ಈ ದಿನ ಸಂಪಾದಕೀಯ | ಪರೇಶ್‌ ಮೇಸ್ತಾ ಟು ಫರಂಗಿಪೇಟೆ- ಸಂಘಪರಿವಾರದ ಪಿತೂರಿ ಬಯಲು!

Date:

Advertisements
ಯಾವುದೇ ಪ್ರಕರಣದಲ್ಲೂ ಮುಸ್ಲಿಂ ಸಮುದಾಯವನ್ನು ವಿನಾಕಾರಣ ಎಳೆದು ತರುವ ಕಾಯಿಲೆ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ಕೊನೆಗೂ ಪತ್ತೆಯಾಗಿದ್ದಾನೆ. ಆ ಮೂಲಕ ಕರಾವಳಿಗೆ ಬೆಂಕಿ ಹಚ್ಚುವ ಒಂದು ಪ್ರಯತ್ನಕ್ಕೆ ತಣ್ಣೀರೆರಚಿದ್ದಾನೆ.

ಫೆಬ್ರವರಿ 25ರ ಸಂಜೆ ಏಳು ಗಂಟೆ ವೇಳೆಗೆ ಕಾಣೆಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ್, ಸುರಕ್ಷಿತವಾಗಿ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಪರೀಕ್ಷಾ ಭಯದಿಂದ ಆತ ಮನೆ ಬಿಟ್ಟಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಆದರೆ ಇಡೀ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚುವ ದುಷ್ಕೃತ್ಯಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಮುಂದಾಗಿದ್ದು ಮಾತ್ರ ಅಕ್ಷಮ್ಯ.  

ಫರಂಗಿಪೇಟೆ ಮುಸ್ಲಿಂ ಬಾಹುಳ್ಯದ ಪ್ರದೇಶ. ಇಲ್ಲಿ ಒಬ್ಬ ಹಿಂದೂ ಹುಡುಗ ನಾಪತ್ತೆಯಾಗಿದ್ದೇ ಸಾಕಾಗಿತ್ತು, ಫರಂಗಿಪೇಟೆಯ ಬಂದ್‌ಗೆ ಸಂಘಪರಿವಾರ ಕರೆ ನೀಡಿತು. ಎಲ್ಲ ಕೋಮಿನ ಜನರು ಅಂಗಡಿ ಮುಂಗಟ್ಟು ಮುಚ್ಚಿ ಸ್ಪಂದಿಸಿದರು. ವಿಧಾನಸಭಾ ಅಧಿವೇಶನದಲ್ಲೂ ಪ್ರಕರಣ ಚರ್ಚೆಯಾಯಿತು. ಮತ್ತೊಂದೆಡೆ ಇಲ್ಲಿನ ಮುಸ್ಲಿಮರು ದಿಗಂತ್ ಪತ್ತೆಗಾಗಿ ಪ್ರಾರ್ಥಿಸಿದರು. ಊರಿಗೆ ಬೆಂಕಿ ಹಚ್ಚಲು ಯತ್ನಿಸುತ್ತಿರುವ ಕೈಗಳಿಗೆ ಹಿನ್ನಡೆಯಾದರೆ ಸಾಕೆಂದು, ದಿಗಂತ್ ಪತ್ತೆಗೆ ಸಹಕರಿಸಿದರು. ನಾಪತ್ತೆ ವಿಚಾರ ದೊಡ್ಡದಾಗುತ್ತಿದ್ದಂತೆ ದಿಗಂತ್ ಉಡುಪಿಯ ಡಿಮಾರ್ಟ್‌ನಲ್ಲಿ ಪ್ರತ್ಯಕ್ಷನಾದ. ಅಲ್ಲಿನ ಸಿಬ್ಬಂದಿ ಅವನನ್ನು ಗುರುತಿಸಿ ಪೋಷಕರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ ಮೇಲೆ ಪ್ರಕರಣ ತಣ್ಣಗಾಗಿದೆ.

Advertisements

ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಮಾಡಿದ ಆರೋಪಗಳು ಮಾತ್ರ ಬೇರೆಯ ಉದ್ದೇಶವನ್ನು ಹೊಂದಿದ್ದನ್ನು ಸ್ಪಷ್ಟಪಡಿಸುತ್ತಿವೆ. ”ಫರಂಗಿಪೇಟೆಯಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಿದೆ. ಅವರಿಂದಲೇ ಈ ಕೃತ್ಯ ನಡೆದಿದೆ ಎಂದು ಜನ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ಮೇಲೆ ಗೌರವ ಮತ್ತು ನಂಬಿಕೆ ಇದೆ. ಅದು ಕಳೆದು ಹೋದರೆ ಸಾರ್ವಜನಿಕರು ಮತ್ತು ನಾವು ಹೋರಾಟ ಮಾಡಬೇಕಾಗುತ್ತದೆ” ಎಂದು ಶಾಸಕ ಭರತ್ ಶೆಟ್ಟಿ ಬೆದರಿಸಿದರು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪಂಚ ಗ್ಯಾರಂಟಿ ಮುಂದುವರಿಸುವ ಗ್ಯಾರಂಟಿ ಕೊಟ್ಟ ಸಿದ್ದರಾಮಯ್ಯ ಬಜೆಟ್‌

”ನಮ್ಮ ಹುಡುಗ ಅಥವಾ ಹುಡುಗಿ ಕಾಣೆಯಾದರೆ ಅದನ್ನು ಸಹಜ ಪ್ರಕರಣ ಎಂದು ಸರ್ಕಾರ ನಿರ್ಧರಿಸಿದರೆ, ಸಾರ್ವಜನಿಕರು ಇನ್ನುಮುಂದೆ ಕೈ ಕಟ್ಟಿ ಕೂರುವುದಿಲ್ಲ. ನಮ್ಮ ಇತಿಮಿತಿಯನ್ನು ಮೀರುವ ಪರಿಸ್ಥಿತಿ ಬರಬಾರದು. ಈಗ ವಿನಂತಿಸಿಕೊಳ್ಳುತ್ತಿದ್ದೇವೆ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ಪೊಲೀಸರು ರಕ್ಷಣೆ ಮಾಡದಿದ್ದರೆ ನಮ್ಮ ರಕ್ಷಣೆಗೆ ನಾವೇ ತಂಡವನ್ನು ಕಟ್ಟುತ್ತೇವೆ. ನಮ್ಮ ಪ್ರದೇಶವನ್ನು ಕಾಪಾಡಿಕೊಳ್ಳುತ್ತೇವೆ. ನಾವೇ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಕ್ರಮ ಕೈಗೊಳ್ಳಿ” ಎಂದು ಸಮಾಜದ ಸ್ವಾಸ್ಥ್ಯ ಕೆಡಿಸುವ ಹೇಳಿಕೆ ನೀಡಿದರು.

ಶಾಸಕ ಹರೀಶ್ ಪೂಂಜಾ, ”ಪೊಲೀಸರಿಗೆ ಡೆಡ್ ಲೈನ್ ನೀಡಿದ್ದೇವೆ. ಅಷ್ಟರೊಳಗೆ ಹಿಡಿಯದಿದ್ದರೆ ರಾಜ್ಯಾದ್ಯಂತ ಬೀದಿಗಿಳಿಯುತ್ತೇವೆ” ಎಂದು ಧಮ್ಕಿ ಹಾಕಿದರು. ಸಂಘಪರಿವಾರದ ಮತ್ತೊಬ್ಬ ಮುಖಂಡ, ”ಫರಂಗಿಪೇಟೆಯಲ್ಲಿ ಟೆರರಿಸ್ಟ್‌ಗಳು ಇದ್ದಾರೆ” ಎಂದು ಆರೋಪಿಸಿದ. ಇಷ್ಟೆಲ್ಲ ನಡೆಯುವ ಹೊತ್ತಿನಲ್ಲಿ ದಿಗಂತ್ ಪತ್ತೆಯಾಗಿಬಿಟ್ಟ. ಘಟನೆಗೆ ಕೇಸರಿ ಬಣ್ಣ ಬಳಿಯಲೆತ್ನಿಸಿದವರಿಗೆ ಮುಜುಗರವಾಯಿತು. ಕ್ಷುಲ್ಲಕವಾಗಿ ಬೀದಿಗಿಳಿದವರ ಬಣ್ಣ ಬಯಲಾಯಿತು.

ಪೋಷಕರು ತಮ್ಮ ಮಗುನಿಗಾಗಿ ಪರಿತಪಿಸುತ್ತಿದ್ದರೆ, ಅದಕ್ಕೆ ಧರ್ಮದ್ವೇಷದ ಬಣ್ಣ ಬಳಿಯಲು ಯತ್ನಿಸುವ ಇವರ ಮನಸ್ಥಿತಿಯಾದರೂ ಯಾವುದು? ತನಿಖೆಯ ವೇಳೆ ದಿಗಂತ್ ಕೊಟ್ಟಿರುವ ಹೇಳಿಕೆಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಆತ ಮೈಸೂರು, ಶಿವಮೊಗ್ಗ, ನಂದಿಬೆಟ್ಟ, ಉಡುಪಿ- ಹೀಗೆ ಹಲವು ಕಡೆ ಸುತ್ತಾಡಿದ್ದಾನೆ. ರೈಲಿನಲ್ಲಿ ಪ್ರಯಾಣ ಮಾಡಿದ್ದಾನೆ. ಅಂತೂ ಇಂತೂ ಮನೆಯ ಸಂಪರ್ಕಕ್ಕೆ ಬಂದಿದ್ದಾನೆ. ಆದರೆ ಮೇಲುನೋಟಕ್ಕೆ ಕಾಣುವಂತೆ ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣವೇ ಹೊರತು, ಬಿಜೆಪಿಯವರು ವಾದಿಸುವಂತೆ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟ.

ಯಾವುದೇ ಪ್ರಕರಣದಲ್ಲೂ ಮುಸ್ಲಿಂ ಸಮುದಾಯವನ್ನು ವಿನಾಕಾರಣ ಎಳೆದು ತರುವ ಕಾಯಿಲೆ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದಲ್ಲ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪರೇಶ್ ಮೇಸ್ತಾ ಎಂಬ ಮೀನುಗಾರ ಯುವಕನ ಸಾವಿನಲ್ಲಿ ಭಾರೀ ರಾಜಕೀಯ ಮಾಡಲಾಯಿತು. ಮುಸ್ಲಿಂ ಸಮುದಾಯದವರು ಈತನನ್ನು ಕೊಂದು ಕೆರೆಗೆ ಎಸೆದಿದ್ದಾರೆಂದು ಹಿಂದುತ್ವ ಸಂಘಟನೆಗಳು ಆರೋಪಿಸಿ ಇಡೀ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದವು. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಪರೇಶ್‌ ಸಾವಿನಲ್ಲಿ ಭಾರೀ ಲಾಭವನ್ನು ಗಿಟ್ಟಿಸಿಕೊಂಡರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವಿದ್ದಾಗಲೇ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿ, ”ಇದೊಂದು ಸಹಜ ಸಾವು” ಎಂದಿತು. ದುರದೃಷ್ಟವಶಾತ್ ಪರೇಶ್ ಸಾವಿನಲ್ಲಿ ಬಿಜೆಪಿ ಮಾಡಿದ ರಾಜಕೀಯ ಮಾತ್ರ ಹಸಿಹಸಿಯಾಗಿ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

ಟಿ.ನರಸೀಪುರದ ವೇಣುಗೋಪಾಲ್ (ಯುವ ಬ್ರಿಗೇಡ್ ಕಾರ್ಯಕರ್ತ) ಕೊಲೆಯಲ್ಲಿ ಒಬ್ಬಾತ ಮುಸ್ಲಿಂ ಆರೋಪಿ ಇದ್ದ. ಇನ್ನುಳಿದವರು ಹಿಂದೂ ಧರ್ಮದ ವಿವಿಧ ಜಾತಿಗಳಿಗೆ ಸೇರಿದವರಾಗಿದ್ದರು. ಆದರೆ ಇಡೀ ಪ್ರಕರಣವನ್ನು ‘ಹಿಂದೂ- ಮುಸ್ಲಿಂ’ ಎಂದು ತಿರುಚುವ ಪ್ರಯತ್ನ ನಡೆಯಿತು. ಟಿ.ನರಸೀಪುರದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಬಿಜೆಪಿ ನಾಯಕರು ಟಿ.ನರಸೀಪುರಕ್ಕೆ ಬಂದು ಹೋಗುತ್ತಿದ್ದನ್ನು ನೋಡಿ ಅಲ್ಲಿನ ಜನ ಆಶ್ಚರ್ಯಚಕಿತರಾಗಿದ್ದರು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕೆಡಿಸಿದ್ದಾಯಿತು, ಸರಿಪಡಿಸುವವರಾರು?

ಕೆರಗೋಡು ಹನುಮಧ್ವಜ ಪ್ರಕರಣದಲ್ಲಿ ಜಾತಿ ಆಯಾಮವಿತ್ತು. ಕೇಸರಿ ಧ್ವಜವನ್ನು ದಲಿತರು ಏಕೆ ವಿರೋಧಿಸಿದರು ಎಂಬುದನ್ನು ಮುಚ್ಚಿಟ್ಟು, ಹನುಮ ಧ್ವಜದೊಳಗೆ ಅವಿತಿದ್ದ ಜಾತಿ ಅಹಮಿಕೆಯನ್ನು ಪ್ರಚೋದಿಸಿ, ಇಲ್ಲಿಯೂ ಮುಸ್ಲಿಂ ದ್ವೇಷವನ್ನು ಬಿತ್ತಲಾಯಿತು. ಕೆರಗೋಡಿನಲ್ಲಿ ಆದದ್ದೇ ಬೇರೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಹೇಳಿದ್ದೇ ಬೇರೆ!

ಎಲ್ಲದರಲ್ಲೂ ಹಿಂದೂ ಮುಸ್ಲಿಂ ಆಯಾಮವನ್ನು ಹುಡುಕಲು ಹೋಗಿ ಬಿಜೆಪಿ ನಾಯಕರು ನಗೆಪಾಟಲಿಗೀಡಾಗುತ್ತಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹಿಂದೂ ಹೆಣವೊಂದು ಬಿದ್ದರೆ ಸಾಕೆಂದು ಇವರು ಕಾದು ಕುಳಿತಿರುವಂತೆ ಭಾಸವಾಗುತ್ತಿದೆ. ಇಂತಹ ಪಿತೂರಿಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮುಂದೆ ಎಂದಾದರೂ ಇಂತಹ ಆರೋಪಗಳು ಮರುಕಳಿಸಿದರೆ, ”ನೀವು ಹಿಂದೆಯೂ ಹೀಗೆಯೇ ಹೇಳಿದ್ದಿರಿ. ಸತ್ಯ ಬೇರೆಯೇ ಆಗಿತ್ತು. ಈಗ ಮತ್ತೊಂದು ಡ್ರಾಮಾ ಹಿಡಿದುಕೊಂಡು ಬಂದಿದ್ದೀರಾ? ಸಮಾಜಕ್ಕೆ ಬೆಂಕಿ ಹಚ್ಚಲು ನಿಂತಿದ್ದೀರಾ?” ಎಂದು ಜನರು ಪ್ರಶ್ನಿಸಬೇಕು. ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಯತ್ನಿಸುವ ಮತೀಯವಾದಿ ಪ್ರಯತ್ನಗಳ ಕುರಿತು ಶ್ರೀಸಾಮಾನ್ಯರು ಎಚ್ಚರ ವಹಿಸಬೇಕು. ಜನರ ನಡುವೆ ಸಂಶಯದ ಬೀಜಗಳನ್ನು ಬಿತ್ತಿ, ಫಸಲು ಪಡೆಯಲೆತ್ನಿಸುವವರ ಬಗ್ಗೆ ಗುಮಾನಿಗಳನ್ನು ಇಟ್ಟುಕೊಳ್ಳಬೇಕು. ಫರಂಗಿಪೇಟೆಯಲ್ಲಿ ಬೆಂಕಿ ಹಚ್ಚಲು ಬಂದವರು ತಾವಾಗಿಯೇ ಬೆತ್ತಲಾಗಿದ್ದನ್ನು ಮರೆಯಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X