ಈ ದಿನ ಸಂಪಾದಕೀಯ | ರಾಷ್ಟ್ರಪತಿ ಮುರ್ಮು ‘ಘಾಸಿʼಗೊಳ್ಳಲು ಕೋಲ್ಕತ್ತ ಪ್ರಕರಣದ ತನಕ ಕಾಯಬೇಕಿತ್ತೇ?

Date:

Advertisements

ಕೋಲ್ಕತ್ತದ ತರಬೇತಿ ನಿರತ ವೈದ್ಯೆ ಮೇಲಿನ ಅತ್ಯಾಚಾರದಿಂದ ದೇಶವೇ ಆಘಾತಗೊಂಡಿದೆ ಎಂದು ಹೇಳುವಾಗ ಮುರ್ಮು ಅವರಿಗೆ ಈ ಹಿಂದೆ ಮಹಿಳೆಯರ ಮೇಲಾದ ಭೀಕರ ಅತ್ಯಾಚಾರ ಪ್ರಕರಣಗಳು ಆಘಾತ ತಂದಿಲ್ಲ ಎಂದು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕೇ?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಬಂಗಾಳದ ವೈದ್ಯೆಯ ಅತ್ಯಾಚಾರ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿ ಕಳವಳ ವ್ಯಕ್ತಪಡಿಸಿದ್ದಾರೆ. ಬುಧವಾರ ಪಿಟಿಐಗೆ “Women’s Safety:Enough is Enough” ಎಂಬ ಶೀರ್ಷಿಕೆಯ ಲೇಖನ ಬರೆದಿರುವ ಅವರು, “ಮಹಿಳೆಯರ ವಿರುದ್ಧದ ಕೃತ್ಯಗಳನ್ನು ಬುಡ ಸಮೇತ ಕಿತ್ತು ಹಾಕಲು ಆತ್ಮಾವಲೋಕನ ಅಗತ್ಯ” ಎಂದಿದ್ದಾರೆ. ದೆಹಲಿಯಲ್ಲಿ ಹನ್ನೆರಡು ವರ್ಷಗಳ ಹಿಂದೆ ನಡೆದ ನಿರ್ಭಯ ಪ್ರಕರಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಕೋಲ್ಕತ್ತದ ವೈದ್ಯೆ ಮೇಲಿನ ಭೀಕರ ಅತ್ಯಾಚಾರ ಪ್ರಕರಣದ ಬಗ್ಗೆ ಅವರು ಲೇಖನ ಬರೆದು ಖಂಡಿಸಿರುವುದು ಸಕಾಲಿಕ. ಆದರೆ, ಅವರು ಈ ದೇಶದ ಮೊದಲ ಪ್ರಜೆಯಾಗಿ ಸರ್ಕಾರಕ್ಕೆ ನಿರ್ದೇಶನ ನೀಡುವ ಸ್ಥಾನದಲ್ಲಿ ಎರಡು ವರ್ಷಗಳಿಂದ ಇದ್ದಾರೆ. ಇದೇ ರೀತಿಯ ಕಾಳಜಿಯನ್ನು ಮಣಿಪುರ, ಮಹಾರಾಷ್ಟ್ರ, ಬದ್ಲಾಪುರ್, ಉತ್ತರಾಖಂಡ, ಉತ್ತರಪ್ರದೇಶದ ಉನ್ನಾವ್, ಹಾಥರಸ್‌ ಪ್ರಕರಣಗಳಲ್ಲಿ ತೋರಿಲ್ಲ ಯಾಕೆ ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಯೂ ಸಕಾಲಿಕವೇ ಆಗಿದೆ.

ಮುರ್ಮು ಅವರು ರಾಷ್ಟ್ರಪತಿಯಂತಹ ಈ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿದ ಬುಡಕಟ್ಟು ಸಮುದಾಯದ ಮೊದಲ ಮತ್ತು ದೇಶದ ಎರಡನೇ ಮಹಿಳೆ. ಮೋದಿ ಸರ್ಕಾರ ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬುಡಕಟ್ಟು ಸಮುದಾಯದ ನಾಯಕಿಯನ್ನು ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿದರೂ ಈ ದೇಶದ ಜನ ಪಕ್ಷಾತೀತವಾಗಿ ಬೆಂಬಲಿಸಿದ್ದರು. ಮುರ್ಮು ರಾಷ್ಟ್ರಪತಿಯಾಗಿ ಎರಡು ವರ್ಷಗಳಾಗಿವೆ. ಈ ಮಧ್ಯೆ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ದಲಿತರ ಮೇಲೆ ಅಮಾನವೀಯ ಹಲ್ಲೆಗಳು, ಮೂತ್ರ ಕುಡಿಸುವುದು, ಎಂಜಲು ನೆಕ್ಕಿಸುವುದು, ನಾಲಿಗೆಯಿಂದ ಬೂಟು ನೆಕ್ಕುವಂತೆ ಹಿಂಸಿಸುವ ಲೆಕ್ಕವಿಲ್ಲದಷ್ಟು ಪ್ರಕರಣಗಳು ನಡೆದಿವೆ. ಮಹಿಳೆಯರನ್ನು ಬೆತ್ತಲೆಗೊಳಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ.

Advertisements

ಉತ್ತರ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಇಬ್ಬರು ದಲಿತ ಸೋದರಿಯರನ್ನು ಅತ್ಯಾಚಾರಗೈದು ಮರಕ್ಕೆ ನೇಣು ಹಾಕಲಾಗಿತ್ತು. ಅದೇ ತರಹದ ಇನ್ನೊಂದು ಪ್ರಕರಣ ಸೋಮವಾರ (ಆ. 26) ವರದಿಯಾಗಿದೆ. 15-17 ವಯಸ್ಸಿನ ಇಬ್ಬರು ದಲಿತ ಬಾಲಕಿಯರು ರಾತ್ರಿ ಭಗವತೀಪುರ ಗ್ರಾಮದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಹೋದವರು ಮನೆಗೆ ವಾಪಸ್ಸಾಗಿರಲಿಲ್ಲ. ಮರುದಿನ ಬೆಳಿಗ್ಗೆ ಮಾವಿನ ಮರದಲ್ಲಿ ಇಬ್ಬರ ಶವಗಳು ನೇತಾಡುತ್ತಿದ್ದವು. ಬಾಲಕಿಯರನ್ನು ಅತ್ಯಾಚಾರ ಮಾಡಿ, ಕೊಂದು ಮರಕ್ಕೆ ನೇಣು ಹಾಕುವುದು ಉತ್ತರ ಪ್ರದೇಶದಲ್ಲಿ ಮಾಮೂಲಿಯಾಗಿದೆ. ಆಗ್ರಾದಲ್ಲಿ ಹಿರಿಯ ಸಹಪಾಠಿಯಿಂದ ಅತ್ಯಾಚಾರ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಲು ಹದಿನಾರು ದಿನ ಅಲೆದರೂ ಪೊಲೀಸರು ದೂರು ದಾಖಲಿಸಿಲ್ಲ ಎಂದು ಅರೆಬೆತ್ತಲಾಗಿ ಪ್ರತಿಭಟಿಸಿದ್ದು ದೇಶಕ್ಕೆ ಘಾಸಿಯಾಗುವ ಸಂಗತಿ ಅಲ್ಲವೇ? ಇವೆಲ್ಲವೂ ದೇಶದ ಆತ್ಮಸಾಕ್ಷಿಯನ್ನು ಕಲಕುವ ಘಟನೆಗಳೇ ಆಗಿವೆ. ವೈದ್ಯೆಯ ಮೇಲಾದರೂ ಅಷ್ಟೇ, ಕಾರ್ಮಿಕಳ ಮೇಲಾದರೂ ಅಷ್ಟೇ…, ಎರಡೂ ಜೀವಕ್ಕೂ ಘನತೆಯಿದೆ. ನೋವು ಸಂಕಟ ಎರಡೂ ಕುಟುಂಬಗಳದ್ದು ಒಂದೇ ತೂಕದ್ದು.

ಉತ್ತರಪ್ರದೇಶದ ಸಂಸದ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಒಂದು ತಿಂಗಳ ಕಾಲ ದೇಶಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳು ಬೀದಿಯಲ್ಲಿ ಪ್ರತಿಭಟನೆ ಮಾಡಿದ್ದರು. ಉನ್ನಾವೋ, ಹಾಥರಸ್‌ನಲ್ಲಿ ಚಿಕ್ಕ ವಯಸ್ಸಿನ ಯುವತಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೊಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಗಲೂ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಸಾಮೂಹಿಕ ಅತ್ಯಾಚಾರಗಳಾಗುತ್ತಿವೆ. ಆದರೆ ದೇಶದ ಪ್ರಥಮ ಪ್ರಜೆ ಅದರಲ್ಲೂ ತಾಯಿ ಸ್ಥಾನದಲ್ಲಿರುವ ಮುರ್ಮು ಅವರು ಯಾವ ಪ್ರಕರಣದಲ್ಲೂ ಕಳವಳಗೊಂಡಿಲ್ಲ. ಒಂದೇ ಒಂದು ಖಂಡನೆಯ ಸಂದೇಶ ನೀಡಿಲ್ಲ. ಇತ್ತೀಚೆಗಷ್ಟೇ ಸಂಸತ್ತಿನ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಿದ ಅವರು ಮೋದಿ ಸರ್ಕಾರ ನಾರೀಶಕ್ತಿಗೆ ಬಲ ತುಂಬಿದೆ ಎಂದಿದ್ದರು. ಆದರೆ, ಮೋದಿ ಸರ್ಕಾರ ಅತ್ಯಾಚಾರ ಸಂತ್ರಸ್ತರ ಪುನರ್ವಸತಿಗಾಗಿ ಇರುವ ʼನಿರ್ಭಯ ನಿಧಿʼಯ ಹಣವನ್ನೇ ಸರಿಯಾಗಿ ಬಳಸುತ್ತಿಲ್ಲ. ಈ ಅರಿವು ರಾಷ್ಟ್ರಪತಿ ಮುರ್ಮು ಅವರಿಗೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಮೋದಿ ಸರ್ಕಾರ ದೇಶದ ಮಹಿಳೆಯರ ಸುರಕ್ಷತೆಗೆ ಯಾವ ಕಾನೂನು ಮಾಡಿದೆ, ಯಾವ ಕಠಿಣ ಕ್ರಮ ಜರುಗಿಸಿದೆ ಎಂದು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಮಣಿಪುರದಲ್ಲಿ ಒಂದೂವರೆ ವರ್ಷಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಶುರುವಾಗಿದ್ದ 2023ರ ಮೇನಲ್ಲಿ. ಆ ಹಿಂಸಾಚಾರದಲ್ಲಿ ಪ್ರಬಲ ಮೈತೇಯಿ ಸಮುದಾಯದವರು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲುಗೊಳಿಸಿ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಬಯಲಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಹಾಕಿದ್ದರು. ಯುವಕರು ಇಬ್ಬರು ಯುವತಿಯರ ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ಹಿಂಸಿಸುವ ದೃಶ್ಯ ಸಾರ್ವಜನಿಕಗೊಂಡು ಡಬಲ್‌ ಎಂಜಿನ್‌ ಸರ್ಕಾರದ ವೈಫಲ್ಯವನ್ನು, ಮೋದಿಯವರ ಮಹಾ ಮೌನವನ್ನು ಜಗತ್ತಿಗೆ ತೋರಿಸಿತ್ತು. ರಾಷ್ಟ್ರಪತಿ ಮುರ್ಮು ಅವರು ಈ ಪ್ರಕರಣದ ಬಗ್ಗೆ ಮೋದಿ ಸರ್ಕಾರವನ್ನು ಎಚ್ಚರಿಸಲಿಲ್ಲ, ಅಸಮಾಧಾನ ಹೊರಹಾಕಿಲ್ಲ. ಪಿಟಿಐಗೆ ಲೇಖನ ಬರೆದು ಖಂಡಿಸುವ ಅವಕಾಶ ಆಗಲೂ ಇತ್ತು. ಅಷ್ಟೇ ಏಕೆ ಗುಜರಾತಿನ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳನ್ನು ಸನ್ನಡತೆಯ ಹೆಸರಿನಲ್ಲಿ ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದಾಗ ದ್ರೌಪದಿ ಮುರ್ಮು ಈ ದೇಶದ ರಾಷ್ಟ್ರಪತಿಯಾಗಿದ್ದರು! ಈ ಎಲ್ಲ ಸಂದರ್ಭಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಮುರ್ಮು ಅವರು ಮೌನವಹಿಸಿದ್ದು ಅಕ್ಷಮ್ಯ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸದ ಮುರ್ಮು ಅವರ ನಡವಳಿಕೆ ನಿಜಕ್ಕೂ ಮಹಿಳೆಯರ ಘನತೆಗೆ ಮಾಡಿದ ಅಪಚಾರ.

ಕೋಲ್ಕತ್ತದ ವೈದ್ಯೆ ಮೇಲಿನ ಅತ್ಯಾಚಾರದಿಂದ ದೇಶವೇ ಆಘಾತಗೊಂಡಿದೆ ಎಂದು ಹೇಳುವಾಗ ಮುರ್ಮು ಅವರಿಗೆ ಈ ಹಿಂದಿನ ಮಹಿಳೆಯರ ಮೇಲಾದ ಭೀಕರ ಅತ್ಯಾಚಾರ ಪ್ರಕರಣಗಳು ಆಘಾತ ತಂದಿಲ್ಲ ಎಂದು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕೇ? ಛತ್ತೀಸ್‌ಗಡದಲ್ಲಿ ಆದಿವಾಸಿಗಳ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಯೋಗಿ ಸರ್ಕಾರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಮನೆಗಳನ್ನು ಬುಲ್ಡೋಜರ್‌ ಹರಿಸಿ ಧ್ವಂಸ ಮಾಡುತ್ತಿದೆ. ಅಲ್ಲೊಬ್ಬಳು ತಾಯಿ, ಸೋದರಿ, ಪತ್ನಿ, ಮಗಳ ಬದುಕು ಬೀದಿಪಾಲಾಗುತ್ತಿದೆ. ಇಂತಹ ಸರ್ಕಾರಿ ಪ್ರೇರಿತ ಕ್ರೌರ್ಯವನ್ನು ಖಂಡಿಸಲಾರದಷ್ಟು, ಬಲಹೀನ ಮಹಿಳೆಯೊಬ್ಬರು ಇಷ್ಟು ದೊಡ್ಡ ದೇಶದ ರಾಷ್ಟ್ರಪತಿಯಾಗಿರುವುದು ವಿಷಾದಪಡಬೇಕಾದ ಸಂಗತಿ. ರಾಷ್ಟ್ರಪತಿ ಮುರ್ಮು ‘ಘಾಸಿʼಗೊಳ್ಳಲು ಕೋಲ್ಕತ್ತ ಪ್ರಕರಣದ ತನಕ ಕಾದಿದ್ದು ದುರಂತವೇ ಸರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X