ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣಿನ ರೆಕ್ಕೆಗಳನ್ನು ಕಿತ್ತು ಬಿಸಾಕಿ, ಆಕೆ ಸದಾ ಅಧೀನದಲ್ಲಿ ಇರುವುದನ್ನು ಬಯಸುತ್ತದೆ. ಶಕ್ತಿಯಂತಹ ಯೋಜನೆಗಳಿಗೆ ಬರುವ ಟೀಕೆಗಳ ಹಿಂದೆ ಸ್ಪಷ್ಟವಾಗಿ ಪುರುಷಪ್ರಧಾನ ಮನಸ್ಥಿತಿ ಇರುತ್ತದೆ.
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಕಾರ್ಯಕ್ರಮಗಳ ಪೈಕಿ ಅತಿ ಹೆಚ್ಚು ಟೀಕೆಗೆ, ವ್ಯಂಗ್ಯಕ್ಕೆ, ಅಪಹಾಸ್ಯಕ್ಕೆ ಗುರಿಯಾಗಿದ್ದು ‘ಶಕ್ತಿ’ ಯೋಜನೆ. ಹೆಣ್ಣು ಮನೆಯಿಂದ ಹೊರಹೋಗುವುದನ್ನು ಸಹಿಸದ ಮನಸ್ಥಿತಿಗಳು, ”ಶಕ್ತಿ ಯೋಜನೆಯಿಂದ ಸಂಸಾರಗಳು ಹಾಳಾಗುತ್ತವೆ, ಹೆಂಗಸರು ದಾರಿ ತಪ್ಪುತ್ತಾರೆ” ಎನ್ನುವಂತಹ ಕ್ಷುಲ್ಲಕ ಟೀಕೆಗಳನ್ನು ಮಾಡಿದವು. ಮಾಧ್ಯಮಗಳು ಇಂತಹ ವಾದಗಳಿಗೆ ಭಾರೀ ಪ್ರಚಾರವನ್ನೂ ನೀಡಿದವು. ಆದರೆ ಶಕ್ತಿಯ ನಿಜ ಶಕ್ತಿ ಪ್ರದರ್ಶನ ನಿಧಾನಕ್ಕೆ ಅನಾವರಣ ಆಗುತ್ತಿದೆ. ಶಕ್ತಿ ಯೋಜನೆಯು ಮಹಿಳೆಯರ ಸ್ವಾವಲಂಬನೆ ಮತ್ತು ಬಲವರ್ಧನೆಗೆ ಕಾರಣವಾಗಿ ನಿಂತಿದೆ.
ಶಕ್ತಿ, ಗೃಹಲಕ್ಷ್ಮಿಯಂತಹ ಕಲ್ಯಾಣ ಕಾರ್ಯಕ್ರಮಗಳು ಜನರಲ್ಲಿ ಕೊಳ್ಳುವ ಶಕ್ತಿಯನ್ನು ವೃದ್ಧಿಸಿ, ಆರ್ಥಿಕ ಮುಂಚಲನೆಗೆ ಕಾರಣವಾಗುತ್ತವೆ. ಮಹಿಳೆಯರ ಉದ್ಯೋಗದ ಪ್ರಮಾಣ ಹೆಚ್ಚುತ್ತದೆ ಎಂದು ಆರ್ಥಿಕ ತಜ್ಞರು ಹೇಳುವ ಅಭಿಪ್ರಾಯಗಳನ್ನು ‘ಈದಿನ ಡಾಟ್ ಕಾಮ್’ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿತ್ತು. ತಮಿಳುನಾಡು ರಾಜ್ಯದಲ್ಲಿ ಕಲ್ಯಾಣ ಕಾರ್ಯಕ್ರಮಗಳು ತಂದ ಬದಲಾವಣೆಗಳು ನಮ್ಮ ಕಣ್ಣಮುಂದಿದ್ದವು. ಆದರೆ ಮುಖ್ಯವಾಹಿನಿ ಮಾಧ್ಯಮಗಳು ಆತುರದ ವಿಶ್ಲೇಷಣೆಗಳನ್ನು ಮಾಡಿ, ‘ಶಕ್ತಿಗುಂದಿಸಲು’ ಯತ್ನಿಸಿದವು.
ಕೂಗುಮಾರಿ ಮಾಧ್ಯಮಗಳ ನಡುವೆ ಸತ್ಯವು ನಿಧಾನಕ್ಕೆ ತೆರೆದುಕೊಂಡಿದೆ. ಶಕ್ತಿಯಂತಹ ಯೋಜನೆಗಳ ಪರಿಣಾಮಗಳನ್ನು ತಿಳಿಸುವ ಮತ್ತೊಂದು ವರದಿ ಹೊರಬಿದ್ದಿದ್ದು, ಹೊಸ ಅಧ್ಯಯನದ ಪ್ರಕಾರ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬೆಂಗಳೂರು ನಗರದಲ್ಲಿ ಶೇ. 23ರಷ್ಟು, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಶೇ. 21ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಉಪರಾಷ್ಟ್ರಪತಿ ಚುನಾವಣೆ; ಆತ್ಮಸಾಕ್ಷಿ ಮತಕ್ಕೆ ಗೆಲುವಾಗಲಿ
‘ಸಸ್‌ಟೈನಬಲ್ ಮೊಬಿಲಿಟಿ ನೆಟ್‌ವರ್ಕ್’ ನಿಯೋಜಿಸಿದ್ದ ಮತ್ತು ‘ನಿಕೋರ್ ಅಸೋಸಿಯೇಟ್ಸ್’ ನಡೆಸಿರುವ, ”ಉಚಿತ ಬಸ್ ಪ್ರಯಾಣದಾಚೆ: ಬಹುರಾಜ್ಯಗಳನ್ನು ಒಳಗೊಂಡಂತೆ ನಗರ ಭಾರತದಲ್ಲಿ ಮಹಿಳಾ ಬಸ್ ದರ ವಿನಾಯಿತಿ ಬೀರಿದ ಪರಿಣಾಮಗಳ ತುಲನೆ” ಎಂಬ ಅಧ್ಯಯನವು ಕರ್ನಾಟಕ ರಾಜ್ಯದ ಸಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿದೆ. ಅಧ್ಯಯನಕ್ಕೆ ಒಳಪಡಿಸಿದ ಐದು ರಾಜ್ಯಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದೆ. ದೆಹಲಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ 10 ನಗರಗಳಲ್ಲಿ ನಡೆಸಿದ 2,500ಕ್ಕೂ ಹೆಚ್ಚು ಸಮೀಕ್ಷೆಗಳು, ಫೋಕಸ್ ಗ್ರೂಪ್ ಚರ್ಚೆಗಳು ಮತ್ತು ಪ್ರಮುಖ ಮಾಹಿತಿದಾರರ ಸಂದರ್ಶನಗಳನ್ನು ಆಧರಿಸಿದ ಅಧ್ಯಯನ ವರದಿ ಇದಾಗಿದೆ.
ಶಕ್ತಿ ಯೋಜನೆಯ ಕಾರಣಕ್ಕಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 27% ಮಹಿಳೆಯರು ಬಸ್‌ಗಳಿಗೆ ಹತ್ತಿದ್ದಾರೆ. ಮುಖ್ಯವಾಗಿ ಕೆಲಸ, ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ದೂರದ ಊರುಗಳಿಗೆ ಪ್ರಯಾಣ ಮಾಡಿದ್ದಾರೆ ಎಂದಿದೆ ವರದಿ.
ನಿಕೋರ್ ಅಸೋಸಿಯೇಟ್ಸ್‌ನ ಸಂಸ್ಥಾಪಕಿ ಮತ್ತು ಮುಖ್ಯ ಅರ್ಥಶಾಸ್ತ್ರಜ್ಞೆ ಮಿತಾಲಿ ನಿಕೋರ್ ಪ್ರತಿಕ್ರಿಯಿಸಿ, ”ಶಕ್ತಿ ಯೋಜನೆಯಿಂದಾಗಿ ಆಗಾಗ್ಗೆ ಪ್ರಯಾಣ ಮತ್ತು ದೀರ್ಘ ಪ್ರಯಾಣ ನಡೆಸಿದ್ದಾರೆ. ವಿಶೇಷವಾಗಿ ಈ ಹಿಂದೆ ವೆಚ್ಚದ ಕಾರಣಕ್ಕೆ ದೂರ ಉಳಿದಿದ್ದ ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಹೆಚ್ಚು ಪಡೆದಿದ್ದಾರೆ” ಎಂದು ತಿಳಿಸಿದ್ದಾರೆ.
ಸಂಶೋಧನೆಗಳ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ”ಶಕ್ತಿ ಯೋಜನೆಯ ಪ್ರಾಥಮಿಕ ಉದ್ದೇಶ ಮಹಿಳೆಯರನ್ನು ಸಬಲೀಕರಣಗೊಳಿಸುವುದಾಗಿದೆ. ಅಧ್ಯಯನವು ಎತ್ತಿಹಿಡಿದಿರುವ ಮಹಿಳಾ ಉದ್ಯೋಗದಲ್ಲಿನ ಹೆಚ್ಚಳವು ಪ್ರೋತ್ಸಾಹದಾಯಕ ಸಂಕೇತ. ಈ ಯೋಜನೆ ಜಾರಿಗೆ ಬಂದಾಗಿನಿಂದ, ವಿಶೇಷವಾಗಿ ಕೆಳ-ಮಧ್ಯಮ ಮತ್ತು ಮಧ್ಯಮ-ಆದಾಯದ ಕುಟುಂಬಗಳ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೆಲಸಕ್ಕಾಗಿ ತೆರಳಲು ಉಚಿತ ಬಸ್ ಸೇವೆಯನ್ನು ಬಳಸುತ್ತಿದ್ದಾರೆ” ಎಂದಿದ್ದಾರೆ. ಟೀಕೆಗಳು ಏನೇ ಇರಲಿ, ಇಂತಹ ಯೋಜನೆಯ ಸಫಲತೆಯು ನಿಧಾನಕ್ಕೆ ಅರಿವಿಗೆ ಬರುತ್ತದೆ ಎಂಬುದು ಅಧ್ಯಯನಗಳಿಂದ ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?
”ಒಂದು ದೇಶದ ಅಭಿವೃದ್ಧಿಯನ್ನು ಆ ದೇಶದ ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯುತ್ತೇನೆ” ಎನ್ನುತ್ತಾರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಹೀಗಾಗಿ ಸರ್ಕಾರಗಳು ಜಾರಿಗೆ ತರುವ ಮಹಿಳಾ ಪ್ರಧಾನ ಕಾರ್ಯಕ್ರಮಗಳನ್ನು ಮುಕ್ತವಾಗಿ ನೋಡುವ ಮನಸ್ಥಿತಿ ಸಮಾಜದಲ್ಲಿ ಇನ್ನಾದರೂ ಬೆಳೆಯಬೇಕಾಗಿದೆ.
ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣಿನ ರೆಕ್ಕೆಗಳನ್ನು ಕಿತ್ತು ಬಿಸಾಕಿ, ಆಕೆ ಸದಾ ಅಧೀನದಲ್ಲಿ ಇರುವುದನ್ನು ಬಯಸುತ್ತದೆ. ಶಕ್ತಿಯಂತಹ ಯೋಜನೆಗಳಿಗೆ ಬರುವ ಟೀಕೆಗಳ ಹಿಂದೆ ಸ್ಪಷ್ಟವಾಗಿ ಪುರುಷಪ್ರಧಾನ ಮನಸ್ಥಿತಿ ಇರುತ್ತದೆ. ಇದ್ಯಾವುದಕ್ಕೂ ಅಂಜದೆ ರಾಜ್ಯ ಸರ್ಕಾರ ಶಕ್ತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಸಾಧ್ಯವಾದ ಮಟ್ಟಿಗೆ ಜಾರಿಗೆ ತಂದಿದ್ದು ಶ್ಲಾಘನೀಯ ವಿಚಾರ. ಬಂಡವಾಳಶಾಹಿ ಅರ್ಥವ್ಯವಸ್ಥೆಗೆ ತೆರೆದುಕೊಂಡಿರುವ ವ್ಯವಸ್ಥೆಯಲ್ಲಿ, ಚಿಕ್ಕ ಮಟ್ಟದಲ್ಲಾದರೂ ಮಾಡುವ ಇಂತಹ ಜನಪಯೋಗಿ ಕಾರ್ಯಕ್ರಮಗಳ ಹಿಂದೆ ಮತರಾಜಕಾರಣದ ಉದ್ದೇಶಗಳು ಇದ್ದರೂ ಸರ್ಕಾರಗಳು, ಅವುಗಳು ಬೀರುವಂತಹ ಪರಿಣಾಮಗಳನ್ನು ಸಮಾಜ ಮುಕ್ತವಾಗಿ ನೋಡುವಂತಾಗಲಿ.
