ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!

Date:

Advertisements

ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ. ಕಾಶ್ಮೀರ ಕಣಿವೆಯ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಹಳೆಯ ಚಾಳಿಯನ್ನು ನಿಲ್ಲಿಸಬೇಕು. ಆದರೆ ಮತ್ತಷ್ಟು ಹಠದಿಂದ, ಹೆಚ್ಚಿನ ದುಷ್ಟತನದಿಂದ ಭಯೋತ್ಪಾದಕರನ್ನು ಕಣಿವೆಗೆ ನುಗ್ಗಿಸುತ್ತಿದೆ. ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದೆ. ಪಾಕಿಸ್ತಾನದ ಹಿತವನ್ನು ಬಲಿಕೊಡುತ್ತಿದೆ.

ಪಹಲ್ಗಾಮ್‌ನಲ್ಲಿ ಧರ್ಮ ಯಾವುದೆಂದು ವಿಚಾರಿಸಿ ಪುರುಷ ಪ್ರವಾಸಿಗಳನ್ನೇ ಆರಿಸಿ ಅವರ ಪತ್ನಿ-ಮಕ್ಕಳ ಮುಂದೆಯೇ ತಲೆಗೆ ಗುಂಡಿಟ್ಟು 25 ಮಂದಿಯನ್ನು ಬರ್ಬರವಾಗಿ ಕೊಂದಿದ್ದರು ಭಯೋತ್ಪಾದಕರು. ಏಪ್ರಿಲ್ 22ರ ಈ ಕ್ರೌರ್ಯ-ದುರಂತ ದೇಶಾದ್ಯಂತ ಶೋಕ-ಆಕ್ರೋಶವನ್ನು ಹುಟ್ಟಿ ಹಾಕಿತ್ತು. ಗಡಿಯಾಚೆಯಿಂದ ಈ ಭಯೋತ್ಪಾದನೆಯನ್ನು ಸಾಕಿ ಸಲಹಿ ಭಾರತದ ವಿರುದ್ಧ ಹೂಡುತ್ತಿರುವ ಶಕ್ತಿ ಪಾಕಿಸ್ತಾನವೇ ಆಗಿದೆ. ಈ ಮಾತಿಗೆ ಉದಾಹರಣೆಗಳು ಹೇರಳ ಸಂಖ್ಯೆಯಲ್ಲಿವೆ.

ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಿ ನಿರ್ದೇಶಿಸಲಾಗುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಒಂಬತ್ತು ‘ಭಯೋತ್ಪಾದನಾ ಮೂಲಸೌಲಭ್ಯಗಳ‘ ಮಂಗಳವಾರ ರಾತ್ರಿಯ ನಂತರ ಬುಧವಾರದ ಬೆಳಗಿನ ಜಾವದಲ್ಲಿ ಧ್ವಂಸಗೊಳಿಸಿರುವುದಾಗಿ ಭಾರತ ಹೇಳಿದೆ. ಪ್ರತಿಪಕ್ಷಗಳ ಎಲ್ಲ ನಾಯಕರೂ ದೇಶದ ಸೇನೆಯ ಈ ಕಾರ್ಯಾಚರಣೆಗೆ ಒಕ್ಕೊರಲಿನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕರನ್ನು ಹಿಡಿದು ಶಿಕ್ಷಿಸಬೇಕೆಂಬ ಕೂಗು ದೇಶಾದ್ಯಂತ ಕೇಳಿ ಬಂದಿತ್ತು.

Advertisements

ಏಪ್ರಿಲ್ 22ರ ಹತ್ಯಾಕಾಂಡದ ಭಯೋತ್ಪಾದಕರು ಭಾರತದ ಈ ದಾಳಿಯಲ್ಲಿ ಹತರಾಗಿದ್ದಾರೆಂಬ ವಿವರಗಳು ತಿಳಿದು ಬಂದಿಲ್ಲ. ಆದರೆ ಪಾಕಿಸ್ತಾನದ ಒಂಬತ್ತು ಭಯೋತ್ಪಾದನೆ ನೆಲೆಗಳ ಮೇಲೆ ಸೇನೆ ದಾಳಿ ನಡೆಸಿ ಅವುಗಳನ್ನು ಧ್ವಂಸ ಮಾಡಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಸೇನಾಧಿಕಾರಿಗಳಾದ ಸೋಫಿಯಾ ಖುರೇಶಿ ಹಾಗೂ ವ್ಯೋಮಿಕಾ ಸಿಂಗ್ ಅವರು ಈ ಕಾರ್ಯಾಚರಣೆಯ ವಿವರಗಳನ್ನು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

ಇಸ್ಲಾಮ್ ಧರ್ಮಕ್ಕೆ ಸೇರಿದ ಸೇನಾಧಿಕಾರಿಯನ್ನೂ ಈ ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತುತಪಡಿಸಿರುವುದು ದೇಶದ ಸೇನೆಯ ಧರ್ಮನಿರಪೇಕ್ಷತೆಗೆ ಸಾಕ್ಷಿಯಾಗಿದೆ. ಈ ಮೂವರೂ ಅಧಿಕಾರಿಗಳು ಯಾವುದೇ ನಾಟಕೀಯತೆ ಇಲ್ಲದೆ ಶಾಂತವಾಗಿ ನಿರುದ್ವಿಗ್ನ, ನಿರ್ಭಾವುಕತೆ ಮತ್ತು ಸಂಯಮದಿಂದ ವಿವರಗಳನ್ನು ನೀಡಿದ್ದು ಪ್ರಶಂಸನೀಯ.

ಈ ಕಾರ್ಯಾಚರಣೆ ಭಯೋತ್ಪಾದಕರ ನೆಲೆಗಳಿಗೆ ಸೀಮಿತ. ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಕಾರ್ಯಾಚರಣೆ ನಡೆದಿಲ್ಲ ಎಂಬ ಅಂಶವನ್ನು ಈ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಆದರೆ ಪಾಕಿಸ್ತಾನವನ್ನು ನುಗ್ಗಿ ಹೊಡೆಯಲಾಗಿದೆ ಎಂದು ಗೋದಿ ಮೀಡಿಯಾ ಅಬ್ಬರಿಸಿದೆ.

ಕಳೆದ ವರ್ಷ 2.25 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗೆ ಧಕ್ಕೆ ಉಂಟು ಮಾಡಿ, ಕಾಶ್ಮೀರವನ್ನು ಭಾರತದ ಉಳಿದ ಭಾಗದಿಂದ ಬೇರೆಯಾಗಿಸಿ, ಭಯೋತ್ಪಾದಕರ ಪಾಲಿನ ಫಲವತ್ತು ನೆಲವನ್ನಾಗಿಸುವುದು ಏಪ್ರಿಲ್ 22ರ ದಾಳಿಯ ಮೂಲ ಉದ್ದೇಶ ಆಗಿತ್ತು. ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳಲ್ಲಿ ಕೋಮುವಾದಿ ಗಲಭೆಗಳನ್ನು ಬಡಿದೆಬ್ಬಿಸುವ ಉದ್ದೇಶ ಈ ದಾಳಿಗಿತ್ತು ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಗೋದಿ ಮೀಡಿಯಾ ಮತ್ತು ಟ್ರೋಲ್ ಸೇನೆ ಮುಸ್ಲಿಮರ ವಿರುದ್ಧ ಸಾರಿರುವ ಪ್ರಚಾರ ಸಮರದ ಸುಳ್ಳಿನ ಪರದೆಯನ್ನು ಹರಿದು ಹಾಕಿದೆ ಆಲ್ಟ್ ನ್ಯೂಸ್ ನ ಕೆಲಸ ಪ್ರಶಂಸನೀಯ.

ಪಾಕಿಸ್ತಾನಿ ಸೇನೆ ಮತ್ತು ಆ ದೇಶದ ಐ.ಎಸ್.ಐ. ಎಂಬ ಬೇಹುಗಾರಿಕೆ ಸಂಸ್ಥೆ ಕಾಶ್ಮೀರವನ್ನು ಮರಳಿ ಪಡೆಯುವ ಪ್ರಯತ್ನವನ್ನು ಕೈ ಬಿಟ್ಟಿಲ್ಲ. ಧರ್ಮಾಂಧರ ರಕ್ತ ಬೀಜಾಸುರ ಪಡೆಯನ್ನು ತಯಾರು ಮಾಡಿ ಭಾರತದ ಮೈ ಮೇಲೆ ಸಾವಿರ ಗಾಯಗಳನ್ನು ಮಾಡಿ ಸತತ ರಕ್ತ ಸ್ರವಿಸುವ ಉದ್ದೇಶ ಈ ಸಂಘಟನೆಗಳದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಸೃಷ್ಟಿಸುವ ದೊಡ್ಡ ಪ್ರಯತ್ನದ ನೆಲೆ-ಸೆಲೆ ಪಾಕಿಸ್ತಾನವೇ.

ಪಾಕ್ ಪ್ರಧಾನಿಗಳು ಏನನ್ನಾದರೂ ಹೇಳಲಿ, ನಡೆಯುವುದು ತನ್ನ ಮಾತೇ ಎಂಬ ಸಂದೇಶವನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ತಾವು ಸಾಕಿಕೊಂಡಿರುವ ಧರ್ಮಾಂಧ ಭಯೋತ್ಪಾದಕರ ಮೂಲಕ ಭಾರತಕ್ಕೆ ಹಲವು ಬಾರಿ ಸಾರಿ ಹೇಳಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಹಠಾತ್ತನೆ ಬಡಿದೆಬ್ಬಿಸಿದ ಕಾರ್ಗಿಲ್ ಯುದ್ಧ ಮತ್ತು ಸಂಸದ್ ಭವನದ ಮೇಲೆ ನಡೆದ ದಾಳಿ ಹಾಗೂ ಯುಪಿಎ ಅವಧಿಯಲ್ಲಿ ಮುಂಬಯಿ ಮೇಲೆ ಜಿಹಾದಿ ಭಯೋತ್ಪಾದಕರ ಲಗ್ಗೆಯ ಪ್ರಕರಣಗಳು ಈ ಮಾತಿಗೆ ಉದಾಹರಣೆಗಳು. ಈ ಎಲ್ಲ ಪ್ರಕರಣಗಳ ಸೂತ್ರಧಾರ ಪಾಕಿಸ್ತಾನದ ಸೇನೆಯೇ ವಿನಾ ಅಲ್ಲಿನ ಚುನಾಯಿತ ಸರ್ಕಾರಗಳು ಅಲ್ಲ.

ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತದ ಸೇನೆಯು ಪಾಕಿಸ್ತಾನದ ಬಾಲಾಕೋಟ್ ಗೆ ನುಗ್ಗಿ ನಡೆಸಿದ ವಾಯುದಾಳಿಗೆ ಅಂತಾರಾಷ್ಟ್ರೀಯ ಸಮರ್ಥನೆ ದೊರೆತಿತ್ತು. ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಹಕ್ಕನ್ನು ಅಮೆರಿಕೆ ಕೂಡ ಬೆಂಬಲಿಸಿತ್ತು. ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನೂ ಪಾಕಿಸ್ತಾನ ಬಿಡುಗಡೆ ಮಾಡಬೇಕಾಗಿ ಬಂದಿತ್ತು.

ನೆರೆ ಹೊರೆಯನ್ನು ಆಯ್ದುಕೊಳ್ಳುವುದು ಅಸಾಧ್ಯ ಎಂಬ ಮಾತೊಂದಿದೆ. ಹಿಂಸೆ, ರಕ್ತಪಾತ, ಭಯೋತ್ಪಾದನೆಗಳಲ್ಲೇ ಬದುಕಿರುವ ನಮ್ಮ ನೆರೆಯ ದೇಶ ಪಾಕಿಸ್ತಾನ ಸುಖ ಸಮೖದ್ಧಿ ಶಾಂತಿಯಿಂದ ಬದುಕಿದಷ್ಟೂ ಭಾರತಕ್ಕೆ ನೆಮ್ಮದಿ. ಇಲ್ಲವಾದರೆ ಅಲ್ಲಿನ ಉತ್ಪಾತಗಳು ಇಲ್ಲಿ ಕಂಪನ ಹುಟ್ಟಿಸುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಲ್ಲಾಹು, ಆಮಿ೯ ಹಾಗೂ ಅಮೆರಿಕಾ ಆಳಿಕೊಂಡು ಬಂದಿರುವ ಪಾಕಿಸ್ತಾನ ನಿರಂತರ ರಾಜಕೀಯ ಅಸ್ಥಿರತೆಗೆ ಸದಾ ಜೋಲಿ ಹೊಡೆದ ದೇಶ. ಕಳೆದ ಆರೂವರೆ ದಶಕಗಳ ತನ್ನ ಇತಿಹಾಸದಲ್ಲಿ ಈ ದೇಶದ ಜನತಂತ್ರ ಎಂಬ ಸಸಿ ಗಿಡವಾಗಿ ಮರವಾಗಿ ಹೂವು ಕಾಯಿ ಕಟ್ಟಿ ಹಣ್ಣು ಮಾಗಲೇ ಇಲ್ಲ.

ಪಾಕಿಸ್ತಾನವನ್ನು ಮೂರು ಅಂಶಗಳು ಆಳುತ್ತವೆಂಬ ಪ್ರತೀತಿ ಇದೆ. ಒಂದನೆಯದು ಅಲ್ಲಿನ ಸೇನೆ ಮತ್ತು ಅದರ ವಶದಲ್ಲಿರುವ ಐಎಸ್ಐ, ಎರಡನೆಯದು ಸೇನೆ ಮತ್ತು ಐಎಸ್ಐ ವಶದಲ್ಲಿನ ಜಿಹಾದಿಗಳು, ಮೂರನೆಯದಾಗಿ ಅಮೆರಿಕ. ಪಾಕಿಸ್ತಾನದ ರಾಜಕೀಯ ಅಧಿಕಾರ ಯಾರ ಕೈಯಲ್ಲಿರಬೇಕು ಎಂಬುದನ್ನು ಅಲ್ಲಿನ ಸೇನೆಯೇ ತೀರ್ಮಾನಿಸುತ್ತದೆ. ಭದ್ರತೆ ಮತ್ತು ವಿದೇಶಾಂಗ ನೀತಿ ಎರಡರ  ಮೇಲೂ ಪಾಕಿಸ್ತಾನಿ ಸೇನೆಯದು ಉಡದ ಹಿಡಿತ. ಧಾರ್ಮಿಕ ಕಟ್ಟರ್ ವಾದಿಗಳ ಜಿಹಾದಿ ಸಂಘಟನೆಗಳು ಮತ್ತು ಸರ್ವಶಕ್ತ ಪಾಕಿಸ್ತಾನಿ ಸೇನೆ ಹಾಗೂ ಅಮೆರಿಕೆಯ ಪರೋಕ್ಷ ನಿಯಂತ್ರಣಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ‘ಜನರು ಆರಿಸಿದ’ ಸರ್ಕಾರಗಳು ನಿಜವಾಗಿಯೂ ಅಸಹಾಯಕ ಎಂಬ ಮಾತು ಮತ್ತೊಮ್ಮೆ ರುಜುವಾತಾಗಿದೆ. ಪಾಕಿಸ್ತಾನದಲ್ಲಿ ಯಾರ ಗದ್ದುಗೆ ಮುಕುಟಗಳು ಹಾರಿದರೇನಂತೆ. ಅಲ್ಲಿನ ಸರ್ವಶಕ್ತ ಸೇನೆಯ ಗದ್ದುಗೆ ಮುಕುಟಗಳು ಸದಾ ಕಾಯಂ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಹೆಚ್ಚೂ ಕಡಿಮೆ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಸೇನೆಯೇ ಆಳಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದಿಂದ ಜನರಿಂದ ಆಯ್ಕೆಯಾದ ಮತ್ತೊಂದು ಸರ್ಕಾರಕ್ಕೆ ಅಧಿಕಾರದ ಶಾಂತಿಯುತ ಹಸ್ತಾಂತರ ನಡೆದಿರುವುದು ಎರಡೇ ಬಾರಿ.

ಏಪ್ರಿಲ್ 22ರ ಕ್ರೂರ ಹತ್ಯೆಗಳನ್ನು ಬಳಸಿಕೊಂಡು ಕಾಶ್ಮೀರಿಗಳು ಮತ್ತು ದೇಶದ ಇತರೆ ಭಾಗಗಳ ಮುಸಲ್ಮಾನರನ್ನು  ದ್ವೇಷಿಸುವ ಹಿಂಸಿಸುವ ಕಿರುಕುಳ ನೀಡುವ ಅಸಂಖ್ಯಾತ ಪ್ರಕರಣಗಳು ದಿನನಿತ್ಯ ಜರುಗತೊಡಗಿವೆ. ಅವರನ್ನು ‘ಅನ್ಯ’ ರನ್ನಾಗಿ, ಎರಡನೆಯ-ಮೂರನೆಯ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗುತ್ತಿದೆ. ಸಮಾಜವೂ ಈ ಬೆಳವಣಿಗೆಯನ್ನು ಮಾಮೂಲು ಎಂದು ಬಗೆಯುತೊಡಗಿದೆ. ಈ ‘ಮಾಮೂಲೀಕರಣ’ ಅತ್ಯಂತ ಅಪಾಯದ ಮತ್ತು ಕಳವಳದ ಸಂಗತಿ.

ಪಾಕಿಸ್ತಾನಿ ಜನಸಾಮಾನ್ಯರಿಗೆ ಭಾರತದೊಡನೆ ಗೆಳೆತನದ ಸಂಬಂಧ ಬೇಕು. ಉಭಯ ದೇಶಗಳ ರಾಜಕಾರಣಿಗಳು ಕೂಡ ಶಾಂತಿಯನ್ನು ಬಯಸುತ್ತಾರೆ. ಸೇನೆ ಮತ್ತು ಜಿಹಾದಿ ಭಯೋತ್ಪಾದಕರಂತಹ ಆಂತರಿಕ ಶಕ್ತಿಗಳು ಮತ್ತು ಅಮೆರಿಕೆ, ಸೌದಿ ಅರೇಬಿಯ ಹಾಗೂ ಚೀನಾ ದೇಶದಂತಹ ಬಾಹ್ಯ ಶಕ್ತಿಗಳಿಂದ ಪಾಕಿಸ್ತಾನದ ಆಡಳಿತವನ್ನು ಪಾರು ಮಾಡಿ ಆ ದೇಶವನ್ನು ಸಹಜ ಸಾಮಾನ್ಯ ಸ್ಥಿತಿಗೆ ತರುವುದು ಭಾರತದ ಗುರಿ ಎಂದು ವಾಜಪೇಯಿ ನಂಬಿದ್ದರು. ಮನಮೋಹನ ಸಿಂಗ್ ಅವರ ಸರ್ಕಾರಗಳ ನೀತಿಯೂ ಇದೇ ಆಗಿತ್ತು.

ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ. ಕಾಶ್ಮೀರ ಕಣಿವೆಯ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಹಳೆಯ ಚಾಳಿಯನ್ನು ನಿಲ್ಲಿಸಬೇಕು. ಆದರೆ ಮತ್ತಷ್ಟು ಹಠದಿಂದ, ಹೆಚ್ಚಿನ ದುಷ್ಟತನದಿಂದ ಭಯೋತ್ಪಾದಕರನ್ನು ಕಣಿವೆಗೆ ನುಗ್ಗಿಸುತ್ತಿದೆ. ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದೆ. ಪಾಕಿಸ್ತಾನದ ಹಿತವನ್ನು ಬಲಿಕೊಡುತ್ತಿದೆ.

ಭಾರತದ ಈ ಕ್ರಮ ಪಾಕಿಸ್ತಾನಿ ನೆಲೆಯ ಭಯೋತ್ಪಾದಕ ಕೃತ್ಯಗಳಿಗೆ ಪ್ರತಿಕ್ರಮವೇ ವಿನಾ ತಾನಾಗಿ ಮೇಲೆ ಬಿದ್ದು ನಡೆಸಿದ ದಾಳಿಯಲ್ಲ. ಹೀಗಾಗಿ ಪಾಕಿಸ್ತಾನ ಇನ್ನಷ್ಟು ಚೇಷ್ಟೆಯ ದುಸ್ಸಾಹಸ ಮಾಡುವುದು ತನಗೇ ಒಳಿತಲ್ಲ. ದಾಳಿ ಪ್ರತಿದಾಳಿಗಳ ಈ ಸರಣಿ ಇಲ್ಲಿಗೆ ಕೊನೆಗೊಳ್ಳುವುದೇ ಸರಿ. ಯುದ್ಧವೆಂಬುದು ವ್ಯರ್ಥದ ಕಸರತ್ತು. ಈ ನಿರರ್ಥಕ ಬಡಿದಾಟದಲ್ಲಿ ಸೋತು ಸೊರಗುವವರು ದೇಶಗಳ ಜನಸಾಮಾನ್ಯರೇ ಎಂಬುದನ್ನು ಮರೆಯುವಂತಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X