‘ಈ ದಿನ’ ಸಂಪಾದಕೀಯ | ಶಿವಮೊಗ್ಗ ವಿಮಾನ ನಿಲ್ದಾಣ ಬಹಿರಂಗ ಸಭೆ; ಖಾಸಗಿ ಬಸ್‌ನವರಿಗೆ ಯಡಿಯೂರಪ್ಪನವರೇ ಹಣ ಪಾವತಿಸಲಿ

Date:

Advertisements

ಸರ್ಕಾರಿ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳಂತೆ ನಡೆಸುವ ಪರಿಪಾಠ ಚಾಲ್ತಿಗೆ ಬರಬೇಕು. ಒಂದು ವೇಳೆ, ಸರ್ಕಾರಿ ಕಾರ್ಯಕ್ರಮಗಳು ಯಾವುದೇ ಪಕ್ಷದ ಕಾರ್ಯಕ್ರಮಗಳಾಗಿ ಬದಲಾದರೆ, ಆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ರಾಜಕೀಯ ಪಕ್ಷವೇ ಭರಿಸಬೇಕು

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ತಿಂಗಳು ದಾಟಿದೆ. ಚುನಾವಣೆ ವೇಳೆ ಹೊಕ್ಕಿದ್ದ ತರಹೇವಾರಿ ‘ಭೂತಗಳು’ ಬಹುಶಃ ಇಷ್ಟೊತ್ತಿಗೆ ಎಲ್ಲರ ತಲೆಯೊಳಗಿಂದ ಕಾಣೆಯಾಗಿರಬಹುದು. ಆದರೆ, ಚುನಾವಣಾ ಪ್ರಚಾರದ ಭಾಗವಾಗಿ ಶಿವಮೊಗ್ಗದಲ್ಲಿ ಉದ್ಘಾಟನೆಯಾದ ವಿಮಾನ ನಿಲ್ದಾಣದ ತೆರೆಮರೆ ಸುದ್ದಿಗಳು ಮಾತ್ರ ಇದೀಗ ಒಂದೊಂದಾಗಿ ಆಚೆ ಬರುತ್ತಿವೆ. ಉದ್ಘಾಟನೆಯಾಗಿ ಮೂರು ತಿಂಗಳು ಕಳೆದರೂ ಒಂದೂ ವಿಮಾನದ ಸುಳಿವಿಲ್ಲ ಎಂಬುದು ಜೂನ್ ಮೊದಲ ವಾರದಲ್ಲಿ ಹೊರಬಿದ್ದ ಸುದ್ದಿ. ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆಂದು ಸುತ್ತಮುತ್ತಲಿಂದ ಜನರನ್ನು ಕರೆತಂದಿದ್ದ ಖಾಸಗಿ ಬಸ್‌ಗಳಿಗೆ ಇನ್ನೂ ಹಣ ನೀಡಿಲ್ಲ ಎಂಬುದು ಜೂನ್ ಎರಡನೇ ವಾರದಲ್ಲಿ ಜಗಜ್ಜಾಹೀರಾದ ಸುದ್ದಿ.

ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣವು ಬಿಜೆಪಿ ನಾಯಕ ಯಡಿಯೂರಪ್ಪ ಕುಟುಂಬದ ರಾಜಕೀಯ ಲಾಬಿಯ ಹೆಗ್ಗುರುತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಆಗಿದ್ದು ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ. ಶಂಕುಸ್ಥಾಪನೆ ಮಾಡಿದ್ದು ಖುದ್ದು ಯಡಿಯೂರಪ್ಪ. ಅನುದಾನ ಬಿಡುಗಡೆಯಾಗಿ ಕಾಮಗಾರಿಯೂ ಆರಂಭವಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳು ಅತ್ತ ಆಸಕ್ತಿ ತೋರಲಿಲ್ಲ. 2019ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ, ನಿಲ್ದಾಣ ಕಾಮಗಾರಿಯ ಉಸ್ತುವಾರಿಯನ್ನು ತಮ್ಮ ಮಗ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರರಿಗೆ ವಹಿಸುತ್ತಾರೆ. ಕಾಮಗಾರಿ ಮುಗಿಯುತ್ತ ಬರುತ್ತಿದ್ದಂತೆ, ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರನ್ನೇ ಇಡಬೇಕೆಂಬ ‘ಕೃತಕ ಒತ್ತಡ’ ಸೃಷ್ಟಿಸಲಾಗುತ್ತದೆ. ಸಾರ್ವಜನಿಕರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಈ ಅವಾಂತರ ತಪ್ಪುತ್ತದೆ. 2023ರ ಫೆಬ್ರವರಿ 27ರಂದು ಇದೇ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನ ನಿಲ್ದಾಣ ಉದ್ಘಾಟನೆಯಾಗುತ್ತದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮದ ಕೇಂದ್ರಬಿಂದು. ಅಷ್ಟರಲ್ಲಾಗಲೇ ರಾಜ್ಯ ರಾಜಕಾರಣದಲ್ಲಿ ಬದಿಗೆ ಸರಿಸಲ್ಪಟ್ಟಿದ್ದ ಯಡಿಯೂರಪ್ಪ, ಹೆಚ್ಚು ಜನರನ್ನು ಸೇರಿಸಿ ತಮ್ಮ ಶಕ್ತಿ ಪ್ರದರ್ಶಿಸುವ ಹಂಚಿಕೆ ಹೂಡುತ್ತಾರೆ. ಪರಿಣಾಮವಾಗಿ, 1,200ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಮತ್ತು 301 ಖಾಸಗಿ ಬಸ್‌ಗಳಲ್ಲಿ ಕಾರ್ಯಕ್ರಮಕ್ಕೆ ಜನರನ್ನು ತುಂಬಿಕೊಂಡು ಬರಲಾಗುತ್ತದೆ. ಇದೆಲ್ಲಕ್ಕೂ ಖರ್ಚು ಮಾಡಿದ್ದು ಶಿವಮೊಗ್ಗ ಜಿಲ್ಲಾಡಳಿತ. 301 ಖಾಸಗಿ ಬಸ್‌ಗಳಿಗೆ ಸೇರಬೇಕಾದ ಬಾಕಿ ಹಣವನ್ನೂ ಜಿಲ್ಲಾಡಳಿತವೇ ಪಾವತಿಸಬೇಕಿದೆ.

Advertisements
ವಿಮಾನ ನಿಲ್ದಾಣ

ನಿಜ… ಇದು ಸರ್ಕಾರವೇ ನಿರ್ವಹಣೆ ಮಾಡಲಿದ್ದ ವಿಮಾನ ನಿಲ್ದಾಣ. ಹಾಗಾಗಿ, ಉದ್ಘಾಟನಾ ಕಾರ್ಯಕ್ರಮದ ಖರ್ಚನ್ನು ಸರ್ಕಾರವೇ ನೋಡಿಕೊಳ್ಳುತ್ತದೆ ಎಂಬುದು ಸರಳ ಲೆಕ್ಕಾಚಾರ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಉಪಯೋಗಿಸಿಕೊಂಡ ನಂತರವೂ ಈ ಕಾರ್ಯಕ್ರಮ ಹೇಗೆ ಸರ್ಕಾರಿ ಕಾರ್ಯಕ್ರಮವಾಗಿ ಉಳಿಯುತ್ತದೆ? 1,500ಕ್ಕೂ ಹೆಚ್ಚು ಬಸ್‌ಗಳಲ್ಲಿ ಸುತ್ತಮುತ್ತಲಿನ ಜನರನ್ನು ತುಂಬಿಕೊಂಡು ಬಂದೇ ಸರ್ಕಾರಿ ಕಾರ್ಯಕ್ರಮವೊಂದನ್ನು ಮಾಡಬೇಕೆಂದು ಯಾವ ಘನಂದಾರಿ ನಿಯಮ ಹೇಳುತ್ತದೆ? ಹೀಗೆ ಬಸ್‌ಗಳಲ್ಲಿ ಜನರನ್ನು ಕರೆತಂದು ಮಾಡುವ ಕಾರ್ಯಕ್ರಮಗಳು ಸರ್ಕಾರಿ ಕಾರ್ಯಕ್ರಮ ಎನಿಸಿಕೊಳ್ಳುತ್ತವೋ ಅಥವಾ ‘ರಾಜಕೀಯ ಶಕ್ತಿ ಪ್ರದರ್ಶನದ ಸಮ್ಮೇಳನ’ ಎನಿಸಿಕೊಳ್ಳುತ್ತವೋ?

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತನ್ನ ಅವಧಿಯುದ್ದಕ್ಕೂ ನೇರ ಆಡಳಿತ ನಡೆಸುವ ಬದಲು ಪಕ್ಷ ರಾಜಕಾರಣ ಮಾಡಿದ್ದೇ ಹೆಚ್ಚು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಸ್ವರೂಪ ಇದಕ್ಕೆ ಸ್ಪಷ್ಟ ನಿದರ್ಶನ. ಒಂದೆಡೆ, ಸಾರ್ವಜನಿಕ ಹಣ ಬಳಸಿಕೊಂಡು ಪ್ರಧಾನಿ, ಮುಖ್ಯಮಂತ್ರಿ ಎಂಬ ಸ್ಥಾನಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ಪ್ರಚಾರ ನಡೆಸಲಾಗುತ್ತಿದೆ; ಇವರ ಭದ್ರತೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಇನ್ನೊಂದೆಡೆ, ಹೀಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರ್ಕಾರಕ್ಕೆ ಸರ್ಕಾರವೇ ರಾಜಕೀಯ ಪಕ್ಷವಾಗಿ ಬದಲಾಗಿ, ಸರ್ಕಾರಿ ಹಣವನ್ನು ಪಕ್ಷ ರಾಜಕಾರಣಕ್ಕೆ ಮುಲಾಜಿಲ್ಲದೆ ಸುರಿಯತೊಡಗುತ್ತದೆ. 2013ರಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಕರ್ನಾಟಕ ಸರ್ಕಾರಕ್ಕೆ ತಗುಲಿದ್ದು 160 ಕೋಟಿ ರೂಪಾಯಿ. 2018ರ ಚುನಾವಣೆ ವೇಳೆಗೆ ಈ ವೆಚ್ಚ 394 ಕೋಟಿ ರೂಪಾಯಿ ತಲುಪಿತ್ತು. 2023ರ ಚುನಾವಣೆಗೆ ಸರ್ಕಾರ ಖರ್ಚು ಮಾಡಬೇಕಾಗಿ ಬಂದದ್ದು 511 ಕೋಟಿ ರೂಪಾಯಿ. ಚುನಾವಣೆ ನಡೆಸುವುದು ಹೀಗೆ ಕಡು ದುಬಾರಿಯಾಗಿರುವ ಕಾಲದಲ್ಲಿ, ಸರ್ಕಾರಿ ಹಣವನ್ನು ಪಕ್ಷ ರಾಜಕಾರಣಕ್ಕೆ, ರಾಜಕೀಯ ಸಮ್ಮೇಳನಗಳಿಗೆಲ್ಲ ಬಳಸಿಕೊಂಡರೆ ಏನರ್ಥ?

ಈದಿನ.ಕಾಮ್ ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಸರ್ಕಾರಿ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳಂತೆ ನಡೆಸುವ ಪರಿಪಾಠ ಚಾಲ್ತಿಗೆ ಬರಬೇಕು. ಒಂದು ವೇಳೆ, ಸರ್ಕಾರಿ ಕಾರ್ಯಕ್ರಮಗಳು ಯಾವುದೇ ಪಕ್ಷದ ಕಾರ್ಯಕ್ರಮಗಳಾಗಿ ಬದಲಾದರೆ, ಆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ರಾಜಕೀಯ ಪಕ್ಷವೇ ಭರಿಸಬೇಕು. ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವುದು ಕಡ್ಡಾಯವಾಗಬೇಕು. ಜೊತೆಗೆ, ಚುನಾವಣೆ ಸಮಯದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಮುಂತಾದ ಯಾವುದೇ ಮಹನೀಯರು ಪ್ರಚಾರ ಮಾಡಿದರೂ, ಅದಕ್ಕೆ ತಗಲುವ ಸಂಪೂರ್ಣ ಖರ್ಚನ್ನು ಆಯಾ ರಾಜಕೀಯ ಪಕ್ಷಗಳೇ ತುಂಬಬೇಕು. ಇದಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸುವ ಅಗತ್ಯವಿದ್ದು, ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಲಿ. ಸದ್ಯಕ್ಕೆ, ಶಿವಮೊಗ್ಗ ವಿಮಾನ ನಿಲ್ದಾಣ ಪ್ರಕರಣದಲ್ಲಿ ಖಾಸಗಿ ಬಸ್‌ನವರಿಗೆ ಕೊಡಬೇಕಿರುವ ಬಾಕಿ ಹಣವನ್ನು ಯಡಿಯೂರಪ್ಪನವರೇ ಪಾವತಿಸುವ ಮೂಲಕ ಈ ವಿಷಯದಲ್ಲಿ ಮೇಲ್ಪಂಕ್ತಿ ಹಾಕಿಕೊಡಲಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X