ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

Date:

Advertisements
ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ ರಾಜ್ಯದ ಪರವಾಗಿ ಧ್ವನಿ ಎತ್ತದೇ, ಕ್ಷೇತ್ರವನ್ನೂ ಅಭಿವೃದ್ಧಿಪಡಿಸದೇ ಸಂಸದರ ಸೌಲಭ್ಯವನ್ನು ಪಡೆದು ತಮ್ಮ ಆದಾಯವನ್ನು ಎರಡ್ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಈಗ ಮತ್ತೆ ಸಂಸದರಾಗಲು ಹೊರಟಿದ್ದಾರೆ.

 

ಮತ್ತೊಂದು ಲೋಕ ಸಭಾ ಚುನಾವಣೆ ಬಂದಿದೆ. ಸಂಸತ್ತಿನಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಸಂಸದರ ಸಾಧನೆ ಏನು? ಈ ಸಂಗತಿಯನ್ನು ಮತದಾರರು ಗಂಭೀರವಾಗಿ ಅವಲೋಕನ ಮಾಡುವ ಸಮಯವಿದು. ಯಾಕೆಂದರೆ ಹಿಂದೆ ಸಂಸದರಾಗಿದ್ದ ಹಲವರು ಮತ್ತೆ ಸಂಸದರಾಗಲು ಹೊರಟಿದ್ದಾರೆ. ಈ ಸಮಯದಲ್ಲಿ ಮತ ಚಲಾಯಿಸುವ ಮುನ್ನ ಅವರು ಈ ಕರ್ನಾಟಕಕ್ಕೆ ಮತ್ತು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಹೇಗೆಲ್ಲ ನ್ಯಾಯ ಒದಗಿಸಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ಧಾರೆಯೇ, ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ದೇಶದ ಗಂಭೀರ ಸಮಸ್ಯೆಗಳ ಕುರಿತ ಎಷ್ಟು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ಹಿಂತಿರುಗಿ ನೋಡಿದರೆ  ತೀವ್ರ ನಿರಾಸೆಯಾಗುತ್ತದೆ. ನಾಚಿಕೆಯಿಂದ ತಲೆ ತಗ್ಗಿಸುವ ವಿಚಾರ ಬಹಿರಂಗಗೊಂಡಿದೆ.

ʼಸಂವಿಧಾನದ ಹಾದಿಯಲ್ಲಿʼ ಎಂಬ ಸಂಘಟನೆ ಈ ಐದು ವರ್ಷಗಳಲ್ಲಿ ನಮ್ಮ ಸಂಸದರು ತಮ್ಮ ಕ್ಷೇತ್ರ, ರಾಜ್ಯದ ಪರವಾಗಿ ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಮೌಲ್ಯಮಾಪನ ಮಾಡಿದೆ. ಸಂಸದೀಯ ಸಂಶೋಧನಾ ಅಂಕಿಅಂಶದ ಆಧಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸಿದೆ. ಅದರ ಪ್ರಕಾರ ನಮ್ಮ ಮೂವರು ಸಂಸದರು ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಐವರು ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ. ಈ ಐದು ವರ್ಷಗಳಲ್ಲಿ ದೇಶದಲ್ಲಿ ಹಲವು ಗಂಭೀರ ವಿಷಯಗಳು ಚರ್ಚೆಗೆ ಬಂದಿವೆ. ಮೂರು ರೈತವಿರೋಧಿ ಕಾಯ್ದೆಗಳಿಂದ ನಮ್ಮ ರೈತರಿಗೆ ಯಾವ ಬಗೆಯಲ್ಲಿ ತೊಂದರೆಯಾಗುತ್ತದೆ ಎಂಬ ವಿಚಾರವಾಗಿ ಸಂಸತ್ತಿನಲ್ಲಿ ಚಕಾರ ಎತ್ತಿಲ್ಲ. ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರ ಏನೆಲ್ಲ ಸಿದ್ಧತೆ ನಡೆಸಿರಬೇಕಿತ್ತು ವ್ಯಾಕ್ಸಿನೇಷನ್‌ ಸಮಸ್ಯೆಯನ್ನು ಹೇಗೆ ನಿಬಾಯಿಸಬೇಕಿತ್ತು ಎಂಬ ಬಗ್ಗೆ ತುಟಿ ಬಿಚ್ಚಿಲ್ಲ. ರಾಜ್ಯದ ಕೃಷಿ ವಲಯದ ಬಿಕ್ಕಟ್ಟು, ಜಿಎಸ್‌ಟಿ ಪಾಲು, ಪ್ರವಾಹ ಪರಿಹಾರ, ಬರ ಪರಿಹಾರ ಈ ಯಾವ ವಿಷಯದ ಬಗ್ಗೆಯೂ ರಾಜ್ಯದ ಪರವಾಗಿ ಸಂಸತ್ತಿನ ಗಮನ ಸೆಳೆದಿಲ್ಲ. ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಬಾಯಿಗೆ ಬೀಗ ಹಾಕಿ ಕುಳಿತಿದ್ದರು. ಐದು ವರ್ಷಗಳ ಕಾಲ ರಾಜ್ಯದ ಅಭಿವೃದ್ಧಿ ಕುಂಠಿತವಾಗಲು ಕಾರಣರುವುದು ಅಕ್ಷಮ್ಯ.

ತಮ್ಮ ಕ್ಷೇತದಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ದೊಡ್ಡ ಸೇತುವೆಗಳು, ಏರ್‌ ಪೋರ್ಟ್‌, ರೈಲ್ವೆ ಮುಂತಾದ ಬೃಹತ್‌ ಯೋಜನೆಗಳನ್ನು ತರಲು ಆಸಕ್ತಿ ತೋರಿದ್ದಾರೆ. ಆದರೆ ಜನರಿಗೆ ನಿತ್ಯ ಬದುಕಿಗೆ ಅಗತ್ಯವಾಗಿ ಬೇಕಿರುವ ಕುಡಿಯುವ ನೀರಿನ ಯೋಜನೆ, ಶೌಚಾಲಯ, ಶಾಲೆ, ಆಸ್ಪತ್ರೆಗಳ ಬಗ್ಗೆ ದಿವ್ಯ ನಿರಾಸಕ್ತಿ ತೋರಿದ್ದಾರೆ.

Advertisements

ಇದಕ್ಕಿಂತ ನಿರಾಶಾದಾಯಕ ವಿಚಾರವೆಂದರೆ 28 ಸಂಸದರಲ್ಲಿ ಹಿರಿಯರಾದ ಡಿ ವಿ ಸದಾನಂದ ಗೌಡ, ರಮೇಶ್‌ ಜಿಗಜಿಣಗಿ ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಅಂದರೆ ಪ್ರಶ್ನೆ ಕೇಳಲು, ಅಥವಾ ನಮಗೆ ಇಂತಹ ಯೋಜನೆ ಬೇಕು ಎಂದು ಕೇಳಲು ಮೋದಿ ಅವರ ಭಯವೇ? ಅಥವಾ ಪ್ರಶ್ನೆ ಕೇಳಿದರೆ ಹೈಕಮಾಂಡ್‌ನ ವಕ್ರದೃಷ್ಟಿ ಬೀಳುತ್ತದೆ ಎಂಬ ಆತಂಕವೇ? ಕ್ಷೇತ್ರದ ಜನ ಈ ಪ್ರಶ್ನೆಯನ್ನು ಕೇಳಬೇಕು.

ಮೋದಿ ಸರ್ಕಾರವನ್ನು ಹೊಗಳುವುದಕ್ಕೆ ಬಿಜೆಪಿ ಸಂಸದರು ಅತೀವ ಆಸಕ್ತಿ ತೋರಿದ್ದಾರೆ. ಬಿ ವೈ ರಾಘವೇಂದ್ರ ಅವರು ಮೂರು ಕೃಷಿ ಕಾಯ್ದೆಗಳನ್ನು ಹೊಗಳುತ್ತಾ, “ಮೋದಿಯವರು ತಮ್ಮ ಎಪ್ಪತ್ತನೇ ಹುಟ್ಟುಹಬ್ಬದ ಕೊಡುಗೆಯಾಗಿ ರೈತರಿಗೆ ಮೂರು ಕೃಷಿ ಕಾಯ್ದೆಗಳ ಉಡುಗೊರೆ ನೀಡಿದ್ಧಾರೆ” ಎಂದು ಹೇಳಿದ್ದರು. ತೇಜಸ್ವಿ ಸೂರ್ಯ ʼವನ್‌ ನೇಷನ್‌ ಒನ್‌ ಎಲೆಕ್ಷನ್ʼ ಪ್ರಸ್ತಾವವನ್ನು ಪ್ರಶಂಸಿಸಿ ಕರ್ನಾಟಕದಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಬೇಕು. ಭಯೋತ್ಪಾದನೆಯನ್ನು ಪೋಷಿಸುವ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಮೆಚ್ಚಿಸಲು ಯತ್ನಿಸಿದ್ದಾರೆ.

ಇದ್ದ ಒಬ್ಬ ಕಾಂಗ್ರೆಸ್‌ ಸಂಸದ ಡಿ ಕೆ ಸುರೇಶ್‌ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಆಗಾಗ ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಅನಗತ್ಯವಾಗಿ ಉಂಟಾಗಿದ್ದ ಹಿಜಾಬ್‌ ನಿಷೇಧ ವಿಚಾರ, ಹಿಂದಿ ಹೇರಿಕೆಯ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಕೊನೆಯ ಅಧಿವೇಶನಲ್ಲಿ ಜಿಎಸ್‌ಟಿ ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ಚರ್ಚಿಸುತ್ತ ತೀವ್ರ ಪ್ರತಿಭಟನೆ ನಡೆಸಿದ್ದರು. ಹೀಗೆಯೇ ಮುಂದುವರಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ನೀಡಬೇಕಾಗುತ್ತದೆ ಎಂದು ಹೇಳಿಕೆ ನೀಡಿ, ದೇಶದ ಗಮನ ಸೆಳೆದಿದ್ದರು.

ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ರಾಜ್ಯದಲ್ಲಿ ನಾಲ್ವರು ಸಚಿವರು ಇದ್ದೂ ರಾಜ್ಯದ ಪರವಾಗಿ ಧ್ವನಿ ಎತ್ತದೇ, ಕ್ಷೇತ್ರವನ್ನೂ ಅಭಿವೃದ್ಧಿಪಡಿಸದೇ ಸಂಸದರ ಸೌಲಭ್ಯವನ್ನು ಪಡೆದು ತಮ್ಮ ಆದಾಯವನ್ನು ಎರಡ್ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಕೇಂದ್ರದಿಂದ ತೆರಿಗೆ ಪಾಲು ನೀಡಿಕೆಯಲ್ಲಿ ಅನ್ಯಾಯವಾಗಿದ್ದರೂ ಅದರ ಬಗ್ಗೆ ಮಾತನಾಡಿಲ್ಲ. ತಮ್ಮದೇ ಸರ್ಕಾರ ಇದ್ದಾಗ ರಾಜ್ಯದ ಪರ ನಿಲ್ಲದವರು ಮತ್ತೊಮ್ಮೆ ಆಯ್ಕೆಯಾಗಿ ಏನು  ಕಡಿದು ಕಟ್ಟೆ ಹಾಕಬಲ್ಲರು ಎಂಬುದನ್ನು ಮತದಾರ ಯೋಚಿಸಬೇಕಿದೆ.

ವರದಿಯ ಪ್ರಕಾರ ಮೂವರು ಸಂಸದರು ಕ್ಷೇತ್ರದಲ್ಲಿ ಕಚೇರಿಯನ್ನೇ ಹೊಂದಿಲ್ಲವಂತೆ. ಕ್ಷೇತ್ರದ ಜನ ಅವರ ಮುಖವನ್ನೇ ನೋಡಿಲ್ಲ ಎಂದಿದ್ದಾರೆ. 13 ಸಂಸದರಿಗೆ ಜನಸಂಪರ್ಕವೇ ಇಲ್ಲ. ಕೊರೋನಾ ಕಾಲದಲ್ಲಿ ಇಬ್ಬರು ಸಂಸದರಷ್ಟೇ ಜನರಿಗೆ ನೆರವಾಗಿದ್ದಾರೆ. ಉಳಿದವರು ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಆದರೆ, ಕೋಮು ಗಲಭೆಗೆ ಪ್ರಚೋದನೆ, ದ್ವೇಷಭಾಷಣ, ಅಲ್ಪಸಂಖ್ಯಾತರ ಟೀಕೆ ಮಾಡೋದ್ರಲ್ಲಿ ಬಿಜೆಪಿ ಸಂಸದರು ಹಿಂದೆ ಬಿದ್ದಿಲ್ಲ. ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ, ಅನಂತಕುಮಾರ ಹೆಗಡೆ, ನಳಿನ್‌ಕುಮಾರ್‌ ಸೇರಿದಂತೆ ಏಳು ಮಂದಿ ಸಂಸದರು ಕೋಮುದ್ವೇಷ ಹರಡುವುದರಲ್ಲಿ ಎಳ್ಳಷ್ಟೂ ಹಿಂದೆ ಬಿದ್ದಿಲ್ಲ.

ಈಗ ಜನ ತೀರ್ಪು ನೀಡುವ ಸಮಯ ಬಂದಿದೆ. ಇಂತಹ ಕೋಮುವಾದಿಗಳಿಗೆ, ಮೈಗಳ್ಳರಿಗೆ, ನಾಲಾಯಕ್‌ಗಳಿಗೆ, ರಾಜ್ಯದ ಸಮಸ್ಯೆಗಳ ಬಗ್ಗೆ, ತೆರಿಗೆ ಅನ್ಯಾಯದ ಬಗ್ಗೆ ಧ್ವನಿ ಎತ್ತಲಾರದ ಪುಕ್ಕಲರಿಗೆ ತಮ್ಮ ಅಮೂಲ್ಯ ಮತ ಕೊಟ್ಟು ವ್ಯರ್ಥ ಮಾಡುವ ಬದಲು ಯೋಗ್ಯರನ್ನು ಆಯ್ಕೆ ಮಾಡುವ ಈ ಸುವರ್ಣ ಅವಕಾಶವನ್ನು ಕೈಚೆಲ್ಲಬಾರದು. ಅಂತಹ ಅಯೋಗ್ಯರನ್ನು ಸೋಲಿಸುವ ಮೂಲಕ ಮುಂದೆ ಬರುವ ಸಂಸದರಿಗೂ ಅದು ಎಚ್ಚರಿಕೆಯ ಗಂಟೆಯಾಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X