ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಒಟ್ಟಿನಲ್ಲಿ ಹಣವಂತರು ಹುಲಿಯುಗುರಿನ ಲಾಕೆಟ್ ಧರಿಸುವುದು ಹೊಸದೇನಲ್ಲ. ಅರಣ್ಯಾಧಿಕಾರಿಗಳು ತಮ್ಮ ಕರ್ತವ್ಯವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ನಿರ್ವಹಿಸುತ್ತ ಬಂದಿದ್ದಲ್ಲಿ ಅವರೇ ಹೀಗೆ ಪೇಚಿಗೆ ಸಿಕ್ಕು ಒದ್ದಾಡುವ ಸ್ಥಿತಿ ಬರುತ್ತಿರಲಿಲ್ಲ
ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಯುವ ರೈತ ವರ್ತೂರು ಸಂತೋಷ್ ಆಭರಣ ಧರಿಸೋ ಶೋಕಿಗೆ ಬಿದ್ದು ಜೈಲು ಸೇರಬೇಕಾಗಿ ಬಂದಿದ್ದು ವಿಪರ್ಯಾಸ. ವಾರದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಸಂತೋಷ್ ಹುಲಿಯುಗುರಿನ ಲಾಕೆಟ್ ಧರಿಸಿದ್ದನೆಂದು ಯಾರೋ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟಿದ್ದರು. ತಕ್ಷಣ ಅರಣ್ಯಾಧಿಕಾರಿಗಳು ಬಿಗ್ಬಾಸ್ ಮನೆಯಿಂದಲೇ ಆತನನ್ನು ರಾತ್ರೋರಾತ್ರಿ ಬಂಧಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಒಂದು ದೂರು ಈಗ ಹಲವು ನಟರು, ರಾಜಕಾರಣಿಗಳನ್ನು ಪೀಕಲಾಟಕ್ಕೆ ಸಿಲುಕಿಸಿದೆ.
1972ರ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯಾವುದೇ ವನ್ಯಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ.
ಸಂತೋಷ್ ಬಂಧನದ ನಂತರ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಈ ಹಿಂದೆ ಸಂದರ್ಶನವೊಂದರಲ್ಲಿ ತನ್ನ ಕತ್ತಿನಲ್ಲಿದ್ದ ಸರ ತೋರಿಸಿ ಈ ಹುಲಿಯುಗುರಿನ ಲಾಕೆಟ್ ನನ್ನಮ್ಮ ನನ್ನ 20ನೇ ಹುಟ್ಟುಹಬ್ಬಕ್ಕೆ ಕೊಡಿಸಿದ್ದು ಎಂದು ಹೇಳಿಕೊಂಡಿದ್ದ ವಿಡಿಯೊ ಮತ್ತು ಗೌರಿ ಗದ್ದೆಯ ಸ್ವಯಂಘೋಷಿತ ಅವಧೂತ ವಿನಯ್ ಗುರೂಜಿ ಹುಲಿಯ ಮುಖ, ಚರ್ಮವಿರುವ ಆಸನದ ಮೇಲೆ ಕೂತಿರುವ ಫೋಟೋಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಲ್ಲದೇ ಅರಣ್ಯ ಇಲಾಖೆಯ ಗಮನಕ್ಕೂ ತಂದಿದ್ದರು. ಈ ಮಧ್ಯೆ ನಟರಾದ ನಿಖಿಲ್ ಕುಮಾರಸ್ವಾಮಿ, ದರ್ಶನ್, ರಾಕ್ಲೈನ್ ವೆಂಕಟೇಶ್, ಯಶ್ ಅವರು ಹುಲಿಯುಗುರಿನ ಲಾಕೆಟ್ ಧರಿಸಿರುವ ಫೋಟೋಗಳು ವೈರಲ್ ಆಗಿದ್ದವು.
ದೂರಿನ ನಂತರ ಅರಣ್ಯಾಧಿಕಾರಿಗಳು ಜಗ್ಗೇಶ್ ಮನೆಗೆ ಹೋಗಿ ಹುಲಿಯುಗುರಿನ ಲಾಕೆಟ್ ಪಡೆದು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ದರ್ಶನ್, ನಿಖಿಲ್ ಲಾಕೆಟ್ಟನ್ನು ತಾವಾಗಿಯೇ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರಂತೆ. ʼಅದು ಮದುವೆಯಲ್ಲಿ ಯಾರೋ ಉಡುಗೊರೆಯಾಗಿ ಕೊಟ್ಟಿದ್ದು, ಅಸಲಿ ಹುಲಿಯುಗುರು ಅಲ್ಲʼ ಎಂದು ನಿಖಿಲ್ ತಂದೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದರು.
ಇದಾದ ನಂತರ ಹುಲಿಯುಗುರಿನ ಲಾಕೆಟ್ ಹೊಂದಿದ್ದ ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಸುಳ್ಯದ ನಗರ ಪಂಚಾಯ್ತಿ ಮಹಿಳಾ ಸಿಬ್ಬಂದಿಗೆ ಅರಣ್ಯಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮತ್ತು ಅಳಿಯನ ಫೋಟೋಗಳು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಫೋಟೋಗಳೂ ಹರಿದಾಡುತ್ತಿವೆ. ಸಚಿವೆ ಲಕ್ಷ್ಮಿ ಮನೆಗೆ ಇಂದು ಅರಣ್ಯಾಧಿಕಾರಿಗಳು ತೆರಳಿ ಲಾಕೆಟ್ ವಶಕ್ಕೆ ಪಡೆದಿದ್ದಾರೆ. ʼತಮ್ಮ ಮಗನ ಬಳಿ ಇರುವ ಹುಲಿಯುಗುರು ಪ್ಲಾಸ್ಟಿಕ್ನಿಂದ ಮಾಡಿರೋ ಕೃತಕ ಹುಲಿಯುಗುರಿನ ಮಾದರಿʼ ಎಂದು ಅವರು ಸಮಜಾಯಿಷಿ ಕೊಟ್ಟಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಸಂತೋಷ್ ಮೇಲೆ ಕ್ರಮ ಜರುಗಿಸಿದಷ್ಟೇ ವೇಗವಾಗಿ ಬೇರೆ ದೂರುಗಳ ಬಗ್ಗೆ ಅರಣ್ಯಾಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಸಂತೋಷ್ ಬಂಧನದ ನಂತರ, ಅಂತಹುದೇ ಅಪರಾಧದ ಮಿಕ್ಕ ಆರೋಪಿಗಳ ಬಂಧನ ಯಾಕಾಗಿಲ್ಲ?
ಜನರು ಸ್ವಪ್ರೇರಣೆಯಿಂದ ತಮ್ಮಲ್ಲಿರುವ ಹುಲಿಯುಗುರುಗಳನ್ನು ತಂದು ಒಪ್ಪಿಸಲು ಅವಕಾಶ ನೀಡಲಾಗುವುದು ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಯುವಕನ ಮೇಲೆ ಒಂದು ದೂರು ಬಂದ ತಕ್ಷಣ ಏಕಾಏಕಿ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳಿಗೆ ಈ ಪ್ರಕರಣ ಹೀಗೆ ಯಾರ್ಯಾರು ಪ್ರಭಾವಿಗಳನ್ನು ಸುತ್ತಿಕೊಳ್ಳುತ್ತದೆ ಎಂದು ಊಹಿಸಿರಲಾರರು. ನಟರು, ರಾಜಕಾರಣಿಗಳು ಒಟ್ಟಿನಲ್ಲಿ ಹಣವಂತರು ಹುಲಿಯುಗುರಿನ ಲಾಕೆಟ್ ಧರಿಸುವುದು ಹೊಸದೇನಲ್ಲ. ಅವುಗಳು ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿರುವುದೂ ಇದೇ ಮೊದಲೂ ಅಲ್ಲ. ಆದರೆ, ಅವರು ತಮ್ಮ ಕರ್ತವ್ಯವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ನಿರ್ವಹಿಸುತ್ತ ಬಂದಿದ್ದಲ್ಲಿ ಹೀಗೆ ಪೇಚಿಗೆ ಸಿಕ್ಕು ಒದ್ದಾಡುವ ಸ್ಥಿತಿ ಬರುತ್ತಿರಲಿಲ್ಲ.
ಸಂತೋಷ್ ಅವರನ್ನು ರಾತ್ರೋರಾತ್ರಿ ಬಂಧಿಸಿದ್ದರಲ್ಲಿ ರಿಯಾಲಿಟಿ ಶೋ ಆಯೋಜಕರು, ಚಾನೆಲ್ನವರ ಕೈವಾಡ ಇದ್ದೀತೇ ಎಂದೂ ಹಲವರು ಶಂಕಿಸಿದ್ದಾರೆ. ದೂರು ಕೊಟ್ಟವರು ಯಾರು? ದೂರು ಬಂದ ತಕ್ಷಣ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಶೋ ನಡೆಸುತ್ತಿದ್ದಲ್ಲಿಗೆ ಹೋಗಿ ನೋಟಿಸ್ ಜಾರಿ ಮಾಡಿ ಆತನನ್ನು ಶೋ ದಿಂದ ಹೊರಗೆ ಕರೆಯಿಸಿ, ವಿಚಾರಣೆಗೆ ಒಳಪಡಿಸಬಹುದಿತ್ತು. ಟಿಆರ್ಪಿ ಹೆಚ್ಚಿಸಿಕೊಳ್ಳಲು ಯಾರದ್ದೋ ವೈಯಕ್ತಿಕ ಬದುಕನ್ನು ಬೀದಿಗೆ ತರುವ ಚಾಳಿ ಸುದ್ದಿ ಮತ್ತು ಮನರಂಜನಾ ಮಾಧ್ಯಮಗಳ ಅಸಲಿ
ಬಂಡವಾಳವೇ ಆಗಿ ಹೋಗಿದೆ. ಸ್ಪರ್ಧಿಯೊಬ್ಬನನ್ನು ಏಕಾಏಕಿ ಬಂಧಿಸಿರುವ ಕ್ರಮ ಈ ಗುಮಾನಿಗೆ ದಾರಿ ಮಾಡುತ್ತದೆ.
ಈ ಮಧ್ಯೆ ಬಿಜೆಪಿಗರು ತಮ್ಮ ಮಾಮೂಲು ಪ್ರಲಾಪವನ್ನು ಹೊರಹಾಕಿದ್ದಾರೆ. ಇದು ಹಿಂದೂ ವಿರೋಧಿ ಕ್ರಮ, ಕಾಂಗ್ರೆಸ್ ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡುತ್ತಿದೆ, ನವಿಲುಗರಿ ಇಟ್ಟುಕೊಳ್ಲುವ ಮುಸ್ಲಿಂ ದರ್ಗಾಗಳ ಮೇಲೆ ದಾಳಿ ಮಾಡಲಿ ಎಂದೆಲ್ಲ ಹೇಳಿಕೆ ಕೊಡುತ್ತಿದ್ದಾರೆ. ಸ್ವಯಂಘೋಷಿತ ಅವಧೂತ ವಿನಯ್ ಗುರೂಜಿ , ʼಹುಲಿ ಚರ್ಮದ ಮೇಲೆ ಸ್ವಾಮೀಜಿಗಳು ಕೂರುವುದು ಋಷಿಗಳ ಕಾಲದಿಂದಲೂ ಇದೆ. ಹಾಗಿದ್ದರೆ ಶಿವನ ಮೇಲೆ ಕೇಸು ಹಾಕಿʼ ಎಂದು ಹೇಳಿರುವುದು ಹಾಸ್ಯಾಸ್ಪದ. ಇಲ್ಲದ ಋಷಿಗಳನ್ನೂ, ಕಲ್ಲು ರೂಪಿ ಶಿವನನ್ನೂ ಕಟಕಟೆಯಲ್ಲಿ ನಿಲ್ಲಿಸಲಾಗದು. ವನ್ಯಜೀವಿ ಸಂರಕ್ಷಣಾ ಕಾಯ್ದೆಯು 1972 ರಲ್ಲಿ ಜಾರಿಗೆ ಬಂದಿದೆ. ಈ ಕಾಯಿದೆಯಿಂದ ಧಾರ್ಮಿಕ ಮುಖಂಡರಿಗೆ, ರಾಜಕಾರಣಿಗಳಿಗೆ, ಸ್ವಯಂಘೋಷಿತ ಅವಧೂತರು, ಗುರೂಜಿಗಳಿಗೆ ವಿನಾಯಿತಿಯೇನೂ ಇಲ್ಲ.
ʼಹೀಗೆ ಬಂಧಿಸುತ್ತ ಹೋದರೆ ಜೈಲುಗಳು ಸಾಕಾಗಲ್ಲ. ಟಿಪ್ಪುವಿನ ಚಿತ್ರಗಳನ್ನು ಮನೆಗಳಲ್ಲಿ ಇಟ್ಟುಕೊಂಡವರಿದ್ದಾರೆ. ಆತ ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ ಜನರಿಗೆಪ್ರೇರಣೆಯಾದರೆ… ಎಂಬ ಕೋಮುವಾದಿ ವ್ಯಂಗ್ಯದ ಹುಸಿ ಆತಂಕವನ್ನು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿಚಾರಗಳಿಗೂ ಮುಸ್ಲಿಮರನ್ನು ಎಳೆದು ತರುವ ಅದೇ ಮಾಮೂಲು ವ್ಯಾಧಿಯಿದು. ಪ್ರತಿಯೊಂದು ವಿಚಾರದಲ್ಲಿಯೂ ಕೋಮುವಾದಿ ನಂಜಿಗಾಗಿ ತಡಕಾಡುವವರು ಬಿಜೆಪಿ ನಾಯಕರು. ಆದರೆ ಇಂತಹ ವಿಚಾರದಲ್ಲಿ ಇವರು ನಿಜಕ್ಕೂ ಕೋಮುಪ್ರಚೋದನೆಗೆ ಇಳಿಯದೆ ಸಂಯಮದಿಂದ ಹೇಳಿಕೆ ನೀಡುವ ಅಗತ್ಯವಿದೆ.
ವನ್ಯಜೀವಿ ರಕ್ಷಣೆ, ಅರಣ್ಯ-ಪರಿಸರ ರಕ್ಷಣೆ, ನದಿಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಇಂತಹ ವಿಚಾರಗಳಲ್ಲಿ ಕಾನೂನು ಕ್ರಮ ಜರುಗಿಸುವುದು ಎಲ್ಲ ಸರ್ಕಾರಗಳ ಆದ್ಯತೆಯಾಗಿರಬೇಕು. ಇಲ್ಲವಾದರೆ ನಮ್ಮ ಅಡವಿಗಳು ಮತ್ತು ವನ್ಯಜೀವಿಗಳ ಪ್ರತಿಕೃತಿ ತಯಾರಿಸಿ ವಸ್ತು ಸಂಗ್ರಹಾಲಯಗಳಲ್ಲಿ ಇಟ್ಟು ನೋಡಬೇಕಾದ ದುರ್ದಿನಗಳು ಬಂದಾವು. ಜೀವಸಂಕುಲ ಸರಪಳಿ ನಾಶವಾದರೆ ಅದರ ಭಾಗವೇ ಆದ ಮನುಷ್ಯಪ್ರಾಣಿಯ ನಾಶವೂ ನಿಶ್ಚಿತ ಎಂಬ ನಿಷ್ಠುರ ಸತ್ಯವನ್ನು ನೆನಪಿಡಬೇಕು.
