ನ್ಯಾಯಾಂಗ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ಆರೋಪ ಸಾಬೀತು ಮಾಡುವ ವ್ಯವಸ್ಥೆಗಾಗಿ ನಾವು ಆಗ್ರಹಿಸಬೇಕೇ ಹೊರತು, ಇಂತಹ ಹತ್ಯೆಗಳನ್ನು ಬೆಂಬಲಿಸಬಾರದು.
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ”ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಿಹಾರ ಮೂಲದ ರಿತೇಶ ಕುಮಾರ್‌ನಿಗೆ ಮೊದಲು ಕಾಲಿಗೆ ಗುಂಡು ಹಾರಿಸಲಾಯಿತು. ಆತನ ಎದೆಗೂ ಗುಂಡು ತಾಕಿತು. ಬಳಿಕ ಅವನನ್ನು ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಗುಂಡಿಕ್ಕಿ ಕೊಲ್ಲಬೇಕೆಂಬ ಆಕ್ರೋಶ ವ್ಯಕ್ತವಾಗುತ್ತಿದ್ದ ಹೊತ್ತಿನಲ್ಲೇ ಪೊಲೀಸರು ಬಂದೂಕಿನ ನ್ಯಾಯ ಒದಗಿಸಿಬಿಟ್ಟಿದ್ದಾರೆ. ಜನರು ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಅತ್ಯಾಚಾರ ಮತ್ತು ಕೊಲೆಯ ಆರೋಪಗಳು ಬಂದ ತಕ್ಷಣ ಆರೋಪಿಯನ್ನು ಗುಂಡಿಕ್ಕಿ ಕೊಲ್ಲಿ, ನೇಣಿಗೇರಿಸಿ ಎನ್ನುವಂತಹ ಆಗ್ರಹಗಳು ನಾಗರಿಕ ಸಮಾಜದಿಂದ ಬರುತ್ತವೆ. ನ್ಯಾಯದಾನ ವ್ಯವಸ್ಥೆಯ ವಿಳಂಬ ನೀತಿಯೂ ಇಂತಹ ಆಗ್ರಹಗಳಿಗೆ ಕಾರಣ ಎಂಬುದು ನಿಜ. ಮುಡುಗಟ್ಟಿದ ಆಕ್ರೋಶದ ವೇಳೆ ಆರೋಪಿಯ ಬಲಿ ಹಾಕುವ ಮನಸ್ಥಿತಿ ಇದ್ದೇ ಇರುತ್ತದೆ. ಆದರೆ ಪೊಲೀಸರ ಬಂದೂಕಿನ ನ್ಯಾಯಕ್ಕೆ ಮನ್ನಣೆ ಕೊಟ್ಟರೆ ಮುಂದಾಗುವ ಅಪಾಯಗಳಿಗೆ ನಾವೇ ತೆರೆದುಕೊಂಡಂತೆ.
ಹುಬ್ಬಳ್ಳಿ ಎನ್‌ಕೌಂಟರ್ ಸಂಬಂಧ ಎರಡು ವಿಧದ ಚರ್ಚೆಯೂ ಶುರುವಾಗಿದೆ. ”ಹೀಗೆ ಬಂದೂಕು ಬಳಸುತ್ತಾ, ಆರೋಪಿಗಳನ್ನು ಮುಗಿಸುತ್ತಾ ಹೋದರೆ ಸತ್ಯಗಳು ನಾಶವಾಗುತ್ತವೆ. ಹಾಗಾದರೆ ಕಾನೂನು ಏಕೆ ಬೇಕು, ನ್ಯಾಯಾಂಗ ಏಕೆ ಬೇಕು? ಧರ್ಮಸ್ಥಳದ ಸೌಜನ್ಯರ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಸಂತೋಷ್ ರಾವ್ ಅವರನ್ನು ಅಂದೇ ಗುಂಡಿಕ್ಕಿ ಕೊಂದಿದ್ದರೆ ಆತ ನಿರಪರಾಧಿ ಎಂದು ಸಾಬೀತು ಮಾಡುವ ಅವಕಾಶವೇ ಇಲ್ಲವಾಗುತ್ತಿತ್ತು. ಆತನೇ ನಿಜವಾದ ಅಪರಾಧಿ ಎಂದು ನಂಬಿಕೊಳ್ಳುವ ಅಪಾಯವೂ ಇತ್ತು. ಆದರೆ ಆತ ನಿರ್ದೋಷಿಯಾಗಿದ್ದ. ಸೌಜನ್ಯ ಮೇಲೆ ನಡೆದದ್ದು ಸಾಮೂಹಿಕ ಅತ್ಯಾಚಾರವೆಂದು ವೈದ್ಯಕೀಯ ಪರೀಕ್ಷೆಗಳು ಹೇಳುತ್ತಿವೆ. ಸಾಕ್ಷ್ಯಗಳನ್ನು ನಾಶ ಮಾಡಿರುವ ತನಿಖಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಕೊಂದವರು ಯಾರೆಂಬುದು ಈವರೆಗೂ ತಿಳಿಯಲೇ ಇಲ್ಲ. ಸಂತೋಷ್ ರಾವ್ ಅವರನ್ನು ಅಂದು ಹತ್ಯೆ ಮಾಡಿಬಿಟ್ಟಿದ್ದರೆ ನ್ಯಾಯದಾನ ವ್ಯವಸ್ಥೆಗೆ ಅರ್ಥವೇ ಇರುತ್ತಿರಲಿಲ್ಲ” ಎಂಬ ಅಭಿಪ್ರಾಯವನ್ನು ಪ್ರಜ್ಞಾವಂತ ಸಮುದಾಯ ವ್ಯಕ್ತಪಡಿಸುತ್ತಿದೆ. ಹುಬ್ಬಳ್ಳಿಯಲ್ಲಿ ಹತ್ಯೆಯಾದ ಆರೋಪಿ ರಿತೇಶ ಕುಮಾರ್ ನಿಜವಾದ ಅಪರಾಧಿಯೂ ಆಗಿರಬಹುದು. ಆದರೆ ಬಂದೂಕಿನ ಮೂಲಕ ನ್ಯಾಯ ನಿರ್ಣಯವಾಗುವ ಅಪಾಯವನ್ನು ಅರ್ಥಮಾಡಿಕೊಳ್ಳಬೇಕು. ವಿಚಾರಣೆಗಳು ನಡೆದು ಕಾನೂನುರೀತ್ಯ ಶಿಕ್ಷೆಯಾಗುವುದೇ ನಿಜವಾದ ಪ್ರಜಾತಂತ್ರ ವ್ಯವಸ್ಥೆಯ ಪ್ರತಿರೂಪ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್ ಒಪ್ಪುತ್ತಿಲ್ಲ – ಮೋದಿಗೆ ಮತ್ತೊಬ್ಬ ‘ರಬ್ಬರ್ ಸ್ಟ್ಯಾಂಪ್’ ಸಿಗುತ್ತಿಲ್ಲ!
ರಿತೇಶನಿಗೆ ಆದದ್ದು ಎಲ್ಲ ಅತ್ಯಾಚಾರಿಗಳಿಗೂ ಆಗಬೇಕೆಂದು ಈ ಸಮಾಜ ಬಯಸುತ್ತದೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. ಬಲಾಢ್ಯರು, ರಾಜಕೀಯ ಧುರೀಣರು, ಮಠಾಧೀಶರುಗಳ ಮೇಲೆ ಅತ್ಯಾಚಾರದ ಆರೋಪಗಳು ಬಂದಾಗ ಇದೇ ಸಮಾಜ ಹೇಗೆ ವರ್ತಿಸುತ್ತದೆ, ಕಾನೂನು ವ್ಯವಸ್ಥೆ ಹೇಗೆ ನೋಡುತ್ತದೆ ಎಂದು ಕೇಳಿಕೊಳ್ಳಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿ ವರ್ಷವೇ ಕಳೆಯಿತು. ಆದರೆ ಆರೋಪಿಯನ್ನು ಬಂಧಿಸಲು ಆಗಲಿಲ್ಲ. ‘ಯಡಿಯೂರಪ್ಪ ಯಾರೋ ಯಂಕ, ನಾಣಿ, ಸೀನಾ, ವೆಂಕ್ಟ ಅಲ್ಲ’ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಆಡಿದ್ದು ದುರಾದೃಷ್ಟವೇ ಸರಿ. ಯಡಿಯೂರಪ್ಪನವರನ್ನು ಬಂಧಿಸಿದ್ದರೆ, ನಮ್ಮ ಸಮಾಜಕ್ಕೆ ರವಾನೆಯಾಗುತ್ತಿದ್ದ ಬಹುಮುಖ್ಯ ಸಂದೇಶವನ್ನು ಮರೆತು ಹೋದೆವು. ಬಲಾಢ್ಯರು ಆರೋಪಿಗಳಾಗಿದ್ದಾಗ ಅವರನ್ನು ಸಮರ್ಥಿಸುವ ಅಥವಾ ಅವರ ಪರ ನಿಲ್ಲುವ ಪಡೆಯೂ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಇದು ಸಮಾಜದ ಬೂಟಾಟಿಕೆಯಾಗುತ್ತದೆ. ಜಾತಿ, ಮತ, ವರ್ಗ ಶ್ರೇಣಿಯ ಮೇಲೆ ಆಕ್ರೋಶಗಳು ನಿರ್ಧಾರವಾಗುವುದು ಸಮಾಜದ ಸ್ವಾಸ್ಥ್ಯದ ಸೂಚನೆಯಲ್ಲ.
ಅತ್ಯಾಚಾರದಂತಹ ಸಂದರ್ಭದಲ್ಲಿ ಎನ್‌ಕೌಂಟರ್‌ಗಳು ನಡೆದಾಗ ಸಮಾಜ ಮತ್ತು ಮಾಧ್ಯಮಗಳು ಉನ್ಮಾದಕ್ಕೆ ಒಳಗಾಗುವ ಮುನ್ನ ಕೊಂಚ ತಾಳ್ಮೆ ವಹಿಸಿ ಯೋಚಿಸಬೇಕಾಗುತ್ತದೆ. ಹೈದ್ರಾಬಾದ್‌ನಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಕೊಂದಿರುವುದಾಗಿ ಹೇಳಿದ್ದರು. ಆದರೆ ಈ ಎನ್‌ಕೌಂಟರ್ ಉದ್ದೇಶಪೂರ್ವಕವಾಗಿ ನಡೆದಿರುವುದಾಗಿ ತನಿಖಾ ಆಯೋಗ ಹೇಳಿತ್ತು. ತಪ್ಪಿತಸ್ಥ ಪೊಲೀಸರ ಮೇಲೆ ಶಿಕ್ಷೆಯಾಗಬೇಕು ಎಂದು ಶಿಫಾರಸ್ಸು ಮಾಡಿತ್ತು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಕರಣವೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಪೊಲೀಸರು ನಡೆಸುವ ಎನ್‌ಕೌಂಟರ್‌ಗಳ ಕಥನಗಳ ಹಿಂದೆ ಯಾವುದೋ ಸತ್ಯವನ್ನು ಮುಚ್ಚಿಡುವ ಸಾಧ್ಯತೆಗಳಿರುವುದನ್ನು ತಮಿಳಿನ ‘ವಿಸಾರಣೈ’, ಮಲಯಾಳಂನ ‘ಜನಗಣಮನ’ ಥರದ ಸಿನಿಮಾಗಳು ಮುನ್ನೆಲೆಗೆ ತಂದಿದ್ದವು. ಪ್ರಭುತ್ವದ ಬಂದೂಕನ್ನು ಅನುಮಾನಿಸಬೇಕು ಮತ್ತು ನ್ಯಾಯಾಂಗದ ಮಹತ್ವವನ್ನು ಎತ್ತಿಹಿಡಿಯಬೇಕು ಎಂಬ ಸಂದೇಶವನ್ನು ಈ ಸಿನಿಮಾಗಳು ನೀಡಿದ್ದವು. ಹುಬ್ಬಳ್ಳಿಯಲ್ಲಿ ನಡೆದಿರುವ ಆರೋಪಿಯ ಹತ್ಯೆಯು ಬಂದೂಕಿನ ನ್ಯಾಯದ ಕುರಿತು ಅನುಮಾನಗಳನ್ನು ಹುಟ್ಟು ಹಾಕಬೇಕು. ”ಆರೋಪ ಸಾಬೀತಾಗುವ ತನಕ ಯಾವುದೇ ಆರೋಪಿಯು ಅಪರಾಧಿಯಲ್ಲ” ಎಂದಿರುವ ನಮ್ಮ ನ್ಯಾಯಾಂಗಕ್ಕೆ ಪೊಲೀಸರು ಬದ್ಧರಾಗಿರಬೇಕು. ನ್ಯಾಯಾಂಗ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ಆರೋಪ ಸಾಬೀತು ಮಾಡುವ ವ್ಯವಸ್ಥೆಗಾಗಿ ನಾವು ಆಗ್ರಹಿಸಬೇಕೇ ಹೊರತು, ಇಂತಹ ಹತ್ಯೆಗಳನ್ನು ಬೆಂಬಲಿಸಬಾರದು. ನ್ಯಾಯದಾನ ವ್ಯವಸ್ಥೆಯ ವಿಳಂಬಕ್ಕೆ ಹಲವು ಕಾರಣಗಳಿವೆ. ನ್ಯಾಯಾಧೀಶರ ಕೊರತೆಗಳು, ನೇಮಕಾತಿಯ ವಿಳಂಬ, ಜನಸಂಖ್ಯೆಗೆ ಅನುಗುಣವಾಗಿ ಇರದ ನ್ಯಾಯಾಧೀಶರ ಸಂಖ್ಯೆ ಇವೆಲ್ಲವನ್ನೂ ನಾವು ಗಂಭೀರವಾಗಿ ನೋಡಬೇಕಾಗುತ್ತದೆ. ಕೋರ್ಟ್‌ಗಳ ಪ್ರಮಾಣವನ್ನೂ ಹೆಚ್ಚಿಸಬೇಕಾಗುತ್ತದೆ. ಆರೋಪಿ ಪ್ರಭಾವಿಯಾಗಿರಲಿ, ದುರ್ಬಲನಾಗಿರಲಿ- ಪೊಲೀಸರು ತ್ವರಿತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸುವ ಕೆಲಸಗಳಾಗಬೇಕು. ಹಾಗಾದಾಗ ಮಾತ್ರ ತಕ್ಷಣದ ನ್ಯಾಯದ ಆಗ್ರಹಗಳು ನಿಲ್ಲುತ್ತವೆ.
