ಈ ದಿನ ಸಂಪಾದಕೀಯ | ಕೇಡಿನ ಕಾಲದ ದಿಟ್ಟ ದನಿಗಳು, ಈ ನ್ಯಾಯಮೂರ್ತಿಗಳು

Date:

Advertisements
ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿಯನ್ನು ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷಪೂರಿತ ಎಂದ ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್ ಹಾಗೂ ಬಿ.ವಿ ನಾಗರತ್ನ ಅವರು, ಈ ಕೇಡಿನ ಕಾಲದಲ್ಲೂ ಸಂವಿಧಾನವನ್ನು ಎತ್ತಿ ಹಿಡಿದ, ಭಾರತದ ಬಹುತ್ವವನ್ನು ಉಳಿಸಿದ ದಿಟ್ಟ ದನಿಗಳು.

`ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿಯನ್ನು ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷಪೂರಿತ, ಅಸ್ಥಿರ ಹಾಗೂ ಪ್ರಮಾದದಿಂದ ಕೂಡಿರುವುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಸರ್ಕಾರದ ಈ ಒಂದು ನಿರ್ಧಾರದಿಂದ ದೊಡ್ಡ ಪ್ರಮಾಣದ ಜನರು ಮೀಸಲಾತಿಯ ಲಾಭದಿಂದ ವಂಚಿತರಾಗಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯ ಸಚಿವ ಸಂಪುಟವು ಮಾರ್ಚ್ 27ರಂದು ತೆಗೆದುಕೊಂಡಿರುವ ನಿರ್ಧಾರ ಪ್ರಶ್ನಿಸಿ ಎಲ್. ಗುಲಾಮ್ ರಸೂಲ್ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್ ಹಾಗೂ ಬಿ.ವಿ ನಾಗರತ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯ ದೇಶದಲ್ಲಿನ್ನೂ ಸಂವಿಧಾನ, ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂಬುದನ್ನು ಒತ್ತಿ ಹೇಳಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಧಾರ್ಮಿಕ ಅಲ್ಪಸಂಖ್ಯಾತರ ವಿಷಯದಲ್ಲಿ ತಾಳುತ್ತಿರುವ ನಿಲುವನ್ನು, ತೆಗೆದುಕೊಳ್ಳುತ್ತಿರುವ ಕ್ರಮವನ್ನು, ತೋರುತ್ತಿರುವ ಭಂಡತನವನ್ನು ಮಾಧ್ಯಮಗಳು ಮತ್ತು ನ್ಯಾಯಾಂಗ ಬಹಿರಂಗಗೊಳಿಸಬೇಕಿದೆ.

Advertisements

ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಅಲ್ಪಸಂಖ್ಯಾತರು- ಅದರಲ್ಲೂ ಮುಸ್ಲಿಮರನ್ನು ತೀರಾ ತುಚ್ಛವಾಗಿ ಕಾಣಲಾಗುತ್ತಿದೆ. ಅವರು ನೆಮ್ಮದಿಯಿಂದ ಬದುಕುವ ವಾತಾವರಣವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅವರಿಗಿದ್ದ ಶೇ. 4 ರ ಮೀಸಲಾತಿಯನ್ನು ಕಿತ್ತುಕೊಂಡಿದ್ದೂ ಅಲ್ಲದೆ; ಹಿಂದುಳಿದವರಿಗೆ ನೀಡಲಾಗುವ ಮೀಸಲಾತಿಯ ಪಟ್ಟಿಯಿಂದ ಮುಸ್ಲಿಮರನ್ನು ಕಿತ್ತುಹಾಕಿ ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಪಟ್ಟಿಗೆ ಸೇರಿಸುವ ನಿರ್ಧಾರವನ್ನೂ ತೆಗೆದುಕೊಂಡಿತ್ತು. ಇದು ಸಂವಿಧಾನಕ್ಕೆ ಮಾಡುವ ಅಪಚಾರ.

ಮುಸ್ಲಿಮರ ವಿರುದ್ಧದ ಈ ಕ್ರಮ ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ ಎನ್ನುವುದು ಜಾರಿಗೆ ತಂದ ಬಿಜೆಪಿಗೆ ಗೊತ್ತಿತ್ತು. ಆದರೆ, ಅವರ ಚಿಂತನೆ-ಯೋಚನೆ ಚುನಾವಣೆಯಾಗಿತ್ತು. ಮುಸ್ಲಿಮರನ್ನು ಹೇಗೆ ಬಗ್ಗು ಬಡಿದಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ಹಿಂದೂ ಮತಗಳನ್ನು ಕ್ರೋಡೀಕರಿಸುವ, ಬಾಚುವ ಉದ್ದೇಶ ಇದರ ಹಿಂದಿತ್ತು.  

ಬಿಜೆಪಿಯ ಈ ಉದ್ದೇಶವನ್ನು ಮನಗಂಡ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ರವಿವರ್ಮ ಕುಮಾರ್ ಹಾಗೂ ಗೋಪಾಲ್ ಶಂಕರನಾರಾಯಣನ್ ಮುಸ್ಲಿಮರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದರು. ಅರ್ಜಿ ಆಲಿಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್ ಹಾಗೂ ಬಿ.ವಿ ನಾಗರತ್ನ ಅವರಿದ್ದ ನ್ಯಾಯಪೀಠ, ಬಿಜೆಪಿ ಸರ್ಕಾರದ ಕ್ರಮ ದೋಷಪೂರಿತ, ಪ್ರಮಾದ ಎಂದು ನೇರವಾಗಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಜನ ನ್ಯಾಯವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಈ ಕೇಡಿನ ಕಾಲದಲ್ಲಿ ನ್ಯಾಯಪೀಠದಿಂದ ಬಂದ ಈ ಅಭಿಪ್ರಾಯ, ದೇಶವಿನ್ನೂ ಸಂಪೂರ್ಣವಾಗಿ ಮೂಲಭೂತವಾದಿಗಳ ಕೈವಶವಾಗಿಲ್ಲ, ಸಂವಿಧಾನ ಸತ್ತಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ. ಬಾಯಿಲ್ಲದವರಿಗೆ ಬಲ ತುಂಬುವ, ಬಹುತ್ವವನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದೆ.

ದನ್ನು ಓದಿದ್ದೀರಾ?: 2023ರ ಐಟಿ ನಿಯಮಗಳು- ಅಭಿವ್ಯಕ್ತಿ ಸ್ವಾತಂತ್ರ್ಯ ಹಣಿಯುವ ಮತ್ತೊಂದು ಹುನ್ನಾರ?

ಆ ಮೂಲಕ ಇಬ್ಬರು ನ್ಯಾಯಮೂರ್ತಿಗಳ ಕಾರ್ಯವನ್ನು ಮೆಚ್ಚಿ ಅಭಿನಂದಿಸಬೇಕಾಗಿದೆ. ಕೆ.ಎಂ ಜೋಸೆಫ್, ಪಕ್ಕದ ಕೇರಳದ ಕೊಟ್ಟಾಯಂನವರು. ಬಿ.ವಿ ನಾಗರತ್ನ, ಕರ್ನಾಟಕದ ಪಾಂಡವಪುರದವರು. ಒಬ್ಬರು ಕ್ರಿಶ್ಚಿಯನ್, ಇನ್ನೊಬ್ಬರು ಹಿಂದೂ. ಇಬ್ಬರೂ ದಕ್ಷಿಣ ಭಾರತದವರು. ಇಲ್ಲಿಯ ಧಾರ್ಮಿಕ ಸಾಮರಸ್ಯ, ಜನಜೀವನ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರಿತವರು. ಅಂಬೇಡ್ಕರ್ ಅವರ ಸಂವಿಧಾನ ಸಾರುವ ಸಮಾನತೆಯನ್ನು ಎತ್ತಿ ಹಿಡಿದವರು. ಉನ್ನತ ಸ್ಥಾನದಲ್ಲಿ ಕೂತು, ಆ ಸ್ಥಾನದ ಘನತೆ, ಗೌರವಗಳನ್ನು ಹೆಚ್ಚಿಸಿದವರು.

ಬಿ.ವಿ ನಾಗರತ್ನ ಅವರ ತಂದೆ ಇ.ಎಸ್ ವೆಂಕಟರಾಮಯ್ಯನವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು. ಮಂಡ್ಯ ಜಿಲ್ಲೆಯ ಪಾಂಡವಪುರದ ಎಂಗಲಗುಪ್ಪೆ ಗ್ರಾಮದವರು. ಆರು ತಿಂಗಳ ಕಾಲ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ಹಲವು ಮಹತ್ವದ ತೀರ್ಪುಗಳನ್ನಿತ್ತು ನಾಡಿಗೆ ಕೀರ್ತಿ ತಂದವರು. ಇವರ ಪುತ್ರಿ ಬಿ.ವಿ ನಾಗರತ್ನ, ಅಪ್ಪನ ಆಫೀಸಿನಲ್ಲಿ ವಕೀಲಿಕೆ ಕಲಿತು, 2008ರಿಂದ 2021 ರವರೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. 2021ರಲ್ಲಿ ಭಾರತದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡವರು.

ಅಪ್ಪನ ವಿದ್ವತ್ತು ಮತ್ತು ಈ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡಿರುವ ನಾಗರತ್ನ ಅವರು, 2027ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಹಾಗೆಯೇ ಕರ್ನಾಟಕ ಮೂಲದ, ಅಪ್ಪಟ ಕನ್ನಡಿಗರಾದ ತಂದೆ ಹಾಗೂ ಮಗಳಿಬ್ಬರೂ ಮುಖ್ಯ ನ್ಯಾಯಮೂರ್ತಿಗಳಾದ ಮತ್ತೊಂದು ದಾಖಲೆ ಸೃಷ್ಟಿಯಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ದಿನಗಳಲ್ಲಿ ಹಲವಾರು ಮಹಿಳೆಯರು- ಫಾತಿಮಾ, ಭಾನುಮತಿ, ಇಂದಿರಾ ಬ್ಯಾನರ್ಜಿ, ಸುಜಾತಾ ಮನೋಹರ್ ಅಷ್ಟೇ ಏಕೆ, ನಮ್ಮವರೇ ಆದ ಮಂಜುಳಾ ಚೆಲ್ಲೂರು- ಇವರೆಲ್ಲರಿಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗುವ ಅವಕಾಶವಿತ್ತು, ಆಗಲಿಲ್ಲ. ಆದರೆ ಈಗ, ಕನ್ನಡಿಗರಾದ ನಾಗರತ್ನ ಅವರಿಗೆ ಅವಕಾಶ ಕೂಡಿ ಬಂದಿದೆ. ನಾಗರತ್ನ ಮತ್ತು ಜೋಸೆಫ್‌ರಂತಹವರು ಮುಖ್ಯ ನ್ಯಾಯಮೂರ್ತಿಗಳಾಗಲಿ, ಇಂಥವರ ಪೀಳಿಗೆ ಹೆಚ್ಚಾಗಲಿ, ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ಜನರ ನಂಬಿಕೆ ಇನ್ನಷ್ಟು ಗಟ್ಟಿಗೊಳ್ಳಲಿ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X