ಈ ದಿನ ಸಂಪಾದಕೀಯ | ವಿಪಕ್ಷಕ್ಕೆ ಕನಿಷ್ಠ ಗೌರವವನ್ನೂ ನಿರಾಕರಿಸಿದ ಈ ನಡೆಗೆ ಕ್ಷಮೆಯೇ ಇಲ್ಲ

Date:

Advertisements

ಶಿಷ್ಟಾಚಾರದ ಪ್ರಕಾರ ಉಭಯ ಸದನಗಳ ವಿಪಕ್ಷ ನಾಯಕರಿಗೆ ಮೊದಲ ಸಾಲಿನಲ್ಲಿ ಸ್ಥಾನ ಕೊಡಬೇಕಾಗುತ್ತದೆ. ಆದರೆ, ಐದನೇ ಸಾಲಿನಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಸನ ನೀಡಲಾಗಿತ್ತು.

ದೇಶ ನಿನ್ನೆಯಷ್ಟೇ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದೆ. ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಅವರು 11ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ. ಆದರೆ ಈ ಸಭೆಯಲ್ಲಿ ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿಯವರಿಗೆ ಮೊದಲ ಸಾಲಿನಲ್ಲಿ ಆಸನ ಮೀಸಲಿರಿಸಬೇಕಿದ್ದ ಅಧಿಕಾರಿಗಳು ಐದನೇ ಸಾಲಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಆಸನ ಇರಿಸಿದ್ದು ವಿಪಕ್ಷಗಳನ್ನು ಕೆರಳಿಸಿದೆ. ವಿಪಕ್ಷ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು, ಸಾಂವಿಧಾನಿಕ ಸ್ಥಾನದ ಬಗ್ಗೆ ಕನಿಷ್ಠ ಗೌರವ ಇರುವ ಎಲ್ಲರೂ ಮೋದಿ ಸರ್ಕಾರದ ಈ ನಡೆಯನ್ನು ಖಂಡಿಸಿದ್ದಾರೆ.

ಹತ್ತು ವರ್ಷಗಳಿಂದ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಿ ಯಾವುದೇ ಪಕ್ಷಕ್ಕೆ ಮಾನ್ಯತೆ ಇರಲಿಲ್ಲ. ಆದರೆ ಈ ಸಲ 99 ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್‌ ಅಧಿಕೃತ ಪ್ರತಿಪಕ್ಷವಾಗಿದೆ. ಇಂಡಿಯಾ ಮೈತ್ರಿಕೂಟದಿಂದ ಸಂಸತ್ತಿನ ವಿಪಕ್ಷ ನಾಯಕರಾಗಿ ರಾಯ್‌ ಬರೇಲಿಯ ಸಂಸದ ರಾಹುಲ್‌ ಗಾಂಧಿ ಆಯ್ಕೆಯಾಗಿದ್ದಾರೆ. ವಿಪಕ್ಷ ನಾಯಕನನ್ನು ‘ಶ್ಯಾಡೋ ಪಿ.ಎಂ.’ ಅಥವಾ ಛಾಯಾ ಪ್ರಧಾನಮಂತ್ರಿ’ ಎಂದೇ ಪರಿಗಣಿಸಲಾಗುತ್ತದೆ. ಪ್ರಧಾನಿಗಿರುವಷ್ಟೇ ಅಲ್ಲದಿದ್ದರೂ ಆ ನಂತರದ ಸ್ಥಾನಮಾನ, ಸಮ್ಮಾನ-ಸವಲತ್ತುಗಳಿಗೆ ವಿಪಕ್ಷ ನಾಯಕ ಅರ್ಹರು. ಇದೇನೂ ಮೋದಿ ನೀಡಬೇಕಿರುವ ರಿಯಾಯಿತಿ ಅಥವಾ ಭಿಕ್ಷೆ ಅಲ್ಲ. ಸಂವಿಧಾನವೇ ಗೊತ್ತು ಮಾಡಿರುವ ಸಂಸದೀಯ ಸಮ್ಮಾನ.

Advertisements

ಕೆಂಪು ಕೋಟೆ ಸಭೆಯಲ್ಲಿನ ಈ ನಡೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂಬುದನ್ನಷ್ಟೇ ಅಲ್ಲ ನಿರಂಕುಶ ಪ್ರಭುತ್ವದ ಮನಸ್ಥಿತಿಯನ್ನು ತೋರಿಸುತ್ತದೆ. ಚುನಾವಣಾ ರಾಜಕಾರಣದ ಚಕ್ರ ಸುತ್ತುತ್ತಲೇ ಇರುತ್ತದೆ. ಅದು ಮಂದಗತಿ ಹಿಡಿಯಬಹುದೇ ವಿನಾ ಸ್ಥಗಿತ ಆಗದು. ಮೇಲಿದ್ದವರು ಕೆಳಗೆ ಬಿದ್ದರೆ, ಕೆಳಗಿದ್ದವರು ಮೇಲೇಳುತ್ತಾರೆ. ಪಕ್ಷ ರಾಜಕಾರಣದಲ್ಲಿ ಅಧಿಕಾರದ ಅದಲು ಬದಲು ಜನತಂತ್ರದ ತಿರುಳು. ಇಂದು ಆಡಳಿತ ನಡೆಸುತ್ತಿರುವವರು, ನಾಳೆ ವಿರೋಧ ಪಕ್ಷದ ಸಾಲಿನಲ್ಲಿ ಕೂರಲೇಬೇಕು. ದಶಕಗಳ ಕಾಲ ಅಧಿಕಾರ ನಡೆಸಿದ ನಂತರ ಕಾಂಗ್ರೆಸ್‌ ಪಕ್ಷವೂ ವಿರೋಧ ಪಕ್ಷದಲ್ಲಿ ಕೂತಿತ್ತು. ಇದೀಗ ಮೋದಿಯವರ ಮೂರನೇ ಅವಧಿಗೆ ರಾಹುಲ್‌ ಗಾಂಧಿ ವಿಪಕ್ಷ ನಾಯಕರಾಗಿದ್ದಾರೆ. ತನಗೆ ಇಷ್ಟ ಇದೆಯೋ ಇಲ್ಲವೋ ಅವರಿಗೆ ಸಂಸತ್ತಿನಲ್ಲಿ ಮತ್ತು ಹೊರಗೆ ಸಂವಿಧಾನಿಕ ಸ್ಥಾನಮಾನ ಕೊಡಲೇ ಬೇಕು. ಅದೇ ಪ್ರಜಾಪ್ರಭುತ್ವದ ಲಕ್ಷಣ. 

ರಾಹುಲ್‌ ಗಾಂಧಿ ಅವರು ಎರಡು ವರ್ಷಗಳ ಹಿಂದೆ ಕೈಗೊಂಡ ಭಾರತ್‌ ಜೋಡೋ ಯಾತ್ರೆ ಅವರ ಇಡೀ ವ್ಯಕ್ತಿತ್ವವನ್ನು ದೇಶದ ಮುಂದೆ ತೆರೆದಿಟ್ಟಿತ್ತು. ದೇಶದ ಉದ್ದಗಲದ ಜನರು ರಾಹುಲ್‌ರಲ್ಲಿ ತಾವು ಕಳೆದುಕೊಂಡ ಸಹೋದರ, ಅಪ್ಪ, ಗೆಳೆಯನನ್ನು ಕಂಡಿದ್ದಾರೆ. ಬಾಚಿ ತಬ್ಬಿದ್ದಾರೆ. ಅಸಹಾಯಕ ಜನರ ಉಮ್ಮಳಿಸಿ ಬಂದ ದುಃಖದ ಕಟ್ಟೆ ರಾಹುಲ್‌ ಎದೆಯನ್ನು ಒದ್ದೆಯಾಗಿಸಿದೆ. ಜೋಡೋ ಯಾತ್ರೆಯುದ್ಧಕ್ಕೂ ರಾಹುಲ್‌ ಜನರ ಜೊತೆ ಸಂವಾದಿಸಿದ್ದಾರೆ. ಯುವಕರು ನಿರುದ್ಯೋಗ ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರು, ಕಾರ್ಮಿಕರು, ವಿವಿಧ ಸಮುದಾಯದ ಜನರು ತಮ್ಮ ಅಸಹಾಯಕತೆ ನೋವುಗಳನ್ನು ತೋಡಿಕೊಂಡಿದ್ದಾರೆ. ಅಂಗವಿಕಲರು, ಕ್ರೀಡಾಪಟುಗಳು, ಶೋಷತರು ರಾಹುಲ್‌ನಲ್ಲಿ ಒಬ್ಬ ಆಪತ್ಬಾಂಧವನನ್ನು ಕಂಡಿದ್ದಾರೆ. ಎರಡನೇ ಹಂತದ ಭಾರತ್‌ ಜೋಡೋ ನ್ಯಾಯಯಾತ್ರೆ ವೇಳೆಗೆ ಸುಮಾರು 6ಸಾವಿರ ಕಿಲೋ ಮೀಟರ್‌ ನಡೆದ ರಾಹುಲ್‌ ಜನ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅದರ ಪ್ರತಿಫಲನ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. “ಯಾರು ರಾಹುಲ್‌?” ಎಂದು ಕೇಳಿದ್ದ ದುರಹಂಕಾರಿ ಮೋದಿಯವರ ಮುಂದೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಎದೆ ಹಿಗ್ಗಿಸಿ ಕೂತಿದ್ದಾರೆ. ಅತ್ತ 56 ಅಂಗುಲದ ಎದೆ ಕುಗ್ಗುತ್ತಲೇ ಸಾಗಿದೆ.

ಹಿಂದಿನ ಅವಧಿಯಲ್ಲೂ ಸಂಸತ್ತಿನ ಹೊರಗೆ ಒಳಗೆ  ಮೋದಿ ಸರ್ಕಾರದ ಹುಳುಕುಗಳ ಬಗ್ಗೆ ಯಾವುದೇ ಟ್ರೋಲ್‌ಗಳಿಗೆ ಅಂಜದೇ ರಾಹುಲ್‌ ಮಾತನಾಡಿದ್ದಾರೆ. ಗೋದಿ ಮೀಡಿಯಾಗಳು ಮೋದಿ ಭಜನೆ ಮಾಡಿದಷ್ಟೇ, ರಾಹುಲ್‌ರನ್ನು ಪಪ್ಪು ಎಂದು ಬಿಂಬಿಸಲು ಹೆಣಗಾಡಿವೆ, ಕಡೆಗೂ ಸೋತಿವೆ. ಮೊದಲ ಅವಧಿಯಲ್ಲಿ ರಾಹುಲ್‌ ರಫೇಲ್‌ ಡೀಲ್‌, ನೋಟು ರದ್ದು ಕುರಿತು ಮೋದಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿ ಜಾಲಾಡಿದ್ದಾರೆ. ಈಗಿನಂತೆ ಎಲ್ಲ ಪ್ರತಿಪಕ್ಷಗಳು ಆಗ ಒಂದಾಗಿದ್ದರೆ ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದಿತ್ತು. ಆದರೆ ರಾಹುಲ್‌ ಅವರದ್ದು ಒಂಟಿ ಧ್ವನಿಯಾಗಿತ್ತು. ಆದರೂ 2019ರ ಚುನಾವಣೆಗೆ ನಾಲ್ಕು ತಿಂಗಳಿರುವಾಗ ಮೋದಿ ವಿಶ್ವಾಸಾರ್ಹತೆ ಇಳಿದಿದೆ ಎಂಬ ವರದಿ ಬಂದಿತ್ತು. ಅಷ್ಟರಲ್ಲಿ ಪುಲ್ವಾಮಾ ದಾಳಿಯಾಯಿತು. ಮೋದಿ ಕಾಲ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಬಾಲಾಕೋಟ್‌ ದಾಳಿಯ ಹುಸಿ ಪೌರುಷಕ್ಕೆ ಜನ ಫಿದಾ ಆದರು. ಇತಿಹಾಸದಲ್ಲಿ ಯಾವ ದಾಳಿಯಲ್ಲೂ ಈ ಪ್ರಮಾಣದ ಪ್ರಾಣಹಾನಿಯಾಗಿರಲಿಲ್ಲ. ಆದರೆ, ಯಾವುದನ್ನು ಮೋದಿಯ ಮಹಾವೈಫಲ್ಯ ಎಂದು ಬಿಂಬಿಸಬೇಕಾಗಿತ್ತೋ ಅದನ್ನು ಮಾರಿಕೊಂಡ ಮಾಧ್ಯಮಗಳು “ದೇಶದ ಭದ್ರತೆ, ಸುರಕ್ಷತೆ ಮೋದಿಯಿಂದ ಮಾತ್ರ ಸಾಧ್ಯ” ಎಂದು ಬಿಂಬಿಸಿದವು. ಪರಿಣಾಮವಾಗಿ  ಎರಡನೇ ಅವಧಿಯಲ್ಲಿ ಇನ್ನಷ್ಟು ಹೆಚ್ಚು ಸ್ಥಾನಗಳನ್ನು ಪಡೆಯುವಂತಾಯಿತು. ಎರಡನೇ ಅವಧಿಯಲ್ಲಿ ತನ್ನ ಪಕ್ಷ ಮತ್ತು ಆರೆಸ್ಸೆಸ್‌ನ ಗುಪ್ತ ಕಾರ್ಯಸೂಚಿಯನ್ನು ಎಷ್ಟು ಸಾಧ್ಯವೋ ಅಷ್ಟು ಜಾರಿ ಮಾಡುತ್ತಾ ಬಂದ ಮೋದಿ ಪರಿವಾರ ಜೊತೆ ಜೊತೆಗೆ ವಿಪಕ್ಷಗಳ ನಾಯಕರನ್ನೆಲ್ಲ ಸಿಬಿಐ -ಇ.ಡಿ ಗುಮ್ಮನನ್ನು ಛೂ ಬಿಟ್ಟು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ವಿಪಕ್ಷಗಳಿಗೆ ಅದರಲ್ಲೂ ಪ್ರಾದೇಶಿಕ ಪಕ್ಷಗಳಿಗೆ ಮರಣ ಶಾಸನ ಬರೆಯಲು ಹೊರಟಿದ್ದನ್ನು ದೇಶವೇ ನೋಡಿದೆ. 

ಎರಡನೇ ಅವಧಿಯಲ್ಲಿ ಕೊರೊನಾ ಭಾರತಕ್ಕೆ ಕಾಲಿಡುವ ಸೂಚನೆಯನ್ನು ಮೊದಲಿಗೆ ಕೊಟ್ಟವರು ರಾಹುಲ್‌ ಗಾಂಧಿ. ಆಗ ಗೇಲಿ ಮಾಡಿದ್ದು ಇದೇ ಬಿಜೆಪಿ ನಾಯಕರು. ಆದರೆ ಅದಾಗಿ ಎರಡೇ ತಿಂಗಳಲ್ಲಿ ದೇಶಕ್ಕೆ ಬೀಗ ಹಾಕುವಂತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಘೋಷಿಸಿದ ಲಾಕ್‌ ಡೌನ್‌ ನಿರ್ಧಾರ ಮೋದಿಯನ್ನು ದೇಶ ಕಂಡ ಅತ್ಯಂತ ಅಸಮರ್ಥ ನಾಯಕನನ್ನಾಗಿ ತೋರಿಸಿತ್ತು. ಕೊರೊನಾ ಸಮಯದಲ್ಲಿ ಮೋದಿಯವರು ಆರಂಭಿಸಿದ ಪಿಎಂ ಕೇರ್ಸ್‌ ಎಂಬ ನಿಧಿ ನಂತರ ಹಲವು ಅನುಮಾನಗಳಿಗೆ ಮೂಲವಾಯ್ತು. ಆ ನಿಧಿ ಖಾಸಗಿ ಟ್ರಸ್ಟ್‌ ಎಂದು ಕೋರ್ಟ್‌ಗೆ ಹೇಳಿದ ಸರ್ಕಾರ, ಹಣ ಕೊಟ್ಟ ಜನರಿಗೆ ಅದರ ಲೆಕ್ಕ ಕೇಳುವ ಹಕ್ಕನ್ನು ನಿರಾಕರಿಸಲಾಯಿತು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ, ಅದಾನಿ – ಅಂಬಾನಿಯವರ ಉದ್ದಾರಕ್ಕಷ್ಟೇ ಸೀಮಿತವಾಯ್ತು. ಅದಾನಿ ತನ್ನ ಷೇರು ಮೌಲ್ಯಗಳ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದನ್ನು ಹಿಂಡೆನ್‌ಬರ್ಗ್‌  ವರದಿ ಬಹಿರಂಗಪಡಿಸಿದ್ದು ಮೋದಿ ಅವರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿತ್ತು. ಅದಾದ ನಂತರ ಚುನಾವಣೆಗೆ ಕೆಲ ತಿಂಗಳಿರುವಾಗ ಚುನಾವಣಾ ಬಾಂಡ್‌ನ ಮಾಹಿತಿ ಬಹಿರಂಗ ಮಾಡುವಂತೆ ಸುಪ್ರೀಂ ಕೋರ್ಟ್‌ ಮಾಡಿದ್ದು, ಬಿಜೆಪಿಗೆ ದೇಣಿಗೆ ನೀಡಿದವರ ಪಟ್ಟಿಯಲ್ಲಿ ನಷ್ಟದಲ್ಲಿದ್ದ, ಕಪ್ಪು ಪಟ್ಟಿಯಲ್ಲಿದ್ದ, ಹಲವು ಆರ್ಥಿಕ ಅಪರಾಧ ಎದುರಿಸುತ್ತಿದ್ದ ಕಂಪನಿಗಳಿರುವುದು ಬಯಲಾಗಿತ್ತು. ಇದು ಮೋದಿಯವ ಭ್ರಷ್ಟಾಚಾರ ನಿರ್ಮೂಲನೆಯ ನಾಟಕವನ್ನು ಬಹಿರಂಗಪಡಿಸಿತ್ತು. ಈ ಎಲ್ಲ ಹಗರಣಗಳನ್ನು ಮೋದಿಯವರ ವಿರುದ್ಧದ ಅಸ್ತ್ರ ಮಾಡಿಕೊಂಡರು ರಾಹುಲ್‌. ಹೀಗಾಗಿ ರಾಹುಲ್ ಮೇಲಿನ  ಮೋದಿ ದ್ವೇಷ ಇಮ್ಮಡಿಯಾಗಿದೆ. ರಾಹುಲ್‌ರ ಮೇಲಿದ್ದ ಹಳೆ ಪ್ರಕರಣಕ್ಕೆ ಏಕಾಏಕಿ ಜೀವ ಬಂದು ಎರಡು ವರ್ಷ ಜೈಲು ಶಿಕ್ಷೆಯ ಆದೇಶ ಹೊರಬರುತ್ತಿದ್ದಂತೆ ಅವರ ಸದಸ್ಯತ್ವ ರದ್ದುಪಡಿಸಿ ಸಂಸತ್ತಿನಿಂದ ಹೊರ ಹಾಕಲಾಯಿತು.

ಆದರೆ, ರಾಹುಲ್‌ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ ನಂತರ ಮತ್ತೆ ಸಂಸತ್ತಿಗೆ ಬಂದಾಗ ಸಿಕ್ಕಿದ್ದು ಮಣಿಪುರದ ಅಸ್ತ್ರ. ಹೀಗೆ ತಮಗೆ ಸಿಕ್ಕಿದ ಯಾವ ಅವಕಾಶವನ್ನೂ ರಾಹುಲ್‌ ಕೈಚೆಲ್ಲಿಲ್ಲ. ಇದು ಮೋದಿ ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಈಗ ಎರಡೆರಡು ಕ್ಷೇತ್ರದಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿರುವುದಲ್ಲದೇ, ಕಾಂಗ್ರೆಸ್‌ಗೆ ಅಧಿಕೃತ ಪ್ರತಿಪಕ್ಷ  ಸ್ಥಾನ ಸಿಕ್ಕಿದೆ. ವಿಪಕ್ಷ ನಾಯಕರಾಗಿ ರಾಹುಲ್‌ ಗಾಂಧಿ ಮಾಡಿದ ಮೊದಲ ಭಾಷಣವೇ ಮೋದಿಯವರ ಮುಖದಲ್ಲಿ ಬೆವರು ಕಿತ್ತು ಬರುವಂತೆ ಮಾಡಿತ್ತು. ಬಜೆಟ್‌ ಅಧಿವೇಶನದಲ್ಲಿ ಎರಡೂವರೆ ಗಂಟೆ ಮೋದಿಯವರ ಭಾಷಣಕ್ಕೆ ಇಂಡಿಯಾ ಒಕ್ಕೂಟದ ನಾಯಕರು ಅಡ್ಡಿಪಡಿಸಿದರು. ಆಗ ಮೋದಿಯವರಿಗೆ ಯಾರೋ ತನ್ನ ‘ಕತ್ತು ಹಿಸುಕುತ್ತಿದ್ದಾರೆ’ ಎಂಬ ಆತಂಕ ಶುರುವಾಗಿತ್ತು. ಪ್ರಧಾನಿಯವರಿಗೆ ಕನಿಷ್ಠ ಗೌರವ ಕೊಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಆದರೆ, ಅದೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಿಪಕ್ಷ ನಾಯಕನಿಗೆ ಮೊದಲ ಸಾಲಿನಲ್ಲಿ ಸ್ಥಾನ ಕೊಡದೇ ಅವಮಾನಿಸಿದೆ. ಇದು ಮೋದಿಯವರಿಗೆ ರಾಹುಲ್‌ ಗಾಂಧಿ ಅವರ ಮೇಲೆ ಇರುವ ಭಯ, ನಂಜು, ದ್ವೇಷ ಅಸಹನೆಯ ಸೂಚನೆ.

ಸೋಲೇ ಇಲ್ಲ ಎಂದು ಮೆರೆದವರಿಗೆ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಿದ್ದಾರೆ. ಆದರೂ ಪಾಠ ಕಲಿತಂತಿಲ್ಲ. ಕುಗ್ಗಿದ ಮೋದಿಯ ಎದೆಯಲ್ಲಿ ಇನ್ನೂ ದ್ವೇಷದ ಕಿಚ್ಚು ಆರಿದಂತಿಲ್ಲ. ಅದು ತನ್ನನ್ನೇ ಸುಡುವ ಕಾಲ ಬರಬಹುದು. ಆದರೆ, ವಿಪಕ್ಷಕ್ಕೆ ಕೊಡಬೇಕಾದ ಕನಿಷ್ಠ ಗೌರವ ಕೊಡದ ಈ ನಡೆಗೆ ಕ್ಷಮೆಯೇ ಇಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X