ಈ ದಿನ ಸಂಪಾದಕೀಯ | ಕಾಲವೆಂಬ ಗಾಲಿಯಡಿ ಡಿ.ಕೆ.ಶಿ.; ಏಳುವರೇ, ಬೀಳುವರೇ?

Date:

Advertisements

ರಾಜಕಾರಣದ ಶುರುವಾತಿನಲ್ಲಿ ಬಂಗಾರಪ್ಪ ಮಂತ್ರಿಮಂಡಲದ ಜೈಲುಮಂತ್ರಿಯಾಗಿದ್ದರು ಶಿವಕುಮಾರ್. ಅದಕ್ಕೆ ಮುನ್ನ ರಾಜ್ಯದ ಕತ್ತಲು ಜಗತ್ತನ್ನು ಆಳಿದ್ದವರ ಜೊತೆ ಸಲುಗೆ ಹೊಂದಿದ್ದವರು. ಬಂಡೆ ಎಂಬ ಅಭಿದಾನ ಪಡೆದ ಅವರನ್ನು ಒರಟು ನಾಯಕನ ವರ್ಚಸ್ಸು ನೆರಳಿನಂತೆ ಹಿಂಬಾಲಿಸಿದೆ. ಅದನ್ನು ಇಡಿಯಾಗಿ ಕೊಡವಿಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನವನ್ನೇನೂ ಅವರು ಮಾಡಿಲ್ಲ. ಬದಲಿಗೆ ಅದರ ಮೇಲೆ ಸಂಸ್ಕೃತ ವಿದ್ಯಾವಂತಿಕೆಯ ಮುಸುಕನ್ನು ಎಳೆದಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಒರಟರ ಪಾಲಿಗೆ ಒರಟನೆಂಬ ಸಂದೇಶ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಯನ್ನೇ ಗುದ್ದುವ ಜಾಯಮಾನದವರು. ತಾವಾಗಿ ಸುದ್ದಿಯನ್ನು ಹಿಂಬಾಲಿಸುವ ರಾಜಕಾರಣಿಗಳು ದೇಶದಲ್ಲಿ ಹೇರಳ. ಆದರೆ ಸುದ್ದಿ ತಮ್ಮನ್ನೇ ಹುಡುಕಿ ಹೊರಡುವಂತೆ ಕೆಣಕಿ ಛೂ ಬಿಟ್ಟುಕೊಳ್ಳುವುದನ್ನು ಶಿವಕುಮಾರ್ ಬಹುಕಾಲದಿಂದ ಬಲ್ಲರು.

ರಾಜ್ಯದ ಮುಖ್ಯಮಂತ್ರಿ ಗದ್ದುಗೆಗೆ ಎರಡೂವರೆ ವರ್ಷಗಳ ಹಿಂದೆಯೇ ಪ್ರಬಲ ದಾವೆ ಹೂಡಿದ್ದರು. ಆದರೆ ಬಲಿಷ್ಠ ‘ಅಹಿಂದ’ ನಾಯಕ ಸಿದ್ದರಾಮಯ್ಯ ಜೊತೆಗಿನ ಪೈಪೋಟಿ ಸರಳವಿರಲಿಲ್ಲ. ಪಕ್ಷದ ವರಿಷ್ಠರು ಕೂಡ ಸಿದ್ದರಾಮಯ್ಯ ಜೊತೆ ನಿಂತರು. ಹೀಗಾಗಿ ಶಿವಕುಮಾರ್ ಹಿಂದೆ ಸರಿಯದೆ ವಿಧಿಯಿರಲಿಲ್ಲ.

Advertisements

ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಲಾ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಬೇಕೆಂಬ ಅಲಿಖಿತ ಅಧಿಕಾರ ಹಂಚಿಕೆ ಸೂತ್ರವೊಂದು ಚಾಲ್ತಿಯಲ್ಲಿದೆ ಎಂಬ ಸುದ್ದಿ ಆರಂಭದಲ್ಲಿ ಹರಿದಾಡಿತ್ತು. ಈ ಸೂತ್ರ ಅಧಿಕೃತ ಎಂದು ನಂಬುವುದೇ ಆದಲ್ಲಿ ಎರಡೂವರೆ ವರ್ಷಗಳ ಸಿದ್ದರಾಮಯ್ಯನವರ ಅವಧಿ ಇನ್ನೇನು ಮುಗಿಯುತ್ತ ಬಂದಿದೆ. ಇಬ್ಬರೂ ನಾಯಕರ ಅನುಯಾಯಿಗಳು ತಮ್ಮ ತಮ್ಮ ನಾಯಕನ ಮೂಗಿನ ನೇರಕ್ಕೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಐದು ವರ್ಷಗಳ ಪೂರ್ಣಾವಧಿಗೆ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಬಹಿರಂಗವಾಗಿ ಘೋಷಿಸಿದ್ದುಂಟು. ಜೊತೆಜೊತೆಗೇ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬ ಶಿವಕುಮಾರ್ ಅವರದೇ ಹೇಳಿಕೆಯನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದರು. ಎರಡೂವರೆ ವರ್ಷಗಳ ಎರಡನೆಯ ಅವಧಿ ಕದ ಬಡಿದಿರುವಂತೆಯೇ ಇಬ್ಬರೂ ನಾಯಕರ ನಡೆನುಡಿಗಳಿಗೆ ವಿಶೇಷ ಅರ್ಥವನ್ನು ಆರೋಪಿಸಿ ವಾಖ್ಯಾನಿಸಲಾಗುತ್ತಿದೆ.

ಮೊನ್ನೆ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಆರೆಸ್ಸೆಸ್ ನ ಸಂಸ್ಕೃತ ಭಾಷೆಯ ಪ್ರಾರ್ಥನೆಯನ್ನು ಹಾಡಿ ಅವರು ಮತ್ತೊಮ್ಮೆ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಶಿವಕುಮಾರ್ ಅವರ ಸಂಸ್ಕೃತ ಪ್ರೀತಿ ಪ್ರದರ್ಶನ ಇದೇ ಮೊದಲೇನೂ ಅಲ್ಲ. ಈ ಹಿಂದೆ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದಾಗಲೂ ಸಂಸ್ಕೃತ ಪ್ರೀತಿಯನ್ನು ವಿಧಾನಮಂಡಲ ಅಧಿವೇಶನದಲ್ಲೇ ಪ್ರಕಟಿಸಿದ್ದು ಉಂಟು. ವಿಶೇಷ ಉಪಾಧ್ಯಾಯರನ್ನು ಇಟ್ಟುಕೊಂಡು ‘ದೇವಭಾಷೆ’ಯನ್ನು ಕಲಿಯುತ್ತಿರುವುದಾಗಿ ಹೇಳಿದ್ದರು. ಅಧಿವೇಶನಗಳಲ್ಲಿ ಮಾತಾಡುವ ಸಂದರ್ಭಗಳು ಒದಗಿದಾಗ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸುವ ಅವಕಾಶಗಳನ್ನು ಅವರು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ರಾಜಕಾರಣದ ಶುರುವಾತಿನಲ್ಲಿ ಬಂಗಾರಪ್ಪ ಮಂತ್ರಿಮಂಡಲದ ಜೈಲುಮಂತ್ರಿಯಾಗಿದ್ದರು ಶಿವಕುಮಾರ್. ಅದಕ್ಕೆ ಮುನ್ನ ರಾಜ್ಯದ ಕತ್ತಲು ಜಗತ್ತನ್ನು ಆಳಿದ್ದವರ ಜೊತೆ ಸಲುಗೆ ಹೊಂದಿದ್ದವರು. ಬಂಡೆ ಎಂಬ ಅಭಿದಾನ ಪಡೆದ ಅವರನ್ನು ಒರಟು ನಾಯಕನ ವರ್ಚಸ್ಸು ನೆರಳಿನಂತೆ ಹಿಂಬಾಲಿಸಿದೆ. ಅದನ್ನು ಇಡಿಯಾಗಿ ಕೊಡವಿಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನವನ್ನೇನೂ ಅವರು ಮಾಡಿಲ್ಲ. ಬದಲಿಗೆ ಅದರ ಮೇಲೆ ಸಂಸ್ಕೃತ ವಿದ್ಯಾವಂತಿಕೆಯ ಮುಸುಕನ್ನು ಎಳೆದಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಒರಟರ ಪಾಲಿಗೆ ಒರಟನೆಂಬ ಸಂದೇಶ ನೀಡಿದ್ದಾರೆ.

ಜನಪ್ರಿಯ ಮುಖ್ಯಮಂತ್ರಿಗಳಾದವರು ‘ಸಲ್ಲದ’ ಕೆಲಸಗಳನ್ನು ಮಾಡಲು ತಮ್ಮ ನೆಚ್ಚಿನ ಹಿಂಬಾಲಕ ಮಂತ್ರಿಯೊಬ್ಬರನ್ನು ಇರಿಸಿಕೊಂಡಿರುವುದು ವಾಡಿಕೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಜೀವರಾಜ ಆಳ್ವ ಅವರನ್ನು ಹೀಗೆ ಬಳಸಿಕೊಂಡರು. ಹೆಗಡೆ ಆಡಲಾರದ ಮಾತುಗಳಿಗೆ ಆಳ್ವ ಅವರೇ ನಾಲಗೆಯಾಗುತ್ತಿದ್ದರು.

ಕಾಂಗ್ರೆಸ್ ಕಟ್ಟಾಳು ಎನಿಸಿದ್ದ ಎಸ್.ಎಂ.ಕೃಷ್ಣ ಕೂಡ ಶಿವಕುಮಾರ್ ಅವರನ್ನು ಹೀಗೆಯೇ ಬಳಸಿಕೊಂಡರು. ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ಆಗಲಿ, ಕೇಂದ್ರ ಮಂತ್ರಿಯೇ ಇದ್ದಿರಲಿ, ಅವರ ನೆಚ್ಚಿನ ಬಂಟ ಶಿವಕುಮಾರ್ ಅವರೇ ಆಗಿದ್ದರು. ಕಾಲಾನುಕ್ರಮದಲ್ಲಿ ಹೇರಳ ಹಣ ಸಂಪಾದನೆಯ ದಾರಿಗಳನ್ನು ತಮಗಾಗಿ ತೆರೆದುಕೊಂಡಿದ್ದಾರೆ. ಇತರೆ ರಾಜ್ಯಗಳ ಶಾಸಕರನ್ನು ಬಿಜೆಪಿ ಬಕಾಸುರ ಬಾಯಿಂದ ಉಳಿಸಲು ರಾಜ್ಯದ ರೆಸಾರ್ಟ್ ಗಳಿಗೆ ಕರೆತಂದು ಭದ್ರವಾಗಿ ‘ಕೂಡಿ ಹಾಕುವ’ ಹಲವು ಕಾರ್ಯಾಚರಣೆಗಳನ್ನು ಹಣಬಲ ಮತ್ತು ಬಾಹುಬಲಗಳ ಮೂಲಕ ಶಿವಕುಮಾರ್ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಒಂದೊಮ್ಮೆ ತಿಂಗಳುಗಟ್ಟಲೆ ಇವರಿಗೆ ಭೇಟಿ ಕರುಣಿಸದೆ ಸತಾಯಿಸಿದ್ದ ಪಕ್ಷದ ಅಂದಿನ ಅತ್ಯುನ್ನತ ನಾಯಕಿ ಕಡೆಗೂ ತಮ್ಮ ಬಿಗುವನ್ನು ಸಡಿಲಿಸಲೇಬೇಕಾಯಿತು.   ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದ ಡಿಕೆಶಿ ಅವರಿಗೆ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಕಡೆಗೂ ಕದ ತೆರೆಯಲೇಬೇಕಾಗಿ ಬಂದಿತ್ತು.

ಎಸ್.ಎಂ.ಕೃಷ್ಣ ತಮ್ಮ ರಾಜಕೀಯ ಬದುಕಿನ ಇಳಿ ಹೊತ್ತಿನಲ್ಲಿ ‘ಮೋಶಾ’ ಯುಗದ  ಬಿಜೆಪಿ ಸೇರಿ ಕಾಂಗ್ರೆಸ್ಸಿಗರನ್ನು ಚಕಿತಗೊಳಿಸಿದ್ದರು. ಆದರೆ ಡಿಕೆಶಿ ತಮ್ಮ ನಾಯಕನನ್ನು ಹಿಂಬಾಲಿಸದೆ ಕಾಂಗ್ರೆಸ್ಸಿನಲ್ಲಿಯೇ ಉಳಿದಿದ್ದರು. ಅಗತ್ಯ ಬಿದ್ದಾಗ ಸ್ವಂತ ಸಂಪನ್ಮೂಲವನ್ನು ಪಕ್ಷಕ್ಕಾಗಿ ಚೆಲ್ಲಬಲ್ಲವರೆಂದೂ, ಕಾಂಗ್ರೆಸ್ಸಿನ ಮೇಲೆ ‘ಮೋಶಾ’ ನಡೆಸುವ ದಮನದಾಳಿಗಳನ್ನು ಹಿಮ್ಮೆಟ್ಟಿಸುವ ‘ಸಂಕಟಮೋಚಕ’ (ಟ್ರಬಲ್ ಶೂಟರ್) ಎಂಬ ಡಿಕೆಶಿ ಖ್ಯಾತಿ ಉತ್ತರ ಭಾರತದ ಗಡಿಗಳನ್ನೂ ನುಗ್ಗಿತ್ತು. ಇವರ ಈ ಸಾಮರ್ಥ್ಯವನ್ನು ಹಿಂದಿ-ಇಂಗ್ಲಿಷ್ ಸಮೂಹ ಮಾಧ್ಯಮಗಳೂ ಗುರುತಿಸಿದ್ದುಂಟು.

ಡಿಕೆಶಿ ಹೆಸರು ಮೇಲಕ್ಕೆ ಬಂದಂತೆಲ್ಲ ಅವರನ್ನು ಬಿಜೆಪಿ ಖೆಡ್ಡಾಕ್ಕೆ ಕೆಡವಿಕೊಳ್ಳುವ ಪ್ರಯತ್ನಗಳನ್ನು ನಡೆಸಿತ್ತು ‘ಮೋಶಾ’ ಸರ್ಕಾರ. ತನ್ನ ಸರ್ಕಾರಿ ಏಜೆನ್ಸಿಯ ಅಸ್ತ್ರಗಳನ್ನು ಧಾರಾಳವಾಗಿ ಪ್ರಯೋಗಿಸಿತ್ತು. ಶಿವಕುಮಾರ್ ಆಪ್ತರ ಅಡ್ಡೆಗಳ ಮೇಲೆ ನಡೆದ ದಾಳಿಗಳು, ತರುವಾಯ ನೇರ ಶಿವಕುಮಾರ್ ನೆಲೆಗಳ ಮೇಲೆಯೇ ಕವುಚಿ ಬಿದ್ದಿದ್ದವು. ದೆಹಲಿಯ ತಿಹಾರ್ ಜೈಲಿನ ಹವೆಯ ರುಚಿಯನ್ನೂ ಅವರಿಗೆ ತೋರಿಸಲಾಯಿತು. ಆದರೆ ಈ ಯಾವ ತಂತ್ರಗಳಿಗೂ ಅವರು ಶರಣಾಗಲಿಲ್ಲ. ಬದಲಾಗಿ ಸೋನಿಯಾ ನೇತೃತ್ವವನ್ನು ಕೊಂಡಾಡಿದ್ದರು. ಜೈಲಿನಲ್ಲಿದ್ದ ಕಷ್ಟದ ದಿನಗಳಲ್ಲಿ ಅಂಜದೆ ಅಳುಕತೆ ತಮ್ಮನ್ನು ಕಾಣಲು ಬಂದಿದ್ದ ‘ತಾಯಿ’ ಎಂದು ಭಾವುಕವಾಗಿ ಬಣ್ಣಿಸಿದ್ದರು.

ಶಿವಕುಮಾರ್ ಮೇಲೆ ಕಣ್ಣಿರಿಸಿದ್ದ ಬಿಜೆಪಿ ಕಡೆಗೆ ಕೆಡವಿಕೊಂಡದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಜೋಡಿಯ ಜಾತ್ಯತೀತ ಜನತಾದಳವನ್ನು. ರಾಮಕೃಷ್ಣ ಹೆಗಡೆಯವರ ಮೂಲಕ ರಾಜ್ಯದ ಲಿಂಗಾಯತ ಸೀಮೆಗಳಿಗೆ ಪ್ರವೇಶ ಪಡೆದಿದ್ದ ಬಿಜೆಪಿ, ದಕ್ಷಿಣದ ಒಕ್ಕಲಿಗರ ಕೋಟೆಯ ಕೈವಶಕ್ಕೆ ಕಾತರವಾಗಿತ್ತು.

ಕಳೆದ ಹನ್ನೆರಡು ವರ್ಷಗಳಲ್ಲಿ ಉತ್ತರ ಭಾರತದಲ್ಲಿ ಪ್ರತಿಪಕ್ಷಗಳನ್ನು ಛಿದ್ರಗೊಳಿಸಿ, ಅವುಗಳ ನಾಯಕರಿಗೆ ಕಾಳು ಹಾಕಿ ಸಾ ಕಿದ ಕುನ್ನಿಗಳಂತೆ ನಡೆಸಿಕೊಂಡಿರುವ ಬಿಜೆಪಿಯನ್ನು ಶಿವಕುಮಾರ್ ಅವರಂತಹ ಒಕ್ಕಲಿಗ ‘ದಿಗ್ಗಜ’ ತಾರಮ್ಮಯ್ಯ ಆಡಿಸುತ್ತಲೇ ಬಂದಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ರಾಜಕೀಯ ಚದುರಂಗದ, ರಾಜ-ರಾಣಿ-ವಿದೂಷಕ-ಸಿಪಾಯಿ ಕಾಯಿಗಳನ್ನು ಬಹು ಎಚ್ಚರಿಕೆಯಿಂದ ನಡೆಸತೊಡಗಿದ್ದಾರೆ. ಅತ್ಯುತ್ತಮ ಸಂಘಟಕರೆಂದು ಹೆಸರು ಪಡೆದಿರುವ ಅವರು, ಈಗ ಮುಖ್ಯಮಂತ್ರಿಯಾಗದೆ ಹೋದರೆ ಇನ್ನೆಂದೂ ಆಗುವುದು ಸಾಧ್ಯವಿಲ್ಲ ಎಂಬಂತೆ ಆಡತೊಡಗಿದ್ದಾರೆ.

ಕಾಂಗ್ರೆಸ್ಸನ್ನು ತೊರೆದು ಮೋಶಾ ಬಿಜೆಪಿಗೆ ಜಾರದೆ ಉಳಿದಿರುವುದು ಹೌದು. ಆದರೆ ಅದರ ಅರ್ಥ ಜಾತ್ಯತೀತ ತತ್ವಗಳಲ್ಲಿ ಅವರಿಗೆ ಅಚಲ ನಂಬಿಕೆ ಇದೆಯೆಂದೇನೂ ಅಲ್ಲ. ಕಾಂಗ್ರೆಸ್ಸಿನಲ್ಲಿ ಈಗಲೂ ಉಳಿದಿರುವ ಹಲವು ಮೆದು ಹಿಂದುತ್ವವಾದಿಗಳಲ್ಲಿ ಪ್ರಮುಖರು ಅವರು. ಈ ಮಾತನ್ನು ಮುಚ್ಚಿಡುವುದಕ್ಕಿಂತ ಬಿಚ್ಚಿ ಬಯಲಿಗಿರಿಸುವ ತಂತ್ರವನ್ನೇ ಅವರು ಅನುಸರಿಸುತ್ತ ಬಂದಿದ್ದಾರೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಮನಸ್ಥಿತಿಯಿಂದ ಮುಕ್ತಿ ಪಡೆಯಬೇಕಿದೆ. ಅಂತಹವರನ್ನು ಹೊರಹಾಕಿ ಶುದ್ಧವಾಗಬೇಕಿದೆ ಎಂಬ ಮಾತುಗಳನ್ನು ರಾಹುಲ್ ಇತ್ತೀಚೆಗೆ ಆಡುತ್ತಲೇ ಬಂದಿದ್ದಾರೆ. ಈ ಮಾತು ಗುಜರಾತು ಮಾತ್ರವಲ್ಲ, ಅಷ್ಟೇ ಪ್ರಮಾಣದಲ್ಲಿ ಕರ್ನಾಟಕಕ್ಕೂ ಅನ್ವಯ ಆಗುತ್ತದೆ.

ತಮ್ಮ ಬರವನ್ನು ಎದುರು ನೋಡುತ್ತಿರುವ ಬಿಜೆಪಿಗೆ ಡಿಕೆಶಿ ಮಿಶ್ರ ಸಂದೇಶಗಳನ್ನು ರವಾನಿಸುತ್ತ ಬಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕಟ್ಟರ್ ಹಿಂದುತ್ವವನ್ನು ಖಂಡತುಂಡವಾಗಿ ಖಂಡಿಸಲು ಹಿಂಜರಿದರು ಶಿವಕುಮಾರ್. ಜಗ್ಗಿ ವಾಸುದೇವ್ ಅವರಂತಹ ಸನಾತನಿ ಮತ್ತು ಮೋದಿ ಸಮರ್ಥಕ ಧರ್ಮಗುರುವಿನ ಜೊತೆ ‘ಶಿವರಾತ್ರಿ’ ಆಚರಿಸಿ ವಿವಾದದಲ್ಲಿ ಮುಳುಗೆದ್ದು ಸಂಭ್ರಮಿಸಿದರು.

ಮಹಾಕುಂಭ ಮೇಳಕ್ಕೆ ತೆರಳಿ ಸಂಗಮದಲ್ಲಿ ಮುಳುಗೆದ್ದು, ಯೋಗಿ ಆದಿತ್ಯನಾಥ ಸರ್ಕಾರದ ಏರ್ಪಾಡುಗಳನ್ನು ಬಾಯಿತುಂಬ ಹೊಗಳಿದರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಅಂಗಿ-ಜುಬ್ಬಾ ಕಳಚಿ ಭೇಟಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮೊಂದಿಗೆ ಒಯ್ದಿದ್ದರು. ಆರೆಸ್ಸೆಸ್ ನ ಉನ್ನತ ಹಂತಕ್ಕೇರಿ ರಾಜ್ಯ ಬಿಜೆಪಿ ನಾಯಕರ ಭವಿಷ್ಯವನ್ನು ಬರೆದಿರುವ ಮಹಾಪ್ರಭಾವಿ ಬಿ.ಎಲ್. ಸಂತೋಷ್ ಅವರನ್ನು ಬೈದರೆಂದು ಆರೆಸ್ಸಿಸ್ಸಿಗ ಮಹೇಶ್ ತಿಮರೋಡಿ ಅವರನ್ನು ‘ಒದ್ದು ಒಳಹಾಕಿದ್ದೇವೆ’ ಎಂಬುದು ಡಿಕೆಶಿ ಇತ್ತೀಚಿನ ಹೇಳಿಕೆ.

ಇಂತಹ ಸಂದರ್ಭಗಳಲ್ಲೆಲ್ಲ ಬಿಜೆಪಿ ಅವರ ಜೊತೆ ನಿಲ್ಲುತ್ತ ಬಂದಿದೆ. ಟೊಂಗೆಯ ಮೇಲಿನ ಕಾಗೆ ಬಾಯಿಯ ಮಾಂಸದ ತುಂಡಿಗಾಗಿ ಬಾಯಿ ತೆರೆದು ಜೊಲ್ಲು ಸುರಿಸಿದೆ. ಎಟುಕದ ದ್ರಾಕ್ಷಿಯನ್ನು ಆಗಾಗ ಹುಳಿ ಎಂದೂ ಮೂಗು ಮುರಿಯುತ್ತ ಬಂದಿದೆ. ಆಪಾದನೆಗಳ ರಾಶಿಯನ್ನೇ ಅವರ ಮೇಲೆ ಸುರಿಸಿದೆ. ಆದರೆ ತನ್ನ ದೈತ್ಯ ವಾಷಿಂಗ್ ಮಷೀನ್ ನಲ್ಲಿ ಎಂತೆಂತಹ ಭ್ರಷ್ಟರನ್ನೂ ತೊಳೆದು ಪವಿತ್ರವೆಂದು ಮತದಾರರ ಮುಂದೆ ಪರೇಡ್ ಮಾಡುತ್ತಲೂ ಬಂದಿದೆ.

ತಮ್ಮನ್ನು ಪೆದ್ದನೆಂದು ಬಿಂಬಿಸುವ ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳದ ಬಿಜೆಪಿ ಯೋಜನೆಯ ವಿರುದ್ಧ ದಿಟ್ಟತನದಿಂದ ಸೆಟೆದು ನಿಂತಿರುವ ರಾಹುಲ್ ಗಾಂಧೀ, ನಿಜಕ್ಕೂ ಪೆದ್ದರಲ್ಲ ಎಂಬ ವಾಸ್ತವ ಅನಾವರಣಗೊಳ್ಳತೊಡಗಿದೆ. ಇಂಡಿಯಾ ಮಿತ್ರಪಕ್ಷಗಳ ಜೊತೆಗೂಡಿ ರಾಹುಲ್ ಎರಚಿರುವ ಮತಗಳ್ಳತನದ ಕೆಸರನ್ನು ಒರೆಸಿಕೊಳ್ಳುವುದು ಮೋಶಾ ಜೋಡಿಗೆ ಕಡು ಕಠಿಣವೆನಿಸತೊಡಗಿದೆ. ತಾನು ಹೆಣೆಯುತ್ತಿರುವ ಸುಳ್ಳುಗಳ ಉಸುಬಿನಲ್ಲಿ ತಾನೇ ಕುಸಿಯತೊಡಗಿದೆ.

ಇದನ್ನೂ ಓದಿ “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!

ಇಂತಹ ಹಂತದಲ್ಲಿ ಶಿವಕುಮಾರ್ ಆರೆಸ್ಸೆಸ್ ಪ್ರಾರ್ಥನೆಯ ಸಾಲುಗಳನ್ನು ರಾಜ್ಯ ವಿಧಾನಮಂಡಲದಲ್ಲಿ ಹಾಡಿ ತೋರಿದ್ದಾರೆ. ಶಾಸನಸಭೆಗಳಲ್ಲಿ ಬಿಜೆಪಿ ಆರೆಸ್ಸೆಸ್ ತಲೆಯಾಳುಗಳೂ ಮಾಡಿರದಂತಹ ಈ ‘ಸಾಧನೆ’ಗೆ ತಲೆದೂಗಿದೆ ಸಂಘಪರಿವಾರ. ಮುಖ್ಯಮಂತ್ರಿ ಹುದ್ದೆಯನ್ನು ಒಲಿಸಿಕೊಳ್ಳಲು ಶಿವಕುಮಾರ್ ಯಾವ ಹಂತಕ್ಕೂ ಹೋಗಲು ತಯಾರಿದ್ದಾರೆಯೇ ಇಲ್ಲವೇ ಎಂಬುದನ್ನು ಮುಂಬರುವ ದಿನಗಳು ಹೇಳಲಿವೆ.

ಮೋಶಾ ಬಿಜೆಪಿ ಏನನ್ನು ಬೇಕಾದರೂ ತಿಂದು ಜೀರ್ಣಿಸಿಕೊಳ್ಳುವ 56 ಅಂಗುಲದ ಎದೆಗಾರಿಕೆ ಪ್ರದರ್ಶಿಸಿದೆ. ಈ ಎದೆಗಾರಿಕೆ ಬಂಡೆಯನ್ನು ಪುಡಿ ಮಾಡಿ ಅರಗಿಸಿಕೊಳ್ಳುವುದೇ ಎಂದು ಕಾದು ನೋಡಬೇಕಿದೆ. ಮೋಶಾ ಹಯಾಮಿಗೆ ಯಾವುದೂ ದುಸ್ಸಾಧ್ಯವಲ್ಲ ನಿಜ. ಆದರೆ ಗಾಲಿ ನಿಂತಲ್ಲಿಯೇ ನಿಲ್ಲುವುದಿಲ್ಲ. ಉರುಳುವುದೇ ಅದರ ಸ್ವಭಾವ. ಉರುಳುವ ಗತಿ ಮಂದವಾಗಿದ್ದೀತು. ಆದರೆ ಉರುಳುವುದು ನಿಶ್ಚಿತ. ಕಾಲದ ಗಾಲಿಯೂ ಅಂತೆಯೇ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

Download Eedina App Android / iOS

X