ಈ ದಿನ ಸಂಪಾದಕೀಯ | ನಮ್ಮ ಪೊಲೀಸರು ವಸಾಹತುಶಾಹಿ ಮನಸ್ಥಿತಿಯಿಂದ ಸ್ವಾತಂತ್ರ್ಯ ಪಡೆಯಬೇಕಿದೆ

Date:

Advertisements

ರಾಜ್ಯಸಭಾ ಸದಸ್ಯ ಮತ್ತು ಕವಿ ಇಮ್ರಾನ್ ಪ್ರತಾಪಗಢಿ ವಿರುದ್ಧ ಗುಜರಾತಿನ ಜಾಮ್ ನಗರ ಪೊಲೀಸರು ಕಳೆದ ಜನವರಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರ ಕವಿತೆಯು ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ನಡುವೆ ಹಗೆತನವನ್ನು ಹುಟ್ಟಿ ಹಾಕುತ್ತದೆ ಎಂಬುದು ಪೊಲೀಸರ ತಗಾದೆ.

ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯದ ನಿಜ ಅರ್ಥವನ್ನು ಪೊಲೀಸರು ಕನಿಷ್ಠ ಪಕ್ಷ ಈಗಲಾದರೂ ಅರಿಯಬೇಕು’ ಎಂದು ಸುಪ್ರೀಮ್ ಕೋರ್ಟು ತಾಕೀತು ಮಾಡಿದೆ. ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಮೊನ್ನೆ ಮೊನ್ನೆ ಮಾಡಿರುವ ಟೀಕೆ ಟಿಪ್ಪಣಿಯಿದು.

ವಿಶೇಷವಾಗಿ ಇಂದಿನ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಈ ಟೀಕೆ ಟಿಪ್ಪಣಿಗೆ ಅತೀವ ಮಹತ್ವವಿದೆ. ದೇಶ ಬ್ರಿಟಿಷ್ ವಸಾಹತುಶಾಹಿಯಿಂದ 1947ರಲ್ಲಿಯೇ ಬಿಡುಗಡೆ ಪಡೆಯಿತು. ಆದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ ಅದು ಕೇವಲ ರಾಜಕೀಯ ಬಿಡುಗಡೆ ಮಾತ್ರ. ಸಾಮಾಜಿಕ ಮತ್ತು ಆರ್ಥಿಕ ಬಿಡುಗಡೆ ಈ ದೇಶದ ದಲಿತರು-ಶೂದ್ರರು-ಮಹಿಳೆಯರ ಪಾಲಿಗೆ ಈಗಲೂ ಮರಳುಕಾಡಿನ ಮರೀಚಿಕೆಯಾಗೇ ಉಳಿದಿದೆ. ಬ್ರಿಟಿಷರು ತೊಲಗಿದರು. ಆದರೆ ಅವರ ಪೊಲೀಸ್ ವ್ಯವಸ್ಥೆ ಮತ್ತು ಜನವಿರೋಧಿ ಕಾಯಿದೆ ಕಾನೂನುಗಳು ವಸಾಹತುಶಾಹಿ ಗುಣವನ್ನು ಬಿಟ್ಟುಕೊಡದೆ ಮುಂದುವರೆದಿವೆ. ಪರಕೀಯ ಪ್ರಭುಗಳು ಪ್ರಜೆಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯಲ್ಲೇ ನಮ್ಮ ಸರ್ಕಾರಗಳು ಅವುಗಳ ಪೊಲೀಸ್ ವ್ಯವಸ್ಥೆ ನಮ್ಮನ್ನು ನಡೆಸಿಕೊಳ್ಳುತ್ತಿದೆ. ಪೊಲೀಸ್ ವ್ಯವಸ್ಥೆಯು ಆಳುವ ಸರ್ಕಾರಗಳ ಕೈಗೊಂಬೆಯಾಗಿ ಕುಣಿದಿದೆ. ಸಿಬಿಐ ಸಂಸ್ಥೆಯನ್ನು ಪಂಜರದ ಗಿಣಿ ಎಂದು ಸುಪ್ರೀಮ್ ಕೋರ್ಟ್ ಕರೆದಿತ್ತು. ಈವರೆಗೆ ಅಧಿಕಾರಕ್ಕೆ ಬಂದಿರುವ ಯಾವ ಸರ್ಕಾರಗಳೂ ಅದನ್ನು ಬಿಡುಗಡೆ ಮಾಡುವ ಮನಸ್ಸು ಮಾಡಿಲ್ಲ. ಅಧಿಕಾರವೆಂಬುದು ಅಮಲು. ಪೊಲೀಸ್ ಅಧಿಕಾರವೆಂಬುದು ಅಮಲುಗಳ ಅಮಲು. ಈ ಅಮಲನ್ನು ಬಿಟ್ಟುಕೊಡುವ ಮುತ್ಸದ್ದಿ ನಾಯಕತ್ವ ಭಾರತ ದೇಶದಲ್ಲಿ ಇನ್ನೂ ಹುಟ್ಟಿ ಬರಬೇಕಿದೆ.

Advertisements

‘ಜನತಂತ್ರದಲ್ಲಿ ಪ್ರಜೆಗಳೇ ಪ್ರಭುಗಳು’ ಎಂಬ ತತ್ವ ನುಡಿಯಲ್ಲೇ ಉಳಿದು ಹೋಗಿದೆ. ನಡೆಯಲ್ಲಿ ಕಾಣಲು ಬಂದೇ ಇಲ್ಲ. ಐದು ವರ್ಷಗಳಿಗೊಮ್ಮೆ ಚುನಾವಣೆಗಳಲ್ಲಿ ಮತ ಚಲಾವಣೆಗೆ ಮಾತ್ರ ಸೀಮಿತಗೊಂಡಿದೆ. ಈ ಚುನಾವಣೆಯ ಜನಾದೇಶವನ್ನು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ ತಂತ್ರಗಳು ತಲೆಯೆತ್ತಿವೆ. ಜನತಂತ್ರವೆಂಬದು ಮತದಾನದೊಂದಿಗೆ ಶುರುವಾಗುತ್ತದೆಯೇ ವಿನಾ ಕೊನೆಯಾಗುವುದಿಲ್ಲ.

ರಾಜ್ಯಸಭಾ ಸದಸ್ಯ ಮತ್ತು ಕವಿ ಇಮ್ರಾನ್ ಪ್ರತಾಪಗಢಿ ವಿರುದ್ಧ ಗುಜರಾತಿನ ಜಾಮ್ ನಗರ ಪೊಲೀಸರು ಕಳೆದ ಜನವರಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರ ಕವಿತೆಯು ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ನಡುವೆ ಹಗೆತನವನ್ನು ಹುಟ್ಟಿ ಹಾಕುತ್ತದೆ ಎಂಬುದು ಪೊಲೀಸರ ತಗಾದೆ.

‘ಹೇ ನೆತ್ತರ ಪಿಪಾಸುಗಳೇ ಕಿವಿಗೊಟ್ಟು ಕೇಳಿ….’ ಎಂಬುದಾಗಿ ಶುರುವಾಗುವ ಹಿಂದೀ-ಉರ್ದು ಶಾಯರಿಯಿದು. ಭಾರತದಲ್ಲಿ ಮುಸಲ್ಮಾನ ಅಸ್ಮಿತೆ ಮತ್ತು ಅನುಭವ ಕುರಿತ ಪ್ರತಿಭಟನಾ ಕಾವ್ಯಕ್ಕೆ ಹೆಸರಾದ ಪ್ರಮುಖರ ಪೈಕಿ ಇಮ್ರಾನ್ ಕೂಡ ಒಬ್ಬರು.

ಇಮ್ರಾನ್ ವಿರುದ್ಧ ಎಫ್.ಐ.ಆರ್. ದಾಖಲಿಸಿದ ಪೊಲೀಸರ ಕ್ರಮವನ್ನು ಗುಜರಾತ್ ಹೈಕೋರ್ಟು ಅನುಮೋದಿಸಿತ್ತು. ಈ ಎಫ್.ಐ.ಆರ್. ನ್ನು ರದ್ದು ಮಾಡುವಂತೆ ಇಮ್ರಾನ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.

‘ಅನ್ಯಾಯ- ಯಾತನೆಯ ಪಡಿಪಾಟಲನ್ನು ಪ್ರೀತಿಯ ಮೂಲಕ ಎದುರಿಸುವ’ ಕುರಿತ ಇಮ್ರಾನ್ ಕವಿತೆ ಮಹಾತ್ಮಾಗಾಂಧೀ ಸಾರಿದ್ದ ಅಹಿಂಸೆಯ ದಾರಿಯನ್ನು ಎತ್ತಿ ಹಿಡಿದಿದೆ. ಕಲೆ ಮತ್ತು ಕಾವ್ಯದ ಸ್ವತಂತ್ರ ಅಭಿವ್ಯಕ್ತಿಯ ಉಸಿರುಗಟ್ಟಿಸುವ ಪ್ರವೃತ್ತಿ ಕಂಡು ಬಂದಿದೆ. ಸೃಜನಶೀಲತೆ (ಕ್ರಿಯೇಟಿವಿಟಿ) ಕುರಿತು ಯಾರಿಗೂ ಮರ್ಯಾದೆ ಇದ್ದಂತೆ ತೋರುತ್ತಿಲ್ಲ. ಪೊಲೀಸರು ಸ್ವಲ್ಪವಾದರೂ ಸಂವೇದನೆಯನ್ನು ತೋರಬೇಕು. ಇಮ್ರಾನ್ ಪ್ರತಾಪಗಢಿ ಅವರ ಕವಿತೆಯನ್ನು ಓದಿ ಅರ್ಥ ಮಾಡಿಕೊಳ್ಳುವ ಕನಿಷ್ಠ ಪ್ರಯತ್ನವನ್ನಾದರೂ ಅವರು ಮಾಡಬೇಕಿತ್ತು. ಹಾಗೆ ಮಾಡಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ತೋರಿದಂತಾಗುತ್ತಿತ್ತು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕ ಮತ್ತು ಉಜ್ಜಲ್ ಭೂಯಾಂ ಹೇಳಿದ್ದಾರೆ. ಇಮ್ರಾನ್ ಪ್ರತಾಪಗಢಿ ಅವರ ಮನವಿಯ ಕುರಿತ ವಿಚಾರಣೆ ಮುಗಿದು ತೀರ್ಪನ್ನು ಮೀಸಲಿರಿಸಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಾತ್ಮಕ ಸ್ಥಾನಮಾನವನ್ನು (ಅನುಚ್ಛೇದ 370) ರದ್ದು ಕ್ರಮವನ್ನು ಟೀಕಿಸಿದ್ದ ಮತ್ತು ಪಾಕಿಸ್ತಾನಿ ಸ್ವಾತಂತ್ರ್ಯ ದಿನದಂದು ಆ ದೇಶಕ್ಕೆ ಶುಭಾಶಯ ಹೇಳಿದ್ದ ಕೊಲ್ಹಾಪುರದ ಪ್ರೊಫೆಸರ್ ಒಬ್ಬರ ಮೇಲೆ ಪೊಲೀಸರು ಹೂಡಿದ್ದ ಕೇಸನ್ನು ಸುಪ್ರೀಮ್ ಕೋರ್ಟು ಕಳೆದ ವರ್ಷ ರದ್ದು ಮಾಡಿತ್ತು.

ಭಿನ್ನ ಮತದ ಹಕ್ಕು, ಜೀವಂತ ಜನತಂತ್ರದ ಮೊತ್ತಮೊದಲ ತತ್ವ. ಪ್ರಭುತ್ವವನ್ನು ಕುರಿತು ನ್ಯಾಯಬದ್ಧ ಮಿತಿಗಳ ಒಳಗಾಗಿ ಮಾಡುವ ಟೀಕೆ ಟಿಪ್ಪಣಿಗಳನ್ನು ಅಪರಾಧವೆಂದು ಬಗೆಯಕೂಡದು ಎಂದು ಸಾರಿತ್ತು. ಸಂವಿಧಾನದ 19(2) ನೆಯ ಅನುಚ್ಛೇದವು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಗಳೇನೆಂದು ತಿಳಿಸಿದೆ. ಈ ಇತಿಮಿತಿಗಳ ಒಳಗೆ ನಡೆಯುವ ಯಾವುದೇ ನಡೆನುಡಿ ಸಮ್ಮತ ಎನಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈ ಸಾಂವಿಧಾನಿಕ ಇತಿಮಿತಿಗಳೇ ಅಂತಿಮ. ಇವುಗಳಾಚೆಗಿನ ಇತಿಮಿತಿಗಳು ಅಪ್ಪಟ ಸಂವಿಧಾನಬಾಹಿರ.

‘ಭಾವನೆಗಳನ್ನು ನೋಯಿಸುವ’ ಗುಮ್ಮನನ್ನು ಇತ್ತೀಚಿನ ವರ್ಷಗಳಲ್ಲಿ ಬಡಿದೆಬ್ಬಿಸುವುದೇ ಒಂದು ‘ಉದ್ಯಮ’ವಾಗಿದೆ. ಕ್ರಿಕೆಟ್ ಪಂದ್ಯಗಳಲ್ಲಿ ಎದುರಾಳಿ ತಂಡಗಳನ್ನು ಬೆಂಬಲಿಸಿದವರು ದೇಶದ್ರೋಹಿಗಳೆಂಬ ಗುಮ್ಮ, ವಿಶ್ವವಿದ್ಯಾಲಯಗಳ ಕ್ಯಾಂಪಸ್ಸುಗಳಲ್ಲಿ ನಿರ್ದಿಷ್ಟ ಚಲನಚಿತ್ರಗಳ ಪ್ರದರ್ಶನವನ್ನು ಪ್ರತಿಭಟಿಸುವ ಗುಮ್ಮ, ಧ್ವನಿವರ್ಧಕಗಳಲ್ಲಿ ‘ಅಝಾನ್’ ಕರೆ ಕಿರಿಕಿರಿಯೆಂಬ ಗುಮ್ಮ…ಇತರೆ ಇತ್ಯಾದಿ. ಬೆಳೆಯುತ್ತಲೇ ಹೋಗುವ ಪಟ್ಟಿಯಿದು. ಬಹುತ್ವ ಮತ್ತು ಸಮಾನತೆಯನ್ನು ಧಿಕ್ಕರಿಸುವ ಗುಮ್ಮಗಳಿವು. ಸುಪ್ರೀಮ್ ಕೋರ್ಟು-ಹೈಕೋರ್ಟುಗಳು ಕಾಲಕಾಲಕ್ಕೆ ನೀಡುತ್ತ ಬಂದಿರುವ ಮಹತ್ತರ ಮೈಲಿಗಲ್ಲು ತೀರ್ಪುಗಳ ಕುರಿತು ಕಾನೂನು ತಜ್ಞರಿಂದ ಪೊಲೀಸರಿಗೆ ತರಗತಿಗಳನ್ನು ಏರ್ಪಡಿಸುವ ಅಗತ್ಯವಿದೆ. ಪ್ರಸಿದ್ಧ ನ್ಯಾಯವಾದಿಗಳ ಜೊತೆ ಚರ್ಚೆ-ಸಂವಾದಗಳನ್ನು ನಡೆಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ- ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳ ಕುರಿತು ಅವರಲ್ಲಿ ತಿಳಿವಳಿಕೆ ಮೂಡಿಸುವ ಮಹಾ ಅಭಿಯಾನವೇ ಸಾಗಬೇಕಿದೆ. ಸಂವಿಧಾನದ 19 (1)(ಎ) ಅನುಚ್ಛೇದ ಹೇಳುವುದಾದರೂ ಏನನ್ನು ಎಂಬ ಕುರಿತು ಅರಿವು ಮೂಡಿಸಬೇಕಿದೆ.

ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದೇ ದೇಶದ್ರೋಹವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಟೀಕೆಯು ದೇಶದ ವಿರುದ್ಧ ಟೀಕೆಯೆಂದು ಬಗೆದು, ಟೀಕಿಸುವ ವ್ಯಕ್ತಿಗಳನ್ನು ಜೈಲಿಗೆ ತಳ್ಳುವ, ಸಾಮಾಜಿಕವಾಗಿ ಕೊನೆಯಿಲ್ಲದ ಕಿರುಕುಳಕ್ಕೆ ಈಡು ಮಾಡುವ ಪ್ರವೃತ್ತಿ ಹೆಚ್ಚುತ್ತ ನಡೆದಿದೆ. ರಾಷ್ಟ್ರೀಯ ಸುರಕ್ಷತೆ ಇಲ್ಲವೇ ಕೋಮು ಸಾಮರಸ್ಯ ಕದಡುವ, ಭಾವನೆಗಳಿಗೆ ಧಕ್ಕೆ ತಂದಿರುವ ಹೆಸರಿನಲ್ಲಿ ಬೇಟೆಯಾಡಲಾಗುತ್ತಿದೆ. ಸರ್ಕಾರ ಮತ್ತು ದೇಶದ (STATE- ಪ್ರಭುತ್ವ) ನಡುವೆ ಬಹಳಷ್ಟು ಅಂತರವಿದೆ. ಸರ್ಕಾರವನ್ನು ಐದು ವರ್ಷಗಳಿಗೊಮ್ಮೆ ಜನರು ಆರಿಸುತ್ತಾರೆ. ಸರ್ಕಾರ ಎಂಬುದು ಪ್ರಭುತ್ವದ ಒಂದು ಅಂಗ ಮಾತ್ರ. ಪ್ರಭುತ್ವ ಶಾಶ್ವತ. ಆದರೆ ಸರ್ಕಾರ ಬದಲಾಗುವಂತಹುದು. ಸಮಾಜವೆಂಬುದು ಶಾಶ್ವತ, ಸಮಾಜದಲ್ಲಿ ಹುಟ್ಟಿ ಸಾಯುವ ಕುಟುಂಬಗಳು ತಾತ್ಕಾಲಿಕ. ಹೀಗಾಗಿ ಸರ್ಕಾರದ ಟೀಕೆಯು ದೇಶದ ಟೀಕೆ ಆಗುವುದಿಲ್ಲ.

2010-2020 ನಡುವಣ ಅವಧಿಯಲ್ಲಿ 10,698 ಭಾರತೀಯ ನಾಗರಿಕರ ಮೇಲೆ ರಾಜದ್ರೋಹದ ಕೇಸುಗಳನ್ನು ದಾಖಲಿಸಲಾಗಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿ-ಅಂಶಗಳಿವು. ಈ ಪೈಕಿ ಶೇ.65ರಷ್ಟು ಕೇಸುಗಳನ್ನು 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಾಖಲಿಸಲಾಗಿದೆ. ಈ ಬಾಬತ್ತಿನಲ್ಲಿ ಯುಪಿಎ ಸರ್ಕಾರ ಬಹಳ ಹಿಂದೇನೂ ಇರಲಿಲ್ಲ ಅಲ್ಲವೇ?

ಜನತಂತ್ರಕ್ಕೆ ತೆರುವ ಬೆಲೆ ನಿರಂತರ ಜಾಗೃತಿಯೇ ಆಗಿದೆ. ಅದೃಷ್ಟವಶಾತ್ ಭಾರತದ ಸರ್ವೋಚ್ಚ ನ್ಯಾಯಾಲಯ ನಿರಂತರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತ ಬಂದಿದೆ.

ಇದಿ ಅಮೀನ್ ಎಂಬುವನು ಉಗಾಂಡ ದೇಶದ ಕುಖ್ಯಾತ ಸರ್ವಾಧಿಕಾರಿಯಾಗಿದ್ದ. ಅಧಿಕಾರದಲ್ಲಿ ನಿರಂತರವಾಗಿ ಮುಂದುವರೆಯಲು ತನ್ನದೇ ದೇಶದ ಸಾವಿರಾರು ಪ್ರಜೆಗಳ ಹತ್ಯೆ ಮಾಡಿಸಿದ್ದ. ಅವನ ಹೇಳಿಕೆಯೊಂದು ಅವನಷ್ಟೇ ಕುಖ್ಯಾತವಾಗಿ ಉಳಿದುಬಿಟ್ಟಿದೆ- “ಅಭಿವ್ಯಕ್ತಿ ಸ್ವಾತಂತ್ರ್ಯದ ಗ್ಯಾರಂಟಿಯನ್ನು ನಾನು ಕೊಡುತ್ತೇನೆ. ಆದರೆ, ಅಭಿವ್ಯಕ್ತಿಯ ನಂತರದ ಸ್ವಾತಂತ್ರ್ಯದ ಭರವಸೆಯನ್ನು ನೀಡಲಾರೆ”(I can guarantee freedom of speech, but I cannot guarantee freedom after speech). ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಇದಿ ಅಮೀನನ ಈ ಹೇಳಿಕೆ ಹತ್ತಾರು ‘ಜನತಾಂತ್ರಿಕ’ ವ್ಯವಸ್ಥೆಗಳಲ್ಲಿ ಈಗಲೂ ಜೀವಂತವಾಗಿದೆ. ಭಾರತವು ಈ ಸಾಲಿಗೆ ಶಾಶ್ವತವಾಗಿ ಸೇರಿ ಹೋಗಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X