ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು ತಾವು ಮಾಂಸಾಹಾರಿಗಳಲ್ಲದ ಕಾರಣಕ್ಕೆ ವಿರೋಧಿಸುತ್ತಿದ್ದಾರೆಯೇ? ಇಲ್ಲ. ಶಾಲೆಯ ಪಕ್ಕದಲ್ಲಿ ದೇವಸ್ಥಾನವಿದೆ, ಮೈಲಿಗೆ ಆಗುತ್ತದೆ ಎಂಬ ಮೌಢ್ಯದಿಂದ ವಿರೋಧಿಸುತ್ತಿದ್ದಾರೆ. ಶಾಲೆಯ ಬಳಿ ದೇವಸ್ಥಾನ ಇದೆ ಎಂಬ ಕಾರಣಕ್ಕೆ ಆ ಮಕ್ಕಳು ತಮಗೆ ಕೊರತೆ ಇರುವ ಪೌಷ್ಟಿಕ ಆಹಾರದಿಂದ ವಂಚಿತರಾಗಬೇಕೇ?
ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತವಾಗಿದೆ. ಬೇಯಿಸಿದ ಮೊಟ್ಟೆ ವಿತರಣೆ ವಿರೋಧಿಸಿ ಸುಮಾರು 84 ವಿದ್ಯಾರ್ಥಿಗಳನ್ನು ಪೋಷಕರು ಆ ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. “ದೇವಸ್ಥಾನದ ಬಳಿ ಮೊಟ್ಟೆ ಬೇಯಿಸುವುದು ಧಾರ್ಮಿಕ ನಂಬಿಕೆಗಳಿಗೆ ವಿರುದ್ಧ” ಎಂಬುದು ಅವರ ವಾದ. ಶಾಲೆ ಬಳಿ ವೀರಭದ್ರಸ್ವಾಮಿ ದೇಗುಲ ಇರುವ ಕಾರಣ ಮೊಟ್ಟೆ ಬೇಯಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. “ಮೊಟ್ಟೆ ಬೇಯಿಸುವುದು ಧಾರ್ಮಿಕ ಸಂಪ್ರದಾಯಕ್ಕೆ ವಿರುದ್ಧ ನಮ್ಮ ವಿರೋಧದ ಮಧ್ಯೆಯೂ ನೀವು ಮೊಟ್ಟೆ ನೀಡಿದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ” ಎಂದು ಪೋಷಕರು ಜುಲೈನಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಯಮದಂತೆ ಶಾಲೆಗೆ ಮೊಟ್ಟೆ ಪೂರೈಕೆ ಮಾಡಿದ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ.
ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಧಕ್ಕೆ ಎಂಬುದು ತಮ್ಮ ಅಭಿಪ್ರಾಯವನ್ನು ಹೇರುವ ಮತ್ತು ಮತ್ತೊಬ್ಬರ ಭಾವನೆ, ನಂಬಿಕೆಯ ಸ್ವಾತಂತ್ರ್ಯವನ್ನು ಅತಿಕ್ರಮಿಸುವ ಒಂದು ವಿಕೃತ ಮನಸ್ಥಿತಿ. ಇಂತಹ ನವಬ್ರಾಹ್ಮಣವಾದಿ ಮನಸ್ಥಿತಿಯ ಜನರೇ ಇಂದು ಬಹುಸಂಖ್ಯಾತರು ಎಂಬುದು ದುರ್ದೈವದ ಸಂಗತಿ. ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಾಂತಿಯಾಗುತ್ತಿರುವಾಗ, ಹೊಸ ಹೊಸ ಆವಿಷ್ಕಾರ, ಜೀವನಕ್ರಮಕ್ಕೆ ಒಗ್ಗಿಕೊಳ್ಳುತ್ತಿರುವಾಗ, ಪಾಶ್ಚಾತ್ಯ ಆಹಾರ ಕ್ರಮ, ಉಡುಗೆ-ತೊಡುಗೆ, ಅಭ್ಯಾಸಗಳು ಆಚರಣೆಗಳು, ವೈಜ್ಞಾನಿಕ ಜೀವನಕ್ರಮ ನಮ್ಮ ಬದುಕಿನ ಭಾಗವಾಗುತ್ತಿರುವಾಗ ಬಡ ಮಕ್ಕಳಿಗೆ ಸರ್ಕಾರದಿಂದ ಮೊಟ್ಟೆ ಕೊಡುವುದನ್ನು ವಿರೋಧಿಸುವ ಮನಸ್ಥಿತಿ ಪ್ರತಿಗಾಮಿ. ಎಲ್ಲ ಬಗೆಯ ಆಹಾರ ಪದ್ಧತಿ, ಧಾರ್ಮಿಕ ಆಚರಣೆಯುಳ್ಳ ಸಮಾಜದಲ್ಲಿ ಇಂತಹ ಕ್ಷುಲ್ಲಕ ಕಾರಣಗಳು ಒಂದು ದೊಡ್ಡ ಸಮುದಾಯದ ಮಕ್ಕಳ ಆಹಾರದ ಹಕ್ಕನ್ನು ಕಸಿಯುವ ಮಟ್ಟ ಮುಟ್ಟಿರುವುದು ದುರಂತ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ‘ಮೊಟ್ಟೆಭಾಗ್ಯ’ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು. ರಾಜ್ಯದ ಹಲವು ಜಿಲ್ಲೆಗಳು ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳ ಆರೋಗ್ಯ ರಕ್ಷಣೆಯ ಹೊಣೆ ಸರ್ಕಾರದ್ದು. ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣು ನೀಡಲಾಗುತ್ತಿದೆ. ಪರಿಣಾಮವಾಗಿ ಉತ್ತರ ಕರ್ನಾಟಕದ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ. ಇಂತಹ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಯೋಜನೆಗೆ ಕೆಲವು ಸಂಕುಚಿತ ಮನಸ್ಥಿತಿಯ ಜನರು ವಿರೋಧ ವ್ಯಕ್ತಪಡಿಸಿದ್ದರು. ಮಾಂಸಾಹಾರ ಕನಿಷ್ಠ, ಸಸ್ಯಾಹಾರ ಶ್ರೇಷ್ಠ ಎಂಬ ಸಂಕುಚಿತ ಮನಸ್ಥಿತಿಯ ಜನರು, ಮಠಾಧೀಶರು ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರೂ ಬಡವರೇ ಇರುತ್ತಾರೆ. ಅವರಲ್ಲಿಯೂ ಆಹಾರದಲ್ಲಿ ಮೇಲು ಕೀಳು ಎಂಬ ಭಾವನೆ ಬೇರೂರಿರುವುದು ಈ ಸಮಾಜದಲ್ಲಿ ಮೌಢ್ಯ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದರ ಸೂಚಕ. ಮಂಡ್ಯದ ಶಾಲೆಯ ವಿಚಾರದಲ್ಲಿ ಆ ಮಕ್ಕಳ ಪೋಷಕರು ಮಾಂಸಾಹಾರಿಗಳಲ್ಲದ ಕಾರಣಕ್ಕೆ ವಿರೋಧಿಸುತ್ತಿದ್ದಾರೆಯೇ? ಇಲ್ಲ. ಶಾಲೆಯ ಪಕ್ಕದಲ್ಲಿ ದೇವಸ್ಥಾನವಿದೆ, ಮೈಲಿಗೆ ಆಗುತ್ತದೆ ಎಂಬ ಮೌಢ್ಯದಿಂದ ವಿರೋಧಿಸುತ್ತಿದ್ದಾರೆ. ಶಾಲೆಯ ಬಳಿ ದೇವಸ್ಥಾನ ಇದೆ ಎಂಬ ಕಾರಣಕ್ಕೆ ಆ ಮಕ್ಕಳು ತಮಗೆ ಕೊರತೆ ಇರುವ ಪೌಷ್ಟಿಕ ಆಹಾರದಿಂದ ಯಾಕೆ ವಂಚಿತರಾಗಬೇಕು? ಸಮಾಜ ಕಂದಾಚಾರ, ಮೌಢ್ಯಾಚರಣೆಗಳ ಕೂಪದಿಂದ ಇನ್ನಾದರೂ ಮೇಲೇಳಬೇಕಿದೆ. ಮುಂದುವರಿದ ಸಮಾಜದಲ್ಲಿ ಯಾವುದು ಹಿಂದಕ್ಕೆ ಸರಿಯಬೇಕಿತ್ತೋ ಅಂತಹ ಆಚರಣೆಗಳೆಲ್ಲ ಇನ್ನಷ್ಟು ಗಟ್ಟಿಯಾಗಿ ಬೇರೂರುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ದೇಶದ ಭವಿಷ್ಯವೆನಿಸಿದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಬಹಳ ಅಗತ್ಯ. ಅಂತಹ ಮಾರ್ಗದರ್ಶನ ಶಾಲೆಗಳಲ್ಲಿ ಸಿಗಬೇಕು. ಆದರೆ ಶಾಲೆಗಳೇ ಗ್ರಾಮಸ್ಥರ ಗೊಡ್ಡು ನಂಬಿಕೆಗಳಿಗೆ ಬಲಿಯಾಗಿ ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಗತಿಯೇನು?
ನಮ್ಮ ಅನೇಕ ದೇವರುಗಳಿಗೆ ಕೋಳಿ, ಕುರಿ ಬಲಿ ಕೊಡುವುದು, ದೇವಸ್ಥಾನದ ಆವರಣದಲ್ಲಿಯೇ ಮಾಂಸಹಾರ ಸಿದ್ಧಪಡಿಸಿ ಸಾಮೂಹಿಕ ಊಟ ಮಾಡುವ ಪದ್ಧತಿ ಇದೆ. ಮಂಡ್ಯದ ನೂರಾರು ಗ್ರಾಮಗಳಲ್ಲಿಯೂ ಇಂತಹ ಆಚರಣೆಗಳಿವೆ. ಊರ ದೇವತೆಯ ಜಾತ್ರೆಗೆ ಮನೆ ಮನೆಯಲ್ಲೂ ಕುರಿ, ಮೇಕೆಯ ಮಾಂಸದೂಟ ಮಾಡುವ ಪದ್ಧತಿಯಿದೆ. ಇಂತಹ ವಿಶಿಷ್ಟ ಸಾಮಾಜಿಕ, ಧಾರ್ಮಿಕ ನೆಲದಲ್ಲಿ ಬಡ ಮಕ್ಕಳ ಮೊಟ್ಟೆಗೂ ಆಪತ್ತು ಬಂದೊದಗಿದೆ ಎಂದರೆ ಮಂಡ್ಯದ ಜನ ಮೈಕೊಡವಿ ಆಲೋಚಿಸುವ ಅಗತ್ಯವಿದೆ. ಸದ್ರಿ ಆಕ್ಷೇಪವೆತ್ತಿರುವ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸೂಕ್ತ.
ಮಂಡ್ಯದ ಆಲಕೆರೆ ಶಾಲೆಯಲ್ಲಿರುವ 124ರಲ್ಲಿ 84 ವಿದ್ಯಾರ್ಥಿಗಳನ್ನು ಅಕ್ಕಪಕ್ಕದ ಗ್ರಾಮಗಳ ಇತರೆ ಶಾಲೆಗಳಿಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಅಂದ್ರೆ ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ನಲವತ್ತಕ್ಕೆ ಕುಸಿದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆ ಶುರುವಾದ ಎರಡು ತಿಂಗಳ ನಂತರ ಸೂಕ್ತ ಕಾರಣವಿಲ್ಲದೇ ಬೇರೆ ಶಾಲೆಗಳಿಗೆ ದಾಖಲಿಸಲು ಅನುಮತಿ ನೀಡಬಾರದಿತ್ತು. ಸಾಮೂಹಿಕವಾಗಿ ವರ್ಗಾವಣೆ ಪತ್ರ ಕೊಟ್ಟ ಶಾಲೆಯ ಮುಖ್ಯಸ್ಥರೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆಂದೇ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅವರನ್ನು ಹೊಣೆಗಾರರನ್ನಾಗಿಸಬೇಕಿದೆ.
ದೇಶ ಇಂದು 78ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ. ಕೃಷ್ಣಜನ್ಮಾಷ್ಟಮಿಯ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಕೆಲವು ಜಿಲ್ಲಾಡಳಿತಗಳೂ ಈ ನಿಯಮವನ್ನು ಅನುಸರಿಸುತ್ತವೆ. ಹೀಗೆ ವರ್ಷದಲ್ಲಿ ಐದಾರು ಹಬ್ಬ, ಜಯಂತಿಗಳಂದು ಸರ್ಕಾರ ಮಾಂಸ ಮಾರಾಟಕ್ಕೆ ನಿಷೇಧ ಹೇರುತ್ತಿದೆ. ಇದು ಪ್ರಜೆಗಳ ಆಹಾರದ ಹಕ್ಕಿನ ಮೇಲಿನ ದಾಳಿಯೇ ಸರಿ. ಒಂದು ಕಡೆ ಧಾರ್ಮಿಕ ಮುಖಂಡರು ಎಂದುಕೊಂಡವರಿಂದ ಆಗುತ್ತಿರುವ ಪ್ರಹಾರ, ಮತ್ತೊಂದೆಡೆ ಸರ್ಕಾರಗಳೇ ಅಂತಹ ವಿಚಾರಗಳ ಪರ ನಿಲ್ಲುವುದು, ನಿಷೇಧ ಹೇರುವುದು ಸಂವಿಧಾನದ ಮತ್ತು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೇ ಸರಿ.
