ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯ. ಇಂತಹ ವಿಚಾರಗಳಲ್ಲಿ ಪದೇಪದೇ ಎನ್‌ಐಎ ದೌಡಾಯಿಸುವುದು, ರಾಷ್ಟ್ರೀಯ ಭದ್ರತೆಯ ಕಾರಣ ಕೊಡುವುದು ಬೇರೆಯ ಅರ್ಥಗಳನ್ನು ಹೊಮ್ಮಿಸುತ್ತವೆ. ರಾಜಕೀಯ ವಾಸನೆ ಬೀರಲು ಆರಂಭವಾಗುತ್ತದೆ.
ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಮತ್ತೆ ರಾಜ್ಯವನ್ನು ಪ್ರವೇಶಿಸಿದೆ. ಹಿಂದೂ ಮುಸ್ಲಿಂ ಆಯಾಮದ ಪ್ರಕರಣಗಳು ಘಟಿಸಿದಾಗ ಮತ್ತು ಹಿಂದೂ ಕೊಲೆಯಾಗಿ, ಮುಸ್ಲಿಮರು ಆರೋಪಿಗಳಾಗಿದ್ದಾಗ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಹಿಂದುತ್ವ ಕಾರ್ಯಕರ್ತ ಮತ್ತು ಬಿಜೆಪಿ ಅಧಿಕಾರಾವಧಿಯಲ್ಲೇ ರೌಡಿ ಶೀಟರ್ ಎಂದು ಗುರುತಿಸಲ್ಪಟ್ಟ ಸುಹಾಸ್ ಶೆಟ್ಟಿಯ ಪ್ರಕರಣವನ್ನು ಇನ್ನು ಮುಂದೆ ಎನ್‌ಐಎ ಕೈಗೆತ್ತಿಕೊಳ್ಳಲಿದೆ. ಕಾನೂನಿನ ಅನ್ವಯ, ರಾಜ್ಯ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಎಲ್ಲ ದಾಖಲೆಗಳನ್ನು ವರ್ಗಾಯಿಸಬೇಕಾಗುತ್ತದೆ.
ಈ ಹಿಂದೆ ಕೊಲೆಯಾದ ಹರ್ಷ, ಪ್ರವೀಣ್ ನೆಟ್ಟಾರು ಪ್ರಕರಣಗಳಲ್ಲೂ ಎನ್‌ಐಎ ತನಿಖೆ ನಡೆಸಿತು. ಆದರೆ ಅಬ್ದುಲ್ ರೆಹ್ಮಾನ್, ಫಾಸಿಲ್, ಮಸೂದ್ ಕೊಲೆಗಳು ಎನ್‌ಐಎ ಕಣ್ಣಿಗೆ ಕಾಣುವುದಿಲ್ಲ ಏಕೆ ಎಂಬುದು ರಾಜಕೀಯ ಪ್ರಶ್ನೆಯಾಗಿ ಉಳಿಯುತ್ತದೆ. ಮುಖ್ಯವಾಗಿ ಎನ್‌ಐಎ ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ಆಗುತ್ತಿರುವ ಹಸ್ತಕ್ಷೇಪವನ್ನೂ ಗಂಭೀರವಾಗಿ ನೋಡಬೇಕಾಗುತ್ತದೆ. ಕಾನೂನು ತಿದ್ದುಪಡಿಗಳಿಗೆ ಆಗ್ರಹಿಸಬೇಕಾಗುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಆರ್‌ಜಿಕರ್ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ
2008ರಲ್ಲಿ ಮುಂಬೈ ಮೇಲಾದ ಭಯೋತ್ಪಾದಕರ ದಾಳಿಯ ಬಳಿಕ ರಾಷ್ಟ್ರೀಯ ಭದ್ರತಾ ವಿಚಾರವು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿತು. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ, ಅಂದಿನ ಯುಪಿಎ ಸರ್ಕಾರದ ವಿರುದ್ಧ ಗದಾಪ್ರಹಾರ ನಡೆಸಿತು. ಅಂದು ಗೃಹಸಚಿವರಾಗಿದ್ದ ಪಿ.ಚಿದಂಬರಂ ಅವರ ಮುಂದಾಳತ್ವದಲ್ಲಿ ‘ಎನ್‌ಐಎ ಕಾಯ್ದೆ- 2008’ ಜಾರಿಗೆ ಬಂದಿತು. ಆದರೆ ರಾಷ್ಟ್ರೀಯ ಭದ್ರತೆ ಎಂಬುದು ರಾಜಕೀಯ ದಾಳವಾಗಿ ಮಾರ್ಪಟ್ಟಿರುವುದು ದುರದೃಷ್ಟವೇ ಸರಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣ ದಮನಕಾರಿ ಅಸ್ತ್ರಗಳನ್ನು ಎನ್‌ಐಎ ಬಳಸುತ್ತಿರುವುದನ್ನು ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಗುರುತಿಸಿದ್ದ ಸುಪ್ರೀಂಕೋರ್ಟ್, ”ಸೈದ್ಧಾಂತಿಕ ಕಾರಣಕ್ಕೆ ಜೈಲಿನಲ್ಲಿ ಇರಿಸಲು ಬರುವುದಿಲ್ಲ” ಎಂದಿತ್ತು. ಜೊತೆಗೆ ಆರೋಪಿ, ಪಿಎಫ್‌ಐ ಕಾರ್ಯಕರ್ತ ಅಬ್ದುಲ್ ಸತಾರ್ ಎಂಬಾತನಿಗೆ ಜಾಮೀನು ನೀಡಿತ್ತು. ಆದರೆ ಇದೇ ನಮ್ಮ ಸರ್ವೋಚ್ಚ ನ್ಯಾಯಾಲಯ ಮತ್ತೊಂದು ಸಂದರ್ಭದಲ್ಲಿ ಎನ್‌ಐಎಗಿರುವ ತನಿಖಾಧಿಕಾರವನ್ನು ಎತ್ತಿಹಿಡಿದದ್ದೂ ಉಂಟು.
ಎನ್‌ಐಎ ಯಾವುದಾದರೂ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದೆ ಎಂದ ತಕ್ಷಣ ಅಲ್ಲಿ ಸೈದ್ಧಾಂತಿಕ ರಾಜಕೀಯ ವಾಸನೆ ಬರುವುದು ದೇಶದ ಹಿತಕ್ಕೆ ಒಳಿತು ಮಾಡುವುದಿಲ್ಲ. ರಾಜ್ಯ ಸರ್ಕಾರಗಳ ಹಸ್ತಕ್ಷೇಪವಿಲ್ಲದೆ ಪ್ರವೇಶಿಸಬಹುದಾದ ಅಧಿಕಾರವನ್ನು ಎನ್‌ಐಎಗೆ ನೀಡಲಾಗಿದೆ. ಸಿಬಿಐ ಯಾವುದಾದರೂ ರಾಜ್ಯದಲ್ಲಿ ಕಾರ್ಯಾಚರಣೆ ಮಾಡಬೇಕಾದರೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕು. ಆರಂಭದಲ್ಲಿ ಮುಕ್ತ ಪ್ರವೇಶವನ್ನು ಕೊಡುತ್ತಿದ್ದ ರಾಜ್ಯಗಳು ಈಗ, ಪ್ರಕರಣಗಳ ಆಧಾರದಲ್ಲಿ ಸಿಬಿಐಗೆ ವರ್ಗಾವಣೆ ಮಾಡುತ್ತವೆ. ಆದರೆ ಎನ್‌ಐಎಗೆ ಅಂತಹ ನಿರ್ಬಂಧಗಳೇ ಇಲ್ಲ.
ದೇಶದ ಭದ್ರತೆಯ ದೃಷ್ಟಿಯನ್ನಿಟ್ಟುಕೊಂಡು, ರಾಜ್ಯ ಸರ್ಕಾರದ ಅನುಮತಿ ಪಡೆಯದೆಯೂ, ಮಾಹಿತಿ ನೀಡದೆಯೂ ರಾಜ್ಯಕ್ಕೆ ಪ್ರವೇಶ ಮಾಡುವ ಅವಕಾಶವನ್ನು ಎನ್‌ಐಎಗೆ ಕಾನೂನು ನೀಡಿದೆ. ಈಗ ಎಲ್ಲದ್ದಕ್ಕೂ ಎನ್‌ಐಎ ಪ್ರವೇಶಿಸಲು ಅವಕಾಶ ಸಿಕ್ಕಿರುವುದೇ ಕಾನೂನಿನಿಂದ.
ಬಿಜೆಪಿ ಅವಧಿಯಲ್ಲಿದ್ದಾಗ ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಮಾಡಲಾಗಿತ್ತು. ಆತ ಅಟ್ರಾಸಿಟಿ ಕೇಸ್ ಎದುರಿಸುತ್ತಿದ್ದ. ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದ. ಫಾಸಿಲ್ ಕೊಲೆಯ ಪ್ರತೀಕಾರವು ಇಲ್ಲಿ ಎದ್ದು ತೋರುತ್ತಿದೆ. ಒಬ್ಬರಿಗೊಬ್ಬರು ಕೊಲೆ ಮಾಡುವ ಮಟ್ಟಕ್ಕೆ ದ್ವೇಷಗಳು ಬೆಳೆಯುತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಖಂಡಿತ ಹಾನಿ. ಅದು ಗಂಭೀರವಾಗಿ ಯೋಚಿಸಬೇಕಾದ ಸಂಗತಿಯೂ ಹೌದು. ಸುಹಾಸ್ ಕೊಲೆಯ ಬಳಿಕ ಅಮಾಯಕ ರೆಹ್ಮಾನ್ ಕೊಲೆಯಾಯಿತು. ಆಮೇಲೆ ಸರ್ಕಾರ ಎಚ್ಚೆತ್ತುಕೊಂಡಿತು. ಪೊಲೀಸರು ಸಕ್ರಿಯವಾದ ಬೆನ್ನಲ್ಲೇ ಎನ್ಐಎ ಪ್ರವೇಶವೂ ಆಗಿದೆ.
ಅಪರಾಧವೊಂದರಲ್ಲಿ ಮುಸ್ಲಿಂ ಆರೋಪಿಯಾಗಿದ್ದರೆ ಅದು ದೇಶದ ವಿರುದ್ಧವೇ ಮಾಡುತ್ತಿರುವ ಸಂಚಿನ ಭಾಗವಾಗಿ ಎನ್‌ಐಎ ನೋಡುತ್ತದೆ. ನಮಗೆ ಭದ್ರತೆಯ ವಿಚಾರದಲ್ಲಿ ಅನುಮಾನವಿದೆ ಎಂದು ಎನ್‌ಐಎ ತನಿಖೆ ಶುರು ಮಾಡುತ್ತದೆ. ”ಇದು ಕೇವಲ ಕೊಲೆಯಲ್ಲ, ಇದರ ಹಿಂದೆ ಅಂತಾರಾಷ್ಟ್ರೀಯ ಮಾಫಿಯಾಗಳಿವೆ, ಸುಪಾರಿ ಕೊಟ್ಟೇ ಕೊಲೆ ಮಾಡಿಸಿವೆ, ಇದರ ಹಿಂದೆ ದೊಡ್ಡ ಸಂಚು ರೂಪಿಸಲಾಗಿದೆ, ಭಾರತದ ವಿರುದ್ಧ ಪಿತೂರಿ ನಡೆಯುತ್ತಿರುವ ಶಂಕೆ ಇದೆ, ಹಣಕಾಸು ವರ್ಗಾವಣೆಯಾಗಿರುವ ಸಾಧ್ಯತೆ ಇದೆ” ಎಂಬ ಅನುಮಾನಗಳ ಆಧಾರದಲ್ಲಿ ಪ್ರವೇಶಿಸಲು ಎನ್‌ಐಎಗೆ ಅವಕಾಶವಿದೆ. ಇದು ಕಾನೂನಿನಲ್ಲೇ ಪ್ರಭುತ್ವ ಪಡೆದುಕೊಂಡಿರುವ ಮಾರ್ಗ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ
ದೇಶದ ಭದ್ರತೆ ವಿಚಾರ ಬಂದಾಗ ಸಾಕ್ಷ್ಯ ಪುರಾವೆಗಳಿಗಿಂತ ಅನುಮಾನವೇ ಮಹತ್ವ ಪಡೆಯುತ್ತದೆ. ಯುಎಪಿಎ ಕಾಯ್ದೆ, ದೇಶದ್ರೋಹ ಕೇಸ್ ದಾಖಲಿಸಿ, ಮಾಡಿದ ತಪ್ಪಿಗಿಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪ್ರಭುತ್ವ ತಮ್ಮ ರಾಜಕೀಯ ಅನುಕೂಲಕರವಾಗಿ ಬಳಸಿಕೊಳ್ಳುವ ಯಾವುದೇ ಕಾಯ್ದೆಗಳನ್ನು ಸಾರ್ವಜನಿಕರು ಗಂಭೀರವಾಗಿ ಚರ್ಚಿಸಬೇಕಾಗಿದೆ. ತನಿಖಾಧಿಕಾರಿಗಳು ಹೇಳಿದ್ದೇ ಅಂತಿಮ ಎನ್ನುವಂತಹ ಅವಕಾಶಗಳನ್ನು ಯುಎಪಿಎ ಥರದ ಕಾಯ್ದೆಗಳಿಗೆ ಕೊಟ್ಟಿರುವುದು ಚರ್ಚೆಯಾಗಬೇಕಿದೆ. ಆವರೆಗೂ ರಾಜಕೀಯವಾದ ವಾದವನ್ನು ಮಾಡುವುದಷ್ಟೇ ನಾಗರಿಕ ಸಮಾಜದ ಮುಂದಿರುವ ಆಯ್ಕೆ.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯ. ಇಂತಹ ವಿಚಾರಗಳಲ್ಲಿ ಪದೇಪದೇ ಎನ್‌ಐಎ ದೌಡಾಯಿಸುವುದು, ರಾಷ್ಟ್ರೀಯ ಭದ್ರತೆಯ ಕಾರಣ ಕೊಡುವುದು ಬೇರೆಯ ಅರ್ಥಗಳನ್ನು ಹೊಮ್ಮಿಸುತ್ತವೆ. ರಾಜಕೀಯ ವಾಸನೆ ಬೀರಲು ಆರಂಭವಾಗುತ್ತದೆ. ಹಿಂದೂ ಕೊಲೆಯಾದರೆ ದೇಶದ್ರೋಹ, ಮುಸ್ಲಿಂ ಕೊಲೆಯಾದರೆ ಒಂದೊಂದು ಅಪರಾಧವಷ್ಟೇ ಎನ್ನುವ ಗ್ರಹಿಕೆಗಳನ್ನು ಬಿತ್ತಲು ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಯತ್ನಿಸುವುದು ಸಮಾಜಕ್ಕೆ ಕೆಟ್ಟ ಸಂದೇಶ ಕೊಟ್ಟಂತೆ ಆಗುತ್ತದೆ.
