ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ ಮಾಡಿಯಾಗಿದೆ. ಈಗ ಎಂಎಸ್‌ಪಿ ಘೋಷಿಸುವಂತಿಲ್ಲ, ಘೋಷಿಸಿದರೆ ಅದಾನಿಗೆ ನಷ್ಟ, ಘೋಷಿಸದಿದ್ದರೆ ರೈತರ ಮತ ಕೈತಪ್ಪುವ ಭೀತಿ. ನಿಜಕ್ಕೂ ಇದು ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯ ಕಾಲ.
ಬೆಂಬಲ ಬೆಲೆ, ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಸರ್ಕಾರ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ ಜಾರಿಗೊಳಿಸಿದೆ. ಅಲ್ಲದೆ, ಪ್ರತಿಭಟನೆಯ ಸಮಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಯಾವುದೇ ಹಾನಿಯಾದಲ್ಲಿ, ಅದರ ನಷ್ಟವನ್ನು ತುಂಬಲು ಪ್ರತಿಭಟನಾಕಾರರ ಆಸ್ತಿ ಜಪ್ತಿ ಮಾಡಲಾಗುವುದು ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹರಿಯಾಣದ ಪೊಲೀಸರು ತಿಳಿಸಿದ್ದಾರೆ.
ಇದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಅಣಕ. ಮೋದಿ ಸರ್ಕಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಂವಿಧಾನದ ಮೌಲ್ಯಗಳ ನಾಶ, ಜನರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ಸ್ವಾತಂತ್ರ್ಯ ಎಲ್ಲವನ್ನೂ ಮೊಟಕುಗೊಳಿಸಲು ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ. 2020-21ರಲ್ಲಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ ಇದೇ ರೈತ ಸಂಘಟನೆಗಳಿಗೆ, ಆಗ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಜಾರಿ ಮತ್ತು ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿತ್ತು. ಆದರೆ, ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ ಮಿಕ್ಕ ಭರವಸೆಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತನ್ನ ಅವಧಿಯ ಕೊನೆಯ ಬಜೆಟ್‌ನಲ್ಲೂ ಪ್ರಸ್ತಾಪ ಮಾಡಿಲ್ಲ.
ಇದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರವರಿ 13ರಿಂದ ದೆಹಲಿ ಚಲೋ ಆರಂಭಿಸಿದೆ. ಹರಿಯಾಣ, ಪಂಜಾಬಿನ ರೈತರು ತಮ್ಮ ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿಗೆ ಹೊರಟಿದ್ದಾರೆ. ಆದರೆ ಪಂಜಾಬ್‌ನಿಂದ ದೆಹಲಿಗೆ ಬರುತ್ತಿದ್ದ ರೈತರನ್ನು ಹರಿಯಾಣದ ಶಂಭು ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದಿದ್ದಾರೆ. ರಸ್ತೆಗೆ ಕಬ್ಬಿಣದ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆದು ವಾಹನಗಳು ಹೋಗದಂತೆ ಮಾಡಿದ್ದಾರೆ. ರೈತರು ಈ ಮೊಳೆಗಳನ್ನು ತೆಗೆಯುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಹರಿಯಾಣ ಪೊಲೀಸರ ಮೂಲಕ ಅಮಾನವೀಯ ಕ್ರಮಕ್ಕೆ ಮುಂದಾಗಿದೆ. ಡ್ರೋಣ್ ಮೂಲಕ ಟಿಯರ್ ಗ್ಯಾಸ್ ಸಿಡಿಸುವುದು, ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ರೈತ ಹೋರಾಟವನ್ನು ಹತ್ತಿಕ್ಕುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.
ಎರಡು ದಿನಗಳ ಹಿಂದೆ ಖನೌರಿ ಗಡಿಯಲ್ಲಿ ಯುವ ರೈತನೊಬ್ಬರು ರಬ್ಬರ್ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಆದರೂ ರೈತರು ಪಟ್ಟು ಸಡಿಲಿಸುತ್ತಿಲ್ಲ. “ನಮ್ಮನ್ನು ದೆಹಲಿಗೆ ಪ್ರವೇಶಿಸಲು ಬಿಡದಿರುವ ರಾಜಕಾರಣಿಗಳನ್ನು ನಮ್ಮ ಹಳ್ಳಿಗಳಿಗೆ ಮತ ಯಾಚನೆಗೆ ಬರದಂತೆ ನಾವೂ ತಡೆಯುತ್ತೇವೆ” ಎಂದು ಸವಾಲು ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನ ನೆನಪಿನಲ್ಲಿ ಇಂದು ದೇಶಾದ್ಯಂತ ಕಪ್ಪು ಶುಕ್ರವಾರ ಆಚರಿಸಲಾಗುತ್ತಿದೆ. ಅಲ್ಲಲ್ಲಿ ರೈತರು ಖಂಡನಾ ಸಭೆ ಮಾಡಿದ್ದಾರೆ.
ಇಷ್ಟೆಲ್ಲ ಎಡವಟ್ಟು, ವಿಶ್ವಾಸದ್ರೋಹ, ಉಡಾಫೆಯ ಪ್ರದರ್ಶನ ಮಾಡಿರುವ ಸರ್ಕಾರ ಈಗ ರೈತರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿದೆ. ಇದಕ್ಕೆ ಕೇಂದ್ರದ ಗೃಹ ಇಲಾಖೆಯ ಕುಮ್ಮಕ್ಕು ಇರುವುದನ್ನು ಅಲ್ಲಗಳೆಯಲಾಗದು. ಒಟ್ಟಿನಲ್ಲಿ ತನ್ನ ಫ್ಯಾಸಿಸ್ಟ್ ಮನೋಭಾವವನ್ನು ಒಂಚೂರೂ ತಿದ್ದಿಕೊಳ್ಳುವ ಪ್ರಯತ್ನವನ್ನು ಒಕ್ಕೂಟ ಸರ್ಕಾರದ ಯಾರೊಬ್ಬರೂ ಮಾಡುತ್ತಿಲ್ಲ.
ಇನ್ನೇನು ಒಂದೆರಡು ವಾರದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಮೋದಿ ಸರ್ಕಾರದ ರೈತರು, ಬಡವರು ಮತ್ತು ಯುವಜನರ ವಿರೋಧಿ ನೀತಿ–ನಡವಳಿಕೆಯ ವಿರುದ್ಧ ಮತದಾರರು ಒಂದು ನಿರ್ಣಾಯಕ ತೀರ್ಮಾನಕ್ಕೆ ಬರಲು ಇದು ಸಕಾಲ. ಕಳೆದ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿದ ನಂತರ ನಡೆದ ಕೊನೆಯ ಸಂಸತ್ ಅಧಿವೇಶನದಲ್ಲಿ ತನ್ನ ಸರ್ಕಾರ ಮೂರನೇ ಅವಧಿಯಲ್ಲಿ ಏನೇನು ಮಾಡಲಿದೆ ಎಂಬ ನೀಲ ನಕ್ಷೆಯ ಬಗ್ಗೆ ಪ್ರಧಾನಿ ಮೋದಿ ಬಹಳ ಆತ್ಮವಿಶ್ವಾಸದಿಂದ ಎದೆ ತಟ್ಟಿ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಬಾರಿ ಬಿಜೆಪಿಗೆ 400 ಸೀಟು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಆದರೆ, ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಶುರುವಾದ ಈ ರೈತರ ಹೋರಾಟ ನಿಜಕ್ಕೂ ಮೋದಿ ಸರ್ಕಾರದ ಬಣ್ಣ ಬಯಲು ಮಾಡುವ ಹೋರಾಟವಾಗಲಿದೆ. ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ ಮಾಡಿಯಾಗಿದೆ. ಈಗ ಎಂಎಸ್‌ಪಿ ಘೋಷಿಸುವಂತಿಲ್ಲ, ಘೋಷಿಸಿದರೆ ಅದಾನಿಗೆ ನಷ್ಟ, ಘೋಷಿಸದಿದ್ದರೆ ರೈತರ ಮತ ಕೈತಪ್ಪುವ ಭೀತಿ. ನಿಜಕ್ಕೂ ಇದು ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯ ಕಾಲ.
ರಾಜಕೀಯ ಏನೇ ಇರಲಿ. ಮೋದಿ ಸರ್ಕಾರ ರೈತರ ಬಗ್ಗೆ ಗಿಲೀಟಿನ ಮಾತುಗಳನ್ನಾಡುತ್ತಾ ಅವರನ್ನು ನಂಬಿಸಿ ಮೋಸ ಮಾಡಿದೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ನಂತರ ಗೊಬ್ಬರ, ಬಿತ್ತನೆ ಬೀಜ, ಕೃಷಿ ಸಲಕರಣೆಗಳ ಬೆಲೆ ದುಪ್ಪಟ್ಟು ಮಾಡಿದೆ. ಕೃಷಿ ಪರಿಕರಗಳ ಮೇಲೂ ಜಿಎಸ್‌ಟಿ ಹೇರಿ ಲಾಭ ಕೈ ಹತ್ತದಂತೆ ಮಾಡಿದೆ. ಯುಪಿಎ ಸರ್ಕಾರ ಇದ್ದಾಗ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ, ಭಾಷಣ ಮಾಡಿ ತಮ್ಮ ಸರ್ಕಾರ ಬಂದರೆ ಬೆಲೆಯೇರಿಕೆ ತಡೆಯುವುದಾಗಿ ಹೇಳಿದ್ದ ಮೋದಿ ಅಧಿಕಾರ ಹಿಡಿದ ನಂತರ ಬೆಲೆ ಏರಿಕೆ ತಡೆಯಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ತನ್ನ ಎರಡನೇ ಅವಧಿಯಲ್ಲಿ ಇಂಧನ, ಅಡುಗೆ ಅನಿಲ, ದಿನಸಿ ಸೇರಿದಂತೆ ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳ ಮಾಡಿಯೂ ತಮ್ಮದು ʼಬಡವರ ಪರ ಸರ್ಕಾರʼ ಎಂದು ಜಾಹೀರಾತು ನೀಡಿ ಬೆನ್ನು ತಟ್ಟಿಕೊಳ್ಳುತ್ತಿದೆ. ಇಂತಹ ಜನವಿರೋಧಿ ಸರ್ಕಾರ ಒಮ್ಮೆ ರೈತರ ಪ್ರತಿಭಟನೆಗೆ ಮಣಿದಿತ್ತು. ಈಗಲೂ ಸರ್ಕಾರ ಬೆದರಿದೆ ಎಂಬುದಕ್ಕೆ ರೈತರ ಮೇಲೆ ಬಲಪ್ರಯೋಗಕ್ಕೆ ಮುಂದಾಗಿರುವುದೇ ಸಾಕ್ಷಿ.
