ದೇಶದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ನಾರೀಶಕ್ತಿಯ ಭಜನೆ ಮಾಡುವ ಬಿಜೆಪಿ ಮುನಿರತ್ನನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಆದರೆ ಮುನಿರತ್ನನ ವಿರುದ್ಧ ಜಾತಿನಿಂದನೆ, ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ರಾಜಕೀಯ ಷಡ್ಯಂತ್ರ, ದ್ವೇಷದ ರಾಜಕಾರಣ ಎಂದು ವಿಶ್ಲೇಷಣೆ ಮಾಡುತ್ತಿರುವುದು ದುರದೃಷ್ಟಕರ ಮತ್ತು ಖಂಡನೀಯ.
ತಾನು ಸಂಸದನಾಗಿದ್ದ ಅವಧಿಯಲ್ಲಿ ಸಹಾಯ ಕೇಳಿ ಬಂದವರು, ಪಕ್ಷಕ್ಕಾಗಿ ದುಡಿಯುತ್ತಿದ್ದ ಕಾರ್ಯಕರ್ತೆಯರು, ವರ್ಗಾವಣೆಗೆ ಶಿಫಾರಸು ಕೇಳಿ ಬಂದ ಪೊಲೀಸ್ ಅಧಿಕಾರಿಗಳು, ಮಕ್ಕಳಿಗೆ ಕಾಲೇಜು ಸೀಟು ಕೊಡಿಸುವಂತೆ ಬಂದ ಅಮ್ಮಂದಿರು, ಅಷ್ಟೇ ಏಕೆ ತಾತನ ಕಾಲದಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ಧ ಮಹಿಳೆಯನ್ನೂ ಬಿಡದೇ ತನ್ನ ವಿಕೃತ ಕಾಮವಾಂಛೆಗೆ ಬಳಸಿಕೊಂಡಿದ್ದೇ ಅಲ್ಲದೇ ಅದರ ವಿಡಿಯೊ ಮಾಡಿಟ್ಟುಕೊಂಡಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಸಾವಿರಾರು ವಿಡಿಯೊಗಳು ಹೊರಬಂದು ದೇಶದಲ್ಲಿಯೇ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇಂತಹ ಇನ್ನೊಂದು ಪ್ರಕರಣ ಈ ದೇಶ ಕಂಡಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಕೆಟ್ಟದೊಂದು ಅಪರಾಧದ ಹೊಸ ಮಾದರಿ ನೀಡಿದ ಕುಖ್ಯಾತಿಗೆ ಕರ್ನಾಟಕ ಬಲಿಯಾಗಿತ್ತು.
ಅದೇ ಭೀಕರ ಎಂದುಕೊಂಡಿದ್ದ ರಾಜ್ಯದ ಜನರಿಗೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ HIV ಬಾಧಿತ ಮಹಿಳೆಯರನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡಿಸಿ ಅವರಿಗೆ ಏಡ್ಸ್ ರೋಗ ಹರಡಿಸುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಸುದ್ದಿ ಹೊರ ಬಿದ್ದಿದೆ. ಈ ಮೂಲಕ ಕರ್ನಾಟಕ ಘೋರ ಅಪರಾಧದ ಮತ್ತೊಂದು ಮಾದರಿಗೆ ಕುಖ್ಯಾತವಾಗುವಂತಾಯ್ತು. ಶಾಸಕ ಮುನಿರತ್ನ ಅವರ ಈ ಭೀಭತ್ಸ ಅಪರಾಧಕ್ಕೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ತನ್ನ ಸ್ವಾರ್ಥಕ್ಕಾಗಿ ಆತ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಲ್ಲದೇ, ಎಚ್‌ಐವಿ ಬಾಧಿತ ಮಹಿಳೆಯರನ್ನು ತನ್ನ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅಡಗಿಸಿಟ್ಟ ಕ್ಯಾಮರಾ ಮೂಲಕ ಚಿತ್ರೀಕರಿಸಿ ಅದೇ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಮತ್ತೆ ಆತನಿಗೆ ಸಹಕರಿಸುವಂತೆ ಮಾಡಿದ್ದಾನೆ. ಯಾವ ಸಿನಿಮಾದಲ್ಲೂ ಇಂತಹದೊಂದು ಕಾಲ್ಪನಿಕ ಕತೆಯೂ ಬಂದಿರಲಾರದು. ಇಂತಹ ವ್ಯಕ್ತಿಗೆ ಸಹಕರಿಸಿದವರು ಈ ದುಷ್ಕೃತ್ಯದ ಪಾಲುದಾರರು. ನಾಲ್ಕು ಸಲ ಈತನನ್ನು ಶಾಸಕನನ್ನಾಗಿ ಆರಿಸಿದ ಮತದಾರರು ಪ್ರಾಯಶ್ಚಿತ್ತಪಡಲೇಬೇಕು. ಯಾಕೆಂದರೆ ಮುನಿರತ್ನ ಭ್ರಷ್ಟ ಮಾತ್ರವಲ್ಲ ಆತನ ಕ್ರಿಮಿನಲ್ ಹಿನ್ನೆಲೆ ಗೊತ್ತಿಲ್ಲದ ವಿಚಾರವಲ್ಲ.
ಗುತ್ತಿಗೆದಾರನಿಗೆ ಜಾತಿನಿಂದನೆ, ಜೊತೆಗೆ ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ಮಾತನಾಡಿರುವ ಆಡಿಯೊ ಪ್ರಕರಣದಲ್ಲಿ ಸೆಪ್ಟಂಬರ್ 13ರಂದು ಬಂಧನಕ್ಕೊಳಗಾಗಿ ಸೆ. 18ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಸೆ. 19ರಂದು ಇಬ್ಬರು ಮಹಿಳೆಯರು ಪ್ರತ್ಯೇಕ ಅತ್ಯಾಚಾರ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಸೆ. 20ರಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಕಡೆಗೂ ಪರಮ ಪಾತಕ ಕೆಲಸ ಮಾಡುತ್ತಿದ್ದ ಶಾಸಕನನ್ನು ಕಾನೂನಿನ ಕಟೆಕಟೆಗೆ ತಂದು ನಿಲ್ಲಿಸಿದ ಗುತ್ತಿಗೆದಾರ ಅಭಿನಂದನಾರ್ಹರು.
ಮುನಿರತ್ನನಿಂದ ಅತ್ಯಾಚಾರ, ಬೆದರಿಕೆಗೆ ಒಳಗಾದ ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಈ ಏಡ್ಸ್ ಟ್ರ್ಯಾಪ್‌ನ ಇಂಚಿಂಚು ಮಾಹಿತಿಯನ್ನು ಬಹಿರಂಗಪಡಿಸಿಕೊಂಡಿದ್ದಾರೆ. ಆತ ಎಚ್‌ಐವಿ ಬಾಧಿತ ಮಹಿಳೆಯರನ್ನು ಬಳಸಿಕೊಂಡಿದ್ದೇ ಅಲ್ಲದೇ ಬಲವಂತದಿಂದ ಡ್ರಗ್ಸ್ ಕೊಟ್ಟು ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಒಮ್ಮೆ ಆತನ ಬಲೆಗೆ ಬಿದ್ದವರನ್ನು ಮತ್ತೆ ಹೊರಬಲಾರದಂತೆ ಅತ್ಯಾಚಾರ, ಡ್ರಗ್ಸ್ ಬಳಕೆಯ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿಸುತಿತ್ತು ಮುನಿರತ್ನನ ಪಾತಕಿಗಳ ಗ್ಯಾಂಗ್. ಒಬ್ಬ ಶಾಸಕನಾಗಿ ಮುನಿರತ್ನ ಸಮಾಜಘಾತಕ ಕೆಲಸಗಳನ್ನು ಮಾಡುತ್ತಲೇ ನಾಲ್ಕು ಬಾರಿ ಶಾಸಕನಾಗಿ ಪ್ರಚಂಡ ಬಹುಮತದಿಂದ ಗೆದ್ದಿರುವುದು ಪ್ರಜಾಪ್ರಭುತ್ವದ ಬಹುದೊಡ್ಡ ದುರಂತ.
ಎಂಬತ್ತು- ತೊಂಭತ್ತರ ದಶಕದಲ್ಲಿ ಭಾರತದಲ್ಲಿ ಏಡ್ಸ್ ರೋಗದಿಂದ ಸಾಯುವವರ ಸಂಖ್ಯೆ ವಿಪರೀತಕ್ಕೇರಿತ್ತು. ಮುಂಬೈನಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಊರಿಗೆ ಬಂದರೆಂದರೆ ಅನುಮಾನದಿಂದ ನೋಡಲಾಗುತ್ತಿತ್ತು. ಯಾರಾದರೂ ಗುಪ್ತರೋಗದಿಂದ ಸತ್ತರೆಂದರೆ, ಯಾವ ಕಾಯಿಲೆ ಎಂದು ಬಹಿರಂಗಪಡಿಸದಿದ್ದರೆ ಆ ಕುಟುಂಬವನ್ನು ಅನುಮಾನದಿಂದ ನೋಡುವುದಷ್ಟೇ ಅಲ್ಲ, ಸತ್ತವನ ಶವ ಸಂಸ್ಕಾರಕ್ಕೂ ಜನ ಬರುತ್ತಿರಲಿಲ್ಲ. ಅಂತಹ ಸಮಯದಲ್ಲಿ ಜನರನ್ನು ಆ ‘ಟ್ರಾಮಾ’ದಿಂದ ಹೊರ ತರುವಲ್ಲಿ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿವೆ. ಎಚ್‌ಐವಿ ಬಾಧಿತರ ಬದುಕನ್ನು ಸಹನೀಯಗೊಳಿಸಲು ನೂರಾರು ಸ್ವಯಂಸೇವಾ ಸಂಸ್ಥೆಗಳು ಶ್ರಮಿಸಿವೆ. ನಿಸ್ವಾರ್ಥ ಸ್ವಯಂಸೇವಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಈ ಮಾರಕ ಕಾಯಿಲೆ ಪೀಡಿತರ ಸೇವೆ ಮಾಡಿದ್ದಾರೆ. ಈ ಒಂದು ದಶಕದಿಂದ ಏಡ್ಸ್‌ನಿಂದ ಸಾಯುವವರ ಸಂಖ್ಯೆ ತೀವ್ರವಾಗಿ ತಗ್ಗಿದೆ. ಎಚ್‌ಐವಿ ಬಾಧಿತರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ART (Antiretroviral Therapy)ಮಾತ್ರೆಯನ್ನು ಸರ್ಕಾರ ಉಚಿತವಾಗಿ ನೀಡಲು ಶುರು ಮಾಡಿದ ನಂತರ ಏಡ್ಸ್ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಎಚ್‌ಐವಿ ತಗುಲಿದವರು ಜೀವನಶೈಲಿಯ ಬದಲಾವಣೆ, ನಿರಂತರ ಮಾತ್ರೆ ಸೇವನೆಯಿಂದ ದೀರ್ಘ ಕಾಲ ಬದುಕುವಂತಾಗಿದೆ. ಅಂತಹ ಸಮಯದಲ್ಲಿ ಅದೇ ಮಾರಕ ರೋಗವನ್ನು ಸಮಾಜಕ್ಕೆ ಹರಡುವ ದುಷ್ಕೃತ್ಯಕ್ಕೆ ಕೈ ಹಾಕಿದ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬನಿಗೆ ಈ ಸಮಾಜದಲ್ಲಿ ಬದುಕುವ ಯಾವ ಅವಕಾಶವನ್ನೂ ನೀಡಬಾರದು. ಆದರೆ, ಇದೇ ವ್ಯಕ್ತಿಗಾಗಿ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡುತ್ತಾರೆ. ನಾಳೆ ಜಾಮೀನಿನ ಮೇಲೆ ಬಿಡುಗಡೆಯಾದರೆ ಪಟಾಕಿ ಸಿಡಿಸಿ ಜೈ ಅಂತಾರೆ. ಇದು ನಮ್ಮ ಸಮಾಜದ ತಲುಪಿದ ನೈತಿಕ ಅಧಃಪತನಕ್ಕೆ ಹಿಡಿದಿರುವ ಕನ್ನಡಿ.
ದೇಶದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ನಾರೀಶಕ್ತಿಯ ಭಜನೆ ಮಾಡುವ ಬಿಜೆಪಿ ಮುನಿರತ್ನನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಆದರೆ ಮುನಿರತ್ನನ ವಿರುದ್ಧದ ಜಾತಿನಿಂದನೆ, ಅತ್ಯಾಚಾರ ಪ್ರಕರಣವನ್ನು ರಾಜಕೀಯ ಷಡ್ಯಂತ್ರ, ದ್ವೇಷದ ರಾಜಕಾರಣ ಎಂದು ವಿಶ್ಲೇಷಣೆ ಮಾಡುತ್ತಿರುವುದು ದುರದೃಷ್ಟಕರ ಮತ್ತು ಖಂಡನೀಯ. ಇದೇ ಮುನಿರತ್ನ 2018ರಲ್ಲಿ ಕಾಂಗ್ರೆಸ್‌ನಿಂದ ಎರಡನೇ ಬಾರಿ ಆಯ್ಕೆಯಾದಾಗ, ಆತನಿಗೆ ಸೇರಿದ ಫ್ಲ್ಯಾಟ್‌ನಲ್ಲಿ ನಕಲಿ ಮತದಾರರ ಚೀಟಿಗಳು ಸಿಕ್ಕಿದ್ದವು. ಬಿಜೆಪಿಯ ಅಭ್ಯರ್ಥಿ ತುಳಸಿ ಮುನಿರಾಜು ದೂರು ದಾಖಲಿಸಿದ್ದರು. ಅದು ಇನ್ನೂ ಇತ್ಯರ್ಥವಾಗಿಲ್ಲ. ನಮ್ಮ ಕೋರ್ಟ್‌ಗಳು ಚುನಾವಣಾ ಭ್ರಷ್ಟಾಚಾರದ ಪ್ರಕರಣವನ್ನೂ ಆ ಅವಧಿ ಮುಗಿಯುವುದರೊಳಗೆ ಇತ್ಯರ್ಥಪಡಿಸುತ್ತಿಲ್ಲ ಎಂಬುದು ಅತಿ ದೊಡ್ಡ ಲೋಪ.
ಚುನಾವಣಾ ಅಕ್ರಮ ಪ್ರಕರಣದಲ್ಲಿ ಆತನ ವಿಧಾನಸಭಾ ಸದಸ್ಯತ್ವವನ್ನು ಅಮಾನತು ಮಾಡಿ ಮತ್ತೆಂದೂ ಸ್ಪರ್ಧಿಸದಂತೆ ನಿಷೇಧ ಹೇರಬೇಕಿತ್ತು. ಆದರೆ, ವೋಟರ್ ಐಡಿ ಪ್ರಕರಣದಲ್ಲಿ ಮುನಿರತ್ನನ ವಿರುದ್ಧ ದೂರು ನೀಡಿದ್ದ ಬಿಜೆಪಿ ಒಂದೇ ವರ್ಷದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸಿ, ಉಪಚುನಾವಣೆಯಲ್ಲೂ ಗೆದ್ದ ಆತನನ್ನು ಸಚಿವನ್ನಾಗಿ ಮಾಡಿತ್ತು. ಆತನ ವೋಟರ್ ಐಡಿ ಪ್ರಕರಣವನ್ನು ಮೋದಿಯವರು 2019ರ ಲೋಕಸಭಾ ಚುನಾವಣಾ ಭಾಷಣದಲ್ಲೂ ಪ್ರಸ್ತಾಪಿಸಿ ಕಾಂಗ್ರೆಸ್‌ನ ಟೀಕೆ ಮಾಡಿದ್ದರು. ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಮುನಿರತ್ನನನ್ನು ಬಿಜೆಪಿಗೆ ಸೇರಿಸಿಕೊಂಡರು. ಮೋದಿಯವರಿಗೆ ಮುನಿರತ್ನ ಕಾಂಗ್ರೆಸ್‌ನಲ್ಲಿದ್ದಾಗ ಭ್ರಷ್ಟ ಎಂಬುದು ಗೊತ್ತಿತ್ತು. ಆದರೂ ಅಧಿಕಾರ ಹಿಡಿಯಲು ಅದೇ ಭ್ರಷ್ಟನನ್ನು ಬರಮಾಡಿಕೊಂಡಿದ್ದರು. ಈಗಲೂ ಬಿಜೆಪಿ ಹೈಕಮಾಂಡ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೋದಿಯವರಿಗೆ ಭ್ರಷ್ಟರನ್ನು, ಸ್ತ್ರೀಪೀಡಕರನ್ನು, ದಲಿತನಿಂದಕರನ್ನು ಪಕ್ಷದಿಂದ ದೂರವಿಡಬೇಕು ಎಂಬ ಕಿಂಚಿತ್ ಕಾಳಜಿ ಇದ್ದರೆ ಮುನಿರತ್ನನನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿ ಮುಖ ಉಳಿಸಿಕೊಳ್ಳಲಿ. ರಾಜ್ಯ ಬಿಜೆಪಿ ನಾಯಕರೂ ಅಷ್ಟೇ ಮುನಿರತ್ನನನ್ನು ಬೆಂಬಲಿಸಿ ಮಾತನಾಡುವುದು ಆತನ ಹೇಯ ಕೃತ್ಯವನ್ನು ಬೆಂಬಲಿಸಿದಂತೆಯೇ ಸರಿ ಎಂಬುದನ್ನು ಅರಿಯಬೇಕು.
ಈ ಎರಡೂ ಪ್ರಕರಣಗಳಲ್ಲಿ ತಮ್ಮದೇ ಗೆಲುವಿಗಾಗಿ,ಪಕ್ಷಕ್ಕಾಗಿ ದುಡಿದ ಮಹಿಳೆಯರನ್ನು ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ. ಜನಪ್ರತಿನಿಧಿಗಳಾದವರು ತಮ್ಮ ಶಾಸನಬದ್ಧ ಜವಾಬ್ದಾರಿ ನಿರ್ವಹಿಸುವ ಬದಲಿಗೆ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ನೀಡುವಲ್ಲೂ ಕರ್ನಾಟಕ ಮಾದರಿಯಾಗಬೇಕಿದೆ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣವಂತರು ಏನು ಬೇಕಾದರೂ ಮಾಡಬಹುದು ಹಾಗೂ ಕಾನೂನು ಸಹ ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಗೆಲ್ಲುವವರು ನ್ಯಾಯವಾದಿಗಳು. ನ್ಯಾಯಕ್ಕೆ ಎಂದು ಗೆಲುವು ಸಾದ್ಯವಿಲ್ಲ. ಸೌಜನ್ಯ ಪ್ರಕರಣ ಸ್ಪಷ್ಟ ಉದಾಹರಣೆ.