ಸರ್ವರನ್ನೂ ಒಳಗೊಳ್ಳುವ ಮತ್ತು ಬಹುಮುಖೀ ದರ್ಶನವನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಈ ಪರಮೋಚ್ಚ ಮೌಲ್ಯಗಳಿಗೂ ಆಪತ್ತು ಬಂದೊದಗಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಮತೂಕ ತಪ್ಪಿದೆ. ಪ್ರಜೆಗಳ ಹಕ್ಕುಗಳನ್ನು ಕುಗ್ಗಿಸುವ ನಿರಂಕುಶ ಧೋರಣೆಗೆ ಕಡಿವಾಣ ತೊಡಿಸಬೇಕಿದೆ
ಇಂದು ದೇಶವು 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಜೊತೆಗೆ ಗಣತಂತ್ರದ ಆಶಯ ಏನಾಗಿದೆ ಎಂದು ಪರಾಮರ್ಶೆ ಮಾಡುವ ಅಗತ್ಯವಿದೆ. ಹತ್ತು ವರ್ಷಗಳಿಂದ ಪ್ರಧಾನಿ ಮೋದಿಯವರ ಭಾಷಣಗಳಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಅಖಂಡತೆಯ ಬಗ್ಗೆ ಬಾಯಿ ಮಾತಿಗೆ ಏನೂ ಕೊರತೆಯಿಲ್ಲ. ಕೊರತೆ ಇರುವುದು ನಡವಳಿಕೆ, ನೀತಿ ನಿರೂಪಣೆ, ವಿರೋಧಪಕ್ಷಗಳ ಜೊತೆ ನಡೆದುಕೊಳ್ಳುವ ರೀತಿಯಲ್ಲಿ. ಜನತಾಂತ್ರಿಕ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳನ್ನು ನಡೆಸಿಕೊಳ್ಳುವ ಬಗೆಯಲ್ಲಿ.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಪ್ರಧಾನಿಯಾಗಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವ ಅವರು ಜನರ ಮಾತುಗಳಿಗೆ, ಜನರ ಪ್ರಶ್ನೆಗಳನ್ನು ತಮ್ಮ ಮುಂದಿಡುವ ಮಾಧ್ಯಮಗಳಿಗೆ ಉತ್ತರಿಸುವ ಅಗತ್ಯ ಇಲ್ಲ ಎಂದು ತಿಳಿದುಕೊಂಡಂತಿದೆ. ತಾವೇ ಸಾರ್ವಭೌಮ ಎಂದು ಭ್ರಮಿಸುವ ರಾಜಪ್ರಭುತ್ವದ ನಡೆಯಿದು. ಅವರಿನ್ನೂ ತನ್ನನ್ನು ರಾಜನೆಂದೂ, ತನ್ನದು ರಾಜಗಾಂಭೀರ್ಯ ಎಂಬ ಭ್ರಮೆಯಲ್ಲಿರುವಂತಿದೆ. ಈ ಭ್ರಮೆಯಲ್ಲೇ ಅವರು ಮೂರನೇ ಅವಧಿಗೆ ಪ್ರಧಾನಿಯಾಗುವ ಸಂಕಲ್ಪ ಮಾಡಿದ್ದಾರೆ. ಅದರ ಪರಿಣಾಮವೇ ಅರ್ಧಂಬರ್ಧ ಕಟ್ಟಿರುವ ಮಂದಿರದೊಳಗೆ ರಾಮಲಲ್ಲಾನನ್ನು ಒತ್ತಾಯಪೂರ್ವಕವಾಗಿ ಕೂರಿಸಿದ್ದಾರೆ. ಭಾರತವು ವಸುಧೈವ ಕುಟುಂಬಕಂ ಎಂಬ ಉದಾತ್ತ ಆದರ್ಶದ ತಳಹದಿಯ ಮೇಲೆ ನಿಂತಿದೆ ಎಂದು ಡಂಗುರ ಹೊಡೆಯುವ ಅವರು ಖುದ್ದು ಅದನ್ನು ಪಾಲಿಸಲು ಮರೆತಿದ್ದಾರೆ.
ಪ್ರಜಾಪ್ರಭುತ್ವ ಅಥವಾ ಗಣತಂತ್ರದ ಸೊಗಡು ಇರುವುದು ಜನರ ಪಾಲ್ಗೊಳ್ಳುವಿಕೆಯಲ್ಲಿ. ಜನರ ಮಾತುಗಳನ್ನು ಆಳುವವರು ಆಲಿಸುವುದು ಅಷ್ಟೇ ಮುಖ್ಯ. ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಅವರ ಕರ್ತವ್ಯ ನಿಭಾಯಿಸಲು ಬಿಡಬೇಕು. ಅವರನ್ನು ಒಟ್ಟಿಗೆ ಕೊಂಡೊಯ್ಯಬೇಕು. ಅವರಿಗೂ ಜನರೊಂದಿಗೆ ಬೆರೆಯವ ಅವಕಾಶ ಸಿಗಬೇಕು ಎಂಬುದನ್ನು ಮರೆತಂತಿದೆ. ಉದಾಹರಣೆಗೆ ಮೋದಿ ಅವರು ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯಲ್ಲಿ 2016ರಲ್ಲಿ ನವೆಂಬರ್ 8ರಂದು ರಾತ್ರಿ ಎಂಟರ ಸಮಯದಲ್ಲಿ ಏಕಾಏಕಿ ಕ್ಯಾಮೆರಾದ ಮುಂದೆ ಬಂದು, “ಈ ಮಧ್ಯರಾತ್ರಿಯಿಂದ ರೂ. 500 ಮತ್ತು 1000 ಮುಖಬೆಲೆಯ ನೋಟುಗಳು ಕೇವಲ ಕಾಗದದ ಚೂರಷ್ಟೇ. ಅವುಗಳನ್ನು ಚಲಾವಣೆಯಿಂದ ರದ್ದುಪಡಿಸಲಾಗಿದೆ” ಎಂದು ಘೋಷಣೆ ಮಾಡಿದರು. ಆದರೆ, ಅಂತಹದೊಂದು ಮಹತ್ವದ ಘೋಷಣೆಯನ್ನು ವಿತ್ತ ಸಚಿವರು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಮಾಡಬೇಕಿತ್ತು.
ಎರಡನೇ ಅವಧಿಯಲ್ಲಿ 2020ರಲ್ಲಿ ಮಾರ್ಚ್‌ನಲ್ಲಿ ಕೊರೋನಾ ಸಾಂಕ್ರಾಮಿಕ ಹರಡಿದ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ರು. ಅದನ್ನು ಮಾಡಿದ್ದೂ ತಮ್ಮ ಅಚ್ಚುಮೆಚ್ಚಿನ ಕ್ಯಾಮೆರಾ ಮುಂದೆಯೇ ವಿನಾ ಮೀಡಿಯಾಗೆ ಮುಖಾಮುಖಿ ಆಗಲಿಲ್ಲ. ಮೂರು ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ತಾವೊಬ್ಬರೇ ಕ್ಯಾಮೆರಾ ಮುಂದೆ ನಿಂತು ಘೋಷಿಸಿದರು. ಆ ಎಲ್ಲಾ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಮಾಡಿದ್ರಾ ಎಂಬುದು ದೇಶದ ಜನಕ್ಕೆ ಗೊತ್ತೇ ಆಗಲಿಲ್ಲ. ಹೆದ್ದಾರಿ, ರೈಲು, ಏರ್‌ಪೋರ್ಟ್, ರಕ್ಷಣಾ ಸೌಲಭ್ಯ ಎಲ್ಲವನ್ನೂ ಪ್ರಧಾನಿ ಮೋದಿಯೇ ಲೋಕಾರ್ಪಣೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಆಯಾ ಇಲಾಖೆಯ ಸಚಿವರು ಇರುತ್ತಾರಾ, ಇಲ್ಲವಾ ಎಂಬುದು ದೇಶವಾಸಿಗಳಿಗೆ ಗೊತ್ತೇ ಆಗಲ್ಲ. ಪುಲ್ವಾಮ ಉಗ್ರರ ದಾಳಿಯಂತಹ ಮಹಾ ದುರ್ಘಟನೆ ನಡೆದಾಗಲೂ ಅವರು ಮಾಧ್ಯಮಗಳ ಮುಂದೆ ಬಂದಿಲ್ಲ. ವಿದೇಶದ ಗಣ್ಯರು ಬಂದಾಗಲೂ ಅವರು ಪತ್ರಿಕಾಗೋಷ್ಠಿ ನಡೆಸಲ್ಲ, ತಾವು ವಿದೇಶಕ್ಕೆ ಹೋದಾಗಲೂ ಪತ್ರಿಕಾಗೋಷ್ಠಿಯಿಂದ ದೂರ. ಈ ದೇಶದ ರೈಲ್ವೆ ಸಚಿವರು ಯಾರೆಂದು ಗೊತ್ತಾಗಲು ಒಡಿಶಾದಲ್ಲಿ ಭೀಕರ ರೈಲ್ವೆ ದುರಂತವೊಂದು ನಡೆಯಬೇಕಾಯ್ತು. ವಿಡಂಬನೆಯ ಸಂಗತಿಯಿದು.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಯಾವ ಮಹತ್ವದ ದಿನವೂ ಅವರ ಸಂಪುಟ ಸಹೋದ್ಯೋಗಿಗಳು ಜೊತೆಗಿರುವುದಿಲ್ಲ. ಇಂದೂ ಅವರು ಏಕಾಂಗಿಯಾಗಿ ನೆರೆದಿರುವ ಜನರತ್ತ ಕೈ ಬೀಸುತ್ತಾ ಸಾಗಿದರು. ಆರು ತಿಂಗಳ ಹಿಂದೆ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ಉದ್ಘಾಟನೆಯಲ್ಲೂ ಸಾರ್ವಭೌಮನಂತೆ ತಾವೊಬ್ಬರೇ ಮೆರೆದರು. ಮೊನ್ನೆಯಷ್ಟೇ ನಡೆದ ರಾಮಮಂದಿರದ ಉದ್ಘಾಟನೆಯಲ್ಲೂ ಅಷ್ಟೇ. ಪ್ರಾಣಪ್ರತಿಷ್ಠೆ ನೆರವೇರಿದ ನಂತರ ಇಡೀ ಮಂದಿರದೊಳಗೆ ಒಬ್ಬರೇ ಸುತ್ತಾಡಿದ್ದು ದೇಶದ ಜನ ಗಮನಿಸಿದ್ದಾರೆ. ಹೊಸ ಸಂಸತ್ ಭವನ, ರಾಮಮಂದಿರ ಉದ್ಘಾಟನೆ ಈ ಎರಡು ಮಹತ್ವದ ಕಾರ್ಯಕ್ರಮಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನವನ್ನೇ ನೀಡಿಲ್ಲ. ಮೋದಿಯೇ ಮೊದಲ ಪ್ರಜೆ, ಮೋದಿಯೇ ದೇಶ, ಮೋದಿಯೇ ವಿಶ್ವಕ್ಕೆ ನಾಯಕ, ಮೋದಿ ಇಲ್ಲದಿದ್ದರೆ ದೇಶವೇ ಇಲ್ಲ ಎಂದು ಇಡೀ ದೇಶವನ್ನು ಭ್ರಮೆಯಲ್ಲಿ ತೇಲಾಡಿಸುತ್ತಿವೆ ಆರೆಸ್ಸೆಸ್ ಮತ್ತು ಬಿಜೆಪಿ. ಖ್ಯಾತ ರಾಜಕೀಯ ಆರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರು ಹೇಳಿದಂತೆ ದೇಶವೇ ಜೋಮು ಹಿಡಿದ ಸ್ಥಿತಿಯಲ್ಲಿದೆ. ಅವರ ಸಂಪುಟದ ಎಲ್ಲ ಸಹೋದ್ಯೋಗಿಗಳೂ ಈ ಮಾತಿಗೆ ಹೊರತಲ್ಲ.
ಆರ್‌ಬಿಐ, ಸಿಬಿಐ, ಇಡಿ, ಚುನಾವಣಾ ಆಯೋಗ, ನ್ಯಾಯಾಂಗ ಯಾವುದನ್ನೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟಿಲ್ಲ ಎಂಬುದು ಮೋದಿ ಅವರ ಮೇಲಿರುವ ಬಹುದೊಡ್ಡ ಆರೋಪ. ಅದಕ್ಕೆ ಪೂರಕವೆಂಬಂತೆ ಆರೆಸ್ಸೆಸ್ ಗರಡಿಯಲ್ಲಿ ಪಳಗಿದರೆ ಸಾಕು ಅರ್ಥಶಾಸ್ತ್ರವನ್ನೇ ಓದದ ಇತಿಹಾಸ ಪ್ರಾಧ್ಯಾಪಕರೊಬ್ಬರು ಆರ್‌ಬಿಐ ಗವರ್ನರ್ ಆಗುತ್ತಾರೆ. ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶರು ನಿವೃತ್ತಿಯಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯರಾಗುತ್ತಾರೆ, ಕೆಲವರು ರಾಜ್ಯಪಾಲರಾಗುತ್ತಾರೆ, ಇನ್ನು ಕೆಲವರಿಗೆ ಪಕ್ಷದ ಟಿಕೆಟ್ ನೀಡಲಾಗುತ್ತದೆ.
ಮೋದಿ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಸಂಸತ್ ಅಧಿವೇಶನದಲ್ಲಿ ವಿರೋಧಪಕ್ಷದ 146 ಸದಸ್ಯರನ್ನು ಅಮಾನತು ಮಾಡಿ ಪ್ರಮುಖ ಕಾಯ್ದೆಗಳನ್ನು ಅನುಮೋದಿಸಲಾಯಿತು. ಯಾವುದೇ ಚರ್ಚೆಯಿಲ್ಲದೇ ಕಾಯ್ದೆಗಳೆಲ್ಲವೂ ಪಾಸಾದವು. ಸೆಪ್ಟಂಬರ್‌ನಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಾಯಿತು. ಅದರಲ್ಲಿ ಕೆಲವು ತಿದ್ದುಪಡಿಗಳಿದ್ದವು. ಅವುಗಳನ್ನು ಸದಸ್ಯರ ಗಮನಕ್ಕೆ ತರದೇ, ಚರ್ಚೆಗೂ ಇಡದೇ ಅನುಮೋದಿಸಲಾಯಿತು. ಇವೆಲ್ಲ ಗಣತಂತ್ರದ ಆಶಯಕ್ಕೆ ಎಸಗುತ್ತಿರುವ ಅಪಚಾರವಲ್ಲವೇ?
ಸರ್ವರನ್ನೂ ಒಳಗೊಳ್ಳುವ ಮತ್ತು ಬಹುಮುಖೀ ದರ್ಶನವನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಈ ಪರಮೋಚ್ಚ ಮೌಲ್ಯಗಳಿಗೂ ಆಪತ್ತು ಕವಿದಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಮತೂಕ ತಪ್ಪಿದೆ. ಪ್ರಭುತ್ವದೆಡೆಗೇ ವಾಲಿ ಪ್ರಜೆಗಳ ಹಕ್ಕುಗಳನ್ನು ಕುಗ್ಗಿಸುವ ನಿರಂಕುಶ ಧೋರಣೆಗೆ ಕಡಿವಾಣ ತೊಡಿಸಬೇಕಿದೆ. ಒಕ್ಕೂಟ ಮೌಲ್ಯಗಳನ್ನು ಹೊಸಕಿ ಹಾಕುತ್ತಿರುವವರು ಮತ್ತು ಅವರ ಜೊತೆ ನಿಂತಿರುವವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
