ಬಿ ಎಲ್ ಸಂತೋಷ್ ಅವರನ್ನೇ ನಂಬಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಅರಿತ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಓಲೈಸಲು ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದೆ. ಆ ಮೂಲಕ ಯಡಿಯೂರಪ್ಪ ಸಂತುಷ್ಟರಾಗಿ ತನು ಮನ ಧನಪೂರ್ವಕವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿಯಲಿ ಎನ್ನುವುದು ಹೈಕಮಾಂಡ್ ಬಯಕೆಯಾಗಿದೆ
ಬಿಜೆಪಿ ಪಕ್ಷದಲ್ಲಿ ಹಲವು ತಿಂಗಳ ಹಗ್ಗಜಗ್ಗಾಟ ಮುಗಿದಿದೆ; ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಅವರ ಮಗ ಬಿ ವೈ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಲಾಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ತನ್ನ ಸದ್ಯದ ಆದ್ಯತೆ ಮತ್ತು ಅನಿವಾರ್ಯತೆ ಏನು ಎನ್ನುವುದನ್ನು ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹೋದಲ್ಲಿ ಬಂದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಕೆಂಡ ಕಾರುತ್ತಿದ್ದರು. ಅಮಿತ್ ಶಾ, ಜೆ ಪಿ ನಡ್ಡಾ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಸಮಯ ಸಿಕ್ಕಾಗಲೆಲ್ಲ ಕುಟುಂಬ ರಾಜಕಾರಣದ ದಾಳವನ್ನು ಉರುಳಿಸುತ್ತಿದ್ದರು. ಅಂಥವರೇ ಈಗ ಯಡಿಯೂರಪ್ಪನವರ ಮಗನಿಗೆ ರಾಜ್ಯಾಧ್ಯಕ್ಷ ಪದವಿ ದಯಪಾಲಿಸಿರುವ ಬಗ್ಗೆ ಕಟು ಟೀಕೆ ಮತ್ತು ವ್ಯಂಗ್ಯದ ಮಾತುಗಳು ಕೇಳಿಬರುತ್ತಿವೆ.
ಬಿ ವೈ ವಿಜಯೇಂದ್ರ ಅವರಿಗೆ ಮೊದಲ ಶಾಸಕತ್ವದ ಅವಧಿಯಲ್ಲೇ ಮಹತ್ವದ ಹುದ್ದೆಯೊಂದು ದಕ್ಕಿದೆ. ಅವರು 2018ರಲ್ಲಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಲು ಮುಂದಾಗಿದ್ದರು. ಅದಕ್ಕಾಗಿ ಸಕಲ ತಯಾರಿಯನ್ನೂ ನಡೆಸಿದ್ದರು. ಆದರೆ, ಕೊನೆಗೆ ಪಕ್ಷವು ಅವರಿಗೆ ಟಿಕೆಟ್ ನೀಡಿರಲಿಲ್ಲ. ಅದರಿಂದ ಬೇಸರಗೊಂಡರೂ ವಿಜಯೇಂದ್ರ ಏನೂ ಮಾಡುವಂತಿರಲಿಲ್ಲ. ಯಡಿಯೂರಪ್ಪ ನಿವೃತ್ತಿಯ ನಂತರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅಂಥವರನ್ನು ಪಕ್ಷ ಈಗ ರಾಜ್ಯಾಧ್ಯಕ್ಷ ಮಾಡಿದೆ ಎಂದರೆ, ಅದಕ್ಕೆ ಅವರ ತಂದೆ ಯಡಿಯೂರಪ್ಪನವರೇ ಕಾರಣ.
ಬಿ ಎಸ್ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಅವರ ಹಿರಿಯ ಮಗ ಬಿ ವೈ ರಾಘವೇಂದ್ರ ಶಿವಮೊಗ್ಗದ ಸಂಸದರು. ಈಗ ಅವರ ಕಿರಿಯ ಪುತ್ರ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ. ಯಡಿಯೂರಪ್ಪ ಅವರ ಕುಟುಂಬದವರಿಗೆ ಇಷ್ಟೆಲ್ಲ ಅಧಿಕಾರ, ಪದವಿಗಳು ದಕ್ಕಿರುವುದರಲ್ಲಿ ಯಡಿಯೂರಪ್ಪ ಅವರ ಗೆಲುವು ಮತ್ತು ಬಿಜೆಪಿ ಹೈಕಮಾಂಡ್ನ ಸೋಲಿನ ಕಥೆಗಳು ಅಡಗಿವೆ.
ಕರ್ನಾಟಕದಲ್ಲಿ ಆರ್ಎಸ್ಎಸ್ ಮುಖಂಡರ ಹಾಗೂ ಬ್ರಾಹ್ಮಣರ ನಡುವೆ ಮಾತ್ರವೇ ಅಸ್ತಿತ್ವದಲ್ಲಿದ್ದ ಬಿಜೆಪಿ ರಾಜ್ಯದಾದ್ಯಂತ ಹರಡಲು ಕಾರಣರಾದವರು ಇದೇ ಯಡಿಯೂರಪ್ಪ. ಅವರಿಂದಾಗಿ ರಾಜ್ಯದ ಬಲಿಷ್ಠ ಲಿಂಗಾಯತ ಸಮುದಾಯ ಬಿಜೆಪಿ ಜೊತೆ ನಿಲ್ಲತೊಡಗಿತು. ದಕ್ಷಿಣ ಭಾರತದಲ್ಲಿ ಮೊದಲಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿದ್ದೇ ಯಡಿಯೂರಪ್ಪ. ಇಷ್ಟಾದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಎಂದೂ ಅವಕಾಶ ನೀಡಲಿಲ್ಲ. ಒಂದು ಕಾಲದಲ್ಲಿ ಅನಂತಕುಮಾರ್ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿದ್ದರು. ಅವರು ಕಾಲವಾದ ನಂತರ ಬಿ ಎಲ್ ಸಂತೋಷ್ ಆ ಕೆಲಸ ಮುಂದುವರೆಸಿದರು. ಸಂತೋಷ್, ಯಡಿಯೂರಪ್ಪನವರ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದರು. ಚುನಾವಣೆಗಳಲ್ಲಿ ಯಡಿಯೂರಪ್ಪ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಅಧಿಕಾರದ ವಿಚಾರ ಬಂದಾಗ ಸಂತೋಷ್ ಬಳಗವು ಹಕ್ಕು ಮಂಡಿಸುತ್ತಿತ್ತು. ಅದಕ್ಕೆ ರಾಜ್ಯದ ಕೆಲವು ಮಾಧ್ಯಮಗಳೂ ಒತ್ತಾಸೆಯಾಗಿ ನಿಲ್ಲುತ್ತಿದ್ದವು. ಕಳೆದ ವಿಧಾನಸಭಾ ಚುನಾವಣೆಯ ನಂತರವೂ ಇದೇ ಆಗಿತ್ತು.
2019ರಲ್ಲಿ ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರು. ಆಗ ಇದೇ ವಿಜಯೇಂದ್ರ ಕಾರಣಕ್ಕೆ ಯಡಿಯೂರಪ್ಪ ಪಕ್ಷದಲ್ಲಿ ತೀವ್ರ ವಿರೋಧ ಎದುರಿಸಿದ್ದರು. ಅಧಿಕಾರದಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಕೇವಲ ಎರಡೇ ವರ್ಷಗಳಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲಾಗಿತ್ತು. ಅದಾದ ನಂತರ ಬೊಮ್ಮಾಯಿ ಸರ್ಕಾರದಲ್ಲಿ ವಿಜಯೇಂದ್ರನಿಗೆ ಮಂತ್ರಿ ಸ್ಥಾನ ಕೊಡಿಸಲು ಯಡಿಯೂರಪ್ಪ ಭಾರಿ ಪ್ರಯತ್ನ ನಡೆಸಿದ್ದರು. ಆದರೂ ಬಿಜೆಪಿ ಹೈಕಮಾಂಡ್ ಅವರ ಬೇಡಿಕೆಗೆ ಮಣಿದಿರಲಿಲ್ಲ. ಅಂಥವರಿಗೆ ಈಗ ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ದಿಢೀರ್ ಮೇಲೆ ಪ್ರೀತಿ ಬಂದಿದೆ ಎಂದರೆ ಅದಕ್ಕೆ ಕಾರಣ, ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲು.
ಬಿ ಎಲ್ ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರ ತಂಡವು ರಾಜ್ಯದಲ್ಲಿ ಹಿಂದುತ್ವದ ಅಜೆಂಡಾ ಜಾರಿಗೆ ಪ್ರಯತ್ನಿಸಿತ್ತು. ಹಲಾಲ್ ಕಟ್, ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರ ಹೀಗೆ ಹಲವು ವಿವಾದಗಳನ್ನು ಸೃಷ್ಟಿಸಿತ್ತು. ಆದರೆ, ಕೋಮು ಸಾಮರಸ್ಯದ ಕರ್ನಾಟಕದಲ್ಲಿ ಹಿಂದುತ್ವದ ಅಜೆಂಡಾ ಜಾರಿ ಯತ್ನ ಯಶಸ್ವಿಯಾಗಲಿಲ್ಲ. ಅದರ ಫಲವಾಗಿ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿತ್ತು. ರೇಣುಕಾಚಾರ್ಯರಂಥವರು ಹೋದಲ್ಲಿ ಬಂದಲ್ಲಿ ಬಿ ಎಲ್ ಸಂತೋಷ್ ಅವರ ತಂಡವೇ ಪಕ್ಷದ ಸೋಲಿಗೆ ಕಾರಣ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಕೊನೆಗೆ ಬಿ ಎಲ್ ಸಂತೋಷ್ ಅವರನ್ನೇ ನಂಬಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಅರಿತ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಓಲೈಸಲು ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದೆ. ಆ ಮೂಲಕ ಯಡಿಯೂರಪ್ಪ ಸಂತುಷ್ಟರಾಗಿ ತನು ಮನ ಧನಪೂರ್ವಕವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿಯಲಿ ಎನ್ನುವುದು ಹೈಕಮಾಂಡ್ ಬಯಕೆ.
ಸದ್ಯ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಅಷ್ಟು ಆಶಾದಾಯಕವಾಗಿಯೇನೂ ಇಲ್ಲ. ಡಿ ವಿ ಸದಾನಂದ ಗೌಡ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಬಿ ಎಲ್ ಸಂತೋಷ್, ಪ್ರಲ್ಹಾದ್ ಜೋಷಿ, ಸುರೇಶ್ ಕುಮಾರ್, ಬಿ ಸಿ ನಾಗೇಶ್, ತೇಜಸ್ವಿ ಸೂರ್ಯ, ಶ್ರೀವತ್ಸ, ರವಿ ಸುಬ್ರಹ್ಮಣ್ಯ ಮುಂತಾದ ಬ್ರಾಹ್ಮಣರ ತಂಡ ಥಂಡಾ ಹೊಡೆದು ಕೂತಿದೆ. ಕರಾವಳಿಯ ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಬಣ ಸೂಕ್ತ ಸ್ಥಾನಮಾನಗಳಿಲ್ಲದೇ ಅಸಂತೃಪ್ತಿಯಿಂದಿದೆ. ಇನ್ನು ಸಿ ಟಿ ರವಿ, ವಿ.ಸೋಮಣ್ಣ ವಿಜಯೇಂದ್ರ, ಆರ್ ಅಶೋಕ್, ಯತ್ನಾಳ್ ಮುಂತಾದ ಹಿರಿಯರ ತಂಡವೂ ಕೂಡ ಅಸಹನೆಯಿಂದಿದೆ. ಎಸ್ ಟಿ ಸೋಮಶೇಖರ್ ಆಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ವಿಜಯೇಂದ್ರ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಪಕ್ಷದ ಪುನಶ್ಚೇತನಕ್ಕೆ ಅದೇನು ಮ್ಯಾಜಿಕ್ ಮಾಡುವರೋ ನೋಡಬೇಕು.
