ಕೊಲೆಯನ್ನು ಕೊಲೆಯಾಗಿ ನೋಡದೆ ಇವಿಎಂ ಮಷೀನ್ ಥರ ಭಾವಿಸುತ್ತಿರುವುದಾದರೂ ಏತಕ್ಕೆ? ನಿಜಕ್ಕೂ ಸಂತ್ರಸ್ತ ಕುಟುಂಬದ ಬಗ್ಗೆ ಇವರಿಗೆ ಕಾಳಜಿ ಇದೆಯೋ ಅಥವಾ ಒಂದು ಹೆಣ ಬಿತ್ತು ಎಂದು ಸಂತಸ ಪಡುತ್ತಿದ್ದಾರೋ?
ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಜನರನ್ನು ಕೋಮು ಹಿನ್ನೆಲೆಯಲ್ಲಿ ಧ್ರುವೀಕರಿಸಲು ಮಾಡುತ್ತಿರುವ ಯತ್ನವು ಸಜ್ಜನಿಕೆಯ ಎಲ್ಲೆ ಮೀರಿ ನಿಂತಿದೆ.
ಏಪ್ರಿಲ್ 22ರಂದು ರಾಜ್ಯದ ವಿವಿಧ ಪತ್ರಿಕೆಗಳಿಗೆ ಬಿಜೆಪಿ ನೀಡಿದ್ದ ಜಾಹೀರಾತು ಕೇವಲ ಮುಸ್ಲಿಂ ದ್ವೇಷವನ್ನಷ್ಟೇ ಹೊಂದಿರಲಿಲ್ಲ; ಅದು ವಿಕೃತಿಯ ಪರಮಾವಧಿಯಾಗಿತ್ತು. ಈ ಕುರಿತು ಈಗ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ.
‘ಕಾಂಗ್ರೆಸ್ ಡೇಂಜರ್’ ಶೀರ್ಷಿಕೆಯನ್ನು ಹೊಂದಿದ್ದ ಈ ಜಾಹೀರಾತಿನಲ್ಲಿ ಬರೆದಿದ್ದ ಅಂಶಗಳು ಜನರನ್ನು ಭೀತಿಗೆ ಒಳಪಡಿಸಿ ಮತವನ್ನು ಕಸಿಯುವ ಕೊಳಕು ರಾಜಕಾರಣದ ಪ್ರತಿಬಿಂಬವಾಗಿತ್ತು. ಯಾವುದೇ ವ್ಯಕ್ತಿ ಇನ್ನೊಬ್ಬರನ್ನು ನಿಂದಿಸುವ ಮಟ್ಟಕ್ಕೆ ಇಳಿದಿದ್ದಾನೆ ಎಂದರೆ, ಆತ ಹತಾಶನಾಗಿರುವ ಸೂಚನೆಯೂ ಹೌದು.
“ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ಯರ ಪಾಲಾಗಬೇಕಾ? ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ? ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಓಲೈಸುವವರು ಬೇಕಾ? ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ? ವಿಧಾನಸೌಧಕ್ಕೆ ಹೋದಾಗ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಬೇಕಾ? ಹೋಟೆಲ್‌ಗೆ ಟೀ ಕುಡಿಯಲು ಹೋದ ಅಮಾಯಕರು ಬಾಂಬ್ ಸ್ಫೋಟಕ್ಕೆ ತುತ್ತಾಗಬೇಕಾ? ಕಾಲೇಜಿಗೆ ಹೋದ ಹೆಣ್ಣುಮಗಳು ಲವ್ ಜಿಹಾದ್‌ಗೆ ಬಲಿಯಾಗಬೇಕಾ? ಮುಗ್ದ ಜನರು ನಕ್ಸಲರಿಗೆ ಬಲಿಯಾಗುವುದು ನೋಡಬೇಕಾ? ಮೇಯಲು ಹೋದ ಗೋಮಾತೆ ಕಸಾಯಿಖಾನೆ ಸೇರಬೇಕಾ?” ಎಂಬ ಪ್ರಶ್ನೆಗಳನ್ನು ಜಾಹೀರಾತಿನಲ್ಲಿ ಹಾಕಿರುವ ಬಿಜೆಪಿ, “ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ” ಎಂದು ಕೇಳಿದೆ.
ರಾಜ್ಯದಲ್ಲಿ ನಡೆದ ಘಟನೆಗಳನ್ನು ಕೋಮುವಾದೀಕರಿಸುವ ಮತ್ತು ಒಂದು ಸಮುದಾಯದ ವಿರುದ್ಧ ದ್ವೇಷ ಕಾರಿರುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಗಲಭೆಯಾದಾಗ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಯಾರೆಂಬುದನ್ನು ಬಿಜೆಪಿ ಮರೆತಿದೆ. ಇಲ್ಲಿನ ಗಲಭೆಯಲ್ಲಿ ಬಂಧಿತರಾದವರು ಅಮಾಯಕರು ಎಂದು ಬಿಜೆಪಿ ನಾಯಕ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರು ಹೇಳಿಕೆ ನೀಡಿರುವುದನ್ನು ಬಿಜೆಪಿ ಗಮನಿಸಿಲ್ಲ ಅನಿಸುತ್ತದೆ.
ದಲಿತರ ಹಣವನ್ನು ‘ಅನ್ಯ’ರಿಗೆ ಕೊಡಲಾಗುತ್ತಿದೆ ಎಂದು ಬಿಜೆಪಿ ಮೂದಲಿಸುತ್ತಿರುವುದಾದರೂ ಯಾರನ್ನು ಎಂದು ಬಿಡಿಸಿ ಹೇಳಬೇಕಿಲ್ಲ. ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ಕಾಯ್ದೆಯ ಸೆಕ್ಷನ್ 7ಡಿ ದುರುಪಯೋಗ ಮಾಡಿಕೊಂಡು ಅತಿ ಹೆಚ್ಚು ಬಳಸಿದ್ದು ಬಿಜೆಪಿ. ಕಾಂಗ್ರೆಸ್ ಸರ್ಕಾರ 11,000 ಕೋಟಿ ರೂಪಾಯಿಗಳನ್ನು ಮೊದಲ ಬಜೆಟ್‌ನಲ್ಲಿ ಗ್ಯಾರಂಟಿಗೆ ಬಳಸಲು ಮುಂದಾಗಿದ್ದು ನಿಜ. ಅದಕ್ಕೆ ವಿರೋಧವೂ ವ್ಯಕ್ತವಾಯಿತು. ಅಸಲಿಯಾಗಿ ಲೆಕ್ಕ ಹಾಕಿದರೆ ಕಾಂಗ್ರೆಸ್ ಹೆಚ್ಚುವರಿಯಾಗಿ ಬಳಸಿದ್ದು 2,800 ಕೋಟಿ. ಈ ಎಡವಟ್ಟನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತೆಗೆದುಕೊಂಡ ಮಹತ್ವದ ನಿರ್ಧಾರವನ್ನು ದಲಿತ ಸಮುದಾಯ ಸ್ವಾಗತಿಸಿದೆ. ಕಾಯ್ದೆ ಸೆಕ್ಷನ್ 7ಡಿ ರದ್ದು ಮಾಡಿದ್ದು ದಲಿತರ ಹಣ ಬೇರೆಯವರ ಪಾಲಾಗುವುದನ್ನು ತಡೆಯುವುಕ್ಕಾಗಿ ಅಲ್ಲವೇ?
ಸರ್ಕಾರ 2020- 21ನೇ ಸಾಲಿನಲ್ಲಿ ಪರಿಶಿಷ್ಟರ ಉಪಯೋಜನೆಗೆ ಮೀಸಲಿರಿಸಿದ್ದ ಅನುದಾನ ರೂ.26,005 ಕೋಟಿ. ಅದರಲ್ಲಿ ಬಿಡುಗಡೆಗೊಳಿಸಿದ ಹಣ ಕೇವಲ ರೂ.16,450 ಕೋಟಿ. ಅಂದರೆ ರೂ.9,555 ಕೋಟಿಯಷ್ಟು ಹಣವನ್ನು ಬಿಡುಗಡೆಗೊಳಿಸಿಲ್ಲ. ಖರ್ಚು ಮಾಡಿದ ಹಣದಲ್ಲಿ ನೇರವಾಗಿ ದಲಿತರಿಗೆ ತಲುಪುವ ಮಾನವ ಅಭಿವೃದ್ಧಿಗೆ ಬಳಸಿರುವುದು ರೂ. 4,128 ಕೋಟಿಯಾದರೆ ಮೂಲಸೌಕರ್ಯಗಳ ಹೆಸರಲ್ಲಿ ದಲಿತರಿಗೆ ನೇರವಾಗಿ ಉಪಯೋಗವಲ್ಲದ ಕಾರ್ಯಗಳಿಗೆ ಬಳಸಿರುವ ಹಣ ರೂ. 6,670 ಕೋಟಿ. ಕಾಯ್ದೆಯ ‘7ಡಿ’ ಸೆಕ್ಷನ್ ಬಳಸಿಕೊಂಡು ದಲಿತರ ಹಣವನ್ನು ಕಲಬುರಗಿ ವಿಭಾಗದ ಸರ್ಕಾರ ಸಹಯೋಗದ ಟಾಟಾ ತಂತ್ರಜ್ಞಾನ ಪ್ರಯೋಗಾಲಯ ಮತ್ತು ಕಾರ್ಯಾಗಾರಕ್ಕೆ ರೂ. 1,312 ಕೋಟಿಗಳನ್ನು ಬಿಜೆಪಿ ನೀಡಿತ್ತು. 25 ಇಲಾಖೆಗಳ 47 ಯೋಜನೆಗಳಿಗೆ ಮೀಸಲಿರಿಸಿದ್ದ ಹಣದಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡದೇ 1,744 ಕೋಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿತ್ತು. ಬಿಜೆಪಿ ಅವಧಿಯಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಎಸ್‌ಸಿಎಸ್‌ಪಿ, ಟಿಎಸ್ಪಿ ಕಾಯ್ದೆಯ ಅನ್ವಯ ಮೀಸಲಿಡಬೇಕಾದ ಹಣದ ಮೊತ್ತ ಮಾತ್ರ ಕಡಿಮೆಯಾಗುತ್ತಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿರುವ ಅವಧಿಯಲ್ಲಿ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಹೆಚ್ಚಾಗಿರುವುದು ವಾಸ್ತವ. ಎಸ್‌ಸಿಎಸ್‌ಪಿ ಟಿಎಸ್‌ಪಿ ಬಗ್ಗೆ ಮಾತನಾಡುವ ನೈತಿಕತೆಯನ್ನೂ ಬಿಜೆಪಿ ಉಳಿಸಿಕೊಂಡಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾಂಬ್ ಬ್ಲಾಸ್ಟ್ ಆಗುತ್ತವೆ ಎಂದು ಭಯ ಹುಟ್ಟಿಸುವ ಬಿಜೆಪಿ, ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಯೋಧರು ಸಾಯಲು ಯಾರು ಕಾರಣ ಎಂಬುದನ್ನು ಈವರೆಗೂ ಬಾಯಿ ಬಿಟ್ಟಿಲ್ಲ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ನೇರವಾಗಿ ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದ್ದರು. ಆದರೆ ಅವರ ಬಾಯಿ ಮುಚ್ಚಿಸಿದ್ದು ಏಕೆ?
ಯಾವುದೇ ಸಾವನ್ನು ಕೋಮುವಾದೀಕರಿಸುವ ವಿಕೃತಿಯನ್ನು ಬಿಜೆಪಿ ಬಿಟ್ಟಿಲ್ಲ. ಹುಬ್ಬಳ್ಳಿಯ ನೇಹಾ ಪ್ರಕರಣವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಮನಸ್ಥಿತಿಯಾದರೂ ಎಂತಹದ್ದು? ಕೊಂದ ಆರೋಪಿ ಮುಸ್ಲಿಂ ಆದ ಕಾರಣಕ್ಕೆ ಇಡೀ ಸಮುದಾಯವನ್ನೇ ದೂಷಿಸುವ ವಿಕೃತಿಯಾದರೂ ಯಾವುದು? ಕೊಲೆಯನ್ನು ಕೊಲೆಯಾಗಿ ನೋಡದೆ ಇವಿಎಂ ಮಷೀನ್ ಥರ ಭಾವಿಸುತ್ತಿರುವುದಾದರೂ ಏತಕ್ಕೆ? ನಿಜಕ್ಕೂ ಸಂತ್ರಸ್ತ ಕುಟುಂಬದ ಬಗ್ಗೆ ಇವರಿಗೆ ಕಾಳಜಿ ಇದೆಯೋ ಅಥವಾ ಒಂದು ಹೆಣ ಬಿತ್ತು ಎಂದು ಸಂತಸ ಪಡುತ್ತಿದ್ದಾರೋ? ಇದೇ ದಿನ ಹಿಂದೂ ಪ್ರಿಯತಮನಿಂದ ಮುಸ್ಲಿಂ ಹೆಣ್ಣುಮಗಳೊಬ್ಬಳು ಭೀಕರವಾಗಿ ಕೊಲೆಯಾಗಿದ್ದಳು. ಅದರ ಕುರಿತು ಮೌನ ವಹಿಸುವುದು ನ್ಯಾಯೋಚಿತವೇ? ಗೋವಿನ ಹೆಸರಲ್ಲಿ ಮತ ಕೇಳುವ ಬಿಜೆಪಿ, ತನ್ನದೇ ಅವಧಿಯಲ್ಲಿ ಗೋಮಾಂಸ ರಫ್ತು ಹೆಚ್ಚಾದದ್ದು ಹೇಗೆಂದು ಉತ್ತರಿಸುತ್ತಿಲ್ಲ. ಗೋಮಾಂಸ ರಫ್ತು ಮಾಡುವ ಕಂಪನಿಯಿಂದ ಬಿಜೆಪಿ ಬಾಂಡ್ ಪಡೆದದ್ದು ಏತಕ್ಕಾಗಿ? ಗೋರಕ್ಷಣೆಯ ಹೆಸರಲ್ಲಿ ಗುಜರಾತ್‌ನ ಊನಾದಲ್ಲಿ ಭೀಕರವಾಗಿ ದಲಿತರನ್ನು ಥಳಿಸಿದ್ದು ಮರೆಯಲಾಗದ ದುರ್ಘಟನೆಯಲ್ಲವೇ? ಒಂದು ಕಡೆ ಗೋರಕ್ಷಣೆಯ ನಾಟಕ ಆಡುತ್ತಾ, ಮನುಷ್ಯನ ಜೀವಕ್ಕೂ ಬೆಲೆ ಕೊಡದೆ ಅಟ್ಟಹಾಸ ಮೆರೆಯುವ ಸಂಘಪರಿವಾರಕ್ಕೆ ಯಾವುದು ಆದ್ಯತೆ? ದನಕ್ಕಿರುವ ಬೆಲೆ, ದಲಿತನಿಲ್ಲವೆ? ಗೋಮಾಂಸವನ್ನೇ ನಿತ್ಯದ ಆಹಾರವಾಗಿಸಿಕೊಂಡಿರುವ ಈಶಾನ್ಯ ಭಾರತದಲ್ಲಿ ಬಿಜೆಪಿ ಪಕ್ಷ ಗೋಮಾಂಸದ ಬ್ಯಾನ್ ಬಗ್ಗೆ ಮಾತನಾಡುವುದಿಲ್ಲ ಏಕೆ? ಎಲ್ಲಕ್ಕಿಂತ ಹೆಚ್ಚಾಗಿ ಇದು ಆಹಾರ ಸ್ವಾತಂತ್ರ್ಯದ ಪ್ರಶ್ನೆ. ಮುಸ್ಲಿಮರಷ್ಟೇ ದನದ ಮಾಂಸ ತಿನ್ನುವುದಿಲ್ಲ. ಈ ರಾಜ್ಯದ ಬಹುಸಂಖ್ಯಾತ ದಲಿತರೂ ದನದ ಮಾಂಸ ತಿನ್ನುತ್ತಾರೆ ಎಂಬುದನ್ನು ಬಿಜೆಪಿ ಮರೆಯುವುದಾದರೂ ಹೇಗೆ? ಮುಸ್ಲಿಮರ ಮತಗಳೇ ಬೇಡ ಎನ್ನುವ ಬಿಜೆಪಿ ನಾಯಕರು, ದನದ ಮಾಂಸ ತಿನ್ನುವ ಯಾವುದೇ ಜಾತಿ ವರ್ಗದ ಮತಗಳು ಬೇಡ ಎನ್ನಲು ಸಾಧ್ಯವಿಲ್ಲ ಅಲ್ಲವೇ?
ತಿನ್ನುವ ಅನ್ನದ ಮೇಲೆ, ಉಡುವ ಬಟ್ಟೆಯ ಮೇಲೆ ಮತ ಕೇಳುವ ಮಟ್ಟಕ್ಕೆ ಬಿಜೆಪಿ ಹೋಗಿರುವುದು ಅದು ಎದುರಿಸುತ್ತಿರುವ ನೈತಿಕ ದಿವಾಳಿತನದ ಸೂಚನೆ. ಬದುಕಿನ ಪ್ರಶ್ನೆಗಳನ್ನು ಮಾತನಾಡಬೇಕಿದ್ದ ಪ್ರಧಾನಿ, “ಪ್ರತಿಪಕ್ಷಗಳವರು ಮಾಂಸಾಹಾರ ಸೇವಿಸಿದರು, ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತು ಕಸಿದು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮರಿಗೆ ಕೊಡುತ್ತಾರೆ, ಕಾಂಗ್ರೆಸ್‌ನವರು ಒಬಿಸಿ ಮೀಸಲಾತಿಯಲ್ಲಿ ಮುಸ್ಲಿಮರಿಗೂ ಅವಕಾಶ ನೀಡಿ ಒಬಿಸಿಗಳಿಗೆ ಅನ್ಯಾಯ ಮಾಡಿದ್ದಾರೆ” ಎಂದು ಹೇಳಿಕೆಗಳನ್ನು ನೀಡುವ ನೀಚ ಮಟ್ಟಕ್ಕೆ ಇಳಿದಿದ್ದಾರೆ. ಮೋದಿಯವರೇ ನೇರವಾಗಿ ಮುಸ್ಲಿಂ ದ್ವೇಷಕ್ಕೆ ಧುಮುಕಿರುವಾಗ ಕರ್ನಾಟಕ ಬಿಜೆಪಿ ನೀಡಿರುವ ಜಾಹೀರಾತು ಆಶ್ಚರ್ಯವನ್ನೇನೂ ತರುವುದಿಲ್ಲ. ಆದರೆ ಒಂದು ಸಮುದಾಯದ ಮೇಲೆ ಇಷ್ಟು ದ್ವೇಷವನ್ನು ಉದ್ದೀಪಿಸಿ ಚುನಾವಣೆ ನಡೆಸುತ್ತಿರುವ ಬಿಜೆಪಿಯ ನೈಜ ಉದ್ದೇಶವೇನು ಎಂಬುದನ್ನು ಜನರು ಎಚ್ಚರಿಕೆಯಿಂದ ಗಮನಿಸಬೇಕು. ಚುನಾವಣಾ ಆಯೋಗವು ನಿಜಕ್ಕೂ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯನ್ನು ನಡೆಸುತ್ತಿದೆಯಾದರೆ ತಕ್ಷಣವೇ ಬಿಜೆಪಿಯ ಈ ವಿಕೃತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
