ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ, ಗೃಹಜ್ಯೋತಿಗೆ 10,100 ಕೋಟಿ ರೂ. ಅನುದಾನ, ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ. ಆ ಮೂಲಕ ಗ್ಯಾರಂಟಿ ಫಲಾನುಭವಿಗಳಿಗೆ ಇದ್ದ ಆತಂಕ ದೂರವಾಗಿದೆ. ಅಪಪ್ರಚಾರ ಮಾಡಲು ಕಾಯುತ್ತಿದ್ದ ವಿಪಕ್ಷಗಳಿಗೆ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡದಿರುವ ಗ್ಯಾರಂಟಿ ಕೊಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಇಂದು 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ಸಮಾಜದಲ್ಲಿ ಬಡವರ ನೋವನ್ನು ನಿವಾರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅವು ಜನತೆಗೆ ಉಚಿತ ಉಡುಗೊರೆಗಳಲ್ಲ ಎಂದು ಹೇಳಿದ್ದಾರೆ.
ಪಂಚ ಗ್ಯಾರಂಟಿಗಳು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಆತ್ಮವಿಶ್ವಾಸದಿಂದ ಸಾರಿದ್ದಾರೆ. ‘ಗ್ಯಾರಂಟಿ ಯೋಜನೆಗಳ ಹಿಂದೆ ಬಡತನದ ನೋವಿದೆ, ಬಡತನದ ಹಿಂಸೆ ಇದೆ, ಮಹಿಳೆಯರಲ್ಲಿ ಮಡುಗಟ್ಟಿದ ನೋವುಗಳಿವೆ, ಅಸಮಾನ ಭಾರತ ಪರಿಕಲ್ಪನೆ ಇದೆ’ ಎಂಬ ನಾಡಿನ ಖ್ಯಾತ ವಿದ್ವಾಂಸರಾಗಿದ್ದ ಮುಜಾಫರ್ ಅಸ್ಸಾದಿಯವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.
ಲಭ್ಯ ಸಂಪನ್ಮೂಲಗಳನ್ನು ಸರ್ವರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆರ್ಥಿಕ ಅಭಿವೃದ್ಧಿ ಮತ್ತು ಜನಕಲ್ಯಾಣಗಳ ನಡುವೆ ಸಮತೋಲನ ಸಾಧಿಸಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಕ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು ಎಂಬ ಕವಿ ಗೋಪಾಲ ಕೃಷ್ಣ ಅಡಿಗರ ಕವಿತೆಯ ಸಾಲುಗಳನ್ನು ನೆನೆದಿದ್ದಾರೆ.
ಬಲಿಷ್ಠವಾದುದು ಮಾತ್ರ ಬದುಕುತ್ತದೆ ಎಂಬುದು ಮೃಗೀಯ ತತ್ವ. ಸಾಮಾಜಿಕ ನ್ಯಾಯದ ತಳಹದಿ ಭದ್ರಗೊಳ್ಳುತ್ತಲೇ ಇರಬೇಕು ಎನ್ನುವುದು ನಮ್ಮ ಸರ್ಕಾರದ ದೃಢ ಸಂಕಲ್ಪ ಎಂದಿದ್ದಾರೆ.
ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ, ಗೃಹಜ್ಯೋತಿಗೆ 10,100 ಕೋಟಿ ರೂ. ಅನುದಾನ, ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ. ಆ ಮೂಲಕ ಗ್ಯಾರಂಟಿ ಫಲಾನುಭವಿಗಳಿಗೆ ಇದ್ದ ಆತಂಕ ದೂರವಾಗಿದೆ. ಅಪಪ್ರಚಾರ ಮಾಡಲು ಕಾಯುತ್ತಿದ್ದ ವಿಪಕ್ಷಗಳಿಗೆ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡದಿರುವ ಗ್ಯಾರಂಟಿ ಕೊಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕರ್ನಾಟಕ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಮಹತ್ವದ ಘೋಷಣೆಗಳಲ್ಲಿ ಒಂದಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚನೆಯಾದ ಆರು ತಿಂಗಳೊಳಗೆ ಜಾರಿಗೆ ತರಲಾಗಿತ್ತು. ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಜಾರಿಗೆ ತಂದಿತ್ತು. ಹತ್ತು ಕೇಜಿ ಅಕ್ಕಿ ಕೊಡುವುದು ಅಸಾಧ್ಯವಾದ ಕಾರಣ ಐದು ಕೇಜಿ ಅಕ್ಕಿಯ ಹಣವನ್ನು ಖಾತೆಗಳಿಗೆ ಹಾಕುವ ಮಾರ್ಗ ಕಂಡುಕೊಂಡಿದ್ದರು. ಎರಡು ತಿಂಗಳೊಳಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ, ನಂತರ ಗೃಹಿಣಿಯರಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಹಾಗೂ ಯುವನಿಧಿ ಯೋಜನೆಯನ್ನೂ ಜಾರಿಗೆ ತಂದಿತ್ತು.
ಯಥಾ ಪ್ರಕಾರ ವಿರೋಧ ಪಕ್ಷಗಳು, ಕೆಲ ಮಾಧ್ಯಮಗಳು ಉಚಿತ ಗ್ಯಾರಂಟಿ ಯೋಜನೆಯನ್ನು ಗೇಲಿ ಮಾಡುತ್ತ ಕೊಂಕು ಹುಡುಕಲು ಯತ್ನಿಸಿದ್ದವು. ರಾಜ್ಯವನ್ನು ಬಾಂಗ್ಲಾದೇಶ, ಶ್ರೀಲಂಕಾದ ತರ ಮಾಡ್ತಾರೆ. ರಾಜ್ಯ ಬರ್ಬಾದ್ ಆಗ್ತದೆ ಎಂದು ಮೋದಿಯಾದಿಯಾಗಿ ಎಲ್ಲರೂ ಅಪಪ್ರಚಾರಕ್ಕೆ ಇಳಿದಿದ್ದರು. ವಾಸ್ತವದಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಎಲ್ಲ ಪಕ್ಷದ ಬೆಂಬಲಿಗರು, ಎಲ್ಲ ಜಾತಿ ಧರ್ಮದ ಫಲಾನುಭವಿಗಳು ಪಡೆಯುತ್ತಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗ್ಯಾರಂಟಿಯನ್ನು ಗೇಲಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಳುಗೋಯ್ತು ಎನ್ನುತ್ತಿರುವಾಗಲೇ ಸಾವಿರಾರು ಹೊಸ ಬಸ್‌ಗಳನ್ನು ಖರೀದಿಸಿತ್ತು ಸರ್ಕಾರ. ಗೃಹಲಕ್ಷ್ಮಿ ಹಣದಿಂದ ಮಕ್ಕಳ ಶಾಲಾ ಫೀಸು ಕಟ್ಟಿದ, ಗೃಹೋಪಯೋಗಿ ವಸ್ತು ಖರೀದಿಸಿದ, ಆಪರೇಷನ್ ಮಾಡಿಸಿಕೊಂಡ, ಕೊಳವೆ ಬಾವಿ ತೋಡಿಸಿದ, ವ್ಯಾಪಾರ ಶುರುಮಾಡಿದ ಕತೆಗಳನ್ನು ಫಲಾನುಭವಿ ಮಹಿಳೆಯರು ಹೇಳಿಕೊಂಡರು.
ಆದರೆ, ಗೃಹಲಕ್ಷ್ಮಿ ಮತ್ತು ಐದು ಕೇಜಿ ಅಕ್ಕಿಯ ಹಣ ಪ್ರತಿ ತಿಂಗಳೂ ಖಾತೆಗಳಿಗೆ ಜಮೆ ಮಾಡುವುದರಲ್ಲಿ ಎರಡು ತಿಂಗಳು ವಿಳಂಬವಾಗುವುದನ್ನೇ ಕಾಯುತ್ತಿದ್ದ ವಿಪಕ್ಷಗಳು ಸರ್ಕಾರವನ್ನು ನಾನಾ ರೀತಿಯಲ್ಲಿ ತಿವಿಯಲು ಶುರು ಮಾಡಿದ್ದವು.
ಗ್ಯಾರಂಟಿಗೆ ಸರ್ಕಾರದಲ್ಲಿ ಹಣ ಇಲ್ಲ, ಸರ್ಕಾರದ ಖಜಾನೆ ಖಾಲಿಯಾಗಿದೆ, ಭಿಕ್ಷೆ ಎತ್ತುವ ಪರಿಸ್ಥಿತಿ ಬಂದಿದೆ ಎಂಬ ವಿಪಕ್ಷಗಳ ನಿರಂತರ ಟೀಕೆಯಿಂದ ಬೇಸತ್ತ ಕಾಂಗ್ರೆಸ್ ನಾಯಕರೂ ಗ್ಯಾರಂಟಿ ಯೋಜನೆಗಳನ್ನು ಮರು ಪರಿಶೀಲಿಸುವ ಮಾತುಗಳನ್ನಾಡಿದ್ದರು. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡಾ ಪುನರ್ ಪರಿಶೀಲಿಸುವ ಮಾತಾಡಿದ್ದರು. “ಎಲ್ಲರಿಗೂ ಫ್ರೀ ಕೊಡೋಕಾಗುತ್ತಾ” ಎಂದಿದ್ದರು. ಕೆಲ ಶಾಸಕರು ಮಂತ್ರಿಗಳು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಗೆ ಹಣ ಇಲ್ಲ ಎಂದು ಬೇಸರ ಹೊರ ಹಾಕಿದ್ದೂ ಇದೆ. ಈ ಎಲ್ಲ ಕಾರಣಗಳಿಂದಾಗಿ ಈ ಬಜೆಟ್‌ನಲ್ಲಿ ಗ್ಯಾರಂಟಿಗೆ ‘ಆಪರೇಷನ್’ ಆಗುವ ಅನುಮಾನ ಎಲ್ಲರಿಗೂ ಇತ್ತು. ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಸೀಮಿತ ಮಾಡಬಹುದು, ಎಪಿಎಲ್‌ನವರನ್ನು ಹೊರಗಿಡಬಹುದು, ಇನ್ನೂರು ಯೂನಿಟ್ ಉಚಿತ ವಿದ್ಯುತ್ ಅನ್ನು ನೂರಕ್ಕೆ ಮಿತಿಗೊಳಿಸಬಹುದು ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ ಇಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಯಥಾಸ್ಥಿತಿ ಕಾಪಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಿಂದಿನಂತೆ ಐವತ್ತು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ.
ಬಡ ಕುಟುಂಬಗಳನ್ನು ಮೇಲೆತ್ತುವ ಭಾಗವಾಗಿ ಯಾವುದೇ ಸರ್ಕಾರ ಇಂತಹ ಉಚಿತ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು ಅನಿವಾರ್ಯ. ಆದರೆ, ಸಮರ್ಪಕವಾಗಿ ಜಾರಿ ಮಾಡುವುದು ಕೂಡಾ ಅಷ್ಟೇ ಮುಖ್ಯ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಯಿಂದಾಗಿ ಬಡ ದಿನಗೂಲಿಗಳು, ಮನೆಗೆಲಸ ಮಾಡುವ, ಫ್ಯಾಕ್ಟರಿಗಳಲ್ಲಿ ಕಾರ್ಮಿಕರಾಗಿ ದುಡಿಯುವ, ಸಣ್ಣಪುಟ್ಟ ವ್ಯಾಪಾರ ಮಾಡಿ ಮನೆ ನಡೆಸುವ ಮಹಿಳೆಯರ ಕೈಯಲ್ಲಿ ದುಡಿಮೆಯ ಹಣ ಉಳಿಯುವಂತಾಗಿದೆ. ಇಂತಹ ಮಹಿಳೆಯರ ಪರ್ಸ್ ಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸೇರೋದಂದ್ರೆ ಅದು ಕೊಡುವ ಸ್ಥೈರ್ಯವೇ ಬೇರೆ. ಒಬ್ಬ ಬಡ ಮಹಿಳೆಯ ಕೈಗೆ ಸಿಗುವ ಹಣ ಇಡೀ ಕುಟುಂಬಕ್ಕೆ ವಿನಿಯೋಗವಾಗುತ್ತದೆ. ಉಚಿತ ಅಕ್ಕಿ ಕೊಟ್ಟರೆ ಸಾಕೇ, ಒಂದು ಊಟಕ್ಕೆ ಅದೆಷ್ಟು ವಸ್ತುಗಳು ಬೇಕು! ಅವೆಲ್ಲವನ್ನೂ ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ? ದುಡಿದಿದ್ದೆಲ್ಲ ಊಟಕ್ಕೇ ಆದರೆ, ಉಳಿದ ಅಗತ್ಯಗಳಿಗೆಲ್ಲ ಏನು ಮಾಡಬೇಕು? ಬಡವರ ಮಕ್ಕಳು ಶಿಕ್ಷಣ ಪಡೆಯಬೇಕು, ಒಳ್ಳೆಯ ಆಹಾರ ಸೇವಿಸಬೇಕು, ಚಂದದ ಉಡುಗೆ ತೊಡಬೇಕು, ಅವರಿಗೂ ಸಣ್ಣಪುಟ್ಟ ಆಸೆಗಳಿರುತ್ತವೆ.
ಸದ್ಯ ಬಡವರು ಸ್ವಂತ ಸೂರಿನ ಕನಸೂ ಕಾಣುವಂತಿಲ್ಲ. ಅಂಥದ್ದರಲ್ಲಿ ದಿನದ ಬದುಕನ್ನಾದರೂ ಸಹ್ಯವಾಗಿ ಕಳೆಯುವಂತಾಗಲು ನೆರವಾಗುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ. ಬಡವರಿಗಾಗಿ ಜಾರಿ ಮಾಡಿದ ಉಚಿತ ಯೋಜನೆಗಳನ್ನು ಗೇಲಿ ಮಾಡುವುದು, ನಮ್ಮ ತೆರಿಗೆ ಹಣ ಉಚಿತ ಯೋಜನೆಗಳಿಗಲ್ಲ ಎಂದು ಹೊಟ್ಟೆ ತುಂಬಿದವರು ಟ್ವೀಟ್ ಮಾಡುವುದು ಬಡವರನ್ನು ಹಂಗಿಸುವ ಕೆಲಸ. ಇಂತಹ ಅಪಹಾಸ್ಯಗಳಿಗೆ ಕುಹಕಗಳಿಗೆ ಕಿವಿಕೊಡದೆ ಖಾತ್ರಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಮತ್ತು ಅಭಿವೃದ್ಧಿ ಕೆಲಸಗಳಿಗೆ ವೇಗ ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ.
