲಗಿ ತುಟಿಗೆ ಮುತ್ತಿಟ್ಟರೆ ಅಪರಾಧವಲ್ಲ ಎಂಬಂತಹ ಹೇಳಿಕೆಗಳನ್ನು ನೀಡಿರುವುದುಂಟು. ಇಂತಹ ಒಂದು ಆದೇಶವನ್ನು ಟಿಪ್ಪಣಿಯನ್ನು ಸುಪ್ರೀಮ್ ಕೋರ್ಟು ರದ್ದು ಮಾಡಿದೆ ನಿಜ. ಆದರೆ ಒಂದನ್ನು ರದ್ದು ಮಾಡಿದರೆ ಹತ್ತು ಮತ್ತೆ ತಲೆಯೆತ್ತುತ್ತಿವೆಯಲ್ಲ, ಈ ಮನಸ್ಥಿತಿಗೇನು ಮದ್ದು ಎಂಬ ಕುರಿತು ಗಂಭೀರ ಚಿಂತನೆ ನಡೆಯಬೇಕಿದೆ. ಇಂತಹ ಬೇಜವಾಬ್ದಾರಿ ಮತ್ತು ಸ್ತ್ರೀವಿರೋಧಿ ಟಿಪ್ಪಣಿಗಳು ಅತ್ಯಾಚಾರಿಗಳಿಗೆ ಇನ್ನಷ್ಟು ಭಂಡ ಧೈರ್ಯ ತುಂಬಿದರೆ ಅಚ್ಚರಿಯಿಲ್ಲ. ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ನಿತಿನ್ ಸೂರ್ಯವಂಶಿ ಮತ್ತು ಎಂ ಡಬ್ಲ್ಯು ಚಂದ್ವಾನಿ ಪೀಠದ ತೀರ್ಪು ಗಂಡಾಳಿಕೆಯ ಎದೆಯ ಮೇಲೆ ಕೆತ್ತಿಡುವಂತಿದೆ.
