ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ ಇಲ್ಲಿರುವುದು ಚುನಾಯಿತ ಸರ್ವಾಧಿಕಾರ ಎಂಬುದು ಎಂಥವರಿಗೂ ಅರ್ಥವಾಗುತ್ತದೆ
2024ರ ಲೋಕಸಭಾ ಚುನಾವಣೆಯ ಕಣದಲ್ಲಿ ಚರ್ಚೆಯಲ್ಲಿರುವ ವಿಷಯಗಳನ್ನು ನಾವು ಗಂಭೀರವಾಗಿ ಗಮನಿಸಬೇಕಿದೆ. ನಿರುದ್ಯೋಗ, ಬೆಲೆ ಏರಿಕೆ, ಗ್ಯಾರಂಟಿ, ಮತೀಯವಾದ, ಎಲೆಕ್ಟೋರಲ್ ಬಾಂಡ್ ಮೊದಲಾದವುಗಳ ಜೊತೆಗೆ ’ಸಂವಿಧಾನದ ಉಳಿವು’ ವಿಚಾರವೂ ಪ್ರಚಾರದ ಸಂಗತಿಯಾಗಿರುವುದು ಈ ಚುನಾವಣೆಯ ವಿಶೇಷ.
’ಭಾರತ ಸಂವಿಧಾನ ಅಪಾಯದಲ್ಲಿದೆ’ ಎಂಬ ಆತಂಕ ಹಿಂದೆ ನಡೆದ ಯಾವುದೇ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲೂ ಇಷ್ಟು ಮಹತ್ವ ಪಡೆದದ್ದು ಕಡಿಮೆ. ಕಳೆದ ಹತ್ತು ವರ್ಷಗಳಲ್ಲಿ ಸಂವಿಧಾನದ ಬಗ್ಗೆ ಆಗಿರುವಷ್ಟು ಗಂಭೀರ ಚರ್ಚೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಆಗಿರಲಿಕ್ಕೆ ಇಲ್ಲವೇನೋ.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ ಸಂದರ್ಭದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಯಿತು. ಆದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರುತ್ತಾ ಬಂದಿದ್ದಾರೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಬಡವರ ಪರವಾಗಿ ಕೆಲವು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಜಾರಿಗೆ ತಂದರೆಂಬ ಮೆಚ್ಚುಗೆಯೂ ರಾಜಕೀಯ ವಲಯದಲ್ಲಿ ಇದೆ. ಆದರೆ ಮೋದಿಯವರ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಬಂಡವಾಳಶಾಹಿಗಳ ರಕ್ಷಣೆಯೇ ಆದ್ಯತೆಯಾಗಿರುವುದು ನಿಚ್ಚಳವಾಗಿ ಕಾಣುತ್ತಿದೆ.
“ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಯಾಗುತ್ತದೆ, ಚುನಾವಣೆಗಳು ಮತ್ತೆ ನಡೆಯುವುದಿಲ್ಲ, ಸರ್ವಾಧಿಕಾರಿ ಹಿಟ್ಲರನ ಫ್ಯಾಸಿಸಂ ಆಳ್ವಿಕೆಗೆ ಭಾರತ ಮುಕ್ತವಾಗುತ್ತದೆ” ಎಂಬ ಆತಂಕಗಳನ್ನು ಪ್ರಜ್ಞಾವಂತ ಸಮುದಾಯ ವ್ಯಕ್ತಪಡಿಸುತ್ತಲೇ ಇದೆ. ವಿಶ್ವದ ವಿವಿಧ ದೇಶಗಳಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ ಎಂದು ಅಧ್ಯಯನ ಮಾಡುವ ವೀ–ಡೆಮ್ ಎಂಬ ಸಂಸ್ಥೆಯು, “ಭಾರತವೀಗ ಎಲೆಕ್ಟೋರಲ್ ಅಟೊಕ್ರಸಿ ಹಂತದಲ್ಲಿದೆ, ಸರ್ವಾಧಿಕಾರಕ್ಕೆ ಇನ್ನೆರಡೇ ಹೆಜ್ಜೆ ಇಡಬೇಕಿದೆ” ಎಂಬ ಮಾತುಗಳನ್ನು ಆಡಿದೆ. ಅಂದರೆ ಇಲ್ಲಿ ’ಚುನಾಯಿತ ಸರ್ವಾಧಿಕಾರ’ ಇರುವುದಾಗಿ ಎಚ್ಚರಿಸಿದೆ ವೀ–ಡೆಮ್ ಸಂಸ್ಥೆ.
ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ ಇಲ್ಲಿರುವುದು ಚುನಾಯಿತ ಸರ್ವಾಧಿಕಾರ ಎಂಬುದು ಎಂಥವರಿಗೂ ಅರ್ಥವಾಗುತ್ತದೆ. ಸಂವಿಧಾನ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂಬ ಎಚ್ಚರಿಕೆ ಈ ನಾಡಿನ ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳಲ್ಲಿ ಮೂಡಿದೆ. ಪ್ರಗತಿಪರ ವಲಯ ಮತ್ತು ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಸ್ಪಿ, ಬಿಎಸ್ಪಿ, ಎಎಪಿ– ಎಲ್ಲವೂ ಈ ಮಾತುಗಳನ್ನು ಹೇಳಲು ಆರಂಭಿಸಿವೆ.
ವಿರೋಧ ಪಕ್ಷಗಳ ನಾಯಕರ ಮೇಲೆ ಐಟಿ, ಇ.ಡಿ.ಯನ್ನು ದುರ್ಬಳಕೆ ಮಾಡಿ ಬಾಯಿ ಮುಚ್ಚಿಸುವುದು ನಿರಂತರವಾಗಿದೆ. ಮೋದಿ ಸರ್ಕಾರದ ದಮನಕ್ಕೆ ಬಗ್ಗದವರನ್ನು ಜೈಲಿಗೆ ಹಾಕಲಾಗಿದೆ. ಸಂವಿಧಾನದ ಆತ್ಮವಾದ ಸೆಕ್ಯುಲರಿಸಂಗೆ ವಿರುದ್ಧವಾಗಿ ಸಿಎಎ ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡೆದಿವೆ. ಪ್ರಶ್ನಿಸಿದವರ ಮೇಲೆ ಸುಳ್ಳು ಆರೋಪ ಹೊರಿಸಿ ಯುಎಪಿಎ, ದೇಶದ್ರೋಹದ ಕೇಸ್ಗಳನ್ನು ದಾಖಲಿಸಲಾಗಿದೆ. ಕಾರ್ಪೋರೇಟ್ ಪರವಾದ ಕಾನೂನುಗಳನ್ನು ತಂದು ಒಂದು ವರ್ಷ ಕಾಲ ಅನ್ನದಾತರನ್ನು ಬೀದಿಗೆ ತಳ್ಳಲಾಗಿತ್ತು. ಉತ್ತರ ಪ್ರದೇಶದ ಚುನಾವಣೆ ಬಂದ ಬಳಿಕವಷ್ಟೇ ಕರಾಳ ಕಾನೂನುಗಳನ್ನು ವಾಪಸ್ ಪಡೆಯಲಾಗಿತ್ತು.
“ಇಂಡಿಯಾ (ಭಾರತ) ರಾಜ್ಯಗಳ ಒಕ್ಕೂಟ” ಎಂದು ನಮ್ಮ ಸಂವಿಧಾನದ ಮೊದಲನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಮೋದಿ ಅವಧಿಯಲ್ಲಿ ಅಧಿಕಾರ ಕೇಂದ್ರೀಕರಣ ಹೆಚ್ಚಾಯಿತು. ದಕ್ಷಿಣ ರಾಜ್ಯಗಳ ತೆರಿಗೆ ಪಾಲನ್ನು ಕೊಡಲು ಕಣ್ಣೀರು ಹಾಕಿಸಲಾಗುತ್ತಿದೆ. “ನಾವು ಬಿಡಿಗಾಸು ಬಾಕಿ ಉಳಿಸಿಕೊಂಡಿಲ್ಲ” ಎಂದು ಕೇಂದ್ರದ ಅರ್ಥಸಚಿವರು ದುರಹಂಕಾರ ಮಾತುಗಳನ್ನು ಆಡುತ್ತಿದ್ದಾರೆ.
ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮುಖೇನ ಕಿರುಕುಳ ನೀಡಲಾಗುತ್ತಿದೆ. ದೆಹಲಿ ರಾಜ್ಯ ಸರ್ಕಾರದ ಮೇಲೆ ಕೇಂದ್ರವು ಲೆಫ್ಟಿನೆಂಟ್ ಗವರ್ನರ್ ಮೂಲಕ ಮಾಡುತ್ತಿದ್ದ ಹಸ್ತಕ್ಷೇಪವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಯಿತು. ಚುನಾಯಿತ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಕೋರ್ಟ್ ಹೇಳಿತ್ತು. ಆದರೆ ತೀರ್ಪಿನ ವಿರುದ್ಧವೇ ಸುಗ್ರೀವಾಜ್ಞೆ ತರಲಾಗಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿ, ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು. ಅಧಿಕಾರದಲ್ಲಿದ್ದ ಸರ್ಕಾರವನ್ನು ಅಮಾನತು ಮಾಡಿದ್ದು ಸರ್ವಾಧಿಕಾರಿ ಧೋರಣೆ ಎಂದು ಸುಪ್ರೀಂಕೋರ್ಟ್ಗೂ ಅನಿಸದೆ ಇದ್ದದ್ದು ದುರಂತದ ಸಂಗತಿ. ರಾಜ್ಯಗಳ ಸ್ವಾಯತ್ತತೆಯನ್ನು ಕೋರ್ಟ್ ಕೂಡ ಗಮನಿಸಲಿಲ್ಲ. ಈ ಅವಧಿಯಲ್ಲಿ ಹತ್ತಾರು ಕಾಶ್ಮೀರಿ ಪತ್ರಕರ್ತರು ಜೈಲು ಸೇರಿ, ಈಗಲೂ ಯುಎಪಿಎ ಪ್ರಕರಣ ಎದುರಿಸುತ್ತಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಇಡಬ್ಲ್ಯುಎಸ್ ಮೀಸಲಾತಿ ಜಾರಿಗೆ ತರಲಾಯಿತು, ಬಡ ಮಕ್ಕಳನ್ನು ಶಿಕ್ಷಣದಿಂದಲೇ ಹೊರಗಿಡುವ ರೀತಿಯಲ್ಲಿ ಹೊಸ ಆರ್ಥಿಕ ನೀತಿಯನ್ನು ರೂಪಿಸಲಾಯಿತು, ದಲಿತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ಗಳಿಗೆ ಕಡಿವಾಣ ಹಾಕಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದ ಬ್ರಾಹ್ಮಣ್ಯದ ದಿಗ್ವಿಜಯದ ಪ್ರತಿಕ್ರಾಂತಿ ಬಿಜೆಪಿ ಅವಧಿಯಲ್ಲಿ ನಡೆಯುತ್ತಿದೆ. ಆದರೆ ಇದೆಲ್ಲವನ್ನೂ ಮರೆಮಾಚಲು ತಾನು ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಸೋಗನ್ನು ಪ್ರಧಾನಿ ಮೋದಿ ಹಾಕಿಕೊಂಡಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ ಸರ್ಕಾರವೊಂದು ಎಂದಿಗೂ ಸೆಕ್ಯುಲರ್ ಆಗಿರಬೇಕು. ಅದು ನಡೆಯುವುದು ಎಲ್ಲ ವರ್ಗದ ಜನರು ನೀಡುವ ತೆರಿಗೆಯ ಮೂಲಕ. ’ಸೆಕ್ಯುಲರ್’ ಎಂದರೆ- ಸರ್ಕಾರವೊಂದರ ಪ್ರತಿನಿಧಿಗೆ ಯಾವುದೇ ಧರ್ಮ, ಜಾತಿಯ ಹಂಗು ಇರಬಾರದು, ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು ಎಂದರ್ಥ. ಆದರೆ ಆದದ್ದೇನು? ಪ್ರಧಾನಿ ಮೋದಿಯವರು ಒಂದು ಧರ್ಮದ ವಕ್ತಾರರಂತೆ ವರ್ತಿಸುತ್ತಾರೆ, ಸಂಸತ್ತಿನ ಹೊಸ ಭವನದ ಉದ್ಘಾಟನೆಗೆ ಹೋಮ ಹವನ ಮಾಡಿಸುತ್ತಾರೆ. ಧರ್ಮವೇ ತನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಮೋದಿ, ಅಭಿವೃದ್ಧಿಯ ವಿಚಾರಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ; ಹಸಿವು, ಬಡತನ, ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಹೀಗಿರುವಾಗ ಸಂವಿಧಾನ ಅಪಾಯದಲ್ಲಿದೆ ಎಂದು ಎಲ್ಲರಿಗೂ ಅನ್ನಿಸುವುದು ಸಾಮಾನ್ಯ.
ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ, “ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನವನ್ನು ಬದಲಿಸುವುದಕ್ಕಾಗಿ” ಎಂದು ಹೇಳಿಕೆ ನೀಡಿದ್ದರು. “ಸಂವಿಧಾನ ತಿದ್ದುಪಡಿ ಮಾಡಲು ಭಾಜಪಕ್ಕೆ ನಾಲ್ಕು ನೂರು ಸೀಟು ಗೆಲ್ಲಿಸಿಕೊಡಿ” ಎಂದು ಇದೇ ವ್ಯಕ್ತಿ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
“ಈ ದೇಶದ ಸಂವಿಧಾನ ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆಗ ಬಿಜೆಪಿ, ಜನಸಂಘ ಪರಿವಾರ ಪ್ರಬಲವಾಗಿರಲಿಲ್ಲ. ಇದ್ದದ್ದು ಕಾಂಗ್ರೆಸ್ ಮಾತ್ರ. ಇದನ್ನು ಒಪ್ಪಿಕೊಂಡಿದ್ದವರು ಕಾಂಗ್ರೆಸ್ನವರು” ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದರು.
“ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದು” ಎನ್ನುತ್ತಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ರಾಜಸ್ಥಾನದ ನಾಗೋರ್ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ದಾ, “ಸಂವಿಧಾನ ತಿದ್ದುಪಡಿಗಾಗಿ ಬಿಜೆಪಿಗೆ ಪ್ರಚಂಡ ಬಹುಮತ ನೀಡಿರಿ” ಎಂದು ಕೋರಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್ ಬಿಜೆಪಿ ಸಂಸದ ಮತ್ತು ಅಭ್ಯರ್ಥಿ ಲಲ್ಲು ಸಿಂಗ್, “ಸಂವಿಧಾನವನ್ನು ತಿದ್ದುಪಡಿ ಮಾಡಲು ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತ ಕಲ್ಪಿಸಿಕೊಡಿ” ಎಂದಿದ್ದಾರೆ. ಹೀಗೆ ನಿರಂತರವಾಗಿ ತನ್ನ ಪಕ್ಷದವರೇ ಹೇಳುತ್ತಿದ್ದರೂ ಪ್ರಧಾನಿಯವರು ಕಾಂಗ್ರೆಸ್ನವರನ್ನು ಸಂವಿಧಾನ ವಿರೋಧಿಗಳು ಎಂದು ಮೂದಲಿಸುತ್ತಿರುವುದು ಬಹುದೊಡ್ಡ ಹಿಪಕ್ರಸಿ (ಬೂಟಾಟಿಕೆ).
ಸಂವಿಧಾನ ರಕ್ಷಣೆಯ ಮಾತುಗಳು ಹೆಚ್ಚಾಗುತ್ತಿದ್ದಂತೆ ಆತಂಕಿತರಾಗಿರುವ ಮೋದಿ ಪ್ರತಿಕ್ರಿಯಿಸಿ, “ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಈ ಹೇಳಿಕೆ ನೀಡಿದ ದಿನವೇ ಪ್ರಧಾನಿಯವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡಿದ್ದರು. “ಕಾಂಗ್ರೆಸ್ ನಾಯಕರು ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿ, ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ” ಎಂದದ್ದು ಮೋದಿಯವರಿಗೆ ಸಂವಿಧಾನದ ಬಗ್ಗೆ ಇರುವ ಗೌರವ ಎಷ್ಟೆಂದು ಅರ್ಥಮಾಡಿಸುತ್ತದೆ. ಉಡುಪು, ಆಹಾರ, ಆಚರಣೆ ಮೇಲೆ ತಾರತಮ್ಯ ಮಾಡುವ ಮೋದಿಯವರಿಗೆ ಸಂವಿಧಾನ ಬೋಧಿಸುವ ವ್ಯಕ್ತಿ ಸ್ವಾತಂತ್ರ್ಯ, ಉಪಾಸನೆಯ ಸ್ವಾತಂತ್ರ್ಯ, ಆಹಾರ ಸ್ವಾತಂತ್ರ್ಯ– ಇದ್ಯಾವುದರ ಬಗ್ಗೆಯೂ ನಂಬಿಕೆ ಇರುವಂತೆ ಕಾಣುವುದಿಲ್ಲ. ಹಿಂದೂ ಧಾರ್ಮಿಕತೆಯ ಬಗ್ಗೆ ಮಾತನಾಡುವ ಮೋದಿಯವರು, ಹಿಂದೂ ಧರ್ಮದಲ್ಲಿರುವ ಬಹುತ್ವ ಮತ್ತು ಆಹಾರದ ವೈವಿಧ್ಯತೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕಿದೆ.
“ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ” ಎಂಬ ಎಚ್ಚರಿಕೆ ಜನಸಾಮಾನ್ಯರಿಗೆ ಖಂಡಿತವಾಗಿಯೂ ಇದೆ. ಆದರೆ ಮೋದಿಯವರು ಆಡುವುದು ಒಂದು; ಮಾಡುವುದು ಮತ್ತೊಂದಾಗಿದೆ. “ಸಂವಿಧಾನ ವಿರೋಧಿಗಳಿಗೆ ಪಾಠ ಕಲಿಸಿ” ಎಂದು ಮೋದಿ ಕರೆ ನೀಡಿದ್ದಾರೆ. ತಮ್ಮ ಪಕ್ಷದ ಸಿದ್ಧಾಂತವೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವಾಗ, ವಿಪಕ್ಷಗಳತ್ತ ಮೋದಿ ಬೊಟ್ಟು ತೋರುವುದು ಹಾಸ್ಯಾಸ್ಪದ. ತಾನೇ ಕಳ್ಳತನ ಮಾಡಿ, ರಸ್ತೆಯಲ್ಲಿ ನಿಂತು, “ಓ ಕಳ್ಳ ಕಳ್ಳ” ಎಂದು ಕೂಗುತ್ತಾ ಜನರನ್ನು ಯಾಮಾರಿಸುವ ಚಾಣಾಕ್ಷತೆಯನ್ನು ತೋರುವುದು ಸರಿಯಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಬಿಜೆಪಿ ಸಂಘಪರಿವಾರಕ್ಕೆ ನಿಜಕ್ಕೂ ಕಾಳಜಿ ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಮೂರು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ನಲ್ಲಿ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳ ಪೈಕಿ ಅಂಬೇಡ್ಕರ್ ಅವರನ್ನು ಹೊರಗಿಡಲಾಗಿದೆ. ಮಹಾತ್ಮ ಗಾಂಧಿ, ಜವಾಹರ್ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಹಾಲಿ ರಾಷ್ಟ್ರಪತಿ, ಹಾಲಿ ಪ್ರಧಾನಿ, ಭಾರತ ಮಾತೆ, ಪಂಡಿತ್ ದೀನ್ ದಾಯಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರಗಳನ್ನು ಮಾತ್ರ ಅಧಿಕೃತವಾಗಿ ಇಡಲು ಅನುಮತಿಸಲಾಗಿದೆ. ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಬಿಜೆಪಿಯ ಪೂರ್ವಜರು ಎಂಬುದನ್ನು ನೆನಪಿಡಬೇಕು.
ಸಂಘಪರಿವಾರದ ಸಿದ್ಧಾಂತ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ತದ್ವಿರುದ್ಧವಾಗಿದೆ. ಸಂವಿಧಾನ ರಚನೆಯಾದಾಗ ಆರ್ಎಸ್ಎಸ್ ತನ್ನ ಅಸಹನೆಯನ್ನು ಹೊರಹಾಕಿತ್ತು. “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾದದ್ದು. ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ನವೆಂಬರ್ 30, 1949ರಂದು ಆರ್ಎಸ್ಎಸ್ನ ಮುಖವಾಣಿ ’ಆರ್ಗನೈಸರ್’ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯೇ ಬಿಜೆಪಿ, ಸಂಘಪರಿವಾರದ ನಿಜವಾದ ಸಂವಿಧಾನ ಎಂಬುದು ವಾಸ್ತವ. ಅದನ್ನು ಜಾರಿಗೆ ತರಬೇಕು ಎಂಬುದೇ ಸಂಘಪರಿವಾರದ ಸುಪ್ತ ಕಾರ್ಯಸೂಚಿ.
“ಸಂವಿಧಾನವನ್ನು ಸ್ವತಃ ಅಂಬೇಡ್ಕರ್ ಅವರೇ ಬಂದರೂ ಬದಲಿಸಲು ಸಾಧ್ಯವಿಲ್ಲ” ಎನ್ನುವ ಮೋದಿಯ ಮಾತು ವಿರೋಧಾಭಾಸಗಳಿಂದ ಕೂಡಿದೆ. ಸಾಂವಿಧಾನಿಕ ಆಶಯಗಳನ್ನು ಗಾಳಿಗೆ ತೂರಿ ಹತ್ತು ವರ್ಷ ಅಧಿಕಾರ ನಡೆಸಿರುವ ಬಿಜೆಪಿ ಮಾಡಿರುವ ಅಧ್ವಾನಗಳನ್ನು ನೋಡಿದರೆ ಆತಂಕವಾಗುತ್ತದೆ. ಆಹಾರ, ಉಡುಪು, ಆಚರಣೆಗಳ ಮೇಲೆ ದಾಳಿಗಳನ್ನು ನಡೆಸುತ್ತಿರುವುದನ್ನು ನೋಡಿದರೆ ಭಾರತವನ್ನು ಫ್ಯಾಸಿಸ್ಟ್ ರಾಷ್ಟ್ರವನ್ನಾಗಿ ಮಾಡಲು ಬಿಜೆಪಿ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಿರುವ ದೇಶದ ಜನರ ಆತಂಕ ಸಹಜವಾದದ್ದೇ. ಚುನಾವಣಾ ಕಣದ ಸಂಗತಿಯಾಗಿ ಸಂವಿಧಾನ ರಕ್ಷಣೆ ಮುನ್ನಲೆಗೆ ಬಂದಿರುವುದನ್ನು ಮತದಾರರು ಗಂಭೀರವಾಗಿ ಪರಿಗಣಿಸಬೇಕಿದೆ. ವಿವೇಕದಿಂದ ಮತ ಚಲಾಯಿಸುವುದು ಇಂದಿನ ತುರ್ತಾಗಿದೆ.
