ಸಂತಾನೋತ್ಪತ್ತಿ ಕ್ರಿಯೆಯ ಕುರಿತ ನಿತೀಶ್ ಕುಮಾರ್ ಅವರು ನೀಡಿದ ವಿವರಗಳು ಅವೈಜ್ಞಾನಿಕವಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳೆಯನ್ನು ಚಿತ್ರಿಸಿದ ರೀತಿ ಅವಹೇಳನಕರವಾಗಿತ್ತು. ಜನಸಂಖ್ಯಾ ನಿಯಂತ್ರಣದ ಎಲ್ಲ ಹೊರೆಯನ್ನು ಏಕಪಕ್ಷೀಯವಾಗಿ ಮಹಿಳೆಯ ಮೇಲೆ ಹೇರಿದ್ದು ಖಂಡನೀಯ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರ್ವಜನಿಕ ಬದುಕಿನಲ್ಲಿ ಸೌಮ್ಯ, ಸಮತೂಕ ಹಾಗೂ ಸಂವೇದನಾಶೀಲ ವ್ಯಕ್ತಿತ್ವದವರು. ಬಿಜೆಪಿ ಜೊತೆ ಕೂಡಾವಳಿ ಮತ್ತು ಸೋಡ ಚೀಟಿಯ ತಿಪ್ಪರಲಾಗವನ್ನು ಹಲವಾರು ಸಲ ಹೊಡೆದದ್ದು ಅವರ ಬಹುದೊಡ್ಡ ಅಸ್ಥಿರ ನಡೆ.
ಮೊನ್ನೆ ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಅವರ ಬಾಯಿಯಿಂದ ಜಾರಿದ ಮಾತುಗಳು ಅವರ ವ್ಯಕ್ತಿತ್ವ ವರ್ಚಸ್ಸುಗಳಿಗೆ ಕುಂದು ತಂದಿವೆ. ಮಹಿಳೆಯ ಘನತೆ ಗರಿಮೆಗಳ ಮೇಲೆ ಆಕ್ರಮಣ ನಡೆಸಿವೆ. ವಿವಾದದ ಧೂಳೆಬ್ಬಿಸಿವೆ. ಸಕಾರಣವಾಗಿಯೇ ಹೆಣ್ಣುಮಕ್ಕಳ ಕೋಪಕ್ಕೆ ಗುರಿಯಾಗಿವೆ. ತಮ್ಮ ರಾಜಕೀಯ ಎದುರಾಳಿಗಳ ಕೈಗೆ ಹಗ್ಗವನ್ನೂ ಜೊತೆಗೆ ಬಡಿಗೆಯನ್ನು ನೀಡಿವೆ.
ಮಹಿಳೆಯರಿಗೆ ಶಿಕ್ಷಣ ನೀಡುವಿಕೆ ಮತ್ತು ಅವರ ಸಂತಾನೋತ್ಪತ್ತಿ ಸ್ವಾಯತ್ತತೆಯ ನಡುವೆ ಅತ್ಯಂತ ಗುರುತರ ಸಂಬಂಧ ಇದೆಯೆಂದು ಅವರು ಮಂಡಿಸಿದ ವಾದ ಮಹತ್ವದ್ದೇ ಆಗಿತ್ತು. ಜನಸಂಖ್ಯಾ ನಿಯಂತ್ರಣದತ್ತ ಇಡಲಾಗುವ ನಿರ್ಣಾಯಕ ಹೆಜ್ಜೆಯಿದು ಎಂಬ ಸಂದೇಶ ಕೊಡಬಯಸಿದ್ದು ಸ್ಪಷ್ಟವಿತ್ತು. ಜನಸಾಮಾನ್ಯರ ಭಾಷೆಯಲ್ಲೇ ಸಂದೇಶ ನೀಡಿದ್ದಾರೆ ತಪ್ಪೇನಿದೆ ಎಂಬ ವಾದವನ್ನು ಒಪ್ಪಲಾಗದು. ಅವರು ಬಳಸಿದ ಅಭದ್ರ ಭಾಷೆ ಮತ್ತು ಆಂಗಿಕ ಸಂಜ್ಞೆ ಹಾಗೂ ಸಡಿಲ ನಗೆಯಲ್ಲಿ ಈ ಸಂದೇಶ ಕಳೆದು ಹೋಯಿತಷ್ಟೇ ಅಲ್ಲ, ವಿಕೃತರೂಪವನ್ನೂ ಧರಿಸಿತು. ಸಂತಾನೋತ್ಪತ್ತಿ ಕ್ರಿಯೆಯ ಕುರಿತ ಅವರು ನೀಡಿದ ವಿವರಗಳು ಅವೈಜ್ಞಾನಿಕವಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳೆಯನ್ನು ಚಿತ್ರಿಸಿದ ರೀತಿ ಅವಹೇಳನಕರವಾಗಿತ್ತು. ಜನಸಂಖ್ಯಾ ನಿಯಂತ್ರಣದ ಎಲ್ಲ ಹೊರೆಯನ್ನು ಏಕಪಕ್ಷೀಯವಾಗಿ ಮಹಿಳೆಯ ಮೇಲೆ ಹೇರಿದ್ದು ಖಂಡನೀಯ.
ಪುರುಷ ಸಂತಾನಹರಣ ಶಸ್ತ್ರಕ್ರಿಯೆ ಮಹಿಳೆಯದಕ್ಕೆ ಹೋಲಿಸಿದರೆ ಸುಲಭ ಮತ್ತು ಸರಳ ಹಾಗೂ ಹಲವು ಪಟ್ಟು ಕಡಿಮೆ ಅಪಾಯಕಾರಿ. ಆದರೆ ಅಂಕಿ ಅಂಶಗಳನ್ನು ನೋಡಿ. ಈ ಶಸ್ತ್ರಕ್ರಿಯೆಯ ಯಜ್ಞಪಶು ಮಹಿಳೆಯೇ. ಈ ಕ್ರಿಯೆಗೆ ತಳ್ಳುತ್ತಿರುವ ಮಹಿಳೆಯರ ಪ್ರಮಾಣ ಶೇ.98ರಷ್ಟು. ಪುರುಷರ ಪ್ರಮಾಣ ಶೇ.2ರಷ್ಟು ಮಾತ್ರ.
ಒಂಬತ್ತು ತಿಂಗಳು ಹೊತ್ತು ಹೆತ್ತು ಸಲಹಬೇಕಾದ ಸಂತಾನೋತ್ಪಾದನೆಯ ಮೇಲೆ ಆಕೆಯ ನಿಯಂತ್ರಣ ಸೊನ್ನೆ. ಧಾರ್ಮಿಕ ಕಟ್ಟುಪಾಡುಗಳ ಛದ್ಮವೇಷ ಧರಿಸಿದ ಗಂಡಾಳಿಕೆ, ಕೌಟುಂಬಿಕ ಮತ್ತು ಪ್ರಭುತ್ವ ಶಕ್ತಿಗಳು ಹಾಗೂ ಇತ್ತೀಚಿನ ದಶಕಗಳಲ್ಲಿ ತಲೆಯೆತ್ತಿರುವ ಬಹುರಾಷ್ಟ್ರೀಯ ಔಷಧ ಕಂಪನಿಗಳ ಲಾಭಬಡುಕತನಗಳ ನಿಯಂತ್ರಣವೇ ಅಂತಿಮ.
ಆಕೆಯ ಒಡಲು ಮಡಿಲುಗಳನ್ನು ಇಷ್ಟಾನಿಷ್ಟಗಳನ್ನು ಆಳುತ್ತ ಬಂದಿರುವುದು ಆತ ರೂಪಿಸಿದ ನೀತಿ ಅನೀತಿಗಳ ಕಟ್ಟಳೆಗಳು ಕಟ್ಟುಪಾಡುಗಳೇ. ಧಿಕ್ಕರಿಸಿ ನಿಂತು ಗೆರೆ ದಾಟಿದವಳಿಗೆ ಆತ ನೀಡುವ ಪಟ್ಟ ನಡತೆ ಕೆಟ್ಟವಳು. ಸಾಂಸ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ವ್ಯಕ್ತಿಗತದ ಹಲವು ನೆಲೆಗಳಲ್ಲಿ ಮಿಸುಕದಂತೆ ಆಕೆಯ ಸುತ್ತ ಹೆಣೆದ ಬಿಗಿಬಲೆಗೆ ಲೋಹದ ಶಕ್ತಿ.
ಆಕೆಯ ಒಡಲೆಂದರೆ ಮೆಚ್ಚಿಕೆ, ಬಯಕೆ, ಹೇವರಿಕೆ, ಹೆದರಿಕೆ, ಲಾಲಸೆ, ನೀತಿಬೋಧನೆ, ರಾಜಕಾರಣ, ಧಾರ್ಮಿಕ ಉಪದೇಶಗಳ, ಪೌರಾಣಿಕ ಪುಣ್ಯ ಪಾಪಗಳ ನಿಗೂಢ ನಿವೇಶನ.
ಮಹಿಳೆಯ ಸಬಲೀಕರಣ ನ್ಯಾಯಯುತ ನಡೆ ಮತ್ತು ಉತ್ತಮ ರಾಜಕಾರಣವೂ ಹೌದು ಎಂದು ನಂಬುತ್ತ ಬಂದಿರುವ ವಿರಳ ರಾಜಕಾರಣಿ ನಿತೀಶ್. ಮದ್ಯಪಾನ ನಿಷೇಧವನ್ನು ಜಾರಿಗೆ ತಂದು ಮಹಿಳೆಯರ ವಿಶ್ವಾಸಕ್ಕೆ ಪಾತ್ರರಾದವರು. ಹದಿನೇಳು ವರ್ಷಗಳ ಹಿಂದೆಯೇ ಶಾಲಾಬಾಲಿಕೆಯರಿಗೆ ಬೈಸಿಕಲ್ ವಿತರಿಸಿ ಅವರ ಓದುಬರೆಹಕ್ಕೆ ಅನುವಾಗಿ ನಿಂತವರು. ಬಿಹಾರದಲ್ಲಿ ಶಿಕ್ಷಣ ಮತ್ತು ಸರ್ಕಾರಿ ನೌಕರಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಅವಕಾಶಗಳನ್ನು, ಸ್ವಸಹಾಯ ಗುಂಪುಗಳನ್ನು ರೂಪಿಸಿ ಪುರುಷ–ಮಹಿಳೆಯರ ಭಾಗೀದಾರಿಯ ಅನುಪಾತವನ್ನು ಮಹಿಳೆಯಪರ ಹೆಚ್ಚಿಸಿದ ಕ್ರಮಗಳ ಶ್ರೇಯಸ್ಸು ಅವರದು. ಅಷ್ಟು ಮಾತ್ರಕ್ಕೆ ಅವರು ಬಳಸಿದ ಅಸಭ್ಯ, ಅಭದ್ರ, ಅವೈಜ್ಞಾನಿಕ ಹಾಗೂ ಗಂಡಾಳಿಕೆಯ ಭಾಷೆಗೆ ಯಾವುದೇ ರಿಯಾಯಿತಿ ವಿನಾಯಿತಿ ನೀಡುವುದು ಸಾಧ್ಯವಿಲ್ಲ.
ನಿತೀಶ್‌ಗೆ ತಮ್ಮ ತಪ್ಪಿನ ಅರಿವಾಗಿದೆ. ಬೇಷರತ್ ಕ್ಷಮೆ ಯಾಚಿಸಿದ್ದಾರೆ. ತಮ್ಮ ಮಾತುಗಳನ್ನು ವಾಪಸು ಪಡೆದಿದ್ದಾರೆ. ತಮ್ಮನ್ನು ತಾವೇ ನಿಂದಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿ ತಮ್ಮನ್ನು ನಿಂದಿಸುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಳಸಿದ ಅಭದ್ರ ಭಾಷೆ ನಾಚಿಕೆಗೇಡಿನದು ಎಂದಿದ್ದಾರೆ. ಈ ಕ್ಷಮೆ ಯಾಚನೆ ಸ್ವಾಗತಾರ್ಹ.
ಮನುಸ್ಮೃತಿ ಎತ್ತಿ ಹಿಡಿದು ಸಾರಿರುವ ಗಂಡಾಳಿಕೆ ಮತ್ತು ಸ್ತ್ರೀದ್ವೇಷಗಳು ಈ ದೇಶದ ಗಂಡಸಿನ ರಕ್ತದಲ್ಲಿ ಬೆರೆತು ಹೋಗಿವೆ. ಈ ಅವಗುಣಗಳನ್ನು ವಿರೋಧಿಸಿ ಸಮಾನತೆಯನ್ನು ಪ್ರತಿಪಾದಿಸುವ ಗಂಡಸು ಕೂಡ ತನ್ನ ಅರಿವಿಗೆ ಬಾರದೆ ಇವೇ ಅನೀತಿಗಳಿಗೆ ಬಲಿಯಾಗುವುದು ಉಂಟು. ಹೀಗಾಗಿ ಪುರುಷರು ಅನುದಿನವೂ ಪ್ರಜ್ಞಾಪೂರ್ವಕವಾಗಿ ತಮ್ಮೊಂದಿಗೆ ತಾವೇ ಸೆಣೆಸಬೇಕಾದ ಯುದ್ಧವಿದು.
ರೇಣುಕಾ ಚೌಧರಿ ಅವರನ್ನು ಶೂರ್ಪನಖಿ ಎಂದೂ, ಶಶಿ ತರೂರ್ ಅವರ ದಿವಂಗತ ಪತ್ನಿಯನ್ನು 50 ಕೋಟಿ ರುಪಾಯಿಯ ಗರ್ಲ್ ಫ್ರೆಂಡ್ ಎಂದು, ಸೋನಿಯಾಗಾಂಧಿ ಅವರನ್ನು ಕಾಂಗ್ರೆಸ್ ಕೀ ವಿಧವಾ ಎಂದು ಬಹಿರಂಗ ಭಾಷಣಗಳಲ್ಲಿ ಜರೆದವರಿದ್ದಾರೆ. ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕುರಿತು ತಿಂಗಳುಗಟ್ಟಲೆ ಬಾಯಿ ಹೊಲಿದುಕೊಂಡವರಿವರು. ಉನ್ನಾಂವ್, ಹಾಥ್ರಸ್, ಕಠುವಾ ಮುಂತಾದ ಹೀನಾತಿಹೀನ ಅತ್ಯಾಚಾರಗಳಲ್ಲಿ ತಮ್ಮ ಪಕ್ಷಕ್ಕೆ ಸೇರಿದವರ ರಕ್ಷಣೆಗೆ ನಿಂತವರು ಇವರೇ. ಗುಜರಾತಿನ ಬಿಲ್ಕಿಸ್ ಬಾನೊ ಮತ್ತು ಆಕೆಯ ಸಮೀಪದ ಹೆಣ್ಣುಬಂಧುಗಳ ಒಡಲನ್ನು ಬಗೆದು ವಿಕೃತ ಮೆರೆದವರಿಗೆ ಸನ್ನಡತೆಯ ಆಧಾರದ ಮೇಲೆ ಶಿಕ್ಷೆಯನ್ನು ತಗ್ಗಿಸಿ ಜೈಲಿನಿಂದ ಬಿಡುಗಡೆ ಮಾಡಿದ ಮಹನೀಯರು. ನಿತೀಶ್ ವಿವಾದದಲ್ಲಿ ಬಾಯಿ ತೆರೆಯುವ ನೈತಿಕ ಅಧಿಕಾರ ಇವರಿಗಿಲ್ಲ. ಇವರ ಪಾಪಕೃತ್ಯಗಳು ನಿತೀಶ್ ಅಕೃತ್ಯಕ್ಕೆ ಸಮರ್ಥನೆಯೂ ಅಲ್ಲ. ಒಂದು ತಪ್ಪನ್ನು ಗುರಾಣಿಯಂತೆ ಅಡ್ಡ ಹಿಡಿದು ಮತ್ತೊಂದು ತಪ್ಪನ್ನು ಸಮರ್ಥಿಸುವುದು ಸೂಕ್ತವಲ್ಲ.
ಆದರೆ ಈ ಮಾತುಗಳಿಗಾಗಿ ಅವರನ್ನು ‘ಸಾರ್ವಜನಿಕವಾಗಿ ನೇಣಿಗೇರಿಸಲು’ ಹೊರಟಿರುವ ರಾಜಕೀಯ ಎದುರಾಳಿಗಳು ಪಾಖಂಡಿಗಳು. ತಮ್ಮ ವಿರುದ್ಧ ಹೋರಾಡುವ ಜನತಾಂತ್ರಿಕ ಶಕ್ತಿಗಳನ್ನು ಯಾವುದಾದರೂ ಕಾರಣದಿಂದ ನೆಲಕ್ಕೆ ಕೆಡವುವುದು ಇವರ ಕಾರಸ್ಥಾನ. ಈ ಪಾಖಂಡದ ಜಾಲಕ್ಕೆ ಜಾರದಂತೆ ಎಚ್ಚರ ವಹಿಸುವುದೂ ಬಹುಮುಖ್ಯ.