ಈ ದಿನ ಸಂಪಾದಕೀಯ | ಉರ್ದು ನಮ್ಮದೇ ಸಂಸ್ಕೃತಿಯ ಭಾಗ; ಅನ್ಯ ಅಲ್ಲ- ಸುಪ್ರೀಮ್ ತೀರ್ಪು ಚೇತೋಹಾರಿ

Date:

Advertisements

1994ರಲ್ಲಿ ಉರ್ದು ವಿರೋಧವು ಕೋಮುಗಲಭೆಗಳಿಗೆ ದಾರಿ ಮಾಡಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಮುಗಲಭೆಗಳು ಸಿಡಿದಿದ್ದವು. ಈ ಗಲಭೆಗಳಲ್ಲಿ 23 ಮಂದಿ ಸತ್ತಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡು, ಸುಮಾರು 83 ಕೋಟಿ ರುಪಾಯಿಯ ಆಸ್ತಿಪಾಸ್ತಿ ನಷ್ಟವಾಗಿತ್ತು. ದೂರದರ್ಶನದ ಬೆಂಗಳೂರು ಕೇಂದ್ರದ ಪ್ರೈಮ್ ಟೈಮ್ ನಲ್ಲಿ ಹತ್ತು ನಿಮಿಷಗಳ ಅವಧಿಯ ಉರ್ದು ಭಾಷಾ ಸುದ್ದಿಗಳ ಬುಲೆಟಿನ್ ಪ್ರಸಾರಕ್ಕೆ ವಿರೋಧ ವ್ಯಕ್ತವಾಗಿತ್ತು.


‘ಉರ್ದು ಭಾಷೆಯು ನಮ್ಮ ಸಂಸ್ಕೃತಿಯ ಭಾಗವೇ ಆಗಿದ್ದು, ಅದು ಜನರನ್ನು ಒಡೆಯುವ ಕಾರಣ ಆಗಕೂಡದು’ ಎಂಬ ವಿವೇಕದ ಮಾತುಗಳನ್ನು ಸುಪ್ರೀಮ್ ಕೋರ್ಟ್ ಹೇಳಿದೆ. ಮುಸಲ್ಮಾನರನ್ನು ದ್ವೇಷಿಸಲು ನೂರು ಕಾರಣಗಳನ್ನು ಹುಡುಕುತ್ತಿರುವ ಇಂದಿನ ಕೋಮುವಾದಿ ರಾಜಕಾರಣ ಸಾಮಾಜಿಕ ಬದುಕಿಗೆ ವಿಷ ಹಿಂಡುತ್ತಿರುವ ದಿನಗಳಲ್ಲಿ ಸುಪ್ರೀಮ್ ಕೋರ್ಟಿನ ಈ ಮಾತುಗಳು ಅತ್ಯಂತ ಸ್ವಾಗತಾರ್ಹ.

ಭಾರತದ ಪಾಲಿಗೆ ಉರ್ದು ಅನ್ಯ ಭಾಷೆ ಎಂಬುದು ತಪ್ಪು ಗ್ರಹಿಕೆ. ಇದೇ ನೆಲದಲ್ಲಿ ಹುಟ್ಟಿದ ಭಾಷೆಯಿದು. ಗಂಗಾ ಯಮುನಾ ಸಂಸ್ಕೃತಿ-ಸೌಹಾರ್ದ ಭಾವದ ಪ್ರತೀಕ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠ ಹೇಳಿದೆ. ಮಹಾರಾಷ್ಟ್ರದ ಪುರಸಭೆಯೊಂದರ ಕಟ್ಟಡದ ಸೂಚನಾ ಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಸುಪ್ರೀಮ್ ಕೋರ್ಟು ಎತ್ತಿ ಹಿಡಿದಿದೆ.

‘ಭಾಷೆಯೊಂದರ ಕುರಿತು ನಮ್ಮ ತಪ್ಪು ತಿಳಿವಳಿಕೆಗಳು, ಪೂರ್ವಗ್ರಹಗಳನ್ನು ನಮ್ಮ ದೇಶದ ಮಹಾನ್ ವಿವಿಧತೆಯ ಒರೆಗಲ್ಲಿಗೆ ತಿಕ್ಕಿ ನೋಡಬೇಕಿದೆ. ಈ ಕೆಲಸವನ್ನು ದಿಟ್ಟವಾಗಿ ಮತ್ತು ಸತ್ಯವಾಗಿ ಮಾಡಬೇಕಿದೆ. ನಮ್ಮ ಬಲವು ಎಂದೆಂದಿಗೂ ನಮ್ಮ ದೌರ್ಬಲ್ಯ ಆಗುವುದಿಲ್ಲ. ಉರ್ದು ಮತ್ತು ಎಲ್ಲ ಭಾಷೆಗಳೊಂದಿಗೂ ಗೆಳೆತನ ಬೆಳೆಸೋಣ. ಸ್ನೇಹಿತರನ್ನಾಗಿ ಮಾಡಿಕೊಳ್ಳೋಣ’ ಎಂದು ಸುಪ್ರೀಮ್ ಕೋರ್ಟು ಸಂಕುಚಿತವಾದಿಗಳಿಗೆ ಬುದ್ಧಿ ಹೇಳಿದೆ.

ಬಹು ಕಾಲದಿಂದ ಉರ್ದುವಿಗೆ ಮುಸಲ್ಮಾನರ ಭಾಷೆಯೆಂಬ ಹಣೆಪಟ್ಟಿ ಹಚ್ಚಲಾಗಿದೆ. ಇದು ಸತ್ಯದೂರ ದುಷ್ಪ್ರಚಾರ. ಭೋಳೆತನವನ್ನು ಕೆರಳಿಸಿ ಕುದಿಸುವುದು ರಾಜಕಾರಣಕ್ಕೆ ಚಿಟಿಕೆ ಹೊಡೆದಷ್ಟು ಸಲೀಸು ಕೆಲಸ. ಇತ್ತೀಚಿನ ದಿನಗಳಲ್ಲಿ ಇಂತಹ ರಾಜಕಾರಣವೇ ಮೇಲುಗೈ ಪಡೆದಿರುವುದು ದುರದೃಷ್ಟಕರ.

1994ರಲ್ಲಿ ಉರ್ದು ವಿರೋಧವು ಕೋಮುಗಲಭೆಗಳಿಗೆ ದಾರಿ ಮಾಡಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಮುಗಲಭೆಗಳು ಸಿಡಿದಿದ್ದವು. ಈ ಗಲಭೆಗಳಲ್ಲಿ 23 ಮಂದಿ ಸತ್ತಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡು, ಸುಮಾರು 83 ಕೋಟಿ ರುಪಾಯಿಯ ಆಸ್ತಿಪಾಸ್ತಿ ನಷ್ಟವಾಗಿತ್ತು. ದೂರದರ್ಶನದ ಬೆಂಗಳೂರು ಕೇಂದ್ರದ ಪ್ರೈಮ್ ಟೈಮ್ ನಲ್ಲಿ ಹತ್ತು ನಿಮಿಷಗಳ ಅವಧಿಯ ಉರ್ದು ಭಾಷಾ ಸುದ್ದಿಗಳ ಬುಲೆಟಿನ್ ಪ್ರಸಾರಕ್ಕೆ ವಿರೋಧ ವ್ಯಕ್ತವಾಗಿತ್ತು.

ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ‘ಗಂಗಾ- ಜಮುನೀ ತೆಹಜೀಬ್’ ಎಂಬ ಅವಧೀ ಭಾಷಾ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದೀಗಿಂತ ಪುರಾತನ ಹಿಂದೀ ನುಡಿಗಟ್ಟು ಅವಧೀ, ಅವಧ ಸೀಮೆಯ ಆಡುನುಡಿ. ಹಿಂದೂ-ಮುಸ್ಲಿಮ್ ಸಂಗಮ ಸಂಸ್ಕೃೃತಿ ಎಂದು ಇದರ ಅರ್ಥ. ಹಿಂದೂ ಮುಸ್ಲಿಮ್ ಮೈತ್ರಿ- ಸಾಮರಸ್ಯವನ್ನು ಗಂಗೆ-ಯಮುನೆಯರ ಸಂಗಮಕ್ಕೆ ಹೋಲಿಸಲಾಗಿದೆ. ಬನಾರಸಿನ ಹಿಂದೂ-ಮುಸ್ಲಿಮ್ ಸಂಸ್ಕೃತಿ, ಕೊಡಕೊಳುವ ಸಂಬಂಧ ಹಾಗೂ ಜೀವನವಿಧಾನಗಳ ಶಾಂತಿಯುತ ಸಂಗಮ. ಅವಧದ ನವಾಬರು ಈ ಸಂಸ್ಕೃತಿಯ ಪ್ರವರ್ತಕರು. ಅಲಹಾಬಾದ್, ಲಖ್ನೋ, ಕಾನ್ಪುರ್, ಫೈಜಾಬಾದ್-ಅಯೋಧ್ಯ ಹಾಗೂ ವಾರಾಣಸಿ ಈ ಸಂಸ್ಕೃತಿಯ ಪ್ರಮುಖ ಸೀಮೆಗಳು. ದೆಹಲಿ ಕೂಡ ಈ ಸಾಲಿಗೆ ಸೇರುವುದುಂಟು. ಚುಟುಕಾಗಿ ತಕ್ಷಣ ಮನಮುಟ್ಟುವಂತೆ ಹೇಳಬೇಕೆಂದರೆ ಶಹನಾಯ್ ಸಂಗೀತ ಗುರು ಉಸ್ತಾದ್ ಬಿಸ್ಮಿಲ್ಲಾಖಾನ್ ಅವರು ಈ ಸಂಸ್ಕೃತಿಯ ಪ್ರತೀಕಗಳಲ್ಲೊಬ್ಬರು.

Advertisements

ಗಾಂಧೀ – ನೆಹರೂ ಇಬ್ಬರೂ ಒಪ್ಪಿದ್ದ ಸಂಪರ್ಕ ಭಾಷೆ ಹಿಂದುಸ್ತಾನಿ. ಹಿಂದಿ ಮತ್ತು ಉರ್ದು ಬೆರೆತ ಹಿಂದುಸ್ತಾನಿಯೇ ಸೂಕ್ತ ಎಂದು ಬಗೆದಿದ್ದರು.ದೇಶ ವಿಭಜನೆಯ ಬೆಳವಣಿಗೆ ಉರ್ದುವಿರೋಧಿ ಭಾವನೆಗೆ ಇಂಬು ದೊರೆಯಿತು. ಉರ್ದು- ಹಿಂದಿ ಮಿಶ್ರಿತ ಹಿಂದುಸ್ತಾನಿಗೆ ರಾಷ್ಟ್ರಭಾಷೆಯ ಪಟ್ಟ ಕಟ್ಟುವ ಪ್ರಯತ್ನಕ್ಕೆ ಕಾಯಂ ಹಿನ್ನಡೆಯಾಯಿತು. ಸಂವಿಧಾನ ರಚನಾ ಸಭೆಗಳಲ್ಲಿ ಹಿಂದುಸ್ತಾನಿ ಪರ ವಾದವು ಕಾಲಕ್ರಮೇಣ ದೇವನಾಗರಿ ಲಿಪಿಯುಳ್ಳ ಹಿಂದೀ ಪರ ತಿರುವು ಪಡೆಯಿತು.

ಔಪಚಾರಿಕ ಉರ್ದು ಪರ್ಶಿಯನ್ ಶಬ್ದಕೋಶದಿಂದ ಹೆಚ್ಚು ಎರವಲು ಪಡೆದಿದ್ದರೆ, ಔಪಚಾರಿಕ ಹಿಂದಿ ಭಾಷೆಯು ಸಂಸ್ಕೃತ ಪದಕೋಶದ ಪದಗಳನ್ನು ಕಡ ಪಡೆದಿದೆ. ಮಧ್ಯಯುಗೀನ ಭಾರತದಲ್ಲಿ ಹುಟ್ಟಿದ ಉರ್ದು ಭಾಷೆಯನ್ನು ಮುಸಲ್ಮಾನರು- ಹಿಂದುಗಳಿಬ್ಬರು ಸೇರಿಯೇ ಬೆಳೆಸಿದ್ದಾರೆ. . ಬ್ರಿಟಿಷ್ ವಸಾಹತುಶಾಹಿಯ ದಿನಗಳಲ್ಲಿ ಉರ್ದು ಮತ್ತು ಹಿಂದಿ ಬೆರೆತ ಹಿಂದುಸ್ತಾನಿ ಎಂಬ ಭಾಷೆಯನ್ನು ಮುಸಲ್ಮಾನರು ಮತ್ತು ಹಿಂದುಗಳು ಆಡುತ್ತಿದ್ದರು.

ಉರ್ದುವಿನ ಅಗ್ರಗಣ್ಯ ಸಾಹಿತಿಗಳಲ್ಲಿ ಅನೇಕರು ಹಿಂದುಗಳು. ಅಮರವೆನಿಸುವ ಸಾಹಿತ್ಯ ರಚಿಸಿರುವ ಮುನ್ಷಿ ಪ್ರೇಮ್ ಚಂದ್ ಉರ್ದು ಭಾಷೆಯಲ್ಲೂ ಬರೆದರು. ಅವರು ಆರಂಭಿಸಿದ್ದೇ ಉರ್ದುವಿನಿಂದ. ಕಡೆಯ ಉಸಿರಿನ ತನಕ ಉರ್ದುವಿನಲ್ಲಿ ಸಾಹಿತ್ಯ ರಚನೆ ಮುಂದುವರೆಸಿದ್ದರು.  ಮುನ್ಷೀ ಜ್ವಾಲಾಪ್ರಸಾದ್ ಬರ್ಖ್, ಪಂಡಿತ್ ತಿರ್ಭುನ್ ನಾಥ್ ಐಜಿರ್, ರಾಜೀಂದರ್ ಸಿಂಗ್ ಬೇಡಿ, ಕ್ರಿಶನ್ ಚಂದರ್, ಕನ್ಹಯ್ಯ ಲಾಲ್ ಕಪೂರ್ ಮುಂತಾದ ಹೆಸರಾಂತರು ಉರ್ದುವಿನಲ್ಲಿ ಬರೆದರು.

ಔವಧ್ ಅಖಬಾರ್ ಎಂಬ ಅತ್ಯಂತ ಹಳೆಯ ವೃತ್ತಪತ್ರಿಕೆಯ ಮಾಲೀಕ ಹಿಂದೂ ಆಗಿದ್ದರು. ಹಿಂದುಸ್ತಾನಿ ಎಂಬ ಮತ್ತೊಂದು ಅತ್ಯುತ್ತಮ ಉರ್ದು ಪತ್ರಿಕೆಯ ಮಾಲೀಕರು ಮತ್ತು ಸಂಪಾದಕರು ನಿರಂತರವಾಗಿ ಹಿಂದುಗಳೇ ಆಗಿದ್ದರು. ಉರ್ದು ಪತ್ರಿಕೋದ್ಯಮದ ಹೊಳೆಯುವ ತಾರೆಗಳಲ್ಲಿ ಗಂಗಾ ಪ್ರಸಾದ್ ವರ್ಮ, ದ್ವಾರಕಾ ಪ್ರಸಾದ್ ಉಫುಕ್, ದೀನಾನಾಥ್ ಹಫೀಜಾಬಾದಿ, ಮುನ್ಷಿ ಜಲ್ಪಾ ಪ್ರಸಾದ್, ಸೂಫಿ ಅಂಬಾ ಪ್ರಸಾದ್, ಮುನ್ಷಿ ದಯಾನಿರಾಮ್ ನಿಗಮ್, ಮುನ್ಷಿ ನೌಬತ್ ರಾಯ್ ನಝರ್ ಇದ್ದಾರೆ.
ಹೀಗೆ ಬೆಳೆಯುತ್ತಲೇ ಹೋಗುವ ಇಂತಹ ಹಲವು ಹತ್ತು ಪಟ್ಟಿಗಳಿವೆ. ಉರ್ದುವಿನ ಟಬಾವುಟ ಹಿಡಿದು’ ಸಾಗಿದ ಸಾಹಿತಿಗಳು-ಪತ್ರಕರ್ತರ ಪೈಕಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಪ್ರಮುಖರು.

ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಪತ್ರಕರ್ತರೊಬ್ಬರು ಇತ್ತೀಚಿನ ವರ್ಷಗಳಲ್ಲಿ ನಿಧನರಾದರು. ಪ್ರಣಯ್ ರಾಯ್ ಕಾಲದ ಎನ್.ಡಿ.ಟಿ.ವಿ.ಗೆ ಕೆಲಸ ಮಾಡುತ್ತಿದ್ದರು ಕಮಾಲ್ ಖಾನ್. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಖೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸ  ಪ್ರತೀಕವೆನಿಸಿತ್ತು.

ಕಾಶಿಯ ಸ್ನಾನ ಸೋಪಾನಗಳ ಮೇಲೆ ಗಂಗಾರತಿಯ ಜೊತೆ ಜೊತೆಯಲ್ಲಿ ಕಮಾಲ್ ಖಾನ್ ಚಿತ್ರಪಟ ಇರಿಸಿ ಹಣತೆಗಳ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಗಾ ಜಮುನಾ ಸಂಸ್ಕೃತಿಯಿದು. ಹಿಂದುಸ್ತಾನದ ಅಸಲು ಸಂಸ್ಕೃತಿ ಸಹಬಾಳುವೆಯ ಪ್ರತೀಕ.

ಅಯೋಧ್ಯೆಯ ಸೈಯದ್ ವಾಡಾ ಎಂಬ ಕೇರಿಯ ಮತ್ತೊಂದು ಕತೆಯನ್ನು ಕಮಾಲ್ ಖಾನ್ ಹೇಳುತ್ತಿದ್ದರು- ಈ ವಾಡಾದಲ್ಲಿ 300-400 ಮುಸಲ್ಮಾನರಿದ್ದರು. 1992ರಲ್ಲಿ ಲಕ್ಷಾಂತರ ಕರಸೇವಕರು ಹೊರಗಿನಿಂದ ಬಂದರು. ಆಗ ಹೆದರಿದ ಈ ಮುಸಲ್ಮಾನರು ಮನೆ ತೊರೆದು ಪಲಾಯನ ಮಾಡಿದ್ದರು. ಇವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಎದುರಿನಲ್ಲೇ ರಾಮನ ಗುಡಿಯೊಂದಿತ್ತು. ಅಲ್ಲಿನ ಸಾಧು ಸಂತರು ಗೋಡೆ ಹಾರಿ ಬಂದು ಬಾವಿಗಳಿಂದ ನೀರು ಸೇದಿ ತಂದು ಈ ಮನೆಗಳಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದರು. ಈ ಪೈಕಿ ಚಾರುಶೀಲ ಎಂಬ ಸಾಧ್ವಿಯೂ ಇದ್ದರು. ಸನಿಹದಲ್ಲೇ ಹೂತೋಟವೊಂದರ ಮಾಲೀಕರು ರಯೀಸ್ ಮತ್ತು ಹಫೀಸ್. ಈ ತೋಟದಲ್ಲಿ ಕಿತ್ತ ಮೊದಲ ಹೂವುಗಳಿಗೆ ಇವರು ಹಣ ಪಡೆಯುತ್ತಿರಲಿಲ್ಲ. ದೇವರ ಮುಡಿಗೇರಿಸಲು ಕಳಿಸುತ್ತಿದ್ದರು. ಮತ್ತೊಂದು ಮೊಹಲ್ಲಾದ ಹೆಸರು ಬೇಗಂಪುರಾ. ಅಲ್ಲೊಬ್ಬ ಮುನ್ನೂ ಮಿಯಾ ಎಂಬ ಶಿಯಾ ಮುಸ್ಲಿಮರೊಬ್ಬರಿದ್ದರು. 1949ರಿಂದ 1999ರಲ್ಲಿ ತಾವು ನಿಧನರಾಗುವ ತನಕ ಅವರು ಸುಂದರಭವನ ಎಂಬ ದೇವಾಲಯದ ಮಹಂತರಾಗಿದ್ದರು.

ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಮೊಕದ್ದಮೆಯಲ್ಲಿ ಎದುರಾಳಿಗಳಾಗಿದ್ದ ಹಾಶೀಮ್ ಅನ್ಸಾರಿ ಮತ್ತು ರಾಮಚಂದ್ರ ಪರಮಹಂಸ ಒಟ್ಟಿಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದ ಗೆಳೆಯರು. ಬಾಬರಿ ಮಸೀದಿ ಉರುಳಿದ ನಂತರ ಕಮಾಲ್  ಖಾನ್ ಗೆ ನೀಡಿದ್ದ ಸಂದರ್ಶನವೊಂದರಲ್ಲಿ ರಾಮಲಲ್ಲಾ ಟೆಂಟಿನಲ್ಲಿದ್ದಾನೆಂದೂ, ಆತನಿಗೆ ಬೇಗನೆ ಮಂದಿರ ನಿರ್ಮಿಸಬೇಕೆಂದೂ ಭಾವುಕರಾಗಿ ಅತ್ತುಬಿಟ್ಟಿದ್ದರು ಹಾಶೀಮ್ ಅನ್ಸಾರಿ. ಈ ವಿಡಿಯೋ ಈಗಲೂ ನೋಡಸಿಗುತ್ತದೆ. ಈ ಭೂಮಿಯ ಮೇಲೆ ಘನ ಸೌಂದರ್ಯವಿದೆ, ಅಪಾರ ಪ್ರೇಮವೂ ಇದೆ. ದ್ವೇಷವನ್ನು ದೂರವಿಡಬೇಕಿದೆ ಎನ್ನುತ್ತಿದ್ದರು ಕಮಾಲ್ ಖಾನ್.

ಸಂವಿಧಾನದ ಎಂಟನೆಯ ಷೆಡ್ಯೂಲಿನಲ್ಲಿ ಸ್ಥಾನ ಪಡೆದಿರುವ 22 ಭಾರತೀಯ ಭಾಷೆಗಳ ಪೈಕಿ ಉರ್ದು ಕೂಡ ಒಂದು. ಜಮ್ಮು-ಕಾಶ್ಮೀರ ದಲ್ಲಿ ಕಾಶ್ಮೀರಿ ಮತ್ತು ಡೋಂಗ್ರಿಯ ಜೊತೆಗೆ ಉರ್ದು ಕೂಡ ಪ್ರಾಥಮಿಕ ಅಧಿಕೃತ ಭಾಷೆ, ಉತ್ತರಪ್ರದೇಶ, ಬಿಹಾರ, ಝಾರ್ಖಂಡ ಹಾಗೂ ತೆಲಂಗಾಣದಲ್ಲಿ ಉರ್ದುವಿಗೆ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲಾಗಿದೆ. ದೆಹಲಿ, ಪಶ್ಚಿಮ ಬಂಗಾಳದಲ್ಲಿ ಉರ್ದು ಎರಡನೆಯ ಅಧಿಕೃತ ಭಾಷೆ. ಕರ್ನಾಟಕ, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದಲ್ಲಿ ಉರ್ದುವನ್ನು ವ್ಯಾಪಕವಾಗಿ ಮಾತಾಡಲಾಗುತ್ತದೆ. ಆದರೆ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿಲ್ಲ.

ಭಾರತವು ಬಹುಸಂಸ್ಕೃತಿಗಳ ಬಹುಭಾಷೆಗಳ ಗಣರಾಜ್ಯ ಒಕ್ಕೂಟ ಎಂಬುದನ್ನು ಸಂವಿಧಾನ ಕೂಡ ಎತ್ತಿ ಸಾರಿದೆ. ಒಡೆದು ಆಳುವವರು ಈ ಅಂಶವನ್ನು ಮರೆಯುವಂತಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X