ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ

Date:

Advertisements
ಸರ್ಕಾರದ ಕೋಟಿ ಕೋಟಿ ಅನುದಾನ ನೀಡಿ ಬೆಂಗಳೂರು ಹಬ್ಬಗಳಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮುನ್ನ, ಸಿಲಿಕಾನ್ ಸಿಟಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುವ ಮುನ್ನ, ನಗರವನ್ನು ಬಡವರು, ಮಹಿಳೆಯರು, ಮಕ್ಕಳು ಎಲ್ಲರೂ ಯಾವುದೇ ಆತಂಕವಿಲ್ಲದೆ ಬದುಕುವ ತಾಣವನ್ನಾಗಿ ಮಾಡುವ, ಇಲ್ಲಿನ ರಸ್ತೆ, ಚರಂಡಿ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ಮನುಷ್ಯರು ನಿರಾತಂಕವಾಗಿ ಬಳಸುವಂತೆ ರೂಪಿಸುವ ಜವಾಬ್ದಾರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರದ್ದಾಗಿದೆ.

ಬೆಂಗಳೂರಿಗೆ ಸಂಬಂಧಿಸಿದಂತೆ ಸದ್ಯ ಎರಡು ಚಿತ್ರಗಳು ಪ್ರಧಾನವಾಗಿ ಎದ್ದುಕಾಣುತ್ತಿವೆ. ಒಂದು, ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಬೆಂಗಳೂರು ಹಬ್ಬದ ಸುದ್ದಿ; ಎರಡನೆಯದು, ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಮಗು ಸತ್ತಿರುವ ಪ್ರಕರಣ.

ಬೆಂಗಳೂರು ಹಬ್ಬ, ಇದು ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಶನ್ ನಡೆಸುತ್ತಿರುವ ಕಾರ್ಯಕ್ರಮ. ಈ ಫೌಂಡೇಶನ್ ಹೊರತಂದಿರುವ ಇಂಗ್ಲಿಷ್ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಲೋಕಾರ್ಪಣೆಗೊಳಿಸಿದ್ದರು. ಅವರು ಡಿಸೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಹಬ್ಬಕ್ಕೆ ಸಕಲ ಪ್ರೋತ್ಸಾಹ ನೀಡುವುದಾಗಿ ಸಿಎಂ ಹಾಗೂ ಡಿಸಿಎಂ ಘೋಷಿಸಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಲಯಗಳಿಂದಲೂ ನೆರವು ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು. ಬೆಂಗಳೂರು ಹಬ್ಬದಂಥ ಆಚರಣೆಗಳ ಮೂಲಕ ನಗರದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎನ್ನುವುದು ಸರ್ಕಾರದ ಇರಾದೆ. ಅದಕ್ಕಾಗಿ ಎಲೀಟ್ ಜನರೇ ಕೂಡಿ ನಡೆಸುವ ಬೆಂಗಳೂರು ಹಬ್ಬ ಎನ್ನುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಸಕಲರೂ ನೆರವು ನೀಡಲು ಮುಂದಾಗಿದ್ದಾರೆ. ವಿಪರ್ಯಾಸ ಏನೆಂದರೆ, ಇವರೆಲ್ಲ ಸರ್ಕಾರಿ ಯಂತ್ರವನ್ನು ಬಳಸಿಕೊಂಡು ಬೆಂಗಳೂರಿನ ಪರಂಪರೆ, ಸಂಸ್ಕೃತಿ ಇತ್ಯಾದಿಗಳನ್ನು ಉಳಿಸುವುದಕ್ಕಿಂತಲೂ ಮೊದಲು ಬೆಂಗಳೂರಿನ ಬಡವರ ಪ್ರಾಣಗಳನ್ನು ಉಳಿಸಬೇಕಾಗಿದೆ.

ಸಿಲಿಕಾನ್ ಸಿಟಿ, ಹೈಟೆಕ್ ಸಿಟಿ, ಕಾಸ್ಮೋ ಸಿಟಿ ಎಂದೆಲ್ಲ ಉಳ್ಳವರ ಮರ್ಜಿಗೆ ತಕ್ಕಂತೆ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಬಡವರ ಬದುಕು ದುರ್ಭರವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ನಡೆದಾಡಿದರೂ ಸಾವು ಸಂಭವಿಸಬಹುದು ಎಂದರೆ, ನಗರದ ಪರಿಸ್ಥಿತಿ ಇನ್ನೆಷ್ಟು ಹದಗೆಟ್ಟಿರಬಹುದು. ಹೋಪ್ ಫಾರ್ಮ್ ಜಂಕ್ಷನ್ ಬಳಿಯ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಹಾಗೂ ಒಂಬತ್ತು ತಿಂಗಳ ಹಸುಳೆ ಸಾವನ್ನಪ್ಪಿರುವುದು ನಗರದ ಮೂಲಸೌಕರ್ಯಗಳ ದುಃಸ್ಥಿತಿಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ಘಟನೆ ನಡೆಯುತ್ತಿದ್ದಂತೆಯೇ ತಡಬಡಾಯಿಸಿ ಎದ್ದ ಸರ್ಕಾರ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿತು. ಕೆಲವೇ ಗಂಟೆಗಳಲ್ಲಿ ಬೆಸ್ಕಾಂನ ಐವರು ನೌಕರರನ್ನು ಬಂಧಿಸಲಾಯಿತು. ನಂತರದ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಿ ಕಳುಹಿಸಿದ್ದೂ ಆಯಿತು. ಅದಕ್ಕಿಂತಲೂ ತಮಾಷೆಯ ವಿಚಾರ ಏನೆಂದರೆ, ಈ ವಿದ್ಯುತ್ ಅವಘಡಕ್ಕೆ ಇಲಿ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿರುವುದು. ಸರ್ಕಾರದ ತನಿಖೆ ಯಾವ ದಿಕ್ಕಿನಲ್ಲಿ ನಡೆಯಲಿದೆ ಎನ್ನುವುದು ಇದರಿಂದ ತಿಳಿಯುತ್ತದೆ.

Advertisements

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಬೆಸ್ಕಾಂ ವ್ಯಾಪ್ತಿಯಲ್ಲಿ ಹಲವು ಅವಘಡಗಳು ನಡೆದಿವೆ. ಬಸ್ ತಂಗುದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನಿಗೆ ನೇತಾಡುತ್ತಿದ್ದ ತಂತಿಯ ಮೂಲಕ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಅಸುನೀಗಿದ್ದ. ಮತ್ತೊಮ್ಮೆ, ಮಳೆ ಬರುತ್ತಿದ್ದಾಗ, ಯುವತಿಯೊಬ್ಬರು ಸ್ಕೂಟಿಯಿಂದ ಮನೆಗೆ ತೆರಳುತ್ತಾ, ರಸ್ತೆಯಲ್ಲಿ ಕೆಸರಿನಿಂದ ಆಯತಪ್ಪಿ ಬೀಳುವುದು ತಪ್ಪಿಸಿಕೊಳ್ಳಲು ವಿದ್ಯುತ್ ಕಂಬದ ಬಳಿ ನೆಲದ ಮೇಲೆ ಹೆಜ್ಜೆಯೂರಿದ್ದರು. ವಿದ್ಯುತ್ ಕಂಬದಿಂದ ಹೊರಚಾಚಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅವರು ಮರಣ ಹೊಂದಿದ್ದರು. ಇನ್ನೊಮ್ಮೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಖಾಸಗಿ ಕಂಪನಿ ಹಾಕಿದ್ದ ಕೇಬಲ್ ತುಳಿದು, ಅದರಿಂದ ವಿದ್ಯುತ್ ಶಾಕ್‌ಗೆ ಗುರಿಯಾಗಿ ತೀರಿಕೊಂಡಿದ್ದ. ಇಂಥ ಅನೇಕ ಘಟನೆಗಳು ನಡೆದಿವೆ. ಆದರೆ, ಯಾವ ಘಟನೆಯಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದ್ದ ಬಿಜೆಪಿ ಸರ್ಕಾರಕ್ಕೆ ಬೆಂಗಳೂರಿನ ಜನಸಾಮಾನ್ಯರ ಸಾವುಗಳು ಲೆಕ್ಕಕ್ಕೇ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಅದು ಮುಂದುವರೆಯುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡಬಾರದು.

ಮರಗಳಲ್ಲಿ, ರಸ್ತೆ ಅಕ್ಕಪಕ್ಕ ನೇತಾಡುವ ಕೇಬಲ್‌ಗಳ ಹಿಂದೆ ಒಂದು ಮಾಫಿಯಾನೇ ಇದೆ. ಇಂಟರ್ನೆಟ್, ಟಿವಿ ಕೇಬಲ್ ಮುಂತಾದ ಕಾರಣಗಳಿಗಾಗಿ ಖಾಸಗಿ ಕಂಪನಿಗಳು ನಿಯಮ ಮೀರಿ ಎಲ್ಲೆಂದರಲ್ಲಿ ಕೇಬಲ್ ಅಳವಡಿಸುತ್ತಿವೆ. ಅಂತಹ ಕೇಬಲ್‌ಗಳು ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಸಿಕ್ಕಿ ಹಲವು ಪ್ರಮಾದಗಳು ಸಂಭವಿಸಿವೆ. ಆದರೆ, ಆ ಕೇಬಲ್ ಮಾಫಿಯಾದ ಹಿಂದೆ ಇರುವವರು ರಾಜಕಾರಣಿಗಳು ಹಾಗೂ ಅಧಿಕಾರಿಗಳು. ಅವರ ಪ್ರಭಾವದ ಮುಂದೆ ಸರ್ಕಾರಕ್ಕೆ, ಬಿಬಿಎಂಪಿ, ಬೆಸ್ಕಾಂಗಳಿಗೆ ಬಡವರ ಪ್ರಾಣ ಲೆಕ್ಕಕ್ಕಿಲ್ಲದಂತಾಗಿದೆ.

ಸರ್ಕಾರವು ಕೋಟಿ ಕೋಟಿ ಅನುದಾನ ನೀಡಿ ಬೆಂಗಳೂರು ಹಬ್ಬಗಳಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮುನ್ನ, ಬೆಂಗಳೂರಿನ ಸೌಂದರ್ಯವನ್ನು ವೀಕ್ಷಿಸಲು 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡುವ ಮುನ್ನ, ಸಿಲಿಕಾನ್ ಸಿಟಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುವ ಮುನ್ನ, ನಗರವನ್ನು ಬಡವರು, ಮಹಿಳೆಯರು, ಮಕ್ಕಳು ಎಲ್ಲರೂ ಯಾವುದೇ ಆತಂಕವಿಲ್ಲದೆ ಬದುಕುವ ತಾಣವನ್ನಾಗಿ ಮಾಡುವ, ಇಲ್ಲಿನ ರಸ್ತೆ, ನೀರು, ವಿದ್ಯುತ್, ಚರಂಡಿ ಮತ್ತಿತರ ಮೂಲಸೌಕರ್ಯಗಳನ್ನು ಮನುಷ್ಯರು ನಿರಾತಂಕವಾಗಿ ಬಳಸುವಂತೆ ರೂಪಿಸುವ ಜವಾಬ್ದಾರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರದ್ದಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಾಸಗಿ ರಿಯಲ್ ಎಸ್ಟೇಟ್ ಹಾವಳಿಯಿಂದಾಗಿ ನಿವೇಶನಗಳು ಉಳ್ಳವರ ಸೊತ್ತಾಗಿವೆ.
    ದೊಡ್ಡ ಬಿಡಿನಿವೇಶನಗಳನ್ನು ಮಾಡುವುದನ್ನು ಬಿಡಬೇಕಿದೆ.೩೦*೪೦ ಅಳತೆಯ ನಿವೇಶನಗಳೇ ಸಾಕು ಬೆಂಗಳೂರಿಗೆ.
    ಅಪಾರ್ಟಮೆಂಟ್‌ಗಳನ್ನು ಕಟ್ಟುವಂತಾ ದೊಡ್ಡನಿವೇಶನಗಳನ್ನು ಬಿಡಿಎ ಮಾಡಬೇಕಿದೆ.ಅಲ್ಲಿ ಮನೆಗಳನ್ನು ಕಟ್ಟಿ ಹಂಚಬೇಕು.
    ಬಿಡಿಎ ಈವರೆಗೆ ಹಂಚಿರುವ ನಿವೇಶನಗಳನ್ನು ಅವುಗಳ ಒಡೆಯರ ಆದಾರ್ ನಂಬರಿಗೆ ಲಿಂಕ್ ಮಾಡಿ ಹಲವಾರು ವರುಶಗಳಿಂದ ಕಾಲಿ ಇರುವ ನಿವೇಶನಗಳನ್ನು ಮೂಲ ಬೆಲೆಗೆ ಬ್ಯಾಂಕ್ ಬಡ್ಡಿಸೇರಿಸಿ ಒಡೆಯರಿಗೆ ನೀಡಿ ನಿವೇಶನಗಳನ್ನು ಹರಾಜು ಮಾಡಿ ಮನೆಕಟ್ಟುವವರಿಗೆ ನೀಡಬೇಕಿದೆ.ಬೆಂಗಳೂರು ಸುತ್ತಾ ಯಾವುದೇ ಬೇಸಾಯದ ನೆಲವನ್ನು ಕಾಸಗಿಯವರಿಗೆ ಕನ್ವರ್ಸನ್ ಮಾಡುವುದನ್ನು ಕಯ್ ಬಿಡಬೇಕು. ಸರಕಾರವೇ ಅಗತ್ಯಕ್ಕೆ ತಕ್ಕಂತೆ ಊರಿನ ಸುತ್ತಲಿವ ನೆಲವನ್ನು ತನ್ನ ತೆಕ್ಕೆಗೆ ಪಡೆದು ಯೋಜನಾಬದ್ದ ಬಡಾವಣೆಗಳನ್ನು ಮಾಡಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X