ಈದಿನ ಸಂಪಾದಕೀಯ | ಉತ್ತರದಲ್ಲಿ ನಡೆದ ಅಧಿವೇಶನದಲ್ಲಿ ಸಿಕ್ಕ ಉತ್ತರವೇನು?

Date:

Advertisements
ವಿಧಾನಸಭಾ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ವಿಶೇಷ ಚರ್ಚೆ ಜರುಗಿದೆ. 42 ಶಾಸಕರು 11 ಗಂಟೆ 04 ನಿಮಿಷಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಹೀಗೆ ಅಂಕಿ-ಅಂಶಗಳು ಈ ಸಾರಿಯ ಅಧಿವೇಶನದಲ್ಲಿ ಆದ ಸಕಾರಾತ್ಮಕ ಬೆಳವಣಿಗೆಗಳನ್ನು ಎತ್ತಿ ತೋರಿಸುತ್ತವೆ. ಆದರೆ…..,

ಮತ್ತೊಂದು ಬೆಳಗಾವಿ ಅಧಿವೇಶನ ಮುಗಿದಿದೆ. ಹಿಂದಿನ ಅಧಿವೇಶನಗಳಿಗೆ ಅಥವಾ ಬೆಂಗಳೂರಿನಲ್ಲಿ ನಡೆದ ಬಜೆಟ್‌ ಅಧಿವೇಶನಕ್ಕೆ ಹೋಲಿಸಿದರೆ ಈ ಸಾರಿ ಪರವಾಗಿಲ್ಲ ಎನ್ನಬಹುದಾದ ರೀತಿಯಲ್ಲಿ ಮುಗಿದಿದೆ. ಅದನ್ನು ಅಂಕಿ-ಅಂಶಗಳು, ಸರ್ಕಾರದ ಘೋಷಣೆಗಳು ತೋರಿಸುತ್ತಿವೆ. ಆದರೆ, ಈ ಸಂಖ್ಯೆ ಮತ್ತು ಘೋಷಣೆಗಳಾಚೆ ಯಾವುದೇ ವಿಧಾನಮಂಡಲ ಅಧಿವೇಶನದ ಸಾರ್ಥಕ್ಯವನ್ನು ಅಳೆಯುವ ಮಾನದಂಡಗಳೇನಾಗಿರಬೇಕು ಎಂಬುದನ್ನು ನಿಕಷಕ್ಕೊಡ್ಡುವ ಅಗತ್ಯವಿದೆ.

ತಮ್ಮ ಅಂತಿಮ ಉತ್ತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಮಹತ್ವದ ಸಂಗತಿಯನ್ನು ಗುರುತಿಸಿದರು. ಅದು – ಈ ಹಿಂದಿನ ಸರ್ಕಾರಗಳ ಅವಧಿಗಿಂತ ತಾವು ಪ್ರತಿಪಕ್ಷಗಳಿಗೆ ಉತ್ತರ ನೀಡಲು ಎಷ್ಟು ಹೆಚ್ಚು ಸಮಯವನ್ನು ಕೊಟ್ಟಿದ್ದೇನೆ ಎಂಬ ಮಾಹಿತಿ. ಈ ಹಿಂದೆ ಇಂತಹ ಉತ್ತರವನ್ನು ಕೊಡುವಾಗ ಅಂದಿನ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿಯವರು ಎರಡು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಮುಗಿಸಿದ್ದನ್ನು ಹೇಳುತ್ತಲೇ, ತಾನು ಎಷ್ಟು ಗಂಟೆಗಳ ಕಾಲ ಉತ್ತರಿಸಿದ್ದೇನೆಂದು ತಿಳಿಸಿದರು. ಸಂಸದೀಯ ಪ್ರಜಾತಂತ್ರದಲ್ಲಿ ಶಾಸಕಾಂಗವೆನ್ನುವುದು ರಾಜ್ಯದ ಸಮಸ್ತ ಜನರ ಸುಖ ದುಃಖಗಳನ್ನು ಚರ್ಚಿಸುವ, ನೀತಿಗಳನ್ನು ರೂಪಿಸುವ, ಶಾಸನಗಳನ್ನು ತರುವ ಮಹತ್ವದ ಅಂಗ. ವಿಧಾನಮಂಡಲ ಅಧಿವೇಶನವೇ ಅದಕ್ಕೆ ವೇದಿಕೆ.

ಅಲ್ಲಿ ಇವೆಲ್ಲವನ್ನೂ ಚರ್ಚಿಸಲು ಪ್ರಶ್ನೋತ್ತರ (ಇದರಲ್ಲಿ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತಿಲ್ಲದ ಪ್ರಶ್ನೆ ಎಂಬ ಎರಡು ವಿಧಗಳಿರುತ್ತವೆ), ಶೂನ್ಯವೇಳೆಯ ಕಲಾಪ, ನಿಲುವಳಿ ಸೂಚನೆ, ಖಾಸಗಿ ವಿಧೇಯಕ, ಗಮನ ಸೆಳೆಯುವ ಸೂಚನೆ, ನಿಯಮ 69 ಹೀಗೆ ಹತ್ತು ಹಲವು ವಿಧಾನಗಳಿವೆ. ಸರ್ಕಾರವು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ, ಸಿಎಜಿ ವರದಿಗಳನ್ನು ಮಂಡಿಸುವುದಲ್ಲದೇ, ಅಧಿಸೂಚನೆ, ಅಧ್ಯಾದೇಶ, ವಾರ್ಷಿಕ ವರದಿಗಳು, ಲೆಕ್ಕ ಪರಿಶೋಧನಾ ವರದಿಗಳು, ಅನುಪಾಲನ ವರದಿ, ಲೆಕ್ಕ ತಪಾಸಣಾ ವರದಿಗಳು, ಧನವಿನಿಯೋಗ ವಿಧೇಯಕ ಹೀಗೆ ಹಲವನ್ನು ಅಲ್ಲೇ ಮಂಡಿಸಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಸಾಕಷ್ಟು ಸಮಯ ಕೊಟ್ಟು ಇವೆಲ್ಲವನ್ನೂ ಚರ್ಚಿಸುವುದಲ್ಲದೇ, ಸಾಂದರ್ಭಿಕವಾಗಿ ಬರುವ ಹಲವು ಸಂಗತಿಗಳನ್ನೂ ಕೈಗೆತ್ತಿಕೊಳ್ಳಬೇಕು. ಹೀಗಾಗಿಯೇ ವರ್ಷದಲ್ಲಿ ಎಷ್ಟು ದಿನಗಳು ಅಧಿವೇಶನ ನಡೆದಿದೆ, ಅದರಲ್ಲಿ ಎಷ್ಟು ಗಂಟೆಗಳ ಕಾಲ ಚರ್ಚೆ ನಡೆಯಿತು, ಎಷ್ಟು ಗಂಟೆಗಳ ಕಾಲ ಧರಣಿ ಇತ್ಯಾದಿಗಳಲ್ಲಿ ಹೋಯಿತು, ನಡೆದಾಗಲೂ ಯಾವ ವಿಚಾರಕ್ಕೆ ಎಷ್ಟು ಗಂಟೆಗಳನ್ನು ವ್ಯಯಿಸಲಾಯಿತು ಎಂಬುದು ಆಯಾ ಸರ್ಕಾರ ಎಷ್ಟು ಪ್ರಜಾತಾಂತ್ರಿಕವಾಗಿ ಇದೆ ಎಂಬುದನ್ನು ತೋರಿಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಬಿಜೆಪಿಗಿಂತ ಉತ್ತಮವಾಗಿದೆ ಎಂಬುದನ್ನೂ ಅಂಕಿ-ಅಂಶಗಳು ಹೇಳುತ್ತಿವೆ.

Advertisements

ಅದರ ಬಗ್ಗೆ ಖಾತರಿಯಿರುವುದರಿಂದಲೇ ಸಿದ್ದರಾಮಯ್ಯನವರು ವಿರೋಧ ಪಕ್ಷಗಳ ಎದುರಿಗೆ ಇದನ್ನು ಗಟ್ಟಿಯಾಗಿ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಧಾನಪರಿಷತ್‌ ಸಭಾಪತಿ ಹೊರಟ್ಟಿಯವರೂ ಮೇಲ್ಮನೆಯಲ್ಲಿ ಈ ಅಧಿವೇಶನದಲ್ಲಿ ಆದ ಸಾಧನೆಗಳ ಪಟ್ಟಿ ನೀಡಿದ್ದಾರೆ, ಅವರ ಪ್ರಕಾರ ಈ ಸಾರಿ ಪರಿಷತ್ತಿನಲ್ಲಿ, 17 ವಿಧೇಯಕಗಳನ್ನು ಅಂಗೀಕರಿಸಲಾಗಿದೆ, ಬಂದ 1057 ಪ್ರಶ್ನೆಗಳ ಪೈಕಿ 920 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ; ಶೂನ್ಯವೇಳೆಯಲ್ಲಿ ಅರ್ಧದಷ್ಟು ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೆ ಇನ್ನೊಂದು ತಿಂಗಳಲ್ಲಿ ಉತ್ತರ ಒದಗಿಸಲು ಸೂಚಿಸಲಾಗಿದೆ. ಇದಲ್ಲದೇ ಎರಡೂ ಸದನಗಳಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಸೇರಿ ಸಿಎಜಿ ವರದಿ, 29 ಅಧಿಸೂಚನೆ, 2 ಅಧ್ಯಾದೇಶ, 70 ವಾರ್ಷಿಕ ವರದಿ, 99 ಲೆಕ್ಕ ಪರಿಶೋಧನಾ ವರದಿ, 4 ಅನುಪಾಲನ ವರದಿ, 01 ಲೆಕ್ಕ ತಪಾಸಣಾ ವರದಿಗಳು ಮಂಡನೆಯಾಗಿವೆ. ಧನವಿನಿಯೋಗ ವಿಧೇಯಕದ ಮಂಡನೆಯಾಗಿದೆ.

ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ ಅವರೂ ತಮ್ಮ ಕೆಳಮನೆಯ ಸಾಧನೆಯನ್ನು ಮುಂದಿಟ್ಟಿದ್ದಾರೆ. ಅವರ ಪ್ರಕಾರ ವಿಧಾನಸಭೆಯಲ್ಲಿ ಒಟ್ಟು 3038 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 148 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2206 ಪ್ರಶ್ನೆಗಳ ಪೈಕಿ 2010 ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ. ನಿಯಮ 351 ರಡಿಯಲ್ಲಿ 200 ಸೂಚನೆಗಳನ್ನು ಅಂಗೀಕರಿಸಿದ್ದು, 110 ಸೂಚನೆಗಳ ಉತ್ತರಗಳನ್ನು ನೀಡಲಾಗಿದೆ. ಗಮನ ಸೆಳೆಯುವ 174 ಸೂಚನೆಗಳ ಪೈಕಿ 140 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ 197 ಸೂಚನೆಗಳಿಗೆ ಉತ್ತರವನ್ನು ನೀಡಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 31 ಸೂಚನೆಗಳನ್ನು ಚರ್ಚಿಸಲಾಗಿದೆ. ಬಿಜೆಪಿ ಶಾಸಕ ಮಂಡಿಸಿದ ಒಂದು ಖಾಸಗಿ ವಿಧೇಯಕ (ಮಹಾತ್ಮಾಗಾಂಧಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸಂದರ್ಭದ ಶತಮಾನೋತ್ಸವ)ವನ್ನೂ ಅಂಗೀಕರಿಸಲಾಗಿದೆ.

ಇವೆಲ್ಲವೂ ಈ ಸಾರಿಯ ಅಧಿವೇಶನದ ಸಕಾರಾತ್ಮಕ ಅಂಶಗಳಾಗಿವೆ. ಅದರ ಜೊತೆಗೆ, ವಿಧಾನಸಭಾ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ವಿಶೇಷ ಚರ್ಚೆ ಜರುಗಿದೆ. 42 ಶಾಸಕರು 11 ಗಂಟೆ 04 ನಿಮಿಷಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಹೀಗೆ ಅಂಕಿ-ಅಂಶಗಳು ಈ ಸಾರಿಯ ಅಧಿವೇಶನದಲ್ಲಿ ಆದ ಸಕಾರಾತ್ಮಕ ಬೆಳವಣಿಗೆಗಳನ್ನು ಎತ್ತಿ ತೋರಿಸುತ್ತವೆ. ವಿಧಾನಪರಿಷತ್ತಿನಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಸಭಾಪತಿ ಹೊರಟ್ಟಿ ಮಧ್ಯೆ ಅಸಮಾಧಾನಗೊಂಡಿದ್ದರೂ, ಒಟ್ಟಾರೆಯಾಗಿ ಇದು ರಾಜ್ಯದಲ್ಲಿನ ಸಕಾರಾತ್ಮಕವಾದ ಬೆಳವಣಿಗೆ ಎಂದು ಹೇಳಲು ಹಿಂಜರಿಯಬೇಕಿಲ್ಲ.

ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಆರು ತಿಂಗಳ ಕಾಲ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಇರಲಿಲ್ಲ. ಒಂದು ಅಧಿವೇಶನವೇ ವಿರೋಧ ಪಕ್ಷದ ನಾಯಕರಿಲ್ಲದೇ ಮುಗಿದು ಹೋಗಿತ್ತು. ಈ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರನ್ನು ಬಿಜೆಪಿಯು ಆಯ್ಕೆ ಮಾಡಿಕೊಂಡಿತು. ಆದರೆ, ಅಧಿಕೃತ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರನ್ನು ಅವರ ಪಕ್ಷದ ಸದಸ್ಯರು ಪೂರ್ಣ ಒಪ್ಪಿಕೊಂಡಂತೆ ಕಾಣಲಿಲ್ಲ. ಇನ್ನೂ ಅವಮಾನಕಾರಿಯಾದ ಸಂಗತಿಯೆಂದರೆ, ಈ ಅಧಿವೇಶನದ ಹೊತ್ತಿಗೂ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನನ್ನು ಬಿಜೆಪಿಯು ಆರಿಸಿಕೊಂಡಿಲ್ಲ.

ಹೀಗಾಗಿ ಒಟ್ಟಾರೆಯಾಗಿ ಈ ಅಧಿವೇಶನದಲ್ಲಿ ಎಲ್ಲಾ ರೀತಿಯಲ್ಲೂ ಆಡಳಿತ ಪಕ್ಷವಾದ ಕಾಂಗ್ರೆಸ್‌ ಮತ್ತು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಸ್ಪೀಕರ್‌ ಯು.ಟಿ.ಖಾದರ್‌ ಅವರು ಮೇಲುಗೈ ಸಾಧಿಸಿದ್ದರಲ್ಲದೇ, ತಮ್ಮ ಕಡೆಯಿಂದ ಸಂಸದೀಯ ಪ್ರಜಾತಂತ್ರದ ಒಳ್ಳೆಯ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋದರು. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಸಾಕಷ್ಟು ಸಮಯ ಕೊಟ್ಟಿದ್ದು, ಸರ್ಕಾರವೂ ಉತ್ತರ ಕರ್ನಾಟಕದ ಕುರಿತ ಹಲವು ಯೋಜನೆಗಳು ಮತ್ತು ಕೈಗಾರಿಕಾ ಹೂಡಿಕೆಗಳ ಘೋಷಣೆ ಮಾಡಿತು. ಅವೆಲ್ಲವೂ ಜಾರಿಯಾದ ನಂತರವೇ ಸಾಧನೆ ಎಂದು ಹೇಳಿಕೊಳ್ಳಬಹುದಾದ ಸಂಗತಿಗಳು. ಆದರೆ, ಡಿ.ಎಂ.ನಂಜುಂಡಪ್ಪ ಅವರ ವರದಿಯ ನಂತರ ಅದರ ಶಿಫಾರಸ್ಸುಗಳ ಅನುಪಾಲನೆ ಮತ್ತು ಇಂದಿನ ಸ್ಥಿತಿಗತಿ ಕುರಿತು ಕಾಲನಿಗದಿತವಾಗಿ ವರದಿಯೊಂದನ್ನು ನೀಡಲು ಸಮಿತಿಯ ರಚನೆ ಒಳ್ಳೆಯ ಬೆಳವಣಿಗೆ.

ಆದರೆ, ವಿರೋಧ ಪಕ್ಷಗಳು ಬಹುತೇಕ ನಿಸ್ತೇಜವಾಗುವುದು, ನಾಯಕತ್ವದ ಕೊರತೆ, ನಾಯಕನ ಆಯ್ಕೆಯೇ ತಡವಾಗುವುದು, ಶಾಸಕಾಂಗದ ನಡವಳಿಕೆಗಳಲ್ಲಿ ಅರ್ಥಪೂರ್ಣವಾಗಿ ಭಾಗಿಯಾಗದೇ ಇರುವುದು ಪ್ರಜಾತಂತ್ರದ ದೃಷ್ಟಿಯಿಂದ ಅಂತಹ ಒಳ್ಳೆಯ ಬೆಳವಣಿಗೆಯಲ್ಲ. ಹೀಗಾದರೆ ನಿಧಾನಕ್ಕೆ ಆಡಳಿತ ಪಕ್ಷವು ಹೆಚ್ಚೆಚ್ಚು ಜನವಿರೋಧಿಯಾಗುವುದರಲ್ಲಿ ಅನುಮಾನವಿಲ್ಲ. ಅಂತಹ ಸಂದರ್ಭದಲ್ಲಿ ನಾಡಿನ ಪ್ರಜ್ಞಾವಂತರೇ ಆ ಪಾತ್ರವನ್ನು ಕೈಗೆತ್ತಿಕೊಳ್ಳುವ ಅನಿವಾರ್ಯತೆ ಬಂದುಬಿಡಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X